ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಣ್ಣು ಎಂಬ ಮಾಯೆಯ ಬೆನ್ನಟ್ಟಿ...

Last Updated 10 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಇದು ಅಂತ್ಯದ ಆರಂಭವೇ? ಅಂತ್ಯ ಯಾವಾಗ ಆರಂಭವಾಗುತ್ತದೆ ಎಂದು ಹೇಳುವುದು ಕಷ್ಟ. ಆದರೆ ಅದರ ಸೂಚನೆಗಳು ಮುಂಚೆಯೇ ಸಿಗಲು ತೊಡಗುತ್ತವೆ ಎಂದು ಅನಿಸುತ್ತದೆ. ಆಂಧ್ರ ಪ್ರದೇಶದ ಮುಖ್ಯಮಂತ್ರಿ ವೈ.ಎಸ್.ರಾಜಶೇಖರ ರೆಡ್ಡಿಯವರು ಹೆಲಿಕಾಪ್ಟರ್ ದುರಂತದಲ್ಲಿ ಸಾವು ಅಪ್ಪಿದಾಗಲೇ ಕರ್ನಾಟಕದ ಗಣಿಧಣಿಗಳ ಅಂತ್ಯದ ಆರಂಭವಾಯಿತು. ನಮ್ಮ `ಅದೃಷ್ಟ~ ಕೈ ಕೊಡುವಾಗ ಇನ್ನಾರಿಗೋ ಏನೋ ಆಗುತ್ತದೆ. ಅದರ ಪರಿಣಾಮ ನಮ್ಮ ಮೇಲೆ ಆಗುತ್ತದೆ.

ಜೀವನವೇ ಹಾಗೆ. ಗಣಿಧಣಿಗಳ ವಿಚಾರದಲ್ಲಿಯೂ ಇದು ನಿಜ. ಯಾವಾಗ ಸುಪ್ರೀಂ ಕೋರ್ಟ್‌ನಲ್ಲಿ ಗಣಿ ಅಕ್ರಮಗಳ ವಿಚಾರ ಪ್ರಬಲವಾಗಿ ಪ್ರಸ್ತಾಪವಾಗಿ ನ್ಯಾಯಾಲಯ ಚಾಟಿ ಬೀಸಲು ಆರಂಭಿಸಿತೋ ರೆಡ್ಡಿ ಸೋದರರ `ಅಮ್ಮ~ನಂತೆಯೇ ಇದ್ದ ಸುಷ್ಮಾ ಸ್ವರಾಜ್ ಅಂತರ ಕಾಯ್ದುಕೊಳ್ಳಲು ಆರಂಭಿಸಿದರು. ರೆಡ್ಡಿ ಸೋದರರ ಜತೆಗೆ ನಂಟು ಇಟ್ಟುಕೊಳ್ಳುವುದು ತಮ್ಮ ಮಹತ್ವಾಕಾಂಕ್ಷೆಗೆ ತೊಡಕು ಎಂದು ಅವರಿಗೆ ಅನಿಸಿರಬಹುದು. ಅವರಿಗೆ ಪ್ರಧಾನ ಮಂತ್ರಿ ಹುದ್ದೆಯ ಕನಸು ಬಿದ್ದಿದೆ. ಅಂಥ ಕನಸು ಬೀಳುವಾಗ ವರ್ಚಸ್ಸಿಗೆ ಎಲ್ಲಿಯೂ ಧಕ್ಕೆಯಾಗಿರಬಾರದು ಎಂಬ ಎಚ್ಚರ ಅವರಿಗೆ ಬಂದಂತಿದೆ. ಸುಷ್ಮಾ ಹೀಗೆ ದೂರ ಕಾಯ್ದುಕೊಂಡುದು ರೆಡ್ಡಿ ಸೋದರರ ಜಂಘಾಬಲವನ್ನೇ ಉಡುಗಿಸಿತು. `ಆಸರೆ~ ಕೈ ತಪ್ಪಿ ಹೋದಂತೆ ಆಯಿತು. ಅದರ ಹಿಂದೆಯೇ  ಸುಪ್ರೀಂ ಕೋರ್ಟು ರೆಡ್ಡಿ ಸೋದರರ ಗಣಿ ಲೈಸೆನ್ಸ್ ಅನ್ನೂ ರದ್ದು ಮಾಡಿತು. ಈ ಆಘಾತದಿಂದ ಇನ್ನೂ ಉಸಿರು ತೆಗೆದುಕೊಳ್ಳುವ ಮುಂಚೆಯೇ ಕರ್ನಾಟಕ ಲೋಕಾಯುಕ್ತರ ವರದಿಯೂ ಸಲ್ಲಿಕೆಯಾಯಿತು. ಪೆಟ್ಟುಗಳ ಮೇಲೆ ಪೆಟ್ಟುಗಳು. ಈಗ ಜನಾರ್ದನ ರೆಡ್ಡಿಯವರು ಹೈದರಾಬಾದ್‌ನ ಚಂಚಲಗುಡ ಕೇಂದ್ರ ಕಾರಾಗೃಹದಲ್ಲಿ ಒಬ್ಬ ಸಾಮಾನ್ಯ ಕೈದಿ.

ಎಂಥ ಪತನ? ಕೇವಲ ಎಂಟು ಹತ್ತು ವರ್ಷಗಳಲ್ಲಿ ಒಂದು ಕುಟುಂಬ ಹೀಗೆ ರಾಜಕೀಯವಾಗಿ, ಆರ್ಥಿಕವಾಗಿ ಪ್ರಬಲವಾದುದು ಕರ್ನಾಟಕದ ಇತಿಹಾಸದಲ್ಲಿ ಕಂಡು ಕೇಳದ ಘಟನೆ. 1999ರಲ್ಲಿ ಸುಷ್ಮಾ ಸ್ವರಾಜ್ ಅವರು ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ವಿರುದ್ಧ ಬಳ್ಳಾರಿ ಲೋಕಸಭೆ ಕ್ಷೇತ್ರಕ್ಕೆ ಸ್ಪರ್ಧಿಸಿದ್ದಾಗ ರೆಡ್ಡಿ ಸೋದರರು ರಂಗದ ಮೇಲೆ ಮೊದಲ ಬಾರಿಗೆ ಕಾಣಿಸಿಕೊಂಡರು. ಮುಂದೆ 2008ರಲ್ಲಿ ದಕ್ಷಿಣ ಭಾರತದಲ್ಲಿ ಮೊದಲ ಬಿಜೆಪಿ ಸರ್ಕಾರ ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ರೆಡ್ಡಿ ಸೋದರರೇ ಕಾರಣರಾದರು. ಅವರು ಕೇವಲ ಬಳ್ಳಾರಿ ಜಿಲ್ಲೆಯಲ್ಲಿ ಮಾತ್ರವಲ್ಲ ಸುತ್ತಮುತ್ತಲಿನ ಜಿಲ್ಲೆಗಳಲ್ಲಿಯೂ ತಮ್ಮ ಆಧಿಪತ್ಯ ಸ್ಥಾಪಿಸಿದರು. ದುಡ್ಡು ಹೇಗೆ ಮಾತನಾಡುತ್ತದೆ ಎಂದು ತೋರಿಸಿಕೊಟ್ಟರು. ವಿಧಾನಸಭೆ ಚುನಾವಣೆಯಲ್ಲಿ ಪಕ್ಷಕ್ಕೆ ಸಂಪೂರ್ಣ ಬಹುಮತ ಬಾರದೇ  ಇದ್ದಾಗ ಇಡೀ ಭಾರತಕ್ಕೇ ಗೊತ್ತಿರದ `ಆಪರೇಷನ್ ಕಮಲ~ದಂಥ ಹೊಸ `ಪರಂಪರೆ~ಗೂ ಕೈ ಹಾಕಿದರು. ನಂತರ ಆಗಿನ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಬೆರಳ ತುದಿಯಲ್ಲಿ ಆಡಿಸತೊಡಗಿದರು. ಶಾಸಕರು ಮಾರಾಟಕ್ಕೆ ಇದ್ದಾರೆ, ಹಣ ಎಂದರೆ ಬಾಯಿ ಬಾಯಿ ಬಿಡುತ್ತಾರೆ ಎಂದು ಗೊತ್ತಾಗುತ್ತಿದ್ದಂತೆಯೇ ಹಿಂಡು ಶಾಸಕರನ್ನು ಕರೆದುಕೊಂಡು 2009ರ ಅಕ್ಟೋಬರ್‌ನಲ್ಲಿ ಹೈದರಾಬಾದಿಗೆ ಹೋಗಿ ಭಿನ್ನಮತದ ಆಟ ಶುರು ಮಾಡಿದರು. ತಮ್ಮ ಜಿಲ್ಲೆಗೆ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠ, ಅರಣ್ಯ ಅಧಿಕಾರಿ ಯಾರು ಇರಬೇಕು ಎಂಬುದನ್ನೂ ಹೇಳಿ ಯಡಿಯೂರಪ್ಪ ಅವರ ಕೈ ತಿರುವಿ ಮಾಡಿಸಿಕೊಂಡರು. ಕೇವಲ 24 ಗಂಟೆಗಳಲ್ಲಿ ಯಡಿಯೂರಪ್ಪ ತಮ್ಮ ಆದೇಶವನ್ನು ತಾವೇ ಬದಲಿಸಿ ರೆಡ್ಡಿ ಸೋದರರು ಹೇಳಿದವರನ್ನೇ ಬಳ್ಳಾರಿ ಜಿಲ್ಲೆಗೆ ನೇಮಕ ಮಾಡಿದರು. ಸುಷ್ಮಾ ಸ್ವರಾಜ್, ರೆಡ್ಡಿ ಸೋದರರು ಕೇಳಿದ್ದನ್ನು ಮಾಡಿಕೊಡುವಂತೆ ಯಡಿಯೂರಪ್ಪ ಅವರ ಮೇಲೆ ಒತ್ತಡ ತಂದರು.

ಯಡಿಯೂರಪ್ಪ ಸಂಪುಟದಲ್ಲಿ ಜನಾರ್ದನ ರೆಡ್ಡಿ, ಕರುಣಾಕರ ರೆಡ್ಡಿ ಸಚಿವರಾಗಿದ್ದರು. ಅವರ ನೆಚ್ಚಿನ ಗೆಳೆಯ ಶ್ರೀರಾಮುಲು ಕೂಡ ಸಚಿವರಾಗಿದ್ದರು. ಸೋದರ ಸೋಮಶೇಖರ ರೆಡ್ಡಿ ಕೆ.ಎಂ.ಎಫ್  ಅಧ್ಯಕ್ಷರಾಗಿದ್ದಾರೆ. ಶ್ರೀರಾಮುಲು ತಂಗಿ ಬಳ್ಳಾರಿಯ ಸಂಸದೆಯಾಗಿದ್ದಾರೆ. ಶ್ರೀರಾಮುಲು ಸಂಬಂಧಿಗಳಾದ ಸಣ್ಣಫಕೀರಪ್ಪ ರಾಯಚೂರು ಸಂಸದ. ಶ್ರೀರಾಮುಲು ಅವರ ನಿಕಟವರ್ತಿಗಳು ಮೂವರು ಬಳ್ಳಾರಿ ಜಿಲ್ಲೆಯ ಶಾಸಕರು. ಎರಡು ಕುಟುಂಬಗಳ ಕೈಲಿ ಹೀಗೆ ಅಧಿಕಾರ ಕೇಂದ್ರೀಕೃತವಾದುದು ಕೂಡ ಈಚಿನ ಇತಿಹಾಸದಲ್ಲಿ ಇದೇ ಮೊದಲು. 1989ರಲ್ಲಿ ವೀರೇಂದ್ರ  ಪಾಟೀಲರು ಮುಖ್ಯಮಂತ್ರಿಯಾಗಿದ್ದಾಗ, `ನಾನು ಲಿಂಗಾಯತರವನು.

ನಾನೇ ಸಮುದಾಯದ ಪ್ರತಿನಿಧಿ ಆಗಿರುವಾಗ ಮತ್ತೆ ಆ ಸಮುದಾಯಕ್ಕೆ ಹೆಚ್ಚಿನ ಪ್ರಾತಿನಿಧ್ಯ ಏಕೆ~ ಎಂದು ಕೇಳಿದ್ದರು. ಆದರೆ, ರೆಡ್ಡಿ ಸೋದರರಿಗೆ ಇಷ್ಟೆಲ್ಲ ಅಧಿಕಾರ ಕೈಯಲ್ಲಿ ತಮ್ಮ ಮತ್ತು ತಮ್ಮ ನೆಚ್ಚಿನ ಗೆಳೆಯನ ಕುಟುಂಬದಲ್ಲಿಯೇ ಇದ್ದರೂ ಸಮಾಧಾನ ಇರಲಿಲ್ಲ. ಅವರಿಗೆ ಸಚಿವ ಸ್ಥಾನ ಒಂದು ಅಧಿಕಾರ ಎಂಬ ಕಾರಣಕ್ಕಾಗಿ ಬೇಕಾಗಿತ್ತೇ ಹೊರತು ಅದರಿಂದ ಬಿಜೆಪಿ ಸರ್ಕಾರಕ್ಕಾಗಲೀ ಜನರಿಗಾಗಲೀ ಏನಾದರೂ ಪ್ರಯೋಜನವಾಯಿತು ಎಂದು ಯಾರಿಗೂ ಭಾಸವಾಗಲಿಲ್ಲ. ದುರಂತ ಎಂದರೆ ಭಿನ್ನ ಪಕ್ಷ ಎಂದು ಹೇಳಿಕೊಳ್ಳುವ ಬಿಜೆಪಿಯಲ್ಲಿಯೇ ರೆಡ್ಡಿ ಸೋದರರು ಇದ್ದರು, ಅವರೇ ಈ ಸರ್ಕಾರ ಅಧಿಕಾರಕ್ಕೆ ಬರಲು ಕಾರಣರಾದರು. ಅದರ ಪರಿಣಾಮ ಏನಾಯಿತು ಎಂದರೆ ಈಗಿನ ಸರ್ಕಾರದಲ್ಲಿ ಸಚಿವರಾಗಿರುವ ಬಹುತೇಕರಿಗೂ ಬಿಜೆಪಿಗೂ ಏನೇನೂ ಸಂಬಂಧವೇ ಉಳಿಯಲಿಲ್ಲ. ಇದೊಂದು ರೀತಿಯ ಕಲಸು ಮೇಲೋಗರದಂಥ ಸರ್ಕಾರ. ತತ್ವವೂ ಇಲ್ಲ; ಸಿದ್ಧಾಂತವೂ ಇಲ್ಲ.

ರೆಡ್ಡಿ ಸೋದರರ ಉಚ್ಛ್ರಾಯಕ್ಕೆ ಕಾರಣ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಬ್ಬಿಣದ ಅದಿರಿನ ಬೆಲೆ ಗಗನಕ್ಕೆ ಏರಿದ್ದು; ಚೀನಾ ಮಾರುಕಟ್ಟೆಯಲ್ಲಿ ಇದ್ದಕಿದ್ದಂತೆ ಅದಿರಿಗೆ ಬೇಡಿಕೆ ಕುದುರಿದ್ದು. ಅದಿರು ಚಿನ್ನದಂತೆ ಮಾರಾಟವಾದ ಹಾಗೆ ರೆಡ್ಡಿ ಸೋದರರ ಬೊಕ್ಕಸಕ್ಕೆ ಹಣ ಹರಿದು ಬರತೊಡಗಿತು. ಅತ್ತ ಬೆಟ್ಟ ಗುಡ್ಡಗಳು ಬೆತ್ತಲಾಗತೊಡಗಿದುವು. ಇಡೀ ರಾಜ್ಯದಲ್ಲಿ ಗಣಿಧಣಿಗಳ ಕಾನೂನು ಮಾತ್ರ ನಡೆಯತೊಡಗಿತು. ಎಲ್ಲಿಯೂ ಯಾರೂ ಅವರನ್ನು ಹಿಡಿದು ಕೇಳುವವರೇ ಇಲ್ಲ ಎನ್ನುವಂತೆ ಆಯಿತು. ಕರ್ನಾಟಕದ ಬೆಟ್ಟ ಗುಡ್ಡಗಳು ಮಾತ್ರ ಬೆತ್ತಲಾಗಲಿಲ್ಲ. ರಾಜ್ಯದ ಉದ್ದಗಲಕ್ಕೂ ರಸ್ತೆಗಳು ಹಾಳಾಗಿ ಹೋದುವು. ಮಹಾಭಾರತದಲ್ಲಿ ದ್ರೌಪದಿಯ ವಸ್ತ್ರಾಪಹರಣ ಆಗುತ್ತಿದ್ದಾಗ ಆಕೆಯ ಗಂಡಂದಿರಾದ ಪಾಂಡವರು ಮಾತ್ರವಲ್ಲ ರಾಜಾಂಗಣದಲ್ಲಿ ಇದ್ದ ಭೀಷ್ಮ, ದ್ರೋಣಾದಿ ಅತಿರಥ ಮಹಾರಥರೂ ಸುಮ್ಮನಿದ್ದರು.

ವಿದುರ ಒಬ್ಬನೇ ಎದ್ದು ನಿಂತು, `ದ್ರೌಪದಿಯ ವಸ್ತ್ರಾಪಹರಣ ಮಾಡಿದ ಕೌರವರು ಎಷ್ಟು ಪಾಪಿಗಳೋ ಅದನ್ನು ಕಣ್ಣಾರೆ ಕಂಡೂ ತೆಪ್ಪಗಿರುವ ಭೀಷ್ಮ, ದ್ರೋಣರೂ ತಪ್ಪಿತಸ್ಥರು~ ಎಂದಿದ್ದ. ಗಣಿ ಸಂಪತ್ತು ಲೂಟಿಯಾಗುತ್ತಿದ್ದಾಗ ಇಡೀ ಕರ್ನಾಟಕ ಸರ್ಕಾರ ತೆಪ್ಪಗಿತ್ತು. ಯಾವ ಅಧಿಕಾರಿಯೂ ತುಟಿ ಪಿಟಕ್ಕೆನ್ನಲಿಲ್ಲ.  ಅದಿರು ಸಾಗುವ ದಾರಿಯುದ್ದಕ್ಕೂ ಗಣಿ ಧಣಿಗಳ ಕಪ್ಪ ಪಡೆದ ಅಧಿಕಾರಿಗಳು, ಅದಿರು ಲಾರಿಗಳು ಸುಗಮವಾಗಿ ಸಂಚರಿಸಲು ಅನುವು ಮಾಡಿಕೊಟ್ಟರು. ನಿಸರ್ಗದ ಲೂಟಿಗೂ ತಮಗೂ ಸಂಬಂಧವೇ ಇಲ್ಲ ಎನ್ನುವಂತೆ ಸಾರ್ವಜನಿಕರೂ ಸುಮ್ಮನಿದ್ದರು. ಸಮಾಜ ಪರಿವರ್ತನ ಸಮುದಾಯದ ಎಸ್.ಆರ್.ಹಿರೇಮಠ್ ಅವರಂಥವರು ಸುಪ್ರೀಂಕೋರ್ಟಿಗೆ ಪ್ರಕರಣ ತೆಗೆದುಕೊಂಡು ಹೋಗದೇ ಇದ್ದರೆ ಏನಾಗುತ್ತಿತ್ತೋ ಗೊತ್ತಿಲ್ಲ.

ಗಣಿಧಣಿಗಳು ಅತ್ತ ಅದಿರನ್ನು ಬಾಚಿಕೊಳ್ಳುತ್ತಿದ್ದಂತೆಯೇ ಇತ್ತ ಕರ್ನಾಟಕದಲ್ಲಿ `ಬಾಚಿಕೊಳ್ಳುವ~ ಒಂದು ಸಂಸ್ಕೃತಿಯೂ ತಲೆ ಎತ್ತಿತು. ಅದಕ್ಕೆ ಯಾರು ಯಾರು ಬಲಿ ಬಿದ್ದರು ಎಂಬುದಕ್ಕೆ ಲೋಕಾಯುಕ್ತದ ಅಧಿಕಾರಿ ಯು.ವಿ.ಸಿಂಗ್ ಕೊಟ್ಟ  ವರದಿ ಸಾಕ್ಷ್ಯ ನುಡಿಯುತ್ತಿದೆ. `ದುರಾಸೆ~ಯ ಹಸ್ತಗಳು ಉದ್ದವಾಗತೊಡಗಿದುವು. ಹಿರೇಮಠ್ ಅವರು ಪ್ರತಿನಿಧಿಸುವ ಸಮಾಜ ಪರಿವರ್ತನ ಸಮುದಾಯದ ಅರ್ಜಿಯ ಮೇಲೆ ಸುಪ್ರೀಂ ಕೋರ್ಟ್ ಕೊಟ್ಟ ಒಂದು ಆದೇಶದ ಪ್ರತಿಯನ್ನು ನೋಡುವುದಕ್ಕೂ ವಿಧಾನಸೌಧದ ಉನ್ನತ ಅಧಿಕಾರಿಗಳಿಗೆ ಮನಸ್ಸು ಇರಲಿಲ್ಲ. `ಅದನ್ನೆಲ್ಲ ಯಾರು ಓದುತ್ತಾರೆ?~ ಎಂದು ಕೇಳುವ ತಾತ್ಸಾರ ಅವರಲ್ಲಿ ಮನೆ ಮಾಡಿತ್ತು. `ನಮಗೇಕೆ ಬೇಕು~ ಎಂಬ ನಿರ್ಲಕ್ಷ್ಯವೂ ತಲೆ ಎತ್ತತೊಡಗಿತ್ತು. ರೆಡ್ಡಿ ಸೋದರರು ವಿಧಾನಸೌಧಕ್ಕೆ ಬರುವುದಿಲ್ಲ ಎಂದ ಮೇಲೆ ನಾವೇಕೆ ಬರಬೇಕು ಎಂದು ಇತರ ಸಚಿವರೂ ಬರುವುದನ್ನು ಬಿಟ್ಟರು. ಇಡೀ ಆಡಳಿತ ವ್ಯವಸ್ಥೆ ಕುಸಿದು ಹೋಯಿತು. ಇದೆಲ್ಲ ಬಿಜೆಪಿ ಸರ್ಕಾರದಲ್ಲಿ ಆಯಿತು. ಅವರಿಗೆ ಮೊದಲ ಬಾರಿಗೆ ಆಡಳಿತ ಮಾಡಲು ಕರ್ನಾಟಕದಲ್ಲಿ ಅವಕಾಶ ಸಿಕ್ಕಿತ್ತು!

ಬಳ್ಳಾರಿ ಜಿಲ್ಲೆಯಲ್ಲಿ ನಿಸರ್ಗಕ್ಕೆ ಆಳವಾದ ಗಾಯವಾಗಿದೆ. ಕರ್ನಾಟಕದ ರಾಜಕೀಯಕ್ಕೆ ಇನ್ನೂ ಆಳವಾದ ಗಾಯವಾಗಿದೆ. ಗಣಿಗಳ ದೂಳು ಬರೀ ರೆಡ್ಡಿ ಸೋದರರನ್ನು ಮಾತ್ರ ಮೆತ್ತಿಕೊಂಡಿಲ್ಲ. ಇಬ್ಬರು ಮಾಜಿ ಮುಖ್ಯಮಂತ್ರಿಗಳಿಗೂ ಮೆತ್ತಿಕೊಂಡಿದೆ. ಅದು ಮೆತ್ತಿಕೊಂಡ ಕಾರಣಕ್ಕಾಗಿಯೇ ರೆಡ್ಡಿ ಸೋದರರು ಅಧಿಕಾರ ಕಳೆದುಕೊಂಡಿದ್ದಾರೆ. ಅಧಿಕಾರದ ಮಹತ್ವ ಎಷ್ಟು ಎಂದು ಅವರಿಗಿಂತ ಚೆನ್ನಾಗಿ ಯಾರಿಗೂ ಗೊತ್ತಿರಲಿಲ್ಲ.

ಅವರು ಯಾವಾಗಲೂ ವಾಲ್ಮೀಕಿ ಸಮುದಾಯದ ಶ್ರೀರಾಮುಲು ಅವರನ್ನು ಮುಂದೆ ಇಟ್ಟುಕೊಂಡೇ ರಾಜಕಾರಣ ಮಾಡಿದ್ದರು. ಬಳ್ಳಾರಿ ಜಿಲ್ಲೆಯ ಒಂಬತ್ತು ವಿಧಾನಸಭಾ ಕ್ಷೇತ್ರಗಳ ಪೈಕಿ ನಾಲ್ಕು ಈ ಸಮುದಾಯಕ್ಕೇ ಮೀಸಲಾಗಿವೆ. ಬಳ್ಳಾರಿ ಲೋಕಸಭಾ ಕ್ಷೇತ್ರ ಕೂಡ ಇದೇ ಸಮುದಾಯಕ್ಕೆ ಮೀಸಲಾಗಿದೆ. ಕ್ಷೇತ್ರ ಪುನರ್ ವಿಂಗಡಣೆ ಆಗುವುದಕ್ಕಿಂತ ಮುಂಚೆ ಕರ್ನಾಟಕದಲ್ಲಿ ಕೇವಲ ಗೋಕಾಕ ಮತ್ತು ಸೋಮವಾರಪೇಟೆ ವಿಧಾನಸಭಾ ಕ್ಷೇತ್ರಗಳು ಮಾತ್ರ ಈ ಸಮುದಾಯಕ್ಕೆ ಮೀಸಲಾಗಿದ್ದುವು. ಈಗ ಅವುಗಳ ಸಂಖ್ಯೆ 15. ಕ್ಷೇತ್ರ ಪುನರ್ ವಿಂಗಡಣೆಗಿಂತ ಮುಂಚೆ ಒಂದೂ ಲೋಕಸಭಾ ಕ್ಷೇತ್ರ ವಾಲ್ಮೀಕಿ ಸಮುದಾಯಕ್ಕೆ ಮೀಸಲಾಗಿರಲಿಲ್ಲ.

ಈಗ ಅವುಗಳ ಸಂಖ್ಯೆ ಎರಡು. ಒಂದು ಬಳ್ಳಾರಿ ಇನ್ನೊಂದು ರಾಯಚೂರು. ರೆಡ್ಡಿ ಸೋದರರ ರಾಜಕೀಯ ಬಂಡವಾಳವಿದು. ಅದೇ ಬಂಡವಾಳವನ್ನೇ ಮುಂದೆ ಮಾಡಿಕೊಂಡು ಶ್ರೀರಾಮುಲು ಅವರಿಂದ ರಾಜೀನಾಮೆ ಕೊಡಿಸಿ ರಾಜಕೀಯ ತಂತ್ರ ಹೆಣೆಯುವಾಗಲೇ ಸಿ.ಬಿ.ಐ ಬೋನಿಗೆ ಜನಾರ್ದನ ರೆಡ್ಡಿ ಬಿದ್ದಿದ್ದಾರೆ.

ಬಂಗಾರದ ಕುರ್ಚಿಯ ಮೇಲೆ ಕುಳಿತಿದ್ದ, ನಿತ್ಯ ಹಂಸತೂಲಿಕಾತಲ್ಪದ ಮೇಲೆ ಮಲಗುತ್ತಿದ್ದ ರೆಡ್ಡಿ ಈಗ ಒಬ್ಬ ಸಾಮಾನ್ಯ ಕೈದಿಯ ಹಾಗೆ ಜೈಲಿನಲ್ಲಿ ನೆಲದ ಮೇಲೆ ಮಲಗುತ್ತಿದ್ದಾರೆ. ಬಂಗಾರದ ತಟ್ಟೆಯಲ್ಲಿ ಊಟ ಮಾಡುತ್ತಿದ್ದ ವ್ಯಕ್ತಿ ಅಲ್ಯುಮಿನಿಯಂ ತಟ್ಟೆಯನ್ನು ಹಿಡಿದುಕೊಂಡು ಸರದಿಯಲ್ಲಿ ನಿಂತು ಊಟ ಮಾಡಬೇಕಿದೆ. ಆದರೆ, ಇದು ಅಂತ್ಯವಲ್ಲ. ಅಂತ್ಯದ ಆರಂಭ ಮಾತ್ರ. ಅಂತ್ಯ ಏನಾಗಿರುತ್ತದೆ, ಅದು ಇನ್ನೂ ಯಾರು ಯಾರಿಗೆ ಸುತ್ತಿಕೊಳ್ಳುತ್ತದೆ ಎಂದು ಈಗಲೇ ಹೇಳುವುದು ಕಷ್ಟ. ಅದು ಕಾನೂನಿನ ಕ್ಷೇತ್ರ. ಕಾನೂನು ತನ್ನದೇ ರೀತಿಯಲ್ಲಿ ಕ್ರಮ ಜರುಗಿಸುತ್ತದೆ. ಆದರೆ, ಕರ್ನಾಟಕ ಮತ್ತು ಆಂಧ್ರದ ಗಡಿಯಲ್ಲಿ ನಿಸರ್ಗಕ್ಕೆ ಆಗಿರುವ ಆಘಾತವನ್ನು ಸರಿಪಡಿಸುವುದು ಹೇಗೆ? ಗಣಿ ಗುತ್ತಿಗೆದಾರರು ಬಳ್ಳಾರಿ, ತುಮಕೂರು ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ ನಿಸರ್ಗಕ್ಕೆ ಮಾಡಿರುವ ಧಕ್ಕೆಯನ್ನು ತಾವೇ ತಮ್ಮ ವೆಚ್ಚದಲ್ಲಿ ಸರಿಪಡಿಸಬೇಕು ಎಂದು ಸುಪ್ರೀಂ ಕೋರ್ಟು ತಾಕೀತು ಮಾಡಿದೆ. ಬಳ್ಳಾರಿ ಜಿಲ್ಲೆಯ ಸಂಡೂರಿನಲ್ಲಿ ಇದೇ ರೀತಿ ಗಣಿಗಾರಿಕೆಯಿಂದ ನಿಸರ್ಗಕ್ಕೆ ಧಕ್ಕೆಯಾಗಿತ್ತು. ಕೆಲವು ವರ್ಷಗಳ ಹಿಂದೆ ಅಲ್ಲಿ ಗಣಿಗಾರಿಕೆ ನಿಂತ ಮೇಲೆ ಗಿಡ ಮರಗಳಲ್ಲಿ ಮತ್ತೆ ಹಸಿರು ಚಿಮ್ಮತೊಡಗಿದೆ. ಗಣಿ ಸ್ಫೋಟದ ಸದ್ದು ಕೇಳಿ ಮಾಯವಾಗಿ ಹೋಗಿದ್ದ ನವಿಲು ಮತ್ತೆ ನರ್ತಿಸತೊಡಗಿವೆ.

ಹೊಲ ಗದ್ದೆಗಳಲ್ಲಿನ ಬತ್ತ ನಳನಳಿಸತೊಡಗಿದೆ. ಬಳ್ಳಾರಿ ಗಣಿಗಾರಿಕೆಗೆ ಹೋಲಿಸಿದರೆ ಸಂಡೂರು ಗಣಿಗಾರಿಕೆ ಮಾಡಿರುವ ಹಾನಿ ಏನೇನೂ ಅಲ್ಲ. ಬಳ್ಳಾರಿ ಗಣಿಗಾರಿಕೆಯಿಂದ ಕಲಘಟಗಿಯ ಬತ್ತದ ಗದ್ದೆಗಳು ಹಾಳಾಗಿ ಹೋಗಿವೆ. ಕಾರವಾರದ ಬಳಿ ರಸ್ತೆಗಳಲ್ಲಿ ಹಳ್ಳಗಳಾಗಿವೆ. ಗಣಿಧಣಿಗಳಿಂದ ಆಗಿರುವ ಹಾನಿಯನ್ನು ಅವರ  ಹಣದಲ್ಲಿಯೇ ನೇರ್ಪುಗೊಳಿಸಬೇಕು ಎಂಬ ಸುಪ್ರೀಂಕೋರ್ಟ್ ಆದೇಶ ಬರೀ ಗಣಿ ಗುಡ್ಡಗಳಿಗೆ ಮಾತ್ರವಲ್ಲ ಗಣಿ ಲಾರಿಗಳು  ಸಂಚರಿಸಿದ ದಾರಿಯುದ್ದದ ಪ್ರದೇಶಕ್ಕೂ ಅನ್ವಯಿಸಬೇಕು. ಅದು ಆಗುವಂತೆ ಯಾರು ನೋಡಿಕೊಳ್ಳಬೇಕು? ರಾಜ್ಯ ಸರ್ಕಾರದ ಅಧಿಕಾರಿಗಳೇ ಅಲ್ಲವೇ? ಅವರು ಅದನ್ನು ಮಾಡಿಯಾರೇ? ಅವರು ಅದನ್ನು ಮಾಡುವ ಹಾಗೆ ಕರ್ನಾಟಕದ ಜನ ಒತ್ತಡ ತರುತ್ತಾರೆಯೇ? ಆಡಳಿತದ ನೇತಾರರು ಆ ಜವಾಬ್ದಾರಿ ವಹಿಸಿಕೊಳ್ಳುತ್ತಾರೆಯೇ? ಇಲ್ಲವೇ ದ್ರೌಪದಿ ವಸ್ತ್ರಾಪಹರಣ ನಡೆದಾಗ ತೆಪ್ಪಗಿದ್ದ ಭೀಷ್ಮ, ದ್ರೋಣರ ಹಾಗೆ ಸುಮ್ಮನಿರುತ್ತಾರೆಯೇ? ವಿದುರನ ಮಾತು ನೆನಪಿದೆಯಲ್ಲ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT