ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತಷ್ಟು ಪ್ರಯತ್ನದ ಅವಶ್ಯಕತೆ

Last Updated 27 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

ನಾಲ್ಕಾರು ವರ್ಷಗಳ ಹಿಂದೆ ನಾನು ಮೈಸೂರಿನಲ್ಲಿ ಶಿಕ್ಷಕರಿಗೆ ಕಾರ್ಯಾಗಾರ ನಡೆಸುತ್ತಿದ್ದೆ. ಅದೊಂದು ಬಹುದೊಡ್ಡ ರಂಗಮಂದಿರದಲ್ಲಿ ವ್ಯವಸ್ಥೆಯಾಗಿತ್ತು. ಸುಮಾರು ನಾಲ್ಕುನೂರು ಜನ ಶಿಕ್ಷಕ, ಶಿಕ್ಷಕಿಯರು ಅದರಲ್ಲಿ ಭಾಗವಹಿಸಿದ್ದರು. ಬೆಳಿಗ್ಗೆ ಒಂಭತ್ತರಿಂದ ಸಂಜೆ ಐದು ಗಂಟೆಯವರೆಗೂ ನಡೆಯುವ ಕಾರ್ಯಾಗಾರ ಅದಾಗಿತ್ತು. ‘ಶಿಕ್ಷಕರಲ್ಲಿ ನೈತಿಕತೆ’ ಎಂಬ ವಿಷಯದ ಮೇಲೆ ಚರ್ಚೆ ನಡೆಸುತ್ತಿದ್ದೆ.

ಒಂದು ಹಂತದಲ್ಲಿ ನಾನು ಅವರಿಗೆಲ್ಲರಿಗೂ ಕ್ಷಣಹೊತ್ತು ಕಣ್ಣುಮುಚ್ಚಿ ತಮಗೆ ಪಾಠ ಕಲಿಸಿದ ಶಿಕ್ಷಕರೆಲ್ಲರನ್ನು ನೆನಪಿಸಿಕೊಳ್ಳುವಂತೆ ಹೇಳಿದೆ. ನಂತರ ನೆನಪಿಗೆ ಬಂದ ಎಲ್ಲ ಶಿಕ್ಷಕರ ಹೆಸರುಗಳನ್ನು ಬರೆಯಲು ತಿಳಿಸಿದೆ. ಕೆಲವರು ಕೇವಲ ಒಂದೆರಡು ಹೆಸರುಗಳನ್ನು, ಕೆಲವರು ಹತ್ತಾರು, ಮತ್ತೆ ಕೆಲವರು ಇಪ್ಪತ್ತು-ಮೂವತ್ತು ಹೆಸರುಗಳನ್ನು ಬರೆದಿದ್ದರು. ಯಾರೂ ನಲವತ್ತಕ್ಕಿಂತ ಹೆಚ್ಚು ಹೆಸರುಗಳನ್ನು ಬರೆದಿರಲಿಲ್ಲ.

ಅಂದರೆ ತಮಗೆ ಕಲಿಸಿದ ಬಹಳಷ್ಟು ಜನ ಶಿಕ್ಷಕರ ಹೆಸರುಗಳು ಮರೆತೇ ಹೋಗಿವೆ. ಕೆಲವರು ಮಾತ್ರ ನೆನಪಿನಲ್ಲಿ ಉಳಿದಿದ್ದಾರೆ. ಯಾರು ನಿಮ್ಮ ಜೀವನದ ಮೇಲೆ ಪ್ರಭಾವ ಬೀರಿದರೋ ಅವರು ಮಾತ್ರ ಸ್ಮರಣೆಯಲ್ಲಿ ನಿಂತು ಉಳಿದವರು ಗುರುತಿಲ್ಲದೇ ಅಳಿಸಿಹೋಗಿದ್ದಾರೆ. ದುರ್ದೈವವೆಂದರೆ ವಿದ್ಯಾರ್ಥಿಗಳ ಜೀವನವನ್ನು ಬದಲಿಸುವ, ನಿರ್ದೇಶನ ನೀಡುವ ಶಿಕ್ಷಕರ ಸಂಖ್ಯೆ ಯಾವತ್ತಿಗೂ ತೀರ ಚಿಕ್ಕದೇ ಅಲ್ಲವೇ?

ಆಮೇಲೆ ನಾನು ಶಿಕ್ಷಕರಿಗೆ ತಾವು ಮಾಡಿದ ಪಟ್ಟಿಯಲ್ಲಿ ತಮ್ಮ ಅತ್ಯಂತ ಅಚ್ಚುಮೆಚ್ಚಿನ ಒಬ್ಬ ಶಿಕ್ಷಕರ ಹೆಸರನ್ನು ಗುರುತಿಸಲು ಹೇಳಿದೆ. ಎಲರ್ಲೂ ತಕ್ಷಣವೇ ಗುರುತು ಮಾಡಿದರು. ಆಗ ನಾನು ಕೆಲವರಾದರೂ ತಮ್ಮ ಅತ್ಯಂತ ಪ್ರೀತಿಯ ಶಿಕ್ಷಕರ ಹೆಸರನ್ನು ಹೇಳಿ ಅವರಲ್ಲಿ ತಾವು ಕಂಡಿದ್ದ ಎರಡು ಶ್ರೇಷ್ಠ ಗುಣಗಳನ್ನು ಹೇಳಲು ಕೇಳಿಕೊಂಡೆ.

ಒಬ್ಬೊಬ್ಬರಾಗಿ ವೇದಿಕೆಗೆ ಬಂದು ತಾವು ಕಂಡ ಶ್ರೇಷ್ಠ ಗುರುಗಳ ಗುಣಗಳನ್ನು ವರ್ಣಿಸತೊಡಗಿದರ. ನಂತರ ಬಂದವರು ಒಬ್ಬ ಸುಮಾರು 35-40 ವರ್ಷದ ಮಹಿಳೆ. ಆಕೆ ಮೈಸೂರಿನಲ್ಲೇ ಶಿಕ್ಷಣ ಮುಗಿಸಿ ನಂತರ ಪರದೇಶಕ್ಕೆ ಹೋಗಿ ಉನ್ನತ ಶಿಕ್ಷಣ ಪಡೆದು ಕೆಲವರ್ಷ ಕೆಲಸಮಾಡಿ ಮರಳಿ ಮೈಸೂರಿಗೆ ಬಂದು ಒಂದು ಶಾಲೆಯ ಮುಖ್ಯಸ್ಥೆಯಾಗಿದ್ದಾರೆ.

ಆಕೆಯ ಮಾತಿನಲ್ಲಿ ಗಾಂಭೀರ್ಯವಿತ್ತು, ಸೊಗಸಿತ್ತು, ಆತ್ಮವಿಶ್ವಾಸವಿತ್ತು. ತನಗೆ ಸ್ಪೂರ್ತಿಯನ್ನಿತ್ತ ಶಿಕ್ಷಕಿಯ ಬಗ್ಗೆ ಮಾತನಾಡುತ್ತ ಆಕೆ ಭಾವಾವೇಶಕ್ಕೆ ಒಳಗಾದರು. ಕಂಠ ಬಿಗಿದು ಬಂತು, ಕಣ್ಣಲ್ಲಿ ನೀರಿಳಿದವು. ‘ಸರ್ ನನಗೆ ಆತ್ಮವಿಶ್ವಾಸವನ್ನಿತ್ತ ನನ್ನ ಪ್ರೀತಿಯ ಶಿಕ್ಷಕಿ ಕೂಡ ಇದೇ ಸಭಾಂಗಣದಲ್ಲಿದ್ದಾರೆ. ಆಗೋ ಅಲ್ಲಿ ಕೊನೆಯ ಸಾಲಿನಲ್ಲಿ ಬಲಭಾಗದಲ್ಲಿ ಕುಳಿತಿದ್ದಾರೆ’ ಎಂದು ಬಿಕ್ಕಿದರು. ಎಲ್ಲರ ಕತ್ತು ಆ ಹಿರಿಯ ಶಿಕ್ಷಕಿ ಇದ್ದ ಕಡೆ ತಿರುಗಿದವು. ನಾನು ಅವರತ್ತ ಧಾವಿಸಿ ಮುಂದೆ ನಿಂತು ನೋಡಿದರೆ ಅವರೂ ಅಳುತ್ತಿದ್ದಾರೆ.

ಅವರನ್ನು ಅಲ್ಲಿಂದ ಕರೆದುಕೊಂಡು ವೇದಿಕೆಯ ಮೇಲೆ ಬಂದೆ. ಅದೊಂದು ಅದ್ಭುತ ದೃಶ್ಯ! ಗುರುವಿನಿಂದ ಕಲಿತು ಕೃತಜ್ಞತೆ ಅನುಭವಿಸಿದ ಶಿಷ್ಯೆ ಒಂದೆಡೆಯಾದರೆ ಕಲಿಸಿ ಧನ್ಯತೆಯನ್ನು ಪಡೆದ ಗುರು ಇನ್ನೊಂದೆಡೆಗೆ. ಆಗ ನಾನು ಗುರುವಾಗಿದ್ದ ಶಿಕ್ಷಕಿಗೆ ಕೇಳಿದೆ, ‘ನಿಮ್ಮ ವಿದ್ಯಾರ್ಥಿನಿ ನಿಮ್ಮ ಮೇಲಿನ ಅಭಿಮಾನದಿಂದ, ಕೃತಜ್ಞತೆಯಿಂದ ಭಾವಾವೇಶಕ್ಕೆ ಒಳಗಾಗುವುದು ಸಹಜ. ಆದರೆ ನೀವೇಕೆ ಅಳುತ್ತಿದ್ದೀರಿ’ ಆಕೆ ಹೇಳಿದ ಮಾತು ನನ್ನನ್ನು ಮೂಕವಿಸ್ಮಿತನನ್ನಾಗಿಸಿತು.
 
‘ಸರ್, ಈ ಹುಡುಗಿ ನನ್ನ ಬಗ್ಗೆ ಇಷ್ಟು ಒಳ್ಳೆಯ ಮಾತು ಹೇಳುತ್ತಿದ್ದಾಗ ನನಗೆ ತುಂಬ ದು:ಖ ಉಕ್ಕಿ ಬಂದಿತು. ನನ್ನನ್ನು ನನ್ನ ವಿದ್ಯಾರ್ಥಿಗಳು ಇಷ್ಟೊಂದು ಮೆಚ್ಚಿಕೊಳ್ಳುತ್ತಾರೆ ಎಂದುಕೊಂಡಿರಲಿಲ್ಲ. ನಾನು ಮಾಡಿದ ಸ್ವಲ್ಪ ಪ್ರಯತ್ನವನ್ನೇ ಮಕ್ಕಳು ಇಷ್ಟೊಂದು ಮೆಚ್ಚಿಕೊಳ್ಳುತ್ತಾರೆ ಎಂದು ತಿಳಿದಿದ್ದರೆ ನಾನು ಇನ್ನೂ ಹೆಚ್ಚು ಪ್ರಯತ್ನಮಾಡಿ, ಪ್ರಾಮಾಣಿಕವಾಗಿ ಪಾಠ ಮಾಡುತ್ತಿದ್ದೆ’. ಆಕೆ ಕಣ್ಣೊರೆಸಿಕೊಂಡು ಮತ್ತೆ ಹೇಳಿದರು, ‘ನನಗೆ ಇನ್ನೂ ಒಂದು ವರ್ಷ ನೌಕರಿ ಇದೆ.

ಅದರಲ್ಲಿ ನಿಜವಾಗಿಯೂ ಚೆನ್ನಾಗಿ ಪ್ರೀತಿಯಿಂದ ಕೆಲಸ ಮಾಡುತ್ತೇನೆ’. ನನಗೆ ಕಣ್ಣು ತುಂಬಿ ಬಂದವು. ಶಿಕ್ಷಕರಾದ ನಾವು ಮಾಡಿದ ಅಲ್ಪ ಪ್ರಯತ್ನಗಳೇ ಮಕ್ಕಳಲ್ಲಿ ಅಷ್ಟೊಂದು ಬದಲಾವಣೆ ತರುತ್ತಿದ್ದರೆ, ಇನ್ನಷ್ಟು ಪ್ರಯತ್ನಮಾಡಿ, ಪ್ರೀತಿಯನ್ನು ತುಂಬಿ ಪಾಠ ಮಾಡಿದರೆ ಎಂತಹ ಸಮೃದ್ಧ, ಸುಸಂಸ್ಕೃತ ಸಮಾಜವನ್ನು ನಿರ್ಮಿಸಬಹುದಲ್ಲವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT