ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ್ತ್ಯಾರೂ ಇವನಂತೆ ಆಗಬಾರದು

Last Updated 23 ಜುಲೈ 2014, 19:30 IST
ಅಕ್ಷರ ಗಾತ್ರ

ಇವನೊಬ್ಬ ವಿಚಿತ್ರ ಹುಡುಗ. ಹೆಸರು ರಾಕೇಶ. ನೋಡಲು ತೆಳ್ಳಗೆ ಬೆಳ್ಳಗಿದ್ದ. ಅವನು ನಕ್ಕಿದ್ದೇ ಕಡಿಮೆ. ಸದಾ ಗಂಭೀರ. ನಾವು ಮಾತಾಡಿಸಿದರೆ ನಿನ್ನೆ ಹೇಳಿದ್ದ ಮಾತುಗಳನ್ನೇ ಮತ್ತೆ  ಹೊಸದಾಗಿ ಶುರುವಿನಿಂದ ಹೇಳುತ್ತಿದ್ದ.  ನಿನ್ನೆಯೇ ಇದನ್ನೆಲ್ಲಾ ಇವರಿಗೆ ಹೇಳಿದ್ದೀನಲ್ಲ ಎನ್ನುವುದನ್ನು ಆತ ಮರೆಯುತ್ತಿದ್ದ. ಅವನಲ್ಲಿ ಗೊಂದಲಗಳಿದ್ದಂತೆ ಕಾಣುತ್ತಿತ್ತು. ಬುದ್ಧಿಗೂ ಮಾತಿಗೂ ತಾಳತಪ್ಪಿ ಚಡಪಡಿಸುತ್ತಿದ್ದ. ಅವನ ಮಾತು ಕಷ್ಟಪಟ್ಟು ಕೇಳಿದರೆ ಅಷ್ಟೋ ಇಷ್ಟೋ ಗೊತ್ತಾಗುತ್ತಿತ್ತು. ಆದರೂ, ಆತ ಏನನ್ನು  ಹೇಳಲು ಅಪೇಕ್ಷಿಸುತ್ತಿದ್ದಾನೆ ಎಂಬುದು ಲಾಗ ಹೊಡೆದರೂ ಅರ್ಥವಾಗುತ್ತಿರಲಿಲ್ಲ. ಅವನ ಮಾತುಗಳು ಅಡ್ಡಾದಿಡ್ಡಿಯಾಗಿದ್ದವು.  ಎರಡು ಮೂರು ಘಟನೆಗಳನ್ನು ಒಟ್ಟಿಗೆ ಕಲೆಸಿ ಆತ ಮಾತಾಡುತ್ತಿದ್ದ. ಹೀಗಾಗಿ, ಅವನ ಒಂದು ಮಾತಿಗೂ ಇನ್ನೊಂದು ಮಾತಿಗೂ ನಡುವೆ ಇರಬೇಕಾದ ಸಂಬಂಧದ ಕೊಂಡಿ ಕಳಚಿ ಹೋಗಿರುತ್ತಿತ್ತು. ನಾವೇ ಫೆವಿಕಾಲ್ ತರಿಸಿ ಅವನ ವಾಕ್ಯಗಳನ್ನು ಒಂದಕ್ಕೊಂದು ಅಂಟಿಸಿಕೊಂಡು ಅರ್ಥ ಸ್ಪಷ್ಟಪಡಿಸಿಕೊಳ್ಳಬೇಕಾಗಿತ್ತು.

ಇವನಂತೆಯೇ ಇರುವ ಮತ್ತೊಂದು ಹುಡುಗಿ ಇದ್ದಳು. ಆಕೆ ದಿನಾ ಬಂದು ನಿಲ್ಲುತ್ತಿದ್ದಳು. ಏನೆಂದು ಕೇಳಿದರೆ ನಿರುತ್ತರ. ಆಮೇಲೆ ಒಂದಿಷ್ಟು ಕಣ್ಣೀರು. ಕ್ಲಾಸು ಮುಗಿದ ಮೇಲೆ ಹಾಸ್ಟೆಲ್‌ಗೆ ಹೋಗುವ ದಾರಿ ಬಿಟ್ಟು ಅದರ ವಿರುದ್ಧ ದಿಕ್ಕಿನಲ್ಲಿ ನಡೆಯುತ್ತಿದ್ದಳು. ಬಹಳ ಹೊತ್ತಾದ ಮೇಲೆ ತಾನು ಹೋಗಬೇಕಾದ ದಾರಿ ಇದಲ್ಲ ಎಂದು ತಿಳಿದು ಮತ್ತೆ ಹಿಂತಿರುಗಿ ಬರುತ್ತಿದ್ದಳು. ಮತ್ತೊಂದು ಹುಡುಗಿ ಕಾಲೇಜಿಗೆ ಬರಲು ವಾಪಸ್ಸು ಹೋಗಲು ದಿನಾ ಅದೇಕೋ ಹೆದರುತ್ತಿದ್ದಳು. ಕೇಳಿದರೆ ಮತ್ತದೇ ಅಳು. ಅವಳು ಬರುವ ದಾರಿಯಲ್ಲಿ ಹುಡುಗರು ನಿಂತಿರುತ್ತಾರೆ. ಅವರು ಏನಾದರೂ ಮಾಡಿಬಿಟ್ಟರೆ ಎಂಬ ಭಯ ಅವಳಿಗೆ. ಹೀಗಾಗಿ, ವಾರದಲ್ಲಿ ಎರಡು ಮೂರು ದಿನ ಚಕ್ಕರ್ ಹೊಡೆದು ಮನೆಯಲ್ಲಿ ಕೂರುತ್ತಿದ್ದಳು. ತನ್ನೊಳಗಿನ ಹೆದರಿಕೆ ಯಾರ ಬಳಿ ಹೇಳಿಕೊಳ್ಳುವುದು? ಹೇಗೆ ಹೇಳಿಕೊಳ್ಳುವುದು? ಎಂಬ ಭಯ ಅವಳಿಗೆ.

ಹೀಗೆ; ಹದಿಹರೆಯದ ವಯಸ್ಸಲ್ಲಿ ಮನದಲ್ಲಿರುವ ಮಾತುಗಳನ್ನು ಹೇಳಿಕೊಳ್ಳಲಾಗದೆ ವಿಲಿವಿಲಿ ಒದ್ದಾಡುವ ನೂರಾರು ವಿದ್ಯಾರ್ಥಿ ಮನಸ್ಸುಗಳನ್ನು ನಾವು ದಿನಾ ನೋಡುತ್ತೇವೆ. ಆದರೆ, ಅವರ ಜಟಿಲ ಸಮಸ್ಯೆಗಳನ್ನು ತಾಳ್ಮೆಯಿಂದ ಕೇಳುವ ಸಮಯ ನಮಗೋ ಕಿಂಚಿತ್ತೂ ಇರುವುದಿಲ್ಲ. ಸಾವಿರಾರು ಮಕ್ಕಳು ಓದುವ ದೊಡ್ಡ ಕಾಲೇಜಿನಲ್ಲಂತೂ ಈ ಆಪ್ತ ಸಂವಾದವೆಂಬುದು ಎಂದೂ ಸಾಧ್ಯವಾಗದ ಮಾತು. ಸಣ್ಣ ಪುಟ್ಟ ಸಮಸ್ಯೆಗಳನ್ನೇ ಬೆಟ್ಟವೆಂದು ಭಾವಿಸುವ, ಜುಜುಬಿ ಕಾರಣಗಳಿಗೆ ಆತ್ಮಹತ್ಯೆ ಮಾಡಿಕೊಳ್ಳುವ ಈ ವಯಸ್ಸಿನ ಮಕ್ಕಳ ಮಾತುಗಳನ್ನು ಮೊದಲು ಕೇಳಿಸಿಕೊಳ್ಳುವ ಒಂದು ವ್ಯವಸ್ಥೆ ರೂಪುಗೊಳ್ಳಬೇಕಿದೆ.

ಈ ರಾಕೇಶನೂ, ನನ್ನ ಒಂದು ಪಿರಿಯೆಡ್ ಮುಗಿದು ಮತ್ತೊಂದು ಪಿರಿಯೆಡ್‌ಗೆ ಹೊರಡುವ ಅವಸರದ ಸಮಯದಲ್ಲೇ ಹೆಚ್ಚಾಗಿ ಬರುತ್ತಿದ್ದ. ಇರುವ ಅತ್ಯಂತ ಕಡಿಮೆ ಸಮಯದಲ್ಲಿ ಏನಪ್ಪ ಬೇಗ ಹೇಳು ಎಂದರೆ ಪಾಪ ಮತ್ತೆ ಅವನದು ಅದೇ ಗೋಳು. ಸಾರ್ ಎಂದು ಆರಂಭಿಸಿ ಮತ್ತೆ ಮಾತಿನ ದಾರಿಯಲ್ಲಿ ತಪ್ಪಿಹೋಗುತ್ತಿದ್ದ. ಅಸ್ಪಷ್ಟವಾಗಿ ಸಂಕಟಪಡುತ್ತಿದ್ದ. ಅದಕ್ಕೆ ನಾನೇ, ‘ರಾಕೇಶ ನೀನಿವತ್ತು ಕಾಲೇಜು ಕೊನೇ ಬೆಲ್ ಆದ ಮೇಲೆ ಬಾ. ನಿನ್ನ ಮಾತು ಪೂರಾ ಕೇಳ್ತೀನಿ. ಇವತ್ತು ಆಗಿದ್ದಾಗಲಿ. ನಿನ್ನ ಸಮಸ್ಯೆ ಏನೆಂದು ನನಗೆ ಸಂಪೂರ್ಣವಾಗಿ ಅರ್ಥ ಆಗಲೇಬೇಕು. ನೀನು ಮರೆಯದೆ ಬಾ. ನಾನು ಕಾಯ್ತೀನಿ’ ಎಂದು ಹೇಳಿದೆ. ಅಷ್ಟಕ್ಕೂ ಅವನು ಹೋಗದೆ ನಿಂತೇ ಇದ್ದ. ನನಗೆ ಈಗ ಕ್ಲಾಸ್ ಇದೆ ಅರ್ಥ ಮಾಡ್ಕೋ ಎಂದು ಕೊಂಚ ಸಿಟ್ಟಿನಲ್ಲಿ ಹೇಳಿ ನಾನು ಹೊರಟು ಹೋದೆ.  ಮನಸ್ಸಿನಲ್ಲಿ ಆ ಹುಡುಗನ ಸಮಸ್ಯೆ ಏನಿರಬಹುದೆಂದು ಊಹಿಸತೊಡಗಿದೆ.  ಕೊನೇ ಬೆಲ್ ಬಾರಿಸಿದ ನಂತರ ಬರಬೇಕಾಗಿದ್ದ ರಾಕೇಶ ಅದ್ಯಾಕೋ ಬರಲೇ ಇಲ್ಲ. ಎಲ್ಲಿ ನೋಡಿದರೂ ಅವನು ಕಾಣಲಿಲ್ಲ. ನಾನು ನಾಳೆ ಬರಬಹುದೆಂದು ಸುಮ್ಮನಾದೆ.

ಮಾರನೆಯ ದಿನವೂ ಅವನು ಬಂದಿರಲಿಲ್ಲ. ನನಗೆ ಕುತೂಹಲವಾಗಿ ಅವನ ಹೆಸರನ್ನು ನನ್ನ ತರಗತಿಯ ಹಾಜರಾತಿಯಲ್ಲಿ ಹುಡುಕಿದೆ. ಆಶ್ಚರ್ಯವೆಂದರೆ ಅವನ ಹೆಸರು ನನ್ನ ಹಾಜರಾತಿ ಪುಸ್ತಕದಲ್ಲಿರಲಿಲ್ಲ. ಆದರೆ ಆತ ನನ್ನ ತರಗತಿಯಲ್ಲಿ ಆಗಾಗ ಪಾಠಕ್ಕೆ ಕೂರುತ್ತಿದ್ದದ್ದು ಸ್ಪಷ್ಟವಾಗಿ ಗೊತ್ತಿತ್ತು. ಅವನು ಮುಖ ಕಿವಿಚಿಕೊಂಡು ಸದಾ ಹಿಂದಿನ ಬೆಂಚಿನ ಕೊನೆಯಲ್ಲಿ ಕೂರುತ್ತಿದ್ದ. ನೂರಾ ನಲವತ್ತು ವಿದ್ಯಾರ್ಥಿಗಳಿರುವ ಒಂದೊಂದು ತರಗತಿಯಲ್ಲೂ ವಿದ್ಯಾರ್ಥಿಗಳೆಲ್ಲರ ಹೆಸರು ಪರಿಚಯ ನೆನಪಿಟ್ಟುಕೊಳ್ಳುವುದು ನನಗೆಂದೂ ಸಾಧ್ಯವಾಗಿಲ್ಲ. ಕ್ಲಾಸಿನಲ್ಲಿ ಕ್ಯಾತೆ ಮಾಡಿ ಬೈಸಿಕೊಳ್ಳುವ ತರಲೆ ಮಕ್ಕಳು, ಚೆನ್ನಾಗಿ ಪಾಠ ಆಲಿಸುವ ಕೆಲ ಮುಖಗಳು, ತಮ್ಮ ವಿಚಿತ್ರ ಹೆಸರು ಮತ್ತು ವರ್ತನೆಗಳಿಂದ ಪ್ರಸಿದ್ಧರಾದ ಕೆಲವರ ಹೆಸರುಗಳು ಮಾತ್ರ ನೆನಪಿರುತ್ತವೆ.

ಆದರೂ ರಾಕೇಶನ ಹೆಸರು ಯಾಕೆ  ನನ್ನ ಹಾಜರಾತಿಯಲ್ಲಿ ತಪ್ಪಿ ಹೋಗಿದೆ ಎಂದು ಹುಡುಕಾಡಿದೆ. ಆತನ ನಿಜವಾದ ಸೆಕ್ಷನ್ ಸಿ ಆಗಿತ್ತು. ಆದರವನು ಬಿ ಸೆಕ್ಷನ್‌ನಲ್ಲಿ ಬಂದು ಕೂರುತ್ತಿದ್ದ. ಒಮ್ಮೊಮ್ಮೆ ‘ತ್ರೀ ಈಡಿಯೇಟ್ಸ್‌’ನ ಅಮೀರ್ ಖಾನ್‌ನಂತೆ ತನಗೆ ತಿಳಿದ ಎಲ್ಲಾ ತರಗತಿಗಳಲ್ಲೂ ಒಂದೊಂದು ದಿನ ಕೂರುತ್ತಿದ್ದ. ಸಿ ಸೆಕ್ಷನ್‌ನಲ್ಲಿ ಅವನ ಹಾಜರಾತಿ ಕರೆದಾಗ  ಇದ್ದರೂ ಎಸ್ ಸಾರ್ ಎಂದು ಹಾಜರಾತಿ ಹೇಳುತ್ತಿರಲಿಲ್ಲ. ಬೇಗ ಹೇಳಲು ಸಾಧ್ಯವಾಗದ ಕಾರಣ ಸುಮ್ಮನೆ ಕೂತು ಬಿಡುತ್ತಿದ್ದ. ಹೀಗಾಗಿ ಅವನ ಹೆಸರಿನ ಎದುರು ದಿನಾ ಗೈರು ಹಾಜರಿ ದಾಖಲಾಗಿ ಹೋಗುತ್ತಿತ್ತು. ಇದನ್ನು ನನ್ನ ಗಮನಕ್ಕೆ ತರಲು ಅವನು ಪ್ರತಿ ಸಲ ಬಂದು ನಿಲ್ಲುತ್ತಿದ್ದ. ನಾನು ಕೇಳಿದಾಗ ಬಡಬಡಿಸುತ್ತಿದ್ದ. ಬಿಝಿಯಾಗಿರುತ್ತಿದ್ದ ನಾನು ಅವನ ಓಡಿಸುತ್ತಿದ್ದೆ.

ಮೂರು ತಿಂಗಳಿಂದ ರಾಕೇಶ ಕಾಲೇಜಿಗೆ ಬಂದಿಲ್ಲ ಎಂಬ ಮಾಹಿತಿ ಪತ್ರ ಅವನ ಮನೆಗೆ ಹೋಗಿತ್ತು. ಆಗ ಆತ ನನ್ನ ಹುಡುಕಿಕೊಂಡು ಬಂದಿದ್ದ. ತಾನು ಮಾಡಿಕೊಂಡ ಎಡವಟ್ಟನ್ನು ಆತ ನನಗೆ ಮೊದಲಿನಿಂದ ವಿವರಿಸಿ ಹೇಳಲು ಬಯಸಿ ಕಷ್ಟಪಡುತ್ತಿದ್ದ. ಆಮೇಲೆ ಬಾರಯ್ಯ ಎಂದು ಹೇಳಿದರೆ ಅವಮಾನವಾದವನಂತೆ ಹೊರಟು ಹೋಗಿದ್ದ. ನನಗೂ ಆತನ ವರ್ತನೆಯ ಮೇಲೆ ಕುತೂಹಲವೂ, ಬೇಜಾವ್ದಾರಿಯ ಬಗ್ಗೆ ಸಿಟ್ಟೂ ಹುಟ್ಟಿಕೊಂಡಿತ್ತು. 

ರಾಕೇಶನ ವಿಳಾಸ ಕಲೆ ಹಾಕಿ ಒಂದು ಪತ್ರ ಬರೆದೆ. ಅವನ ಪರಿಚಯದ ಹುಡುಗರಿಗೆ ಅವನ ಕರೆದುಕೊಂಡು ಬರುವಂತೆ ಹೇಳಿದೆ. ಅವರು ಅವನು ಕಾಲೇಜಿಗಂತ ದಿನಾ ಹಾಸ್ಟೆಲ್‌ನಿಂದ ಬರ್ತಾನೆ ಸಾರ್. ಆದರೆ ಕ್ಲಾಸಿಗೆ ಬರಲ್ಲ. ಪೇಟೆ ಸುತ್ಕೊಂಡು ಕಾಲ ಹಾಕ್ತಾನೆ.  ಯಾವಾಗಲೋ ಬರ್ತಾನೆ. ಇಷ್ಟ ಬಂದ ಕ್ಲಾಸಲ್ಲಿ ಕೂರ್ತಾನೆ. ಕೇಳಿದರೆ ಏನೇನೋ ಮಾತಾಡ್ತಾನೆ ಸಾರ್. ಒಂದಕ್ಕೊಂದು ಸಂಬಂಧಾನೇ ಇರಲ್ಲ. ಅವನು  ದಡ್ಡ ಅಂತ ಕೆಲವರು ಹೇಳ್ತಾರೆ. ಪೂರಾ ಲೂಸ್ ಆಗಿದ್ದಾನೆ ಅಂತ ಅವರ ಹಳ್ಳಿ ಹುಡುಗರು ಹೇಳ್ತಾರೆ. ಒಟ್ನಲ್ಲಿ ಅವನು ಏನು ಹೇಳ್ತಾನೆ ಅನ್ನೋದು ಆ ದೇವರಿಗಷ್ಟೇ ಗೊತ್ತಾಗಬೇಕು ಎಂದು ಹೇಳಿ ಕೈ ತೊಳೆದುಕೊಂಡರು. ಹೀಗಾಗಿ, ದಿನ ಕಳೆದಂತೆ ನಾನೂ ಅವನ ವಿಷಯ ಮರೆತು ಬಿಟ್ಟೆ.

ಇದ್ದಕ್ಕಿದ್ದಂತೆ ಒಂದು ದಿನ ಇಬ್ಬರು ಹುಡುಗರು ಅವನನ್ನು ಆಟೊದಲ್ಲಿ ಕರೆದುಕೊಂಡು ಬಂದರು. ಗಾಂಧೀಜಿ ತಮ್ಮಿಬ್ಬರು ಮಹಿಳಾ ಸಹಾಯಕರ ಹೆಗಲ ಮೇಲೆ ಆಸರೆಗೆ ಕೈಗಳನ್ನು ಹಾಕಿಕೊಂಡು ಬರುವಂತೆ ಅವನೂ ನಡೆದು ಬರುತ್ತಿದ್ದ. ಅವನ ಹಿಂದೆ ಅವನ ಹೆತ್ತ ತಾಯಿ ಕಣ್ಣೀರು ಸುರಿಸುತ್ತಾ ಬರುತ್ತಿದ್ದರು. ಅವನ ಸ್ಥಿತಿ ನೋಡಿ ಗಾಬರಿಯಾಯಿತು. ಏನಾಯಿತೆಂದು ವಿಚಾರಿದೆವು.

ಅಟೆಂಡೆನ್ಸ್‌ ಕಡಿಮೆ ಐತಂತೆ. ಎಕ್ಸಾಮಿಗೆ ಕೂರ್ಸಲ್ಲ. ಹಾಲ್‌ಟಿಕೇಟ್ ಕೊಡಲ್ಲ. ಅಂತ ಹುಡುಗರು ಇವನಿಗೆ ಹೇಳಿದ್ವಂತೆ. ಆವಾಗಿಂದ ಪೂರ್ತಿ ಕ್ರಾಕ್ ಆಗ್ಬಿಟ್ಟಿದ್ದಾನೆ ಸಾರ್. ಏನಾದ್ರೂ ಮಾಡಿ ಹಾಲ್‌ಟಿಕೇಟ್ ಕೊಡಿ ಸಾರ್ ಎಂದು ಒಂದೇ ಸಮ ಅಳತೊಡಗಿದರು. ಪ್ರವೇಶಪತ್ರ ಕೊಟ್ಟರೂ ರಾಕೇಶ ಪರೀಕ್ಷೆ ಬರೆಯುವ ಸ್ಥಿತಿಯಲ್ಲಿ ಇರಲಿಲ್ಲ. ಮೇಲಾಗಿ ಅವನು ಗೈರು ಹಾಜರಾದ ಕಾರಣ ಅವನಿಗೆ ಹಾಲ್‌ಟಿಕೇಟ್ ಕೊಡುವ ಸ್ಥಿತಿಯಲ್ಲೂ ನಾವಿರಲಿಲ್ಲ.

ನಾವು ಎಷ್ಟು ಹೇಳಿದರೂ ಅವರ ತಾಯಿ  ನಮ್ಮ ಮಾತು ಕೇಳುವ ಸ್ಥಿತಿಯಲ್ಲಿರಲಿಲ್ಲ. ಒರಿಜಿನಲ್ ಬ್ಯಾಡ ಬಿಡಿ. ಅವನ ಸಮಾಧಾನಕ್ಕೆ ಡ್ಯೂಪ್ಲಿಕೇಟ್ ಹಾಲ್‌ಟಿಕೇಟಾದ್ರೂ ಕೊಡಿ ಸಾರ್. ಅವನಿಗೆ ಸಮಾಧಾನ ಆಗುತ್ತೆ. ಅದು ಬೇಕೇ ಬೇಕು ಅಂತ ಹಟ ಹಿಡಿದಿದ್ದಾನೆ. ನೆಟ್ಟಗೆ ನಿದ್ದೆ ಮಾಡಲ್ಲ. ಊಟ ಮಾಡಲ್ಲ. ಏನು ಮಾಡೋದು ಹೇಳಿ. ನೋಡ್ರಿ ಹುಚ್ಚಾಸ್ಪತ್ರೆ ಡಾಕ್ಟರ್ ಹತ್ರ ಹೆಸರು ಬರೆಸಿ ಬಂದಿದ್ದೀವಿ ಎಂದು ಚೀಟಿ ತೋರಿಸಿದರು. ನಮಗೆಲ್ಲಾ ಒಮ್ಮೆಗೇ ಕಣ್ಣೀರು ಒತ್ತರಿಸಿಕೊಂಡು ಬಂತು. ಅವನ ಸಮಾಧಾನಕ್ಕೆ ಇರಲಿ ಅಂತ ಒಂದು ಖಾಲಿ ಹಾಲ್‌ಟಿಕೇಟ್‌ನಲ್ಲಿ ಅವನ ಹೆಸರನ್ನು ಬರೆದುಕೊಟ್ಟೆವು.

ಹಾಲ್‌ಟಿಕೇಟ್ ಮುಟ್ಟಿ ನೋಡಿ ರಾಕೇಶ್ ಒಂದು ಸಲ ನಕ್ಕ. ನಾನು ಚೆನ್ನಾಗಿದ್ದೀಯಾ ರಾಕೇಶ ಎಂದು ಮೃದುವಾಗಿ ಅವನ ಕೆನ್ನೆ ಮುಟ್ಟಿ  ಅಪರಾಧಿ ಪ್ರಜ್ಞೆಯಲ್ಲೇ ವಿಚಾರಿಸಿದೆ. ನಾನು ರಾಜ್‌ಕುಮಾರ್ ಸಾರ್. ಇವರಿಬ್ಬರು ವಿಷ್ಣುವರ್ಧನ್, ರವಿಚಂದ್ರನ್ ಇದ್ದಂಗೆ ಸಾರ್ ಎಂದು ತನ್ನ ಗೆಳೆಯರನ್ನು ತೋರಿಸಿದ. ಅವನ ಸ್ಥಿತಿ ನೋಡಿ, ಮಾತು ಕೇಳಿ ಕರುಳು ಕಿತ್ತಷ್ಟು ಸಂಕಟವಾಯಿತು. ಅವತ್ತೇ ಅವನ ಸಮಸ್ಯೆ ಏನೆಂದು ಕೇಳಿದ್ದರೆ ಅವನಿಗೆ ಈ ಗತಿ ಬರುತ್ತಿರಲಿಲ್ಲವೇನೋ? ನಾನೆಂಥ ಕೆಲಸ ಮಾಡಿಬಿಟ್ಟೆ. ಇವನ ಈ ಸ್ಥಿತಿಗೆ ನಾನೂ ಕಾರಣವಲ್ಲವೆ? ಎಂಬ ಕೊರಗು ನನ್ನ ಕಾಡತೊಡಗಿತು. ರಾಕೇಶನಂತೆ ಹೈಸ್ಕೂಲು ಮತ್ತು ಪಿಯು ಹಂತದಲ್ಲಿ ಮಾನಸಿಕವಾಗಿ ತೊಳಲಾಡುವ ಸಾವಿರಾರು ವಿದ್ಯಾರ್ಥಿಗಳಿದ್ದಾರೆ. ಅವರಿಗೆ ಆಪ್ತ ಸಲಹೆ, ಸಾಂತ್ವನ, ಹಾಗೂ ಮಾರ್ಗದರ್ಶನ ನೀಡುವ ತಜ್ಞ ಮಾನಸಿಕ ವೈದ್ಯರಾಗಿದ್ದರೆ ಒಳ್ಳೆಯದಲ್ಲವೆ ಎಂದು ನನಗೆ ಯಾವಾಗಲೂ ಅನ್ನಿಸುತ್ತೆ. ಮಕ್ಕಳ ಮನಸ್ಸುಗಳನ್ನು ತಿಳಿಗೊಳಿಸುವ, ಅವರ ನಿಜವಾದ ಸಮಸ್ಯೆಗಳನ್ನು ಆಲಿಸುವ ಮಾನವೀಯ ಕಿವಿಗಳು ಬೇಕಾಗಿವೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT