ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಂಟೇಸ್ವಾಮಿಗಳ ಸಮಕಾಲೀನ ಮಹತ್ವ

Last Updated 31 ಜನವರಿ 2018, 19:30 IST
ಅಕ್ಷರ ಗಾತ್ರ

ಮಂಟೇಸ್ವಾಮಿ ಕಾವ್ಯದ ಒಂದು ಪ್ರಮುಖ ಭಾಗ ಪಾಂಚಾಳರನ್ನು ಕುರಿತದ್ದು. ಪಾಂಚಾಳರವನಾದ ಕೆಂಪಾಚಾರಿಯನ್ನು ತುಂಬ ಸಾಹಸಪಟ್ಟು ಒಲಿಸಿಕೊಳ್ಳುವ ಹಾಗೂ ತನ್ನ ಪಟ್ಟದ ಶಿಷ್ಯನನ್ನಾಗಿ ರೂಪಿಸುವ ಮಂಟೇಸ್ವಾಮಿಗಳು, ಮಿಕ್ಕ ಪಾಂಚಾಳರಿಗೆ ಶಾಪ ಕೊಡುತ್ತಾರೆ, ಗ್ರಾಮಾಂತರ ಪ್ರದೇಶಗಳಿಗೆ ಅವರು ಚದುರಿ ಹೋಗುವಂತೆ ಮಾಡುತ್ತಾರೆ.

ಪಾಂಚಾಳರಿಗೆ ಮಂಟೇಸ್ವಾಮಿಗಳು ಏಕೆ ಶಾಪವನ್ನಿತ್ತರು? ಪಾಂಚಾಳರೆಂದರೆ ಯಾರು? ಒಂದರ್ಥದಲ್ಲಿ, ಯಂತ್ರ ನಾಗರಿಕತೆಯ ಕೀಲುಗಳು ಹಾಗೂ ನಟ್ಟು ಬೋಲ್ಟುಗಳು ಆಗಿರುವ ನಾವೆಲ್ಲರೂ ಪಾಂಚಾಳರೇ ಸರಿ. ಮಂಟೇಸ್ವಾಮಿಯನ್ನು ಕೆರಳಿಸಿದ ಅಂದಿನ ಪಾಂಚಾಳರೆಂದರೆ ಲೋಹಗಾರಿಕೆಯ ತಂತ್ರಜ್ಞಾನವನ್ನು ತಮ್ಮೊಳಗೆ ಗುಟ್ಟಾಗಿ ಹಿಡಿದಿಟ್ಟುಕೊಂಡು, ಅತ್ತ ವಿಜಯನಗರದ ಅರಸರಿಗೆ ಇತ್ತ ಮೈಸೂರಿನ ಅರಸರಿಗೆ ಆಯುಧಗಳನ್ನು ತಯಾರಿಸಿ ಕೊಡುತ್ತ, ಅಪಾರವಾದ ಸಂಪತ್ತು ಮತ್ತು ಅಹಂಕಾರಗಳನ್ನು ಶೇಖರಣೆ ಮಾಡಿಟ್ಟುಕೊಂಡಿದ್ದ ಕಮ್ಮಾರರು. ಯುದ್ಧದ ಉದ್ದಿಮೆದಾರರಾಗಿದ್ದರು ಅವರು. ಆಯುಧ ತಯಾರಿಕೆಯ ಲಾಭದಾಯಕ ಉದ್ದಿಮೆಯಿಂದಾಗಿ ಪಾಂಚಾಳರು ತಮ್ಮದೇ ಆದ ಒಂದು ಪಾಳೆಯಪಟ್ಟನ್ನು ಕೂಡಾ ಕಟ್ಟಿಕೊಂಡಿದ್ದರು.

ಶಾಪ ನೀಡುವ ಮೂಲಕ ಮಂಟೇಸ್ವಾಮಿಗಳು ಆಯುಧ ತಯಾರಿಕೆಯ ಜಾಲವನ್ನು ಛಿದ್ರಗೊಳಿಸುತ್ತಾರೆ. ಗ್ರಾಮಾಂತರ ಪ್ರದೇಶಗಳಿಗೆ ಪಾಂಚಾಳರನ್ನು ಚದುರಿಸಿ, ನೇಗಿಲುಕುಳ ಇತ್ಯಾದಿ ಉಪಯುಕ್ತವಾದ ಹಾಗೂ ಜೀವ ರಕ್ಷಕವಾದ ವಸ್ತುಗಳನ್ನು ತಯಾರು ಮಾಡುವಂತಹ, ಗ್ರಾಮೋದ್ಯೋಗವನ್ನು ಅವರು ಸ್ವೀಕರಿಸುವಂತಹ, ಸರಳ ಬದುಕನ್ನು ಸ್ವೀಕರಿಸುವಂತಹ ನೈತಿಕ ಬಲವಂತವನ್ನು ಪಾಂಚಾಳರ ಮೇಲೆ ಹೇರುತ್ತಾರೆ. ಮಂಟೇಸ್ವಾಮಿಗಳ ಈ ಕೆಲಸವು ಏಕಕಾಲಕ್ಕೆ ಶಾಪವೂ ಹೌದು ವರವೂ ಹೌದು.

ಆಯುಧ ತಯಾರಿಕೆಗೆ ಇತ್ತ ಶಾಪ ಅದಾದರೆ ಗ್ರಾಮೋದ್ಯೋಗಕ್ಕಿತ್ತ ವರ ಅದಾಗಿದೆ. ಅಹಂಕಾರದ ಬದುಕಿಗಿತ್ತ ಶಾಪ ಅದಾದರೆ ಸರಳ ಬದುಕಿಗಿತ್ತ ವರ ಅದಾಗಿದೆ. ಅಸಹಿಷ್ಣುತೆಗಿತ್ತ ಶಾಪ ಅದಾದರೆ ಶಾಂತ ಬದುಕಿಗಿತ್ತ ವರ ಅದಾಗಿದೆ. ಇಲ್ಲಿ ನಾವು ಗಮನಿಸಬೇಕಾದ ಸಂಗತಿಯೆಂದರೆ ಶಾಪಮುಕ್ತರಾದ ಪಾಂಚಾಳರು ಇಂದು ಮಂಟೇಸ್ವಾಮಿಗಳ ಪರಮ ಭಕ್ತರು. ಗುರುವು ನೀಡಿದ ಶಿಕ್ಷೆಯನ್ನು ಹಸಾದವೆಂದು ಸ್ವೀಕರಿಸಿ ಬಾಳುವೆ ಮಾಡುತ್ತಿರುವ ಜನಾಂಗ ಅದು.

ಅಂದಿನ ಪಾಂಚಾಳರಂತೆ ಇಂದಿನ ನಾವೆಲ್ಲರೂ ಯುದ್ಧದುದ್ದಿಮೆದಾರರು, ಮಂಟೇಸ್ವಾಮಿಗಳ ಶಾಪಕ್ಕೆ ಅರ್ಹರಾದವರು. ಇಂದಿನ ಯುದ್ಧದುದ್ದಿಮೆ ಯುದ್ಧದುದ್ದಿಮೆಯಂತೆ ಕಾಣುತ್ತಿಲ್ಲ. ರಕ್ತವು ನಮ್ಮಗಳ ಕೈಗಳಿಗೆ ಅಂಟುತ್ತಿಲ್ಲ, ನಾವು ಅಧಿಕೃತವಾಗಿ ಸೈನಿಕರೇ ಅಲ್ಲ. ಆದರೂ ನಾವು, ಎಲ್ಲ ಪ್ರಜೆಗಳೂ ಇಂದು ಯುದ್ಧದುದ್ದಿಮೆದಾರರೇ ಹೌದು.

ನಾವೆಲ್ಲರೂ ಬೆಳ್ಳಗಿನ ಬಟ್ಟೆ ತೊಡುತ್ತೇವೆ, ದೇವಸ್ಥಾನಗಳಿಗೆ ಭೇಟಿ ಕೊಡುತ್ತೇವೆ, ದೇವರ ಭಕ್ತರೇ ಆಗಿದ್ದೇವೆ. ಯುದ್ಧಭೂಮಿಯಿಂದ ತುಂಬ ತುಂಬ ದೂರ ಬದುಕುತ್ತೇವೆ. ಆದರೆ ಬಟನ್ನು ಹೊತ್ತಿ ಬಾಂಬು ಹಾರಿಸುತ್ತೇವೆ. ಬಟನ್ನು ಒತ್ತಿ ದುಡ್ಡು ಎಣಿಸುತ್ತೇವೆ. ನಾವು ಒತ್ತುತ್ತಿರುವ ಬಟನ್ನು ಯುದ್ಧ ಪ್ರೇರಕವಾದದ್ದೆಂದು ನಮಗರಿವಿಲ್ಲ ಅಷ್ಟೆ.

ಉದಾಹರಣೆಗೆ ಇಂಟರ್‌ನೆಟ್ ಎಂಬ ಕಂಪ್ಯೂಟರಿನ ಬೃಹತ್ ಜಾಲವನ್ನೇ ತೆಗೆದುಕೊಳ್ಳಿ. ಇಂಟರ್‌ನೆಟ್ ಅಸ್ತಿತ್ವಕ್ಕೆ ಬಂದದ್ದೇ ಯುದ್ಧದುದ್ದಿಮೆಯಿಂದಾಗಿ. ಅಥವಾ ಅಣು ವಿಕಿರಣಗಳ ಶಾಸ್ತ್ರವನ್ನು ತೆಗೆದುಕೊಳ್ಳಿ. ಈ ಶಾಸ್ತ್ರವು ಬೃಹದಾಕಾರವಾಗಿ ಬೆಳೆದದ್ದೇ ಅಣು ಬಾಂಬ್ ತಯಾರಿಕೆಯ ಸಲುವಾಗಿ. ಅಥವಾ ಕ್ರಿಮಿನಾಶಕಗಳು ಜಾರಿಗೆ ಬಂದದ್ದೇ, ಎರಡನೆಯ ಮಹಾಯುದ್ಧದಲ್ಲಿ ಶತ್ರುಗಳನ್ನು ಕೊಲ್ಲಲೆಂದು ಅಭಿವೃದ್ಧಿ ಹೊಂದಿ, ಗೋಡೌನುಗಳಲ್ಲಿ ಉಳಿದು ಹೋದ ವಿಷ ಪದಾರ್ಥಗಳ ಮರು ಬಳಕೆಯ ಸಲುವಾಗಿ. ಹೆಚ್ಚಿನ ಸಂವಹನ ಯಂತ್ರಗಳು, ಹೆಚ್ಚಿನ ಸೆನ್ಸರುಗಳು, ರೋಬೋಟುಗಳು ಇತ್ಯಾದಿ ಎಲ್ಲವೂ ಮೊದಲು ಅಭಿವೃದ್ಧಿ ಹೊಂದಿದ್ದು ಬೇಹುಗಾರಿಕೆಯೆಂಬ ಯುದ್ಧ ತಂತ್ರದ ಸಲುವಾಗಿ. ಯುದ್ಧ ಹಾಗೂ ಮಾರುಕಟ್ಟೆ ಇಂದಿನ ಯುಗದ ಎರಡು ಕಣ್ಣುಗಳು, ಕುರುಡು ಕಣ್ಣುಗಳು. ಆದರೆ ಹಾಗೆಂದು ಒಪ್ಪಿಕೊಳ್ಳಲಿಕ್ಕೆ ನಾವಿನ್ನೂ ಸಿದ್ಧರಿಲ್ಲ ಅಷ್ಟೆ.

ಮಾತ್ರವಲ್ಲ, ಯುದ್ಧಗಳಿಗೆ ಮತ್ತೊಂದು ವಿಚಿತ್ರ ಗುಣವಿದೆ. ಪ್ರತಿಯೊಂದು ಯುದ್ಧವನ್ನೂ ಒಂದಲ್ಲ ಒಂದು ಧರ್ಮಗುರು ಬೆಂಬಲಿಸಿರುತ್ತಾನೆ, ಪೋಷಿಸಿಕೊಂಡು ಬಂದಿರುತ್ತಾನೆ. ಪ್ರತಿಯೊಂದು ಸಾಮಾಜಿಕ ಜಗಳದ ಹಿಂದೆ ಧಾರ್ಮಿಕ ಸಂಸ್ಥೆಯೊಂದರ ಕೈವಾಡ ಇರುತ್ತದೆ. ಬಲಪಂಥೀಯ ರಾಜಕೀಯ ನಡೆದಿರುವುದೇ ಧರ್ಮಯುದ್ಧ ನಡೆಸುವ ಸಲುವಾಗಿ. ತನ್ನ ಹಿಂಬಾಲಕ ಭಕ್ತರನ್ನು ಸಲಹುವ ಭರದಲ್ಲಿ ಸಾಂಸ್ಥಿಕ ಧರ್ಮಗಳು ಯುದ್ಧಪಿಪಾಸುಗಳಾಗಿಬಿಡುತ್ತವೆ.

ಅದಕ್ಕೇ ನಾನಂದದ್ದು ನಾವೆಲ್ಲರೂ ಸೈನಿಕರೇ ಹೌದು ಎಂದು. ಪರಸ್ಪರ ಪೈಪೋಟಿ ನಮ್ಮ ರೀತಿ. ಹೂಂಕರಿಸುವುದು, ಒಡೆದು ಆಳುವುದು ನಮ್ಮ ರೀತಿ. ಮಾರುಕಟ್ಟೆಯೇ ನಮ್ಮ ರೀತಿ. ಮಾರುಕಟ್ಟೆಯೇ ಯುದ್ಧದ ನೀತಿ. ಯುದ್ಧವೆಂಬುದು ನಮ್ಮನ್ನು ಅದೆಷ್ಟು ಆಕರ್ಷಿಸಿಬಿಟ್ಟಿದೆ ಎಂಬುದಕ್ಕೆ ಒಂದು ಉದಾಹರಣೆ ಕೊಡಬಯಸುತ್ತೇನೆ.

ಅದೊಂದು ಮಠ. ಅಹಿಂಸಾವಾದಿ ಬಸವಣ್ಣನ ತತ್ವಗಳನ್ನು ಪ್ರತಿಪಾದಿಸುತ್ತಿರುವ ಒಂದು ಪ್ರಖ್ಯಾತ ಮಠ. ಮಿಕ್ಕಂತೆ ತುಂಬ ಒಳ್ಳೆಯ ಕೆಲಸ ಮಾಡುತ್ತಿರುವ ಮಠ. ಆ ಮಠದ ಯುವ ಸ್ವಾಮಿಗಳು ಮಠದ ಬಾಗಿಲಲ್ಲೊಂದು ದೇಶಭಕ್ತಿ ಮ್ಯೂಸಿಯಂ ರಚಿಸಿದ್ದಾರೆ. ಕೋಟ್ಯಂತರ ರೂಪಾಯಿಗಳ ಹಣ ಖರ್ಚು ಮಾಡಿ ರಚಿಸಿದ್ದಾರೆ. ಸುತ್ತ ಇರುವ ಗ್ರಾಮೀಣ ಭಕ್ತರು ನೋಡಲಿ ಕಲಿಯಲಿ ಎಂಬ ಆಶಯದಿಂದ ಮ್ಯೂಸಿಯಂ ರಚಿಸಿದ್ದಾರೆ. ಯುದ್ಧಭೂಮಿಯ ಹಸಿ ಹಸಿ ಚಿತ್ರಣವದು ಆ ಮ್ಯೂಸಿಯಂ. ಅಲ್ಲಿರುವ ಶಿಲ್ಪಗಳಲ್ಲಿ ಬಂದೂಕು ಹಿಡಿದ ಸೈನಿಕರಿದ್ದಾರೆ. ಅವರು ಗುಂಡು ಹಾರಿಸುತ್ತಿದ್ದಾರೆ. ಅಲ್ಲಲ್ಲಿ ಬೆಂಕಿ ಹತ್ತಿ ಉರಿಯುತ್ತಿದೆ. ಶತ್ರು ಸೈನಿಕರು ಚೀತ್ಕಾರ ಮಾಡುತ್ತಾ ಸತ್ತು ಬೀಳುತ್ತಿದ್ದಾರೆ.

ಅಲ್ಲಿ ಚಿತ್ರಿತವಾಗಿರುವ ರಾಷ್ಟ್ರ ನಾಯಕರೆಲ್ಲರೂ, ಇಲ್ಲವೇ ಆತಂಕವಾದಿಗಳಾಗಿದ್ದವರು ಇಲ್ಲವೇ ರಾಷ್ಟ್ರೀಯ ಚಳವಳಿಗೆ ಸೈನಿಕ ಪರಿಹಾರವನ್ನು ಸೂಚಿಸಿದ್ದವರು. ಅಲ್ಲಿ ಬಸವಣ್ಣನ ಚಿತ್ರವಿಲ್ಲ, ಬುದ್ಧನ ಚಿತ್ರವಿಲ್ಲ. ಅವುಗಳೆಲ್ಲವೂ ಮಠದ ಗರ್ಭಗುಡಿಯಲ್ಲಿ ಬಂಧಿತವಾಗಿ ಕುಳಿತಿವೆ. ಹೊರಗೆ, ಜನಜಂಗುಳಿ ನೆರೆಯುವ ಜಾಗದಲ್ಲಿ ದೇಶಭಕ್ತಿಯ ಸಂಕೇತವಾಗಿ ಹಿಂಸೆ ತಾಂಡವವಾಡುತ್ತಿದೆ. ಸ್ವಾಮೀಜಿಯವರು ತುಂಬ ಹೆಮ್ಮೆಯಿಂದ ತಾವು ನಿರ್ಮಿಸಿದ ಮ್ಯೂಸಿಯಮ್ಮನ್ನು ತೋರಿಸಿದರು ನನಗೆ.

ಬಸವಣ್ಣ ಕಲ್ಯಾಣದ ಮಹಾಮಂತ್ರಿ. ತನ್ನ ರಾಜ್ಯದ ಬಗ್ಗೆ ಗೌರವವಿತ್ತು ಬಸವಣ್ಣನಿಗೆ. ಅಥವಾ ಬುದ್ಧನಿಗೆ ತಾನಿದ್ದ ಮಗಧ ರಾಜ್ಯದ ಬಗ್ಗೆ ಗೌರವವಿತ್ತು. ಮಗಧದ ರಾಜ ಬಿಂಬ
ಸಾರನ ಜೊತೆ ಸ್ನೇಹವಿತ್ತು.  ಆದರೆ ಬುದ್ಧ, ಬಸವರು ಸೈನಿಕ ಸಂಘರ್ಷಗಳನ್ನು ನಿವಾರಿಸಿದರೇ ಹೊರತು ಪ್ರಚೋದಿಸಲಿಲ್ಲ. ಈಗ, ಮಠಾದೀಶರು– ಧರ್ಮಾಧಿಕಾರಿಗಳು ಸೇರಿದಂತೆ ನಾವೆಲ್ಲರೂ ಸೈನಿಕ ಸಂಘರ್ಷಗಳನ್ನು ಬಯಸತೊಡಗಿದ್ದೇವೆ. ಶತ್ರುತ್ವ, ಒಂದೊಮ್ಮೆ ಇರದೆ ಹೋದರೂ ನಾವೇ ಶತ್ರುತ್ವವನ್ನು ಕಲ್ಪಿಸಿಕೊಳ್ಳತೊಡಗಿದ್ದೇವೆ.

ನಮಗಿಂದು ಎಲ್ಲವೂ ಆಸ್ತಿಯಾಗಿದೆ. ಕಾರ್ಖಾನೆಗಳು, ಬ್ಯಾಂಕುಗಳು... ಅಷ್ಟೇ ಏಕೆ ಪಕ್ಷಗಳು, ಜಾತಿಗಳು, ಮಠಗಳು ಮಾನ್ಯಗಳು ಕೂಡ ಆಸ್ತಿಗಳಾಗಿವೆ. ಆಸ್ತಿಯನ್ನು ಸಲಹಬೇಕೆಂದರೆ, ಆಸ್ತಿಯನ್ನು ರಕ್ಷಿಸಬೇಕೆಂದರೆ ಸೈನಿಕ ಶಕ್ತಿ ಬೇಕೇ ಬೇಕು. ಹಿಂಸೆ ಬೇಕೇ ಬೇಕು. ಪ್ರತಿಯೊಬ್ಬ ರಾಜಕಾರಣಿ, ಪ್ರತಿಯೊಬ್ಬ ಮಠಾಧಿಪತಿ, ಅಷ್ಟೇ ಏಕೆ ಪ್ರತಿಯೊಬ್ಬ ತಂದೆಯೂ ಆಸ್ತಿವಂತನಂತೆ ಯೋಚಿಸಿತೊಡಗಿದ್ದಾನೆ. ಮಿಕ್ಕ ಎಲ್ಲ ಮಾನವರಲ್ಲೂ ತನ್ನಾಸ್ತಿ ಲಪಟಾಯಿಸಲಿರುವ ಶತ್ರುವೇ ಕಾಣತೊಡಗಿದ್ದಾನೆ ಈ ಎಲ್ಲರಿಗೆ.

ಹಿಂದೂಗಳ ಅಧಿಕೃತ ಧರ್ಮಗ್ರಂಥ ಭಗವದ್ಗೀತೆಯ ಉದಾಹರಣೆಯನ್ನೇ ತೆಗೆದುಕೊಳ್ಳಿ. ಭೀಕರ ಯುದ್ಧವೊಂದರ ನಡುವೆ ಸಿಕ್ಕಿಹಾಕಿಕೊಂಡಿರುವ ಆಧ್ಯಾತ್ಮಿಕ ರಚನೆಯಿದು. ಮಹಾನ್‌ ರಚನೆ. ಅದರಲ್ಲಿ ಅನುಮಾನವೇ ಇಲ್ಲ. ಆದರೆ ಹಿಂಸಾತ್ಮಕತೆಯನ್ನು ಪ್ರಚೋದಿಸುವ ಮಹಾನ್‌ ರಚನೆ. ಗಾಂಧೀಜಿಗೆ ಭಗವದ್ಗೀತೆಯ ಈ ಊನದ ಅರಿವಿತ್ತು. ಹಾಗೆಂದೇ ಅವರು ಕುರುಕ್ಷೇತ್ರ ಯುದ್ಧವನ್ನು ನಿಜವಾದಯುದ್ಧವೇ ಅಲ್ಲ ಎಂದು ಸಾಧಿಸಲು ಹೆಣಗಿದರು. ಭಗವದ್ಗೀತೆಯಲ್ಲಿರುವ ಎಲ್ಲ ಮಹಾನ್‌ ಸತ್ಯಗಳೂ ಉಪನಿಷತ್ತಿನಲ್ಲಿ ಇವೆ. ಆದರದು, ಬೈಬಲ್ಲಿನ ಮಾದರಿಯಲ್ಲಿ ಒಂದು ಗ್ರಂಥವಾಗಲಾರದು ಎಂಬ ಕಾರಣಕ್ಕೆ ಭಗವದ್ಗೀತೆ ಅಧಿಕೃತ ಹಿಂದೂ ಬೈಬಲ್‌ ಆಗಿ ಕುಳಿತಿದೆ.

ಭಗವದ್ಗೀತೆಯನ್ನು ಹಿಂದೂಗಳ ಅಧಿಕೃತ ಬೈಬಲ್‌ ಆಗಿಸಿದ್ದು ಬ್ರಿಟಿಷರು. ಅವರಿಗೆ, ಅವರ ಸಾಮ್ರಾಜ್ಯ ಗಟ್ಟಿಗೊಳಿಸಲಿಕ್ಕಾಗಿ ಒಂದು ಹಿಂದೂ ಬೈಬಲ್ಲಿನ ಅಗತ್ಯವಿತ್ತು. ತಮ್ಮ ದೇಶದ ಮಾದರಿಯ ನ್ಯಾಯಾಂಗ ವ್ಯವಸ್ಥೆಯನ್ನು ಗುಲಾಮ ರಾಜ್ಯದಲ್ಲಿ ಸ್ಥಾಪಿಸುವ ಯತ್ನ ನಡೆಸಿದ್ದರು ಅವರು. ಬ್ರಿಟಿಷ್‌ ನ್ಯಾಯಾಂಗ ವ್ಯವಸ್ಥೆಯಲ್ಲಿ ಅಪರಾಧಿಯೊಬ್ಬನನ್ನು
ವಿಚಾರಣೆಗೆ ಒಳಪಡಿಸುವ ಮುನ್ನ ಆತನ ಕೈಗಳಲ್ಲಿ ಬೈಬಲ್ಲಿನ ಪ್ರತಿಯೊಂದನ್ನಿಟ್ಟು ಆಣೆ ಪ್ರಮಾಣ ಮಾಡಿಸುವ ಸಂಪ್ರದಾಯವಿದೆ. ಭಾರತದಲ್ಲಿ ಇದೇ ವ್ಯವಸ್ಥೆಯನ್ನು ಸ್ಥಾಪಿಸುವ ಜವಾಬ್ದಾರಿ ಹೊತ್ತಿದ್ದ ಬ್ರಿಟಿಷ್‌ ಅಧಿಕಾರಿ– ಆತನ ಹೆಸರನ್ನು ಮರೆತಿದ್ದೇನೆ ನಾನು– ತನ್ನ ಅಧೀನ ಬ್ರಾಹ್ಮಣ ಅಧಿಕಾರಿಯೊಬ್ಬನನ್ನು ಕರೆದು ‘ನಿಮ್ಮ ಧರ್ಮಗ್ರಂಥವಾವುದು’ ಎಂದು ಕೇಳುತ್ತಾನೆ. ಇದು ನಡೆದದ್ದು ಕಲಕತ್ತೆಯಲ್ಲಿ.

ಬ್ರಾಹ್ಮಣ ಕಕ್ಕಾಬಿಕ್ಕಿಯಾಗುತ್ತಾನೆ. ಸಾವರಿಸಿಕೊಂಡು, ನಮ್ಮಲ್ಲಿ ಆಖೈರಾದ ಒಂದು ಧರ್ಮಗ್ರಂಥ ಎಂಬುದಿಲ್ಲ. ಹಲವು ಗ್ರಂಥಗಳಿವೆ. ಪುರಾಣಗಳು, ಪುಣ್ಯಕತೆಗಳು, ವೇದಗಳು, ಆಗಮಗಳು, ಮೌಖಿಕ ಕಥಾನಕಗಳು ಇವೆ. ನೂರಾರು ಸಂತ ಪರಂಪರೆಗಳು ಜೀವಂತವಿವೆ ನಮ್ಮಲ್ಲಿ ಎಂದು ಬ್ರಾಹ್ಮಣ ಸತ್ಯವನ್ನೇ ನುಡಿಯುತ್ತಾನೆ. ಬ್ರಾಹ್ಮಣನ ಮಾತಿನಿಂದ ಕಿರಿಕಿರಿಗೊಂಡ ಬ್ರಿಟಿಷ್‌ ಅಧಿಕಾರಿ, ಇದೆಂತಹ ಅಸಭ್ಯ ಜನರಿವರು ಎಂದು ಭಾವಿಸಿ, ಹುಡುಕು ಸಿಕ್ಕುತ್ತದೆ ಎಂದು ಗಟ್ಟಿಗೊಳಿಸಿ ಹೇಳುತ್ತಾನೆ. ಬ್ರಿಟಿಷ್‌ ಅಧಿಕಾರಿಯ ಬಲವಂತದಿಂದಾಗಿ ಬ್ರಾಹ್ಮಣ ಹುಡುಕಿಕೊಟ್ಟ ಗ್ರಂಥ ಭಗವದ್ಗೀತೆ. ಭಗವದ್ಗೀತೆಯು ಹಿಂದೂಗಳ ಬೈಬಲ್‌ ಆದ ಕತೆಯಿದು.

ಮಂಟೇಸ್ವಾಮಿ ಕಾವ್ಯ ಭಿನ್ನ ರೀತಿಯ ಆಧ್ಯಾತ್ಮಿಕತೆಯನ್ನು ಬೋಧಿಸುತ್ತದೆ, ಹೆಚ್ಚು ಸೂಕ್ತವೂ ಹೆಚ್ಚು ಸಮಕಾಲೀನವೂ ಆದ ಆಧ್ಯಾತ್ಮಿಕತೆಯನ್ನು ಬೋಧಿಸುತ್ತದೆ ಅದು.
ಮಂಟೇಸ್ವಾಮಿಗಳ ಆಧ್ಯಾತ್ಮಿಕತೆಯು ಯುದ್ಧವಿರೋಧಿಯಾಗಿದೆ. ಶಾಂತಿ, ಸಹಬಾಳ್ವೆ ಹಾಗೂ ಶ್ರಮಸಹಿತವಾದ ಸರಳ ಬದುಕಿನ ಪ್ರತಿಪಾದಕವಾಗಿದೆ. ಯುದ್ಧವನ್ನು ಭಗವದ್ಗೀತೆಯು ಅನಿವಾರ್ಯವಾಗಿಸಿದರೆ ಮಂಟೇಸ್ವಾಮಿಗಳು ಯುದ್ಧ ನಿವಾರಣೆಯನ್ನು ಆಧ್ಯಾತ್ಮಿಕ ಅನಿವಾರ್ಯವಾಗಿಸುತ್ತಾರೆ.

ಮಂಟೇಸ್ವಾಮಿ ಕಾವ್ಯ ಸರಳ ಕಾವ್ಯ, ಕನ್ನಡ ಕಾವ್ಯ. ಇದಕ್ಕೆ ಸಂಕೀರ್ಣತೆಯಿಲ್ಲ ಎಂಬುದು ನಿಜ. ಇದು ಕೊಂಚ ಒರಟಾಗಿ ಗೋಚರಿಸುವ ಕಾವ್ಯ ಎಂಬುದೂ ನಿಜ. ಆದರೆ ಇದು ಅನುಮಾನಾತೀತವಾಗಿ ಸಮಕಾಲೀನ ಕಾಯಿಲೆಗೆ ಮದ್ದು ಎಂಬುದೂ ನಿಜ. ಎಲ್ಲಕ್ಕಿಂತ ಮಿಗಿಲಾಗಿ, ಮಂಟೇಸ್ವಾಮಿಗಳದ್ದು ಪಾಲಿಸಬಹುದಾದ ಆಧ್ಯಾತ್ಮಿಕತೆ, ವಾಸ್ತವತೆಯೆಂಬ ಗಟ್ಟಿ ನೆಲದ ಮೇಲೆ ಕಾಲೂರಿ ಆಕಾಶಕ್ಕೆ ಕೈಚಾಚುತ್ತಿರುವ ಆಧ್ಯಾತ್ಮಿಕತೆಯಿದು. ನೂರಾರು ವರ್ಷಗಳಿಂದ ಶ್ರಮಜೀವಿ ಸಮುದಾಯಗಳು ಈ ಆಧ್ಯಾತ್ಮಿಕತೆಯನ್ನು ಪಾಲಿಸಿಕೊಂಡು ಬಂದಿವೆ.

ಮಂಟೇಸ್ವಾಮಿಗಳ ಆಧ್ಯಾತ್ಮಿಕತೆಗೂ ಒಂದು ವ್ಯವಸ್ಥೆಯಿದೆ. ಆ ವ್ಯವಸ್ಥೆಯು ಇತ್ತ ಸರಳವಾದದ್ದೂ ಹೌದು. ಅತ್ತ ವ್ಯವಸ್ಥಿತವಾದದ್ದೂ ಹೌದು, ಕಡಿಮೆ ಖರ್ಚಿನದ್ದೂ ಹೌದು. ನೀಲಗಾರ ವ್ಯವಸ್ಥೆ ಮೂಲತಃ ಭಿಕ್ಷುಕ ವ್ಯವಸ್ಥೆ. ಹಾಗೆ ನೋಡಿದರೆ ಎಲ್ಲ ಆಧ್ಯಾತ್ಮಿಕ ವ್ಯವಸ್ಥೆಗಳೂ ಮೂಲದಲ್ಲಿ ಭಿಕ್ಷುಕ ವ್ಯವಸ್ಥೆಗಳೇ ಸರಿ. ಆದರೆ ಭಕ್ತರು ಶ್ರೀಮಂತರಾದಂತೆ, ರಾಜರು ಹಾಗೂ ವರ್ತಕರ ಸ್ನೇಹ ಸಾಧಿತವಾದಂತೆ ಭಿಕ್ಷುಕರು ಭಿಕ್ಷುಗಳಾಗುತ್ತಾರೆ. ಭಿಕ್ಷೆಯೇ ದೇಣಿಗೆಯಾಗುತ್ತದೆ. ವರ್ಷದ ನಾಲ್ಕು ತಿಂಗಳ ಕಾಲ ಮಳೆಗಾಲದಲ್ಲಿ ನೆಲೆಗೊಳ್ಳಬೇಕಾದ ಜಾಗಗಳೇ ಬಂಗಾರದ ಮಠಗಳಾಗಿ ಪರಿವರ್ತಿತವಾಗುತ್ತವೆ.

ಶ್ರೀಮಂತರ ಆಧ್ಯಾತ್ಮಿಕತೆಯು ಶ್ರೀಮಂತಿಕೆಯಿಂದಾಗಿಯೇ ಅಸಹಿಷ್ಣುವಾಗುತ್ತದೆ. ಅಧ್ಯಾತ್ಮ ಬಡವಾಗಬೇಕು. ಬಡವಾಗಿಯೇ ಉಳಿಯಬೇಕು. ಅದು ಸಂಕೀರ್ಣ ವ್ಯವಸ್ಥೆ
ಯಾಗಬಾರದು. ಸರಳ ವ್ಯವಸ್ಥೆಯಾಗಿ ಉಳಿಯಬೇಕು. ಕ್ಯಾಪಿಟೇಷನ್‌ ಶುಲ್ಕ ವಸೂಲಿ ಮಾಡಿ ಮೆಡಿಕಲ್‌ ಕಾಲೇಜು ಸ್ಥಾಪಿಸುವುದಾಗಲೀ, ನಮ್ಮವರಿಗೆ ಮಂತ್ರಿ ಪದವಿ ಕೊಡಿರಿ ಎಂದು ಹೂಂಕರಿಸುವುದಾಗಲೀ ಆಧ್ಯಾತ್ಮಿಕತೆಯ ಕೆಲಸವಲ್ಲ.

ಒಟ್ಟು ಕತೆಯ ನೀತಿಯೆಂದರೆ, ಇಂದಿನ ಜಗಳಾಟದ ಪರಿಸ್ಥಿತಿಯಲ್ಲಿ, ಯಂತ್ರನಾಗರಿಕತೆಯಲ್ಲಿ ಶ್ರಮಜೀವಿಗಳ ಮೇಲೆ ‘ಬ್ರಾಹ್ಮಣಿಕೆ’ ಹೇರುವ ಬದಲು, ಉಳ್ಳವರು ಹಾಗೂ ಅಧಿಕಾರಸ್ಥರ ಮೇಲೆ ಶ್ರಮಜೀವಿ ಆಧ್ಯಾತ್ಮಿಕತೆಯನ್ನು ಹೇರುವುದು ಒಳಿತಲ್ಲವೇ? ಮಂಟೇಸ್ವಾಮಿಗಳ ಆಧ್ಯಾತ್ಮಿಕತೆ ಸಮಕಾಲೀನ ಆಧ್ಯಾತ್ಮಿಕತೆ ಎಂದು ನಾನಂದದ್ದು ಈ ಅರ್ಥದಲ್ಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT