ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತಾಂತರ

ಪರಿ ಪರಿಭಾಷೆ
Last Updated 14 ಜನವರಿ 2015, 19:30 IST
ಅಕ್ಷರ ಗಾತ್ರ

ವ್ಯಕ್ತಿಯು ಒಂದು ಧರ್ಮದಿಂದ ಇನ್ನೊಂದು ಧರ್ಮಕ್ಕೆ ಸೇರ್ಪಡೆಗೊಳ್ಳುವಾಗ ತನ್ನ ‘ಮತ’ವನ್ನು ಕೂಡ ಬದಲಿಸಿಕೊಳ್ಳುವನೆ? ಅಂದರೆ, ಧರ್ಮವೊಂದರ ಒಟ್ಟು ನಂಬಿಕೆ, ತತ್ವ, ಆಚರಣೆ, ಆಹಾರ ಇತ್ಯಾದಿಗಳ ಕುರಿತು ತನ್ನ ‘ಮತ’ವನ್ನು - ಅಭಿಪ್ರಾಯ ಎಂಬರ್ಥದಲ್ಲಿ - ಒಮ್ಮೆಗೇ ಬದಲಿಸಿಕೊಳ್ಳಲು ಸಾಧ್ಯವೆ?‘

ಸುಮಾರು ವರ್ಷಗಳ ಹಿಂದೆ ಕುವೆಂಪುರವರು ರಚಿಸಿದ ನಾಡಗೀತೆಯಲ್ಲಿ ‘ಮಧ್ವ’ ಪದ ಇರುವುದೋ, ಇರಬೇಕೋ ಎಂಬುದರ ಕುರಿತು ಚರ್ಚೆಯಾಗುವಾಗ ಪೂರ್ಣಚಂದ್ರ ತೇಜಸ್ವಿಯವರು ಪೇಜಾವರ ವಿಶ್ವೇಶತೀರ್ಥರಿಗೆ ಈ ಮುಂದಿನಂತೆ ಪ್ರಶ್ನಿಸಿದ್ದರು: ‘ಜಗತ್ತಿನ ಎಲ್ಲ ಮತಗಳನ್ನೂ ಅಭ್ಯಸಿಸಿ ಕಡೆಗೆ ಮಧ್ವಮತವೇ ಶ್ರೇಷ್ಠ ಎಂದೇನೂ ತಾವು ಮಧ್ವಮತವನ್ನು ಸ್ವೀಕರಿಸಿರುವುದಲ್ಲ; ಬದಲು ಅದು ತಮಗೆ ಜನ್ಮದತ್ತವಾಗಿ ಮಾತ್ರವೇ ಬಂದಿರುವುದು’ ಎಂದು. ಅದರ ಅರ್ಥ, ವ್ಯಕ್ತಿಯು ಬೆಳೆಯುತ್ತ ಹೋದಹಾಗೆ ಅವನಿಗೆ ತಾನು ಹುಟ್ಟಿಬಂದ ಧರ್ಮದಲ್ಲಿರುವ ಜಗದೃಷ್ಟಿ, ತತ್ವ ಮೀಮಾಂಸೆ ಮತ್ತು ಜೀವನ-ಸಮಾಜ ವಿಧಾನಗಳ ಕುರಿತು ಅಸಮಾಧಾನ, ಅಭಿಪ್ರಾಯ ಬೇಧಗಳು ಮೂಡಬಹುದು. ಆಗ ಆತನಿಗೆ ತನಗೆ ಹೊಂದಿಕೆಯಾಗುವ ಧರ್ಮಕ್ಕೆ ತೆರಳುವ ಸ್ವಾತಂತ್ರ್ಯವನ್ನು ಜಗತ್ತು ಧರ್ಮಗಳ ಹುಟ್ಟಿನ ಕಾಲದಿಂದಲೇ ಮಾನ್ಯ ಮಾಡುತ್ತ ಬಂದಿದೆ.

ಜಾತಕ ಕತೆಗಳಲ್ಲಿ ಕಾಣುವ ಬುದ್ಧ, ಜೈನ, ವೈದಿಕರ ಚರ್ಚೆಗಳಲ್ಲಿ ಯಾವ ಮತವು ಹೆಚ್ಚು ನಿಕೃಷ್ಟವಾಗಿ ಪ್ರಶ್ನೆಗಳನ್ನು ಎದುರಿಸಿದೆ ಎಂಬ ಆಧಾರದಲ್ಲಿ ಮತಾಂತರವಾಗುವ ಸಂದರ್ಭಗಳನ್ನು ಕಾಣಬಹುದು. ನಡುಗನ್ನಡದ ಪ್ರಸಿದ್ಧ ಕವಿ ರತ್ನಾಕರವಣಿಯು ‘ಭರತೇಶ್ವರಚರಿತ್ರೆ’ ಎಂಬ ಕಾವ್ಯದ ಎಂಬತ್ತನಾಲ್ಕು ಸಂಧಿಗಳನ್ನು ಬರೆದು ಪುರಸ್ಕಾರ ನೀಡುವಂತೆ ಅವನ ಗುರುಗಳನ್ನು ಕೇಳಿದಾಗ ಅವರು ‘ಇದರೊಳೆರಡು ಮೂರು ವಾಕ್ಯಂ ಪುರಾಣಕ್ಕೆ ವಿರೋಧಮಿರ್ಪುದು; ಅದರಿಂದೆ ಆಗಮ ಆಗದು’ ಎಂದು ತಿರಸ್ಕರಿಸುತ್ತಾರೆ. ಆಗ ಸಿಟ್ಟಾದ ರತ್ನಾಕರನು ‘ಆತ್ಮಜ್ಞಾನಿಗೆ ಜಾತಿ ಕುಲಮಾವುದೊಡಂ ಸಮಮೆಂದು’ ಜೈನಮತವನ್ನು ಬಿಟ್ಟು ಲಿಂಗಧಾರಣೆ ಮಾಡಿ ವೀರಶೈವನಾಗುತ್ತಾನೆ. ಆದರೆ ಸಾಯುವ ಮುನ್ನ ತಾನು ‘ಮನಸಾ ಜೈನನೇ ಇದ್ದೆನೆಂದೂ, ತಾನು ಕೊರಳಲ್ಲಿ ಕಟ್ಟಿಕೊಂಡದ್ದು ಒಂದು ಗೋಟಡಿಕೆಯೇ ಹೊರತು ಲಿಂಗವಲ್ಲವೆಂದು’ ತೋರಿಸಿ ಮತ್ತೆ ಜೈನನಾದನು.

ಯೇಸುವಿನ ಪ್ರಕಾರ ಮತಾಂತರವು ಕೇವಲ ಒಂದು ಧಾರ್ಮಿಕ ಅಸ್ಮಿತೆಯ ಬದಲಾವಣೆಯಲ್ಲ. ಅದು ಉತ್ತಮ ಹಣ್ಣುಗಳನ್ನು ಹೊಂದಬಲ್ಲ ಒಂದು ಅತ್ಯುತ್ತಮ ಮರವಾಗಿ ಪರಿವರ್ತಿತಗೊಳ್ಳುವ ಕ್ರಿಯೆ. ಇಸ್ಲಾಂ ಧರ್ಮವು, ಹುಟ್ಟುವ ಪ್ರತಿಯೊಂದು ಮಗುವೂ ಮುಸ್ಲಿಂ ಆಗಿರುತ್ತದೆ ಎಂದೂ, ಅದು ಆಗ ತನ್ನಲ್ಲಿ ಪೂರ್ಣ ಒಳ್ಳೆಯತನವನ್ನು ತುಂಬಿಕೊಂಡಿರುತ್ತದೆಂದೂ ಹೇಳುತ್ತದೆ. ಇಸ್ಲಾಂ ಧರ್ಮವನ್ನು ಅಪ್ಪಿಕೊಳ್ಳುವುದು, ಹಾಗಾಗಿ, ತಾನು ಮೊದಲಿದ್ದ ಧರ್ಮಕ್ಕೆ ಮರಳುವುದಷ್ಟೇ ಹೊರತು ಮತಾಂತರವಲ್ಲ ಎಂಬುದು ಅದರ ವಾದ. ಜೈನಧರ್ಮಕ್ಕೆ ಪರಿವರ್ತಿತಗೊಳ್ಳಲು ಯಾವ ಗುರುಗಳ, ಮಠಗಳ ಅಪ್ಪಣೆಯೂ ಬೇಕಿಲ್ಲ. ಅದರ ಐದು ವಚನಗಳನ್ನು ಒಪ್ಪಿಕೊಂಡರೆ ಅಲ್ಲಿಗೆ ಜೈನನಾದಂತೆ. ಹಿಂದೂಧರ್ಮ ಕಾಲಾಂತರದಲ್ಲಿ ಎಲ್ಲರನ್ನೂ ತನ್ನೊಳಗೆ ನೊಣೆದುಕೊಂಡಿದೆ. ಹೂಣರು, ಅಹೋಮರು, ಶಾತವಾಹನರು, ಒಂದು ಕಾಲದಲ್ಲಿ ಯಹೂದಿಗಳಾಗಿದ್ದರೆಂದು ಹೇಳಲಾಗುವ ಚಿತ್ಪಾವನ್ನರು, ಇನ್ನೂ ಅನೇಕರನ್ನು ಅದು ತನ್ನ ಸಾಮಾಜಿಕ, ಚಾರಿತ್ರಿಕ ಸನ್ನಿವೇಶಗಳಲ್ಲಿ ಒಂದುಮಾಡಿಕೊಂಡು ಮುನ್ನಡೆದಿದೆ.

11ನೇ ಶತಮಾನದ ಬರ್ಮಾದ ರಾಜ ಅನೋರಥನು ತನ್ನಿಡೀ ದೇಶವನ್ನೇ ತೇರವಾಡ ಬುದ್ಧ ಧರ್ಮಕ್ಕೆ ಮತಾಂತರಿಸಿದ್ದನು. ಈಚಿನ ದಶಕಗಳಲ್ಲಿ ಬುದ್ಧಿ ಕೆಡಿಸಿ ಮತಾಂತರ ಮಾಡುವ ಕುರಿತು ಸುದ್ದಿಗಳಿವೆ. ಕ್ಯಾಲಿಫೋರ್ನಿಯಾದ Church of Scientology ಸುಂದರ ನಟ ಟಾಮ್ ಕ್ರೂಸ್‌ನಂತಹವರನ್ನು ಬಳಸಿಕೊಂಡು, ‘ಉಚಿತ ಒತ್ತಡ ಪರೀಕ್ಷೆ’ ಬಗೆಯ ಆಧುನಿಕ ವಿಧಾನಗಳಿಂದ ಮತಾಂತರವನ್ನು ಚಾಲ್ತಿಯಲ್ಲಿಟ್ಟಿದೆ.

ಆಫ್ರಿಕಾದ ಅನೇಕ ದೇಶಗಳು ವಸಾಹತುಶಾಹಿಯ ಕಾಲದಲ್ಲಿ ಕ್ರೈಸ್ತಧರ್ಮವನ್ನೂ, ಅದಕ್ಕೂ ಹಿಂದೆ ಉತ್ತರ ಆಫ್ರಿಕಾದ ದೇಶಗಳು ಇಸ್ಲಾಂ ಅನ್ನೂ ಅಪ್ಪಿಕೊಳ್ಳಬೇಕಾಯಿತು. ಆದರೆ ಇಂದಿಗೂ ಈ ದೇಶಗಳ ಅರ್ಧದಷ್ಟು ಜನಸಂಖ್ಯೆಯು ಸ್ಥಳೀಯ ಧಾರ್ಮಿಕ ನಂಬುಗೆಯ ಜನರನ್ನೂ ಹೊಂದಿವೆ. ಕ್ರೈಸ್ತರಾಗಿಯೂ ಮೂರ್ತಿಪೂಜೆ, ಪ್ರಕೃತಿಯ ಅಗೋಚರ ಶಕ್ತಿಗಳಿಗೆ ಪ್ರಾಣಿಬಲಿ ಇನ್ನಿತರೇ ಆಚರಣೆಗಳು ಹಾಗೆಯೇ ಮುಂದುವರೆದಿವೆ. ದಕ್ಷಿಣ ಕನ್ನಡ ಜಿಲ್ಲೆಯ ನಾಗಮಂಡಲ ಹಾಗೂ ಆ ಬಗೆಯ ಆಚರಣೆಗಳಲ್ಲಿ ಹಿಂದೂಗಳಲ್ಲದವರ ಪಾಲ್ಗೊಳ್ಳುವಿಕೆ ಸರಳ ಸಹಜವಾಗಿ ಚಾಲ್ತಿಯಲ್ಲಿದೆ.

ಭಾರತಕ್ಕೆ ಮಿಷನರಿಗಳಾಗಿ ಬಂದ ಆಬ್ ಡುಬ್ವಾ (Abbe Dubois), ರಾಬರ್ಟ್ ದ್ ನೊಬಿಲಿ, ಉಚ್ಚವರ್ಗದ ಬ್ರಾಹ್ಮಣರನ್ನು ಕ್ರೈಸ್ತರನ್ನಾಗಿ ಮಾಡುವ ಸಾಹಸ ಮಾಡಿ ಆ ಕಾರಣದಿಂದಲೇ ‘ರೋಮನ್ ಬ್ರಾಹ್ಮಣ’ನೆಂದು ಹೆಸರು ಪಡೆದ ಸಂತ ಜಾನ್ ದ್ ಬ್ರಿಟ್ಟೋ ಮತ್ತಿತರರು ಭಾರತದ ಸಾಹಿತ್ಯ, ಸಮಾಜಶಾಸ್ತ್ರ, ಮಾನವಶಾಸ್ತ್ರಗಳನ್ನು ಕುರಿತು ಮಾಡಿದ ಕೆಲಸ ಆಶ್ಚರ್ಯನುಪಮವಾದದ್ದು. ತಮಿಳಿನ ಆಡು ಭಾಷೆಯ ವ್ಯಾಕರಣ ಸೇರಿದಂತೆ 25 ಇತರ ಕೃತಿಗಳನ್ನು ಬರೆದ ಫಾದರ್ ಬೆಶ್ಚಿ ‘ತೆಂಬಾವಿ’ ಎಂಬ ಕಾವ್ಯವನ್ನೂ ಬರೆದ. ಆತನ ತಮಿಳು ಪಾಂಡಿತ್ಯವನ್ನು ಕಂಡು ಮಧುರೆಯ ತಮಿಳು ಸಂಘ ಆತನಿಗೆ ‘ವೀರಮಾನ್ ಮುನಿವರ್’ ಎಂಬ ಪ್ರಶಸ್ತಿಯನ್ನೂ ನೀಡಿತ್ತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT