ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೆ ಇಣುಕಿ ನೋಡುತ್ತಿದೆ ತುರ್ತುಪರಿಸ್ಥಿತಿ

Last Updated 5 ನವೆಂಬರ್ 2016, 19:30 IST
ಅಕ್ಷರ ಗಾತ್ರ
ತುರ್ತು ಪರಿಸ್ಥಿತಿಯು ಸ್ವತಂತ್ರ ಭಾರತದ ಇತಿಹಾಸದಲ್ಲಿಯೇ ಅತ್ಯಂತ ಕರಾಳವಾದ ಸಂದರ್ಭವಾಗಿತ್ತು. ಅಸಂಖ್ಯ ಜನರು ಅದರ ಭಾಗವಾಗಿರಲು ನಿರಾಕರಿಸಿದ್ದರು. ಪತ್ರಿಕೋದ್ಯಮ, ನ್ಯಾಯಾಂಗವೂ ಅದರ ವಿರುದ್ಧ ಗಟ್ಟಿಯಾಗಿ ದನಿ ಎತ್ತಿದ್ದವು. ಇವೆಲ್ಲವೂ ಒಟ್ಟಾಗಿ ಕಾಂಗ್ರೆಸ್‌ ಪಕ್ಷದ ಅಧ್ಯಕ್ಷರಾಗಿದ್ದ ದೇವಕಾಂತ್‌ ಬರೂಹಾ ಅವರ ‘ಇಂಡಿಯಾ ಎಂದರೆ ಇಂದಿರಾ’ ಎನ್ನುವ ಭಟ್ಟಂಗಿತನದ ಪರಾಕಾಷ್ಠೆಯ ಹೇಳಿಕೆ ವಿರುದ್ಧ ದೊಡ್ಡ ಅಲೆಯಾಗಿ ಪರಿಣಮಿಸಿದ್ದವು.   
 
ಪ್ರಧಾನಿ ನರೇಂದ್ರ ಮೋದಿ ಅವರು ಸಮಯ ಸಿಕ್ಕಾಗಲೆಲ್ಲ, ತುರ್ತು ಪರಿಸ್ಥಿತಿಯ ಕರಾಳ ದಿನಗಳನ್ನು ಉದ್ಧರಿಸುತ್ತ, ನಮ್ಮ ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಬುಡಮೇಲು ಮಾಡುವ ಪ್ರಯತ್ನಗಳ ವಿರುದ್ಧ ನಾವು ಸದಾ ಎಚ್ಚರದಿಂದ ಇರಬೇಕು ಎಂದು ನಮ್ಮನ್ನೆಲ್ಲ ಎಚ್ಚರಿಸುತ್ತಲೇ ಇರುತ್ತಾರೆ.  ಮೊನ್ನೆ ನಡೆದ ಪತ್ರಿಕೋದ್ಯಮದ ಶ್ರೇಷ್ಠತೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮತ್ತೆ ಅಂತಹದ್ದೇ ಪ್ರಯತ್ನ ಮಾಡಿದರು. ತುರ್ತುಪರಿಸ್ಥಿತಿ ವಿರೋಧಿಸಿದ ಮಾಧ್ಯಮದ ಹೆಮ್ಮೆಯ ಸಂಕೇತವಾಗಿರುವ ದಿವಂಗತ ರಾಮನಾಥ ಗೋಯೆಂಕಾ ಅವರ ಹೆಸರಿನಲ್ಲಿ ನೀಡಲಾಗುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿನ ಪ್ರಧಾನಿ ಮಾತು ಒಳ್ಳೆಯ ಎಚ್ಚರಿಕೆಯಾಗಿರುವುದರಲ್ಲಿ ಸಂದೇಹವೇ ಇಲ್ಲ. 
 
40 ವರ್ಷಗಳ ಹಿಂದೆಯೇ ತುರ್ತುಪರಿಸ್ಥಿತಿ ಕೊನೆಗೊಂಡಿದ್ದರೂ, ಸರ್ವಾಧಿಕಾರತ್ವ ಮತ್ತೆ ಮರಳುವ ಸಾಧ್ಯತೆ ಇದ್ದೇ ಇದೆ. ಪಠಾಣ್‌ಕೋಟ್‌ ಸೇನಾ ನೆಲೆಯ ಮೇಲೆ ಉಗ್ರರು ನಡೆಸಿದ ದಾಳಿ ಮತ್ತು ಪ್ರತಿಯಾಗಿ ನಡೆದ ಕಾರ್ಯಾಚರಣೆಯನ್ನು ಪ್ರಸಾರ ಮಾಡುವಾಗ ಸ್ಥಾಪಿತ ನೀತಿ ಸಂಹಿತೆ ಉಲ್ಲಂಘನೆ ಮಾಡಿದ ಆರೋಪಕ್ಕಾಗಿ ಮಾಹಿತಿ ಮತ್ತು ಪ್ರಸಾರ ಸಚಿವಾಲಯವು ಎನ್‌ಡಿಟಿವಿ ಹಿಂದಿ ಚಾನೆಲ್‌ ವಿರುದ್ಧ ಒಂದು ದಿನದ ನಿರ್ಬಂಧ ವಿಧಿಸಿದ ಸಂದರ್ಭದಲ್ಲಿಯೇ ಪ್ರಧಾನಿ ಈ ರೀತಿ ಮಾತನಾಡಿರುವುದನ್ನು ನಾವು ಇಲ್ಲಿ ವಿಶೇಷವಾಗಿ ಪರಿಗಣಿಸಬೇಕಾಗಿದೆ.
 
ಪ್ರಧಾನಿ ಭಾಷಣ ಮತ್ತು ಟೆಲಿವಿಷನ್‌ ವಾಹಿನಿ ಮೇಲಿನ ನಿಷೇಧ ಎರಡೂ ಒಂದೇ ಸಮಯಕ್ಕೆ ಘಟಿಸಿರುವುದು ಕಾಕತಾಳೀಯ ಇರಬಹುದು ಎಂದೇ ನಾವು ಪರಿಗಣಿಸೋಣ. ತುರ್ತುಪರಿಸ್ಥಿತಿ ಬಗ್ಗೆ ಯಾವುದೇ ಹಿಂಜರಿಕೆ ಇಲ್ಲದೆ ದಿಟ್ಟತನದಿಂದ ಪ್ರತಿಭಟಿಸಿದ ಗೋಯೆಂಕಾ ಅವರನ್ನು ದೇಶಿ ಪತ್ರಿಕೋದ್ಯಮವು ಹೆಮ್ಮೆಯಿಂದ ಸ್ಮರಿಸುವ ಕಾರ್ಯಕ್ರಮದ ದಿನವೇ, ಪ್ರಮುಖ ಮಾಧ್ಯಮ ಸಂಘಟನೆಯ ವಿರುದ್ಧ ನಿಷೇಧ ವಿಧಿಸುವ ಆದೇಶ ಹೊರಡಿಸುವ ಮುಂಚೆ ಸಚಿವಾಲಯವು ಇದು ಸರಿಯಾದ ಸಮಯವೇ ಎನ್ನುವ ಬಗ್ಗೆ ಕೊಂಚ ಆಲೋಚನೆ ಮಾಡಬೇಕಾಗಿತ್ತು.  ತುರ್ತುಪರಿಸ್ಥಿತಿ ಸಂದರ್ಭದಲ್ಲಿ ವಿ.ಸಿ.ಶುಕ್ಲಾ ಅವರು ಪತ್ರಿಕೆಗಳ ಮೇಲೆ ವಿಧಿಸಿದ್ದ  ನಿರ್ಬಂಧವನ್ನೇ ಇದೂ ನೆನಪಿಸುತ್ತಿದೆ.
 
ಪ್ರಧಾನಿ ಭಾಷಣದ ಪೂರ್ಣ ಪಾಠ ನೋಡಿದರೆ, ತುರ್ತು ಪರಿಸ್ಥಿತಿಯಂತಹ ದಿನಗಳು ಮರುಕಳಿಸಲಾರವು ಎನ್ನುವ ಭಾವನೆ ಮೂಡಿಸಿದ್ದರೆ, ಅದೇ ಹೊತ್ತಿಗೆ, ಎನ್‌ಡಿಟಿವಿ ಮೇಲಿನ ನಿಷೇಧ ಖಂಡಿಸಿ ‘ಗೌರವಾನ್ವಿತ’ ಭಾರತದ ಸಂಪಾದಕರ ಮಂಡಳಿ (ಇಜಿಐ) ಹೊರಡಿಸಿದ ಹೇಳಿಕೆಯು, ಸರ್ಕಾರದ ನಿರ್ಧಾರವನ್ನು ತುರ್ತುಪರಿಸ್ಥಿತಿ ಸಂದರ್ಭದಲ್ಲಿನ ಸುದ್ದಿಗಳ ನಿಯಂತ್ರಣಕ್ಕೆ ಹೋಲಿಸಿದೆ. ಸಂಪಾದಕರ ಮಂಡಳಿಗೆ ನಾನು ‘ಗೌರವಾನ್ವಿತ’ ಎನ್ನುವ ವಿಶೇಷಣವನ್ನು ಬಳಸಿರುವುದಕ್ಕೆ ಎರಡು ಕಾರಣಗಳನ್ನು ನೀಡಲು ಬಯಸುವೆ.
 
ಕೆಲ ವರ್ಷಗಳಿಂದ ದಿನಪತ್ರಿಕೆಗಳ ಮಾಲೀಕರು ಸಂಪಾದಕೀಯ ನಿರ್ಧಾರಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದಾರೆ ಅಥವಾ ಹೆಚ್ಚು ಸುದ್ದಿ ಮಾಡದ ಸಂಪಾದಕರನ್ನು ನೇಮಕ ಮಾಡಿಕೊಳ್ಳುತ್ತಿದ್ದಾರೆ. ಮಂಡಳಿ ಸಾಂಪ್ರದಾಯಿಕ ಹಳೆ ಶಾಲೆಯ ಕ್ಲಬ್‌ನಂತೆ ಕಾರ್ಯ ನಿರ್ವಹಿಸುತ್ತಿದೆ. ಮಂಡಳಿಯ ಸಭೆಯೂ ನಿಯಮಿತವಾಗಿ ನಡೆಯುತ್ತಿಲ್ಲ. ಮಂಡಳಿಯು ತನ್ನದೇ ಆದ ಅಂತರ್ಜಾಲ ತಾಣ ನಿರ್ಮಿಸಲು ಮತ್ತು ಟ್ವಿಟರ್‌ ಖಾತೆ ಹೊಂದಲು ಈಗಲೂ ಹೆಣಗಾಡುತ್ತಿದೆ. ಎರಡನೆಯದಾಗಿ, ಈ ಹಿಂದೆಯೂ ಮಂಡಳಿಯು ಸರ್ಕಾರದ ಯಾವುದೇ ನ್ಯಾಯಯುತವಲ್ಲದ ನಿರ್ಧಾರವನ್ನು ಖಂಡಿಸಿ ಪ್ರತಿಭಟನೆ ದಾಖಲಿಸುವಾಗ, ಸ್ವಯಂ ನಿಯಂತ್ರಣ ಹೇರಿಕೊಂಡು, ವಸ್ತುಸ್ಥಿತಿ ಮರೆಮಾಚಿ ಇಲ್ಲವೇ ಸರ್ಕಾರ ತಳೆದ ಧೋರಣೆಯ ತೀವ್ರತೆ ತಗ್ಗಿಸುವ ಸಂಪಾದಕೀಯ ಧಾಟಿಯಲ್ಲಿ ಪ್ರತಿಕ್ರಿಯಿಸುತ್ತಿತ್ತು. ಆದರೆ, ಇತ್ತೀಚಿನ ಪ್ರತಿಭಟನೆಯಲ್ಲಿ ಸಾಕಷ್ಟು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. 
 
ತುರ್ತುಪರಿಸ್ಥಿತಿ ಸಂದರ್ಭದಲ್ಲಿ ಬೆರಳೆಣಿಕೆಯಷ್ಟು ಪತ್ರಕರ್ತರು ವ್ಯವಸ್ಥೆಯ ವಿರುದ್ಧ ಹೋರಾಟ ನಡೆಸಿದ್ದರೆ, ಅನೇಕರು ವ್ಯವಸ್ಥೆ ಜತೆ ರಾಜಿ ಮಾಡಿಕೊಂಡಿದ್ದರು. ಎಲ್‌.ಕೆ.ಅಡ್ವಾಣಿ ಅವರ ವಿಶಿಷ್ಟ ಹೇಳಿಕೆಯನ್ನು ನಾನು ಇಲ್ಲಿ ಉಲ್ಲೇಖಿಸಲೇಬೇಕು.  ‘ಸರ್ಕಾರ ಬೆನ್ನು ಬಾಗಿಸಲು ಹೇಳಿದ್ದರೆ, ಭಾರತದ ಪತ್ರಿಕೋದ್ಯಮ ತೆವಳಲು ಮುಂದಾಗಿತ್ತು’ ಎಂದು  ಲೇವಡಿ ಮಾಡಿದ್ದರು. ಗೋಯೆಂಕಾ ಅವರ ‘ಎಕ್ಸ್‌ಪ್ರೆಸ್‌’, ಸಿ.ಆರ್‌.ಇರಾನಿ ಅವರ ‘ಸ್ಟೇಟ್ಸ್‌ಮನ್‌’ ಇವರೆಲ್ಲರಿಗಿಂತ ಹೆಚ್ಚು ಧೈರ್ಯದ ರಾಜ್‌ಮೋಹನ್‌ ಗಾಂಧಿ ಅವರ ಒಡೆತನದ  ಪುಟ್ಟ ನಿಯತಕಾಲಿಕ ‘ಹಿಮ್ಮತ್‌’ ಹೊರತುಪಡಿಸಿದರೆ ದೇಶಿ ಪತ್ರಿಕೋದ್ಯಮವು ತುರ್ತುಪರಿಸ್ಥಿತಿ ವಿರುದ್ಧ ಗಟ್ಟಿಯಾಗಿ ದನಿ ಎತ್ತಿ ಪ್ರತಿಭಟನೆ ಸೊಲ್ಲು ದಾಖಲಿಸಲು ವಿಫಲವಾಗಿತ್ತು.
 
ಇಂದಿರಾ ಗಾಂಧಿ ಅವರಲ್ಲಿಯೂ ಪತ್ರಿಕೋದ್ಯಮ ಕುರಿತು ದ್ವೇಷದ ಭಾವನೆ ಮನೆಮಾಡಿತ್ತು. ಕೆಲ ಪತ್ರಿಕೆಗಳ ಮಾಲೀಕರು ಮೂಲತಃ ಸೆಣಬಿನ (jute) ಉದ್ಯಮಿಗಳಾಗಿದ್ದರಿಂದ, ಪತ್ರಿಕೋದ್ಯಮವನ್ನು ಅವರು ‘ಜೂಟ್‌ ಮತ್ತು ಝೂಟ್‌ (ಸುಳ್ಳಿನ ಮಾಧ್ಯಮ)’ ಎಂದೇ ಹೀಗಳೆಯುತ್ತಿದ್ದರು. ‘ಹಿಂದೂಸ್ತಾನ್‌ ಟೈಮ್ಸ್‌’ನ ಸಂಪಾದಕರಾಗಿದ್ದ ಬಿ.ಜಿ.ವರ್ಗೀಸ್ ಅವರನ್ನು ತುರ್ತುಪರಿಸ್ಥಿತಿ ಜಾರಿಗೆ ಬಂದ ಮೂರು ತಿಂಗಳಲ್ಲಿ ಪತ್ರಿಕೆಯಿಂದ ವಜಾ ಮಾಡಲಾಗಿತ್ತು. ಸಿಕ್ಕಿಂ ಅನ್ನು ಭಾರತದಲ್ಲಿ ವಿಲೀನ ಮಾಡಿಕೊಂಡಿದ್ದನ್ನು ‘ವಶಪಡಿಸಿಕೊಳ್ಳಲಾಗಿದೆ’ ಎಂಬರ್ಥದಲ್ಲಿ ಸಂಪಾದಕೀಯ ಬರೆದ ಕಾರಣಕ್ಕೆ ಅವರನ್ನು ವಜಾ ಮಾಡಲಾಗಿತ್ತು. ಅವರಿಗೆ ರಾಷ್ಟ್ರ ವಿರೋಧಿ ಹಣೆಪಟ್ಟಿಯನ್ನೂ ಹಚ್ಚಲಾಗಿತ್ತು. 
 
ಪತ್ರಿಕೋದ್ಯಮದ ವಿದ್ಯಾರ್ಥಿಗಳೂ ಸೇರಿದಂತೆ ಅನೇಕರು ಇಲ್ಲಿ ಆಸಕ್ತಿದಾಯಕ ಸಂಗತಿಯೊಂದನ್ನು ನೆನಪಿಸಿಕೊಳ್ಳಲೇಬೇಕು. ವರ್ಗೀಸ್‌ ಅವರ ಬಹುತೇಕ ಪತ್ರಕರ್ತ ಮಿತ್ರರು ಕನಿಷ್ಠ ಈ ದೋಷಾರೋಪದ ವಿರುದ್ಧವೂ ದನಿ ಎತ್ತಲೇ ಇಲ್ಲ. ಅಭಿವ್ಯಕ್ತಿ ಸ್ವಾತಂತ್ರ್ಯ ಇರಬೇಕು ಎನ್ನುವುದು ನಿಜ. ಆದರೆ, ಸಿಕ್ಕಿಂ ವಿಲೀನವನ್ನು ರಾಷ್ಟ್ರೀಯ ಹಿತಾಸಕ್ತಿಗೆ ವಿರುದ್ಧವಾಗಿ ಪ್ರಶ್ನಿಸಿ ವಿವಾದಕ್ಕೆ ಎಡೆಮಾಡಿಕೊಡುವುದು ಸರಿಯೇ  ಎನ್ನುವುದು ಕೆಲವರ ಪ್ರಶ್ನೆಯಾಗಿತ್ತು. ಸದ್ಯಕ್ಕೆ ಎನ್‌ಡಿಟಿವಿ ಮೇಲಿನ ನಿಷೇಧಕ್ಕೆ ಸಂಬಂಧಿಸಿದಂತೆ ಮಾಧ್ಯಮದ ಹೋರಾಟದಲ್ಲಿಯೂ ಇದೇ ಬಗೆಯ  ಸಂದಿಗ್ಧ ಕಂಡು ಬರುತ್ತಿದೆ. ಸಂಪಾದಕರ ಮಂಡಳಿ ಮತ್ತು ಈ ಮೊದಲು ‘ಪ್ರೆಸ್‌’ ಎಂದು ಕರೆಯುತ್ತಿದ್ದ ಮುದ್ರಣ ಮಾಧ್ಯಮವು ಗಟ್ಟಿಯಾಗಿ ತನ್ನ ಪ್ರತಿಭಟನೆ ದಾಖಲಿಸಿದೆ. ಆದರೆ, ಪ್ರಮುಖ ಟೆಲಿವಿಷನ್ ಚಾನೆಲ್‌ಗಳು ಮಾತ್ರ ಈ ವಿಷಯದಲ್ಲಿ ಮೌನಕ್ಕೆ ಶರಣಾಗಿವೆ. ಇಲ್ಲಿ ಮತ್ತೆ ರಾಷ್ಟ್ರೀಯ ಹಿತಾಸಕ್ತಿ ರಕ್ಷಣೆಯ ತತ್ವ ಪಾಲನೆಯು ಮುನ್ನೆಲೆಗೆ ಬಂದು ನಿಂತಿದೆ.
 
ಮತ್ತದೇ ‘ಟಿಆರ್‌ಪಿ ಸ್ನೇಹಿ’ ಮತ್ತು ಗರಿಷ್ಠ ರಾಷ್ಟ್ರಪ್ರೇಮದ ತತ್ವಕ್ಕೆ ಅಂಟಿಕೊಂಡಿರುವ  ಚಾನೆಲ್‌ಗಳು, ರಕ್ತ ಹೆಪ್ಪುಗಟ್ಟಿಸುವ, ಪೂರ್ವನಿರ್ಧಾರಿತ ಭೋಪಾಲ್‌ ಎನ್‌ಕೌಂಟರ್‌ ಘಟನೆ ಸಂಬಂಧ ನ್ಯಾಯಯುತ ತನಿಖೆ ನಡೆಯಬೇಕು ಎಂದು ಒತ್ತಾಯ ಮಾಡುತ್ತಿಲ್ಲ. ರಾಷ್ಟ್ರೀಯ ಹಿತರಕ್ಷಣೆಯ ಇದೇ ಬಗೆಯ ಪರಿಕಲ್ಪನೆಯಿಂದಾಗಿ ಉರಿ ಮತ್ತು ನಂತರದ ವಿದ್ಯಮಾನಗಳ ಬಗ್ಗೆ ಕೇಂದ್ರ ಸರ್ಕಾರವು ರಾಜಕೀಯ ಲಾಭ ಬಾಚಿಕೊಳ್ಳಲು ಬಡಾಯಿ ಕೊಚ್ಚಿಕೊಳ್ಳುತ್ತಿದ್ದರೂ, ಈ ಘಟನೆಗಳ ಮೂಲ ವಿವರಗಳನ್ನು ಪಡೆಯಲೂ ಭಯಭೀತರನ್ನಾಗಿಸಿದೆ.
 
ಪಾಕಿಸ್ತಾನಕ್ಕೆ ಹೊಂದಿಕೊಂಡಂತೆ ಇರುವ ಗಡಿ ನಿಯಂತ್ರಣ ರೇಖೆಗುಂಟ (ಎಲ್‌ಒಸಿ) ಪ್ರತಿದಿನ ನಡೆಯುವ ಜೀವಹಾನಿ ಬಗ್ಗೆ ಶಿಮ್ಲಾ ಒಪ್ಪಂದಕ್ಕಿಂತ ಮುಂಚಿನ ದಿನಗಳಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಏಕಪಕ್ಷೀಯವಾಗಿ ವರದಿ ಮಾಡಲಾಗುತ್ತಿದೆ. ಪಾಕಿಸ್ತಾನದ ಜತೆಗಿನ ಸಂಬಂಧ ಕುರಿತು ಮೋದಿ ಸರ್ಕಾರವು ಹೊಸ ನಿಲುವು ತಳೆದಿರುವುದು ನಮಗೆಲ್ಲ ಗೊತ್ತಿರುವಂತಹದ್ದೇ ಆಗಿದೆ. ಈ ಧೋರಣೆಯ ಸಾಧಕ ಬಾಧಕಗಳನ್ನು ಚರ್ಚೆಗೆ ಪರಿಗಣಿಸಲೂ ನಾವು ಮುಂದಾಗಿಲ್ಲ. ಪಾಕಿಸ್ತಾನದ ಜತೆಗಿನ ಸಂಘರ್ಷದ ವಿಷಯದಲ್ಲಿ ಸ್ವಯಂ ನಿಯಂತ್ರಣ ವಿಧಿಸಿಕೊಳ್ಳುವ ಧೋರಣೆಗೆ ಬದಲಾಗಿ ಕೇಂದ್ರ ಸರ್ಕಾರವು ಈಗ ಮೋದಿ– ಡೋವಲ್‌ ಸಿದ್ಧಾಂತವನ್ನು ಅನುಸರಿಸುತ್ತಿದೆ.
 
ಈ ಬಗ್ಗೆ ಚರ್ಚಿಸಲು ಮುಂದಾದರೆ, ರಾಷ್ಟ್ರೀಯ ಹಿತಾಸಕ್ತಿ ದೃಷ್ಟಿಯಿಂದ ಮೊದಲಿಗೆ ಹೊಸ ಸಿದ್ಧಾಂತವನ್ನು ಪ್ರಶ್ನಿಸುವುದನ್ನು ಕೈಬಿಡಬೇಕು. ಜನಸಾಮಾನ್ಯರೂ ಸೇರಿದಂತೆ ಯಾರೊಬ್ಬರೂ ಸರ್ಕಾರದ ಬದಲಾದ ನಿಲುವನ್ನು ಪ್ರಶ್ನಿಸದೆ ಅದರ ಶ್ಲಾಘನೆಯಲ್ಲಿ ತೊಡಗಿದ್ದಾರೆ. ಇದು ತಟಸ್ಥ ನಿಲುವಿಗೆ ಮೊರೆ ಹೋದ ಮತ್ತು ಆಕ್ರಮಣಕಾರಿ ಧೋರಣೆ ತಳೆದ ಚಾನೆಲ್‌ಗಳ ರೇಟಿಂಗ್‌ನಲ್ಲಿ ಪ್ರತಿಫಲನಗೊಳ್ಳುತ್ತಿದೆ. ಕೆಲವರು ವಾಸ್ತವ ಸಂಗತಿಗಳ ಶೋಧದಲ್ಲಿ ತೊಡಗಿಕೊಂಡಿದ್ದರೆ, ಇನ್ನು ಕೆಲ ಚಾನೆಲ್‌ಗಳು ಸಾಕ್ಷ್ಯ ಒದಗಿಸುವಂತಹ ಅಗತ್ಯ ಏನಿದೆ ಎನ್ನುವ ನಿಲುವಿಗೆ ಅಂಟಿಕೊಂಡಿರುವುದು ಹಲವಾರು ಪ್ರಶ್ನೆಗಳಿಗೆ ಎಡೆ ಮಾಡಿಕೊಟ್ಟಿದೆ. ತುರ್ತುಪರಿಸ್ಥಿತಿ ಸಂದರ್ಭದಲ್ಲಿ ನಾವು (ಪತ್ರಕರ್ತರು) ಹೆದರಿಕೆಯಿಂದ ತೆವಳಿದ್ದೆವು. ಈಗ ನಮ್ಮಲ್ಲಿನ ಬಹುತೇಕರು ದುರಾಸೆಯ ಕಾರಣಕ್ಕೆ ತೆವಳುತ್ತಿದ್ದಾರೆ.
 
ಇಂದಿರಾ ಗಾಂಧಿ ಅವರೂ, ತುರ್ತು ಪರಿಸ್ಥಿತಿಗೂ ಮುನ್ನ ತೀವ್ರ ರಾಷ್ಟ್ರೀಯವಾದವನ್ನು ಬಳಸಿಕೊಂಡು, ಆನಂತರ ಅದನ್ನು ಬಲವಾಗಿ ಸಮರ್ಥಿಸಿಕೊಂಡಿದ್ದರು. ನೆರೆಯ ಬಾಂಗ್ಲಾದೇಶದ ಅಧ್ಯಕ್ಷ ಶೇಖ್‌ ಮುಜೀಬುರ್‌ ರೆಹಮಾನ್‌ ಮತ್ತು ದೂರದ ಚಿಲಿಯಲ್ಲಿ ನಡೆದ ಸಾಲ್ವಡೊರ್‌ ಅಲೆಂಡ್‌ ಅವರ ಹತ್ಯೆ ಪ್ರಕರಣಗಳನ್ನು ಉಲ್ಲೇಖಿಸುತ್ತ, ಜಯಪ್ರಕಾಶ್‌ ನಾರಾಯಣ ಅವರ ಚಳವಳಿಯಲ್ಲಿ ವಿದೇಶಿ ಕೈವಾಡ ಇದೆ ಎಂದು ಗುಲ್ಲೆಬ್ಬಿಸಿದ್ದರು. ಇದೇ ನೆಪದಲ್ಲಿ ಜನಾಭಿಪ್ರಾಯ ಹತ್ತಿಕ್ಕಲು ಮುಂದಾಗಿದ್ದರಲ್ಲದೆ ಅದನ್ನು ಬಲವಾಗಿ ಸಮರ್ಥಿಸಿಕೊಂಡಿದ್ದರು. 
 
ಆ ದಿನಗಳಲ್ಲಿ ಭಾರತವು ಬಾಂಗ್ಲಾದೇಶದಲ್ಲಿ ಸೇನಾ ಗೆಲುವು ಸಾಧಿಸಿ  ಪಾಕಿಸ್ತಾನವನ್ನು ವಿಭಜಿಸಿತ್ತು. ನಕ್ಸಲ್‌ ಚಳವಳಿಯನ್ನು ಹತ್ತಿಕ್ಕಲಾಗಿತ್ತು, ಬಾಹ್ಯ ಮತ್ತು ಆಂತರಿಕ ಬೆದರಿಕೆಯು ಕ್ಷೀಣಗೊಂಡ ಸಂದರ್ಭದಲ್ಲಿಯೇ ತುರ್ತುಪರಿಸ್ಥಿತಿ ಹೇರಲಾಗಿತ್ತು. ರಾಷ್ಟ್ರೀಯವಾದದ ಭ್ರಮೆಯನ್ನು ನಕಲಿ ಸಮಾಜವಾದದ ಜತೆ ಹಸಿಬಿಸಿಯಾಗಿ ಬೆರೆಸಲಾಗಿತ್ತು.
 
ತುರ್ತುಪರಿಸ್ಥಿತಿ ದಿನಗಳಲ್ಲಿನ ಕುಖ್ಯಾತ ಘೋಷಣೆಗಳ ಪೈಕಿ ಬಸ್‌ಗಳ ಮೇಲೆ ಬರೆದಿದ್ದ, ‘ಗಾಳಿ ಸುದ್ದಿ ಹಬ್ಬಿಸುವವರ ಬಗ್ಗೆ ಎಚ್ಚರದಿಂದ ಇರಿ’ ಎನ್ನುವುದು ನನ್ನ ಗಮನವನ್ನು ಹೆಚ್ಚಾಗಿ ಸೆಳೆದಿತ್ತು. ಇನ್ನೊಂದು ಅರ್ಥದಲ್ಲಿ ಈ ಘೋಷಣೆಯು, ‘ಸಂದೇಶ ವಾಹಕನನ್ನು ಗುಂಡಿಕ್ಕಿ ಕೊಲ್ಲಿ’ ಎನ್ನುವ ಅರ್ಥ ಧ್ವನಿಸುವಂತೆ ನನಗೆ ಭಾಸವಾಗುತ್ತಿತ್ತು.
 
ನಾಲ್ಕು ದಶಕಗಳ ಹಿಂದೆ ಭಾರತ ಈ ಪ್ರತಿಗಾಮಿ ಧೋರಣೆಯನ್ನು ತುಂಬ ಕಷ್ಟಪಟ್ಟು ರೂಢಿಸಿಕೊಂಡಿತ್ತೇ? ಅಥವಾ  ಈ ಧೋರಣೆಯ ಮೂಲಕವೇ ಪ್ರತಿಹೋರಾಟ ನಡೆಸಿ ಮರಳಿ ಸ್ವಾತಂತ್ರ್ಯ ಗಳಿಸಿಕೊಂಡಿತ್ತೇ? ಇತಿಹಾಸ ಮೊದಲಿನ ನಿಲುವು ಪ್ರತಿಪಾದಿಸಿದರೆ, ಅದೊಂದು ಪೂರ್ಣ ಕತೆಯೊಂದರ ಅಪೂರ್ಣ ಭಾಗ ಮಾತ್ರ ಆಗಿರುತ್ತದಷ್ಟೆ.
 
ವಾಸ್ತವದಲ್ಲಿ ತುರ್ತುಪರಿಸ್ಥಿತಿ ಸಂದರ್ಭದಲ್ಲಿ ಕುಟುಂಬ ನಿಯಂತ್ರಣ ಕಾರ್ಯಕ್ರಮವನ್ನು ಒತ್ತಾಯದಿಂದ ಜಾರಿಗೆ ತರಲಾಗಿತ್ತು. ಕೆಲ ಮಟ್ಟಿಗಿನ ಸ್ವಾತಂತ್ರ್ಯಕ್ಕೆ ಎರವಾಗಿದ್ದಕ್ಕೆ ಮಧ್ಯಮ ವರ್ಗದ ಜನರು ಹೆಚ್ಚು ಚಿಂತಿತರಾಗಿರಲಿಲ್ಲ. ಇದಕ್ಕೆ ಪ್ರತಿಯಾಗಿ ರೈಲುಗಳು ಸರಿಯಾದ ವೇಳೆಗೆ ಸಂಚರಿಸುತ್ತಿದ್ದವು. ಇದೊಂದು ಚರ್ಚಾಸ್ಪದ ವಿಷಯ ಎನ್ನುವುದನ್ನು ನಾನು ಕೂಡ ಒಪ್ಪುವೆ. ಆದರೆ, 1977ರ ಸಾರ್ವತ್ರಿಕ ಚುನಾವಣೆಯಲ್ಲಿ ಅಚ್ಚರಿಯ ಫಲಿತಾಂಶ ಹೊರಹೊಮ್ಮಿತ್ತು. ಸಂತಾನಹರಣ ಶಸ್ತ್ರಚಿಕಿತ್ಸೆ ಯೋಜನೆ ಜಾರಿಗೆ ತಂದಿದ್ದ ಉತ್ತರ ಭಾರತ ಮತ್ತು ಮಧ್ಯ ಭಾರತದಲ್ಲಿ ಇಂದಿರಾ ಗಾಂಧಿ ಅವರ ಪಕ್ಷ ದೂಳೀಪಟವಾಗಿದ್ದರೆ, ದಕ್ಷಿಣದಲ್ಲಿ ಜಯಭೇರಿ ಸಾಧಿಸಿರುವುದು ಏನನ್ನು ಸೂಚಿಸುತ್ತದೆ ಎನ್ನುವುದಕ್ಕೆ ಸ್ಪಷ್ಟ ಉತ್ತರ ದೊರಕದು.
 
ಸಮಾಜದಲ್ಲಿನ ಉನ್ನತ ವರ್ಗದವರು ಮತ್ತು ಮಧ್ಯಮ ವರ್ಗದವರು ಸ್ವಾತಂತ್ರ್ಯದ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿರಲಿಲ್ಲ. ತಮಗಾಗುವ ಲಾಭ, ನಷ್ಟದ ಬಗ್ಗೆಯೇ ಅವರೆಲ್ಲರ ಗಮನ ಕೇಂದ್ರೀಕೃತವಾಗಿತ್ತು. ನಮಗೇನು ಲಾಭ, ನಮಗಾಗುವ ನಷ್ಟವೇನು ಎನ್ನುವುದೇ ಈ ವರ್ಗಕ್ಕೆ ಮುಖ್ಯವಾಗಿತ್ತು. ಆ ಮಾನದಂಡದ ಪ್ರಕಾರವೇ ಹೇಳುವುದಾದರೆ, 40 ವರ್ಷಗಳಲ್ಲಿ ನಾವು ಕಿಂಚಿತ್ತೂ ಬದಲಾಗಿಲ್ಲ. 
 
1975–77ರ ಅವಧಿಯಲ್ಲಿ ಪತ್ರಿಕೆಗಳ ಬಾಯಿ ಮುಚ್ಚಿಸಲಾಗಿತ್ತು, ನಾಗರಿಕ ಸಮಾಜದ ಮೇಲೆ ದೌರ್ಜನ್ಯ ಎಸಗಲಾಗಿತ್ತು, ಬಡವರನ್ನು ಕೀಳಾಗಿ ಕಾಣಲಾಗಿತ್ತು. 1977ರ ಚುನಾವಣೆಯಲ್ಲಿ ‘ನಸಬಂದಿಕೆ ತೀನ್‌ ದಲಾಲ್‌ ಇಂದಿರಾ, ಸಂಜಯ್‌ ಬನ್ಸಿಲಾಲ್‌ (ಇಂದಿರಾ, ಸಂಜಯ್‌, ಬನ್ಸಿಲಾಲ್‌ ಸಂತಾನಹರಣ ಶಸ್ತ್ರಚಿಕಿತ್ಸೆಯ ಮೂವರು ವ್ಯಾಪಾರಿಗಳು) ಎನ್ನುವ ಘೋಷಣೆ ಹೆಚ್ಚು ಜನಪ್ರಿಯವಾಗಿತ್ತು.
 
ಮಾಧ್ಯಮದ ಮೇಲಿನ ಹೊಸ ನಿರ್ಬಂಧ, ನಿರ್ಲಜ್ಜದ ನಕಲಿ ಎನ್‌ಕೌಂಟರ್‌ ಮತ್ತು ಸಾಂಸ್ಕೃತಿಕ ರಾಷ್ಟ್ರೀಯತೆ ಬಗೆಗಿನ ಸರ್ಕಾರದ ಹೊಸ ವ್ಯಾಖ್ಯೆ ಬಗ್ಗೆ ಈ ಹಿಂದಿನ ನಾಚಿಕೆಗೇಡಿನ ಸಾಧನೆಯನ್ನು ನಾವೀಗ ಮತ್ತೆ ಪುನರಾವರ್ತಿಸುತ್ತಿದ್ದೇವೆ. ಹರಿತವಾದ ಕತ್ತಿ ಈಗ ಇನ್ನಷ್ಟು ದೊಡ್ಡದಾಗಿದೆ. ಬಾಹ್ಯ ವೈರಿ ಯಾರೆಂಬುದು ಈಗ ಹೆಚ್ಚು ಸ್ಪಷ್ಟವಾಗಿದೆ. ಉತ್ತಮ ಸಾಧನೆ ತೋರುತ್ತಿರುವ ಆರ್ಥಿಕತೆಯು ಯಾವುದೇ ಬಗೆಯ ಅಸಮಾಧಾನವನ್ನು ದೂರ ಇರಿಸಲಿದೆ. ಸ್ಥಾಪಿತ ಸಾಮಾಜಿಕ– ರಾಜಕೀಯ ಶಕ್ತಿಗಳು ತಮ್ಮ ಮೂಲಭೂತ ನಂಬಿಕೆಯನ್ನು ಕಳೆದುಕೊಂಡಿವೆ. ಸಾರ್ವಜನಿಕ ಅಭಿಪ್ರಾಯಗಳ ನಿರ್ವಹಣೆ ಬದಲಿಗೆ ಟೆಲಿವಿಷನ್‌ ಕಾರ್ಯಕ್ರಮಗಳ ಟಿಆರ್‌ಪಿ ಆಧರಿಸಿಯೇ ರಾಜಕಾರಣ ಮಾಡಲಾಗುತ್ತಿದೆ.
 
ರಾಷ್ಟ್ರೀಯ ಸ್ವಯಂ ಸೇವಕ ಸಂಘವು (ಆರ್‌ಎಸ್‌ಎಸ್‌), ಸದ್ಯಕ್ಕೆ ದೇಶದಲ್ಲಿ ಸ್ಪಷ್ಟ ನಾಯಕತ್ವದ, ದೇಶದಾದ್ಯಂತ ಪ್ರಭಾವ ಹೊಂದಿರುವ ಏಕೈಕ ಸಾಮಾಜಿಕ– ರಾಜಕೀಯ ಸಂಘಟನೆಯಾಗಿದೆ. 1975–77ರಲ್ಲಿ ಆರ್‌ಎಸ್‌ಎಸ್‌, ತುರ್ತುಪರಿಸ್ಥಿತಿ ವಿರುದ್ಧದ ಹೋರಾಟದ ಮುಂಚೂಣಿಯಲ್ಲಿತ್ತು. ಈಗ ಅದು ಕೇಂದ್ರದಲ್ಲಿನ ಸರ್ಕಾರವನ್ನೇ ಮುನ್ನಡೆಸುತ್ತಿದೆ.
  (ಲೇಖಕ ಮೀಡಿಯಾಸ್ಕೇಪ್ ಪ್ರೈ.ಲಿ. ಸಂಸ್ಥಾಪಕ ಸಂಪಾದಕ ಹಾಗೂ ಅಧ್ಯಕ್ಷ)
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT