ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಣಿಯದ ಚೈತನ್ಯದ ವೈರುಧ್ಯಗಳ ಕಥನ

Last Updated 12 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ
ಆಡಳಿತದ ಪರ್ಯಾಯ ಪ್ರಯತ್ನಗಳ ಹುಡುಕಾಟ ನಡೆಸಿದ್ದರೇ ಜಯಲಲಿತಾ ?
 
*
ತಮಿಳುನಾಡಿನ ಪಿತೃಪ್ರಧಾನ ಹಾಗೂ ಲಿಂಗತಾರತಮ್ಯದ ರಾಜಕೀಯ ವಲಯದಲ್ಲಿ ಲಿಂಗತ್ವ ರಾಜಕಾರಣವನ್ನು ಬದಿಗಿಟ್ಟು ಜಯಲಲಿತಾ ಅವರ ಹೋರಾಟ, ಸಾಧನೆಗಳನ್ನು ವಿಶ್ಲೇಷಿಸುವುದು ಅಸಾಧ್ಯ. ಇಂತಹ ತಾರತಮ್ಯದ ನೀತಿಗಳ ಕುರಿತಾಗಿ ಸ್ವತಃ ಜಯಲಲಿತಾ ಅವರೂ ಅನೇಕ ಸಂದರ್ಭಗಳಲ್ಲಿ ಮಾತನಾಡಿದ್ದಾರೆ.
 
‘ತಮಿಳು ಭಾಷೆ ಹಾಗೂ ಭಾರತೀಯ ಸಂವಿಧಾನ ಮಹಿಳೆಗೆ ಅನ್ಯಾಯ ಎಸಗಿದೆ’ ಎಂದು 2003ರ ಏಪ್ರಿಲ್ ತಿಂಗಳಲ್ಲಿ ತಮಿಳುನಾಡು ವಿಧಾನಸಭೆಯಲ್ಲಿ ಅವರು ನುಡಿದಿದ್ದರು. ಶಾಸಕ ಅಥವಾ ಸಚಿವರು ಭಾರತೀಯ ನಾಗರಿಕರಾಗಿ ಅಧಿಕಾರದ ಅಥವಾ ಗೌಪ್ಯತೆಯ ಪ್ರಮಾಣವಚನ ಸ್ವೀಕರಿಸಬೇಕೆಂದು ಸಂವಿಧಾನ ಹೇಳುತ್ತದೆ. ಆದರೆ  ‘ಸಿಟಿಜನ್ ’ ಅನ್ನುವ ಇಂಗ್ಲಿಷ್ ಪದಕ್ಕೆ  ತಮಿಳು ಅನುವಾದ ‘ಕುಡಿಮಗನ್’ ಎಂಬುದರಲ್ಲಿ ಪುರುಷಪ್ರಾಧಾನ್ಯತೆ ವ್ಯಕ್ತವಾಗುತ್ತದೆ ಎಂದು ಮುಖ್ಯಮಂತ್ರಿ ಜಯಲಲಿತಾ ಹೇಳಿದ್ದರು. ‘ಕುಡಿಮಗನ್’ ಸ್ತ್ರೀಲಿಂಗ ಬಹುಶಃ ‘ಕುಡಿಮಗಳ್’ ಎಂದಾಗಿರಬಹುದಿತ್ತು. ಆದರೆ ತಾನು ‘ಭಾರತೀಯ ಕುಡಿಮಗಳ್’ ಎಂದು ಅಧಿಕಾರ ಸ್ವೀಕರಿಸಲು ಸಾಧ್ಯವಾಗಲಿಲ್ಲ. ಏಕೆಂದರೆ ಅಂತಹ ಪದ ತಮಿಳಿನಲ್ಲಿ ಇಲ್ಲ ಎಂದು ಹೇಳಲಾಯಿತು. ಇದು ಮಹಿಳೆಗೆ ಎಸಗಲಾಗಿರುವ ದೊಡ್ಡ ಅನ್ಯಾಯ. ಇಂತಹ ಅಸಮಾನತೆ ವಿರುದ್ಧ ತಾನು ಹೋರಾಡುವುದಾಗಿ  ಅವರು ಆಗ  ಹೇಳಿದ್ದರು.
 
‘ಈವ್ ಟೀಸಿಂಗ್’ ಪದದ ಬಗೆಗೂ ಜಯಲಲಿತಾ ಅಸಮಾಧಾನ ತೋರಿದ್ದರು. ಇದು ಮಹಿಳೆಯನ್ನು ಹಗುರವಾಗಿ ಬಿಂಬಿಸುತ್ತದೆ. ಇದನ್ನು ಸರಿಪಡಿಸಲು ತಮ್ಮ ಸರ್ಕಾರ ತಿದ್ದುಪಡಿ ತಂದಿದೆ ಎಂದಿದ್ದ ಅವರು ‘ಈವ್ ಟೀಸಿಂಗ್ ಕಾಯಿದೆಯನ್ನು ಮಹಿಳೆ ಮೇಲಿನ ಕಿರುಕುಳ ಕಾಯಿದೆಯಾಗಿ ಮರುನಾಮಕರಣ ಮಾಡಲಾಗಿದೆ’ ಎಂದಿದ್ದರು. 
 
ತಮ್ಮ ಅಧಿಕಾರದ ಅವಧಿಯಲ್ಲಿ ರಾಜ್ಯದಲ್ಲಿ ಅನೇಕ ಮಹಿಳಾ ಪೊಲೀಸ್ ಠಾಣೆಗಳನ್ನು ಆರಂಭಿಸಿದ ಹೆಗ್ಗಳಿಕೆ ಅವರದು. ಮಹಿಳೆಯರೇ ನಿರ್ವಹಿಸುವ ಬ್ಯಾಂಕ್‌ ಹಾಗೂ ಲೈಬ್ರರಿಗಳನ್ನು ಆರಂಭಿಸಿದ್ದರು. ಶಾಲೆಗಳಲ್ಲಿ ದಾಖಲಾಗುವಾಗ ತಂದೆ ಹೆಸರನ್ನು ವಿದ್ಯಾರ್ಥಿಗಳು ಘೋಷಿಸಬೇಕಾದ ಅಗತ್ಯವನ್ನು ಇತ್ತೀಚೆಗೆ ರದ್ದು ಮಾಡಿದ್ದರು. ‘ಬೇಟಿ ಬಚಾವೊ, ಬೇಟಿ ಪಡಾವೊ’   ಯೋಜನೆ ರಾಷ್ಟ್ರದಲ್ಲಿ ಈಗ ಚಾಲ್ತಿಯಲ್ಲಿದೆ. 1991–96ರ ಅವಧಿಯಲ್ಲಿ ತಮಿಳುನಾಡು ಮುಖ್ಯಮಂತ್ರಿಯಾಗಿ ಮೊದಲ ಬಾರಿಗೆ ಜಯಲಲಿತಾ ಅಧಿಕಾರ ವಹಿಸಿಕೊಂಡಾಗ ‘ತೊಟ್ಟಿಲು  ಶಿಶು ಯೋಜನೆ’ಯನ್ನು 1992ರಲ್ಲಿ ಆರಂಭಿಸಿದ್ದರು. ಮದುರೈ ಜಿಲ್ಲೆಯ ಉಸಿಲಂಪಟ್ಟಿ ಹೆಣ್ಣುಶಿಶು ಹತ್ಯೆಗಳಿಂದಾಗಿ ಆಗ ಕುಖ್ಯಾತಿ ಗಳಿಸಿತ್ತು. ಹೀಗಾಗಿ ಬೇಡದ ಶಿಶುಗಳನ್ನು ತೊಟ್ಟಿಲಲ್ಲಿಡಲು ಅನುವು ಮಾಡಿಕೊಡುವಂತಹ ಯೋಜನೆಯಾಗಿತ್ತು ಅದು. ಸೇಲಂ ಮುಂತಾದೆಡೆ ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರ, ಅನಾಥಾಲಯಗಳಲ್ಲಿ ತೊಟ್ಟಿಲುಗಳನ್ನು ಇಟ್ಟು, ಬೇಡದ ಮಕ್ಕಳನ್ನು ಸರ್ಕಾರಕ್ಕೆ ನೀಡಿ ಎಂದು ಕರೆನೀಡಲಾಗಿತ್ತು. ವಿಪರ್ಯಾಸ ಎಂದರೆ ಈ ಯೋಜನೆ ಜಾರಿಯಾದ 24 ವರ್ಷಗಳ ನಂತರ ಈಗಲೂ ಚಾಲ್ತಿಯಲ್ಲಿದೆ. ಶಿಶುಗಳನ್ನು ತೊರೆಯದಿರುವಷ್ಟು ಜಾಗೃತಿ ಜನರಲ್ಲಿ ಇನ್ನೂ ಮೂಡಿಲ್ಲ.  
 
ಸಂಪ್ರದಾಯಬದ್ಧ ತಮಿಳು ಸಮಾಜದಲ್ಲಿ ಒಂಟಿ ಮಹಿಳೆಯಾಗಿ ಹಾಗೂ ಬ್ರಾಹ್ಮಣ ವಿರೋಧಿ ದ್ರಾವಿಡ ಪಕ್ಷದಲ್ಲಿ ಬ್ರಾಹ್ಮಣ ಮಹಿಳೆಯಾಗಿ ಜಯಲಲಿತಾ  ಸಾಧನೆ ದೊಡ್ಡದು. ಸಂಕಷ್ಟದಲ್ಲಿ ಸಿಲುಕಿದ ಹೆಣ್ಣು, ತಮಿಳು ರಾಜಕಾರಣದಲ್ಲಿ ಆರಾಧ್ಯ ದೈವವಾಗಿ ಬೆಳೆದ ಕಥೆ ಇದು. ಜಯರಾಮ್ ಜಯಲಲಿತಾ ಅವರದು ಗೆಲುವಿನ ಕಥಾನಕ. ಆದರೆ ಅದರೊಳಗೇ ಹೃದಯ ಬಿರಿಯುವ ಭಾವನಾತ್ಮಕ ಕಥೆಯೂ ಅಡಕವಾಗಿದೆ. 68ನೇ ವಯಸ್ಸು,  ಭಾರತದ ರಾಜಕಾರಣದ ಸಂದರ್ಭದಲ್ಲಿ ಅತ್ಯುನ್ನತ ಹುದ್ದೆಗಳಿಗೆ ಏರುವ ವಯಸ್ಸು. ಆ ಅರ್ಥದಲ್ಲಿ  ಕಿರಿಯ ವಯಸ್ಸಿಗೇ ಅಧಿಕಾರ ರಾಜಕಾರಣದಲ್ಲಿ ಸಕ್ರಿಯವಾಗಿದ್ದ ಸಂದರ್ಭದಲ್ಲೇ  ಅವರು ಬದುಕಿಗೆ ವಿದಾಯ ಹೇಳಿದ್ದಾರೆ.  
 
ಶಿಕ್ಷಣ ಹಾಗೂ ಉದ್ಯೋಗದಲ್ಲಿ ಪರಿಶಿಷ್ಟ ಜಾತಿ, ಪಂಗಡ ಹಾಗೂ ಹಿಂದುಳಿದ ವರ್ಗಗಳಿಗೆ ಶೇ 69ರ ಮೀಸಲಾತಿಯನ್ನು ತಮಿಳುನಾಡಿನಲ್ಲಿ ಜಾರಿಗೊಳಿಸುವಲ್ಲಿ ಜಯಲಲಿತಾ ಪಾತ್ರ ಮುಖ್ಯವಾದದ್ದು. ಸಬ್ಸಿಡಿ ವಿರೋಧಿ ಮಾರುಕಟ್ಟೆ ಪರ ನೀತಿಗೆ ಸತತವಾಗಿ ಸವಾಲೆಸೆದವರು ಅವರು. ಅದು ಅವರ ರಾಜಕೀಯ ಬದುಕಿನ ಸಂದೇಶ. ಆರ್ಥಿಕತೆಗಿಂತ ಸಾಮಾಜಿಕ ಭದ್ರತೆ ಯೋಜನೆಗಳಿಗೆ ಆದ್ಯತೆ ನೀಡಿದರು. ಜಯಲಲಿತಾಗಿಂತ ಹಿಂದೆಯೇ  ಇದ್ದಂತಹ  ದ್ರಾವಿಡ ಪಕ್ಷದ  ಆರಂಭದ ಮುಖ್ಯಮಂತ್ರಿಗಳ ಕೊಡುಗೆಯಾದ ಮಧ್ಯಾಹ್ನದ ಉಚಿತ  ಬಿಸಿಯೂಟ ಈಗ ಭಾರತದಾದ್ಯಂತ ನೀತಿಯೇ ಆಗಿದೆ. ಮಧ್ಯಾಹ್ನದ ಬಿಸಿಯೂಟ ಮುಂದುವರಿಕೆ ಜೊತೆಗೆ 1 ರೂಪಾಯಿಗೆ ಇಡ್ಲಿ ಹಾಗೂ 5 ರೂಪಾಯಿಗೆ ಅನ್ನ, ಸಾಂಬಾರ್ ನೀಡುವ ಅಮ್ಮಾ ಕ್ಯಾಂಟೀನ್ ಆರಂಭಿಸಿದರು ಜಯಲಲಿತಾ.  ಅಮ್ಮಾ ನೀರು, ಅಮ್ಮಾ ಔಷಧ,  ಅಮ್ಮಾ ಉಪ್ಪು ಯೋಜನೆಗಳ ಮೂಲಕ  ಸಬ್ಸಿಡಿ ದರದಲ್ಲಿ ಜನರಿಗೆ ಉತ್ಪನ್ನಗಳ ಪೂರೈಕೆಗೆ ಅನುವು ಮಾಡಿಕೊಟ್ಟರು. ಈ ಮೂಲಕ ದಿನನಿತ್ಯದ ಸಾಧಾರಣ ಸಂಗತಿಗಳಲ್ಲಿ ಜನರ ಬದುಕಿಗೆ ಹತ್ತಿರವಾದರು.  ಹಾಗೆಯೇ  ಉಚಿತ  ಅಮ್ಮಾ ಲ್ಯಾಪ್‌ಟಾಪ್,  ಉಚಿತ ಮಿಕ್ಸಿ, ಗ್ರೈಂಡರ್, ಟೇಬಲ್ ಫ್ಯಾನ್,  ಇತ್ಯಾದಿ ಕೊಡುಗೆಗಳ ಸುರಿಮಳೆಗೈದರು  ಅವರು. ಈ ಉಚಿತಗಳ ಪಟ್ಟಿಯಲ್ಲಿ ಮದುವೆಗೆ ಚಿನ್ನವೂ ಸೇರಿದೆ.  ಈ ಉಚಿತ ಕೊಡುಗೆಗಳಿಗೆ ಚುನಾವಣಾ ಆಯೋಗ ಹಾಗೂ ಸುಪ್ರೀಂ ಕೋರ್ಟ್ ಆಕ್ಷೇಪ ತೋರಿತ್ತು.
 
ನಿಜ ಹೇಳಬೇಕೆಂದರೆ, ಜನಸಮುದಾಯಕ್ಕೆ ಅನುಗ್ರಹಗಳನ್ನು ನೀಡುವ ಶೈಲಿ ತಮಿಳುನಾಡಿನ ಜನಪ್ರಿಯ ರಾಜಕಾರಣದ ಲಕ್ಷಣ. ಹೀಗಾಗಿ ಈ ಸಿದ್ಧ ಮಾದರಿಗೆ ಜಯಲಲಿತಾ ಅವರೂ ಕಟ್ಟುಬಿದ್ದರು. ಈ ಪ್ರಕ್ರಿಯೆಯಲ್ಲಿ ಅವರು ಮಹಿಳೆ ಎಂಬುದು ಹಾಗೂ ಅವರ ಜಾತಿ, ಜನಮಾನಸದಲ್ಲಿ  ಹಿನ್ನೆಲೆಗೆ ಸರಿಯುವುದು ಮುಖ್ಯವಾಗಿತ್ತು ಎನಿಸುತ್ತದೆ. ಅಮ್ಮನ ಸಂಕೇತ ಈ ಉದ್ದೇಶಕ್ಕೆ ಸರಿಯಾಗಿಯೇ ಬಳಕೆಯಾಯಿತು. ಔದಾರ್ಯದ ಮೂರ್ತಿಯಾಗಿ ವೈಭವೀಕರಣಗೊಂಡ ಅಮ್ಮನ ಮಾದರಿಯ ಪ್ರಚಾರ, ಪಿತೃಪ್ರಧಾನ ಸಂಸ್ಕೃತಿಯೊಳಗೆ ಮಾನ್ಯತೆ ಗಳಿಸಿಕೊಳ್ಳುತ್ತದೆ. ಅಮ್ಮನ ಮಾದರಿಯನ್ನು ರಾಜಕೀಯ ಅಧಿಕಾರದ ಮೆಟ್ಟಿಲುಗಳನ್ನು ಏರಲು  ಜಯಲಲಿತಾ ಬಳಸಿಕೊಂಡರೆ ಎಂಬುದು ಪ್ರಶ್ನೆ. ಹೀಗಾಗಿ ಮಹಿಳಾ ಸಬಲೀಕರಣಕ್ಕೆ ಅವರು ಕೈಗೊಂಡ ಕ್ರಮಗಳು ಬರೀ ಸಾಂಕೇತಿಕವಲ್ಲವೇ ಎಂದೂ ಅನಿಸುತ್ತದೆ.
 
‘ಆಡಳಿತದ ವಿಚಾರಕ್ಕೆ ಬಂದರೆ ಲಿಂಗತ್ವದ ವಿಚಾರ ಪ್ರಸ್ತುತವಾಗುವುದಿಲ್ಲ. ಪ್ರಜಾಪ್ರಭುತ್ವ ತತ್ವಗಳನ್ನು ಉಲ್ಲಂಘಿಸಿದಲ್ಲಿ ಅದಕ್ಕೆ ಸಮರ್ಥನೆಗೆ ಅವಕಾಶವೇ ಇರುವುದಿಲ್ಲ. ಆದರೆ ಬಾಲ್ಯದಿಂದ ವ್ಯಕ್ತಿಯಾಗಿ ರೂಪುಗೊಳ್ಳುವವರೆಗೆ ಜಯಲಲಿತಾ ಬದುಕಿನಲ್ಲಿ ಲಿಂಗತ್ವ ಮುಖ್ಯವಾಗುತ್ತದೆ ಎಂಬುದನ್ನು ಕಂಡುಕೊಂಡೆ’  ಎಂದು ‘ಅಮ್ಮಾ : ಜಯಲಲಿತಾಸ್ ಜರ್ನಿ ಫ್ರಮ್ ಮೂವಿ ಸ್ಟಾರ್ ಟು ಪೊಲಿಟಿಕಲ್ ಕ್ವೀನ್’ ಪುಸ್ತಕದ ಲೇಖಕಿ ವಾಸಂತಿ ಹೇಳಿಕೊಂಡಿದ್ದಾರೆ. ‘ಜಯಲಲಿತಾ ವರ್ತನೆ, ಸ್ವಭಾವಗಳ ಕುರಿತಂತೆ   ಸೂಕ್ಷ್ಮ ವಿವರಗಳನ್ನು ನೀಡಿದವರು ಫಿಲಂ ನ್ಯೂಸ್‌ನ ಆನಂದನ್ ಹಾಗೂ ಭಾಷಣ ಬರಹಗಾರ ಶೋಲೈ. ‘ಆಕೆಯ ಸಂಕಟಗಳನ್ನು ಈ ಪುರುಷರು ಅರ್ಥ ಮಾಡಿಕೊಂಡಿದ್ದರು .  ಆಕೆ ಯಾಕೆ ಹಾಗೆ ವರ್ತಿಸುತ್ತಾರೆ? ಆಕೆ ಏನು ಬಯಸಿದ್ದರು? ಆಕೆಯ ದುಃಖ ಏನು ಎಂಬುದು ಅವರಿಗೆ ಗೊತ್ತಿತ್ತು. ಹೆಣ್ಣೆಂಬ ಕಾರಣಕ್ಕಾಗಿಯೇ ಬಹಳಷ್ಟು ಕಷ್ಟಗಳನ್ನು ಜಯಲಲಿತಾ ಎದುರಿಸಬೇಕಿತ್ತು. ಪುರುಷನಾಗಿದ್ದಲ್ಲಿ ಅವರಿಗೆ ಹೆಚ್ಚು ಸುಲಭವಾಗಿರುತ್ತಿತ್ತು ಎಂಬುದು ಅವರಿಗೆ ಅರ್ಥವಾಗಿತ್ತು’ ಎಂಬುದನ್ನೂ ವಾಸಂತಿ ಹೇಳಿದ್ದಾರೆ.
 
1982ರ ಜೂನ್ 4ರಂದು ಒಂದು ರೂಪಾಯಿ ನೀಡಿ ಆಗ ಆಡಳಿತ ಪಕ್ಷವಾಗಿದ್ದ ಎಐಎಡಿಎಂಕೆ ಪಕ್ಷಕ್ಕೆ ಜಯಲಲಿತಾ ಸೇರ್ಪಡೆಯಾಗಿದ್ದರು. 1984ರ ಮಾರ್ಚ್ 24ರಂದು ರಾಜ್ಯಸಭೆಗೆ ನಾಮಕರಣಗೊಂಡರು. ರಾಜ್ಯಸಭೆಯಲ್ಲಿ ಅವರಿಗೆ ನೀಡಲಾದ ಸೀಟಿನ ಸಂಖ್ಯೆ 185. 1963ರಲ್ಲಿ ಅಣ್ಣಾ ದೊರೈ ಅವರು ಎಂಪಿಯಾಗಿದ್ದಾಗಲೂ ಇದೇ ಸೀಟು ಅವರಿಗೆ ನೀಡಲಾಗಿತ್ತು. ಜನರ ಸೇವೆ ಮಾಡಲು ರಾಜಕೀಯ ಸೇರಿರುವುದಾಗಿ ಜಯಲಲಿತಾ ಹೇಳಿದ ಮಾತನ್ನು ಡಿಎಂಕೆ ತಿರುಚಿ ಕೆಟ್ಟದಾಗಿ ಅವರ ವಿರುದ್ಧ ಬಳಸಿತ್ತು. ‘ಜನ ಸೇವೆ ಮಾಡಲು ತನ್ನ ದೇಹವನ್ನು ಜಯಲಲಿತಾ ನೀಡಲಿದ್ದಾರೆ, ತಮಿಳುನಾಡು ಯುವಕರು ಇದರ ಪ್ರಯೋಜನ ಪಡೆಯಲು ಮುಂದೆ ಬರಬೇಕು’ ಎಂಬಂತಹ ಮಾತುಗಳನ್ನಾಡಿದ್ದು ರಾಜಕೀಯ ರಂಗದಲ್ಲಿರುವ ಕೀಳು ಮನಸ್ಥಿತಿಗಳಿಗೆ ದ್ಯೋತಕ.
 
ರಾಜಕೀಯವಾಗಲೀ ಅಥವಾ ಸಿನಿಮಾ ಸೇರುವುದಾಗಲೀ ಜಯಲಲಿತಾ ಅವರಿಗೆ ಇಷ್ಟವಿರಲಿಲ್ಲ. ಆಯ್ಕೆಯ ಅವಕಾಶ ಇದ್ದಿದ್ದರೆ ವಕೀಲೆ ಅಥವಾ ಅಕಾಡೆಮಿಷಿಯನ್ ಆಗಿರುತ್ತಿದ್ದೆ ಎಂದು ಸಿಮಿ ಗರೆವಾಲ್‌ಗೆ ನೀಡಿರುವ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ ಅವರು. ‘ನಟಿಯ ಮಗಳಾಗಿರುವುದು ಸುಲಭವಲ್ಲ’ ಎಂದು ಅಂತರಂಗವನ್ನು ತೋಡಿಕೊಂಡಿದ್ದಾರೆ. ಕುಟುಂಬದ ಒತ್ತಡಗಳಿಂದಾಗಿ 16ನೇ ವಯಸ್ಸಿಗೇ ಅವರು ಚಿತ್ರರಂಗ ಪ್ರವೇಶಿಸಬೇಕಾಯಿತು. ಜಯಲಲಿತಾಗೆ 23ನೇ ವರ್ಷವಾಗಿದ್ದಾಗ ತಾಯಿಯ ಸಾವು. ತಾಯಿ ಸತ್ತಾಗ ಆ ಸ್ಥಾನವನ್ನು ಆಕ್ರಮಿಸಿಕೊಂಡವರು ಎಂಜಿಆರ್. ಅವರೇ ಎಲ್ಲವೂ ಆದರು. ಪೋಷಕ, ಸಂಗಾತಿ, ಸ್ನೇಹಿತ ಹಾಗೂ ಮಾರ್ಗದರ್ಶಿ. ಎಂಜಿಆರ್ ಅವರು ಜಯಲಲಿತಾರನ್ನು ತಮ್ಮ ರಾಜಕೀಯ  ಶಿಷ್ಯೆಯಾಗಿ ಬೆಳೆಸಿದರು, ಆದರೆ ಎಐಎಡಿಎಂಕೆಯಲ್ಲಿ  ತಮ್ಮ ವಾರಸುದಾರರಾಗಿ ಅವರು ಮುಂದುವರಿಯುವ ಪ್ರಕ್ರಿಯೆಯನ್ನು ಸುಗಮವಾಗಿಸಲು ಯಾವ ಕ್ರಮವನ್ನೂ ಕೈಗೊಳ್ಳಲಿಲ್ಲ. ‘ನಾನು ವಿಚಿತ್ರ ವಾರಸುದಾರಳಾಗಿದ್ದೆ. ಏಷ್ಯಾದಲ್ಲಿ ಹೆಣ್ಣುಮಕ್ಕಳು ಹಾಗೂ ಹೆಂಡತಿಯರು ಮಾತ್ರ ತಮ್ಮ ತಂದೆಯಂದಿರು ಅಥವಾ ಪತಿಯಂದಿರ ರಾಜಕೀಯ ಉತ್ತರಾಧಿಕಾರಿಗಳಾಗಿದ್ದಾರೆ. ನಾನು ಅವೆರಡೂ ಆಗಿರಲಿಲ್ಲ. ಹೀಗಾಗಿ ಪಕ್ಷದ ಪ್ರಶ್ನಾತೀತ ನಾಯಕಿಯಾಗಿ ನನ್ನನ್ನು ನಾನು  ಪ್ರತಿಪಾದಿಸಿಕೊಳ್ಳುವುದು ಅತಿ ದೊಡ್ಡ ಸವಾಲಾಗಿತ್ತು’ ಎಂಬುದನ್ನು ಅವರು ಹೇಳಿಕೊಂಡಿದ್ದಾರೆ. 1989ರಲ್ಲಿ ವಿಧಾನಸಭೆಯಲ್ಲಿ ಜಯಲಲಿತಾ ಸೀರೆಯನ್ನು ಡಿಎಂಕೆ ಶಾಸಕ ಎಳೆದಂತಹ ಘಟನೆಯೂ ನಡೆದುಹೋಯಿತು, ವಿಧಾನಸಭೆಗೆ ಸುರಕ್ಷಿತವಾಗಿ ಮಹಿಳೆಯೊಬ್ಬಳು ಪ್ರವೇಶಿಸಬಹುದೆಂಬ ಸ್ಥಿತಿ ಸೃಷ್ಟಿಯಾಗುವವರೆಗೂ ಇಲ್ಲಿಗೆ ಕಾಲಿಡುವುದಿಲ್ಲ ಎಂದು ಕೋಪಗೊಂಡ ಪಾಂಚಾಲಿಯಂತೆ ಹೊರ ನಡೆಯುತ್ತಾ ಪ್ರತಿಜ್ಞೆ ಮಾಡುತ್ತಾರೆ ಜಯಲಲಿತಾ. 1991ರಲ್ಲಿ  ಚುನಾವಣೆಯಲ್ಲಿ ಗೆದ್ದು  ತಮಿಳುನಾಡಿನ 9ನೇ ಮುಖ್ಯಮಂತ್ರಿಯಾಗಿ ಅತಿಚಿಕ್ಕ ವಯಸ್ಸಿಗೇ ಜಯಲಲಿತಾ ಅಧಿಕಾರ ಸೂತ್ರ ಹಿಡಿಯುತ್ತಾರೆ. ನಂತರ ಒಂದು ಅವಧಿ ಬಿಟ್ಟು ಮತ್ತೊಂದು ಅವಧಿಗೆ ಜಯಲಲಿತಾ ಮುಖ್ಯಮಂತ್ರಿಯಾಗಿದ್ದಾರೆ. 2011ರಿಂದ 2016ರವರೆಗಿನ ಅವಧಿಯಲ್ಲಿ ಮೂರನೇ ಬಾರಿಗೆ ಅವರು ಮುಖ್ಯಮಂತ್ರಿಯಾದರು. 2016ರಲ್ಲೂ 4ನೇ ಬಾರಿಗೆ ಆಡಳಿತ ವಿರೋಧಿ ಅಲೆ ಎದುರಿಸಿ ವಿಜಯ ಸಾಧಿಸಿದ್ದೂ ಸಾಧನೆ.  ಅಧಿಕಾರದ ರಾಜಕಾರಣದಲ್ಲಿ ಭ್ರಷ್ಟಾಚಾರ ಆರೋಪ, ಜೈಲುವಾಸ  ಅನುಭವಿಸಿದರೂ ತನ್ನದೇ ಆಡಳಿತ ಶೈಲಿ ರೂಢಿಸಿಕೊಂಡವರು ಜಯಲಲಿತಾ. ಸಂಪುಟ ಸಹೋದ್ಯೋಗಿಗಳು, ಕಾರ್ಯಕರ್ತರು ಸಾರ್ವಜನಿಕವಾಗಿ ಜಯಲಲಿತಾ ಕಾಲಿಗೆ ಅಡ್ಡಬಿದ್ದು ದೀರ್ಘದಂಡ  ನಮಸ್ಕಾರ ಹಾಕುವ ಮೂಲಕ ಭಕ್ತಿ ಪ್ರದರ್ಶಿಸುವುದೂ ಅವರ ಆಡಳಿತಶೈಲಿಯ ಭಾಗವಾಗಿತ್ತು ಎಂಬುದು ವಿಪರ್ಯಾಸ. 
 
ಸಿಮಿ ಗರೆವಾಲ್ ಜೊತೆ ಮಾತನಾಡುತ್ತಾ, ‘ಮಹಿಳೆಯರನ್ನು ಹೆಚ್ಚು ಸ್ವಾಗತಿಸದ ಕ್ಷೇತ್ರ ಸಿನಿಮಾನೋ ರಾಜಕಾರಣವೋ’ ಎಂಬ ಪ್ರಶ್ನೆಗೆ ಜಯಲಲಿತಾ ನೀಡಿದ ಉತ್ತರ ಧ್ವನಿಪೂರ್ಣವಾದುದಾಗಿತ್ತು. ‘ಚಿತ್ರಗಳಲ್ಲಿ ಒಳ್ಳೆಯದಕ್ಕೋ ಕೆಟ್ಟದಕ್ಕೋ ‘ಗ್ಲಾಮರ್ ಕೋಷಂಟ್’ಗಾಗಿ ಮಹಿಳೆ ಬೇಕು. ಆದರೆ ರಾಜಕಾರಣದಲ್ಲಿ ಸ್ತ್ರೀ ಅಗತ್ಯವೇ ಇಲ್ಲ’ ಎನ್ನುತ್ತಾರೆ. 
 
ನಟಿಯಾಗಿದ್ದ ಹಿನ್ನೆಲೆ ಇದ್ದ ತಮ್ಮ ಸುತ್ತ ಆವರಿಸಿದ್ದ ಲಿಂಗತಾರತಮ್ಯದ ಸರಕೀಕರಣದ ಸಂಕೇತದಿಂದ ಹೊರಬರಲು ಜಯಲಲಿತಾ ಪ್ರಜ್ಞಾಪೂರ್ವಕವಾಗಿ ಹೋರಾಡಿದ್ದಾರೆ. ಪುರುಷ ನಟರು ರಾಜಕಾರಣಿಗಳಾಗಿ ಜನಪ್ರಿಯತೆ ಗಳಿಸಿದರೂ ಮಹಿಳೆಯರ ವಿಚಾರದಲ್ಲಿ ಇದು ಸತ್ಯವಲ್ಲ ಎಂಬುದು ಅವರಿಗೆ ತಿಳಿದಿತ್ತು. ಹೀಗಾಗಿ ವೇಷಭೂಷಣ ಬದಲಿಸಿಕೊಂಡರು. ಮಹಿಳೆಗಿರುವ ಸಶಕ್ತ ಪಾತ್ರ ಅಮ್ಮನ ಪಾತ್ರ ಅಳವಡಿಸಿಕೊಂಡು ‘ಅಮ್ಮ’ನಾದರು. ರಾಜ್ಯವನ್ನು ಪೊರೆಯುವ ಅಮ್ಮನಾದರು. ಕಾಲಕ್ರಮೇಣ ಅಮ್ಮ ಎಂಬುದು ಬ್ರಾಂಡ್ ಆಯಿತು. ಅಪಾರ ರಾಜಕೀಯ ಧ್ವನಿ ಪಡೆದುಕೊಂಡಿತು. ರಾಜ್ಯದ ವಿವಿಧೆಡೆಗಳಲ್ಲಿ ಭಿತ್ತಿಪತ್ರಗಳಲ್ಲಿ ಅಮ್ಮನ ಮುಗುಳ್ನಗೆ ವಂದಿಮಾಗಧರನ್ನು ಬೆಳೆಸುತ್ತಾ ವಿರೋಧಿಗಳನ್ನು ಶಿಕ್ಷಿಸುತ್ತಾ ಪ್ರಶ್ನಿಸುವವರೇ ಇಲ್ಲದಂತಾಯಿತು. ತಮ್ಮನ್ನು ಟೀಕಿಸುವ ಪತ್ರಕರ್ತರ ವಿರುದ್ಧ ನೂರಾರು ಮಾನನಷ್ಟ ಮೊಕದ್ದಮೆಗಳನ್ನು ಹಾಕಿ ಸ್ವತಂತ್ರ ಪತ್ರಿಕೆಗಳನ್ನು ಮಟ್ಟ ಹಾಕಿದರು.  
 
ರಾಜಕಾರಣದಲ್ಲಿ ಮಹಿಳೆಯರು ಎದುರಿಸುವ ಕಷ್ಟಗಳಿಗೆ ದ್ಯೋತಕ ಜಯಲಲಿತಾ ಬದುಕು. ಅದೂ ರಾಜಕೀಯವಾಗಿ ಸ್ಥಾಪಿತವಾಗಿರದ ಕುಟುಂಬಗಳಿಂದ ಬಂದ ಮಹಿಳೆ ಎದುರಿಸಬೇಕಾದ  ಅಡೆತಡೆ ಇನ್ನೂ ಹೆಚ್ಚಿನದು. ನಿರಂತರವಾಗಿ ಕ್ಷುಲ್ಲಕೀಕರಣಗೊಳಿಸುವ ಪ್ರಯತ್ನಗಳನ್ನು ಮಹಿಳಾ ರಾಜಕಾರಣಿಗಳು ಎದುರಿಸುತ್ತಲೇ ಇರಬೇಕು.  ಈ ಅಡೆತಡೆ ಎದುರಿಸಲು ಹಾಗೂ ಜನರ ನಡುವೆ ಒಪ್ಪಿತಗೊಳ್ಳಲು ಅಧಿಕಾರದಲ್ಲಿರುವ ಮಹಿಳೆಯರು ಪುರುಷಪ್ರಧಾನ ತತ್ವಗಳನ್ನು ಅಂತರ್ಗತ ಮಾಡಿಕೊಳ್ಳುವುದಲ್ಲದೆ  ಹೆಣ್ತನದ ತತ್ವಗಳಿಗೂ ಬದ್ಧರಾಗಿರಬೇಕಾಗುತ್ತದೆ. ಹೀಗಾಗಿಯೇ ‘ಹೆಣ್ಣಾಗಿ ಕಾಣಿಸಿಕೊ, ಪುರುಷನಂತೆ ವರ್ತಿಸು’. ಇಂತಹದ್ದೊಂದು ರಾಜಕಾರಣದಲ್ಲಿ ಉಳಿದುಕೊಂಡಿದ್ದಲ್ಲದೆ ಯಶಸ್ಸನ್ನೂ ಸಾಧಿಸಿದ್ದು ಜಯಲಲಿತಾ ಹೆಗ್ಗಳಿಕೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT