ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂಮಿಯ ಅಂಚನ್ನು ನೋಡುವ ಆಸೆಯಲ್ಲಿ

Last Updated 16 ಆಗಸ್ಟ್ 2014, 19:30 IST
ಅಕ್ಷರ ಗಾತ್ರ

ಭೂಮಿ ಚಪ್ಪಟೆಯಾಗಿದೆ. ಸೀದಾ ಒಂದೇ ದಿಕ್ಕಿಗೆ ಬಹಳ ದೂರ ಹೋದರೆ ಭೂಮಿಯ ಅಂಚು ಸಿಕ್ಕಿಬಿಡುತ್ತದೆ. ಅಂಚಿನಲ್ಲಿ ಇಣುಕಿ ನೋಡಿದರೆ ಪ್ರಪಾತ ಕಾಣಿಸುತ್ತದೆ. ಈ ಭೂಮಿಯ ಅಂಚನ್ನು ಒಮ್ಮೆಯಾದರೂ ನೋಡಿ ಬರಬೇಕು. ಕೊಂಚ ದೂರ ನಿಂತು ಹುಷಾರಾಗಿ ಇಣುಕಬೇಕು. ಕಾಲು ಜಾರಿದರೆ ಭೂಮಿಯ ಗೋಳದಿಂದ ಪಾತಾಳಲೋಕಕ್ಕೆ ಬಿದ್ದುಬಿಡುತ್ತೇನೆ. ಹಾಗಂತ ಭಯಪಟ್ಟು ಭೂಮಿಯ ಅಂಚನ್ನು ನೋಡುವುದನ್ನು ತಪ್ಪಿಸಿಕೊಳ್ಳಬಾರದು. ಅದು ಎಷ್ಟು ದೂರವಾಗಲಿ ಒಮ್ಮೆ ಹೋಗಿ ಬರಲೇಬೇಕು...

ಇಂಥ ಒಂದು ಬಾಲಿಶ, ಅವೈಜ್ಞಾನಿಕ, ಆದರೆ ಮೋಹಕ ಕಲ್ಪನೆಯೊಂದು ನನ್ನ ಬಾಲ್ಯದಲ್ಲಿ ಇದ್ದಿತು. ನಮ್ಮ ಊರನ್ನು ಸೀಳಿ ಹೋಗುವ ಹೆದ್ದಾರಿ ಎಲ್ಲಿಗೆ ಮುಟ್ಟುತ್ತದೆ ಎಂದು ತಂದೆಯವರನ್ನು ಕೇಳಿದ್ದೆ. ಒಂದು ತುದಿ ಬೆಂಗಳೂರನ್ನು ಮತ್ತೊಂದು ತುದಿ ಮಂಗಳೂರನ್ನು ಮುಟ್ಟುತ್ತದೆ ಅಷ್ಟೇ ಎಂದಿದ್ದರು. ಭೂಮಿಯ ಅಂಚಿಗೆ ಕರೆದೊಯ್ಯುವ ರಸ್ತೆಯೇ ಇಲ್ಲ ಎಂದು ಅವರು ಹೇಳಿದಾಗ ನಿರಾಸೆಯಾಗಿತ್ತು. ಆ ರಸ್ತೆ ಭೂಮಿಯ ಮೇಲೆ ಎಲ್ಲೋ ಒಂದು ಕಡೆ ಇದ್ದೇ ಇದೆ; ಅಪ್ಪನಿಗೆ ಗೊತ್ತಿರಲಿಕ್ಕಿಲ್ಲ ಎಂದು ಸಂದೇಹಪಟ್ಟಿದ್ದೆ.

ಪ್ರೈಮರಿ ಸ್ಕೂಲ್ ಮೇಷ್ಟ್ರಾಗಿದ್ದ ಅಪ್ಪ, ಕಿತ್ತಳೆ ಹಣ್ಣು ತಂದು ಅದರ ಮೇಲೊಂದು ಇರುವೆಯನ್ನು ಹರಿಯಬಿಟ್ಟು ಅವರದೇ ರೀತಿಯಲ್ಲಿ ವಿವರಿಸಲು ಯತ್ನಿಸಿದ್ದರು. ಭೂಮಿ ಗುಂಡಾಗಿದೆ, ಅದು ಸೂರ್ಯನ ಸುತ್ತ ತಿರುಗುತ್ತದೆ ಎಂದು ಹೇಳಿದ ಮೇಲೆ ನನಗೆ ಹೊಸ ಸಮಸ್ಯೆಗಳು ಉದ್ಭವವಾಗಿದ್ದವು. ಭೂಮಿ ತಿರುಗುವಾಗ ಕೆಳಭಾಗದಲ್ಲಿರುವವರು ತೊಪತೊಪನೆ ಕಳಚಿ ಕೆಳಗೆ ಬಿದ್ದುಹೋಗಬೇಕಲ್ಲ? ಅದಕ್ಕೆ ಅಪ್ಪ ಗುರುತ್ವಾಕರ್ಷಣ ಶಕ್ತಿಯ ಜನಪ್ರಿಯ ಕಥೆಯಾದ ಸೇಬು ಹಣ್ಣು ಬಿದ್ದುದನ್ನು ಅದನ್ನು ನ್ಯೂಟನ್ ಅರ್ಥೈಸಿದ್ದನ್ನು ಹೇಳಿದರು. ನನ್ನ ಸಹಪಾಠಿ ಕಿಸಗೊಟ್ಟೆ ತಮ್ಮಣ್ಣ ಸೊಪ್ಪು ಸವರುವಾಗ ಆಲದ ಮರದಿಂದ ಬಿದ್ದು ಕಾಲು ಮುರಿದುಕೊಂಡಿದ್ದು ಇದೇ ಸಂದರ್ಭದಲ್ಲಿ. ಭೂಮಿ ಎಲ್ಲವನ್ನೂ ಎಲ್ಲರನ್ನೂ ತನ್ನೆಡೆಗೆ ಎಳೆದುಕೊಳ್ಳುತ್ತದೆ ಎಂಬುದು ನನಗೆ ಸಮ್ಮತವಾಗಿದ್ದರೂ ಭೂಮಿಗೊಂದು ಅಂಚು ಮಾತ್ರ ಇರಲೇಬೇಕೆಂದು ತಕರಾರು ತೆಗೆದಿದ್ದೆ. ದೋಷಪೂರ್ಣವಾದ ಆ ಮುಗ್ಧತೆಯಲ್ಲಿ ಅದೆಷ್ಟು ಕೌತುಕಗಳಿದ್ದುವು!

ಕೌತುಕಗಳು ಅಪಾಯಕಾರಿಗಳೋ, ನಿರಪಾಯಕಾರಿಗಳೋ ಏನೇ ಆಗಿರಲಿ ಅವು ಬಾಲ್ಯದ ಆಸ್ತಿಗಳು. ಕೆಲವು ಕೌತುಕಗಳು ವಿಜ್ಞಾನಿಗಳನ್ನು ಮಾಡುತ್ತವೆ. ಕೆಲವು ಕೌತುಕಗಳು ಬರಹಗಾರನನ್ನು ರೂಪಿಸುತ್ತವೆ. ಕೆಲವು ಕೌತುಕಗಳು ವಿಕೃತರನ್ನಾಗಿಯೂ ಮಾಡಬಹುದು. ವಿವೇಕಪೂರ್ಣ ಕೌತುಕಗಳು ಹಲವು ಸಂಶೋಧನೆಗೆ ನಾಂದಿಯಾಗಿ ಜಗತ್ತು ಹಲವು ಬಗೆಯ ಫಲ ಪುಷ್ಪಗಳನ್ನು ಕಂಡಿದೆ. ಭೂಮಿಯ ಅಂಚನ್ನು ನೋಡುವ ಕೌತುಕ ನನ್ನನ್ನು ಹಕ್ಕಿಪಿಕ್ಕಿ ಮಾಡಿತು. ಹೆಗಲಿಗೆ ಬ್ಯಾಕ್‌ಪ್ಯಾಕ್ ನೇತು ಹಾಕಿಕೊಂಡು ದಿಕ್ಕಾಪಾಲಾಗಿ ಈ ತನಕ ಸುತ್ತಿ ಮುಗಿಸಿದ್ದು ಮೂವತ್ತಾರು ದೇಶಗಳಿರಬೇಕು. ಈ ಸಂಖ್ಯೆ ಏನೂ ಮಹತ್ವದ್ದಲ್ಲ. ಒಬ್ಬ ನೌಕರ, ವ್ಯಾಪಾರಿ, ಮಾರಾಟಗಾರ, ಗಗನಸಖಿ, ಪೈಲಟ್ ತನ್ನ ವೃತ್ತಿಸಂಬಂಧಿಯಾಗಿ ಅನೇಕ ದೇಶಗಳನ್ನು, ಲಕ್ಷಾಂತರ ಮೈಲುಗಳನ್ನು ಓಡಾಡಿರಲು ಸಾಧ್ಯ. ಆದರೆ ಇಂಥವರು ಏರ್‌ಪೋರ್ಟ್‌ನಿಂದ ಹೋಟೆಲ್; ಹೋಟೆಲ್‌ನಿಂದ ಏರ್‌ಪೋರ್ಟ್‌ಗೆ ಬಹಳಷ್ಟು ಸಲ ಸೀಮಿತವಾಗಿರುತ್ತಾರೆ.

ಕೋಟಿಕೋಟಿಗಳ ವ್ಯಾಪಾರ ವಿನಿಮಯದ ನಡುವೆ ಒಂದು ಟುಲಿಪ್ ಹೂವನ್ನು ಅವರಿಗೆ ಮುಟ್ಟಿ ನೋಡಿ ಆಸ್ವಾದಿಸಲು, ಓಂಟಾರಿಯೋ ಸರೋವರದ ನೀರನ್ನು ಮುಖಕ್ಕೆ ಚಿಮುಕಿಸಿಕೊಳ್ಳಲು ಸಾಧ್ಯವಾಗಿರುವುದಿಲ್ಲ. ಅಂಥ ವ್ಯಾಪಾರೀ ತಿರುಗಾಟಗಳು ವ್ಯಾಪಾರಕ್ಕೇ ಸೀಮಿತ. ಅವನ ಕೌತುಕವೂ ವ್ಯಾಪಾರೀ ಕೌತುಕವೇ ಆಗಿರುತ್ತದೆ. ತಪ್ಪು ಸರಿಗಳ ಪ್ರಶ್ನೆ ಅಲ್ಲ ಇದು. ಸಾಹಿತ್ಯ ಒಂದರಿಂದಲೇ ಸಮಾಜ ಪೂರ್ಣಗೊಳ್ಳದು. ವ್ಯಾಪಾರದೊಂದಿಗೆ ಕಲೆ, ಕೌಶಲ್ಯ, ಅಭಿರುಚಿಯನ್ನು ಬೆಸೆದು ಯಶಸ್ವಿಯಾದವರು ಪೂರ್ವದಲ್ಲಿಯೂ, ಪಶ್ಚಿಮದಲ್ಲಿಯೂ ಕಾಣಸಿಗುತ್ತಾರೆ. ಅತ್ಯುತ್ತಮ ವ್ಯಾಪಾರವೂ ಕಲೆಯ ಒಂದು ಭಾಗ. ಒಮ್ಮೆ ಚಿತ್ರೀಕರಣದ ಸಲುವಾಗಿ ತಂಡವನ್ನು ಕರೆದುಕೊಂಡು ವಿಮಾನದಲ್ಲಿ ಹಾರುತ್ತಿದ್ದೆ. ಕೆಳಗೆ ಅಪೂರ್ವವಾದ ಹಸಿರಿನ ಉದ್ಯಾನವನ, ನೀರು ನುಗ್ಗಿದ ಸುಂದರ ಕೊಲ್ಲಿ.

ಮಲಗಿದ್ದವರನ್ನೆಬ್ಬಿಸಿ ನೋಡ್ರೋ... ಎಷ್ಟು ಚೆನ್ನಾಗಿದೆ ? ಬಹುರತ್ನ ವಸುಂಧರೆ ಹ್ಯಾಗಿದ್ದಾಳೆ? ಎಂದು ನವೋದಯ ಕವಿಯಂತೆ ಮಾತನಾಡಿದೆ. ಎಲ್ಲರೂ ಕಿಟಕಿಯತ್ತ ಧಾವಿಸಿ ಆಹಾ ಎಂದು ಉದ್ಗರಿಸಿದರು. ನನ್ನ ಕೋಟಿ ನಿರ್ಮಾಪಕರು ಮಾತ್ರ ಕಿಟಕಿಯತ್ತ ಉಪೇಕ್ಷೆಯ ದೃಷ್ಟಿ ಎಸೆದು ಪೆದ್ ನನ್‌ಮಕ್ಳು... ಇಂಥಾ ಲ್ಯಾಂಡನ್ನ ಥರ್ಟೀ ಫಾರ್ಟೀ ಸೈಟ್ ಮಾಡಿ ಹಂಚೋದ್ ಬಿಟ್ಟು ಇನ್ನೂ ಮಡಿಕ್ಕಂಡ್ ಕುಂತವ್ರೆ ! ಎಂಥಾ ಒಳ್ಳೆ ಲೇ ಔಟ್ ಆಯ್ತದೆ ಗೊತ್ತ ? ಮೂರ್‌ ಸಾವ್ರ ಸೈಟು ಮಿನಿಮಮ್ಮು ಅಂತ ಲೊಚಗೊಟ್ಟಿದರು. ಅವರದು ವ್ಯಾಪಾರ, ನಮ್ಮದು ಕಲೆ. ನಮ್ಮ ಕಲೆಯನ್ನು ಊರ್ಜಿತಗೊಳಿಸಲೂ ಅವರದೇ ದುಡ್ಡು. ಅವರಿಗೆ ದುಡ್ಡು ಕಲೆಯಂತೆ ಕಾಣಿಸಿದರೆ ನಮಗೆ ಕಲೆ ದುಡ್ಡಿನಂತೆ ಕಾಣಿಸುತ್ತದೆ.

ಭೂಮಿಯ ಅಂಚು ನೋಡಬೇಕೆನ್ನುವ ಆಸೆ ಈಡೇರಲು ಸಾಧ್ಯವಿಲ್ಲ. ಚಪ್ಪಟೆಯಾಗಿರುವಂಥದ್ದಕ್ಕೆ ಅಂಚೊಂದು ಇರಲು ಸಾಧ್ಯ. ಗುಂಡಾಗಿರುವ ಮತ್ತು ತಿರುಗುತ್ತಿರುವ ಭೂಮಿಗೆ ಎಲ್ಲ ಬಿಂದುಗಳೂ ಆರಂಭದ ಬಿಂದುವಾಗಬಲ್ಲವು. ಈ ಸತ್ಯ ಮನವರಿಕೆಯಾದ ಮೇಲೂ ಅಂಚಿನ ಹುಡುಕಾಟ ನನ್ನನ್ನು ಬಿಡಲಿಲ್ಲ. ಧ್ರುವ ಪ್ರದೇಶಗಳಿಗೆ ಹೋದರೂ ಇಂಥ ಅನುಭವ ದಕ್ಕಲಾರದು. ದಕ್ಷಿಣದ ಟಾಸ್ಮೇನಿಯಾ ಕಡಲಂಚಿನವರೆಗೆ ಹೋದಾಗ ನಾನು ಭೂಮಿಯ ಅಂಚಿಗೆ ಬಂದಿದ್ದೇನೆ ಎಂಬ ಭಾವ ಸುಳಿದುಹೋಗಿತ್ತು. ಆದರೆ ಇದು ಕೂಡಾ ವೈಜ್ಞಾನಿಕವಾಗಿ ತಪ್ಪು. ಅಂಥ ಭಾವ ಒಂದು ಮನೋಸ್ಥಿತಿಯಷ್ಟೆ. ಧ್ರುವಗಳು ಸೂರ್ಯನ ಶಾಖದಿಂದ ವಂಚಿತವಾದ ಜಾಗಗಳಿರಬಹುದು. ಅಲ್ಲಿನ ಹವೆ, ಭೂಗೋಳ ಭಿನ್ನವಾಗಿರಬಹುದು. ಆದರೆ ಧ್ರುವಗಳನ್ನು ಭೂಮಿಯ ಅಂಚು ಎಂದು ಕರೆಯುವಂತಿಲ್ಲ.

ಭೂಮಿ ನಡೆದಷ್ಟೂ ದೂರ. ಒಂದೇ ದಿಕ್ಕಿಗೆ ಹೊರಟರೆ ಬಂದು ಸೇರುವುದು ಹೊರಟ ಬಿಂದುವಿಗೇ. ಅದಕ್ಕೇ ಇರಬೇಕು ಭೂಮಿಯನ್ನು ತಾಯಿ ಎಂದು ಕರೆಯುವುದು. ಅಮ್ಮನನ್ನು ತೊರೆದು ಬಹು ದೂರ ಹೋಗುವಂತಿಲ್ಲ. ಹಾಗೆ ಹೋದವರು ಅಮ್ಮನಿಗಾಗಿ ಕನವರಿಸುವುದು ತಪ್ಪುವುದಿಲ್ಲ. ಅಮ್ಮನೆಂದರೆ ಹೆತ್ತ ತಾಯಿ ಮಾತ್ರವಲ್ಲ ; ನಾಡು, ಸಂಸ್ಕೃತಿ, ಭಾಷೆ ಕೂಡಾ. ಸೂರ್ಯನ ಒಂದು ಚೂರಿನಿಂದ ಭೂಮಿಯನ್ನು ಸೃಷ್ಟಿಸಲಾಯಿತು ಎಂದು ವಿಜ್ಞಾನ ಹೇಳುತ್ತದೆ. ಗಂಡಿನ ಒಂದು ಅಂಗದಿಂದ ಹೆಣ್ಣನ್ನು ಸೃಷ್ಟಿಸಲಾಯಿತು ಎಂದು ಬೈಬಲ್ ಹೇಳುತ್ತದೆ. ಸೂರ್ಯನೂ, ಗಂಡನೂ ತಾವು ಕಳೆದುಕೊಂಡ ಒಂದು ಭಾಗವನ್ನು ಮರುಹೊಂದಲು ತವಕಿಸುತ್ತಲೇ ಇದ್ದಾರೆ. ಜಗತ್ತಿನ ಮಾಯೆಯ ಮೂಲವೇ ಈ ನಂಟು. ಸೂರ್ಯ ಭೂಮಿಯ ನಂಟಿಗೂ, ಗಂಡು ಹೆಣ್ಣಿನ ನಂಟಿಗೂ ಅನೇಕ ಸಾಮ್ಯತೆಗಳಿವೆ. ಇದೊಂದು ಪರಾವಲಂಬನೆಯ, ಗುಲಾಮಗಿರಿಯ ಸಂಕೇತವೆಂದು ಸ್ತ್ರೀವಾದಿಗಳು ಬೀದಿಗಿಳಿದು ಮುಷ್ಕರ ಹೂಡಬಹುದು.

ಆದರೆ ಮುಷ್ಕರ ಹೂಡಲೂ ಆ ಬೀದಿಗೆ ಸೂರ್ಯನ ಬೆಳಕು ಬೇಕು. ಸೂರ್ಯನಿಲ್ಲದೆ ಇಲ್ಲಿನ ಚರಾಚರಗಳಿಗೆ ಅಸ್ತಿತ್ವವೇ ಇಲ್ಲ. ಈ ಕಾವ್ಯಾತ್ಮಕ ಪರಿಕಲ್ಪನೆಯಾಚೆಗೆ ಸೂರ್ಯ, ಭೂಮಿ, ಚಂದ್ರರೆಲ್ಲಾ ಯಾವುದೋ ಒಂದು ತಿರುಗಣಿಯಲ್ಲಿ ಸಿಕ್ಕಿಬಿದ್ದಿರುವ ನಿರುದ್ದಿಶ್ಯವಾದ ವಸ್ತುಗಳೂ ಆಗಿರಬಹುದು. ಮನುಷ್ಯರ ಬುದ್ಧಿಭಾವಗಳಿಗೆ ಈತನಕ ಹೊಳೆದ ಕಲ್ಪನೆಗಳಾಚೆಗೇ ಇರುವ ಸಂಗತಿಗಳಾಗಿರಲೂಬಹುದು.
ಒಂದು ಹೊಸ ಜಾಗಕ್ಕೆ ಅನ್ವೇಷಕ, ಕೌತುಕ ಮನಸ್ಸಿನಿಂದ ಹೊರಡುವ ಮುನ್ನ ಮನಸ್ಸು ಅದೆಷ್ಟು ಲಹರಿಗಳಲ್ಲಿ ಹರಿದಾಡುತ್ತದೆ! ಆದರೆ ನಮ್ಮ ಪ್ರವಾಸಕ್ಕೆ ಲೌಕಿಕವಾಗಿ ನೆರವಾಗುವ ಟ್ರಾವೆಲ್ ಏಜೆಂಟರಿಗೆ ಇದೆಲ್ಲ ಅರ್ಥವಾಗಬೇಕೆಂದು ನಿರೀಕ್ಷಿಸುವುದು ಸಲ್ಲ.

ದುಬಾರಿ ಹಾಸ್ಯ ಪ್ರಜ್ಞೆಯ ನಾನು, ನನ್ನ ಏಜೆಂಟರನ್ನು ಅಪಾರ ಗೋಳುಗುಟ್ಟಿಸುತ್ತೇನೆ. ಭೂಮಿಯ ಅಂಚಿನಲ್ಲಿರುವ ಒಂದು ಊರಿಗೆ ಟಿಕೆಟ್ ಮಾಡು ಎಂದು ನನ್ನ ಏಜೆಂಟಳಿಗೆ ಹೇಳಿದಾಗ ಅವಳು ಬ್ರೆಜಿಲ್‌ಗೆ ಟಿಕೆಟ್ ಕೇಳಿದರೆ ಒಳ್ಳೆ ಆಫರ್ ಇದೆ, ನೀವು ಬಾಂಗ್ಲಾದೇಶಕ್ಕೆ ಯಾಕೆ ಹೋಗಬಾರದು ಸಾರ್ ಎನ್ನುತ್ತಾಳೆ. ಇಂಥವಳನ್ನು ಬದಲಾಯಿಸಬಾರದೆ? ಪ್ರಯೋಜನವಿಲ್ಲ. ಹೊಸ ಏಜೆಂಟರು ಇವಳಿಗಿಂತ ಹಾರಿಬಲ್ ಆಗಿರುತ್ತಾರೆ. ಈ ರೇಣುಕಾದೇವಿಯ ಕೃಪೆ ಇಲ್ಲದೆ ಪ್ರಯಾಣ ಆರಂಭವಾಗುವಂತಿಲ್ಲ. ಭೂಮಿಯ ಅಂಚಿಗೆ ಹೋಗುವ ಈ ಪ್ರಯಾಣ ಒಂದು ಭ್ರಮೆಯೇ ಸರಿ. ಒಬ್ಬರ ಭ್ರಮೆಗಳು ಇನ್ನೊಬ್ಬರಿಗೆ ವಾಸ್ತವರೂಪದಲ್ಲಿ ಅರ್ಥವಾಗಬೇಕೆನ್ನುವುದು ಇನ್ನೊಂದು ಭ್ರಮೆ. ಕೊಂಚ ಭ್ರಮಾಧೀನನಾಗದಿದ್ದರೆ ಅನೇಕ ಪುಣ್ಯ ಕಾರ್ಯಗಳನ್ನು ಮಾಡಲಾಗುವುದಿಲ್ಲ. ಆದರೆ ಈ ಭ್ರಮೆಗಳ ವೆಚ್ಚವನ್ನು ಬೇರೆಯವರಿಗೆ ಹೊರಿಸಬಾರದು.

ಅಳೆದೂ ಸುರಿದೂ ಅಂತಿಮವಾಗಿ ಆಯ್ಕೆ ಮಾಡಿಕೊಂಡಿದ್ದು ಅಲಾಸ್ಕ. ಅದೇನು ಪ್ರತ್ಯೇಕ ದೇಶವಲ್ಲ. ಬಡವರು ಬಂಗಾರದಂಥ ಭೂಮಿಯನ್ನು ಮಗಳ ಮದುವೆ ಮಾಡಲು ಅಗ್ಗದ ಬೆಲೆಗೆ ಮಾರಿಬಿಡುತ್ತಾರಲ್ಲ, ಅಂಥ ಯಾವುದೋ ಬೇಜವಾಬ್ದಾರಿ ಕಾರಣದಿಂದ ರಷ್ಯನ್ನರು ಅಮೆರಿಕನ್ನರಿಗೆ ತಿಳಿಯದೆ ಮಾರಿರಬಹುದಾದ, ಉತ್ತರ ಧ್ರುವಕ್ಕೆ ಸಮೀಪವಿರುವ ಒಂದು ವಿಶೇಷವಾದ ಭೂಭಾಗ. ಅಮೆರಿಕ ವೀಸಾ ಇದ್ದವರು ಪ್ರವೇಶಿಸಬಹುದಾದ ಸಸ್ಯ, ಕಾಡು, ಗ್ಲೇಸಿಯರ್‌ಗಳಿಂದ ತುಂಬಿಹೋಗಿರುವ ಜಾಗ. ಕಟ್ಟಡಗಳಿಗಿಂತ ಹಿಮಪರ್ವತಗಳು ಹೆಚ್ಚು; ಮನುಷ್ಯರಿಗಿಂತ ಪ್ರಾಣಿಗಳು ಹೆಚ್ಚು; ಸಿಗ್ನಲ್ ಲೈಟುಗಳಿಗಿಂತ ಗ್ಲೇಸಿಯರ್ಸ್‌ಗಳು ಹೆಚ್ಚು (More mountains than buildings, More wildlife than people, And more glaciers than stoplights) ಎಂಬ ಹೆಗ್ಗಳಿಕೆ ಅಲಾಸ್ಕ ಬಗ್ಗೆ ಇದೆ. ಈ ಹೇಳಿಕೆಯೇ ನನ್ನನ್ನು ಅಲಾಸ್ಕದತ್ತ ಸೆಳೆಯಿತು.

ಇನ್ನೊಂದು ವಿಚಿತ್ರವನ್ನಿಲ್ಲಿ ವಿವರಿಸಬೇಕು. ಸೌಂದರ್ಯಾನುಭೂತಿಯ ಪರಾಕಾಷ್ಠೆಯಿಂದ, ಸಂತೋಷ ಮತ್ತು ಸಂಭ್ರಮಗಳಿಂದ ನಾನು ಅಲಾಸ್ಕಗೆ ಹೊರಡಲಿಲ್ಲ. ಅದೆಲ್ಲಕ್ಕೂ ವಿರುದ್ಧವಾದ ಮನಸ್ಥಿತಿಯಲ್ಲಿದ್ದೆ. ಸಂತೋಷಕ್ಕೂ, ದುಃಖಕ್ಕೂ ಒಂದೇ ನೆಪ ಒಡ್ಡಿ ಕುಡಿಯುವ ವೃತ್ತಿಕುಡುಕರಂತೆ, ನಾನು ಸಂಭ್ರಮಪಟ್ಟಾಗಲೂ ಹತಾಶನಾಗಿದ್ದಾಗಲೂ ಪ್ರವಾಸಕ್ಕೆ ಆತುಕೊಳ್ಳುವೆನು. ವಾಸ್ತವವಾಗಿ ಅಲಾಸ್ಕಕ್ಕೆ ಹೊರಟಾಗ ಮುಖದ ತುಂಬೆಲ್ಲ ಖಿನ್ನತೆಯು ಗೆರೆ ಕೊರೆದು ಯಾವ ಪ್ರಸಾದನವೂ ಮುಚ್ಚಿಡಲಾರದಷ್ಟು ಆಳವಾಗಿದ್ದವು.

ಒಳಗೆ ಬೆಂಕಿ ಬಿದ್ದ ಅನುಭವ. ದೇಹವೆಂಬ ದೇಗುಲದೊಳಗೆ ಸಣ್ಣ ಕರುಳು ಸುಟ್ಟುಕೊಂಡು ಬೂದಿ ರಾಶಿ. ಒಡಲೊಳಗೆ ಒಂದಾದರೂ ಸಂಪಿಗೆ ಗಿಡ ನೆಡಬೇಕಿದ್ದರೆ ನಾನು ಎಲ್ಲಾದರೂ ಓಡಿ ಹೋಗಲೇಬೇಕಿತ್ತು. ಇದು ಎಲ್ಲ ಮನುಷ್ಯರ ಒಂದು ತಾತ್ಕಾಲಿಕ ಆದರೆ ಕಡು ಅಸಹನೀಯ ಸ್ಥಿತಿ. ಯಾರೂ ನನ್ನವರಲ್ಲ, ಯಾವುದೂ ನನ್ನದಲ್ಲ ಎಂಬ ದರವೇಸಿ ವೈರಾಗ್ಯ. ಸಂತಸಕ್ಕೋ, ಸಂಕಟಕ್ಕೋ ಅಂತೂ ಓಡಿ ಹೋಗಲೊಂದು ನೆಪ ಬೇಕು. ಭೂಮಿಯ ಇಲ್ಲದ ಅಂಚನ್ನು ಹುಡುಕಿ ಹೊರಟ ನನ್ನದು ಆತ್ಮಹತ್ಯಾತ್ಮಕ ಮನಸ್ಥಿತಿಯೆ? ಅರಿಯೆ. ಧುಮುಕುವ ಅಥವಾ ಅವಿತಿಟ್ಟುಕೊಳ್ಳುವ ನೆಲೆಯಂತೆ ಅಲಾಸ್ಕ ನನಗೆ ಕಾಣಿಸಿರಬಹುದೆ ?

ಮುಂದಿನ ಪ್ರಶ್ನೆ: ಅಲಾಸ್ಕಗೆ ಹೇಗೆ ಹೋಗುವುದು ? ಅದನ್ನು ಶೋಧಿಸಲು ಎರಡು ಮಾರ್ಗಗಳಿವೆ. ಮೊದಲನೆಯದು ಅಲಾಸ್ಕದ ಊರೊಂದರಲ್ಲಿ ವಿಮಾನದಿಂದ ಇಳಿದು ಬಿಡುವುದು. ರಸ್ತೆ ಮಾರ್ಗದಲ್ಲಿ, ರೈಲು ಮಾರ್ಗದಲ್ಲಿ ಅಡ್ಡಾಡುವುದು. ಇಂಥ ಪ್ರಯತ್ನದ ತುಣುಕುಗಳು ಆಗಿಹೋಗಿದ್ದವು. ತೃಪ್ತಿಕರವೆನ್ನಿಸಿರಲಿಲ್ಲ. ಎರಡನೆಯದು ಹಡಗಿನಲ್ಲಿ ಹೋಗುವುದು. ತೀರದಿಂದ ತೀರಕ್ಕೆ ಹಡಗು. ಅಲ್ಲಿ ಇಳಿದು ಭೂಮಾರ್ಗ ಬಳಸುವುದು. ಮತ್ತೆ ಹಡಗನ್ನೇರುವುದು. ಇನ್ನೊಂದು ತೀರಕ್ಕೆ ಹೋಗುವುದು. ಅಲ್ಲಿ ಮತ್ತೆ ಭೂಮಾರ್ಗದ ಬಳಕೆ. ಎರಡನೆಯ ವಿಧಾನವೇ ಸೂಕ್ತ ಅನ್ನಿಸಿತು.

ಕನ್ನಡಿ ನೋಡಿ ಹ್ಯಾಪು ಮೋರೆಯನ್ನು ವಿಡಂಬಿಸಿಕೊಂಡು, ದೇಹದಲ್ಲಿ ಅಳಿದುಳಿದ ಚೈತನ್ಯ ಒಗ್ಗೂಡಿಸಿ ಹುರುಪನ್ನು  ರಳುಗಟ್ಟಿಸಿಕೊಂಡು ಅದೂ ಇದೂ ಜೋಡಿಸಿಕೊಳ್ಳುವಾಗ ಮೈಸೂರಿನಿಂದ ಒಂದು ಕರೆ ಬಂತು: ಅಣ್ಣಾ ನನ್ನೂ ಕರ್ಕೊಂಡು ಹೋಗು. ಸಖತ್ ಬೇಜಾರಾಗಿದೆ. ನಾನೂ ಬರ್ತೀನಿ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT