ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಧುರ ನೆನಪಲ್ಲಿ ರಣಜಿ ಗೆಲುವಿನ ಕನಸು

Last Updated 4 ಡಿಸೆಂಬರ್ 2011, 19:30 IST
ಅಕ್ಷರ ಗಾತ್ರ

ಎರಡು ವಾರಗಳ ಹಿಂದೆ, ಬೆಂಗಳೂರು ಪ್ರೆಸ್ ಕ್ಲಬ್‌ನಲ್ಲಿ ಮೂವರು ಗೆಳೆಯರ ಪುಸ್ತಕಗಳ ಬಿಡುಗಡೆ ಸಮಾರಂಭದಲ್ಲಿ ಮನಸ್ಸಿಗೆ ಮುದ ನೀಡಿದ ಹಲವು ಅಂಶಗಳಿದ್ದವು. ಮುಖ್ಯವಾಗಿ ಅಂದು ಅಲ್ಲಿಗೆ ಬಂದಿದ್ದ ಹಿರಿಯ ಕ್ರೀಡಾಪಟುಗಳು ಹಾಗೂ ಕ್ರೀಡಾರಂಗದಲ್ಲಿ ಸೇವೆ ಸಲ್ಲಿಸಿದ ಪ್ರಮುಖರು ತೋರಿದ ಆತ್ಮೀಯತೆಯಿಂದ ಎದೆ ತುಂಬಿಬಂದಿತ್ತು.
 
ವಿ.ಆರ್. ಬೀಡು, ಜಯರಾಮ್, ಸುನೀಲ್ ಅಬ್ರಹಾಮ್, ಬ್ರಿಜೇಶ್ ಪಟೇಲ್, ಅನಿಲ್ ಕುಂಬ್ಳೆ, ಜಿ.ಕೆ. ವಿಶ್ವನಾಥ್, ಬಿ.ಸಿ. ರಮೇಶ್, ಶ್ರೀನಿವಾಸಗೌಡ, ಎಂ.ಪಿ. ಸ್ವಾಮಿ, ಅರ್ಜುನ್ ದೇವಯ್ಯ, ಎಸ್. ಆರ್. ಪವಾರ್ ಮುಂತಾದವರನ್ನು ಕಂಡು ಮಾತನಾಡಿಸಿದಾಗ ಮನಸ್ಸು ಎಂಬತ್ತರ ದಶಕದತ್ತ ತಿರುಗಿತ್ತು. ಅವರನ್ನೆಲ್ಲ ನೋಡಿ, ಮಾತನಾಡಿಸಿ ಬಹಳ ವರ್ಷಗಳಾಗಿದ್ದವು.
 
ವಯಸ್ಸಿನ ಕಾರಣದಿಂದ ದೇಹದ ಆಕಾರದಲ್ಲಿ ವ್ಯತ್ಯಾಸ ಕಂಡರೂ ಅವರ ಮನಸ್ಸುಗಳು ಹಾಗೆಯೇ ಇದ್ದವು. ಕ್ರೀಡಾರಂಗದ ಸೆಳೆತವೇ ಹಾಗೆ. ಬೇಡ ಎಂದರೂ ಬಿಡುವುದಿಲ್ಲ. ಈಗ ಮತ್ತೆ ಬೆಂಗಳೂರಿನ ಎಲ್ಲ ಕ್ರೀಡಾಂಗಣಗಳನ್ನು ಒಮ್ಮೆ ಸುತ್ತಿ ಬರಬೇಕಿದೆ.

ಕರ್ನಾಟಕದ ಕ್ರೀಡೆಗೆ ವರ್ಣರಂಜಿತ ಇತಿಹಾಸ ಇದೆ. ಕ್ರೀಡೆಯ ಬೆಳವಣಿಗೆಗೆ ಕರ್ನಾಟಕದ ಪತ್ರಿಕೆಗಳ ಕಾಣಿಕೆಯೂ ಗಮನಾರ್ಹ. ಆದರೆ ಕ್ರಿಕೆಟ್‌ನಿಂದ ಹಿಡಿದು ಕಬಡ್ಡಿ, ಕುಸ್ತಿ ವರೆಗೆ ಎಲ್ಲ ಆಟಗಳ ಬೆಳವಣಿಗೆಯ ಬಗ್ಗೆ, ಆಟಗಾರರ ಸಾಧನೆ ಬಗ್ಗೆ ಇನ್ನೂ ಹಲವು ಪುಸ್ತಕಗಳು ಬರಬೇಕಿದೆ ಎಂಬ ಅಭಿಪ್ರಾಯ ಕ್ರೀಡಾಪಟುಗಳಿಂದ ಕೇಳಿಬಂತು.

ಬ್ಯಾಸ್ಕೆಟ್‌ಬಾಲ್ ಭೀಷ್ಮ ಎಂದು ಕರೆಸಿಕೊಂಡ ಎಸ್. ವಿ. ಅಪ್ಪಯ್ಯ ಅವರನ್ನು ಜನ ಮರೆಯಬಾರದು, ಕೆಂಪಯ್ಯ ಅವರಂಥ ಫುಟ್‌ಬಾಲ್ ಆಟಗಾರನನ್ನು ಮರೆಯಬಾರದು. ಕರ್ನಾಟಕದ ಕ್ರೀಡೆಯ ಶ್ರೇಯಸ್ಸಿಗೆ ಶ್ರಮಿಸಿದ ಪೋಷಕರನ್ನೂ ಮರೆಯಬಾರದು.

ಹೀಗೇ ಹತ್ತು ಹಲವು ವಿಷಯಗಳ ಬಗ್ಗೆ ಚರ್ಚೆ ನಡೆಯುತ್ತಿದ್ದಂತೆಯೇ ಕರ್ನಾಟಕದ ಹುಡುಗರು ರಣಜಿ ಟ್ರೋಫಿ  ಕ್ರಿಕೆಟ್‌ನಲ್ಲಿ ಉತ್ತಮವಾಗಿ ಆಡುತ್ತಿರುವ ಮಾತು ಬಂತು. ಭಾರತ ಟೆಸ್ಟ್ ತಂಡದಲ್ಲಿ ಈಗ ರಾಹುಲ್ ದ್ರಾವಿಡ್ ಬಿಟ್ಟರೆ ಮತ್ತೊಬ್ಬರಿಲ್ಲ. ಒಂದು ದಿನದ ತಂಡದಲ್ಲಿ ವಿನಯಕುಮಾರ್ ಬಿಟ್ಟರೆ ಮತ್ತೊಬ್ಬನಿಲ್ಲ.

 ಎಲ್ಲಿ ಹೋಯಿತು ಕರ್ನಾಟಕದ ಪ್ರತಿಭೆ? ಅಥವಾ ಕರ್ನಾಟಕದ ಆಟಗಾರರಿಗೆ ಸೂಕ್ತ ಅವಕಾಶ ಸಿಗುತ್ತಿಲ್ಲವೇ? ಕಳೆದ ಮೂರ‌್ನಾಲ್ಕು ವರ್ಷಗಳಲ್ಲಿ ಭರವಸೆ ಮೂಡಿಸಿದ್ದ ಬೌಲರುಗಳು, ಬ್ಯಾಟ್ಸಮನ್ನರು ಅದೇಕೋ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿಲ್ಲ.
 
ಟ್ವೆಂಟಿ-20 ಕ್ರಿಕೆಟ್ ಅಥವಾ 50 ಓವರುಗಳ ಒಂದು ದಿನದ ತಂಡದಲ್ಲಿ ಸ್ಥಾನ ಪಡೆಯುವುದಕ್ಕಿಂತ ಟೆಸ್ಟ್ ತಂಡದಲ್ಲಿ ಆಡಿ ಅಲ್ಲಿಯ ಸ್ಥಾನ ಗಟ್ಟಿಮಾಡಿಕೊಂಡರೆ ನಿಗದಿಯ ಓವರುಗಳ ತಂಡದಲ್ಲಿ ಆಡುವುದು ಕಷ್ಟವೇನೂ ಆಗುವುದಿಲ್ಲ.

ಈ ವಿಷಯದಲ್ಲಿ ರಣಜಿ ಟ್ರೋಫಿ ಪಂದ್ಯಗಳಿಗೆ ಈಗಲೂ ಮಹತ್ವ ಇದೆ. ಪಂದ್ಯಗಳನ್ನು ನೋಡಲು ಜನರು ಬರಲಿಕ್ಕಿಲ್ಲ. ಆದರೆ ಭಾರತ ತಂಡದಲ್ಲಿ ಆಡುವ ಕನಸು ಕಾಣುವ ಪ್ರತಿಯೊಬ್ಬ ಆಟಗಾರನೂ ಈ ರಣಜಿ ಟ್ರೋಫಿ ಪಂದ್ಯಗಳಲ್ಲೇ ತನ್ನ ಸಾಮರ್ಥ್ಯವನ್ನು ಪ್ರದರ್ಶಿಸಬೇಕು.

ಇಲ್ಲಿ ಗಳಿಸುವ ರನ್ನುಗಳಿಗೆ, ಪಡೆಯುವ ವಿಕೆಟ್‌ಗಳಿಗೆ ವಿಶೇಷ ಮಹತ್ವ ಇದೆ. ಇದರಲ್ಲಿಯ ಉತ್ತಮ ಸಾಧನೆಯನ್ನು ಕಡೆಗಣಿಸಲು ಸಾಧ್ಯವೇ ಇಲ್ಲ. ಕಳೆದ ಎರಡು ವರ್ಷಗಳಿಂದ, ಪ್ರಶಸ್ತಿಯ ಸಮೀಪ ಬಂದು ವಿಫಲವಾಗಿರುವ ಕರ್ನಾಟಕ ಈ ಸಲ ಎಡವಬಾರದು.
 
ಎರಡು ವರ್ಷಗಳ ಹಿಂದೆ ಫೈನಲ್‌ನಲ್ಲಿ ಮುಂಬೈಗೆ ಮಣಿದಿದ್ದ ಕರ್ನಾಟಕ, ಕಳೆದ ವರ್ಷ ಸೆಮಿಫೈನಲ್‌ನಲ್ಲಿ ಬರೋಡಾ ತನ್ನ ಊರಿನಲ್ಲಿ ತೋಡಿದ್ದ ಖೆಡ್ಡಾದಲ್ಲಿ ಬಿದ್ದಿತ್ತು. ಅಲ್ಲಿಯ ಕೆಟ್ಟ ಪಿಚ್ ಮೇಲೆ ಕರ್ನಾಟಕ ಪರದಾಡಿತ್ತು. ರಾಜ್ಯ ಸಂಸ್ಥೆಗಳು ತಮ್ಮ ತಂಡ ಗೆಲ್ಲಬೇಕೆಂದು ಇಂಥ ತಂತ್ರಗಳನ್ನು ರೂಪಿಸುತ್ತವೆ. ತಮ್ಮ ಆಟಗಾರರಿಗೆ ಅನುಕೂಲಕರವಾಗಿರುವ ಹಾಗೆ ಪಿಚ್ ಸಿದ್ಧಪಡಿಸಲಾಗುತ್ತದೆ.

ಆದರೆ ಇದರ ಪರಿಣಾಮ ಇಡೀ ಟೂರ್ನಿಯ ಮೇಲೆ ಆಗುತ್ತದೆ. ಒಂದು ಉತ್ತಮ ತಂಡ ಸೋಲು ಅನುಭವಿಸುವ ಸಾಧ್ಯತೆ ಇರುತ್ತದೆ. ಈ ವರ್ಷ ಬ್ಯಾಟಿಂಗ್ ಮತ್ತು ಬೌಲಿಂಗ್‌ಗಳೆರಡರಲ್ಲೂ ಸಮಬಲ ಹೊಂದಿರುವ ಕರ್ನಾಟಕ ಪ್ರಸಕ್ತ ಸಾಲಿನಲ್ಲಿ ಆಡಿರುವ ನಾಲ್ಕು ಪಂದ್ಯಗಳಲ್ಲಿ ಒಂದನ್ನೂ ಸೋತಿಲ್ಲ.
 
ಮೂರು ಪಂದ್ಯಗಳಲ್ಲಿ ಮೊದಲ ಇನಿಂಗ್ಸ್ ಮುನ್ನಡೆ ಬಲದಿಂದ ಜಯ ಪಡೆದಿದ್ದರೆ ಇನ್ನೊಂದರಲ್ಲಿ ಸಂಪೂರ್ಣ ಗೆಲುವು ಸಾಧ್ಯವಾಗಿತ್ತು. ಎಲ್ಲಕ್ಕಿಂತ ಹೆಚ್ಚಾಗಿ ಪ್ರಬಲ ಮುಂಬೈ ವಿರುದ್ಧ ಮೊದಲ ಇನಿಂಗ್ಸ್ ಮುನ್ನಡೆ ಸಾಧಿಸಿದ್ದು ಕರ್ನಾಟಕ ತಂಡದ ವಿಶ್ವಾಸ ಹೆಚ್ಚಿಸಿದೆ.

ಕರ್ನಾಟಕಕ್ಕೆ ಮುಂಬೈ ವಿರುದ್ಧ ಗೆಲ್ಲುವುದು ಎಂದೂ ಸುಲಭವಾಗಿರಲಿಲ್ಲ. 1941 ರಿಂದ 1983 ರ ವರೆಗೆ, ಫೈನಲ್‌ನಲ್ಲಿ ಕರ್ನಾಟಕ ಮತ್ತು ಮುಂಬೈ ನಾಲ್ಕು ಸಲ ಎದುರಾಳಿಯಾಗಿದ್ದವು. ಮೂರು ಸಲ ಜಯಭೇರಿ ಬಾರಿಸಿದ್ದ ಮುಂಬೈಗೆ 1983 ರಲ್ಲಿ ಕರ್ನಾಟಕ ಮೊದಲ ಬಾರಿಗೆ ತಿರುಗೇಟು ಕೊಟ್ಟಿತ್ತು.

ಆದರೆ 2009-10 ರಲ್ಲಿ, ಮುಂಬೈ ವಿರುದ್ಧ ಮೈಸೂರಿನಲ್ಲಿ ನಡೆದ ಫೈನಲ್‌ನಲ್ಲಿ ಕರ್ನಾಟಕ ಗೆಲುವಿನ ಸಮೀಪ ಬಂದರೂ ಗೆಲ್ಲಲಾಗಲಿಲ್ಲ. ಕರ್ನಾಟಕ ಕೇವಲ ಆರು ರನ್ನುಗಳಿಂದ ಸೋತಿತ್ತು. ವಾಸ್ತವವಾಗಿ ಕರ್ನಾಟಕದ ಕೈಯಲ್ಲಿದ್ದ ಟ್ರೋಫಿಯನ್ನು ಮುಂಬೈ ನೋಡನೋಡುತ್ತಿದ್ದಂತೆಯೇ ಕಿತ್ತುಕೊಂಡಿತ್ತು.
 
ಮುಂಬೈ ಮತ್ತು ಕರ್ನಾಟಕ ತಂಡದ ನಡುವಣ ವ್ಯತ್ಯಾಸವೇ ಇದು. ಮುಂಬೈ ಆಟಗಾರರು ಕೊನೆಯ ವರೆಗೂ ಹೋರಾಟ ಬಿಡುವುದಿಲ್ಲ. ಕರ್ನಾಟಕದ ಆಟಗಾರರಲ್ಲಿ ಆ ಛಲದ ಕೊರತೆ ಇದೆ . ಮುಂಬೈ ಆಟಗಾರರ ಜಿಗುಟುತನ ನಮ್ಮವರಲ್ಲಿ ಕಾಣುವುದಿಲ್ಲ. ಇಂದು ಪೈಪೋಟಿ ಹೆಚ್ಚಿದೆ.
 
ವೃತ್ತಿಪರ ಮನೋಭಾವದ ಜೊತೆ ಚಾಣಾಕ್ಷ ಬುದ್ಧಿಯೂ ಬೇಕು. ಕಾಶ್ಮೀರದಿಂದ ಕನ್ಯಾಕುಮಾರಿ ವರೆಗೆ ಲಕ್ಷಾಂತರ ಮಂದಿ ಯುವ ಆಟಗಾರರು ಭಾರತ ತಂಡಕ್ಕೆ ಆಡುವ ಕನಸು ಕಾಣುತ್ತಿದ್ದಾರೆ. ಆದರೆ ಇಡೀ ದೇಶದಿಂದ ಆಯ್ಕೆಯಾಗುವವರು ಕೇವಲ 15 ಮಂದಿ. ಅಂದರೆ ಒಂದು ಸ್ಥಾನಕ್ಕೆ ಎಷ್ಟು ಮಂದಿ ಸೆಣಸುತ್ತಾರೆ ಎಂಬುದನ್ನು ಲೆಕ್ಕ ಹಾಕಿ.

 ಕೆ.ಬಿ. ಪವನ್, ಭರತ್ ಚಿಪ್ಲಿ, ಅಮಿತ್ ವರ್ಮ, ಮನೀಷ್ ಪಾಂಡೆ, ಎಸ್. ಅರವಿಂದ್, ಅಭಿಮನ್ಯು ಮಿಥುನ್, ಕೆ.ಪಿ. ಅಪ್ಪಣ್ಣ, ಸ್ಟುವರ್ಟ್ ಬಿನ್ನಿ ಚೆನ್ನಾಗಿ ಆಡುತ್ತಿದ್ದಾರೆ. ಬುದ್ಧಿವಂತ ನಾಯಕ ಎನಿಸಿಕೊಂಡಿದ್ದ ಕೆ. ಜಸ್ವಂತ್ ತಂಡದ ತರಬೇತುದಾರರಾಗಿದ್ದಾರೆ.

ಎಲೀಟ್ `ಎ~ ಗುಂಪಿನಲ್ಲಿ ಕರ್ನಾಟಕ ಇನ್ನೂ ಮೂರು ಪಂದ್ಯಗಳನ್ನು ಆಡಬೇಕಿದೆ. ತಂಡ ನಾಕ್‌ಔಟ್ ಹಂತಕ್ಕೆ ಹೋಗುವುದು ಖಚಿತ. ಅಲ್ಲಿಯೇ ನಿಜವಾದ ಸವಾಲು ಎದುರಾಗುತ್ತದೆ.

1998-99 ರ ನಂತರ ಕರ್ನಾಟಕ ರಣಜಿ ಟ್ರೋಫಿ ಗೆದ್ದಿಲ್ಲ. ಅಲ್ಲಿಂದ ಇಲ್ಲಿಯ ವರೆಗೆ ಕರ್ನಾಟಕದ ಕ್ರಿಕೆಟ್‌ನಲ್ಲಿ ಬಹಳಷ್ಟು ಬದಲಾವಣೆಗಳಾಗಿವೆ. ಅನಿಲ್ ಕುಂಬ್ಳೆ ನೇತೃತ್ವದಲ್ಲಿ ಹೊಸ ಯೋಜನೆಗಳನ್ನು ಹಾಕಿಕೊಳ್ಳಲಾಗಿದೆ. ಆಟಗಾರರ ಸೌಕರ್ಯಗಳು ಹೆಚ್ಚಿವೆ.

 ಜಿಲ್ಲಾ ಕೇಂದ್ರಗಳಲ್ಲಿ ಕ್ರಿಕೆಟ್ ಕ್ರೀಡಾಂಗಣಗಳು ಸಿದ್ಧವಾಗಿವೆ. ಆಟಗಾರರಿಗೆ ಟರ್ಫ್ ಮೇಲೆ ಆಡುವ ಅವಕಾಶ ಕಲ್ಪಿಸಲಾಗುತ್ತಿದೆ. ಈ ಕ್ರೀಡಾಂಗಣ ಉಪಯೋಗ ಸೂಕ್ತವಾಗಿ ಆಗಬೇಕು. ಅಲ್ಲಿ ಜೂನಿಯರ್ ಮಟ್ಟದ ಪಂದ್ಯಗಳ ಜೊತೆ ರಣಜಿ ಪಂದ್ಯಗಳನ್ನೂ ಆಡಿಸಬೇಕು.

ಜಿಲ್ಲಾ ಕೇಂದ್ರಗಳಲ್ಲಿ ಆಟ ನೋಡಲು ಜನ ಖಂಡಿತ ಬರುತ್ತಾರೆ. ಬೆಂಗಳೂರಿನಲ್ಲಿ ಬರುವುದಿಲ್ಲ. ಯಾಕೆಂದರೆ ಬೆಂಗಳೂರಿನ ಜನರಿಗೆ ಅಂತರರಾಷ್ಟ್ರೀಯ ಪಂದ್ಯಗಳ ಮೇಲಷ್ಟೇ ಪ್ರೀತಿ!

ಕರ್ನಾಟಕದ ಯುವ ಆಟಗಾರರು ಈ ಸಲ ರಣಜಿ ಟ್ರೋಫಿ ಗೆದ್ದಲ್ಲಿ, ಅದು ಅನಿಲ್ ಕುಂಬ್ಳೆ ಮತ್ತು ಜಾವಗಲ್ ಶ್ರೀನಾಥ್ ಅವರಿಗೆ ನೀಡುವ ಉಡುಗೊರೆಯಾಗುತ್ತದೆ. ಕಳೆದ ವರ್ಷ ಸಂಸ್ಥೆಯ ಅಧಿಕಾರ ಹಿಡಿದ ಈ ಇಬ್ಬರು ಖ್ಯಾತ ಆಟಗಾರರು ಸಹಜವಾಗಿಯೇ ವಿವಿಧ ರೀತಿಯ ವಿರೋಧಗಳನ್ನು ಎದುರಿಸಬೇಕಾಗುತ್ತದೆ.
 
ಅಧಿಕಾರ ಎಂದರೆ ಮುಳ್ಳಿನ ಕುರ್ಚಿಯೇ ಆಗಿರುತ್ತದೆ. ಆಡುವಾಗ ಇರುವ ಸ್ಪರ್ಧೆಯ ಸ್ವರೂಪವೇ ಬೇರೆ, ಅಧಿಕಾರದಲ್ಲಿನ ತಿಕ್ಕಾಟದ ಸ್ವರೂಪವೇ ಬೇರೆ. ಇಂಥ ಸಂದರ್ಭದಲ್ಲಿ ಕರ್ನಾಟಕ ತಂಡ ರಣಜಿ ಟ್ರೋಫಿ ಗೆಲ್ಲುವುದು ಎಲ್ಲರಿಗೂ ಒಳ್ಳೆಯ ಹೆಸರು ತಂದುಕೊಡುತ್ತದೆ. ಮುಂದಿನ ಕೆಲಸಗಳೂ ಸುಗಮವಾಗುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT