ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತದಾರನ ಒಲವನ್ನು ನಿರ್ದೇಶಿಸುವ ತಂತ್ರಜ್ಞಾನ

Last Updated 10 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಒಂದು ವಾರದ ಹಿಂದೆ ಹಣಕಾಸಿಗೆ ಸಂಬಂಧಿಸಿದ ಸುದ್ದಿ ಮತ್ತು ವಿಶ್ಲೇಷಣೆಗಳ ಜಾಲತಾಣ ‘ಮನಿ ಕಂಟ್ರೋಲ್’ನಲ್ಲಿ ‘ಕೇಂಬ್ರಿಜ್ ಅನಲಿಟಿಕಾ’ ಎಂಬ ಕಂಪೆನಿ ಭಾರತದಲ್ಲಿ ನೆಲೆ ಕಂಡುಕೊಳ್ಳಲು ಪ್ರಯತ್ನಿಸುತ್ತಿದೆ ಎಂಬ ಸುದ್ದಿಯೊಂದು ಪ್ರಕಟವಾಯಿತು. ಇದು ಮುಖ್ಯವಾಹಿನಿಯ ಮಾಧ್ಯಮಗಳಲ್ಲಿ ಸಣ್ಣದಾಗಿಯಷ್ಟೇ ಕಾಣಿಸಿಕೊಂಡಿತು. ಆದರೆ ಬೃಹತ್ ದತ್ತಾಂಶ ವಿಶ್ಲೇಷಣೆಯ ಕುರಿತಂತೆ ಚರ್ಚಿಸುವ ಆನ್‌ಲೈನ್ ಗುಂಪುಗಳಲ್ಲಿ ಮಾತ್ರ ಬಗೆ ಬಗೆಯ ಚರ್ಚೆಗಳಿಗೆ ಕಾರಣವಾಯಿತು. ಈ ಚರ್ಚೆಗಳಲ್ಲಿ ಬಹುಮುಖ್ಯವಾಗಿ ಪ್ರಸ್ತಾಪವಾಗಿದ್ದು ಮುಂಬರುವ ಚುನಾವಣೆಗಳು.

ಅಮೆರಿಕ ಮೂಲದ ಕಂಪೆನಿಯೊಂದು ಭಾರತದಲ್ಲಿ ನೆಲೆಕಂಡುಕೊಳ್ಳುವುದಕ್ಕೆ ಪ್ರಯತ್ನಿಸುವ ಸುದ್ದಿಗೂ ಮುಂಬರುವ ಚುನಾವಣೆಗಳಿಗೂ ಅದ್ಯಾವ ಬಾದರಾಯಣ ಸಂಬಂಧ ಎಂಬ ಪ್ರಶ್ನೆ ನಿಮ್ಮ ಮನಸ್ಸಿನಲ್ಲಿ ಹುಟ್ಟಿರಬಹುದು. ಇದಕ್ಕೆ ಉತ್ತರ ಕಂಡುಕೊಳ್ಳುವುದಕ್ಕೆ ಸ್ವಲ್ಪ ಹಿಂದಕ್ಕೆ ಅಂದರೆ ಡೊನಾಲ್ಡ್ ಟ್ರಂಪ್ ಅವರು ಆಯ್ಕೆಯಾದ ಅಮೆರಿಕದ ಅಧ್ಯಕ್ಷೀಯ ಚುನಾವಣೆಗಳ ಕಾಲಕ್ಕೆ ಹೋಗಬೇಕಾಗುತ್ತದೆ. ಈ ಚುನಾವಣೆ ಬಹಳ ವಿಶಿಷ್ಟವಾದುದು. ಚುನಾವಣಾ ಫಲಿತಾಂಶವನ್ನು ಊಹಿಸುವುದಕ್ಕೂ ಭಾರೀ ಪ್ರಮಾಣದಲ್ಲಿ ತಂತ್ರಜ್ಞಾನ ಬಳಕೆಯಾಗಿತ್ತು. ಅಂತಿಮವಾಗಿ ಅವೆಲ್ಲವೂ ಸೋತಿದ್ದವು. ಆದರೆ ಅದೇ ತಂತ್ರಜ್ಞಾನ ಟ್ರಂಪ್ ಗೆಲುವಿಗೂ ಕಾರಣವಾದ ವೈರುದ್ಧ್ಯ ಈ ಚುನಾವಣೆಯಲ್ಲಿತ್ತು.

ಟ್ರಂಪ್ ಗೆಲುವಿಗೆ ಕಾರಣವಾದ ತಂತ್ರಜ್ಞಾನವನ್ನು ಒದಗಿಸಿದ್ದು ‘ಕೇಂಬ್ರಿಜ್ ಅನಲಿಟಿಕಾ’ ಎಂಬ ಕಂಪೆನಿ. ಬೃಹತ್ ದತ್ತಾಂಶ ವಿಶ್ಲೇಷಣೆಯ ಮೂಲಕ ಚುನಾವಣಾ ಪ್ರಚಾರಕ್ಕೆ ಅಗತ್ಯವಿರುವ ಮೊನಚು ಮತ್ತು ನಿಖರತೆಯನ್ನು ಒದಗಿಸುವುದು ಈ ಕಂಪೆನಿಯ ವಿಶೇಷತೆ. ಇದು ಮೂಲತಃ ಬ್ರಿಟನ್ ಮೂಲದ ಕಂಪೆನಿ. ಅಲ್ಲಿ ಇದರ ಹೆಸರು ಸ್ಟ್ರಾಟೆಜಿಕ್ ಕಮ್ಯುನಿಕೇಶನ್ ಲ್ಯಾಬೊರೇಟರಿ. ಅಮೆರಿಕದಲ್ಲಿ ತನ್ನ ಕಾರ್ಯಾಚರಣೆಯನ್ನು ವಿಸ್ತರಿಸುವುದರ ಭಾಗವಾಗಿ ‘ಕೇಂಬ್ರಿಜ್ ಅನಲಿಟಿಕಾ’ವನ್ನು ಸ್ಥಾಪಿಸಲಾಯಿತು. ಈಗ ಇದು ಭಾರತದ ಚುನಾವಣೆಯಲ್ಲಿಯೂ ತನ್ನ ಕೈಚಳಕವನ್ನು ತೋರಿಸುವುದಕ್ಕೆ ಉತ್ಸಾಹಿಯಾಗಿದೆ. ‘ಮನಿ ಕಂಟ್ರೋಲ್’ ವರದಿ ಹೇಳುತ್ತಿರುವಂತೆ ಕಂಪೆನಿ ಭಾರತದ ಪ್ರಮುಖ ವಿರೋಧ ಪಕ್ಷದೊಂದಿಗೆ ಚರ್ಚೆ ನಡೆಸುತ್ತಿದೆ!

ಬೃಹತ್ ದತ್ತಾಂಶ ಅಥವಾ ‘ಬಿಗ್ ಡೇಟಾ’ ಎಂಬ ಪದ ಸೈಬರ್ ಲೋಕದ ಪ್ರಾಥಮಿಕ ಅರಿವಿರುವವರಿಗೂ ಗೊತ್ತಿದೆ. ಆನ್ ಲೈನ್ ಜಗತ್ತಿನಲ್ಲಿ ನಾವು ನಡೆಸುವ ಪ್ರತಿಯೊಂದು ಕ್ರಿಯೆಯೂ ಎಲ್ಲಾದರೊಂದು ಕಡೆ ದಾಖಲಾಗುತ್ತಲೇ ಇರುತ್ತದೆ. ಸಾಮಾಜಿಕ ಜಾಲತಾಣಗಳಲ್ಲಿ ನಾವು ನಡೆಸುವ ಪ್ರತಿಯೊಂದು ಚಟುವಟಿಕೆಯೂ ಬಹುತೇಕ ಸಾರ್ವಜನಿಕವಾಗಿಯೇ ಇರುತ್ತದೆ. ಫೇಸ್ ಬುಕ್ ನಂಥ ಜಾಲತಾಣಗಳು ಅದೆಷ್ಟೇ ಖಾಸಗಿತನದ ಭರವಸೆ ನೀಡಿದರೂ ಅಲ್ಲಿ ನಾವು ನಡೆಸುವ ಚಟುವಟಿಕೆಗಳೆಲ್ಲವೂ ಬೀದಿಯಲ್ಲಿ ನಿಂತು ಮಾತನಾಡುವಷ್ಟೇ ರಹಸ್ಯ.

ಯೂರೋಪಿನ ಕೆಲವು ದೇಶಗಳನ್ನು ಹೊರತು ಪಡಿಸಿದರೆ ಬೇರೆಲ್ಲೂ ಈ ಬಗೆಯಲ್ಲಿ ಸೃಷ್ಟಿಯಾಗಿರುವ ದತ್ತಾಂಶದ ಬಳಕೆಗೆ ಸಂಬಂಧಿಸಿದಂತೆ ಸ್ಪಷ್ಟ ನೀತಿಗಳಿಲ್ಲ. ಅಮೆರಿಕದಲ್ಲಿ ಈ ಮಾಹಿತಿಗಳನ್ನು ಯಾರಿಗೂ ಒದಗಿಸಬಾರದು ಎಂದು ಬಳಕೆದಾರನೇ ಈ ಕಂಪೆನಿಗಳಿಗೆ ಸ್ಪಷ್ಟವಾಗಿ ಹೇಳಬೇಕು. ಇಲ್ಲವಾದರೆ ಇದನ್ನು ಕಂಪೆನಿ ಹೇಗೆ ಬೇಕಾದರೂ ಬಳಸಿಕೊಳ್ಳಲು ಸಾಧ್ಯವಿದೆ. ಯೂರೋಪಿನಲ್ಲಾದರೆ ಕಂಪೆನಿಗಳು ಈ ಬಗೆಯ ಮಾಹಿತಿಯನ್ನು ಏನು ಮಾಡಬೇಕಾದರೂ ಬಳಕೆದಾರನ ಒಪ್ಪಿಗೆ ಪಡೆಯುವುದು ಕಡ್ಡಾಯ. ಕೇಂಬ್ರಿಜ್ ಅನಲಿಟಿಕಾದ ಮುಖ್ಯ ಕಾರ್ಯನಿರ್ವಾಹಕರು ಹೇಳುವಂತೆ ಅಮೆರಿಕದ 22 ಕೋಟಿ ಮತದಾರರ ವ್ಯಕ್ತಿತ್ವ ಎಂಥದ್ದು ಎಂಬುದನ್ನು ಸಂಗ್ರಹಿಸುವಲ್ಲಿ ಅವರ ಕಂಪೆನಿ ಯಶಸ್ವಿಯಾಗಿತ್ತಂತೆ.

ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತಿಯೊಬ್ಬ ಹೇಗೆ ವರ್ತಿಸುತ್ತಾನೆ ಎಂಬುದನ್ನು ಗಮನಿಸಿ ಅವನ ವ್ಯಕ್ತಿತ್ವವನ್ನು ಕಟ್ಟಿಕೊಳ್ಳಲು ಸಾಧ್ಯವೇ? ಈ ಪ್ರಶ್ನೆಗೆ ಉತ್ತರವನ್ನು ಬಹಳ ಹಿಂದೆಯೇ 1980ರಷ್ಟೇ ದೊರೆತಿದೆ. ಹೌದು, ಓಸಿಇಎಎನ್ ಎಂದು ಕರೆಯಲಾಗುವ ಈ ವಿಧಾನವನ್ನು ಮನೋವಿಜ್ಞಾನಿಗಳು 1980ರಲ್ಲಿಯೇ ಆವಿಷ್ಕರಿಸಿದ್ದರು. ಹೊಸ ಅನುಭವಗಳಿಗೆ ತೆರೆದುಕೊಳ್ಳುವ ಪ್ರಮಾಣ (Openness),  ನಿಖರತೆಗೆ ನೀಡುವ ಮಹತ್ವ (Conscientiousness), ಸುತ್ತಲಿನವರೊಂದಿಗೆ ಕಲೆಯುವ ಪ್ರಮಾಣ(Extroversion),  ಹೊಂದಾಣಿಕೆ ಮತ್ತು ಇತರರನ್ನು ಒಪ್ಪಿಕೊಳ್ಳುವ ಪ್ರಮಾಣ (Agreeableness) ಮತ್ತು ಎಷ್ಟು ಬೇಗ ಸಿಟ್ಟಿಗೇಳಬಹುದು ಅಥವಾ ವಿಚಲಿತಗೊಳ್ಳಬಬಹುದು (Neuroticism) ಎಂಬ ಐದು ಅಂಶಗಳು ಎಲ್ಲರ ವ್ಯಕ್ತಿತ್ವವನ್ನು ನಿರ್ಧರಿಸುತ್ತದೆ.

ಯಾರದೇ ಸಾಮಾಜಿಕ ಜಾಲತಾಣ ಚಟುವಟಿಕೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಇದನ್ನು ಕಂಡುಕೊಳ್ಳುವುದು ಸುಲಭ. ನಾವು ಮಾಡುವ ಒಂದೊಂದು ಲೈಕ್, ಕಮೆಂಟ್, ಶೇರ್ ಅಥವಾ ರೀಟ್ವೀಟ್ ಇತ್ಯಾದಿಗಳೆಲ್ಲವೂ ನಮಗೆ ಗೊತ್ತಿಲ್ಲದಂತೆಯೇ ನಮ್ಮ ವ್ಯಕ್ತಿತ್ವವನ್ನು ಕಟ್ಟಿಕೊಡುತ್ತಿರುತ್ತವೆ. ಬೃಹತ್ ದತ್ತಾಂಶ ಸಂಸ್ಕರಣೆಯ ವಿಧಾನಗಳ ಮೂಲಕ ಇದನ್ನು ವ್ಯಕ್ತಿಯ ಮಟ್ಟಕ್ಕೆ ಇಳಿಸಿ ವಿಶ್ಲೇಷಿಸುವುದೂ ಈಗ ಸಾಧ್ಯ. ಇದರ ಜೊತೆಗೆ ನಮ್ಮ ಅಂತಜಾಲಾಟದ ವಿವರಗಳೂ ಜೊತೆಯಾಗಿಬಿಟ್ಟರೆ ಆ ವ್ಯಕ್ತಿ ಯಾರು, ಏನು ಮಾಡುತ್ತಿದ್ದಾನೆ/ಳೆ, ಎಷ್ಟು ವಯಸ್ಸು, ವಾಸವೆಲ್ಲಿ ಎಂಬ ವಿಚಾರಗಳೆಲ್ಲವೂ ಸುಲಭವಾಗಿ ಸಿಗುತ್ತವೆ. ಇದನ್ನು ಮತದಾರರ ಪಟ್ಟಿಗೆ ಜೋಡಿಸಿಬಿಟ್ಟರೆ ಉಳಿದೆಲ್ಲವೂ ಸರಳ.

‘ಕೇಂಬ್ರಿಜ್ ಅನಲಿಟಿಕಾ’ದಂಥ ಸಂಸ್ಥೆಗಳ ಕೆಲಸ ಇಲ್ಲಿಗೇ ಮುಗಿಯುವುದಿಲ್ಲ. ತಮ್ಮಲ್ಲಿರುವ ಮಾಹಿತಿಗಳನ್ನಿಟ್ಟುಕೊಂಡು ಮತದಾರನನ್ನು ಒಲಿಸಿಕೊಳ್ಳುವ ಅಥವಾ ಮತ ಚಲಾಯಿಸದಂತೆ ತಡೆಯುವ ತಂತ್ರಗಳನ್ನು ರೂಪಿಸಲಾಗುತ್ತದೆ. ಇದೊಂದು ರೀತಿಯಲ್ಲಿ ಮತದಾರನನ್ನು ನೇರವಾಗಿ ತಲುಪುವ ಪ್ರಚಾರ ತಂತ್ರ. ಟ್ರಂಪ್ ಸ್ಪರ್ಧಿಸಿದ್ದ ಚುನಾವಣೆಯಲ್ಲಿ ನಿರ್ದಿಷ್ಟ ಮತದಾರರನ್ನು ಗುರಿಯಾಗಿಟ್ಟುಕೊಂಡು ಮುಸ್ಲಿಮರ ಕುರಿತಂತೆ ತಿರಸ್ಕಾರ ಹುಟ್ಟಿಸುವ, ಹಿಲರಿ ಕ್ಲಿಂಟನ್ ಬಗ್ಗೆ ಕೀಳು ಭಾವನೆ ಮೂಡಿಸುವಂಥ ಸಂದೇಶಗಳನ್ನು ಬಿತ್ತರಿಸಲಾಗಿತ್ತು. ಈ ಕ್ರಿಯೆಯಲ್ಲಿ ತನ್ನ ಪಾಲಿರಲಿಲ್ಲ ಎಂದು ‘ಕೇಂಬ್ರಿಜ್ ಅನಲಿಟಿಕಾ’ ಹೇಳುತ್ತದೆಯಾದರೂ ಇಂಥದ್ದೊಂದು ಪ್ರಕ್ರಿಯೆ ನಡೆದದ್ದರ ಕುರಿತೇ ಈಗೊಂದು ತನಿಖೆ ನಡೆಯುತ್ತಿದೆ. ಫೇಸ್‌ ಬುಕ್ ನಲ್ಲಿ ಪ್ರಕಟವಾಗಿದ್ದ ವ್ಯಕ್ತಿ ನಿರ್ದಿಷ್ಟ ಜಾಹೀರಾತುಗಳೆಲ್ಲವೂ ರಷ್ಯಾದ ಕಂಪೆನಿಗಳ ಮೂಲಕ ಪ್ರಕಟಿಸಲಾಗಿತ್ತು. ರಿಪಬ್ಲಿಕನ್ನರಿಗೆ ಮತ ನೀಡದವರನ್ನು ಮತಗಟ್ಟೆಗೆ ಬಾರದಂತೆ ತಡೆಯಲು ಸಾಧ್ಯವಾಗುವಂಥ ಜಾಹೀರಾತುಗಳೂ ಇದರಲ್ಲಿದ್ದವು. ಹಿಲರಿ ಕ್ಲಿಂಟನ್ ಕರಿಯರ ಕುರಿತು ಹೇಳಿದ್ದರು ಎನ್ನಲಾದ ವಿಡಿಯೋ ಒಂದನ್ನು ವ್ಯವಸ್ಥಿತವಾಗಿ ಹಂಚಲಾಗಿತ್ತು. ಇದರ ಉದ್ದೇಶ ರಿಪಬ್ಲಿಕನ್ ಪಕ್ಷದ ಒಲವಿಲ್ಲದೇ ಇರುವವರಲ್ಲಿ ಹಿಲರಿ ಕ್ಲಿಂಟನ್ ಕುರಿತಂತೆ ತಿರಸ್ಕಾರ ಭಾವ ಮೂಡಿಸುವುದಾಗಿತ್ತು.

ಈ ಬಗೆಯ ತಂತ್ರಗಳು ಭಾರತಕ್ಕೇನೂ ಹೊಸತಲ್ಲ. 2014ರ ಚುನಾವಣೆಯಲ್ಲಿ ಭಾರೀ ಪ್ರಮಾಣದಲ್ಲಿ ತಂತ್ರಜ್ಞಾನ ಬಳಕೆಯಾಗಿತ್ತು ಇದರ ಹೊರತಾಗಿ ಸಾಮಾಜಿಕ ಜಾಲತಾಣಗಳಲ್ಲಿ ವಿರೋಧಿಗಳನ್ನು ಗೇಲಿ ಮಾಡುವುದರಿಂದ ಆರಂಭಿಸಿ ನಿರ್ದಿಷ್ಟ ವಿಚಾರಧಾರೆಯನ್ನು ಹೊಂದಿರುವವರ ವಿರುದ್ಧ ಸತತ ದಾಳಿ ನಡೆಸುವ ತನಕದ ಅನೇಕ ತಂತ್ರಗಳು ಬಳಕೆಯಾಗಿದ್ದವು. ಇದರಲ್ಲಿ ಬೃಹತ್ ದತ್ತಾಂಶ ವಿಶ್ಲೇಷಣೆಯ ಪಾತ್ರವೆಷ್ಟಿತ್ತೋ ಗೊತ್ತಿಲ್ಲ. ಆದರೆ ಮುಂದಿನ ಚುನಾವಣೆಯಲ್ಲಂತೂ ಟ್ರಂಪ್ ಚುನಾವಣೆಯನ್ನು ಹೋಲುವ ಮಟ್ಟಿಗೆ ಈ ತಂತ್ರ ಬಳಕೆಯಾಗುವ ಸಾಧ್ಯತೆಯಂತೂ ಕಾಣಿಸುತ್ತಿದೆ.

‘ಕೇಂಬ್ರಿಜ್ ಅನಲಿಟಿಕಾ’ ಬ್ರೆಕ್ಸಿಟ್ ಪ್ರಕ್ರಿಯೆಯಲ್ಲಿಯೂ ಬಹಮುಖ್ಯ ಪಾತ್ರವಹಿಸಿತ್ತು ಎಂದು ವರದಿಗಳು ಹೇಳುತ್ತವೆ. ಯೂರೋಪಿಯನ್ ಒಕ್ಕೂಟದಿಂದ ಬ್ರಿಟನ್ ಅನ್ನು ಹೊರಗುಳಿಸುವಲ್ಲಿ ಈ ಸಂಸ್ಥೆ ರೂಪಿಸಿದ ಪ್ರಚಾರ ತಂತ್ರದ ಪಾಲಿದೆ ಎನ್ನಲಾಗುತ್ತದೆ. ಈ ಎಲ್ಲಾ ವಾದಗಳನ್ನು ಅಲ್ಲಗಳೆಯುವ ಕೆಲವು ತಂತ್ರಜ್ಞರೂ ಇದ್ದಾರೆ. ಈ ವಾದ ಪ್ರತಿವಾದಗಳೇನೇ ಇದ್ದರೂ ಮಾಹಿತಿ ತಂತ್ರಜ್ಞಾನ ಎಂಬುದು ಪ್ರಜಾಪ್ರಭುತ್ವ ಪ್ರಕ್ರಿಯೆಯಲ್ಲಿ ಬಹುಮುಖ್ಯ ಪಾತ್ರವಹಿಸುವ ಘಟಕವಾಗಿ ಬೆಳೆದು ನಿಂತಿದೆ ಎಂಬುದನ್ನಂತೂ ಈ ಎಲ್ಲಾ ಉದಾಹರಣೆಗಳೂ ಸ್ಪಷ್ಟ ಪಡಿಸುತ್ತಿವೆ.

ಪರಿಣಾಮಕಾರಿ ಪ್ರಜಾಪ್ರಭುತ್ವವೊಂದು ಸಾಧ್ಯವಾಗುವುದಕ್ಕೆ ಮತದಾರರಿಗೆ ತಾವು ಆರಿಸಬೇಕಾಗಿರುವ ಅಭ್ಯರ್ಥಿಗಳು, ಮೌಲ್ಯಗಳು ಮತ್ತು ಅವರ ಯೋಜನೆಗಳ ಕುರಿತು ಹೆಚ್ಚು ಮಾಹಿತಿ ಇರಬೇಕು. ಇದನ್ನು ಪೂರೈಸುವ ಕೆಲಸವನ್ನು ತಂತ್ರಜ್ಞಾನ ಹೆಚ್ಚು ಪರಿಣಾಮಕಾರಿಯಾಗಿ ಮಾಡುತ್ತದೆ ಎಂಬುದು ಇಲ್ಲಿಯ ತನಕದ ನಂಬಿಕೆಯಾಗಿತ್ತು. ಆದರೆ ಈಗ ಅದೇ ತಂತ್ರಜ್ಞಾನವನ್ನು ಬಳಸಿಕೊಂಡು ಮತದಾರರನ್ನು ಪರಿಣಾಮಕಾರಿಯಾಗಿ ತಪ್ಪುದಾರಿಗೆ ಎಳೆಯುವ ಸಾಧ್ಯತೆಯೊಂದು ಅನಾವರಣಗೊಂಡಿದೆ. ಕೋಟ್ಯಂತರ ರೂಪಾಯಿ ಹಣ ಹೂಡಲು ಸಾಧ್ಯವಿರುವವರು ಜನಾಭಿಪ್ರಾಯವನ್ನು ಬದಲಾಯಿಸುವ ‘ಮಾಹಿತಿ’ಯನ್ನು ಹರಡುವ  ಸಾಧ್ಯತೆ ನಿಜಕ್ಕೂ ಭಯ ಹುಟ್ಟಿಸುತ್ತದೆ.

ಈ ನಿರಾಶೆಯ ಮಧ್ಯೆಯೂ ಕೆಲವು ಭರವಸೆಯ ಕಿರಣಗಳಿವೆ. ಎಲ್ಲಾ ಮಿತಿಗಳ ಮಧ್ಯೆಯೂ ಪ್ರಜಾಪ್ರಭುತ್ವ ಎಂಬ ವ್ಯವಸ್ಥೆ ಇನ್ನೂ ಪ್ರಸ್ತುತವಾಗಿರುವುದರ ಹಿಂದೆ ಅದು ಸೃಷ್ಟಿಸುವ ಪಾಲ್ಗೊಳ್ಳುವಿಕೆಯ ಅವಕಾಶಗಳಿವೆ. ಬೃಹತ್ ದತ್ತಾಂಶ ವಿಶ್ಲೇಷಣೆ ಎಂಬುದು ಉಳ್ಳವರು ಬಳಸಬಹುದಾದ ಆಯುಧವಾಗಿರಬಹುದು. ಆದರೆ ಕೋಟಿಗಳಲ್ಲಿ ಇರುವ ಜಾಗೃತ ಬಳಕೆದಾರರು ತಮ್ಮ ವಿವೇಕವನ್ನು ಬಳಸಿದರೆ ಪ್ರಜಾಪ್ರಭುತ್ವ ಪ್ರಸ್ತುತವಾಗಿಯೇ ಇರುತ್ತದೆ. ಓಟಿಗಾಗಿ ನೋಟಿನ ಮಧ್ಯೆಯೂ ಪ್ರಜಾಪ್ರಭುತ್ವ ಪ್ರಸ್ತುತವಾಗಿರುವಂತೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT