ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂಮಿ ಬಿಟ್ಟು ಹೊರಡೋಣವೇ ಆಚಿನ ಲೋಕಕ್ಕೆ?

Last Updated 16 ಜೂನ್ 2018, 10:07 IST
ಅಕ್ಷರ ಗಾತ್ರ

ಮನುಕುಲ ಉಳಿಯಬೇಕೆಂದಿದ್ದರೆ ‘ಇನ್ನು ನೂರು ವರ್ಷಗಳಲ್ಲಿ ಈ ಭೂಮಿಯನ್ನು ಬಿಟ್ಟು ಹೊರಡಿ’ ಎಂದು ಕಳೆದ ವಾರ ಪ್ರೊ. ಸ್ಟೀಫನ್ ಹಾಕಿಂಗ್ ಹೇಳಿದ್ದು ಎಲ್ಲ ದೇಶಗಳಲ್ಲಿ ಸುದ್ದಿಯಾಯಿತು. ಬೇರೆ ಯಾರಾದರೂ ಹೇಳಿದ್ದಿದ್ದರೆ ಅದು ಜಾಗತಿಕ ಸುದ್ದಿ ಆಗುತ್ತಿರಲಿಲ್ಲ; ಅಷ್ಟು ವೈರಲ್ ಆಗುತ್ತಿರಲಿಲ್ಲ. ‘ಆತನಿಗೆ ತಲೆ ಸರಿ ಇಲ್ಲ’ ಎಂದು ಸುಮ್ಮನಾಗುತ್ತಿದ್ದರೇನೊ. ಆದರೆ ಈ ವಿಶ್ವಖ್ಯಾತಿಯ ಭೌತವಿಜ್ಞಾನಿ ಸ್ಟೀಫನ್ ಹಾಕಿಂಗ್ ಅಂತಿಂಥ ವ್ಯಕ್ತಿಯಲ್ಲ.

ಆತನಿಗೆ ತಲೆ ಮಾತ್ರ ಸರಿ ಇದೆ. ಬೇರೆ ಯಾವುದೂ ಸರಿ ಇಲ್ಲ! ಕೈ, ಕಾಲು, ಕುತ್ತಿಗೆ, ಕೊನೆಗೆ ಗಂಟಲಿನ ಸ್ವರವೂ ಕೆಲಸ ಮಾಡುವುದಿಲ್ಲ. ಆತ ಬದುಕಿರುವುದೇ ವೈದ್ಯಕೀಯ ಅಚ್ಚರಿ. ಈ ಸ್ಥಿತಿಯಲ್ಲಿ ಜಗತ್ತಿನ ಆಗುಹೋಗುಗಳೆಲ್ಲ ಅವರಿಗೆ ಹೇಗೊ ಗೊತ್ತಾಗುತ್ತದೆ, ಅದು ಇನ್ನೊಂದು ಅಚ್ಚರಿ.

ಜನಸಂಖ್ಯಾ ಸ್ಫೋಟದ ಬಗ್ಗೆ, ರೋಬಾಟ್ ಆಳ್ವಿಕೆಯ ಬಗ್ಗೆ, ಭೂಮಿ ಬಿಸಿಯಾಗುತ್ತಿರುವ ಬಗ್ಗೆ, ಕೊನೆಗೆ ಮನುಕುಲದ ಭವಿಷ್ಯದ ಬಗ್ಗೆ ವರ್ಷಕ್ಕೊಮ್ಮೆ ಇವರು ಎಚ್ಚರಿಕೆಯ ಗಂಟೆ ಬಾರಿಸುತ್ತಲೇ ಇರುತ್ತಾರೆ. ‘ಹೆಚ್ಚೆಂದರೆ ಇನ್ನೊಂದು ಸಾವಿರ ವರ್ಷಗಳಲ್ಲಿ ಮನುಕುಲದ ಆಳ್ವಿಕೆ ಸಮಾಪ್ತಿ ಆಗಬಹುದು’ ಎಂದು ಕಳೆದ ವರ್ಷ ಹೇಳಿದ್ದರು ಸ್ಟೀಫನ್ ಹಾಕಿಂಗ್. ಈಗ ಇವರು ಮನುಷ್ಯನ ಕ್ಯಾಲೆಂಡರನ್ನು ಇನ್ನೂ ಕುಗ್ಗಿಸಿದ್ದಾರೆ.

ವಿಶ್ವಖ್ಯಾತಿಯ ವಿಜ್ಞಾನಿಯೊಬ್ಬ ‘ನೂರು ವರ್ಷಗಳಲ್ಲಿ ನಾವೆಲ್ಲ ಹೊರಡಬೇಕು’ ಎಂಬಂಥ ಗಂಭೀರ ಹೇಳಿಕೆ ಕೊಡಲು ಕಾರಣ ಏನಿದ್ದೀತು? ಅದನ್ನು ಹುಡುಕಲು ಹತ್ತು ದಿನ ಹಿಂದೆ ಹೋದರೆ ಸಾಕು. ಈ ವರ್ಷದ ‘ಭೂದಿನ’ (ಏಪ್ರಿಲ್ 22) ಒಂದು ವಿಲಕ್ಷಣ ತಿರುವು ಪಡೆದಿತ್ತು. ಆ ದಿನ ಬಹುತೇಕ ಎಲ್ಲ ಪಾಶ್ಚಾತ್ಯ ದೇಶಗಳಲ್ಲಿ ಸುಮಾರು 600ಕ್ಕೂ ಹೆಚ್ಚು ನಗರಗಳಲ್ಲಿ ಅಭೂತಪೂರ್ವ ‘ವಿಜ್ಞಾನ ನಡಿಗೆ’ ನಡೆಯಿತು.

ವಿಜ್ಞಾನಿಗಳೆಂದರೆ ಜಗತ್ತಿನ ಯಾವ ವಿಷಯಗಳ ಬಗೆಗೂ ತಲೆ ಕೆಡಿಸಿಕೊಳ್ಳದೆ ತಂತಮ್ಮ ಲ್ಯಾಬ್‌ಗಳಲ್ಲಿ ತಲೆ ಹುದುಗಿಸಿ ಕೂತಿರುತ್ತಾರೆ ಎಂಬ ಭಾವನೆಯನ್ನು ಬದಲಿಸಹೊರಟ ಮೆರವಣಿಗೆ ಅದಾಗಿತ್ತು. ವಾಷಿಂಗ್ಟನ್, ಲಂಡನ್ ಮತ್ತು ಪ್ಯಾರಿಸ್‌ಗಳಲ್ಲಿ ‘ಪ್ರಧಾನ ನಡಿಗೆ’ ಮತ್ತು ಇತರ ನಗರಗಳಲ್ಲಿ ‘ಉಪನಡಿಗೆ’. ವಿಜ್ಞಾನಿಗಳೇ ಬೀದಿಗಿಳಿಯಲು ಸಜ್ಜಾದ ಮೇಲೆ ಕೇಳಬೇಕೆ? ಎಲ್ಲವೂ ಪೂರ್ವ ಯೋಜಿತವಾಗಿತ್ತು, ಎಲ್ಲವೂ ಅತ್ಯಂತ ಶಿಸ್ತುಬದ್ಧವಾಗಿತ್ತು.

ಮೂರು ತಿಂಗಳಿನ ಅದರ ಪೂರ್ವ ತಯಾರಿಯೇ ಲಕ್ಷೋಪಲಕ್ಷ ಜನರಿಗೆ ಪ್ರೇರಣೆ ಕೊಡುವಂತಿತ್ತು. ಮಿದುಳಿನ ನೆರಿಗೆಗಳನ್ನೇ ಪ್ರತಿನಿಧಿಸುವ ‘ಬ್ರೇನ್ ಹ್ಯಾಟ್’ ಎಂಬ ಟೋಪಿಯನ್ನು ಯಾರೋ ಒಬ್ಬ ವಿಜ್ಞಾನಿ ತಯಾರಿಸಿದ. ಅದನ್ನು ಗೃಹಿಣಿಯರೂ ಹೇಗೆ ತಯಾರಿಸಬಹುದು ಎಂಬ ಯೂಟ್ಯೂಬ್ ಪ್ರಾತ್ಯಕ್ಷಿಕೆ ತುಂಬಾ ಜನಪ್ರಿಯವಾಯಿತು.

ವಿಜ್ಞಾನ ಹೇಗೆ ಅಮೆರಿಕದ ಬದುಕನ್ನು ಬದಲಿಸಿದೆ ಎಂಬ ಬಗ್ಗೆ ಇಂಗ್ಲಿಷ್ ಭಾಷೆಯ ಅತ್ಯಂತ ಜನಪ್ರಿಯ ವಿಜ್ಞಾನ ಸಂವಹನಕಾರ ಆಸ್ಟ್ರೋಫಿಸಿಕ್ಸ್ ತಜ್ಞ ನೀಲ್ ಡಿಗ್ರಾಸ್ ಟೈಸನ್‌ನ ನಾಲ್ಕೂವರೆ ನಿಮಿಷಗಳ ವಿಡಿಯೊ ಭಾಷಣ ಎಲ್ಲ ಶಾಲೆ, ಕಾಲೇಜುಗಳಲ್ಲಿ, ಟಿವಿ, ರೇಡಿಯೊಗಳಲ್ಲಿ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಜನಪ್ರಿಯವಾಯಿತು (ಮತದಾರರಲ್ಲಿ ವೈಜ್ಞಾನಿಕ ಮನೋಭಾವ ಬೆಳೆದರೆ ಇಡೀ ದೇಶವನ್ನು ಹೇಗೆ ಬದಲಿಸಬಹುದು ಎಂಬ ಈ ಪುಟ್ಟ, ಪವರ್‌ಫುಲ್ ಭಾಷಣವನ್ನು ನಮ್ಮವರೂ ನೋಡಬೇಕು. ‘ಸೈನ್ಸ್ ಅಮೆರಿಕಾ ಟೈಸನ್’ ಎಂದು ಸರ್ಚ್ ಕೊಟ್ಟು ಯೂಟ್ಯೂಬಿನಲ್ಲಿ ಅದನ್ನು ಯಾರೂ ನೋಡಬಹುದು).

ಉಪ ನಡಿಗೆಯೂ ಸಾಧ್ಯವಿಲ್ಲದಿದ್ದವರು ಏನೇನು ಮಾಡಬಹುದು ಎಂಬ ಬಗ್ಗೆ 15 ವಿವಿಧ ಉಪಾಯಗಳನ್ನೂ ಎಲ್ಲ ಮಾಧ್ಯಮಗಳ ಮೂಲಕ ಸೂಚಿಲಾಗಿತ್ತು. ಉದಾಹರಣೆಗೆ, ಆ ದಿನ ನಿಮ್ಮ ನಿಮ್ಮ ಮನೆಯ ಗೇಟ್ ಬಳಿ ‘ನಾನು ವಿಜ್ಞಾನದ ಪರ’ ಎಂತಲೋ ‘ವಿಜ್ಞಾನವೇ ದೇಶವನ್ನು ಮುನ್ನಡೆಸುತ್ತದೆ’ ಅಥವಾ ‘ಸೈನ್ಸ್ ಬೇಕು, ಸೈಲೆನ್ಸ್ ಬೇಡ’ ಎಂತಲೋ ಫಲಕಗಳನ್ನು ಬರೆದು ತೂಗುಹಾಕಿ; ‘ಬ್ರೇನ್ ಹ್ಯಾಟ್’ ಧರಿಸಿ ಓಡಾಡಿ; ವಿಜ್ಞಾನ ಪರ ಹಾಡು ಬರೆದು ಸೈನ್ಸ್ ಟೀಚರ್‌ಗೆ ಕೊಡಿ; ಪ್ರಧಾನ ನಡಿಗೆಗೆ ಹೋಗುವವರಿಗಾಗಿ ಚಂದಾ ಕೊಡಿ, ಬಟ್ಟೆ ಕೊಡಿ ಇತ್ಯಾದಿ. ಇನ್ನು ಆ ದಿನದ ಮೆರವಣಿಗೆಗಳೂ ರಸ್ತೆ ಸರ್ಕಸ್‌ಗಳೂ ಸಂಗೀತ ಗೋಷ್ಠಿಗಳೂ ಅಷ್ಟೇ ಸ್ವಾರಸ್ಯದ್ದಾಗಿದ್ದವು.

ಭೂಮಿಯ ಉಷ್ಣತೆಯ ಸತತ ಹೆಚ್ಚಳವನ್ನು ತೋರಿಸುವ ಆಲೇಖವನ್ನೇ ದೊಡ್ಡ ಫಲಕವನ್ನಾಗಿ ಹಿಡಿದು ಕೆಲವರು ಸಾಗಿದ್ದು; ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ನಂತೆ ವೇಷ ಹಾಕಿಕೊಂಡ ವ್ಯಕ್ತಿಯೊಬ್ಬ ಭೂಮಿಯನ್ನೇ ಗಾಲ್ಫ್ ಚೆಂಡನ್ನಾಗಿ ಉಡಾಯಿಸಲು ನಿಂತಿದ್ದು ಎಲ್ಲವೂ ಆಕರ್ಷಕವಾಗಿತ್ತು. ಆ ದಿನದ ಉತ್ಸಾಹ ಎಷ್ಟೆಂದು ನೋಡಬೇಕೆಂದರೆ ಹನ್ನೆರಡು ವರ್ಷದ ಹುಡುಗಿ ಕೆಲ್ಲಿ ಹೆಲ್ಟನ್ ಮಾಡಿದ ಭಾಷಣವನ್ನು ಯೂಟ್ಯೂಬಿನಲ್ಲಿ ನೋಡಬಹುದು.

ಯಾಕೆ ಇದ್ದಕ್ಕಿದ್ದಂತೆ ವಿಜ್ಞಾನದ ಅಷ್ಟೆಲ್ಲ ವಿಜೃಂಭಣೆ? ಏಕೆಂದರೆ ವಿಜ್ಞಾನವನ್ನು ಹಿಂದಕ್ಕೆ ಸರಿಸಿ, ಕೆಲವರ ಹಿತಾಸಕ್ತಿಗೆ ಹಾಗೂ ಕಂಪನಿಗಳ ಲಾಭಾಸಕ್ತಿಗೇ ಆದ್ಯತೆ ಕೊಡಲೆಂದು ರಾಜಕೀಯ ಧುರೀಣರು ಟೊಂಕ ಕಟ್ಟಿ ನಿಂತರೆ ಇಡೀ ಭೂಮಿಯೇ ಅಪಾಯದತ್ತ ಹೊರಳುವ ಸಂಭವ ಇದೆ. ಈಗ ಅಮೆರಿಕ ಮತ್ತು ಯುರೋಪ್‌ನ ಕೆಲವು ದೇಶಗಳಲ್ಲಿ (ಭಾರತದಲ್ಲೂ) ಆ ಸೂಚನೆಗಳು ಕಾಣುತ್ತಿವೆ.

ಅಮೆರಿಕದಲ್ಲಿ ಟ್ರಂಪ್ ಆಡಳಿತ ಬಂದ ನಂತರ ದಿನದಿನವೂ ವಿಜ್ಞಾನಕ್ಕೆ ಹಿನ್ನಡೆ ಆಗತೊಡಗಿದೆ. ಭೂಮಿ ಬಿಸಿಯಾಗುತ್ತಿರುವುದೇ ಸುಳ್ಳು ಎಂದು ಅಲ್ಲಿನ ಅಧ್ಯಕ್ಷ ಢಣಾಡಂಗುರ ಹೇಳುತ್ತಿದ್ದಾರೆ. ಪೆಟ್ರೋಲ್ ಡೀಸೆಲ್ ಬಳಕೆಯನ್ನು ಕಡಿಮೆ ಮಾಡಬೇಕು ಎಂದು ಪ್ಯಾರಿಸ್ ಒಪ್ಪಂದಕ್ಕೆ 160 ದೇಶಗಳು ಸಹಿ ಹಾಕಿದರೆ ಈತ ಮಾತ್ರ ಇನ್ನಷ್ಟು ಮತ್ತಷ್ಟು ಪೆಟ್ರೋಲ್- ಕಲ್ಲಿದ್ದಲ ಗಣಿಗಾರಿಕೆಗೆ ಕುಮ್ಮಕ್ಕು ಕೊಡುತ್ತಿದ್ದಾರೆ.

ಸರ್ಕಾರದ್ದೇ ಆದ ಪರಿಸರ ಸಂರಕ್ಷಣಾ ಏಜೆನ್ಸಿಯ ಇದುವರೆಗಿನ ಪ್ರಕಟನೆಗಳನ್ನೆಲ್ಲ ರದ್ದಿಗೆ ಹಾಕಬೇಕೆಂದು ಹೇಳುತ್ತಾರೆ. ಶ್ವೇತಭವನದ ಜಾಲತಾಣದಲ್ಲಿ ‘ಹವಾಗುಣ ಬದಲಾವಣೆ’ ಕುರಿತ ಎಲ್ಲ ಮಾಹಿತಿಗಳನ್ನೂ ಅಳಿಸಿ ಹಾಕಲು ಆದೇಶ ನೀಡುತ್ತಾರೆ. ಬಾಹ್ಯಾಕಾಶದಿಂದ ಭೂಮಿಯ ಸ್ಥಿತಿಗತಿಯನ್ನು ವೀಕ್ಷಣೆ ಮಾಡುತ್ತಿರುವ ನೋಆ ಉಪಗ್ರಹಗಳ ಉಸ್ತುವಾರಿಗೆ ಬಜೆಟ್‌ನಲ್ಲಿ ಹಣವನ್ನು ಕಡಿಮೆ ಮಾಡುತ್ತಾರೆ.

ವಿಜ್ಞಾನಿಗಳೇ ದೇಶದ ಅಭಿವೃದ್ಧಿಗೆ ಅಡ್ಡಗಾಲು ಹಾಕುತ್ತಿದ್ದಾರೆಂಬ ಮನೋಭಾವದ ರಾಜಕಾರಣಿಗಳನ್ನೇ ಹೆಕ್ಕಿ ಹೆಕ್ಕಿ ಪ್ರಮುಖ ಖಾತೆಗಳ ಮುಖ್ಯಸ್ಥರನ್ನಾಗಿ ನೇಮಕ ಮಾಡುತ್ತಿದ್ದಾರೆ. ವಿಜ್ಞಾನಿಯಲ್ಲದ ವ್ಯಕ್ತಿಯನ್ನು ದೇಶದ ಕೃಷಿ ಸಂಶೋಧನಾ ರಂಗದ ಮುಖ್ಯಸ್ಥರನ್ನಾಗಿ ಆಯ್ಕೆ ಮಾಡುತ್ತಾರೆ. ಇಂಥ ವಿದ್ಯಮಾನಗಳಿಂದ ತಲ್ಲಣಗೊಂಡ ವಿಜ್ಞಾನಿಗಳು ‘ನಮ್ಮ ವೃತ್ತಿಗೆ ಅಪಾಯ ಬಂದಿದೆ, ಇಡೀ ಭೂಮಿಗೂ ಅಪಾಯ ಬರಲಿದೆ’ ಎಂಬ ಘೋಷಣೆಯ ಜೊತೆ ರಸ್ತೆಗೆ ಇಳಿದರು.

ಸರಿ, ಆದರೆ ಬೇರೆ ದೇಶಗಳ ವಿಜ್ಞಾನಿಗಳು ಯಾಕೆ ಅದಕ್ಕೆ ದನಿಗೂಡಿಸಿದರು? ಅಮೆರಿಕ ಸರ್ಕಾರದ ಧೋರಣೆಯ ನೆರಳೇ ದಟ್ಟವಾಗಿ ಯುರೋಪ್‌ನಲ್ಲೂ ಕವಿಯುತ್ತದೆ. ಹಿಂದಿನಿಂದಲೂ ಹಾಗೇ ನಡೆದುಕೊಂಡು ಬಂದಿದೆ. ಅದಕ್ಕೇ ಬ್ರಿಟನ್, ಜರ್ಮನಿ, ಫ್ರಾನ್ಸ್, ಗ್ರೀನ್‌ಲ್ಯಾಂಡ್‌ಗಳಲ್ಲೂ ವಿಜ್ಞಾನಿಗಳು ಅಷ್ಟೇ ಉತ್ಸಾಹದಿಂದ ಫಲಕ ಹಿಡಿದು ಬೀದಿಗೆ ಇಳಿದರು.

ಇತ್ತ ಟೋಕಿಯೊ, ಮನಿಲಾ ಮತ್ತು ಸೋಲ್ (ದಕ್ಷಿಣ ಕೊರಿಯಾ) ನಗರಗಳಲ್ಲೂ ಅಲ್ಲಲ್ಲಿ ಕಡಿಮೆ ಪ್ರಮಾಣದಲ್ಲಿ ಮೆರವಣಿಗೆ ನಡೆದವು. ಆದರೆ ರಷ್ಯ, ಚೀನಾ ಮತ್ತು ಭಾರತದಲ್ಲಿ ವಿಜ್ಞಾನಿಗಳು ಗಪ್‌ಚಿಪ್. ರಷ್ಯ ಮತ್ತು ಚೀನಾಗಳಲ್ಲಿ ಸರ್ಕಾರವನ್ನು ಪ್ರಶ್ನಿಸುವ ಹಕ್ಕುಗಳೇ ಇಲ್ಲ. ಭಾರತದ ವಿಜ್ಞಾನಿಗಳು?

ಭಾರತೀಯ ವಿಜ್ಞಾನಿಗಳ ಧೋರಣೆಗಳನ್ನು ಎರಡು ಉದಾಹರಣೆಗಳ ಮೂಲಕ ನೋಡಬಹುದು. ಮೊನ್ನೆ ಪಾತಾಳಗಂಗೆ ಯೋಜನೆ ಕುರಿತಂತೆ ಸಚಿವ ಎಚ್‌.ಕೆ. ಪಾಟೀಲರು ಸಮಾಲೋಚನೆ ಸಭೆ ಕರೆದಿದ್ದರು. ಅದು ಅಭಿನಂದನೀಯ. ಆದರೆ ಆಳ ಬೋರ್‌ವೆಲ್ ಕೊರೆಯಲು ಮುಂದೆ ಬಂದ ‘ವಾಟರ್‌ಕ್ವೆಸ್ಟ್’ ಕಂಪನಿಯ ಯಾರೂ ಬಂದಿರಲಿಲ್ಲ. ಬದಲಿಗೆ ಕಂಪನಿಯ ವಕ್ತಾರರೆಂಬಂತೆ ಸರ್ಕಾರಿ ಅಧಿಕಾರಿಗಳು ಮತ್ತು ಸೇವಾನಿರತ ವಿಜ್ಞಾನಿಗಳೇ ಯೋಜನೆಯ ವಿವರಗಳನ್ನು ತದ್ವತ್ತಾಗಿ ಸಭೆಯ ಮುಂದಿಟ್ಟರು.

ಅದರಲ್ಲಿನ ಲೋಪದೋಷಗಳನ್ನು, ಉತ್ಪ್ರೇಕ್ಷಿತ- ಅವೈಜ್ಞಾನಿಕ ಮಾಹಿತಿಗಳನ್ನು ಸಾಕ್ಷ್ಯಾಧಾರ ಎತ್ತಿ ತೋರಿಸುವ ಕೆಲಸವನ್ನು ಸಾರ್ವಜನಿಕ ಪ್ರತಿನಿಧಿಗಳೇ ಮಾಡಬೇಕಾಯಿತು. ಆದರೂ ಸರ್ಕಾರಿ ವಕ್ತಾರರು ಮತ್ತೆ ಮತ್ತೆ ಕಂಪನಿಯನ್ನು ಬೆಂಬಲಿಸುವ ಮಾತುಗಳನ್ನೇ ಮುಂದಿಟ್ಟರು. ಸರ್ಕಾರಿ ಕಡತದಲ್ಲಂತೂ ಕಂಪನಿಯ ಅವೈಜ್ಞಾನಿಕ ಹೇಳಿಕೆಗಳ ಯಥಾ ನಕಲೇ ತುಂಬಿದ್ದವು.

‘350 ಕಿಮೀ ದೂರದ ಸಮುದ್ರದಿಂದ ಚಳ್ಳಕೆರೆಯ ಪಾತಾಳಕ್ಕೆ ಹ್ಯಾಗ್ರೀ ನೀರು ನುಗ್ಗಿರುತ್ತದೆ?’ ಎಂದು ಭೂವಿಜ್ಞಾನಿ ಡಾ. ಟಿ.ಆರ್. ಅನಂತರಾಮು ಕೇಳಿದರೆ ಸರ್ಕಾರಿ ವಿಜ್ಞಾನಿಗಳಲ್ಲಿ ಉತ್ತರ ಇರಲಿಲ್ಲ. ಕೊನೆಗೆ ಸಚಿವರು ತಮ್ಮ ತಂಡದ ಬೆಂಬಲಕ್ಕೆಂದು ಭಾರತದ ಬಹುಶ್ರುತ ವಿಜ್ಞಾನಿ ಡಾ. ರಘುನಾಥ್ ಮಶೇಲ್ಕರ್ ಅವರ ಹೆಸರನ್ನು ಎಳೆದು ತಂದರು. ‘ಮಶೇಲ್ಕರ್ ಮುಖ್ಯಸ್ಥರಾಗಿರುವ ಸಮಿತಿಯೇ ಈ ಕಂಪನಿಯ ಯೋಜನೆಯನ್ನು ಕಾರ್ಯಗತಗೊಳಿಸಲು ಶಿಫಾರಸು ಮಾಡಿತ್ತು’ ಎಂಬರ್ಥದ ಹೇಳಿಕೆ ನೀಡಿದರು.

ಈ ಡಾ. ಮಶೇಲ್ಕರ್ ಹಿಂದೆ ಭಾರತದ ಅತಿದೊಡ್ಡ ಸಂಶೋಧನಾ ಸಂಸ್ಥೆ ಸಿಎಸ್‌ಐಆರ್‌ನ ಮಹಾ ನಿರ್ದೇಶಕರಾಗಿದ್ದವರು. ನಿವೃತ್ತರಾದ ನಂತರ ಅನೇಕ ಸಮಿತಿಗಳಿಗೆ ಅಧ್ಯಕ್ಷರಾಗಿದ್ದಾರೆ. ಆದರೆ ಒಂದಲ್ಲ, ಎರಡು ಬಾರಿ ಕೃತಿಚೌರ್ಯದ ಆಪಾದನೆಯಲ್ಲಿ ಸಿಕ್ಕಿಬಿದ್ದವರು. ಔಷಧ ಕಂಪನಿಗಳ ಮೇಲೆ ಲಗಾಮು ಹಾಕುವ ಬಗ್ಗೆ ಪೇಟೆಂಟ್ ಕಾನೂನುಗಳನ್ನು ವೈಜ್ಞಾನಿಕವಾಗಿ ಮರುಪರಿಶೀಲನೆ ಮಾಡಲೆಂದು ಅವರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ರಚಿಸಲಾಗಿತ್ತು. ಅದರ ವರದಿಯಲ್ಲಿ ಬಹುರಾಷ್ಟ್ರೀಯ ಔಷಧ ಕಂಪನಿಗಳದ್ದೇ ಮಕ್ಕಿಕಾ ಮಕ್ಕಿ ಉಲ್ಲೇಖ ಇದ್ದವು.

ಸಾರ್ವತ್ರಿಕ ಹಿತಾಸಕ್ತಿಯನ್ನು ಬದಿಗೊತ್ತಿ ಬೃಹತ್ ಕಂಪನಿಗಳ ಪರವಾಗಿ ಬ್ಯಾಟಿಂಗ್ ಮಾಡಿದ್ದಕ್ಕೆ ಮಾಧ್ಯಮಗಳಲ್ಲಿ ಛೀಮಾರಿಗಳು ಬಂದಮೇಲೆ ವರದಿಯನ್ನು ಹಿಂತೆಗೆದುಕೊಂಡರು. ಅದಕ್ಕೆ ಮೂರು ವರ್ಷ ಮೊದಲು ಶಹೀದ್ ಅಲಿಖಾನ್ ಜೊತೆ ಸೇರಿ ಇವರು ‘ಬೌದ್ಧಿಕ ಆಸ್ತಿ’ ಕುರಿತು ಬರೆದ ಪುಸ್ತಕದಲ್ಲೂ ಕೃತಿಚೌರ್ಯದ ಸಾಕ್ಷ್ಯಗಳು ಸಿಕ್ಕಿದ್ದವು. ಮಶೇಲ್ಕರ್ ತಾವಾಗಿ ಕೃತಿ ಚೌರ್ಯ ಮಾಡಲಿಕ್ಕಿಲ್ಲ.

ತೀರಾ ಎತ್ತರಕ್ಕೇರಿದ ಮೇಲೆ ಎಲ್ಲ ವರದಿಗಳನ್ನೂ ಓದಲು ಬಿಡುವಿರುವುದಿಲ್ಲ. ಕೆಳಗಿನವರ ಮೇಲೆ ಭರವಸೆ ಇಟ್ಟು ಸಹಿ ಮಾಡಬೇಕಾಗುತ್ತದೆ (ನಮ್ಮ ಪ್ರೊ. ಸಿಎನ್‌ಆರ್ ರಾವ್ ಮೇಲೂ ಕೃತಿಚೌರ್ಯದ ಆಪಾದನೆ ಬಂದಿದ್ದು ಹೀಗೇ). 2010ರಲ್ಲಿ ಬಿಟಿ ಬದನೆ ವಿವಾದದ ಸಂದರ್ಭದಲ್ಲೂ ಇಂಥದ್ದೇ ಭಾನಗಡಿ ಆಗಿತ್ತು. ಭಾರತದ ಆರು ಸರ್ವೋನ್ನತ ವಿಜ್ಞಾನ ಸಂಘಟನೆಗಳ ಮುಖ್ಯಸ್ಥರು ಒಟ್ಟಾಗಿ ತಮ್ಮ ನಿಲುವನ್ನು ತಿಳಿಸುವಂತೆ ಅಂದಿನ ಕೇಂದ್ರ ಸಚಿವ ಜೈರಾಮ್ ರಮೇಶ್ ಆದೇಶ ನೀಡಿದ್ದರು. 

ವಿಜ್ಞಾನಿಗಳ ವರದಿಯಲ್ಲಿ ಮೊನ್ಸಾಂಟೊ ಕಂಪನಿಯ ವಾಕ್ಯಗಳದ್ದೇ ಕೃತಿಚೌರ್ಯದ ಸಾಲುಗಳಿದ್ದವು. ‘ಇದು ಕುಲಗೆಟ್ಟ ವಿಜ್ಞಾನ ಅಷ್ಟೇ ಅಲ್ಲ, ಗಟಾರದ ವಿಜ್ಞಾನ’ ಎಂದು ಅಂಕಣಕಾರ ದೇವಿಂದ್ರ ಶರ್ಮಾ ಟೀಕಿಸಿದ ನಂತರ ವರದಿ ಮೂಲೆಗೆ ಬಿತ್ತು. ಸರ್ಕಾರದ ಊಳಿಗದಲ್ಲಿದ್ದಷ್ಟು ದಿನ ವಿಜ್ಞಾನಿಗಳು ಸ್ವತಂತ್ರ, ಜನಪರ ದನಿ ಎತ್ತಿದ್ದು ನಮ್ಮಲ್ಲಿ ತೀರಾ ಕಡಿಮೆ. 

ಇಂಥವರ ಕೈಯಲ್ಲಿ ಭೂಮಿಯ ಭವಿಷ್ಯ ಏನಾದೀತು? ಅದಕ್ಕೇ ಮನುಕುಲದ ಉಳಿವಿಗಾಗಿ ಭೂಗ್ರಹವನ್ನು ಬಿಟ್ಟು ಹೊರಡಬೇಕೆಂದು ಸ್ಟೀಫನ್ ಹಾಕಿಂಗ್ ಸಲಹೆ ನೀಡಿದರು. ಭೂಮಿಯ ಒಳ್ಳೆಯದಕ್ಕೇ ಅವರು ಹೇಳಿರಬೇಕು. ಏಕೆಂದರೆ ತೀರಾ ಶ್ರೀಮಂತ, ತೀರಾ ಪ್ರಭಾವಶಾಲಿ, ತೀರಾ ರಟ್ಟೆಬಲವುಳ್ಳ ವ್ಯಕ್ತಿಗಳೇ ಇನ್ನೊಂದು ಗ್ರಹಕ್ಕೆ ಹೋಗಲು ಜಾಗ ಗಿಟ್ಟಿಸಿಕೊಳ್ಳುತ್ತಾರೆ. ಅಂಥವರೆಲ್ಲ ಆಚೆ ಹೋದರೆ ಭೂಮಿ ತಂತಾನೇ ಸುರಕ್ಷಿತ ಉಳಿದೀತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT