ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಗುವನ್ನು ನೆನೆಯದೆ ಮಗು ಹುಟ್ಟದು – ಹುಟ್ಟಿದರೆ, ಅದು ಬೆಚ್ಚಿಬೀಳುವುದು

Last Updated 28 ಜನವರಿ 2017, 19:30 IST
ಅಕ್ಷರ ಗಾತ್ರ

ಮಹಾಭಾರತದ ಕೊನೆಯಲ್ಲಿ ವ್ಯಾಸರು ಹೇಳಿದ ಪ್ರಸಿದ್ಧವಾದ ಮಾತೊಂದಿದೆ. ಆ ಮಾತಿನ ಭಾವ ಹೀಗಿದೆ: ‘ಈ ಇತಿಹಾಸ ರಚನೆಯಲ್ಲಿ ನಾನು ಇಷ್ಟೊಂದು ಮಾತನಾಡಿದೆ. ಆದರೆ ನನ್ನ ಮಾತನ್ನು ಯಾರೂ ಕೇಳುವವರಿಲ್ಲವಾಗಿದೆ. ಅರ್ಥ–ಕಾಮಗಳ ವೇಗ ಈ ಬದುಕಿನಲ್ಲಿ ತೀವ್ರವಾದದ್ದು ಎಂದು ನಾ ಒಪ್ಪುವೆ. ಅದು ತೀವ್ರವಾದುದರಿಂದಲೇ ಅದು ಸ್ವ–ವಿನಾಶಕಾರಿಯೂ ಹೌದು.

ವೇಗಕ್ಕೆ ಸ್ವ–ನಾಶದ ಗುಣವಿದೆ. ಆದುದರಿಂದ, ಧರ್ಮದ ಮೃದು ಸಂಯಮದಲ್ಲಿ ಅರ್ಥಕಾಮಗಳ ಅನುಭವದ ಚೆಲುವೇ ಬೇರೆ. ಆ ಚೆಲುವನ್ನು ಅನುಭವಿಸಿ ಎನ್ನುತ್ತಿದ್ದೇನೆ. ಆದರೆ ಕೇಳುವವರೇ ಇಲ್ಲ’. ಮಹಾಭಾರತದ ಒಳಗಿನಿಂದ ನೋಡಿದರೆ ವ್ಯಾಸರ ಮಾತನ್ನು ಕೇಳದೇ ಇದ್ದವರಲ್ಲಿ ಮೊದಲಿಗಳು ಸ್ವಯಂ ವ್ಯಾಸರ ತಾಯಿಯಾದ ಮತ್ಸ್ಯಗಂಧೀ ಸತ್ಯವತಿಯೇ. ವ್ಯಾಸ, ಆಕೆಗೆ ಹೇಳಿದ್ದರು.

ನಿನ್ನ ಮಾತೆಂದು ‘ನಿಯೋಗ’ಕ್ಕೆ ಒಪ್ಪುವೆ. ಆದರೆ ತಪಸ್ವೀ ಜನರು ಕ್ಷತ್ರಿಯ ಸ್ತ್ರೀಯರಿಗೆ ಎಂದೂ ಪ್ರಿಯರಲ್ಲ. ಮತ್ತು ತಪಸ್ವಿಗಳಿಗೆ ಕ್ಷತ್ರಿಯ ಸ್ತ್ರೀಯರು ಕೂಡ. ಈ ಮಿಲನ ಇಜ್ಜೋಡಾಗಿಬಿಡಬಹುದು. ವರ್ಷದ ಕಾಲ ವ್ರತನಿಷ್ಠರಾಗಿ ಇದ್ದು, ‘ನಿಯೋಗ’ದ ಮೂಲಕ ಹುಟ್ಟಲಿರುವ ಮಗುವನ್ನು ಆಗಾಮಿ ಭವಿಷ್ಯವನ್ನು, ಉತ್ತರಾಧಿಕಾರಿಯನ್ನು ತಾಯಂದಿರಾಗಲಿರುವವರು ನೆನೆಯುತ್ತಿರಬೇಕು. ಇದು ಈ ಲೋಕಕ್ಕೆ ಮಗುವನ್ನು ಬರಮಾಡಿಕೊಳ್ಳುವ ಒಳಗಿನ ದಾರಿ.

ಈ ದಾರಿ ಸರಿ ಇರಲಿ. ಈ ಮಣ್ಣಿಗೆ ಬಂದು ಬಿದ್ದ ಮೇಲೆ ಮಗು, ತಾಯನ್ನು ಆರ್ತವಾಗಿ ಕರೆಯುವಂತೆ, ಬಾನಿನಲ್ಲಿರುವ ಮಗುವನ್ನು ತಾಯಿ ಆರ್ತವಾಗಿ ಕರೆಯಬೇಕು. ನಮ್ಮೊಳಗೆ ಹಬ್ಬಿರುವ ನೆನವರಿಕೆ–ಕನವರಿಕೆಗಳ ಈ ಭಾವಲೋಕ ಈಗ; ಈ ಕ್ಷಣದ ಪ್ರಯೋಜನದೃಷ್ಟಿ ಮಾತ್ರ ಮುಖ್ಯವಾಗಿ ಕೆಡಬಾರದು. ‘ಭಾವ’ ಕೆಟ್ಟರೆ ‘ಇತಿಹಾಸ’ವೇ ಕೆಡುತ್ತದೆ.

ತಾಯಿಗೇ ಈ ಮಾತಿನ ಆಳ ತಿಳಿಯದೆ ಹೋಯಿತು. ತಾನು ಮಗನನ್ನು; ವ್ಯಾಸನನ್ನು ನೆನೆಯುವ ಸುಖ ತನಗೆ ಗೊತ್ತು. ಇನ್ನೊಂದು ರೀತಿಯಲ್ಲಿ, ತನ್ನ ಸೊಸೆಯಂದಿರೂ ವ್ರತನಿಷ್ಠರಾಗಿ ವ್ಯಾಸನನ್ನು ನೆನೆಯುವಂತಾಗುವುದು ಒಳಿತಿರಬಹುದೆಂದೇ ಅವಳಿಗೆ ಅದೇಕೋ ಅರ್ಥವಾಗದಾಯಿತು. ಅಥವಾ ಅಂಬಿಕೆ,  ಅಂಬಾಲಿಕೆಯರು ವ್ಯಾಸನನ್ನು ಎಂದೂ ಒಪ್ಪಲಾರರೆನ್ನುವುದು ಆಂತರ್ಯದಲ್ಲಿ ಸತ್ಯವತಿಗೆ ತಿಳಿದಿತ್ತು. ಇನ್ನು ವ್ರತನಿಷ್ಠರಾಗಿ ಅವನನ್ನೇ ನೆನೆಯುವ ಮಾತೇನು? ಆದರೂ ‘ನಿಯೋಗ’ ಅನಿವಾರ್ಯವಾಗಿ ಬಂದಿತ್ತಾಗಿ ಕಾಲಹರಣವಾಗುವುದು ಕೆಲಸದ ಕೇಡೆಂದೇ ಸತ್ಯವತಿಗೆ ತೋಚಿತು.

‘ಅರ್ಥ’ವು ಅಂದರೆ ಲೌಕಿಕ ಪ್ರಯೋಜನವು ‘ಧರ್ಮ’ದಿಂದ ಸಾಧಿತವಾಗಬೇಕೆನ್ನುವ ಮಾತು ಯಾರಿಗೂ ಕೇಳದೆ ಹೋಯಿತು. ಯಾರೂ ಕೇಳದ ಮಾತು ತನ್ನಲ್ಲಿಯೇ ತಾನು ಸಾರ್ಥಕವಾಗುವ ಮಾತು ಎನ್ನಿಸುತ್ತದೆ! ಆದರೆ ಅದೇಕೋ ತಾಯಿ ಸತ್ಯವತಿ, ತಾನು ಪರಾಶರನಿಂದ ಮೈಯ ಗಂಧಪರಿವರ್ತನೆಗೆ ಒಳಗಾದಂತೆ, ಪರಾಶರಸೂನುವಾದ ನೀನು ನಿನ್ನ ಮೈಯಗಂಧ ಬದಲಿಸಿಕೋ ಎಂದು ವ್ಯಾಸನನ್ನು ಕೇಳಲಾಗಲಿಲ್ಲ. ವ್ಯಾಸರ ಮೈಯ ಮತ್ಸ್ಯಗಂಧ ಅವಳಿಗೆ ತನ್ನ ತವರಿನ ನೆನಪನ್ನು ಊಡುತ್ತಿತ್ತು.

ಅಂಬಿಕೆ, ವ್ಯಾಸರಿಗೆ ಕಣ್ಣು ಮುಚ್ಚಿಕೊಂಡಳು. ಇದನ್ನು ವ್ಯಾಸರೇ ಹೇಳುತ್ತಿರುವುದು – ಮಗುವಿನ ಮುಗ್ಧತೆಯಿಂದ. ಇತಿಹಾಸಕಾರನಿಗೆ ತಾನು ಗಂಡೆಂಬ ಅಹಂಕಾರ ಇರಬಾರದು. ಅವನು ಹೆಣ್ಣಿನ ಕಣ್ಣಿನಿಂದಲೂ ನೋಡಬೇಕು. ಅವಳು ತನಗೆ ಕಣ್ಣುಮುಚ್ಚಿಕೊಂಡುದನ್ನೂ ತಾನು ನೋಡಬೇಕು. ತಾನು ಕಣ್ಣುಮುಚ್ಚುವಂತಿಲ್ಲ! ಬಾನಿನ ಚಿಕ್ಕೆಗಳು ಕತ್ತಲೆಯನ್ನು ಕೆಡಿಸದೆ ಇರುಳಿಗೆ ಸಾಕ್ಷಿಯಾದಂತೆ ಇರಬೇಕು! ಇದೊಂದು ವಿಲಕ್ಷಣ ಸಂದರ್ಭ. ಪರಾಶರ–ಮತ್ಸ್ಯಗಂಧಿಯರ ಸಂದರ್ಭದ ಸಂಭ್ರಮವೊಂದು ಗತ ಇತಿಹಾಸವಾಗಿ ಪರಾಶರಪುತ್ರ ವ್ಯಾಸರಿಗೆ ಕಂಡಿರಬೇಕು.

ದೋಣಿಯಲ್ಲಿರುವ ತಮ್ಮಿಬ್ಬರನ್ನು ದಡದಲ್ಲಿರುವ ಜನರ ಕಣ್ಣುಗಳು ಸಾಕೂತವಾಗಿ ನೋಡುತ್ತಿವೆಯಲ್ಲ ಎಂದು ಮತ್ಸ್ಯಗಂಧಿ, ಪರಾಶರರಲ್ಲಿ ನಾಚಿ ನುಡಿದಾಗ, ಮೇಲಿನಿಂದ ಇಳಿಯುತ್ತಿದ್ದ ಮಂಜು, ಪರದೆಯಂತಾಗಿ ಮಂಜಿನ ಒಳಕೋಣೆಯೊಂದು ಅಲ್ಲೇ ಸೃಷ್ಟಿಯಾಗಿಬಿಟ್ಟಿತ್ತು. ಈಗ ಅದೇ ಪರಾಶರಪುತ್ರ ವ್ಯಾಸ ಅರಮನೆಯ ಅಂತಃಪುರದಲ್ಲಿ ಇದ್ದಾನೆ.

ಹೆಣ್ಣು, ಅವನನ್ನು ನೋಡಲೊಲ್ಲಳು! ವ್ಯಾಸರು ಮುಂದೊಂದು ಸಂದರ್ಭದಲ್ಲಿ – ‘ಶ್ವಃ ಶ್ವಃ ಪಾಪೀಯದಿವಸಾಃ ಪೃಥಿವೀ ಗತಯೌವನಾ’ ಎಂದು ಉದ್ಗರಿಸುವರು. ಇನ್ನು ಮುಂದಿನ ದಿನಗಳು ಇನ್ನಷ್ಟು ಕೇಡಿನ ದಿನಗಳು; ಭೂಮಿಯೇ ತನ್ನ ಯೌವನವನ್ನು ಕಳೆದುಕೊಂಡಂತಿದೆ – ಎನ್ನುವರು. ಆ ನಿಟ್ಟುಸಿರು ಈ ಅಂತಃಪುರದಲ್ಲೇ ಹುಟ್ಟಿರಬೇಕು.

ಇತಿಹಾಸದ ಎಲ್ಲ ಬಿಕ್ಕಟ್ಟುಗಳ ಮಾರ್ಮಿಕ ಸಂಕೇತವಾಗಿ ಈ ಘಟನೆ – ಗದ್ದುಗೆ ಏರಲಿರುವ ದೊರೆಮಗನನ್ನು ಪಡೆಯಲೆಂದು ಏರ್ಪಡಿಸಿರುವ ನಿಯೋಗವಿಧಿಯಲ್ಲಿ; ಹೆಣ್ಣು, ಗಂಡನ್ನು ದಿಟ್ಟಿಸಿನೋಡಲೊಲ್ಲಳು; ಆ ಮೂಲಕ ತಾಯಿಯಾಗಲೊಲ್ಲಳು; ಒಂದು ರೀತಿಯಲ್ಲಿ ರಾಜಸಿಂಹಾಸನವನ್ನೇ ಧಿಕ್ಕರಿಸುವಳು – ಇಂಥದೊಂದು ಘಟನೆ ಮಹಾಭಾರತದಲ್ಲಿ ದಾಖಲಾಗಿದೆ.

ಆ ಗಂಡು ಬೇರಾರೂ ಅಲ್ಲ – ಸ್ವಯಂ ಇತಿಹಾಸ ರಚಯಿತರಾದ ವ್ಯಾಸ! ಒಂದು ಅರ್ಥದಲ್ಲಿ, ಇತಿಹಾಸದಿಂದ ದೂರ ತಳ್ಳಲ್ಪಟ್ಟಂತೆ ಆಗದೆ ನೈಜ ಇತಿಹಾಸ ರಚನೆಯೇ ಸಾಧ್ಯವಿಲ್ಲವೇನೋ! ನನ್ನ ಮಾತು ಕೇಳುವವರಿಲ್ಲ ಎನ್ನುವ ವಿಷಾದದಲ್ಲಿ ತನ್ನನ್ನು ನೋಡಬಯಸುವವರೂ ಇಲ್ಲ ಎನ್ನುವ ಧ್ವನಿಯೂ ಇರುವಂತಿದೆ!

ಅಂಜಿಕೆ ಹೆತ್ತ ಮಗು – ಕುರುಡು. ಉತ್ತರಾಧಿಕಾರ ಎನ್ನುವ ಪರಿಕಲ್ಪನೆಯೇ ಕುರುಡೆನ್ನುವಂತೆ. ಹುಡುಗನೇನೋ ಬಲಿಷ್ಠ, ದೃಢಕಾಯ. ಆದರೆ ಕುರುಡ. ಸಿಂಹಾಸನದ ಮೇಲೆ ಕೂರುವುದೆಂತು? ಮುಂದೊಂದು ಸಂದರ್ಭದಲ್ಲಿ ವ್ಯಾಸರು – ಧೃತರಾಷ್ಟ್ರನಲ್ಲಿ, ಕೌರವ–ಪಾಂಡವ ಯುದ್ಧ ಅನಿವಾರ್ಯವಾಗಿ ಕುರುಕ್ಷೇತ್ರದ ಬಯಲಲ್ಲಿ ಎರಡೂ ಸೇನೆಗಳು ಸೇರಿರುವಾಗ, ಈ ಚರಿತ್ರಾರ್ಹ ಯುದ್ಧವನ್ನು ನೋಡಬಯಸುವಿಯಾದರೆ ನಿನಗೆ ದಿವ್ಯದೃಷ್ಟಿಯನ್ನು ನೀಡುವೆನೆನ್ನುವರು. ಕ್ಷತ್ರಿಯನು ಯುದ್ಧಕ್ಕೆ ಸಾಕ್ಷಿಯಾದರೂ ಆಗಬೇಕು. ಕ್ಷತ್ರಿಯೇತರರಿಗೆ ಯುದ್ಧವನ್ನು ನೋಡುವುದೂ ಸುಲಭದ ತುತ್ತಲ್ಲ. ಆದರೆ ವ್ಯಾಸರ ಈ ಕೊಡುಗೆಗೆ ಧೃತರಾಷ್ಟ್ರನು ನಾನೊಲ್ಲೆನೆನ್ನುವನು. ಅದಕ್ಕವನು ಕೊಡುವ ಕಾರಣಗಳು ಬೇರೆ.

ಆ ಮಾತಿರಲಿ. ಆದರೆ ಹೀಗೆ ಒಲ್ಲೆನೆನ್ನುವಾಗ, ನಿಮ್ಮನ್ನು ನೋಡಲೊಲ್ಲದೆ ಕಣ್ಣು ಮುಚ್ಚಿಕೊಂಡ ತನ್ನ ತಾಯಿ ಅಂಬಿಕೆಯನ್ನು ನೀವೇಕೆ ಕಣ್ಣು ತೆರೆಯುವಂತೆ ಮಾಡಲಿಲ್ಲ? ಮಗು ಕುರುಡಾಗಬಹುದು ಎಂದಾದರೂ ಏಕೆ ಅವಳೊಡನೆ ಹೇಳಲಿಲ್ಲ? ಎಂದು ಒಳಗಿನ ಮುನಿಸೊಂದನ್ನು ಹೀಗೆ ಸೂಚಿಸುತ್ತಿದ್ದಾನೇನು? ಏನೇ ಇರಲಿ; ಮಗು ಕುರುಡಾಗಿ ಅವನು ನೋಡಲೊಲ್ಲದ ಯುದ್ಧ ಮಾತ್ರ ಅದೃಶ್ಯವಾಗಿ ಅಂದೇ ರೂಪುಗೊಳ್ಳಲು ತೊಡಗಿತ್ತು!

ಸತ್ಯವತಿಗೆ ತೀರ ದುಃಖವಾಯಿತು. ತನ್ನ ವ್ಯಾಸನನ್ನು, ಪರಾಶರಸೂನುವನ್ನು ಅಂಬಿಕೆ ಒಪ್ಪಿಲ್ಲವೆನ್ನುವುದು ಆಳದ ನೋವೂ ಹೌದು. ವಿಫಲವಾದ ನಿಯೋಗ ಸಫಲವಾಗಲೆಂದು ಅಂಬಾಲಿಕೆಯನ್ನು ಒಪ್ಪಿಸಿದಳು. ಆದರೆ ಇರುಳು ಬಳಿಗೆ ಬರುವವನಾರೆಂದು ಮತ್ತೆ ಬಚ್ಚಿಟ್ಟಳು. ಅಂಬಾಲಿಕೆಯಾದರೋ ತನ್ನ ಅಕ್ಕನಂತೆಯೇ ಭೀಷ್ಮನ ನಿರೀಕ್ಷೆಯಲ್ಲಿದ್ದಳು.

ಆದರೆ ಬಂದವನು, ಕ್ಷತ್ರಿಯರ ಅಭಿರುಚಿಗೆ ತಕ್ಕಂತೆ ತನ್ನನ್ನು ಇನಿತೂ ತಿದ್ದಿಕೊಳ್ಳಬಯಸದ, ತಾನಿರುವಂತೆಯೇ ತಾನಿರುವವನೆನ್ನುವ, ನಿರ್ಲಿಪ್ತ ಆತ್ಮಾರಾಮ ವ್ಯಾಸಮುನಿ! ಅಂಬಾಲಿಕೆ ಒಂದರೆಗಳಿಗೆ ವ್ಯಾಸನನ್ನು ದಿಟ್ಟಿಸಿದಳೇನೋ ನಿಜ. ನೋಡಿ ಮುಖ ಬಿಳಿಚಿಕೊಂಡಳು. ಪೇಲವವಾದಳು. ಅನುರಕ್ತಳಾಗಬೇಕಾದವಳು ವಿರಕ್ತಳಾದಳು. ನಿಸ್ತೇಜ ಪಾಂಡುವಿನ ಮುಖ ಅಂಬಾಲಿಕೆಯದು. ತೇಜಸ್ಸಿಲ್ಲದ ಬಿಳಿ–ಕಲೆಯಂತೆ. ವಿ–ವರ್ಣ.

ಅಂಬಾಲಿಕೆ ಹೆತ್ತ ಮಗು – ಪಾಂಡು. ಮಗುವಿನ ಮೈ ಬಣ್ಣವೇ ಮಗುವಿನ ಹೆಸರಾಯಿತು. ಚರ್ಮರೋಗಗ್ರಸ್ತ ಮಗು. ವ್ಯಾಸರನ್ನು ನೋಡಿ ತಾಯಿ ಬಿಳಿಚಿಕೊಂಡ ಕ್ಷಣ, ಮಗುವಿನ ಮೈಯಲ್ಲಿ ಸ್ಥಾಯಿಯಾಗಿ ಸೇರಿಹೋಯಿತು. ಪಾಂಡವರೆನ್ನುವ ಹೆಸರಿರುವವರೆಗೆ ಕಪ್ಪನೆಯ ವ್ಯಾಸ ಕೃಷ್ಣನನ್ನು ಅಂಬಾಲಿಕೆ ಬಿಳುಪೇರಿದ ಕಥೆ ಜೀವಂತವಾಗಿರುವಂತಾಯಿತು.

ಮಗುವಿನ ಬಿಳಿಚುವಿಕೆ ಹೇಗಿತ್ತೆಂದರೆ ತಾಯಿ, ಮಗುವನ್ನು ಬರಮಾಡಿಕೊಂಡ ಬಗೆಯಿಂದ ಮಗು ಈ ಬದುಕಿಗೆ ಬೆಚ್ಚಿಬಿದ್ದಂತೆ ಇತ್ತು. ಪಾಂಡುವಿನ ಬದುಕಿನ ಉದ್ದಕ್ಕೆ ಈ ಬೆಚ್ಚಿಬಿದ್ದಂತಿರುವ ಘಟನೆಗಳು ಜರುಗುತ್ತವೆ. ಅದನ್ನು ನೋಡಬೇಕಾದರೆ ವ್ಯಾಸರ ನಿಯೋಗದ ಕಥೆಯನ್ನು ಸ್ವಲ್ಪ ಸರಿಸಿ ಮುಂದೆ ಹೋಗಬೇಕಾಗುತ್ತದೆ.

ಪಾಂಡು, ವೀರನೇನೋ ಹೌದು. ವಿ–ವರ್ಣರೋಗಿಯಾದುದರಿಂದ, ರಾಜನಾಗುವ ಅರ್ಹತೆ ಪೂರ್ಣವಾಗಿರದಿದ್ದರೂ ಧೃತರಾಷ್ಟ್ರನು ಕುರುಡನಾದುದರಿಂದ ಮಧ್ಯಮಾರ್ಹತೆ ಎಂದು ಪಾಂಡು ಗದ್ದುಗೆಗೆ ಏರಿದ್ದ. ಪಾಂಡುರಾಜನಿಗೆ ಬೇಟೆಯ ಹುಚ್ಚು. ಭೀಷ್ಮನಂಥ ಮೇಧಾವಿ ರಾಜಕೀಯವನ್ನು ನೋಡಿಕೊಳ್ಳುತ್ತಿರಬೇಕಾದರೆ ಪಾಂಡು ತನ್ನ ವ್ಯಸನಗಳಲ್ಲಿ ತೊಡಗಿಕೊಳ್ಳುವುದಕ್ಕೆ ಬೇಕಾದ ಅನುಕೂಲವಿತ್ತು. ಹೀಗೊಮ್ಮೆ ಪಾಂಡು ತನ್ನ ಪರಿವಾರದೊಂದಿಗೆ ಬೇಟೆಗೆ ನಡೆದಿದ್ದ. ಕಾಡುಗಳನ್ನು ಸುತ್ತಾಡುತ್ತಿದ್ದ. ಆಗ ಕಣ್ಣಿಗೆ ಬಿತ್ತು ಆ ಮೃಗಮಿಥುನ.

ಎರಡು ಜಿಂಕೆಗಳು ಗಂಡು–ಹೆಣ್ಣು ಜೊತೆಯಾಗಿದ್ದವು. ರತಿಯಲ್ಲಿದ್ದವು. ಎರಡು ಮೈ ಸೇರಿ ಮೈ ಮರೆತಿದ್ದವು. ಪಾಂಡು ಅತ್ತ ನೋಡಿದ. ಗುರಿ ಹಿಡಿದ. ಒಂದೇ ಬಾಣದಲ್ಲಿ ಎರಡನ್ನು ಕೆಡವಬಹುದು. ತಲ್ಲೀನವಾದವುಗಳನ್ನು ಕೆಡವಿದರೆ ಅದು ಬೇಟೆಯ ಉಚ್ಚಾಂಕ! ಪಾಂಡುವಿಗೆ ಬೇಟೆಯ ಅಮಲು ಏರಿತು. ಅವನೆಸೆದ ಅಲಗಿನ ಗುರಿ ತಪ್ಪಲಿಲ್ಲ. ಅದು ಗುರಿ ತಪ್ಪುತ್ತಿದ್ದರೇ ಚೆನ್ನಾಗಿತ್ತು.

ಏಕೆಂದರೆ ಅಲ್ಲಿ ಇದ್ದುದು ಯುವ ಋಷಿದಂಪತಿ; ಜಿಂಕೆಗಳ ಜೋಡಿಯಲ್ಲ. ತನ್ನ ಬೇಟೆ ಬಿದ್ದಲ್ಲಿಗೆ ಪಾಂಡು ನಡೆದು ನೋಡಿದರೆ ಎರಡು ಜೀವಗಳೂ ಸಾವಿನ ಮುನ್ನದ ಏದುಸಿರುಬಿಡುತ್ತಿದ್ದರು! ಹೇಳಲಾಗದ ನೋವಿನಲ್ಲಿ ನರಳುತ್ತಿದ್ದರು. ಮೃಗಗಳ ಮೈಯಲ್ಲಿ ಈ ಮನುಷ್ಯಜೀವಿಗಳು ಒಡಗೂಡಿದ್ದರು! ಆಘಾತವಾಗಿ ಬಿಟ್ಟಿತ್ತು.

ಮನುಷ್ಯಜೀವಿಗೆ ದ್ವಂದ್ವ ತಪ್ಪಿಲ್ಲವೇನೋ. ತಪ್ಪಿದ್ದಲ್ಲವೇನೋ. ಆದುದರಿಂದಲೇ, ದ್ವಂದ್ವವನ್ನು ಮೀರಲಾಗದೆ, ಮರೆಯಲಾದರೂ ಆದೀತೆಂದು ಅನ್ಯ ಉಪಾಯಗಳಿಗೆ ಮನುಷ್ಯ ಮೊರೆಹೊಗುತ್ತಾನೇನೋ. ‘ಕಾಮ’ದಲ್ಲೂ ಮನುಷ್ಯಜೀವಿಗೆ ದ್ವಂದ್ವ ತಪ್ಪಿದ್ದಲ್ಲ. ಏಕೆಂದರೆ ಅಲ್ಲಿ ಮೈ–ಮನಗಳ ಜೊತೆ ಅಹಂಕಾರವೂ ಬೆರೆತೇ ಇರುತ್ತದೆ. ಎರಡು ಜೀವಗಳು ಪರಸ್ಪರ ಅರ್ಪಿತವಾಗುವುದು ಅಪೂರ್ವ.

ಒಂದು ಇನ್ನೊಂದನ್ನು ತನ್ನ ವಶದಲ್ಲಿರಿಸಿಕೊಳ್ಳುವ ಪ್ರಯಾಸ. ಸ್ಥೂಲವಾಗಿಯೋ ಸೂಕ್ಷ್ಮವಾಗಿಯೋ ನಡೆದೇ ಇರುತ್ತದೆ. ಸಂಸಾರದ ಉದ್ದಕ್ಕೆ ಹೀಗೆ ನಡೆದಿರಲಾಗಿ ಕಾಮದಲ್ಲಿ ಇದು ಹಾಜರಾಗುವುದಿಲ್ಲವೆ? ಹಾಗಾದರೆ ಈ ದ್ವಂದ್ವವನ್ನು ಮೀರುವುದು ಹೇಗೆ? ಮೀರಿದರೆ ಪ್ರಾಣಿಯಂತೆ ಮೀರಬೇಕು. ಮೃಗಕ್ಕೆ ದ್ವಂದ್ವವಿಲ್ಲ, ಇಬ್ಬಗೆಯಿಲ್ಲ. ಅದು ನಿಸರ್ಗದ ಪ್ರೇರಣೆಗೆ ಪೂರ್ತಿ ಮೈಯ್ಯೊಡ್ಡುತ್ತದೆ. 

ನಡುವೆ ನುಸುಳುವ ಯಾವ ಅಂಶಗಳೂ ಲೆಕ್ಕಾಚಾರಗಳೂ ಇಲ್ಲ. ಅಥವಾ ಇದ್ದರೂ ಅವೆಲ್ಲ ಆ ಪ್ರೇರಣೆಯೊಳಗೇ ಇರುತ್ತದೆ. ಮೃಗಕ್ಕೆ ಇಂದ್ರಿಯಗಳು ಮಾತ್ರ ಪ್ರಮಾಣ. ಅದರ ಎಲ್ಲ ಶಕ್ತಿಗಳೂ ಇಂದ್ರಿಯಾನುಸಾರಿ. ಆದುದರಿಂದಲೇ ಮೃಗದ ಕಾಮ ವಿಜೃಂಭಣೆ ಮನುಷ್ಯರಿಗೆ ಒಂದು ಅಚ್ಚರಿ! ‘ಕಾಡು ಕುದುರೆಯ ಕೆನೆತ ಕೊಬ್ಬು’ ಒಂದು ಆಕರ್ಷಣೆ.

ಚಾರ್ವಾಕ ತನ್ನ ದರ್ಶನದಲ್ಲಿ ಪ್ರತ್ಯಕ್ಷವನ್ನು ಮಾತ್ರ ಪ್ರಮಾಣ ಎನ್ನುತ್ತಾನೆ. ಉಳಿದೆಲ್ಲ ದಾರ್ಶನಿಕರೂ – ಕ್ಷಣಿಕವಾದಿಗಳಾದ ಬೌದ್ಧರೂ ಸೇರಿ – ಅಂಗೀಕರಿಸಿದ ‘ಅನುಮಾನ ಪ್ರಮಾಣ’ವನ್ನು ‘ವ್ಯಾಪ್ತಿ’ಯನ್ನು ವಿಶಾಲವಾದ ಅರ್ಥದಲ್ಲಿ ಖಚಿತವಾಗಿ ನಿರ್ಣಯಿಸಲಾಗುವುದಿಲ್ಲ ಎನ್ನುವ ಕಾರಣವನ್ನೊಡ್ಡಿ ಚಾರ್ವಾಕ ನಿರಾಕರಿಸುತ್ತಾನೆ. ಸರಿ–ತಪ್ಪುಗಳ ಜಿಜ್ಞಾಸೆಯ ಮಾತಲ್ಲ. ಚಾರ್ವಾಕನಿಗೆ ‘ಅನುಭವ’ದ ನಡುವೆ ನುಸುಳುವ ಇತರ ವಿಷಯಗಳೆಲ್ಲ ಅನುಭವದ ಗಾಢತೆಯನ್ನೇ ತೆಳ್ಳಗೆ ಮಾಡುವಂತೆ ಅನ್ನಿಸುತ್ತದೆ.

ದ್ವಂದ್ವವಿಲ್ಲದ ಅನುಭವ ಬೇಕೆಂದರೆ – ಅದು ಯಾರಿಗೆ ಬೇಡ? – ಪ್ರತ್ಯಕ್ಷ ಮಾತ್ರ ಪ್ರಮಾಣವೆನ್ನುವಂತೆ ಬದುಕಬೇಕು ಎನ್ನುತ್ತಾನೆ. ಇದು ಸುಲಭದ ಮಾತಲ್ಲ. ಇದನ್ನು ಸಾಧಿಸಬೇಕಾದರೆ ಪ್ರಕೃತಿಯ ಒಳಹೊಕ್ಕು ಬದುಕಬೇಕಾಗುತ್ತದೆ. ದ್ವಂದ್ವಗಳು ನಮ್ಮ ಮನೋ–ಬುದ್ಧಿಗಳ ಸೃಷ್ಟಿ ಎಂದು ತಿಳಿಯಬೇಕಾಗುತ್ತದೆ. ಎಲ್ಲದಕ್ಕಿಂತ ಹೆಚ್ಚು ಪ್ರಾಣಿಗಳ ಬದುಕಿನ ಸುಖ ಮನುಷ್ಯರಿಗೇಕಿಲ್ಲ ಎಂದು ಪ್ರಾಮಾಣಿಕವಾಗಿ ಕೇಳಿಕೊಳ್ಳಬೇಕಾಗುತ್ತದೆ.

ಋಷಿ, ಮೃಗವಾಗಿ ಕ್ರೀಡಿಸುತ್ತಿದ್ದ. ಈಗ ಕೆಡೆದುಬಿದ್ದಿದ್ದಾರೆ – ಇಬ್ಬರೂ. ದುರಂತ ನಡೆದುಬಿಟ್ಟಿದೆ. ತನ್ನ ಬಳಿ ಬಂದು ನಿಂತ ಬೇಟೆಗಾರ ಪಾಂಡುವಿನ ಬಳಿ, ರಕ್ತ ಸುರಿಸುತ್ತಿದ್ದ ಋಷಿಕುಮಾರ ತನ್ನ ಪ್ರಿಯತಮೆಯನ್ನು ತಬ್ಬಿಕೊಳ್ಳುತ್ತ ನುಡಿದ: ಯಾರಾದರೂ ಇಂಥ ಕೆಲಸ ಮಾಡುತ್ತಾರೇನು? ನೀನು ಬೇಟೆಯಾಡಲು ಬಂದವನೇನೋ ನಿಜ. ಜಿಂಕೆಗಳನ್ನು ಬೇಟೆಯಾಡುವೆ ಎನ್ನುವುದೂ ನಿಜ.

ಆದರೆ ಕಾಮದಲ್ಲಿ ಒಡಗೂಡಿರುವ ಜಿಂಕೆಗಳನ್ನು – ಜಿಂಕೆಗಳೆಂದೇನು? ಯಾವುದೇ ಜೀವಿಗಳನ್ನು – ಅವುಗಳ ರತಿಯನ್ನು ನೋಡ ನೋಡುತ್ತಿದ್ದಂತೆ ಕೊಲ್ಲುತ್ತಾರೇನು? ನಿಜಕ್ಕಾದರೆ ಬೇಟೆಗಾರನಿಗೆ ಮೃಗಗಳ ಮೇಲಿನ ಕಾಳಜಿ ತೀವ್ರವಾಗಿರುತ್ತದೆ. ಆ ಕಾಳಜಿಯ ರೀತಿಯೇ ಬೇರೆಯಾಗಿರುತ್ತದೆ. ಆದರೆ ನಿನ್ನಂಥ ನೃಶಂಸನನ್ನು ಕ್ರೂರಿಯನ್ನು ನಾನಿದುವರೆಗೆ ನೋಡಿಲ್ಲ.

‘ದ್ವಯೋಃ ನೃಶಂಸಕರ್ತಾರಂ ಅವಶಂ ಕಾಮಮೋಹಿತಂ ಜೀವಿತಾಂತಕರೋ ಭಾವಃ ಏವಮೇವಾಗಮಿಷ್ಯತಿ’. ಕಾಮಮೋಹಿತರಾದ ನಮಗಿಬ್ಬರಿಗೂ ಸಾವಿನಂತೆ ಬಂದೆರಗಿದೆ ನೀನು. ನಮ್ಮ ನೋವು ನಿನಗೆ ತಿಳಿಯಬೇಕು. ತಿಳಿಯಬೇಕಾದರೆ ನಮ್ಮ ಪಾಡು ನಿನ್ನದೂ ಆಗಬೇಕು. ಅಂದರೆ ನಿನಗೆ ಮತ್ತು ನೀನು ಸೇರಲಿಚ್ಛಿಸುವ ಸ್ತ್ರೀ – ಇಬ್ಬರಿಗೂ ಬದುಕುವ ಹಕ್ಕು ಇಲ್ಲ. ರತಿಯ ಇಚ್ಛೆಯಿಂದ ನೀನು ಹೆಣ್ಣನ್ನು ಸೋಕಿದರೆ ಸಾಕು – ನಿನಗೆ ಮರಣವೇ ಉಂಟಾಗಲಿ.

ಈ ಮಾತುಗಳನ್ನು ಕೇಳುತ್ತಿದ್ದಂತೆ ಪಾಂಡು ನಿಸ್ತೇಜನಾಗಿ ಬಿಳಿಚಿಕೊಂಡ. ಯಾವುದೋ ರತಿಭಂಗದಿಂದಲೆಂಬಂತೆ ಅವನು ಬಿಳಿಚಿಕೊಂಡೇ ಹುಟ್ಟಿದ್ದ ಕೂಡ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT