ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತೊಂದು ಕಾರ್ಮಿಕ ಸಂಘ ಏಕೆ ಬೇಕು?

Last Updated 20 ಮಾರ್ಚ್ 2014, 19:30 IST
ಅಕ್ಷರ ಗಾತ್ರ

ಕನ್ನಡ ಚಿತ್ರರಂಗದ ಒಳಜಗಳ ಮತ್ತೆ ಬೀದಿಗೆ ಬಂದು ನಿಂತಿದೆ. ಮತ್ತೊಂದು ಕಾರ್ಮಿಕ ಸಂಘಟನೆ ರಚನೆಯೇ ಇಂದಿನ ಬಿಕ್ಕಟ್ಟಿಗೆ ಕಾರಣ ಎಂದು ಮೇಲ್ನೋಟಕ್ಕೆ ಅನಿಸಿದರೂ, ಮೂವತ್ತು ವರ್ಷಗಳಿಂದ ಅದುಮಿಡಲಾಗಿದ್ದ ನಿರ್ಮಾಪಕರು ಮತ್ತು ಚಲನಚಿತ್ರ ಕಾರ್ಮಿಕರ, ಕಲಾವಿದರ ಮತ್ತು ತಂತ್ರಜ್ಞರ ಒಕ್ಕೂಟದ ನಡುವಿನ ಅಸಮಾಧಾನ ಇಂದು ಮತ್ತೆ ಜ್ವಾಲೆಯಾಗಿದೆ. ಮೂವತ್ತು ವರ್ಷಗಳ ಹಿಂದೆಯೇ ಒಕ್ಕೂಟ ರಚನೆಗೆ ನಿರ್ಮಾಪಕರ ಸಂಘ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. ತಮಗೆ ಬೇಕಾದ ತಂತ್ರಜ್ಞರನ್ನು, ಸಹಾಯಕರನ್ನು ತಾವೇ ನೇಮಿಸಿಕೊಳ್ಳಬಹುದಾದ ಸ್ವಾತಂತ್ರ್ಯವನ್ನು ನಿರ್ಮಾಪಕರು ಆರಂಭದ ದಿನಗಳಿಂದಲೂ ಕೇಳುತ್ತಲೇ ಇದ್ದಾರೆ.

ನಟ ಅಶೋಕ್ ಅಧ್ಯಕ್ಷತೆಯ ಒಕ್ಕೂಟದಲ್ಲಿ ‘ಸರ್ವಾಧಿಕಾರ’ ಮನೋಭಾವ ಮೆರೆಯುತ್ತಿದೆ ಎಂದು ಆರೋಪಿಸುವ ನಿರ್ಮಾಪಕ ಸಂಘ ಮತ್ತೊಂದು ಕಾರ್ಮಿಕ ಸಂಘದ ಅವಶ್ಯಕತೆಯನ್ನು ಈಗ ಪ್ರತಿಪಾದಿಸಿ ಅದರಲ್ಲಿ ಯಶಸ್ವಿಯಾಗಿದೆ. ರಾಜೇಶ್ ಬ್ರಹ್ಮಾವರ್ ನೇತೃತ್ವದಲ್ಲಿ ಒಗ್ಗೂಡಿರುವ ಕೆಲವು ಕಾರ್ಮಿಕರು ಮತ್ತೊಂದು ಕಾರ್ಮಿಕರ ಸಂಘಕ್ಕೆ ಮಾನ್ಯತೆ ನೀಡಲೇಬೇಕೆಂದು ಚಲನಚಿತ್ರ ವಾಣಿಜ್ಯಮಂಡಳಿಯನ್ನು ಕೋರಿದ್ದು, ಅದಕ್ಕೆ ವಾಣಿಜ್ಯಮಂಡಳಿ ಸಮ್ಮತಿ ನೀಡಿದೆ.

ನಿರ್ಮಾಪಕರ ಸಂಘದ ಅಧ್ಯಕ್ಷ ಮುನಿರತ್ನ ಅವರು ಕೊನೆಗೂ ತಮ್ಮ ಹಟ ಸಾಧನೆ ಮಾಡಿದ್ದಾರೆ. ಐದು ಸಾವಿರಕ್ಕೂ ಹೆಚ್ಚು ಸದಸ್ಯರಿರುವ ಒಕ್ಕೂಟ ತನ್ನ ಅಖಂಡತೆಯನ್ನು ಉಳಿಸಿಕೊಳ್ಳಲು ಈಗ ಹೋರಾಟ ಆರಂಭಿಸಿದೆ. ಚಿತ್ರೋದ್ಯಮದ ಚಟುವಟಿಕೆಯನ್ನು ಸ್ಥಗಿತಗೊಳಿಸುವುದು ಅವರ ಬ್ರಹ್ಮಾಸ್ತ್ರ.

ಕಾರ್ಮಿಕ ಸಂಘಟನೆಗಳನ್ನು ಸ್ಥಾಪಿಸುವುದು ಕಾರ್ಮಿಕರ ಹಕ್ಕು. ಒಂದೇ ಸಂಘ ಇರಬೇಕು ಎಂದು ಹಟ ಹಿಡಿಯುವುದು ಏಕಸ್ವಾಮ್ಯಾಧಿಕಾರ. ಅಷ್ಟು ದೊಡ್ಡ ರಾಜ್ಯವಾದ ಆಂಧ್ರಪ್ರದೇಶವೇ ಎರಡು ಹೋಳಾಯಿತು. ನೂರುವರ್ಷಗಳ ಇತಿಹಾಸವಿರುವ ಕಾಂಗ್ರೆಸ್ ಪಕ್ಷವೇ ಹಲವು ಪಕ್ಷಗಳಾಗಿ ಒಡೆದುಹೋಯಿತು. ಡಿಎಂಕೆ ಪಕ್ಷವೇ ಎರಡಾಯಿತು. ಕಮ್ಯುನಿಸ್ಟ್ ಪಕ್ಷವೂ ಎರಡಾಯಿತು. ಕಾರ್ಮಿಕರ ಒಕ್ಕೂಟ ಎರಡಾದರೆ ಮುಳುಗಿ ಹೋಗುವುದೇನು? ಎಂದು ಯಾರಾದರೂ ಪ್ರಶ್ನಿಸಬಹುದು.

ಒಗ್ಗಟ್ಟು ಮೆರೆಯಬೇಕು, ಕಾರ್ಮಿಕರನ್ನು ಶೋಷಿಸುವ ನಿರ್ಮಾಪಕರನ್ನು ಹದ್ದುಬಸ್ತಿನಲ್ಲಿಡಬೇಕು ಅದಕ್ಕಾಗಿ ಕಾರ್ಮಿಕರು ಒಂದೇ ಒಕ್ಕೂಟದ ಆಶ್ರಯದಲ್ಲಿರಬೇಕು ಎಂದು ಅಶೋಕ್ ಸೇರಿ ಬಹಳ ಜನ ಅಭಿಪ್ರಾಯಪಡುತ್ತಾರೆ. ಕಾರ್ಮಿಕರು ಸಂಘ ರಚಿಸಿಕೊಳ್ಳುವ ವಿಷಯಕ್ಕಿಂತ ಈ ಬಿಕ್ಕಟ್ಟಿನಲ್ಲಿ ನಿರ್ಮಾಪಕರು ಹಾಗೂ ಒಕ್ಕೂಟದ ಅಧ್ಯಕ್ಷ ಆಶೋಕ್ ನಡುವಣ ಶೀತಲಸಮರವೇ ಹೆಚ್ಚಾಗಿ ಕಾಣುತ್ತದೆ. ಎರಡೂ ಬಣದವರಿಗೆ ಇದು ಪ್ರತಿಷ್ಠೆಯ ವಿಷಯವಾಗಿರುವುದರಿಂದ ಪರಿಸ್ಥಿತಿ ಬಿಗಡಾಯಿಸಿದೆ.

ಮಹಾರಾಷ್ಟ್ರ, ಆಂಧ್ರಪ್ರದೇಶ, ತಮಿಳುನಾಡು ಚಿತ್ರೋದ್ಯಮದಲ್ಲಿರುವ ಒಕ್ಕೂಟಗಳು ಅವರವರ ಭಾಷೆಯ ಚಿತ್ರಗಳ ಏಳುಬೀಳು ಪ್ರಶ್ನೆ ಬಂದಾಗ ಒಗ್ಗೂಡಿ ಹೋರಾಡುತ್ತವೆ. ಕನ್ನಡ ಚಿತ್ರರಂಗದಲ್ಲೂ ಭಾಷಾ ಚಿತ್ರಗಳ ಪ್ರಶ್ನೆ ಬಂದಾಗಲೆಲ್ಲಾ ಒಕ್ಕೂಟ ಹೋರಾಡಿದೆ. ಕನ್ನಡ ಚಲನಚಿತ್ರಗಳ ಸಂಪೂರ್ಣ ನಿರ್ಮಾಣ ಕಾರ್ಯ ಕರ್ನಾಟಕದಲ್ಲೇ ನಡೆಯಬೇಕೆಂಬ ಹೋರಾಟದಲ್ಲಿಯೂ ಯಶಕಂಡಿದೆ.

ರಾಜ್ಯದ ಕಾರ್ಮಿಕರಿಗೆ, ತಂತ್ರಜ್ಞರಿಗೆ, ಕಲಾವಿದರಿಗೆ ಉದ್ಯೋಗ ಒದಗಿಸಬೇಕೆಂಬ ಹೋರಾಟವೂ ಯಶಕಂಡಿದೆ. ಪ್ರೀಮಿಯರ್ ಸ್ಟುಡಿಯೊದಲ್ಲಿ ‘ದಿ ಸ್ವೋರ್ಡ್ ಆಫ್ ಟಿಪ್ಪುಸುಲ್ತಾನ್’ ಧಾರಾವಾಹಿ ಚಿತ್ರೀಕರಣದ ಸಂದರ್ಭದಲ್ಲಿ ನಡೆದ ಬೆಂಕಿ ಆಕಸ್ಮಿಕದಲ್ಲಿ ಸಜೀವದಹನಗೊಂಡ ೪೮ ಸಿನಿಮಾ ಕಾರ್ಮಿಕರಿಗೆ ಪರಿಹಾರ ದೊರಕಿಸಲು ಹೋರಾಡಿದೆ. ಕಾರ್ಮಿಕ ಕ್ಷೇಮನಿಧಿ ಸ್ಥಾಪಿಸಿದೆ. ಕನಿಷ್ಠ ವೇತನಕ್ಕಾಗಿ ಹೋರಾಟ ನಡೆಸಿದೆ. ಮತ್ತೊಂದು ಸಂಘ ರಚನೆಯಾದರೂ ಅವರು ಇಂತಹ ಹೋರಾಟದಿಂದ ವಿಮುಖರಾಗಿರಲು ಸಾಧ್ಯವೇ?

ಕರ್ನಾಟಕ ಚಲನಚಿತ್ರ ಕಾರ್ಮಿಕರ ಕಲಾವಿದರ ತಂತ್ರಜ್ಞರ ಒಕ್ಕೂಟದ ರಚನೆಯ ಕನಸು ಅರಳಿದ್ದು ೧೯೮೪ರಲ್ಲಿ. ಒಕ್ಕೂಟದ ಸಂಸ್ಥಾಪಕರಲ್ಲಿ ಒಬ್ಬರಾಗಿದ್ದ ಎಂ.ಎ. ಡೆಲ್ವಿ ಚಿತ್ರರಂಗದಲ್ಲಿ ಅಸಂಘಟಿತರಾಗಿರುವ ಎಲ್ಲ ಕಾರ್ಮಿಕರನ್ನೂ ಒಗ್ಗೂಡಿಸಿ, ಒಕ್ಕೂಟ ಸ್ಥಾಪನೆಯ ಕನಸುಕಂಡವರು. ಅವರೊಂದಿಗೆ ಒಂದುಗೂಡಿದ್ದವರು ಮೀಸೆಕೃಷ್ಣ, ಮಹಾಬಲ, ಭೋಜ, ಶಿವರಾಮ ಉಪ್ಪುಂದ ಮತ್ತು ಆನಂದ್.

ಆದರೆ ಆರಂಭದಲ್ಲೇ ಈ ರೀತಿಯ ಕಾರ್ಮಿಕ ಸಂಘಟನೆಯ ಪ್ರಸ್ತಾಪವೇ ಅನೇಕ ನಿರ್ಮಾಪಕರಿಗೆ ಪಥ್ಯವಾಗಲಿಲ್ಲ. ನಿರ್ಮಾಪಕರು ಇದನ್ನು ವಿರೋಧಿಸಿದರು. ಹೀಗಾಗಿ ಚಿತ್ರರಂಗದ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡುತ್ತಿರುವವರೇ ಸಂಘಟನೆಯ ಚೌಕಟ್ಟಿಗೆ ಬರಲು ಹಿಂಜರಿದರು.

ಕಾರ್ಮಿಕ ಸಂಘಟನೆಗಳನ್ನು ಕಟ್ಟುವ ಕೆಲಸವೇ ಹೀಗೆ. ಈ ರೀತಿಯ ಸಂಘಟಿತ ಪ್ರಯತ್ನಗಳ ಮೂಲಕ ನಮ್ಮ ಮೂಲಭೂತ ಹಕ್ಕುಗಳಿಗಾಗಿ ಹೋರಾಡಬಹುದು ಎನ್ನುವ ಕಲ್ಪನೆ ಇದ್ದರೂ ಒಗ್ಗಟ್ಟು ಬಹಳ ಕಷ್ಟ. ಒಗ್ಗಟ್ಟು ಕಂಡುಬಂದರೂ ಅದರಲ್ಲಿ ಒಡಕು ತರುವ ಕೆಲಸ ನಿರಂತರವಾಗಿ ನಡೆಯುತ್ತಲೇ ಇರುತ್ತದೆ. ಅನಂತನಾಗ್, ಶಂಕರ್‌ನಾಗ್, ಎ.ಎಲ್. ಅಬ್ಬಯ್ಯನಾಯ್ಡು, ಅವರುಗಳ ನಿರಂತರ ಮನವೊಲಿಕೆಯ ನಂತರ ಪ್ರೊಡಕ್ಷನ್‌ಬಾಯ್ಸ್ ಮತ್ತು ಲೈಟ್‌ಬಾಯ್ಸ್ ಯೂನಿಯನ್, ಸಹಕಲಾವಿದರ, ಸಾಹಸ ಕಲಾವಿದರ,ತಂತ್ರಜ್ಞರ ಒಕ್ಕೂಟ ಅಸ್ತಿತ್ವಕ್ಕೆ ಬಂದಿತು. ಈ ಕಾರ್ಮಿಕ ಒಕ್ಕೂಟಕ್ಕೆ ಅನಂತನಾಗ್ ಗೌರವಾಧ್ಯಕ್ಷರಾಗಿ, ಅಶೋಕ್ ಅಧ್ಯಕ್ಷರಾಗಿ ಸೂಚಿತವಾದರು.

ಮತ್ತಷ್ಟು ಪ್ರಯತ್ನಗಳ ಮೂಲಕ ವರ್ಣಾಲಂಕಾರ, ಕೇಶಾಲಂಕಾರ ಕಲಾವಿದರು, ವಸ್ತ್ರವಿನ್ಯಾಸ, ವಸ್ತ್ರಾಲಂಕಾರ ಕಲಾವಿದರು, ಸಿನಿಮಾ ನಿರ್ಮಾಣ ನಿರ್ವಾಹಕರು, ಕಲಾ ನಿರ್ದೇಶಕರು ಹಾಗೂ ನೃತ್ಯ ನಿರ್ದೇಶಕರು ಸೇರಿದಂತೆ ೧೩ ಸಂಘಗಳು ಒಕ್ಕೂಟಕ್ಕೆ ಸೇರಿಕೊಂಡವು. ೧೯೮೯ರಲ್ಲಿ ಅಧಿಕೃತವಾಗಿ ಉದ್ಘಾಟನೆಗೊಂಡ ಈ ಒಕ್ಕೂಟದಲ್ಲಿ ಐದುಸಾವಿರಕ್ಕೂ ಹೆಚ್ಚು ಸದಸ್ಯರಿದ್ದಾರೆ. ೨೫ ವರ್ಷಗಳಿಂದಲೂ ಅಶೋಕ್ ಅವರೇ ಅಧ್ಯಕ್ಷರಾಗಿದ್ದಾರೆ.

ಮುಂಬೈನಲ್ಲಿರುವ ಅಖಿಲಭಾರತ ಚಲನಚಿತ್ರ ಕಾರ್ಮಿಕರ ಮಹಾಮಂಡಳ, ಕರ್ನಾಟಕ ಚಲನಚಿತ್ರ ಕಾರ್ಮಿಕರ, ಕಲಾವಿದರ ಮತ್ತು ತಂತ್ರಜ್ಞರ ಒಕ್ಕೂಟಕ್ಕೆ ಮಾನ್ಯತೆ ನೀಡಿದೆ. ಕರ್ನಾಟಕ ವಾಣಿಜ್ಯ ಮಂಡಳಿ ಕೂಡ ಮಾನ್ಯತೆ ನೀಡಿದೆ. ಒಕ್ಕೂಟ ಹಾಗೂ ವಾಣಿಜ್ಯ ಮಂಡಳಿಯ ನಡುವೆ ಪ್ರತೀ ಮೂರುವರ್ಷಕ್ಕೊಮ್ಮೆ ಒಪ್ಪಂದ ಏರ್ಪಡುತ್ತದೆ. ಈ ಕರಾರಿನ ಪ್ರಕಾರ ಒಕ್ಕೂಟ ಅನವಶ್ಯಕವಾಗಿ ವೇತನ ಹೆಚ್ಚುಮಾಡಿಕೊಳ್ಳುವಂತಿಲ್ಲ.

ಒಕ್ಕೂಟದ ಉದ್ದೇಶ ಕಾರ್ಮಿಕರ ಹಕ್ಕುಗಳಿಗಾಗಿ ಹೋರಾಡುವುದಷ್ಟೇ ಅಲ್ಲ, ನಿರ್ಮಾಪಕರ ಹಿತರಕ್ಷಣೆಯನ್ನು ಕಾಪಾಡುವುದೂ ಆಗಿದೆ. ಇಂತಹ ಸಮತೋಲನವನ್ನು ಕಾಪಾಡುವ ಪ್ರಯತ್ನವನ್ನು ಒಕ್ಕೂಟ ಮಾಡುತ್ತಾ ಬಂದಿದೆ. ಆದರೂ ಏರಿಳಿತಗಳು, ಅಸಮಾಧಾನ ಇದ್ದೇ ಇದೆ. ಕನ್ನಡ ಚಲನಚಿತ್ರೋದ್ಯಮದ ಹಿತಾಸಕ್ತಿಗೆ ಕುಂದುಂಟಾಗುತ್ತಿದೆ ಎಂದೆನಿಸಿದಾಗಲೆಲ್ಲಾ ಒಕ್ಕೂಟ ತನ್ನ ಶಕ್ತಿ ಪ್ರದರ್ಶಿಸುತ್ತದೆ.

ಡಬ್ಬಿಂಗ್ ಬೇಕು ಎನ್ನುವ ಚಳವಳಿ ಆರಂಭವಾದಾಗ ಅದನ್ನು ವಿರೋಧಿಸಿ, ಪ್ರತಿ ಚಳವಳಿ ನಡೆಸಲು ಮುಂದಾಗುತ್ತದೆ. ರಾಜ್ಯದಲ್ಲಿ ಪ್ರದರ್ಶಿತವಾಗುವ ಎಲ್ಲ ಭಾಷೆಗಳ ಚಲನಚಿತ್ರಗಳಿಗೂ ಶೇ.೫೦ ರಷ್ಟು ತೆರಿಗೆ ವಿನಾಯಿತಿ ಅನ್ವಯವಾಗಬೇಕೆಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯೇ ಸರ್ಕಾರವನ್ನು ಒತ್ತಾಯಿಸಿದಾಗ, ಅದನ್ನು ಪ್ರಬಲವಾಗಿ ವಿರೋಧಿಸಿ, ಪ್ರತಿಭಟನೆಯ ಮಾರ್ಗ ಹಿಡಿದು ಕನ್ನಡದ ಹಿತಾಸಕ್ತಿಯನ್ನು ಕಾಪಾಡುವ ಕೆಲಸಕ್ಕೆ ಒಕ್ಕೂಟ ಮುಂದಾಗಿದ್ದು ಇತಿಹಾಸ.

ರಾಜೇಶ್‌ಬ್ರಹ್ಮಾವರ್ ನೇತೃತ್ವದಲ್ಲಿ ರಚನೆಯಾಗಿರುವ ಕಾರ್ಮಿಕರ ಸಂಘ ಈಗಾಗಲೇ ಕಾರ್ಮಿಕ ಇಲಾಖೆಯಲ್ಲಿ ನೋಂದಣಿ ಆಗಿದೆ. ಆದರೆ ಎಷ್ಟು ಮಂದಿ ಸದಸ್ಯರಿದ್ದಾರೆ, ದಕ್ಷ ತಂತ್ರಜ್ಞರೆಷ್ಟಿದ್ದಾರೆ ಎನ್ನುವ ವಿವರಗಳಲ್ಲಾ ಮುಂದಿನ ದಿನಗಳಲ್ಲಿ ಗೊತ್ತಾಗುತ್ತದೆ. ಅಶೋಕ್ ನೇತೃತ್ವದಲ್ಲಿರುವ ಒಕ್ಕೂಟ, ನಿರ್ಮಾಪಕರ ಶೋಷಣೆ ಮಾಡುತ್ತಿದೆ ಎಂದು ದೂರುವ ನಿರ್ಮಾಪಕರು, ಹೊಸ ಒಕ್ಕೂಟವನ್ನು ಬೆಂಬಲಿಸಿದ್ದಾರೆ.

‘ನಿರ್ಮಾಪಕರಿಗೆ ಯಾರು ಇಷ್ಟವೋ ಅವರನ್ನು ಕರೆದು ಕೆಲಸ ಮಾಡಿಸುವ ಹಕ್ಕು ನಿರ್ಮಾಪಕರಿಗೆ ಇರಬೇಕು. ನನ್ನ ದುಡ್ಡು, ನನ್ನ ಇಷ್ಟ. ಒಕ್ಕೂಟವನ್ನು ಅಧ್ಯಕ್ಷರು ಏಕಸ್ವಾಮ್ಯ ಮಾಡಿಕೊಂಡು, ಸಂಜೆ ಬಾಟ, ರಾತ್ರಿಬಾಟ ,ವಾಷಿಂಗ್ ಬಾಟ ಎಂದು ಮಾತೆತ್ತಿದರೆ ದುಡ್ಡು ಸುಲಿಯುವ ಕೆಲಸ ಮಾಡುತ್ತಿದ್ದಾರೆ. ಈ ಕಾರಣಗಳಿಂದ ಕನ್ನಡ ಚಿತ್ರರಂಗಕ್ಕೆ ಕಾರ್ಮಿಕರ ಮತ್ತೊಂದು ಒಕ್ಕೂಟದ ಅಗತ್ಯವಿದೆ’ ಎಂದು ನಿರ್ಮಾಪಕರ ಸಂಘದ ಅಧ್ಯಕ್ಷ ಮುನಿರತ್ನ ಪ್ರತಿಪಾದಿಸುತ್ತಾರೆ.

‘ನಿರ್ಮಾಪಕರು ಹಾಗೂ ಒಕ್ಕೂಟದ ನಡುವೆ ಉಂಟಾಗಿರುವ ಬಿಕ್ಕಟ್ಟು ತಾತ್ಕಾಲಿಕ’ ಎನ್ನುವ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಗಂಗರಾಜು, ಕಾರ್ಮಿಕರ ಹೊಸ ಒಕ್ಕೂಟಕ್ಕೆ ಮಾನ್ಯತೆ ನೀಡುವ ವಿಷಯ ಇನ್ನೂ ಚರ್ಚೆಯ ಹಂತದಲ್ಲಿದೆ ಎಂದೇ ಪ್ರತಿಪಾದಿಸುತ್ತಿದ್ದಾರೆ. ಆದರೆ ನಿರ್ಮಾಪಕರು ಅವರವರಿಗೆ ಇಷ್ಟವಾದವರನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯವಿದೆ ಎನ್ನುವ ನಿರ್ಣಯವನ್ನು ವಿರೋಧಿಸಿ, ಅಶೋಕ್ ನೇತೃತ್ವದ  ಒಕ್ಕೂಟದ ಸದಸ್ಯರು ೧೭ ಚಿತ್ರಗಳ ಚಟುವಟಿಕೆಯನ್ನು ಸ್ಥಗಿತಗೊಳಿಸಿ, ಮುಷ್ಕರ ಆರಂಭಿಸಿದ್ದರು.

ರಾಜೇಶ್ ಬ್ರಹ್ಮಾವರ್ ನೇತೃತ್ವದ ಹೊಸ ಸಂಘದ ಸದಸ್ಯರು ಚಿತ್ರೀಕರಣ ಕಾರ್ಯದಲ್ಲಿ ತೊಡಗಿದ್ದರು. ‘ಸಿನಿಮಾರಂಗದಲ್ಲಿ ಹೊಸ ತಂತ್ರಜ್ಞಾನದ ಪ್ರವೇಶವಾಗಿದೆ. ಡಿಜಿಟಲ್ ಬಂದು ಬಿಟ್ಟಿದೆ. ಲ್ಯಾಬ್‌ಗಳು ಮುಚ್ಚಿವೆ. ಚಿತ್ರೀಕರಣದ ವಿಷಯದಲ್ಲಿ ಬಹಳಷ್ಟು ಪರಿವರ್ತನೆ ಆಗುತ್ತಿರುವುದರಿಂದ ಕಾರ್ಮಿಕರಿಗೆ ದುಡಿಮೆ ಇಲ್ಲದಂತಾಗುವ ಪರಿಸ್ಥಿತಿ ಬಂದಿದೆ. ಇಂತಹ ಸಮಯದಲ್ಲಿ ಈ ರೀತಿಯ ಬಿಕ್ಕಟ್ಟು ಸರಿಯಲ್ಲ’ ಎನ್ನುವುದು ಗಂಗರಾಜ್ ಅವರ ಅಭಿಪ್ರಾಯ.

ಚಲನಚಿತ್ರ ಕಾರ್ಮಿಕರ, ಕಲಾವಿದರ ಮತ್ತು ತಂತ್ರಜ್ಞರ ಒಕ್ಕೂಟ ಕಾರ್ಮಿಕ ಇಲಾಖೆಯಲ್ಲಿ ನೋಂದಣಿ ಆಗಿದ್ದರೆ, ಅದು ಪ್ರಜಾಪ್ರಭುತ್ವವಾದಿ ನಡವಳಿಕೆಯನ್ನು ಹೊಂದಿರಬೇಕಾಗುತ್ತದೆ. ಹೊಸ ಸದಸ್ಯರ ಸೇರ್ಪಡೆ ವಿಷಯದಲ್ಲಿ ದುಬಾರಿ ಶುಲ್ಕ ವಸೂಲು ಮಾಡುತ್ತಾರೆ ಎನ್ನುವ ಆಪಾದನೆಯನ್ನು ನಿವಾರಿಸಿಕೊಳ್ಳಬೇಕಿದೆ. ಪದಾಧಿಕಾರಿಗಳ ವೇತನ, ಕಾರು, ಸಂಚಾರ ವೆಚ್ಚ ಮೊದಲಾದ ಆಡಳಿತಾತ್ಮಕ ಅನವಶ್ಯಕ ವೆಚ್ಚವನ್ನು ಕಡಿಮೆಮಾಡಿಕೊಳ್ಳಬಹುದು.

ಏಕೆಂದರೆ ಅದು ಬಡ ಕಾರ್ಮಿಕನ ವೇತನದಿಂದ ಕಡಿತಗೊಳಿಸಿದ ಹಣ. ನಿರ್ಮಾಪಕನನ್ನು ರಾಜಕುಮಾರ್ ಅವರ ‘ಅನ್ನದಾತ’ ಎನ್ನುತ್ತಿದ್ದರು. ಕಾರ್ಮಿಕರ ಒಕ್ಕೂಟ ನಿರ್ಮಾಪಕನನ್ನು ಶತ್ರುವಿನಂತೆ ನೋಡುವ ಮನೋಭಾವ ಬಿಡಬೇಕು. ಪ್ರತೀ ಹಂತದಲ್ಲೂ ಕಮಿಷನ್ ಬೇಕೆಂದು ಒತ್ತಾಯಿಸುವ ಬಗ್ಗೆಯೂ ದೂರುಗಳಿವೆ. ಆದರೆ, ಇದೆಲ್ಲವನ್ನೂ ನಿರಾಕರಿಸುವ ಕಾರ್ಮಿಕ ಒಕ್ಕೂಟದ ಅಧ್ಯಕ್ಷ ಅಶೋಕ್, ‘ಕೆಲವೇ ಶ್ರೀಮಂತ ನಿರ್ಮಾಪಕರು ಸ್ವಹಿತಕ್ಕಾಗಿ ಕಾರ್ಮಿಕರ ಒಕ್ಕೂಟವನ್ನು ಛಿದ್ರಗೊಳಿಸಲು ಹೊರಟಿದ್ದಾರೆ’ ಎಂದು ಆಪಾದಿಸಿದ್ದಾರೆ.

ಶಿವರಾಜ್‌ಕುಮಾರ್ ಅವರ ಮಧ್ಯಸ್ಥಿಕೆಯಲ್ಲಿ ಒಕ್ಕೂಟದ ಕಾರ್ಮಿಕರು ಆರಂಭಿಸಿದ್ದ ಚಳವಳಿ ವಾಪಸಾಗಿದೆ. ಒಕ್ಕೂಟದ ಏನೇ ಸಮಸ್ಯೆಗಳಿದ್ದರೂ ನನ್ನ ಬಳಿ ಬನ್ನಿ ಪರಿಹಾರವಿದೆ ಎಂದು ಶಿವರಾಜ್‌ಕುಮಾರ್ ಬಿಕ್ಕಟ್ಟಿಗೆ ಶಮನಮಂತ್ರ ನೀಡಿದ್ದಾರೆ. ವಾಣಿಜ್ಯ ಮಂಡಳಿ ಈ ವಿಷಯದಲ್ಲಿ ನಿರ್ಮಾಪಕರನ್ನು ಬಿಡಲಾರದೆ, ಒಕ್ಕೂಟದ ಕಾರ್ಮಿಕರನ್ನೂ ಎದುರು ಹಾಕಿಕೊಳ್ಳಲಾಗದೆ ಪರದಾಡುತ್ತಿದೆ. ಈ ಸಮಸ್ಯೆ ಇಂದಿಗೆ ಮುಗಿದಿರಬಹುದು. ಇಲ್ಲಿಗೇ ಮುಗಿಯಿತು ಎಂದು ಯಾರು ಭಾವಿಸಬೇಕಾಗಿಲ್ಲ. ಇದೊಂದು ತಾತ್ಕಾಲಿಕ ಶಮನ ಕಾರ್ಯ ಎನ್ನುವುದು ಒಳಸತ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT