ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭ್ರಷ್ಟತೆ ಎಂಬ ಗೆದ್ದಲು

Last Updated 15 ಫೆಬ್ರುವರಿ 2014, 19:30 IST
ಅಕ್ಷರ ಗಾತ್ರ

ಭಾರತದ ಬಗ್ಗೆ ಒಳ್ಳೆಯ ಮಾತು ಕೇಳಲು, ಒಳ್ಳೆಯ ಮಾತು ಆಡಿ ಸಂತೋಷಪಡಲು ನಿಜವಾದ ಭಾರತೀಯನ ಜೀವ ತವಕಿಸುತ್ತದೆ. ದೇಶದಿಂದ ಹೊರಗೆ ಹೋದಾಗ ಈ ತವಕ ಇನ್ನೂ ಹೆಚ್ಚು. ತನ್ನ ಮನೆಯನ್ನು ತಾನಲ್ಲದೆ ಯಾರು ಮೆಚ್ಚಿಕೊಳ್ಳುತ್ತಾರೆ? ಗೋಡೆ ಶಿಥಿಲವಾಗಿರಬಹುದು, ಬಾಗಿಲುಗಳು ಭದ್ರವಾಗಿಲ್ಲದಿರಬಹುದು, ಮಳೆ ಬಂದಾಗ ಸೂರೆಲ್ಲಾ ಸೋರುತ್ತಿರಬಹುದು, ಇಲಿ–ಹಾವು– ಹೆಗ್ಗಣ– ಕಪ್ಪೆಗಳು ಒಳಬಂದಿರಬಹುದು, ಬೇಯಿಸಿಟ್ಟ ಅಡುಗೆ ಎಲ್ಲರಿಗೂ ಸಾಕಾಗದಿರಬಹುದು, ಊಟ–ತಿಂಡಿ– ನೀರು–ಬಟ್ಟೆ–ಬೆಂಡು–ಬತ್ತಾಸುಗಳಿಗೆ ಮನೆ ಮಂದಿ ಕಿತ್ತಾಡುತ್ತಿರಬಹುದು, ಆದರೆ ಇದು ನಮ್ಮ ಮನೆ. ಕೈಲಾದಷ್ಟು ರಿಪೇರಿ ಮಾಡಿಕೊಂಡು ಇಲ್ಲೇ ವಾಸಿಸಬೇಕು.

ಇರುವುದನ್ನು ಮನೆಯ ಯಜಮಾನ ಎಲ್ಲರಿಗೂ ನ್ಯಾಯೋಚಿತವಾಗಿ ಹಂಚಿ, ಎಲ್ಲರನ್ನೂ ಸಮಾನವಾಗಿ ಕಂಡು, ಯಾರ ಬಳಿಯೂ ಕೈ ಚಾಚದೆ ಮನೆಯ ಮರ್ಯಾದೆ ಮುಕ್ಕಾಗದಂತೆ ನೀಸಬೇಕು. ಮನೆಯ ಸದಸ್ಯರಿಗೆ  ಯಾವ ವಿಶೇಷ ಶಕ್ತಿ ಇದೆಯೋ ಅದು ಪ್ರಕಟಗೊಳ್ಳಲು ಬೇಕಾದ ದುಡಿಮೆಗೆ ಅವರನ್ನು ಒಡ್ಡಬೇಕು. ಆಗ ಮನೆ ನೇರ್ಪಾಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ಒಳಗಿರುವವರಿಗೆಲ್ಲ, ಇದು ನನ್ನ ಮನೆ ಅನ್ನಿಸಬೇಕು. ಇದನ್ನು ಸರಿಪಡಿಸುವ ಹಠ, ಛಲ ಬೇಕು.

ಭಾರತವೆಂಬ ನಮ್ಮ ಮನೆಯ ತೂತುಗಳಿಗೆ ಲೆಕ್ಕವೇ ಇಲ್ಲ. ಒಂದನ್ನು ಮುಚ್ಚಿದರೆ ಹತ್ತು ತೆರೆದುಕೊಳ್ಳುತ್ತವೆ. ಈ ಮನೆಯ ಸದಸ್ಯರು ಹೆಮ್ಮೆಪಟ್ಟುಕೊಳ್ಳಬಹುದಾದ ದೊಡ್ಡಸ್ತಿಕೆಗಳು ಎಷ್ಟಿವೆಯೋ ಅದಕ್ಕಿಂತ ನಾಚಿಕೆ ಪಟ್ಟುಕೊಳ್ಳುವಂಥ, ಹೊರಗಿನವರೆದುರು ತಲೆತಗ್ಗಿಸಿ ನಿಂತುಕೊಳ್ಳುವಂಥ ಕಪ್ಪು ಕಲೆಗಳು ಅಸಂಖ್ಯ. ಈ ಕಲೆಗಳು ಇಂದಲ್ಲ ನಾಳೆ ಮಾಯವಾಗುತ್ತವೆ ಎಂದು ಅರ್ಧ ಶತಮಾನದಿಂದ ಕಾಯುವುದೇ ಆಯಿತು. ಪ್ರಜಾಪ್ರಭುತ್ವ ಎಂಬ ಒಂದೇ ಒಂದು ಭರವಸೆಯನ್ನು ನೆಚ್ಚಿ ಸಿನಿಕರಾಗದೆ, ಉತ್ತಮವಾದ ನಾಳೆಗಳು ಬಂದಾವು ಎಂದು ಕಾಯಲೇ ಬೇಕಾಗಿದೆ. ಮೌಢ್ಯ, ಅಸಮಾನತೆ, ಸ್ವಜನಪಕ್ಷಪಾತ, ನಿರುದ್ಯೋಗ, ಲಿಂಗ ತಾರತಮ್ಯ, ಅಸ್ಪೃಶ್ಯತೆ, ಜಾತೀಯತೆ, ಧರ್ಮಾಂಧತೆ, ಅನಕ್ಷರತೆ, ಅವೈಜ್ಞಾನಿಕತೆ, ಅವೈಚಾರಿಕತೆ, ಅತ್ಯಾಚಾರ, ಇವೆಲ್ಲಕ್ಕಿಂತ ಭಯಾನಕವಾಗಿ ಬೆಳೆದು ನಿಂತಿರುವ ಭ್ರಷ್ಟಾಚಾರ. ಇದು ಕಪ್ಪು ಕಲೆ ಅಲ್ಲ– ವಿನಾಶಕಾರಿ ಗೆದ್ದಲು.

ಭ್ರಷ್ಟತೆ ಎಂಬ ಗೆದ್ದಲಿನ ವಿರಾಟ್‌ಸ್ವರೂಪ ದರ್ಶನಕ್ಕೆ ಒಂದು ಚಿಕ್ಕ ಉದಾಹರಣೆ ಕೊಡಬಯಸುತ್ತೇನೆ. ನಿಸ್ಸಂಶಯವಾಗಿ ಇದು ಚಿಕ್ಕ ಉದಾಹರಣೆ. ಅಂತರರಾಜ್ಯ ಹೆದ್ದಾರಿಗಳಲ್ಲಿ ಸಂಚರಿಸುವ ಟ್ರಕ್‌ಗಳಿಂದ ಪೊಲೀಸರು ಮತ್ತು ಸರ್ಕಾರಿ ನೌಕರರಿಂದ ವಸೂಲಾಗುವ ಲಂಚದ ವಾರ್ಷಿಕ ಮೊತ್ತ ಇಪ್ಪತ್ತೆರಡು ಕೋಟಿಗಳಿಗೂ ಹೆಚ್ಚು. ಇದು ಅನಧಿಕೃತ ಹೆದ್ದಾರಿ ದರೋಡೆ. ಇದರಲ್ಲಿ ವಾಣಿಜ್ಯ ತೆರಿಗೆ, ಅರಣ್ಯ ಇಲಾಖೆ, ಆಕ್ಟ್ರಾಯ್‌, ತೂಕ ಮತ್ತು ಅಳತೆ, ಅಬಕಾರಿ ಮುಂತಾದ ಇಲಾಖೆಗಳ ದರೋಡೆಕೋರರು ಪೊಲೀಸರೊಂದಿಗೆ ಸೇರಿಕೊಂಡು ಸುಲಿಯುತ್ತಾರೆ. ತಾವೇ ಘೋಷಿಸಿಕೊಂಡ ಹಕ್ಕಿನ ಪ್ರಕಾರ ಹಂಚಿಕೊಳ್ಳುತ್ತಾರೆ.

ಈ ದರೋಡೆಗಾಗಿ ಟ್ರಕ್ಕೊಂದು ರಾಜ್ಯದ ಗಡಿಯಲ್ಲಿ ಪ್ರತಿದಿನ ಹನ್ನೆರಡು ಗಂಟೆ ಸುಮ್ಮನೆ ನಿಲ್ಲುತ್ತದೆ. ಈ ವಿಳಂಬದ ಬೆಲೆ ತೆರುವವನು ಗ್ರಾಹಕ ಮತ್ತು ಒಟ್ಟಾರೆಯಾಗಿ ದೇಶ. ತಮಾಷೆ ಏನೆಂದರೆ ಕಾಗದ ಪತ್ರ ಸರಿಯಾಗಿರುವ ಲಾರಿಯವರೂ ಇಂತಿಷ್ಟು ಎಂದು ಕೊಡಬೇಕು. ಆದ್ದರಿಂದ ವಾಹನದವರೂ ಸಹ ಅಕ್ರಮ ಸಾಗಣೆ ಮಾಡುತ್ತಾರೆ. ಲಂಚ ಅನಿವಾರ್ಯವೆಂದ ಮೇಲೆ ಕಾನೂನಿನ ಪರಿಪಾಲನೆ ಯಾರಿಗೆ ಬೇಕು? ದೆಹಲಿ–ಮುಂಬೈ, ಮುಂಬೈ–ಚೆನ್ನೈ, ಚೆನ್ನೈ–ಕೋಲ್ಕತ್ತಾ, ಕೋಲ್ಕತ್ತಾ–ದೆಹಲಿ ಈ ಹೆದ್ದಾರಿಗಳ ಟ್ರಕ್‌ಗಳ ಟ್ರಿಪ್‌ ಅನ್ನು ದ್ವಿಗುಣಗೊಳಿಸಲು ಸಾಧ್ಯವಾದರೆ ಸಾಕು–ರಾಷ್ಟ್ರೀಯ ಉತ್ಪಾದನೆಯಲ್ಲಿ, ಗ್ರಾಹಕರು ವಸ್ತುಗಳನ್ನು ಕೊಳ್ಳುವಲ್ಲಿ ತುಂಬಾ ಉಳಿತಾಯ ಮಾಡಬಹುದು. ಬೆರಳೆಣಿಕೆಯ ಸರ್ಕಾರಿ ದರೋಡೆಕೋರರ ದೆಸೆಯಿಂದ ಬಡಪಾಯಿ ಗ್ರಾಹಕನ ಜೇಬಿಗೆ ಕತ್ತರಿ.

ಜನರ ನಿರ್ಲಿಪ್ತ ನೀತಿ ಹೇಗಿದೆ ಎಂದರೆ ಲಾರಿಯವರು ಪೊಲೀಸರಿಗೆ ಲಂಚ ಕೊಟ್ಟರೆ ನಮಗೇನು ಸಂಬಂಧ ಎನ್ನುತ್ತಾರೆ. ಭಾರಿ ಧರ್ಮನಿಷ್ಠ ದೇಶವೆಂದು ಬೊಗಳೆ ಹೊಡೆಯುವ ನಮ್ಮವರಿಗೆ ಭ್ರಷ್ಟಾಚಾರವು ಹೇಯವಾದ ಪಾಪ ಎಂದು ಅನ್ನಿಸಿಲ್ಲ. ಅಕ್ರಮ ಗಳಿಕೆಯಲ್ಲಿ ದೇವರಿಗೂ ಷೇರು ಕೊಟ್ಟು ಸಂಭಾಳಿಸಿ ಪಾಪ ಮುಕ್ತರಾಗಬಲ್ಲರು. ಅಧ್ಯಯನವೊಂದರ ಪ್ರಕಾರ ಇಲ್ಲಿ ಶೇಕಡಾ 62 ಜನರಿಗೆ ಲಂಚ ಕೊಟ್ಟ ಪ್ರಥಮಾನುಭವ ಉಂಟು. ಪಶ್ಚಿಮ ದೇಶಗಳಲ್ಲಿ ಭ್ರಷ್ಟಾಚಾರವಿದ್ದರೂ ಶ್ರೀಸಾಮಾನ್ಯನ ದೈನಂದಿನ ಜೀವನಕ್ಕೆ ಸಾಧ್ಯವಾದಷ್ಟೂ ಪ್ರವೇಶಿಸದಂತೆ, ಅದರಿಂದ ಸಾರ್ವಜನಿಕ ಬದುಕು ನೀತ್ಯಾತೀತವಾಗದಂತೆ ನೋಡಿಕೊಳ್ಳುವ ಅಲಿಖಿತ ನೀತಿಸಂಹಿತೆ ಇದೆ.ಆದರೆ ಭವ್ಯ ಭಾರತಾಂಬೆಯು ಲಂಚ ಕೊಡುವವರು ಮತ್ತು ಪಡೆಯುವವರು ಎಂಬ ಎರಡೇ ವರ್ಗದ ಜನರಿಂದ ತುಂಬಿ ಹೋಗಿದ್ದಾಳೆ.

ದೇಶ, ಸಂಸ್ಕೃತಿ, ಪರಂಪರೆ ಎಂಬ ದೊಡ್ಡ ದೊಡ್ಡ ಮಾತುಗಳನ್ನಾಡುವ ವ್ಯಕ್ತಿಗಳು, ಸಂಸ್ಥೆಗಳು ಮತ್ತು ರಾಜಕೀಯ ಪಕ್ಷಗಳು ಕೂಡಾ ಭ್ರಷ್ಟಾಚಾರವನ್ನು ಗುಟ್ಟಾಗಿ ಓಲೈಸುತ್ತದೆ. ಚುನಾವಣೆಗಳಲ್ಲಿ ಅಕ್ರಮ ಹಣ ಚಲಾವಣೆಯಾಗುತ್ತದೆ. ಬಹುಶಃ ಚುನಾವಣೆಗಳೇ ಭ್ರಷ್ಟಾಚಾರದ ಗುರುತ್ವ ಕೇಂದ್ರಗಳು. ನೇಮಕಾತಿ, ಮಂಜೂರಾತಿ, ವರ್ಗಾವಣೆ, ಪರವಾನಗಿ ಈ ಚಟುವಟಿಕೆಗಳಲ್ಲಿ ಪರಬ್ರಹ್ಮನೇ ಕಾವಲು ಕಾಯ್ದರೂ ಸಿಕ್ಕಿಬೀಳದಂತೆ ಭ್ರಷ್ಟಾಚಾರ ನಡೆಸುತ್ತಾರೆ. ಮಧ್ಯಮವರ್ಗ ಮತ್ತು ಮೇಲ್ಮಧ್ಯಮ ವರ್ಗವು ಪ್ರಾಮಾಣಿಕವಾಗಿ ಆದಾಯ ತೆರಿಗೆ ಸಲ್ಲಿಸಿದರೆ ಈ ದೇಶದ ಆರ್ಥಿಕ ಚಿತ್ರವೇ ಬದಲಾಗುತ್ತದೆ. ಮೂಲಭೂತ ಅವಶ್ಯಕತೆಗಳನ್ನು ಪೂರೈಸದ ಈ ಅರಾಜಕ ವ್ಯವಸ್ಥೆಗೆ ನಾನೇಕೆ ಸರಿಯಾಗಿ ತೆರಿಗೆ ಕಟ್ಟಬೇಕು ಎಂಬ ಕುತರ್ಕದಿಂದ ಇಲ್ಲಿ ತೆರಿಗೆಗಳ್ಳರೇ ಬಹಳ. ತೆರಿಗೆ ಪಾವತಿ ಮಾಡದೆ ದೇಶ ಸರಿ ಹೋಗುವುದಿಲ್ಲ. ದೇಶ ಸರಿ ಇಲ್ಲವೆಂದು ತೆರಿಗೆ ಕಟ್ಟುವುದಿಲ್ಲ.

ಕಪ್ಪು ಹಣದ ಖದೀಮರಿಗೆ ಭಾರತವೇ ಸ್ವರ್ಗ. ಸ್ವಿಸ್‌ ಬ್ಯಾಂಕಿಂಗ್‌ ಅಸೋಸಿಯೇಶನ್‌ ಪ್ರಕಾರ ಇಡೀ ಜಗತ್ತಿನ ಕಪ್ಪು ಹಣ ಒಂದು ತೂಕವಾದರೆ, ಅದಕ್ಕೆ ಸರಿಗಟ್ಟುವ ಕಪ್ಪು ಹಣ ಭಾರತ ಒಂದರಲ್ಲೇ ಇದೆ. ಭಾರತೀಯರು ಸ್ವಿಸ್‌ ಬ್ಯಾಂಕುಗಳಲ್ಲಿ ಅಡಗಿಸಿಟ್ಟಿರುವ ಹಣ, 2010ರ ಮಾಧ್ಯಮಗಳ ಶೋಧನೆಯ ಪ್ರಕಾರ, 1456 ಬಿಲಿಯನ್‌ ಡಾಲರ್‌ಗಳು. ಈ ಹಣದಿಂದ ಭಾರತ ಮಾಡಿರುವ ಸಾಲವನ್ನು 13 ಬಾರಿ ತೀರಿಸಬಹುದು. ಈ ಅಂಕಿ ಅಂಶಗಳಲ್ಲೂ ಉತ್ಪ್ರೇಕ್ಷೆ ಇರಲು ಸಾಧ್ಯ. ಇಂಥ ಸಂಗತಿಗಳಲ್ಲಿ ಒಬ್ಬೊಬ್ಬರೂ ಒಂದೊಂದು ಸೊನ್ನೆ ಸೇರಿಸುತ್ತಾ ಹೋಗುವ ಸಾಧ್ಯತೆ ಇರುತ್ತದೆ.

ಜೇಮ್ಸ ನಾಸನ್‌ ಎಂಬ ಸ್ವಿಸ್‌ ಬ್ಯಾಂಕಿನ ಅಧಿಕಾರಿ ಒಂದು ಸಂದರ್ಶನದಲ್ಲಿ ‘ಅದೆಲ್ಲಾ ಊಹಾಪೋಹ. ಶಕ್ತಿ ಇದ್ದವರು ಮೂಲವನ್ನು ಬಹಿರಂಗಪಡಿಸಲಿ. ಅಷ್ಟೋ ಇಷ್ಟೋ ಇಟ್ಟಿದ್ದಾರೆ ಅಷ್ಟೆ’ ಎಂದು ಮುಗುಮ್ಮಾಗಿ ಮಾತನಾಡಿದ್ದಾನೆ. ಇಲ್ಲಿ ಪ್ರತಿಯೊಂದೂ ಚಮತ್ಕಾರದಂತೆ, ಹಸಿ ಸುಳ್ಳಿನಂತೆ, ವಂಚಕರ ಜಾಲದಂತೆ ಕಾಣಿಸುತ್ತದೆ. ಪ್ರವಾಸಿಗಳಿಗೆ ಸ್ವರ್ಗದಂತೆ ತೋರಿಸಿಕೊಳ್ಳುವ ಸ್ವಿಟ್ಜರ್‌ಲ್ಯಾಂಡ್‌ ಬದುಕುತ್ತಿರುವುದೇ ಬಡದೇಶಗಳ ಭ್ರಷ್ಟರು ಕೊಡುವ ಬಡ್ಡಿ ಹಣದಿಂದ. ಕಳ್ಳತನಕ್ಕೆ ಆಶ್ರಯ ಕೊಡುವವನು ಕಳ್ಳನಷ್ಟೇ ಅಪರಾಧಿ. ಆಲ್ಫ್‌ ಪರ್ವತ ಶ್ರೇಣಿಯ ನುಣ್ಣನೆಯ ಬಿಳುಪು ಸ್ವಿಟ್ಜರ್‌ಲ್ಯಾಂಡ್‌ನ ಕಪ್ಪು ಹಣದ ಕಳಂಕವನ್ನು ಮುಚ್ಚಿಡಲಾಗದು.

ಇಲ್ಲಿ ಭ್ರಷ್ಟತೆಯ ಗೆದ್ದಲು ಹತ್ತದ ಕ್ಷೇತ್ರವೇ ಇಲ್ಲ. ಶಿಕ್ಷಣ, ವಿಜ್ಞಾನ–ತಂತ್ರಜ್ಞಾನ, ಮಿಲಿಟರಿ, ಕೊನೆಗೆ ನ್ಯಾಯದೇವತೆಯ ಬುಡಕ್ಕೂ ಗೆದ್ದಲು ವ್ಯಾಪಿಸಿದೆ. ದೇಶ ಕಾಯುವವರು ಭ್ರಷ್ಟರಾದರೆ ಉಳಿಗಾಲವೆಲ್ಲಿ? ಇಂಡಿಯನ್‌ ನೇವಿ, ಇಂಡಿಯನ್‌ ಏರ್‌ಫೋರ್ಸ್‌ ಭ್ರಷ್ಟತೆಯ ಕಳಂಕ ಹೊತ್ತಿವೆ. ಭ್ರಷ್ಟತೆಗೆ ಸಾವಿರಾರು ಮುಖಗಳು. ಸಾವಿರಾರು ವರ್ಷಗಳ ಇತಿಹಾಸ ಅದಕ್ಕೆ. ಈ ಘಟಸರ್ಪವನ್ನು ಭಾರತೀಯ ಮನಸ್ಸು ಸಾಕಿಕೊಂಡು ಬಂದಿದೆ. ಆ ರಾಜಸಭೆಯಲ್ಲಿ ಲಂಚದ ಪರಮ ಜೀವನ ಜಾಣರು ನೆರೆದಿದ್ದರು ಎನ್ನುತ್ತಾನೆ– ಕುಮಾರವ್ಯಾಸ. ಸತ್ಯಕ್ಕನ ವಚನಗಳಲ್ಲಿಯೂ ಲಂಚದ ಪ್ರಸ್ತಾಪವಿದೆ. ಇತಿಹಾಸದಲ್ಲಿ ಲಂಚ ಕೇಕೆ ಹಾಕಿ ನಕ್ಕಿದೆ. ಬ್ರಿಟಿಷರು ಭಾರತವನ್ನಾಳುವಾಗ ಈಸ್ಟ ಇಂಡಿಯಾ ಕಂಪೆನಿಯ ಲಂಚಾವತಾರಗಳ ಬಗ್ಗೆ 1694–95 ರಲ್ಲಿ ಲಂಡನ್‌ನ ಬ್ರಿಟಿಷ್‌ ಪಾರ್ಲಿಮೆಂಟಿನಲ್ಲಿ ದೀರ್ಘ ಚರ್ಚೆಗಳಾಗಿವೆ.

ಅಸಂಖ್ಯ ಅಧಿಕಾರಿಗಳು ಲಂಚದ ಆರೋಪ ಹೊತ್ತು ಲಂಡನ್‌ಗೆ ಮರಳಿ ಶಿಕ್ಷೆಗೊಳಗಾಗಿದ್ದಾರೆ. ಇಷ್ಟು ಪ್ರಾಚೀನ ಕುಶಲಕಲೆಯಂತಿರುವ ಭ್ರಷ್ಟಾಚಾರ, ಭಾರತವನ್ನು ಅಷ್ಟು ಸುಲಭವಾಗಿ ಬಿಟ್ಟು ಹೋಗಲಾರದು. ಹೋಗಲು ನಾವು ಬಿಡಲೊಲ್ಲೆವು. ತೇಜಸ್ವಿ ಹೇಳುತ್ತಿದ್ದಂತೆ ಇದನ್ನು ಅಧಿಕೃತಗೊಳಿಸಿ ಯಾವುದಕ್ಕೆ ಎಷ್ಟು ಲಂಚ ಎಂದು ಬೆಲೆಪಟ್ಟಿ ಪ್ರಕಟಿಸಿದರೆ ಕ್ಷೇಮವೇನೋ. ಆದರೆ ಭಾರತ ಎಲ್ಲಿಗೆ ಮುಟ್ಟಿದೆ ಎಂದರೆ ಲಂಚ ಕೊಟ್ಟರೂ ಕೆಲಸ ಆಗದ ಸ್ಥಿತಿಗೆ. ಲಂಚ ಪಡೆದು ಸಕಾಲಕ್ಕೆ ಕೆಲಸ ಮಾಡಿಕೊಡುವವನನ್ನು ನಿಯತ್ತಿನ ಕೆಲಸಗಾರ ಎಂದು ಗೌರವಿಸುವ ಮನಸ್ಥಿತಿಗೆ ನಾವೀಗ ತಲುಪಿದ್ದೇವೆ.

ಕ್ಷೀಣವಾದ ದನಿಯಂತೆ ಅಲ್ಲಲ್ಲಿ ಭ್ರಷ್ಟಾಚಾರ ನಿಗ್ರಹ ಕಾನೂನುಗಳು, ವ್ಯಕ್ತಿಗಳು, ಸಂಸ್ಥೆಗಳು ಇವೆ ಎಂಬುದು ಸಮಾಧಾನ ಹುಟ್ಟಿಸುತ್ತದೆ. ಭ್ರಷ್ಟಾಚಾರ ಸಂವಿಧಾನ ಬಾಹಿರ. ಕಾನೂನು ಬಲ್ಲವನು ಸಂವಿಧಾನದ ನೆರವಿನಿಂದ ಶಾಸನಬದ್ಧವಾಗಿ ಹೋರಾಡಬಹುದು. ಇದಕ್ಕೆ ಪೂರಕವಾಗಿ ಮಾಹಿತಿ ಹಕ್ಕು ಕಾಯಿದೆ ಇದೆ. ಲೋಕಾಯುಕ್ತದಂಥ ಸಂಸ್ಥೆಗಳಿವೆ. ಸಣ್ಣ–ದೊಡ್ಡ ಅಣ್ಣಹಜಾರೆಗಳು ಅಲ್ಲಲ್ಲಿ ಹೋರಾಟ ಮಾಡುತ್ತಿದ್ದಾರೆ. ಲಂಚ ಪಡೆದೆ ಹಿಡಿದುಕೊಂಡರು; ಲಂಚ ಕೊಟ್ಟೆ–ಬಿಟ್ಟುಬಿಟ್ಟರು ಎನ್ನುವ ಜರಗನಹಳ್ಳಿ ಶಿವಶಂಕರ್‌ ಅವರ ಹನಿಗವನ ನೆನಪಾಗುತ್ತಿದೆ.

ಸರ್ವವ್ಯಾಪಿ, ಸರ್ವಾಂತರ್ಯಾಮಿ, ಸರ್ವಶಕ್ತ ಮುಂತಾದ ದೇವರಿಗೆ ಹೇಳುವ ಗುಣವಿಶೇಷಣಗಳನ್ನು ಲಂಚಕ್ಕೂ ಹೇಳಬಹುದು. ವಿದ್ಯಾವಂತರೇ ಹೆಚ್ಚು ಭ್ರಷ್ಟಾಚಾರಿಗಳು. A man who has never gone to school may steal a car, but if he has a university education, he may steal the whole railroad– ಎನ್ನುತ್ತಾನೆ ರೂಸ್‌ವೆಲ್ಟ. ಅಣಕದಂತೆ ಕೇಳಿಸಿದರೂ ಈಗ ವಿದ್ಯಾವಂತರೇ ಅಪಾಯಕಾರಿ. ಪಾಪದ ಪಟ್ಟಿಗೆ ಭ್ರಷ್ಟಾಚಾರ ಸೇರದಿದ್ದರೆ ಭಾರತಕ್ಕೆ ಉಳಿಗಾಲವಿಲ್ಲ. ಅಕ್ರಮ ಗಳಿಕೆ ಪುಣ್ಯಾರ್ಜನೆ ಎನಿಸಿರುವ ನಮ್ಮ ದೇಶದಲ್ಲಿ ವಿವಿಧ ರೂಪದಲ್ಲಿ ತಬರರು ಲಂಚ ಕೊಡಲಾಗದೆ, ತಮ್ಮ ಹಕ್ಕನ್ನು ಪಡೆಯಲಾಗದೆ ದಯನೀಯವಾಗಿ ಬದುಕುತ್ತಿದ್ದಾರೆ.

ಚಹಾ ಮಾರುವವನು ಬಂದರೂ, ಚಪ್ಪಲಿ ಹೊಲಿಯುವವನು ಬಂದರು ಈ ಗೆದ್ದಲು ನಿವಾರಿಸುವ ಇಚ್ಛಾಶಕ್ತಿ ಉಳ್ಳ ದಾರ್ಶನಿಕರಾದ ನಾಯಕರು ಕಾಣುತ್ತಿಲ್ಲ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT