ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭ್ರಷ್ಟಾಚಾರ ವಿರೋಧಿ ಆಂದೋಲನ ದಿಕ್ಕು ತಪ್ಪುತ್ತಿದೆಯೇ?

Last Updated 14 ನವೆಂಬರ್ 2011, 19:30 IST
ಅಕ್ಷರ ಗಾತ್ರ

ಭ್ರಷ್ಟಾಚಾರ ವಿರೋಧಿ ಚಳವಳಿ ಈಗ ಹಲವಾರು ಬೇಡದ ಸಂಗತಿಗಳಿಂದಾಗಿಯೇ ಸುದ್ದಿಯಲ್ಲಿದೆ. ಸಾಮಾಜಿಕವಾಗಿ ಜನರನ್ನು ಸನ್ನದ್ಧಗೊಳಿಸಬಹುದಾಗಿದ್ದ ಅಸಾಧಾರಣ ಪ್ರಕ್ರಿಯೆಯೊಂದು ಬರೀ ವಾಗ್ಯುದ್ಧ, ಕ್ಷುಲ್ಲಕವಾದ ಸ್ವಯಂಪ್ರತಿಷ್ಠೆ ಮತ್ತು ಈ ಚಳವಳಿಯ ಸೂತ್ರಧಾರರಲ್ಲಿನ ನಾಯಕತ್ವದ ಕೊರತೆಯಿಂದ ಹೇಗೆ ಬಳಲುತ್ತಿದೆ ಎಂಬುದನ್ನು ನಾವೀಗ ಕಾಣುತ್ತಿದ್ದೇವೆ. ಆಗಸ್ಟ್‌ನಲ್ಲಿ ಅಣ್ಣಾ ಹಜಾರೆ ಅವರು ನಡೆಸಿದ ಉಪವಾಸ ಸತ್ಯಾಗ್ರಹದ ಸಂದರ್ಭದಲ್ಲಿ ಈ ಚಳವಳಿ ಜನದನಿಯನ್ನು ಪ್ರತಿನಿಧಿಸುತ್ತಿದೆ ಎಂದೇ ಹಲವರು ನಂಬಿದ್ದರು.
ಆದರೆ ಇಲ್ಲಿ ಅವರಿಗೆ ಅರ್ಥವಾಗದಿದ್ದ ಮತ್ತೊಂದು ಸಂಗತಿಯೂ ಇತ್ತು. ಅದೆಂದರೆ ಇಂತಹ ಚಳವಳಿಗಳು ಅತ್ಯಂತ ಅಪರೂಪದ ಸಂದರ್ಭಗಳಲ್ಲಿ ಮಾತ್ರ ಜನದನಿಯನ್ನು ಪ್ರತಿನಿಧಿಸುತ್ತವೆ, ಬಹುತೇಕ ಸಂದರ್ಭಗಳಲ್ಲಿ ಜನರ `ದನಿ~ಗಿಂತ `ಗದ್ದಲ~ವೇ ಇಲ್ಲಿ ಹೆಚ್ಚು ಸದ್ದು ಮಾಡುತ್ತದೆ.

ಇಂತಹ ಮಿತಿಮೀರಿದ ಗದ್ದಲದ ನಡುವೆ ವಿವೇಚನೆ ಮತ್ತು ಮುಂಜಾಗ್ರತೆ ಸಮಾಧಿಯಾಗಿ ಹೋಗುತ್ತದೆ. ಇಂತಹದ್ದೊಂದು ಅಪಾಯದ ಬಗ್ಗೆ, ಅಣ್ಣಾ ತಂಡದಲ್ಲಿ ಗುರುತಿಸಿಕೊಂಡಿದ್ದ ನಾವು, ಬಹುತೇಕರು ಎಚ್ಚರಿಸಿದ್ದೆವು.
 
`ಮಾಧ್ಯಮ ತಹತಹಿಕೆ~ಗೆ ಬಲಿಯಾಗದೆ, `ದೇಶದಾದ್ಯಂತ ಸದ್ದಿಲ್ಲದೇ ಜನರನ್ನು ಸಂಘಟಿಸುವ ಕಾರ್ಯದಲ್ಲಿ ನಿರತರಾಗಿ~ ಎಂದು ತಂಡದ ಪ್ರಮುಖರಿಗೆ ಸಲಹೆ ಕೊಟ್ಟಿದ್ದೆವು.

`ಎಲ್ಲರೂ ಒಪ್ಪುವಂತಹ ರೀತಿಯಲ್ಲಿ ನಿರ್ಧಾರಗಳನ್ನು ಕೈಗೊಳ್ಳಿ, ಅಲ್ಲದೆ, ಈ ವಿಷಯದಲ್ಲಿ ಹೆಚ್ಚು ಹೆಚ್ಚು ಪಾರದರ್ಶಕವಾಗಿರಿ~ ಎಂದು ಸತತವಾಗಿ ಹೇಳುತ್ತಲೇ ಬಂದಿದ್ದೆವು. ಇಷ್ಟರ ನಡುವೆಯೂ ಆರಂಭದಿಂದ ಈ ಚಳವಳಿಯಲ್ಲಿ ತೊಡಗಿಕೊಂಡಿದ್ದ ನಮ್ಮಲ್ಲಿ ಕೆಲವರಿಗೆ ಭ್ರಮನಿರಸನ ಆಗುವಂತಹ ಸಂದರ್ಭಗಳೇ ಸೃಷ್ಟಿಯಾದವು. ಆದರೂ ಭ್ರಷ್ಟಾಚಾರದ ವಿರುದ್ಧ ಪ್ರಬಲವಾದ ಕಾನೂನು ತರಬಹುದೆಂಬ ಭರವಸೆಯ ಕಾರಣದಿಂದ ನಾವು ತಂಡದಲ್ಲೇ ಉಳಿದುಕೊಂಡಿದ್ದೆವು.

ದುರದೃಷ್ಟವಶಾತ್, ಈಗ ಬಯಲಿಗೆ ಬರುತ್ತಿರುವ ಸಂಗತಿಗಳಿಗೆ ಅಣ್ಣಾ ಅವರು ಹೇಳುತ್ತಿರುವಂತೆ `ನಾಲ್ವರ ಕೂಟ~ದ ಕೈವಾಡ ಅಷ್ಟೇ ಕಾರಣವಲ್ಲ; ಭ್ರಷ್ಟಾಚಾರ ವಿರೋಧಿ ಚಳವಳಿ ಸಾಯಬೇಕೆಂದು ಬಯಸುತ್ತಿರುವ ಹಲವರು ಇದರ ಹಿಂದೆ ಇದ್ದಾರೆ. ಅಷ್ಟೇ ಅಲ್ಲ, ಸ್ವತಃ ಅಣ್ಣಾ ತಂಡದ ಕೆಲ ಸದಸ್ಯರೇ ತಮ್ಮತ್ತ ಗುರಿ ಇಡಲು ಬೇಕಾದ ಶಸ್ತ್ರಾಸ್ತ್ರಗಳನ್ನು ವಿರೋಧಿಗಳಿಗೆ ಒದಗಿಸಿಕೊಡುತ್ತಿದ್ದಾರೆ ಎಂದೇ ನನಗನಿಸುತ್ತದೆ.

ಅಂತಹ ಒಂದು ಅದ್ಭುತವಾದ ಚಳವಳಿಯೊಂದು ನಮ್ಮ ಕಣ್ಣ ಮುಂದೆಯೇ ಹೇಗೆ ನಿಧಾನವಾಗಿ ಅವಸಾನದ ಅಂಚಿಗೆ ಸರಿಯುತ್ತಿದೆ ಎಂಬುದನ್ನು ಕೆಳಗಿನ ವಿವರಗಳು ಪುಷ್ಟೀಕರಿಸುತ್ತವೆ:

ನಾಗರಿಕ ಸಮಾಜದ ಪ್ರತಿನಿಧಿಗಳು ಮೊದಲಿನಿಂದಲೂ ಆಗ್ರಹಿಸುತ್ತಲೇ ಬಂದಿದ್ದ ಸಂಧಾನ ಮಾತುಕತೆ, ಉಪವಾಸ ಸತ್ಯಾಗ್ರಹ ಕೊನೆಗೊಂಡ ಬಳಿಕ ನಡೆದೇ ಇಲ್ಲ. ಭಾರತದಂತಹ ಬೃಹತ್ ರಾಷ್ಟ್ರದಲ್ಲಿ ಹಲವಾರು ನಿಷ್ಠ ಕಾರ್ಯಕರ್ತರು ಎರಡು ಮೂರು ದಶಕಗಳಿಗೂ ಹೆಚ್ಚು ಕಾಲದಿಂದ ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತಲೇ ಬಂದಿದ್ದಾರೆ.

ಚಳವಳಿ ಯಶಸ್ವಿಯಾಗಬೇಕಾದರೆ ಇಂತಹವರ ಅನುಭವ ಮತ್ತು ಜ್ಞಾನ ಮಹತ್ವದ ಪಾತ್ರ ವಹಿಸುತ್ತದೆ. ಆದರೆ ಒಣ ಪ್ರತಿಷ್ಠೆ ಮತ್ತು ಇತರ ಗಣ್ಯ ವ್ಯಕ್ತಿಗಳು ಚಳವಳಿಯನ್ನು ಹಿಡಿತಕ್ಕೆ ತೆಗೆದುಕೊಂಡು ಬಿಡಬಹುದು ಎಂಬ ಆತಂಕದಿಂದ ಅರವಿಂದ್ ಕೇಜ್ರಿವಾಲ್, ನಿರ್ಧಾರ ತೆಗೆದುಕೊಳ್ಳುವಂತಹ ನಿರ್ಣಾಯಕ ಸಂದರ್ಭಗಳಲ್ಲಿ ಅಂತಹವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲೇ ಇಲ್ಲ.

ಇದರಿಂದ ಈ ಪ್ರಕ್ರಿಯೆ ಕೆಲವರಿಗಷ್ಟೇ ಸೀಮಿತವಾದದ್ದು ಮಾತ್ರವಲ್ಲ, ದಿನದಿಂದ ದಿನಕ್ಕೆ ಪಾರದರ್ಶಕತೆ ಕಳೆದುಕೊಳ್ಳುತ್ತಾ ಹೋಯಿತು. ಹೀಗಾಗಿ ನೀತಿ ನಿರ್ಧಾರ, ಹಿಸ್ಸಾರ್ ಉಪ ಚುನಾವಣೆಯಲ್ಲಿ ಪಾಲ್ಗೊಳ್ಳುವುದು, ಒಂದು ಪಕ್ಷದ ವಿರುದ್ಧ ಪ್ರಚಾರ ಮಾಡುವುದೇ ಇರಲಿ ಅಥವಾ ಹಣದ ಲೆಕ್ಕಾಚಾರ ನಿರ್ವಹಣೆಯೇ ಆಗಿರಲಿ, ಯಾವುದೊಂದೂ ಮುಕ್ತವಾಗಿ ಚರ್ಚೆಗೆ ಒಳಪಡಲೇ ಇಲ್ಲ.

ಭ್ರಷ್ಟಾಚಾರ ರಾಜಕೀಯದ ಎಲ್ಲ ಸ್ತರಗಳಲ್ಲೂ ಅಡರಿಕೊಂಡಿರುವುದರಿಂದ ಒಂದು ಪಕ್ಷವನ್ನು ಗುರಿಯಾಗಿ ಇಟ್ಟುಕೊಳ್ಳುವುದು ಸರಿಯಲ್ಲ ಎಂದು ನಂಬಿದ್ದ ನಾವು ಬಹುತೇಕರು ಸದ್ದಿಲ್ಲದೇ ತಂಡದಿಂದ ಹೊರಬಂದೆವು. `ಯಾವುದೋ ಒಂದು ಪಕ್ಷಕ್ಕೆ ಮತ ಚಲಾಯಿಸಬೇಡಿ~ ಎಂದು ಮತದಾರರನ್ನು ಕೇಳಿದರೆ, ಅದರಷ್ಟೇ ಭ್ರಷ್ಟವಾದ ಮತ್ತೊಂದು ಪಕ್ಷಕ್ಕೆ ಮತ ಚಲಾಯಿಸಿ ಎಂದು ಹೇಳಿದಂತಾಗುತ್ತದೆ. ಇದರ ಹಿಂದೆ ಯಾವುದೇ ನೈತಿಕ ಅಥವಾ ವೈಚಾರಿಕ ಸಮರ್ಥನೆ ಇಲ್ಲ.

ಭ್ರಷ್ಟಾಚಾರ ವಿರುದ್ಧದ ಹೋರಾಟ ಅಣ್ಣಾ ತಂಡದ ಹಲವರಿಗೆ ಪ್ರಚಾರ ದೊರಕುವಂತೆ ಮಾಡಿತು. ಆಗ ಇದ್ದಕ್ಕಿದ್ದಂತೆಯೇ ಅವರೆಲ್ಲರೂ ತಾವು ಎಲ್ಲ ವಿಚಾರಗಳಲ್ಲೂ ಪರಿಣತರು ಎಂಬಂತೆ ರಾಷ್ಟ್ರಕ್ಕೆ ಸಂಬಂಧಿಸಿದ ಎಲ್ಲ ವಿಚಾರಗಳ ಬಗ್ಗೆಯೂ ಅಭಿಪ್ರಾಯ ಮಂಡಿಸತೊಡಗಿದರು.

ಭೂ ಸುಧಾರಣೆಯಿಂದ ಹಿಡಿದು ಚುನಾವಣಾ ಸುಧಾರಣೆ, ವಿಶೇಷ ಆರ್ಥಿಕ ವಲಯದಂತಹ ಬೃಹತ್ ಅಭಿವೃದ್ಧಿ ಯೋಜನೆಗಳವರೆಗೆ ಪ್ರತಿಯೊಂದು ವಿಷಯಗಳಲ್ಲೂ ಎಲ್ಲರೂ `ತಜ್ಞ~ರಾದರು. ಸದಾ ಸುದ್ದಿಗಾಗಿ ಹಪಹಪಿಸುವ ಮಾಧ್ಯಮಗಳೂ ಈ ಸಮೂಹ ಸನ್ನಿಯಿಂದ ಹೊರತಾಗಲಿಲ್ಲ.

ಟಿ.ವಿಗಳಲ್ಲಿ ಸಂಜೆಯ ವೇಳೆ ಪ್ರಸಾರವಾಗುವ ಸಂವಾದಗಳಲ್ಲಿ ಪಾಲ್ಗೊಳ್ಳುತ್ತಿದ್ದ ಈ ಪ್ರಮುಖರು, ಜಗತ್ತಿನ ಎಲ್ಲ ವಿಷಯಗಳ ಬಗ್ಗೆಯೂ ತಜ್ಞರಂತೆ ಮಾತನಾಡತೊಡಗಿದರು.

ಇದರಿಂದ ಭ್ರಷ್ಟಾಚಾರ ವಿರೋಧಿ ಚಳವಳಿಯ ವಿಷಯಾಂತರ ಆಯಿತಲ್ಲದೆ ಹಲವು ಸದಸ್ಯರ ಅರಿವಿನ ಕೊರತೆ ಮತ್ತು ರಾಜಕೀಯ ಚಾತುರ್ಯದ ಬಣ್ಣವೂ ಬಯಲಾಯಿತು.

ಕಾಶ್ಮೀರಕ್ಕೆ ಸಂಬಂಧಿಸಿದಂತೆ ಪ್ರಶಾಂತ್ ಭೂಷಣ್ ಅವರ ಅಭಿಪ್ರಾಯ ಮತ್ತು ನಂತರದ ಎಲ್ಲ ಅಹಿತಕರ ಪರಿಣಾಮಗಳೂ ಆಡಳಿತಶಾಹಿಯು ಕಾಯ್ದು ನೋಡುವ ತಂತ್ರ ಅನುಸರಿಸಲು ಅವಕಾಶ ಕಲ್ಪಿಸಿಕೊಟ್ಟಿದೆ.

ಆರಂಭದಲ್ಲಿ ಕಾಣಿಸಿಕೊಂಡ ಬಿರುಕುಗಳು ಸ್ವಾಮಿ ಅಗ್ನಿವೇಶ್ ಅವರ ಹೇಳಿಕೆಗಳಿಂದ ಹೆಚ್ಚು ಗೋಚರವಾಗಲಾರಂಭಿಸಿವೆ. ಚಳವಳಿಗೆ ಹರಿದುಬಂದ ಎಲ್ಲ ದೇಣಿಗೆಯನ್ನೂ ಅರವಿಂದ್ ಅವರು ತಮ್ಮ ಸರ್ಕಾರೇತರ ಸಂಸ್ಥೆಯ ಅಡಿ ಸ್ವೀಕರಿಸುತ್ತಿದ್ದಾರೆ ಹೊರತು `ಇಂಡಿಯಾ ಅಗೆನೆಸ್ಟ್ ಕರಪ್ಷನ್~ ಬ್ಯಾನರ್‌ನ ಅಡಿ ಅಲ್ಲ ಎಂಬ ವಿಷಯವೇ ನಮಗೆ ತಿಳಿಯದೇ ಹೋದದ್ದು ಅತ್ಯಂತ ಅಚ್ಚರಿಯ ಸಂಗತಿ. ಈ ವಿಷಯ ಸ್ವಾಮಿ ಅಗ್ನಿವೇಶ್ ಅವರಿಗೆ ಮೊದಲೇ ತಿಳಿದಿತ್ತು, ಆದರೂ ಅವರು ಅದನ್ನು ಇತ್ತೀಚಿನವರೆಗೂ ಹೊರಗೆಡವಿರಲಿಲ್ಲ ಎಂಬುದು ನಮಗೆ ಸ್ಪಷ್ಟವಾಯಿತು.

ಇದು ಚಳವಳಿಯ ನಾಯಕತ್ವದಲ್ಲಿ ಇರುವ ನೈತಿಕತೆಯ ನಿರ್ವಾತವನ್ನೂ ಪ್ರತಿಬಿಂಬಿಸುತ್ತದೆ. ವಾಸ್ತವದಲ್ಲಿ ನಾವು ಇಡೀ ಚಳವಳಿಯುದ್ದಕ್ಕೂ `ಗಾಂಧಿವಾದಿ~ ಎಂಬ ಪದವನ್ನು ಅನಗತ್ಯವಾಗಿ ಬಳಸಿದ್ದೆವು. ಅಣ್ಣಾ ಅವರನ್ನು `ಗಾಂಧಿವಾದಿ~ ಎನ್ನುವುದಕ್ಕಿಂತ ಅವರು ಕೇವಲ ಸಕಾಲದಲ್ಲಿ ಒದಗಿಬಂದ ಒಬ್ಬ ಸೂಕ್ತ ವ್ಯಕ್ತಿ ಆಗಿದ್ದರಷ್ಟೇ ಎಂಬುದು ನಿಧಾನಕ್ಕೆ ನಮ್ಮ ಅರಿವಿಗೆ ಬರುತ್ತಿದೆ.

ದುರದೃಷ್ಟದ ಸಂಗತಿಯೆಂದರೆ ಗಾಂಧೀಜಿ ಅವರಿಗೆ ಇದ್ದ ರಾಜಕೀಯ ಚಾತುರ್ಯವಾಗಲಿ ಅಥವಾ ಸ್ವಯಂ ಸಂಕಲ್ಪವಾಗಲಿ ಅಣ್ಣಾ ಅವರಿಗೆ ಇಲ್ಲ. ಗಾಂಧಿ ಯಾವಾಗಲೂ ಎಲ್ಲವನ್ನೂ ಸ್ವತಃ ಮುನ್ನಡೆಸುತ್ತಿದ್ದರು. ಆದರೆ ಅಣ್ಣಾ ತಮಗೆ ಹತ್ತಿರದವರು ತಮ್ಮನ್ನು ಮುನ್ನಡೆಸಲು ಅವಕಾಶ ಮಾಡಿಕೊಡುತ್ತಾರೆ ಎಂದೇ ಭಾಸವಾಗುತ್ತಿದೆ.

`ಉಳಿತಾಯ~ ಮತ್ತು ತಮ್ಮ ಸರ್ಕಾರೇತರ ಸಂಸ್ಥೆಗೆ `ನಿಧಿ~ ಸಂಗ್ರಹಿಸುವ ಹೆಸರಿನಲ್ಲಿ ಕಾರ್ಯಕ್ರಮ ಸಂಘಟಕರಿಂದ ಹೆಚ್ಚಿನ ಪ್ರಯಾಣ ಭತ್ಯೆ ಪಡೆದಿರುವುದಾಗಿ ಸಮರ್ಥಿಸಿಕೊಳ್ಳುವ ಕಿರಣ್ ಬೇಡಿ ಅವರ ವಾದ ಅವರ ನೈತಿಕ ದಿವಾಳಿತನ ಸಂಕೇತದಂತೆಯೇ ಕಾಣುತ್ತದೆ. ಇದು `ಕ್ಷೇತ್ರದ ಮತದಾರರ ಅಗತ್ಯಗಳನ್ನು ಪೂರೈಸುವ ಸಲುವಾಗಿಯೇ ತಾವು ಭ್ರಷ್ಟಾಚಾರ ಮಾಡುತ್ತಿದ್ದೇವೆ~ ಎಂದು ರಾಜಕಾರಣಿಗಳು ತಮ್ಮನ್ನು ಸಮರ್ಥಿಸಿಕೊಳ್ಳುವ ರೀತಿಯಂತೆಯೇ ಇದೆ.

ಮತಕ್ಕಾಗಿ ಲಂಚ ಕೊಡುವುದು ಅಥವಾ ತಮ್ಮ ಕ್ಷೇತ್ರಕ್ಕೆ ಬರುವ ಜನರ ಪ್ರಯಾಣ ವೆಚ್ಚ ಭರಿಸುವುದು ಎಲ್ಲವೂ ಒಂದೇ ಎನಿಸುತ್ತದೆ. ಗಾಜಿನ ಮನೆಯಲ್ಲಿ ವಾಸ ಇರುವವರು ಇತರರಿಗೆ ಕಲ್ಲು ತೂರಬಾರದು ಎಂಬುದನ್ನು ಮೊದಲು ಗಮನದಲ್ಲಿ ಇಟ್ಟುಕೊಂಡಿರಬೇಕು.

ಕಿರಣ್ ಬೇಡಿ ಅವರು ಹೀಗೆ ವಿವಾದಕ್ಕೆ ಸಿಲುಕುತ್ತಿರುವುದು ಇದೇ ಮೊದಲೇನಲ್ಲ. ಹಲವು ವರ್ಷಗಳ ಹಿಂದೆ ಅವರು ಸೇವೆಯಲ್ಲಿ ಇದ್ದಾಗಲೇ ಅವರ ಪುತ್ರಿ `ಈಶಾನ್ಯ ಭಾಗ~ದ ವಿಶೇಷ ಕೋಟಾದಡಿ ವೈದ್ಯಕೀಯ ಸೀಟು ಪಡೆದುಕೊಂಡಾಗಿನ ವಿವಾದವನ್ನು ಬಹುತೇಕರು ಮರೆತಿಲ್ಲ.

ಆರಂಭದಲ್ಲಿ ಚಳವಳಿಯನ್ನು ಬೆಂಬಲಿಸಿದ್ದ ಗಾಂಧಿ ಶಾಂತಿ ಪ್ರತಿಷ್ಠಾನದ ರಾಜಗೋಪಾಲ್ ಅವರಂತಹ ಅತ್ಯಂತ ವಿಶ್ವಾಸಾರ್ಹ ವ್ಯಕ್ತಿಗಳು, ಕ್ರೈಸ್ತ ಮತ್ತು ಮುಸ್ಲಿಂ ಧಾರ್ಮಿಕ ನಾಯಕರು ಈಗ ಹಿಂದೆ ಸರಿದಿದ್ದಾರೆ.

ಪ್ರಸಕ್ತ ಸಂಗತಿಗಳ ಬಗ್ಗೆ ಮೌನ ವಹಿಸಿರುವ ಮೇಧಾ ಪಾಟ್ಕರ್ ಅವರು ಚಳವಳಿಯನ್ನು ಬೆಂಬಲಿಸುವುದು ಅನಿಶ್ಚಿತವಾಗಿದೆ. ಒಂದು ಉದ್ದೇಶಕ್ಕಾಗಿ ಚಳವಳಿಯಲ್ಲಿ ಪಾಲ್ಗೊಂಡಿದ್ದ ನಮ್ಮಂತಹ ಹಲವರು ಇಂತಹ ಗೊಂದಲಗಳ ಕಾರಣದಿಂದಾಗಿ ಚಳವಳಿಯಿಂದ ಹಿಂದೆ ಸರಿದಿದ್ದೇವೆ ಮತ್ತು ಭ್ರಷ್ಟಾಚಾರ ವಿರೋಧಿ ಕಾರ್ಯಸೂಚಿಯನ್ನು ನಮ್ಮ ಇತಿಮಿತಿಗಷ್ಟೇ ಸೀಮಿತಗೊಳಿಸಿಕೊಂಡಿದ್ದೇವೆ.

ಎಚ್ಚರಿಕೆಯ ಕರೆಗಂಟೆಯಾದ ಈ ಬಗೆಯ ನಾಯಕತ್ವದ ಕೊರತೆ ನಿಜಕ್ಕೂ ಆತಂಕಕಾರಿಯಾದ ಸಂಗತಿಯೇ ಸರಿ. ಭ್ರಷ್ಟಾಚಾರ ವಿರೋಧಿ ಹೋರಾಟ ಮಾತ್ರ ನಮ್ಮ ಪ್ರಧಾನ ಉದ್ದೇಶ ಆಗಿರಬೇಕೇ ಹೊರತು, ಅದು ಕೇವಲ ನಮ್ಮ ಸಲುವಾಗಿ ಅಲ್ಲ ಅಥವಾ ನಮ್ಮ ಅಹಂ ಅನ್ನು ತಣಿಸುವುದಕ್ಕೆ ಮಾತ್ರ ಇರುವುದಲ್ಲ ಎಂಬುದನ್ನು ಚಳವಳಿಯ ಭಾಗವಾಗಿರುವ ಪ್ರತಿಯೊಬ್ಬರೂ ಅರಿಯಬೇಕು.
 
ಚಳವಳಿಯಿಂದ ದೂರ ಸರಿಯುವಂತೆ ಕಳಂಕಿತ ವ್ಯಕ್ತಿಗಳಿಗೆ ಸೂಚಿಸಬೇಕು. ಕೈಗೊಳ್ಳುವ ಯಾವುದೇ ನಿರ್ಧಾರಗಳು ಸಾಮೂಹಿಕವಾಗಿ, ಪಾರದರ್ಶಕವಾಗಿ ಮತ್ತು ಸಮಷ್ಠಿಯಾಗಿ ಇರಬೇಕು.
 
ಪ್ರಬಲ ಮತ್ತು ಪರಿಣಾಮಕಾರಿಯಾದ ಭ್ರಷ್ಟಾಚಾರ ವಿರೋಧಿ ಕಾನೂನು ಅಸ್ತಿತ್ವಕ್ಕೆ ಬರಬೇಕೆಂಬ ನಮ್ಮ ಗುರಿ ಮುಟ್ಟುವವರೆಗೂ ನಮ್ಮ ಹೋರಾಟ ನಿಲ್ಲದು ಎಂಬ ಭರವಸೆಯನ್ನು ಅಗತ್ಯವಾಗಿ ಮೂಡಿಸಬೇಕು.

ಸದಾ ಕಾಲ ನಾವು ಪ್ರಚಾರದಲ್ಲಿ ಇರಬೇಕು ಎಂಬ ನಮ್ಮಳಗಿನ ಪ್ರಲೋಭನೆಯನ್ನು ಮೀರಿ ಕೆಲಸದತ್ತ ನಮ್ಮ ಗಮನ ಕೇಂದ್ರೀಕೃತವಾಗಬೇಕು. ದೇಶ ನಮ್ಮನ್ನು ಗಮನಿಸುತ್ತಿದೆ ಮತ್ತು ವೈಫಲ್ಯ ನಮ್ಮ ಆಯ್ಕೆಯಲ್ಲ ಎಂಬುದನ್ನು ಮೊದಲು ಅರ್ಥ ಮಾಡಿಕೊಳ್ಳಬೇಕು.

ಈಗ ರಾಷ್ಟ್ರದ ಜನರ ನಿರೀಕ್ಷೆಗೆ ಸ್ಪಂದಿಸದಿದ್ದರೆ ಅದಕ್ಕಾಗಿ ಮುಂದೆ ನಮ್ಮನ್ನೇ ನಾವು ಶಪಿಸಿಕೊಳ್ಳಬೇಕಾಗುತ್ತದೆ. ಆಗ ಒಂದೇ ಒಂದು ಗುಂಡನ್ನೂ ಹಾರಿಸದೆ `ನಾಲ್ವರ ಕೂಟ~ ನಿರಾಯಾಸವಾಗಿ ಸಮರದಲ್ಲಿ ಜಯ ಸಾಧಿಸಿಬಿಡುತ್ತದೆ. ಅದಕ್ಕಿಂತ ಅಪಮಾನಕರವಾದ ಸಂಗತಿ ಮತ್ತೊಂದಿರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT