ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಗಲದ ಮಹಾತಾಯಿ ಕೆಂಪಮ್ಮಗೆ ಅಶ್ರುತರ್ಪಣ

ಅಕ್ಷರ ಗಾತ್ರ

ಬರೆಯುವವನ ಬೇನೆ ಮತ್ತು ವಿಷಾದ ಉಮ್ಮಳಿಸುವ ಕ್ಷಣಗಳೆಂದರೆ ಲೇಖಕನೊಬ್ಬ ಹಚ್ಚಿಕೊಂಡಿದ್ದ, ಗೌರವಿಸುತ್ತಿದ್ದ ವ್ಯಕ್ತಿಗಳ ಸಾವಿನ ಸಂದರ್ಭದಲ್ಲಿ ಬರೆಯುವುದು ಮತ್ತು ಆ ಬರವಣಿಗೆ ನಿರ್ಭಾವುಕವಾಗಿರುವಂತೆ ಎಚ್ಚರವಹಿಸುವುದು. ಭಾವುಕತೆ ಅನ್ನೋದು ಸಾವಿನ ಸಂದರ್ಭದಲ್ಲಿ ನುಸುಳಿಯೇಬಿಡುತ್ತದೆ. ಆದರೆ ಭಾವುಕತೆ, ಕೆಲವೊಮ್ಮೆ ಹುಸಿ ತಳಪಾಯದ ಮೇಲಣ ಸೌಧ. ಹಾಗಂತ ನಿರ್ಭಾವುಕನಾದರೆ ಒಣ ಮಾಹಿತಿಗಳ ವರದಿ. ಸ್ಕಾರ್ಲೆಟ್ ಎಪ್‌ಸ್ಟೀನ್ ಎಂಬ ನನ್ನ ಪ್ರೀತಿಯ ಅಜ್ಜಿಯ ಬಗ್ಗೆ ಬರೆಯುವಾಗ ಭಾವ ನಿರ್ಭಾವಗಳ ಸಮನ್ವಯದ ಹಾದಿ ಹುಡುಕುತ್ತಾ ಕಂಬನಿಯನ್ನು ಒಳಗೇ ಇಂಗಿಸಲು ಯತ್ನಿಸುತ್ತಿದ್ದೇನೆ. ದೂರದ ಇಂಗ್ಲೆಂಡ್‌ನಲ್ಲಿ 92 ವಯಸ್ಸಿನ ಸ್ಕಾರ್ಲೆಟ್ ಕಣ್ಣುಮುಚ್ಚಿದ್ದಾರೆ.

ಈಗ ಆಕೆಯ ಜೀವನಗಾಥೆಯನ್ನು ಬಿಂಬಿಸುವ ಭಯಾನಕವಾದ, ಸಾಹಸಮಯವಾದ ಮತ್ತು ಅತ್ಯಂತ ಮಾನವೀಯವಾದ ಮತ್ತು ಖಂಡಾಂತರಗಳಲ್ಲಿ ಚದುರಿಹೋದ ಸಾವಿರಾರು ಬಿಡಿಚಿತ್ರಗಳಿರುವ ನೆನಪಿನ ಆಲ್ಬಮ್ಮುಗಳು ತೆರೆದುಕೊಳ್ಳುತ್ತಿವೆ. ಆಕೆಯ ಅನುಭವಗಳ ಪ್ರಯಾಣವನ್ನು ನೆನೆಸಿದರೆ ಇದು ವ್ಯಕ್ತಿಯ ಅಂತ್ಯವಲ್ಲ; ಒಂದು ಯುಗದ ಅಂತ್ಯ ಅನ್ನಿಸುತ್ತಿದೆ.

ಸ್ಕಾರ್ಲೆಟ್ ಎಪ್‌ಸ್ಟೀನ್ ಬಡ ಯಹೂದಿ ಕುಟುಂಬದಲ್ಲಿ ಹುಟ್ಟಿದವರು. ಹಿಟ್ಲರ್, ವಿಯನ್ನಾ ಮೇಲೆ ದಾಳಿ ಮಾಡಿ ಯಹೂದಿಗಳನ್ನು ಬೇಟೆಯಾಡತೊಡಗಿದಾಗ ಆಕೆಗೆ ಹದಿಮೂರರ ಹರಯ. ವೈದ್ಯೆಯಾಗುವ ಕನಸು ಹೊತ್ತ ಬಾಲೆ, ಶಾಲೆಯಲ್ಲೂ ಒಬ್ಬಂಟಿ. ‘ಜೂಯಿಷ್ ಪಿಗ್’ ಎಂಬ ಗೇಲಿ, ಅಣಕ. ತನ್ನ ಇಷ್ಟದ ಗೆಳೆಯ ವಿಲ್ಲಿಯನ್ನು ವಿನಾಕಾರಣ ಎತ್ತಿಕೊಂಡು ಹೋಗಿ ಕಣ್ಣೆದುರೇ ಇಲ್ಲವಾಗಿಸಿದ ಸೈನಿಕರ ಕ್ರೌರ್ಯ. ಎಲ್ಲೆಡೆ ಯಾತನಾ ಶಿಬಿರಗಳು. ಜೀವ ಭಯದಿಂದ ತತ್ತರಿಸುತ್ತಾ ವಿಯನ್ನಾದಿಂದ ಯುಗೋ ಸ್ಲಾವಿಯಾ, ಆಲ್ಬೇನಿಯಾ ಮಾರ್ಗವಾಗಿ ಇಂಗ್ಲೆಂಡ್ ತಲಪುವ ಸಾಹಸಗಾಥೆ. ರಾಜಕೀಯ ಆಶ್ರಯ ಬೇಡುತ್ತಾ, ಸುಳ್ಳು ಹೇಳುತ್ತಾ, ತುಂಡು ಬ್ರೆಡ್ ಕದಿಯುತ್ತಾ, ಪ್ರವಾಹದ ವಿರುದ್ಧ ಈಜುತ್ತಾ ಸಾಗುವ ಒಂದು ಕರುಣಾಜನಕ ಕಥಾನಕ.

ಆಕೆಯ ಆತ್ಮಕಥನದ ಹೆಸರೇ Swimming Upstream. ಸಾಯುವ ಕೊನೆಕ್ಷಣದವರೆಗೂ ಸ್ಕಾರ್ಲೆಟ್ ತಾನು ನೆಚ್ಚಿದ್ದ ಮೌಲ್ಯಗಳತ್ತ ಈಜುತ್ತಲೇ ಇದ್ದರು. ಆತ್ಮಕಥನದ ಆದಿಭಾಗದಲ್ಲಿ ಬರುವ ವಿವರಗಳು ಬಾಲೆಯ ಕಣ್ಣಿನಿಂದ ಚಿತ್ರಿಸಲ್ಪಟ್ಟ ಎರಡನೆ ಮಹಾಯುದ್ಧದ ಮೂರು ಘಟ್ಟಗಳು. ಯುದ್ಧದ ಕಾವು, ಯುದ್ಧದ ದಿನಚರಿ ಮತ್ತು ಯುದ್ಧದ ಆ ನಂತರದ ಪರಿಣಾಮಗಳು. ಗೆಲುವು ಸೋಲಿನ ಅಂಕಿ ಅಂಶಗಳು ಏನೇ ಇರಲಿ; ಈ ವಿಪ್ಲವದಲ್ಲಿ ನಲುಗಿ ಹೋದ ಶ್ರೀ ಸಾಮಾನ್ಯರ ಪಾಡು, ಅದರಲ್ಲೂ ಹೆಂಗಸರು ಮಕ್ಕಳ ಸಂಕಟ ಹೇಳತೀರದು. ಡಾಕಾವ್‌ನಲ್ಲಿ ಹಿಟ್ಲರನ ಯಾತನಾಶಿಬಿರವೊಂದನ್ನು ನೋಡಿ ಬಂದ ನನ್ನ ಅನುಭವವನ್ನು ಮತ್ತೆ ಯಾವಾಗಲಾದರೂ ಬರೆಯುತ್ತೇನೆ. ಈ ಯಾತನಾಶಿಬಿರದಲ್ಲಿ ಸಿಕ್ಕಿ ಸಾಯದೆ ಅದೃಷ್ಟ, ಜಾಣ್ಮೆ, ಇಚ್ಛಾಶಕ್ತಿಗಳಿಂದ ಬದುಕಿ ಉಳಿದ ಗಟ್ಟಿ ಜೀವ ಈಕೆ.

ನಾಜಿಗಳಿಂದ ಬದುಕಿ ಉಳಿದ ಹಲವು ಯಹೂದಿಗಳು, ಅನಂತರ ಬಹುದೊಡ್ಡದನ್ನು ಸಾಧಿಸಿದ್ದಾರೆ. ಒಂದೆರಡು ಉದಾಹರಣೆ ಗಳೆಂದರೆ ಆಲ್ಬರ್ಟ್ ಐನ್‌ಸ್ಟೀನ್ ಮತ್ತು ಎಲ್ಲಿ ವೀಸಲ್. ವೀಸಲ್‌ನ ಕೃತಿ ‘ನೈಟ್’ ನಾನು ಮರೆಯಲಾಗದ ಮತ್ತೊಂದು ಆತ್ಮಕಥನ. ವೀಸಲ್ ತನ್ನ ಇಡೀ ಪರಿವಾರವನ್ನು ಕಣ್ಣೆದುರೇ ಕಳೆದುಕೊಂಡು ಯಾತನಾ ಶಿಬಿರದಿಂದ ಬದುಕಿ ಉಳಿದು ಬಂದ ಅದೃಷ್ಟಶಾಲಿ. ಹಿಂಸೆ ಮನುಕುಲದ ಕೇಡು. ಶಾಂತಿ, ಮಾನವತೆಗಳಿಂದ ಮಾತ್ರ ಲೋಕದ ನೆಮ್ಮದಿ ಸಾಧ್ಯ ಎಂದು ಸಾರಿದ ಎಲ್ಲಿ ವೀಸಲ್ ನೋಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತ. ಹಿಂಸೆಯಿಂದ ಬಸವಳಿದ ಜೀವ, ಇಡೀ ಜಗತ್ತು ಹಿಂಸೆಯಿಂದ ಮುಕ್ತವಾಗಬೇಕೆಂದು ಬಯಸುತ್ತದೆ. ಕೂಲಿನಾಲಿ ಮಾಡಿಕೊಂಡು, ಪ್ರತಿಷ್ಠಿತ ಮ್ಯಾಂಚೆಸ್ಟರ್ ವಿಶ್ವವಿದ್ಯಾನಿಲಯದಲ್ಲಿ ಓದಿ ಅರ್ಥಶಾಸ್ತ್ರ, ಮಾನವಶಾಸ್ತ್ರದ ಪದವಿ ಪಡೆದ ಸ್ಕಾರ್ಲೆಟ್ ಅಂತಹುದೇ ಆದರ್ಶಗಳ ಹಾದಿಯಲ್ಲಿ ನಡೆಯುತ್ತಾರೆ.

‘ನಿನ್ನ ಸಂಶೋಧನೆಗೆ ಆಫ್ರಿಕಾ ಖಂಡವನ್ನು ಆರಿಸಿಕೋ’ ಎಂದು ಪ್ರೊಫೆಸರ್ ಮ್ಯಾಕ್ಸ್ ಗ್ಲುಕ್‌ಮನ್ ಸೂಚಿಸಿದರೂ ಸ್ಕಾರ್ಲೆಟ್ ಅವರನ್ನು ಸೆಳೆದಿದ್ದು ಭಾರತ. ಅದರಲ್ಲೂ ಮಂಡ್ಯದ ಬಳಿಯ ಹಳ್ಳಿ ಮಂಗಲ ಗ್ರಾಮ. ಕಾರಣ ಆಗ ಭಾರತವೆಂದರೆ ದಂತಕತೆಗಳ ನಾಡಾಗಿತ್ತು. ಸಂಶೋಧನೆಗೆ ವಿಷಯವನ್ನು ಸೂಚಿಸಿ, ಮಾರ್ಗದರ್ಶಕರೂ ಆದವರು ಖ್ಯಾತ ಅರ್ಥಶಾಸ್ತ್ರಜ್ಞ ಮತ್ತು ಕನ್ನಡಿಗ ಎಂ. ಎನ್. ಶ್ರೀನಿವಾಸ್. ಐವತ್ತರ ದಶಕದಲ್ಲಿ ಭಾರತಕ್ಕೆ ಬಂದ ಸ್ಕಾರ್ಲೆಟ್ ಎಪ್‌ಸ್ಟೀನ್ ಎಷ್ಟು ಗಾಢವಾಗಿ ಈ ಮಣ್ಣನ್ನು ಹಚ್ಚಿಕೊಂಡರೆಂದರೆ ಮಂಗಲ ಹಳ್ಳಿಯ ಭಾಗವಾದರು. ಹಳ್ಳಿಯಲ್ಲೇ ನೆಲೆಸಿದರು. ನಕ್ಕರು, ಅತ್ತರು, ಮದುವೆ ಮುಂಜಿಗಳಿಗೆ, ಸಾವು ನೋವುಗಳಿಗೆ ಸ್ಪಂದಿಸುತ್ತಾ ಮಂಗಲ ಕೆಂಪಮ್ಮ ಎಂದು ಜನಪ್ರಿಯವಾದರು.

ಈ ಅಜ್ಜಿಗೆ ಸಂಶೋಧನೆಯಷ್ಟೇ ಮುಖ್ಯವಾಗಿದ್ದುದು ಗುರುತಿಸಿಕೊಳ್ಳಲು ಒಂದು  ದೇಶ; ಒಂದು ಮಣ್ಣು; ಒಂದು ಸಮುದಾಯ. ಬೇರಿಲ್ಲದೆ, ದೇಶದೇಶಗಳಿಗೆ ಅಲೆಯುತ್ತಾ ಅಡ್ಡಾಡಿದ ಈ ತಾಯಿಗೆ ನೆಲೆ ಮತ್ತು ಅಪ್ಪುಗೆಯೊಂದು ಬೇಕಾಗಿತ್ತು. ತಮ್ಮ ಪಿಎಚ್‌.ಡಿ ಅಧ್ಯಯನ ಮುಗಿದ ಮೇಲೂ ಮಂಗಲಕ್ಕೆ ಮರುಭೇಟಿಗಳು ತಪ್ಪಲಿಲ್ಲ. ‘ನಾನು ಮರುಜನ್ಮ ಪಡೆಯುವುದಾದರೆ ಮಂಗಲದಲ್ಲಿಯೇ’ ಎಂದು ಭಾವುಕವಾಗಿ ನುಡಿಯುತ್ತಿದ್ದರು. ಮಂಗಲ ಮತ್ತು ಕಾಳೇನಹಳ್ಳಿಯ ಜನತೆ ಕೂಡಾ ಈ ಕೆಂಪಮ್ಮನನ್ನು ತುಂಬ ಪ್ರೀತಿಯಿಂದ ನೋಡಿಕೊಂಡರು. ಆಕೆಯ ಸಂಶೋಧನೆಯ ವಿಷಯ : Impact of irrigation on multi-–caste rural communities. ಆದರೂ ಅದರಾಚೆಗಿನ ಲಿಂಗತಾರತಮ್ಯ, ವರದಕ್ಷಿಣೆ, ವರ್ಗ ಮತ್ತು ಜಾತಿ ಸಂಘರ್ಷಗಳು, ಸ್ಥಳೀಯ ಹಬ್ಬಗಳು, ಯಾಜಮಾನ್ಯ ಸಂಸ್ಕೃತಿ ಇತ್ಯಾದಿ ವಸ್ತುಗಳನ್ನು ಕುರಿತು ಅಧ್ಯಯನ ಮಾಡಿ ಪುಸ್ತಕ ಪ್ರಕಟಿಸಿದ್ದರು.

ಮುವ್ವತ್ತೈದರ ಹರೆಯದ ಬಿಳಿತೊಗಲಿನ ಯುವತಿ ಹಳ್ಳಿಯ ಬೀದಿಗಳಲ್ಲಿ ದೇವಕನ್ನಿಕೆಯಂತೆ ಅಡ್ಡಾಡುತ್ತಿದ್ದರೆ ಹಿಂದೆ ಹುಡುಗರ ಹಿಂಡು. ಬ್ರಿಟಿಷರು ಭಾರತ ಬಿಟ್ಟು ತೊಲಗಿದ ಮೇಲೆ ಮತ್ತೆ ವಕ್ಕರಿಸಿರುವ ಇವಳು ಯಾರು ಎಂಬ ಅನುಮಾನ. ತನ್ನ ಹಿಂದೆ ಸಂಕೋಚದಿಂದ ಅಡ್ಡಾಡುತ್ತಿದ್ದ ಏಳು ವರ್ಷದ ಬಾಲಕನೊಬ್ಬನನ್ನು ಗುರುತಿಸಿ, ಆತನ ಶಕ್ತಿ ಸಾಧ್ಯತೆಗಳನ್ನು ಅರಿತು ಪ್ರೋತ್ಸಾಹಿಸಿದವರು ಸ್ಕಾರ್ಲೆಟ್. ಆಕೆ ಇಂಗ್ಲೆಂಡಿಗೆ ಮರಳಿ ಕೆಲವು ವರ್ಷಗಳ ನಂತರ ಮತ್ತೆ ಹಳ್ಳಿಗೆ ಬಂದಾಗ ಆ ಬಾಲಕ ಅಧ್ಯಾಪಕನಾಗಿ, ಅನಂತರ ಐಎಎಸ್ ಪಾಸು ಮಾಡಿ ಉನ್ನತ ಸ್ಥಾನದಲ್ಲಿದ್ದ. ಅವರೇ ಟಿ. ತಿಮ್ಮೇಗೌಡ. ಗೌಡರು ತಮ್ಮ ಆತ್ಮಕತೆಯಲ್ಲಿ ಕೆಂಪಮ್ಮನನ್ನು ಕೃತಜ್ಞತೆಯಿಂದ ಸ್ಮರಿಸುತ್ತಾರೆ.

ಆಕೆಯ ಅಧ್ಯಯನದ ಸಲಹೆ ಸೂಚನೆ ಆಧರಿಸಿ ಕೆಲವು ಯೋಜನೆಗಳನ್ನಾದರೂ ಅನುಷ್ಠಾನಕ್ಕೆ ತರಲು ಪ್ರಯತ್ನಿಸಿದ್ದೇನೆ ಎನ್ನುತ್ತಾರೆ. ಸ್ಕಾರ್ಲೆಟ್ ಎಪ್‌ಸ್ಟೀನ್ ಅವರನ್ನು ನಾವೆಲ್ಲ ‘ಅಮ್ಮ’ ಎಂದೇ ಕರೆಯುತ್ತಿದ್ದೆವು. ನಾವೆಲ್ಲರೂ ಮಾತೃವಿಯೋಗವನ್ನು ಅನುಭವಿಸುತ್ತಿದ್ದೇವೆ. ನಾವು ಮಾತ್ರವಲ್ಲ ಮಂಗಲ, ಕಾಳೇನಹಳ್ಳಿಯ ಜನ ಕೂಡಾ. ಜನಪರ ಕಾಳಜಿಯ ಮತ್ತೊಬ್ಬ ಉತ್ತಮ ಐಎಎಸ್ ಅಧಿಕಾರಿ ಚಿರಂಜೀವಿ ಸಿಂಗ್ ಅವರು. ಅವರು ಮಂಡ್ಯದ ದಕ್ಷ ಜಿಲ್ಲಾಧಿಕಾರಿಯಾಗಿದ್ದರು ಕೂಡಾ. ಸಿಂಗ್ ಸಂತನಂತೆ ಕಂಡರೂ ಕೆಲಸದ ವಿಷಯದಲ್ಲಿ ಬಹಳ ಶಿಸ್ತಿನ, ಕಟ್ಟುನಿಟ್ಟಿನ, ನಿಷ್ಠಾವಂತ ಅಧಿಕಾರಿ. ಚಿರಂಜೀವಿ ಸಿಂಗ್, ಟಿ. ತಿಮ್ಮೇಗೌಡ, ಸ್ಕಾರ್ಲೆಟ್ ಎಪ್‌ಸ್ಟೀನ್ ಈ ಮೂವರು ಕೂಡಿ ಅಧ್ಯಯನದ ಫಲಿತಗಳ ಕಾರ್ಯಾನುಷ್ಠಾನಕ್ಕಾಗಿ ಮಂತ್ರಿ ಮಹೋದಯರ ಕಚೇರಿಗಳಿಗೆ, ಇಲಾಖೆಗಳಿಗೆ ದಣಿವರಿಯದೆ ಸುತ್ತಾಡುತ್ತಿದ್ದುದು ನನ್ನ ನೆನಪಿನಲ್ಲಿದೆ.

ಅಲ್ಪಕಾಲೀನ ಭೇಟಿಗೆ ಬಂದರೂ ಕೆಂಪಮ್ಮ ಗ್ರಾಮಗಳ ಪ್ರಗತಿಗೆ ನೂರಾರು ಯೋಜನೆಗಳನ್ನು ಹಾಕಿಕೊಂಡು ಬರುತ್ತಿದ್ದರು. ಈ ದೇಶದ ಪ್ರಜೆ ಅಲ್ಲದೆಯೂ ಮಂತ್ರಿಗಳನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದರು. ಹಳ್ಳಿಗಾಡು ಸುತ್ತುತ್ತಿದ್ದರು. ಗ್ರಾಮಮುಖಿಗಳಾಗಿ ಕೆಲಸ ಮಾಡುವ ನಮ್ಮಂಥವರನ್ನು ಕಲೆ ಹಾಕಿ ಚರ್ಚಿಸುತ್ತಿದ್ದರು. ಸ್ವೀಡನ್‌ನ ರಿಚರ್ಡ್ ವಾಸರ್‌ಮನ್ ಮತ್ತು ನಾನು ಕೂಡಿ ಕೆಂಪಮ್ಮನವರ ಆಶಯಗಳನ್ನು ಇಟ್ಟುಕೊಂಡು Back to the village ಎಂಬ ಕಿರುಚಿತ್ರ ತಯಾರಿಸಿದ್ದೆವು. ಸ್ಕಾರ್ಲೆಟ್ ಎಪ್‌ಸ್ಟೀನ್‌ಗೆ OBE (Order of British Empire) ಎಂಬ ಉನ್ನತ ಪದವಿ ಲಭಿಸಿತ್ತು. ಜಗತ್ತಿನಾದ್ಯಂತ ಅವರಿಗೆ ಶಿಷ್ಯಸಮುದಾಯವಿತ್ತು. ಅದ್ಭುತವಾದ ಅರ್ಥಶಾಸ್ತ್ರಜ್ಞೆಯಾಗಿದ್ದರು. ಗ್ರಾಮಗಳಿಗೆ ಆರ್ಥಿಕ ಚೈತನ್ಯ ಬರದೆ ಭಾರತಕ್ಕೆ ಭವಿಷ್ಯವಿಲ್ಲ ಎಂದು ಖಚಿತವಾಗಿ ಹೇಳುತ್ತಿದ್ದರು.

ನನಗೆ ಸ್ಕಾರ್ಲೆಟ್ ಎಪ್‌ಸ್ಟೀನ್ ಏಕೆ ಮುಖ್ಯವಾಗುತ್ತಾರೆ ಎಂದರೆ, ನಾವು ಭಾರತೀಯರೇ ಗ್ರಾಮಗಳನ್ನು ನಿರ್ಲಕ್ಷಿಸಿದ್ದೇವೆ. ಹಳ್ಳಿಯಿಂದ ಬಂದು ದೊಡ್ಡವರಾದ ಅನೇಕರು ಹಳ್ಳಿಯತ್ತ ತಿರುಗಿಯೂ ನೋಡುವುದಿಲ್ಲ. ಎಲ್ಲಿಂದಲೋ ಬಂದ ಈ ಮಹಾತಾಯಿ ರಣಬಿಸಿಲಿನಲ್ಲಿ ಹಳ್ಳಿಹಳ್ಳಿಗಳನ್ನು ಅಲೆಯುತ್ತಾ, ರೈತಾಪಿ ಜನರನ್ನು ಅದರಲ್ಲೂ ಮಹಿಳೆಯರನ್ನು ಮಾತನಾಡಿಸುತ್ತಿದ್ದರು. ಕಷ್ಟಗಳಿಗೆ ನೆರವಾಗುತ್ತಿದ್ದರು. ನಾಗತಿಹಳ್ಳಿ ಸಂಸ್ಕೃತಿ ಹಬ್ಬಕ್ಕೆ ಹಲವು ಸಲ ಬಂದಿದ್ದರು. ಅವರ ಮತ್ತೊಂದು ಮುಖ್ಯವಾದ ಕೃತಿ: ‘ದಕ್ಷಿಣ ಭಾರತ ಅಂದು, ಇಂದು ಮತ್ತು ಮುಂದು’. ಇದರ ಕನ್ನಡ ಅನುವಾದವನ್ನು ಬೆಂಗಳೂರಿನ ಕೃಷಿ ವಿಶ್ವವಿದ್ಯಾನಿಲಯ ಪ್ರಕಟಿಸಿದೆ. ಬಿ.ವಿ. ವೆಂಕಟರಾವ್ ಇದನ್ನು ಅನುವಾದಿಸಿದ್ದಾರೆ.

ಲಂಡನ್ ಸಮೀಪದ ಸುಂದರ ಕರಾವಳಿ ನಗರ ಬ್ರೈಟನ್. ನಾನು ಲಂಡನ್‌ಗೆ ಹೋದಾಗಲೆಲ್ಲಾ ಕೊರೆವ ಚಳಿಯಲ್ಲಿ ಕೆಂಪಮ್ಮ ಯಾವುದೋ ಟ್ಯೂಬ್ ಸ್ಟೇಶನ್‌ನಲ್ಲಿ ನನಗಾಗಿ ಕಾಯುತ್ತಾ ಕುಳಿತಿರುತ್ತಿದ್ದರು. ನೊರನೊರ ಹಲಗೆಯ ಹಳೆಯ ಅಪಾರ್ಟ್‌ಮೆಂಟು. ಆ ದಿನಗಳಲ್ಲಿ ಕೆಂಪಮ್ಮ ನನ್ನನ್ನು ಯಹೂದಿಗಳ ದೇವಾಲಯ ಸಿನೆಗಾಗ್‌ಗೆ ಕರೆದೊಯ್ದಿದ್ದರು. ಸ್ಕಾರ್ಲೆಟ್‌ಗೆ ಇಬ್ಬರು ಹೆಣ್ಣು ಮಕ್ಕಳು. ಪತಿ ಬಿಲ್ ಹದಿನೈದು ವರ್ಷಗಳ ಹಿಂದೆಯೇ ತೀರಿಕೊಂಡಿದ್ದರು. ರೆಡ್ಡಿಂಗ್ ಪ್ರಾಂತ್ಯದ ವೈಟ್‌ನೈಟ್ ಕ್ಯಾಂಪಸ್ಸಿನಲ್ಲಿ ‘ಮಾತಾಡ್ ಮಾತಾಡು ಮಲ್ಲಿಗೆ ’ಪ್ರದರ್ಶನಗೊಂಡಾಗ ಅವರೇ ಮುಖ್ಯ ಅತಿಥಿ. ನಾಶವಾಗುತ್ತಿರುವ ಗ್ರಾಮೀಣ ಬದುಕಿನ ಬಗ್ಗೆ ಆಕೆ ಅಪಾರವಾಗಿ ಚಿಂತಿತರಾಗುತ್ತಿದ್ದರು. ಆ ರಾತ್ರಿ ಇಂಗ್ಲೆಂಡ್‌ನಲ್ಲಿ ಕುಳಿತೂ ಭಾರತದ ಹಳ್ಳಿಗಳ ಬಗ್ಗೆ ಚರ್ಚೆ. ಆಗ ಸ್ಕಾರ್ಲೆಟ್‌ಗೆ ಒಂದು ಪ್ರಶ್ನೆ ಕೇಳಿದ್ದೆ. ಹಿಟ್ಲರ್, ಯಹೂದಿಗಳನ್ನು ಅಷ್ಟೇಕೆ ದ್ವೇಷಿಸುತ್ತಿದ್ದ? ಅಮ್ಮ ಹಿಟ್ಲರನ ಆತ್ಮ ಚರಿತ್ರೆಯ ದಪ್ಪ ಪುಸ್ತಕ Mein kampt ಕೈಗಿತ್ತು ‘ಬಿಡುವಾದಾಗ ಓದು’ ಎಂದರು. ಸಾವಕಾಶವಾಗಿ ಓದಿದ್ದೆ. ಓದಿದ ಮೇಲೆ ಅನ್ನಿಸಿದ್ದು ಜನಾಂಗೀಯ ದ್ವೇಷಕ್ಕೆ ಯಾವುದೂ ಸಮರ್ಥನೆ ಅಲ್ಲ; ಅದು ವಿಕೃತಿ ಅಷ್ಟೆ. ಕ್ರೂರಿಗಳು ಕೊಲ್ಲಲು ನೆಪಗಳನ್ನು ಹುಡುಕಿಕೊಳ್ಳುತ್ತಾರೆ. ಯಹೂದಿ ಅಮ್ಮನ ನೆನಪಿಗೆ, ನಾಜಿಯ ಆತ್ಮಕಥನದ ಪುಸ್ತಕ. ಎಂಥ ವಿಪರ್ಯಾಸ!

ಹಳ್ಳಿಗಳ ಒಳಿತಿಗಾಗಿ ಶ್ರಮಿಸಿದ ಈ ಕೆಂಪಮ್ಮ ತೀರಿಕೊಂಡ 11ನೇ ದಿನದಂದು ಪುಣ್ಯತಿಥಿಯನ್ನು ಮಂಗಲ ಗ್ರಾಮದಲ್ಲಿ ಆಚರಿಸುತ್ತಿದ್ದಾರೆ. ಒಂದು ಕಾಲಕ್ಕೆ ಕೆಂಪಮ್ಮ ದತ್ತು ತೆಗೆದುಕೊಳ್ಳಲು ಬಯಸಿದ್ದ ಚನ್ನೇಗೌಡ ಕೇಶಮುಂಡನ ಮಾಡಿಸಿಕೊಳ್ಳುತ್ತಿದ್ದಾನೆ. ಎತ್ತಣ ಮಾಮರ? ಎತ್ತಣ ಕೋಗಿಲೆ? ಇದೆಲ್ಲಕ್ಕಿಂತ ಮುಖ್ಯ ಅನಿಸುತ್ತಿರುವುದು ತಿಮ್ಮೇಗೌಡರು ಗ್ರಾಮಸ್ಥರ ಜತೆಗೂಡಿ ಕೆಂಪಮ್ಮನ ಹೆಸರಲ್ಲಿ ಒಂದು ಗ್ರಂಥಾಲಯ ವನ್ನು ನಿರ್ಮಿಸಲು ಯೋಚಿಸಿರುವುದು. ಈ ಯೋಜನೆಯಲ್ಲಿ ನಾನು ಸಹಭಾಗಿ. ಅಮ್ಮಂದಿರಿಗೆ ಮಕ್ಕಳು ತೋರಬಹುದಾದ ಹಲವು ಬಗೆಯ ಗೌರವಗಳಲ್ಲಿ ಇದು ಘನವಾದುದೆಂದು ನನ್ನ ಗಾಢ ನಂಬಿಕೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT