ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಗ ಬೇರೆ ಮನೆ ಮಾಡಿದ

Last Updated 26 ಮೇ 2012, 19:30 IST
ಅಕ್ಷರ ಗಾತ್ರ

ಹೀಗೆ ಆಗಬಹುದು ಎಂದು ಅನಿಸತೊಡಗಿತ್ತು. ಈಚೀಚೆಗೆ ಆತ ಸಿಟ್ಟು ಮಾಡಿಕೊಳ್ಳತೊಡಗಿದ್ದ. ಹೊರಗಡೆ ಮನೆ ನೋಡುತ್ತಿದ್ದಾನೆ ಎಂದೂ ಗೊತ್ತಾಗಿತ್ತು. ಇಷ್ಟು ಬೇಗ ಹೊಸ ಮನೆಯ `ಗೃಹಪ್ರವೇಶ~ ಇಟ್ಟುಕೊಳ್ಳುತ್ತಾನೆ ಎಂದು ಅನಿಸಿರಲಿಲ್ಲ.

ಆತನಿಗೂ ಏನೇನೋ ಬೇಸರಗಳು ಇದ್ದುವು. `ತಂದೆ~ಯ ಬಗ್ಗೆ ಅಸಮಾಧಾನ ಹೆಚ್ಚಾಗಿತ್ತು. ತನಗೆ ಗೌರವ ಇಲ್ಲ ಎಂದು ಅನಿಸತೊಡಗಿತ್ತು. ಏನು ಗೌರವ ಕೊಡಬೇಕು ಎಂದು `ತಂದೆ-ತಾಯಿ~ಗೆ ಗೊತ್ತಿರಲಿಲ್ಲ. ಸಮಾಧಾನ ಮಾಡಲು ಅವರೂ ಪ್ರಯತ್ನ ಮಾಡಿದರು.

ಆದರೆ, ಮಗ ಬೇರೆ ಮನೆ ಮಾಡಲು ನಿರ್ಧರಿಸಿಯೇ ಬಿಟ್ಟಿದ್ದ. ಬೇರೆ ಮನೆ ಮಾಡಿದರೆ ಮಾಡಲಿ; ಮಾತೂ ಬಿಟ್ಟಿದ್ದಾನೆ. ಮನೆಯ ಸಂಪರ್ಕವೇ ಆತನಿಗೆ ಬೇಡ ಅನಿಸತೊಡಗಿದೆ. ಹೊರಗೆ ಯಾರೋ ಹೊಸ ಪರಿಚಯ ಆದಂತೆ ಕಾಣುತ್ತದೆ. ಅವರೂ ಕಿವಿ ಚುಚ್ಚಿರಬಹುದು.

`ತಂದೆ-ತಾಯಿ~ ಆತನಿಗೆ ಕಡಿಮೆ ಪ್ರೀತಿ ಕೊಟ್ಟಿರಲಿಲ್ಲ. ನಲವತ್ತು ವರ್ಷದಿಂದ ಆತನನ್ನು ಪೊರೆದಿದ್ದರು. ಅವಕಾಶ ಬಂದಾಗಲೆಲ್ಲ ಈತನನ್ನೇ ಗುರುತಿಸಿ ಜವಾಬ್ದಾರಿ ಕೊಟ್ಟಿದ್ದರು. ಅಧಿಕಾರವನ್ನೂ ಕೊಟ್ಟಿದ್ದರು. ಆತ ಕರ್ನಾಟಕದ ವಿಧಾನಸಭೆಯಲ್ಲಿ ಎರಡು ಬಾರಿ ವಿರೋಧ ಪಕ್ಷದ ನಾಯಕನಾಗಿದ್ದ. ಮೂರು ಬಾರಿ ಪಕ್ಷದ ಅಧ್ಯಕ್ಷನೇ ಆಗಿದ್ದ. ಒಂದು ಸಾರಿ ವಿಧಾನಸಭೆ ಚುನಾವಣೆಯಲ್ಲಿ ಸೋತ ಎಂದು ತಕ್ಷಣ ವಿಧಾನಪರಿಷತ್ತಿಗೆ ಕಳಿಸಿಕೊಟ್ಟಿದ್ದರು.
 
ರಾಷ್ಟ್ರೀಯ ಕಾರ್ಯದರ್ಶಿಯೂ ಆಗಿದ್ದ. ಮೊದಲ ಸಮ್ಮಿಶ್ರ ಸರ್ಕಾರದಲ್ಲಿ ಆತನನ್ನೇ ಉಪ ಮುಖ್ಯಮಂತ್ರಿ ಮಾಡಿದರು. ಮುಖ್ಯಮಂತ್ರಿ ಪದವಿ ಒದಗಿ ಬಂದಾಗ ಆತನನ್ನೇ ನೆನಪಿಸಿಕೊಂಡು `ನೀನೇ ಆಗು~ ಎಂದರು. ಆತ ಅಧಿಕಾರ ವಹಿಸಿಕೊಳ್ಳುವಾಗ ಸಂಭ್ರಮ ಪಟ್ಟರು. ಬಹುಶಃ ಕರ್ನಾಟಕದಲ್ಲಿ ಪ್ರಧಾನಿ ಹುದ್ದೆ ಇದ್ದರೆ ಅದನ್ನೂ ಆತನಿಗೇ ಕೊಡುತ್ತಿದ್ದರು! ಆದರೂ ಆತನಿಗೆ ಪಕ್ಷ ತನಗೆ ಗೌರವ ಕೊಡುತ್ತಿಲ್ಲ ಎನಿಸುತ್ತಿದೆ. ಚೆನ್ನಾಗಿ ನೋಡಿಕೊಂಡಿಲ್ಲ ಎಂದು ಅನಿಸುತ್ತಿದೆ.

ಮನೆಯವರ ಮೇಲೆ ಸಿಟ್ಟು ಬಂದರೆ ಹಾಗೆಯೇ. ಅವರೆಲ್ಲ ತನ್ನ ವಿರುದ್ಧ ಇದ್ದಾರೆ ಎಂದು ಅನಿಸತೊಡಗುತ್ತದೆ. ಬಿ.ಎಸ್. ಯಡಿಯೂರಪ್ಪ ಅವರು ಪಕ್ಷದ ಕಚೇರಿ ಉದ್ಘಾಟನೆ ದಿನ ಆಡಿದ ಮಾತುಗಳನ್ನು ಕೇಳಿದವರಿಗೆ ಅವರು ಎರಡೂ ಕಾಲು ಹೊರಗೆ ಇಟ್ಟಿದ್ದಾರೆ ಎಂದು ಅನಿಸುತ್ತದೆ.
 
ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರಿಗೂ ಪಕ್ಷದಲ್ಲಿ ಗೌರವ ಇಲ್ಲ ಎಂದು ಅವರ ಪರವಾಗಿ ಇವರೇ ಹೇಳಿದ್ದಾರೆ. ಬಹುಶಃ, ಮೋದಿ ಕಾರ್ಯಕಾರಿಣಿಗೆ ಬರುವುದಿಲ್ಲ; ತಾವೂ ಹೋಗಬಾರದು ಎಂದು ಯಡಿಯೂರಪ್ಪ ಅಂದುಕೊಂಡರು. ಹೋಗುವುದಿಲ್ಲ ಎಂದು ಪ್ರಕಟಿಸಿಯೂ ಬಿಟ್ಟರು.
 
ಆದರೆ, ಮೋದಿ ಅವರು ಎಲ್ಲಿಯೂ ತಾವು ಕಾರ್ಯಕಾರಿಣಿಗೆ ಹೋಗುವುದಿಲ್ಲ ಎಂದು ಬಹಿರಂಗವಾಗಿ ಹೇಳಿರಲಿಲ್ಲ. ಅವರಿಗೆ ಕಾರ್ಯಕಾರಿಣಿ ಸಭೆಗಿಂತ ಮುಂಚೆ ಏನಾಗಬೇಕಿತ್ತು ಎಂದು ಗೊತ್ತಿತ್ತು. ಅದನ್ನು ಅವರು ಸಾಧಿಸಿಕೊಂಡರು.
 
ಆರ್‌ಎಸ್‌ಎಸ್ ಮೂಲದ ಸಂಜಯ ಜೋಷಿಯವರು ಪಕ್ಷಕ್ಕೆ ರಾಜೀನಾಮೆ ಕೊಡುವಂತೆ ಮಾಡಿ ತಾವು ಕಾರ್ಯಕಾರಿಣಿಯಲ್ಲಿ ಭಾಗವಹಿಸಿದರು. ಒಬ್ಬ ಪ್ರಬಲ ನಾಯಕ ಹೇಗೆ ಪಕ್ಷವನ್ನು ಮಣಿಸಬಹುದು ಎಂಬುದಕ್ಕೆ ಮೋದಿ ನಡೆದುಕೊಂಡ ರೀತಿ ಒಂದು ನಿದರ್ಶನ.

ಅವರು ಇಡೀ ದೇಶದ ಮಾಧ್ಯಮಗಳ ಗಮನ ಕಾರ್ಯಕಾರಿಣಿ ಸಭೆ ನಡೆಯುವ ದಿನದವರೆಗೆ ತಮ್ಮ ಸುತ್ತಲೇ ಇರುವಂತೆ ನೋಡಿಕೊಂಡರು. ಮತ್ತು ಕಾರ್ಯಕಾರಣಿ ನಡೆದ ದಿನ ಮಾಧ್ಯಮಗಳ ಗಮನ ತಮ್ಮ ಸುತ್ತಲೇ ಕೇಂದ್ರೀಕರಿಸುವಂತೆಯೂ ನಿಗಾ ವಹಿಸಿದರು.
 
ಪ್ರಧಾನಿ ಹುದ್ದೆಗೆ ಅಥವಾ ರಾಷ್ಟ್ರೀಯ ಅಧ್ಯಕ್ಷ ಹುದ್ದೆಗೆ ಹತ್ತಿರದ ವ್ಯಕ್ತಿ ತಾವು ಎಂದು ಅವರು ಇದಕ್ಕಿಂತ ಚೆನ್ನಾಗಿ ಹೇಳುವುದು ಸಾಧ್ಯವಿರಲಿಲ್ಲ. ಆದರೆ, ಒಂದು ಪಕ್ಷ ಒಬ್ಬ ವ್ಯಕ್ತಿಗೆ ಹೀಗೆ ಮಣಿಯಬಹುದೇ ಎಂಬುದು ಇನ್ನೊಂದು ಪ್ರಶ್ನೆ. ಬಿಜೆಪಿಯಲ್ಲಿ ಸಂಘಟನೆಗಿಂತ ವ್ಯಕ್ತಿಗಳು ದೊಡ್ಡವರಾಗಿರುವುದರ ಪರಿಣಾಮಗಳು ಇವು.

 ರಾಜ್ಯದಲ್ಲಿಯೂ ಯಡಿಯೂರಪ್ಪ ಅಷ್ಟೇ ಪ್ರಬಲ ವ್ಯಕ್ತಿ. ಆದರೆ, ಅವರು ಕಾರ್ಯಕಾರಿಣಿಯಲ್ಲಿ ಭಾಗವಹಿಸುವುದಿಲ್ಲ ಎಂದು ಹೇಳಿದಾಗ ಯಾರೂ ತಲೆ ಕೆಡಿಸಿಕೊಂಡಂತೆ ಕಾಣಲಿಲ್ಲ. ಬರದೆ ಇದ್ದರೆ ಒಳ್ಳೆಯದೇ ಆಯಿತು ಎನ್ನುವಂಥ ಪ್ರತಿಕ್ರಿಯೆ ಬಂತು.
 
ತನಗೆ ಬೇಕಾದ, ಆಸ್ತಿ ಎನಿಸುವ ಒಬ್ಬ ನಾಯಕನ ಜತೆಗೆ ಪಕ್ಷ ನಡೆದುಕೊಳ್ಳುವ ರೀತಿ ಬೇರೆ. ಹೊರೆ ಅನಿಸುವ ನಾಯಕನ ಜತೆಗೆ ನಡೆದುಕೊಳ್ಳುವ ರೀತಿ ಬೇರೆ. ಅದೆಲ್ಲ ಒಬ್ಬ ನಾಯಕನ ವ್ಯಕ್ತಿತ್ವ ಮತ್ತು ಆತನ `ಸಾಮಗ್ರಿ~ಯಲ್ಲಿ ಅಡಕವಾಗಿರುತ್ತದೆ. ಯಡಿಯೂರಪ್ಪ ಕಾರ್ಯಕಾರಿಣಿಯಲ್ಲಿ ಭಾಗವಹಿಸುವುದಿಲ್ಲ ಎಂದು ಏಕೆ ಹೇಳಿದರು, ನಂತರ ಯಾರೋ ಕರೆದರು ಎಂದು ಏಕೆ ಭಾಗವಹಿಸಿದರು ಎಂಬುದಕ್ಕೆ ಕಾರಣಗಳು ತಿಳಿಯುವುದಿಲ್ಲ. ಅವರು ಮತ್ತೆ ಮತ್ತೆ ತಡವರಿಸುತ್ತಿದ್ದಾರೆ ಎಂದು ಮಾತ್ರ ಗೊತ್ತಾಗುತ್ತದೆ.

ಯಡಿಯೂರಪ್ಪ ವಿರುದ್ಧ ಸಿಬಿಐ ತನಿಖೆ ನಡೆಯಬೇಕು ಎಂದು ಸುಪ್ರೀಂ ಕೋರ್ಟ್ ಆದೇಶ ಮಾಡಿದಾಗ ಉನ್ನತ ನಾಯಕರು ಯಾರೂ ಅವರ ಬೆಂಬಲಕ್ಕೆ ಬರಲಿಲ್ಲ. ಪಕ್ಷದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಪತ್ರಿಕಾಗೋಷ್ಠಿ ಮಾಡಿದ್ದು ಕೂಡ ಜುಲುಮೆಯಿಂದ.
 
ಇದು ಒಂದು ರಾಜಕೀಯ ನಿರ್ಧಾರವಾಗಿದ್ದರೆ ಪಕ್ಷ ಖಂಡಿತ ಯಡಿಯೂರಪ್ಪನವರ ನೆರವಿಗೆ ಬರಬಹುದಿತ್ತು. ಸುಪ್ರೀಂ ಕೋರ್ಟ್ ಆದೇಶದಲ್ಲಿ ರಾಜಕೀಯ ಕಾರಣಗಳನ್ನು ಹುಡುಕುವುದು ಅಸಾಧ್ಯ. ಆದರೂ ಯಡಿಯೂರಪ್ಪನವರು ಪಕ್ಷ ತಮ್ಮ ನೆರವಿಗೆ ಬರಬೇಕಿತ್ತು ಎಂದು ಆಶಿಸುತ್ತಿರುವಂತಿದೆ.

ಪಕ್ಷದ ಮಾಜಿ ರಾಷ್ಟ್ರೀಯ ಅಧ್ಯಕ್ಷ ರಾಜನಾಥ ಸಿಂಗ್ ಒಂದಲ್ಲ ಎರಡು ಸಲ, ಪಕ್ಷದಲ್ಲಿ ಯಾವುದೇ ಹುದ್ದೆ ಖಾಲಿ ಇಲ್ಲ ಎಂದು ಹೇಳಿರುವುದೂ ಅವರನ್ನು ಕೆರಳಿಸಿದೆ. ಹಾಗೆಂದು ಯಡಿಯೂರಪ್ಪ ಪಕ್ಷ ಬಿಟ್ಟು ಹೋಗಲಿ ಎಂದು ಪಕ್ಷದ ಮುಖಂಡರು ಬಯಸುತ್ತಾರೆ ಎಂದು ಅಲ್ಲ.

ಆದರೆ, ಆ ತೀರ್ಮಾನವನ್ನು ಅವರು ಯಡಿಯೂರಪ್ಪನವರಿಗೇ ಬಿಟ್ಟಂತೆ ಕಾಣುತ್ತದೆ. ಪಕ್ಷದ ಮುಖಂಡರನ್ನು ನಿಂದಿಸಿ, ಎದುರು ಹಾಕಿಕೊಂಡಷ್ಟೂ ಯಡಿಯೂರಪ್ಪ ಅವರು ಜನರ ಸಹಾನುಭೂತಿ ಕಳೆದುಕೊಳ್ಳುತ್ತಾರೆ. ಇದರಲ್ಲಿ ಯಾರು ಮೊದಲು ಎಂಬ ಪೈಪೋಟಿ ಇದ್ದಂತೆ ಕಾಣುತ್ತದೆ. ಪಕ್ಷ ತಮ್ಮನ್ನು ಹೊರಗೆ ಹಾಕಲಿ ಎಂದು ಯಡಿಯೂರಪ್ಪ ಬಯಸುತ್ತಿದ್ದರೆ ಅವರೇ ಬೇಕಾದರೆ ಹೋಗಲಿ ಎಂದು ಪಕ್ಷ ಬಯಸುತ್ತಿರುವಂತಿದೆ.

ಹೇಗೂ ಪಕ್ಷ ಬಿಡಬೇಕು ಎಂದು ತೀರ್ಮಾನಿಸಿದಂತಿರುವ ಯಡಿಯೂರಪ್ಪ ಪಕ್ಷವೇ ತಮ್ಮನ್ನು ಹೊರಗೆ ಹಾಕದೇ ಇದ್ದರೆ ಪಕ್ಷಕ್ಕೆ ಇರಿಸುಮುರಿಸು ಮಾಡುವ ಕ್ರಮಗಳಿಗೆ ಕೈ ಹಾಕಬಹುದು. ಅತ್ತ ಕಾರ್ಯಕಾರಿಣಿಯಲ್ಲಿ ಭಾಗವಹಿಸುವ ದಿನವೇ ಇತ್ತ ಅವರ ಸಂದರ್ಶನವೂ ರಾಷ್ಟ್ರೀಯ ಟೀವಿಯೊಂದರಲ್ಲಿ ಪ್ರಸಾರವಾಗಿರುವುದು ಇದಕ್ಕೆ ಒಂದು ನಿದರ್ಶನದಂತಿದೆ.

ಕಾರ್ಯಕಾರಿಣಿ ಸಭೆಯಲ್ಲಿಯೂ ಅವರು ತಮಗೆ ಏನು ಹೇಳಬೇಕು ಅನಿಸಿತ್ತೋ ಅದನ್ನು ಹೇಳಿ ಬಿಟ್ಟಿದ್ದಾರೆ. ಮುಂದಿನ ತಿಂಗಳು ವಿಧಾನಸಭೆಯಿಂದ ವಿಧಾನಪರಿಷತ್ತಿಗೆ ನಡೆಯುವ ಚುನಾವಣೆಯಲ್ಲಿ ತಮ್ಮ ಬೆಂಬಲಿಗ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುವುದು, ಈ ತಿಂಗಳ ಕೊನೆಗೆ ರಾಜ್ಯದಾದ್ಯಂತ ಪ್ರವಾಸ ಮಾಡಿ ಮತ್ತೆ ನಾಯಕರ ವಿರುದ್ಧ ಟೀಕಾಪ್ರಹಾರ ಮುಂದುವರಿಸುವುದು ಇತ್ಯಾದಿ... ಇತ್ಯಾದಿ... ಅನೇಕ ಅಸ್ತ್ರಗಳು ಅವರ ಬತ್ತಳಿಕೆಯಲ್ಲಿ ಇವೆ.

ಕಾಲು ಕೆರೆದು ಜಗಳ ತೆಗೆಯಬೇಕು ಎಂದುಕೊಂಡರೆ ಅದಕ್ಕೆ ಕಾರಣಗಳು ತಾನಾಗಿಯೇ ಒದಗಿ ಬರುತ್ತವೆ. ಅವರು ಹತಾಶರಾಗುವಂಥ ಇನ್ನೂ ಕೆಲವು ಬೆಳವಣಿಗೆಗಳು ಮುಂದಿನ ವಾರಗಳಲ್ಲಿ ನಡೆದರೂ ನಡೆಯಬಹುದು. ಆದರೆ, ಯಡಿಯೂರಪ್ಪನವರು ಯಾರದೋ ಚಿತಾವಣೆಯಿಂದ ಹೀಗೆ ಮಾಡುತ್ತಿದ್ದಾರೆ ಎಂದು ಬಿಜೆಪಿ ನಾಯಕರಿಗೆ ಅನಿಸತೊಡಗಿದೆ.

ಉತ್ತರ ಕರ್ನಾಟಕದ ಸಂಸದರೊಬ್ಬರು ಕಾಂಗ್ರೆಸ್‌ನ ಉನ್ನತ ನಾಯಕರೊಬ್ಬರ ಜತೆಗೆ ಯಡಿಯೂರಪ್ಪನವರ ಪರವಾಗಿ ಮಾತನಾಡಿದ್ದಾರೆ ಎಂದೂ ಅವರಿಗೆ ಗೊತ್ತಾಗಿದೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿಯನ್ನು ಎದುರಿಸಬೇಕಾದರೆ ಅದನ್ನು ಒಡೆಯುವುದು ಒಂದೇ ದಾರಿ ಎಂದೂ ಕಾಂಗ್ರೆಸ್ ಭಾವಿಸಿದಂತಿದೆ. ಅದು ಸುಲಭದ ದಾರಿ!
ಎಲ್ಲರೂ ಡಿಸೆಂಬರ್‌ನಲ್ಲಿ ಚುನಾವಣೆಗೆ ಸಿದ್ಧರಾಗುತ್ತಿರುವಂತಿದೆ.
 
ಅದೇ ತಿಂಗಳು ಗುಜರಾತ್ ಮತ್ತು ಹಿಮಾಚಲ ಪ್ರದೇಶದಲ್ಲಿಯೂ ಚುನಾವಣೆ ನಡೆಯುತ್ತದೆ. ಆ ತಿಂಗಳು ಚುನಾವಣೆ ನಡೆದರೂ ಅಲ್ಲಿಯವರೆಗೆ ರಾಜ್ಯ ಸರ್ಕಾರ ಅಸ್ತಿತ್ವದಲ್ಲಿ ಇರುತ್ತದೆಯೇ? ಇರಲಾರದು ಎನಿಸುತ್ತದೆ. ಸರ್ಕಾರವನ್ನು ಬೀಳಿಸುವಷ್ಟು ಬಲ ಯಡಿಯೂರಪ್ಪ ಅವರಿಗೆ ಇದ್ದಂತೆ ಇಲ್ಲ.
 
ಅವರ ಜತೆಗೆ ಸದ್ಯಕ್ಕೆ ಇರುವ 15-20 ಶಾಸಕರ ಬಲದಿಂದ ಸರ್ಕಾರವನ್ನು ಬೀಳಿಸಲು ಆಗದು. ಅವರು ಕೂಡ ಸರ್ಕಾರ ಬೀಳುತ್ತದೆ ಎಂದರೆ ಯಡಿಯೂರಪ್ಪ ಜತೆಗೆ ಬರುತ್ತಾರೆಯೇ ಎಂಬ ಪ್ರಶ್ನೆಯೂ ಇದೆ. ಏಕೆಂದರೆ ಈಗ ಅವರ ಜತೆಗೆ ಇರುವವರು ಅಧಿಕಾರಕ್ಕಾಗಿ ಪಕ್ಷಕ್ಕೆ ಈಚೆಗೆ ಸೇರಿದವರು.
 
ಅವರು ಎಲ್ಲಿ ಹುಲ್ಲುಗಾವಲು ಇರುತ್ತದೆಯೋ ಅಲ್ಲಿ ಇರುವವರು. ಅವರು ಬಿಜೆಪಿ ಭಾಷೆಯಲ್ಲಿ `ವ್ಯಾವಹಾರಿಕ~ ಬಿಜೆಪಿಗೆ ಸೇರಿದವರು! ಅವರಿಗೆಲ್ಲ ಒತ್ತಡ ಹೇರಲು ಯಡಿಯೂರಪ್ಪ ಬೇಕು. ಅಧಿಕಾರ ಹೋಗುತ್ತದೆ ಎಂದರೆ ಸದಾನಂದಗೌಡರ ಕಾಲು ಬೇಕು.
 
ಈ ಎರಡೂ ಆಯ್ಕೆಗಳನ್ನು ಮೀರಿಯೂ ಕೆಲವರು ಆಚೆ ಕಾಣುವ ಹುಲ್ಲುಗಾವಲುಗಳ ಕಡೆಯೂ ದೃಷ್ಟಿ ಬೀರಿದ್ದಾರೆ! ಈಗ ಸದಾನಂದಗೌಡರ ಜತೆಗೆ ಇರುವ ಕೆಲವು ಸಚಿವರು ಚುನಾವಣೆ ಬರುತ್ತದೆ ಎನ್ನುವಾಗ ಬೇರೆ ಪಕ್ಷಗಳಿಗೆ ವಲಸೆ ಹೋದರೆ ಅಚ್ಚರಿಯಿಲ್ಲ.

ಅಂಥ ಮಾತುಕತೆಗಳು ಈಗಾಗಲೇ ನಡೆದಿವೆ. ಇದೆಲ್ಲ ಅನೈತಿಕ. ಆದರೆ, ಹಾಗೆಂದು ಅವರಿಗೆ ಹೇಳುವವರು ಯಾರು? ಸಂಪುಟಕ್ಕೆ ರಾಜೀನಾಮೆ ಪತ್ರ ಬರೆದು ಯಡಿಯೂರಪ್ಪ ಕೈಗೆ ಕೊಟ್ಟವರು ಇನ್ನೂ ಸಂಪುಟದಲ್ಲಿಯೇ ಇರುವುದು ಅನೈತಿಕ ಅಲ್ಲವೇ? ತತ್ವ, ಸಿದ್ಧಾಂತಗಳನ್ನೆಲ್ಲ ಗಂಟು ಮೂಟೆ ಕಟ್ಟಿ ಇಟ್ಟೇ ಅವರು ಬಿಜೆಪಿ ಸೇರಿರುವುದರಿಂದ ಯಾರೂ ಆ ಬಗ್ಗೆ ತಲೆ ಕೆಡಿಸಿಕೊಳ್ಳುವ ಅಗತ್ಯವಿಲ್ಲ!

`ಏನೇ ಆದರೂ ಯಡಿಯೂರಪ್ಪ ಪಕ್ಷದಲ್ಲಿ ಉಳಿಯುವುದಿಲ್ಲ. ಮುಂದಿನ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದಿಲ್ಲ. ಆದರೆ, ಒಂದು ರಾಜಕೀಯ ಪಕ್ಷದ ಜೀವನದಲ್ಲಿ ಇದೆಲ್ಲ ಸಹಜ~ ಎಂಬ ಮನಸ್ಥಿತಿಗೆ `ವೈಚಾರಿಕ~ ಬಿಜೆಪಿ ಬಂದಂತೆ ಕಾಣುತ್ತದೆ.

`ಯಡಿಯೂರಪ್ಪನವರಿಗೂ ಮುಂದಿನ ಚುನಾವಣೆಯಲ್ಲಿ ತಮ್ಮ ಶಕ್ತಿ ಏನು ಎಂದು ಗೊತ್ತಾಗುತ್ತದೆ. ನಾವು ಸೋತರೂ ಅದು ವೀರೋಚಿತ ಸೋಲಾಗಿರಬೇಕು, ತಾನು ರಾಜ್ಯದಲ್ಲಿ ಈಗಲೂ ಒಂದು ಪರ್ಯಾಯ ಎಂದು ಮುಂದಿನ ಚುನಾವಣೆಯಲ್ಲಿ ಸಾಬೀತಾದರೂ ಸಾಕು~ ಎಂದು ಬಿಜೆಪಿ ನಾಯಕರು ಬಯಸುತ್ತಿದ್ದಾರೆ.
 
ಆದರೆ, ತನ್ನನ್ನು ಬೆಳೆಸಿದ ಪಕ್ಷವನ್ನೇ ಸೋಲಿಸಲು ಯಡಿಯೂರಪ್ಪ ಇನ್ನೊಬ್ಬರಿಗೆ `ಸಾಧನ~ವಾಗಿದ್ದಾರೆ ಎಂಬ ಮರುಕವೂ ಅವರಲ್ಲಿ ಇದೆ. ಬಹುಶಃ ಆ ಮರುಕದಿಂದಲೇ ಯಡಿಯೂರಪ್ಪ ಎಷ್ಟೇ ಟೀಕೆ ಮಾಡಿದರೂ ಪಕ್ಷ ಅದನ್ನು ಸಹಿಸಿಕೊಳ್ಳುತ್ತಿರುವಂತೆ ಕಾಣುತ್ತದೆ.

ಯಡಿಯೂರಪ್ಪ ಮಾಡುತ್ತಿರುವುದು ಅತಿಯಾಯಿತು ಎಂದು ಜನರಿಗೇ ಅನಿಸುವವರೆಗೂ ಅದು ತಡೆದುಕೊಳ್ಳುತ್ತದೆ. ಇದು ಒಂದು ರೀತಿಯಲ್ಲಿ ಸಹನೆ ಪರೀಕ್ಷೆಯ ಆಟ. ಯಾರು ಮೊದಲು ಸಹನೆ ಕಳೆದುಕೊಳ್ಳುತ್ತಾರೆ ಎನ್ನುವುದಷ್ಟೇ ಈಗ ಉಳಿದಿರುವ ಕುತೂಹಲ. ಬೇರೆ ಮನೆಯನ್ನೇ ಮಾಡಿರುವ ಮಗ ಮತ್ತೆ ಮನೆಗೆ ಬರುತ್ತಾನೆ ಎಂದು ಊಹಿಸುವುದು ಕಷ್ಟ. ಬಂದರೂ ಮೊದಲಿನ ಪ್ರೀತಿ ಉಳಿದಿರುತ್ತದೆಯೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT