ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತದಾನ ಅಂದು ಇಂದು

Last Updated 5 ಮೇ 2013, 19:59 IST
ಅಕ್ಷರ ಗಾತ್ರ

ಕೋಲಾರದಲ್ಲಿ ಕಾಂಗ್ರೆಸ್ ಪಕ್ಷದ ಪುಂಡರು ಉದ್ದುದ್ದ ಕತ್ತಿ ಹಿಡಿದು ರಾಜಾರೋಷವಾಗಿ ಬೀದಿ ಸುತ್ತುತ್ತಿರುವುದನ್ನು ಟಿ.ವಿ.ಯಲ್ಲಿ ನೀವು ನೋಡಿರಬಹುದು. ಪುಂಡರ ಠೇಂಕಾರ ಮತ್ತು ಪೊಲೀಸರ ಮಂಕು ಪ್ರತಿಕ್ರಿಯೆ ಕಂಡವರು ನಮ್ಮ ಕಾನೂನು ವ್ಯವಸ್ಥೆ ಇಷ್ಟು ದುರ್ಬಲವೆ ಎಂದು ಕೇಳುತ್ತಿದ್ದರು. ಮತದಾನ ಪ್ರಕ್ರಿಯೆಯ ಬಗ್ಗೆ ಸಹಜವಾಗಿಯೇ ನಿರಾಸೆ ವ್ಯಕ್ತಪಡಿಸುತ್ತಿದ್ದರು. ಆದರೆ ನಾಲ್ಕು ದಶಕದಿಂದ ಚುನಾವಣೆಗಳನ್ನು ಗಮನಿಸಿರುವ ನಾನು ತಿಳಿದಂತೆ, ಇಂದು ವ್ಯವಸ್ಥೆ ಬಹಳ ಸುಧಾರಿಸಿದೆ.

ಎಪ್ಪತ್ತರ ದಶಕದವರೆಗೂ ಕಾಂಗ್ರೆಸ್ ಎಷ್ಟು ಬಲಿಷ್ಠವಾಗಿತ್ತೆಂದರೆ ಆ ಪಕ್ಷದ ಪುಂಡರು ಬೇಕಾದ್ದನ್ನು ಮಾಡಿ ತಪ್ಪಿಸಿಕೊಳ್ಳುತ್ತಿದ್ದರು. ವಿರೋಧ ಪಕ್ಷದ ಸಭೆ ಸಮಾರಂಭಗಳನ್ನು ನೆಮ್ಮದಿಯಾಗಿ ನಡೆಸಲು ಬಿಡುತ್ತಿರಲಿಲ್ಲ. ದೇವರಾಜ ಅರಸರ ಕಾಲದಲ್ಲಿ ಜಾರಿಯಾದ ಭೂ ಸುಧಾರಣೆ ಮಾದರಿ ಎಂದು ಭಾರತದಲ್ಲೆಲ್ಲ, ಅದರಲ್ಲೂ ಸೋಷಿಯಲಿಸ್ಟ್ ವಲಯಗಳಲ್ಲಿ ಹೆಸರಾಯಿತು, ಆದರೆ ಅದೇ ಕಾಲದಲ್ಲಿ ದೊಡ್ಡ ರೌಡಿಗಳು, ಕೊಲೆಗಡುಕರು ಹೇಗೆ ಮೆರೆದರು ಎಂಬುದೂ ಎಷ್ಟೋ ಕಡೆ ದಾಖಲಾಗಿದೆ.

ಎಂಬತ್ತರ ದಶಕದಲ್ಲಿ ಜನತಾ ಪಕ್ಷ ಅಧಿಕಾರಕ್ಕೆ ಬಂತು. ಕಾಂಗ್ರೆಸ್ ಪುಂಡಾಟಿಕೆಗೆ ಮೊದಲ ಬಾರಿಗೆ ಕಡಿವಾಣ ಬಿತ್ತು. ನಂತರದ ವರ್ಷಗಳಲ್ಲಿ ಇತರ ಪಕ್ಷಗಳು ಸಾಕಿದ ರೌಡಿಗಳ ಬಗ್ಗೆಯೂ ಜನ ಕೇಳತೊಡಗಿದರು. ಕೆಲವು ಬಡಾವಣೆಗಳಲ್ಲಿ ಇಂಥವರ ದಬ್ಬಾಳಿಕೆ ಕಣ್ಣಾರೆ ಕಂಡರು, ಅನುಭವಿಸಿದರು. ಬರುಬರುತ್ತಾ ರೌಡಿಗಳು ರಿಯಲ್ ಎಸ್ಟೇಟ್ ವ್ಯಾಪಾರಕ್ಕೆ ಇಳಿದರು.

ಶ್ರೀಮಂತರಾದರು. ಪುಂಡ ಪಡೆ, ಧನ ಬಲ ಎರಡನ್ನೂ ಒದಗಿಸುವ ಶಕ್ತಿ ಬೆಳೆಸಿಕೊಂಡು ರಾಜಕೀಯದಲ್ಲಿ ಸ್ಥಾನಗಳನ್ನು ಗಿಟ್ಟಿಸಿಕೊಳ್ಳುವ ಸ್ಥಿತಿಗೆ ಬಂದರು. ಇತ್ತ ಚುನಾವಣೆಯ ದಿನ ರೌಡಿಗಳ ಪಾತ್ರ ಕಡಿಮೆಯಾಗುತ್ತಾ ಬಂದಿತು.ಈ ಬೆಳವಣಿಗೆಗೆ ಮುಖ್ಯ ಕಾರಣ ಟಿ.ಎನ್. ಶೇಷನ್ ಎಂಬ ಚುನಾವಣಾ ಅಧಿಕಾರಿ. 1990ರಿಂದ ಆರು ವರ್ಷ ಕಾರ್ಯ ನಿರ್ವಹಿಸಿದ ಈ ತಮಿಳು ಮೂಲದ ಎಲೆಕ್ಷನ್ ಕಮಿಷನರ್ ಕಾನೂನಿನಲ್ಲಿ ಬದಲಾವಣೆಯೇನನ್ನೂ ಕೇಳಲಿಲ್ಲ. ಇದ್ದ ಕಾನೂನನ್ನು ಜಾರಿಗೊಳಿಸಿದರಷ್ಟೆ.

ಚುನಾವಣಾ ವ್ಯವಸ್ಥೆಯಲ್ಲಿ ಅಡಗಿದ್ದ ಅಧಿಕಾರವನ್ನು ಮೊದಲ ಬಾರಿಗೆ ಚಲಾಯಿಸಿದರು. ನಿಷ್ಪಕ್ಷಪಾತವಾಗಿ, ನಿರ್ಭೀತವಾಗಿ ಚುನಾವಣಾ ಅಧಿಕಾರಿಗಳು ಕೆಲಸ ನಿರ್ವಹಿಸುವಂತೆ ಮಾಡಿದರು. (ನಂತರ ಅವರು ರಾಜಕೀಯ ಸೇರಿ ಮೂಲೆ ಗುಂಪಾದರು. ಒಳ್ಳೆಯ ಅಧಿಕಾರಿ ಆಟೊಮೆಟಿಕ್ಕಾಗಿ ಒಳ್ಳೆಯ ರಾಜಕಾರಣಿ ಆಗುವುದಿಲ್ಲ. ಅದು ಬೇರೆ ಮಾತು).

ಬೀದಿ ಬೀದಿಯಲ್ಲಿ ಆಟೊ, ಕಾರ್ ತಂದು ಮತದಾರರನ್ನು ಹತ್ತಿಸಿಕೊಂಡು ಮತಗಟ್ಟೆಗೆ ಕರೆದೊಯ್ಯುವುದು, ಅಲ್ಲಲ್ಲಿ ನಿಂತು ಜನರಿಗೆ ತಮ್ಮ ರೌಡಿ ಶಕ್ತಿಯನ್ನು ಪ್ರದರ್ಶನ ಮಾಡುವುದು, ಎಲ್ಲೆಂದರಲ್ಲಿ ಭಿತ್ತಿಪತ್ರಗಳನ್ನು ಅಂಟಿಸುವುದು, ಚಾಕು ಚೂರಿ ಹಿಡಿದು ವಿರೋಧಿಗಳ ಮೇಲೆ ಎರಗುವುದು, ರಸ್ತೆ, ಗೋಡೆಗಳನ್ನು ಸ್ಲೋಗನ್ ಬರೆದು ವಿರೂಪಗೊಳಿಸುವುದು ಇದೆಲ್ಲ ಕಡಿಮೆಯಾಗಿ ಹೋಗಿದೆ.

ವಾಹನಗಳಲ್ಲಿ ಪ್ರಚಾರ ಮಾಡುವುದು, ಜೋರಾಗಿ ಮೈಕ್ ಹಾಕಿಕೊಂಡು ಬೀದಿಬೀದಿ ಸುತ್ತುವುದು ಕೂಡ ಈ ಬಾರಿ ಅಷ್ಟಾಗಿ ಕಾಣಲಿಲ್ಲ. ಇದಕ್ಕೆ ಕಾರಣ ಚುನಾವಣಾ ಅಧಿಕಾರಿಗಳ ಕಟ್ಟುನಿಟ್ಟು ಕ್ರಮ. ಚುನಾವಣಾ ವ್ಯವಸ್ಥೆಯಲ್ಲಿ ಬೇರೇನೇ ಕುಂದು ಕೊರತೆಗಳಿದ್ದರೂ ಚುನಾವಣಾ ದಿನದ ನಿರ್ವಹಣೆಯನ್ನು ಯಾರೂ ಆಕ್ಷೇಪಿಸುವ ಹಾಗಿಲ್ಲ. ಒಂದೇ ಒಂದು ಆಕ್ಷೇಪವಿದ್ದರೆ ಅದು ಚುನಾವಣಾ ಕ್ರಮದಲ್ಲಿ ಮೊದಲಿದ್ದಷ್ಟು ರಂಗು, ಮಜ ಇಲ್ಲ ಎನ್ನುವುದಿರಬೇಕು.

ಲೇಖಕ ಕಂಡ ತುಣುಕುಗಳು 
ಹೆಸರಾಂತ ಕಥೆಗಾರ ನಟರಾಜ್ ಹುಳಿಯಾರ್ ಹಲವು ಕಡೆ ಪ್ರವಾಸ ಮಾಡಿ ಬಂದಿದ್ದಾರೆ. ಅಲ್ಲಲ್ಲಿ ಕಂಡ ಚುನಾವಣಾ ತುಣುಕುಗಳ ಬಗ್ಗೆ `ಟಾಕ್' ವಾರ ಪತ್ರಿಕೆಯಲ್ಲಿ ಬರೆದಿದ್ದಾರೆ.

ಅವರ ಕೆಲವು ಗ್ರಹಿಕೆಗಳನ್ನು ಇಲ್ಲಿ ಉಲ್ಲೇಖಿಸುತ್ತಿದ್ದೇನೆ. ಮೊದಲು ಬಡವರು ಮಾತ್ರ ದುಡ್ಡು ತೆಗೆದುಕೊಂಡು ವೋಟು ಹಾಕುತ್ತಿದ್ದರು. ಆದರೆ, ಗೆಳೆಯ ನಟರಾಜ್ ಹೇಳುವಂತೆ, ಇಂದು ಮಧ್ಯಮ ವರ್ಗದವರನ್ನೂ ರಾಜಕಾರಣಿಗಳು ಭ್ರಷ್ಟಗೊಳಿಸಿದ್ದಾರೆ. ಎಷ್ಟೋ ಕಡೆ ಹಬ್ಬ ಹರಿದಿನದ ಕಾಣಿಕೆಯಾಗಿ, ಪೂಜೆ ಪುನಸ್ಕಾರದ ದಕ್ಷಿಣೆಯಾಗಿ, ಕರೆಂಟ್ ಬಿಲ್ ಕಟ್ಟುವ ನೆಪದಲ್ಲಿ ಅಭ್ಯರ್ಥಿಗಳು ದುಡ್ಡು ಹಂಚಿದ್ದಾರಂತೆ. ಇದರಿಂದ ಮತದಾರರಿಗೂ ಸಂದಿಗ್ಧ ಉಂಟಾಗಿದೆ! ಎಲ್ಲ ಪಕ್ಷದವರಿಂದಲೂ `ದಕ್ಷಿಣೆ' ಪಡೆದು, ಪಕ್ಷಕ್ಕೊಂದರಂತೆ ಮತ ಹಾಕುವ ಕುಟುಂಬಗಳೂ ಇವೆಯಂತೆ.  

ನಿರಾಸೆ, ತಮಾಷೆಯ ಪ್ರಸಂಗಗಳೂ ಹಲವು. ಒಬ್ಬ ಅಭ್ಯರ್ಥಿ ಟ್ಯಾಂಕರ್ ತುಂಬ ಹೆಂಡ ಪೂರೈಸಿದನಂತೆ. ಮತದಾರರು ಬಕೆಟ್‌ಗಟ್ಟಲೆ ಅಗ್ಗದ ಹೆಂಡವನ್ನು ತುಂಬಿಸಿಕೊಂಡು ಮನೆಗೆ ಹೋದರಂತೆ. ಚುನಾವಣಾ ಅಧಿಕಾರಿಗಳ ಭಯಕ್ಕೆ ಒಮ್ಮಮ್ಮೆ ಪಕ್ಷದ ಕಾರ್ಯಕರ್ತರು ತಮ್ಮ ಕೈಲಿದ್ದ ಹಣವನ್ನು ಗಾಳಿಗೆ ತೂರಿದ ಪ್ರಸಂಗಗಳೂ ಇವೆ. ಹೀಗಾದ ಊರುಗಳಲ್ಲಿ ಜನ ಬೆಳಿಗ್ಗೆ ಬೇಗ ಎದ್ದು ಸಂದಿ ಗೊಂದಿಗಳಲ್ಲಿ, ಮೋರಿಗಳಲ್ಲಿ ಹಣ ಹುಡುಕಲು ಹೋಗುತ್ತಿದ್ದರಂತೆ.

ಇನ್ನೆರಡು ದಿನದಲ್ಲಿ ರಾಜಕಾರಣಿಗಳ ಹಣೆಬರಹ, ರಾಜ್ಯದ ಭವಿಷ್ಯ ಎರಡೂ ನಿರ್ಧಾರವಾಗುತ್ತದೆ. ಇನ್ನೇನೇನು ತಮಾಷೆ ಕಾದಿದೆಯೋ ನೋಡೋಣ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT