ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಧ್ಯಮ ವ್ಯಾಯೋಗಕ್ಕೆ ಮತ್ತೆ ಯೋಗ!

Last Updated 5 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

ಸಾಹಿತ್ಯ ಸಮ್ಮೇಳನಗಳಲ್ಲಿ ಸಾಮಾನ್ಯವಾಗಿ ನಾಡುನುಡಿ ಕುರಿತ ಸಾಂದರ್ಭಿಕ ಚರ್ಚೆಗಳು ನಡೆಯುತ್ತವೆಯೇ ಹೊರತು ಸಿರಿನುಡಿ, ಬಿರುನುಡಿಗಳ ಸುರಿಮಳೆ ಇರುವುದಿಲ್ಲ. ಇತ್ತೀಚೆಗೆ ನಡೆದ ಎರಡು ಸಾಹಿತ್ಯ ಸಮ್ಮೇಳನಗಳಲ್ಲೂ ‘ಮಧ್ಯಮ ಮಾರ್ಗವೇ ಒಳ್ಳೆಯದು, ಅದನ್ನು ಸೃಷ್ಟಿಸಬೇಕಾದ ಕಾಲ ಬಂದಿದೆ, ಎಡ– ಬಲ ಎರಡನ್ನೂ ಬಿಟ್ಟು ಮೂರನೇ ದಾರಿಯ ಚಿಂತನೆಯ ಅನುಸಂಧಾನ ಮಾಡುವ ತುರ್ತು ಪರಿಸ್ಥಿತಿ ಬಂದೊದಗಿದೆ’ ಇತ್ಯಾದಿ ಕಳಕಳಿಯಿಂದ ಮಂಡಿಸಿದ ವಾದವು ನಮ್ಮನಿಮ್ಮಂಥವರ ಪಾಲಿಗೆ ಚಿಂತನಾರ್ಹವಾಗಿದೆ; ಅಷ್ಟೇ ಅಲ್ಲ, ಚಿಂತೆಗೆ ಅರ್ಹವೂ ಆಗಿದೆ!

ಏಕೆಂದರೆ ಜಗತ್ತಿನಲ್ಲಿ ಮಧ್ಯಮ ಮಾರ್ಗಕ್ಕೆ ಕರೆಗಂಟೆ ಮೊಳಗಿರುವುದೆಲ್ಲ ಪರವೂ ವಿರೋಧವೂ ಅಥವಾ ಆ ಎರಡೂ- ಯುದ್ಧೋನ್ಮಾದ ಸ್ಥಿತಿ ತಲುಪಿದ ಅಪಾಯದ ಗಳಿಗೆಯಲ್ಲೇ. ಐದು ಹತ್ತು ವರ್ಷಗಳ ಹಿಂದೆ ಕೂಡ ಇದರ ಅಗತ್ಯ ಒದಗಿರಲಿಲ್ಲ. ಆದರೆ ಈಗ ಸಮಾಜದಲ್ಲಿ ಶಾಂತಿ ಸ್ಥಾಪನೆಗೋಸ್ಕರ ಚಿಂತನೆಯಲ್ಲಿ ಒಂದು ಮಧ್ಯಮ ಮಾರ್ಗದ ಹುಡುಕಾಟ ಅಗತ್ಯವಾಗಿದೆಯಂತೆ. 

ಮನುಷ್ಯ ಚರಿತ್ರೆಯಲ್ಲಿ ಯಾವುದೇ ವಿಷಯದ ಬಗ್ಗೆ ಚಿಂತನೆ ಹುಟ್ಟಿದರೆ ಅದಕ್ಕೆ ಪರ ಮತ್ತು ವಿರೋಧ ಎಂಬ ಮೂರ್ತ ಮಾರ್ಗಗಳ ಜೊತೆ ‘ಮಧ್ಯಮ ಮಾರ್ಗ’ ಅನ್ನುವ ಅಮೂರ್ತ ಸುರಕ್ಷಾ ಪರಿಕರದ ಹುಡುಕಾಟವೂ ಕಾಣುತ್ತದೆ.

ಚಲಿಸುತ್ತಿರುವಾಗ ಅಪಘಾತ ಆಗಿಬಿಟ್ಟರೆ ಹೊರಬರಲು ನೆರವಾಗಲೆಂದು ವಾಹನಗಳಲ್ಲಿ ತುರ್ತುಬಾಗಿಲುಗಳು ಇರುವುದಿಲ್ಲವೇ ಹಾಗೆ. ಋಗ್ವೇದದಲ್ಲಿ ಇಂದ್ರನಿಗೆ ಮೊರೆ ಇಡುತ್ತ ‘ಏನೋ ನಿನ್ನನ್ನು ಇಷ್ಟು ಮಾತ್ರ ಬೇಡಿಕೊಳ್ಳುತ್ತೇನೆ, ಆದರೆ ನೀನೇ ಇಲ್ಲ ಎಂದು ಕೆಲವರು ಹೇಳುತ್ತಾರಲ್ಲ’ ಎಂಬ ಪ್ರಾಮಾಣಿಕ ಸಂದೇಹವೂ ಕಾಣುತ್ತದೆ.

ಬೇರೆಯದೆಲ್ಲ ಬಿಡಿ, ದೇವರು ಇದ್ದಾನೋ ಇಲ್ಲವೋ ಎನ್ನುವ ಜೀವಂತ ಆಸ್ತಿಕ - ನಾಸ್ತಿಕ ಚರ್ಚೆಯ ಪಕ್ಕದಲ್ಲೇ ‘ದೇವರು ಕಾಪಾಡಲಿ, ಅಕಸ್ಮಾತ್ ಅವನೇನಾದರೂ ಇದ್ದರೆ!’ ಎಂಬಂಥ ಅಗ್ನೋಸ್ಟಿಕ್ ಅನುಮಾನವೂ ಇದೆಯಲ್ಲ! ಬ್ರಹ್ಮ ನಿರಾಕಾರ, ಆತ್ಮ ನಿರಾಕಾರ ಎಂದು ಒಂದು ಮಾತಿನಲ್ಲಿ ಹೇಳಿ ಮುಗಿಸಿದ ಮೇಲೂ ಅವುಗಳ ಪರ ವಿರೋಧ ಅಥವಾ ಅನುಮಾನ, ಸಂದೇಹಗಳ ಬಗ್ಗೆ ಶತಮಾನಗಳ ಜಿಜ್ಞಾಸೆ ನಡೆದಿದೆ.

ವೈದಿಕ ಮತ್ತು ಜೈನ ಧರ್ಮಗಳಿಗಿಂತ ತನ್ನದು ಭಿನ್ನವಾದ ಮಾರ್ಗ, ಆ ಎರಡು ವಿಭಿನ್ನ ಚಿಂತನೆಗಳಿಗಿಂತ ತಾನು ಹೇಳುವುದು ಬೇರೆ ಎನ್ನುವ ಅರ್ಥದಲ್ಲಿ ಬುದ್ಧ ಕೆಲವು ಮಾತುಗಳನ್ನು ಹೇಳಿದ್ದಾನೆ.

ಅಷ್ಟಿದ್ದ ಮೇಲೆ ಸಾಕೆಂಬಂತೆ ಅಂತೂ ಇಂತೂ ಒಂದು ಮಧ್ಯಮ ಮಾರ್ಗವನ್ನು ಪತ್ತೆ ಮಾಡಿ ಗೆದ್ದವರಂತೆ ಹಲವರು ಬೀಗಿದ್ದಾರೆ. ಆದರೆ ಅದುವರೆಗಿನ ಮನುಷ್ಯ ಚಿಂತನೆಯಲ್ಲಿ ತಾನು ಯಾವುದನ್ನು ಒಪ್ಪುತ್ತೇನೆ- ಯಾವುದನ್ನು ಒಪ್ಪುವುದಿಲ್ಲ ಎಂದು ಬುದ್ಧ ಹೇಳಿರುವುದಕ್ಕಿಂತ ಸ್ಪಷ್ಟವಾಗಿ ಇನ್ನಾರು ಹೇಳಿದ್ದಾರೆ? ‘ಧರ್ಮವು ಸದ್ಧರ್ಮ ಎನಿಸಬೇಕಾದರೆ, ಮನುಷ್ಯ ಮನುಷ್ಯನ ನಡುವಣ ಸಾಮಾಜಿಕ ಅಡೆತಡೆಗಳನ್ನೆಲ್ಲಾ ಅದು ನಿರ್ಮೂಲನ ಮಾಡಬೇಕು.

ಧರ್ಮವು ಸದ್ಧರ್ಮವಾಗಿರಬೇಕಾದರೆ, ಹುಟ್ಟು ಅಲ್ಲ ಅಂತಃಸ್ಸತ್ವವೇ ಮನುಷ್ಯನ ಅಳತೆಗೋಲು ಎಂಬುದನ್ನು ಬೋಧಿಸಬೇಕು. ಧರ್ಮವು ಸದ್ಧರ್ಮವಾಗಿರಬೇಕಾದರೆ ಮನುಷ್ಯ ಮನುಷ್ಯನ ನಡುವೆ ಸಮಾನತೆಯನ್ನು ಹೆಚ್ಚಿಸಬೇಕು. ವಿದ್ಯೆಯನ್ನು ಎಲ್ಲರಿಗೂ ತೆರೆದಿಟ್ಟಾಗಲೇ ಧರ್ಮ ಸದ್ಧರ್ಮವಾಗುತ್ತದೆ’ ಎಂದೆಲ್ಲಾ ಹೇಳಿರುವ ಬುದ್ಧ ಯಾವ ವಿಚಾರಗಳನ್ನು ದಿಟ್ಟವಾಗಿ ತಿರಸ್ಕರಿಸುತ್ತಿದ್ದಾನೆ ಎನ್ನುವುದು ಸುಸ್ಪಷ್ಟ. ಹಾಗಿದ್ದ ಮೇಲೆ ಅವನ ಇಡೀ ತಾತ್ವಿಕ ಚಿಂತನೆ ನವ ಮಾರ್ಗ ಆಗುತ್ತದೆಯೇ ಹೊರತು ಮಧ್ಯಮ ಮಾರ್ಗ ಹೇಗಾಗುತ್ತದೆ?

ಹೌದು ಅಥವಾ ಇಲ್ಲ, ಸರಿ ಇಲ್ಲವೇ ತಪ್ಪು, ನ್ಯಾಯ ಇಲ್ಲವೇ ಅನ್ಯಾಯ, ನಿಜ ಅಥವಾ ಸುಳ್ಳು, ದಯೆ ಅಥವಾ ನಿರ್ದಯೆ, ಸಂತೋಷ ಅಥವಾ ದುಃಖ - ಹೀಗೆ ಒಂದು ವಿಷಯವನ್ನು, ಆಲೋಚನೆಯನ್ನು, ಘಟನೆಯನ್ನು ಅಥವಾ ಬೆಳವಣಿಗೆಯನ್ನು ವಿಶ್ಲೇಷಣೆ ಮಾಡಲಾಗುತ್ತದೆ. ಆದರೆ ಇವೆರಡರ ಆಚೆ ಅಥವಾ ಈಚೆ, ಇವೆರಡರ ಮೇಲೆ ಅಥವಾ ಕೆಳಗೆ, ಆ ಮುದ್ದು ಮೂರನೆಯದನ್ನು ಹುಡುಕುವ ಮುಕ್ಕಣ್ಣರು ಎಂದಿನಿಂದಲೂ ಇದ್ದಾರೆ. ಒಂದೋ ನೀವು ವಿಷಯದ ಪರವಾಗಿರುತ್ತೀರಿ ಅಥವಾ ವಿರೋಧವಾಗಿರುತ್ತೀರಿ.

ನಿಜಕ್ಕೂ ಮಧ್ಯಮ ಮಾರ್ಗ ಅಂದರೇನು? ಅದರ ರೂಪ ರಸ ಗಂಧ ಬಣ್ಣ ಆಕಾರಗಳೇನು? ಅವುಗಳೆಲ್ಲ ಇಲ್ಲದಿರುವ ಅದನ್ನು ಹುಡುಕುವುದು ಹೇಗೆ? ಯಾವ ಕಾಲ, ಯಾವ ಧರ್ಮ, ಯಾವ ವಿಷಯ ಕುರಿತಾದರೂ ವಾದ ಮಂಡನೆ ಆಗಿರಲಿ, ಅದಕ್ಕೊಂದು ವಿರೋಧ ಸಹಜವಾಗಿ ಇದ್ದೇ ಇರುವ ಹಾಗೆ ‘ಅದೂ ಇರಬಹುದು, ಇದೂ ಇರಬಹುದು, ನಿಜವೂ ಅಲ್ಲ, ಸುಳ್ಳೂ ಅಲ್ಲ’ ಎಂದು ಇರುವ ನಿಜದ ಮುಖಕ್ಕೆ ತಿಪ್ಪೆ ಸಾರಿಸುವ ಮೂರನೇ ವಾದ ಮುಂದಿಡುವ ಪ್ರಯತ್ನ ಒಟ್ಟಿನಲ್ಲಿ ನಿರಂತರವಾಗಿ ಆಗುತ್ತಿದೆ.

ಜನರ ನಂಬಿಕೆಯ ಸ್ವರ್ಗ, ಮರ್ತ್ಯ, ಪಾತಾಳಗಳೆಂಬ ಮೂರು ಲೋಕಗಳಲ್ಲಿ ಆ ಮಧ್ಯಮ ಮಾರ್ಗ ಅನ್ನುವುದರ ಹುಡುಕಾಟ ನಡೆದೇ ಇದೆ. ಎಷ್ಟಾದರೂ ಜೀವನ ಅಂದರೆ ಇರುವುದೆಲ್ಲವ ಬಿಟ್ಟು ಇಲ್ಲದುದರೆಡೆ ತುಡಿವುದೇ ಅಲ್ಲವೇ? ಕಣ್ಣಿಗೆ ಕಾಣುವ ಎರಡು ಸ್ಪಷ್ಟ ಮಾರ್ಗಗಳನ್ನು ತಿರಸ್ಕರಿಸಿ ಈ ಮೂರನೇ ಮೇನ್ ಮೂರನೇ ಕ್ರಾಸ್ ಹುಡುಕಿಕೊಂಡು ಸ್ವಲ್ಪ ದೂರ ನಡೆದ ನಂತರ ಎಷ್ಟೋ ಮಂದಿ ‘ಎಲೆಲೆ ರಸ್ತೆ, ಏನ್ ಅವ್ಯವಸ್ಥೆ’ ಎಂದು ದಿಕ್ಕೆಟ್ಟು ನಿಂತದ್ದುಂಟು. ಒಟ್ಟಿನಲ್ಲಿ ಮಾರ್ಗದಷ್ಟೇ ಮಧ್ಯಮ ಮಾರ್ಗದ ಹುಡುಕಾಟವೂ ಬಹಳ ಹಳೆಯದು. ಈಗ ಹೊಸದಾಗಿ ಮಧ್ಯಮ ಮಾರ್ಗ ಹುಡುಕಬೇಕೆಂದರೆ ಹೊಸ ಅಜೆಂಡಾಗಳ ಜಿಪಿಎಸ್ ಬೇಕಾಗುತ್ತದೆ ಅಷ್ಟೆ.

ಧಾರ್ಮಿಕ ಭಯೋತ್ಪಾದನೆ, ಹುಸಿ ಧಾರ್ಮಿಕತೆ, ಹುಸಿ ರಾಷ್ಟ್ರೀಯತೆ ಮುಂತಾದುವೆಲ್ಲ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಮುಕ್ತ ಚಿಂತನೆಯ ಸುಗಮ ಸಂಚಾರಕ್ಕೆ ಹಿಂದೆಂದೂ ಇಲ್ಲದಂತೆ ತಡೆಯೊಡ್ಡಲು ಆರಂಭಿಸಿ ಸಾಕಷ್ಟು ಕಾಲ ಉರುಳಿದೆ. ಅದರಿಂದ ರಾಷ್ಟ್ರಜೀವನದಲ್ಲಿ ಮೊದಲು ಇಲ್ಲದಿದ್ದಷ್ಟು ದಟ್ಟವಾಗಿ ಅಸಹನೆಯ ಮಬ್ಬು ಈಗ ಕವಿಯುತ್ತಿದೆ.

ನಾವು ಮಾಡುತ್ತಿರುವುದೇ ಸರಿ ಎಂದು ಅದರ ಬಗ್ಗೆ ಒಂದು ಗುಂಪಿನ ಸಮರ್ಥನೆ ಹೆಚ್ಚುತ್ತಿರುವುದರಿಂದ, ಸಹಜವಾಗಿ ಅದನ್ನು ತೀವ್ರವಾಗಿ ಖಂಡಿಸುವ ಇನ್ನೊಂದು ಗುಂಪಿನ ಪ್ರತಿರೋಧವೂ ಹೆಚ್ಚುತ್ತಿದೆ. ಒಂದು ತಾತ್ವಿಕ ದೃಷ್ಟಿಕೋನದ ವಾದ ಮಂಡನೆ ಆದಮೇಲೆ ಇನ್ನೊಂದು ತಾತ್ವಿಕ ದೃಷ್ಟಿಕೋನದ ಪ್ರತಿವಾದ ಮಂಡನೆ ಆಗಬಾರದೆಂದರೆ ಹೇಗೆ?

ಅದರಲ್ಲಿ ಹೊಸದೇನಿದೆ, ಅದು ಎಂದಿನಿಂದಲೂ ಆಗುತ್ತಿದ್ದದ್ದೇ. ಆದರೆ ಈಗಿನ ಕಾಲಮಹಿಮೆಯಿಂದ ಅದಕ್ಕೆ ಹೆಚ್ಚಿನ ವ್ಯಾಪ್ತಿಯೂ ಗಂಟಲಶಕ್ತಿಯೂ ಬಂದಿದೆ. ಬೈಟು ಕಾಫಿ ಕುಡಿಯುತ್ತ ಚರ್ಚಿಸುತ್ತಿದ್ದ, ಅರಳಿಕಟ್ಟೆಯ ಮೇಲೆ ಕೂತು ನಗಾಡುತ್ತಿದ್ದ, ಮರಗಳ ಕೆಳಗೆ ಪಿಸುಮಾತಿನಲ್ಲಿ ಆಡುತ್ತಿದ್ದ ಮಾಮೂಲು ಸಂಗತಿಗಳಿಗೆಲ್ಲ ಈಗ ಹೊಸ ಬಣ್ಣ ಬಂದಾಗಿದೆ.

ಮಾಧ್ಯಮ ಮತ್ತು ನವಮಾಧ್ಯಮದ ಕೃಪೆಯಿಂದ ದೈನಂದಿನ ಬದುಕಿನಲ್ಲಿ ಇದುವರೆಗೆ ಲಕ್ಷ್ಯಕ್ಕೆ ಬರದಿದ್ದ ಸಣ್ಣಪುಟ್ಟ ವಿಷಯಗಳೆಲ್ಲ ‘ರಾಷ್ಟ್ರೀಯ’ ಮಹತ್ವದ ವಿಷಯಗಳಾಗಿ ಬಿಂಬಿತವಾಗಿ ಅವಾಂತರಗಳನ್ನು ಸೃಷ್ಟಿಸುವುದು ಎಂದೋ ಆರಂಭವಾಗಿದೆ. ವ್ಯವಸ್ಥೆಯ ಮೇಲಿರುವ ಅಧಿಕಾರವನ್ನು ಬಳಸಿ ಜನಬೆಂಬಲದ ತಯಾರಿಕೆಯೂ ಜೋರಾಗಿ ನಡೆಯುತ್ತಿದೆ.

ಇಂಥ ಸನ್ನಿವೇಶದಲ್ಲಿ ನಾವು ಯಾರಾದರೂ ಆಗಿರಲಿ ಮಾಡಬೇಕಾದದ್ದು ಇಷ್ಟೇ- ಯಾರ ನಿಲುವು ಜನಪರ, ಯಾರ ನಿಲುವು ಜನವಿರೋಧಿ ಎನ್ನುವುದನ್ನು ನಿಷ್ಪಕ್ಷಪಾತವಾಗಿ ಹೇಳುವುದು ಮತ್ತು ಯಾವ ಚಿಂತನೆ ಜನರ ಶತ್ರು, ಯಾವ ಚಿಂತನೆ ಜನರ ಮಿತ್ರ ಎನ್ನುವುದನ್ನು ಬಹಿರಂಗವಾಗಿ ಗುರುತಿಸುವುದು. ಅಂದರೆ ಎಡವೋ ಬಲವೋ ಕೆಂಪೋ ಕೇಸರಿಯೋ ಏನಾದರೂ ಇರಲಿ, ಜನಹಿತವೊಂದೇ ಅವರ ಚಟುವಟಿಕೆಗಳಿಗೆ, ಚಿಂತನೆಗಳಿಗೆ ಮಾನದಂಡ.

ಆ ಮಾನದಂಡದಲ್ಲಿ ಕಾಣುವುದು ‘ಇದು ಸರಿ ಅಥವಾ ಸರಿಯಲ್ಲ’ ಎಂಬ ಎರಡೇ ಮಾರ್ಗ ಅಲ್ಲವೇ? ಜನಹಿತದ ದೃಷ್ಟಿಯಿಂದ ಇದಾದರೆ ಇದು ಅನ್ನೋಣ, ಅದಾದರೆ ಅದು ಅನ್ನೋಣ - ಇದರಲ್ಲಿ ಗೊಂದಲ, ಸಂದಿಗ್ಧತೆ ಇರಬಾರದು. ಯಾರೋ ದೊಡ್ಡ ಗಂಟಲಿನಲ್ಲಿ ಕಿರಿಚುತ್ತಾರೆಂದರೆ ಮಿಕ್ಕವರು ಹೆದರಿ ಹಿಂಜರಿಯಬಾರದು. ಜನಹಿತ ಎನ್ನುವುದಕ್ಕೆ ಬೇರೆಬೇರೆ ಅರ್ಥಗಳಿಲ್ಲವಾದ್ದರಿಂದ ಇರುವುದೊಂದೇ ಸತ್ಯ.

ಆ ಸತ್ಯ ಎನ್ನುವುದರಲ್ಲಿ ಆದಿ, ಮಧ್ಯ, ಮತ್ತು ಅಂತಿಮ ಸತ್ಯ ಅನ್ನುವುದೆಲ್ಲ ಇರುವುದಿಲ್ಲ. ಸತ್ಯವನ್ನು ಮರೆಮಾಚಲಾಗುತ್ತದೆ ಎಂದು ಹೇಳುವಾಗ ಮರೆಮಾಚಲಾದ ಸತ್ಯ ಏನು ಎನ್ನುವುದು ಗೊತ್ತೇ ಇರುತ್ತದೆ. ಆ ಸತ್ಯವನ್ನೂ ಮತ್ತು ಇದ್ದರೆ ಅದರ ಸತ್ಯೋತ್ತರವನ್ನೂ ಗುರುತಿಸುವುದು ಕಷ್ಟವಲ್ಲ.

ಯಾರೋ ನಾಲ್ಕು ಜನ ಬುದ್ಧಿಜೀವಿಗಳಲ್ಲಿ ಕುರ್ಚಿಗಳ ಕನವರಿಕೆಯಲ್ಲಿ ‘ಪೊಲಿಟಿಕಲಿ ಕರೆಕ್ಟ್’ ಮಾತುಗಳನ್ನು ಆಡುವ ಅವಕಾಶವಾದ ಇರಬಹುದು - ಅಷ್ಟಕ್ಕೆ ಇಡೀ ಒಂದು ತಾತ್ವಿಕತೆ, ಸಿದ್ಧಾಂತ, ಲೋಕಮೀಮಾಂಸೆಯನ್ನೇ ಹಳಿಯುವುದು ಕೂಡ ಇನ್ನೊಂದು ಬಗೆಯ ‘ಪೊಲಿಟಿಕಲಿ ಕರೆಕ್ಟ್’ ಮಾತ್ರವಲ್ಲ ‘ಪೊಲಿಟಿಕಲಿ ಕರಪ್ಟ್’ ನಿಲುವು ಅಲ್ಲವೇನು? ‘ಇದು ಸರಿಯಲ್ಲ’ ಎಂದು ಹೇಳಲೇಬೇಕಾದ ಕಡೆ ಅದನ್ನು ಹೇಳದೆ ಮತ್ತೇನನ್ನೋ ಹೇಳುವ ಅದ್ಭುತ ಆಯ್ಕೆ ಸ್ವಾತಂತ್ರ್ಯಕ್ಕೆ ಇರುವ ಮತ್ತೊಂದು ಹೆಸರೇ ಅವಕಾಶವಾದ ಅಲ್ಲವೇನು? ಸಿದ್ಧಾಂತಗಳ ರಾದ್ಧಾಂತವೇ ಬೇಡ ಎಂದು ಹೇಳುವುದೂ ಒಂದು ಸಿದ್ಧಾಂತವಲ್ಲವೇನು?

ಜಗತ್ತಿನಲ್ಲಿ ನಡೆಯುವ ವಿದ್ಯಮಾನಗಳಿಗೆಲ್ಲ ಎಲ್ಲರೂ ಸಾರ್ವಜನಿಕವಾಗಿ ಪ್ರತಿಕ್ರಿಯೆ ನೀಡಬೇಕು ಎಂದೇನಿಲ್ಲ. ಸಂವೇದನೆಯನ್ನು ಮೀಟಿದ, ಮನ ಕಲಕಿದ ಸಾವಿರಾರು ಸಂಗತಿಗಳ ಬಗ್ಗೆ ಬಹಿರಂಗವಾಗಿ ಒಂದು ಮಾತನ್ನೂ ಆಡದಿರಬಹುದು. ನಮ್ಮ ದೇಶದಲ್ಲಿ ಪ್ರತೀದಿನ ನಾನಾ ಕಾರಣಗಳಿಗಾಗಿ ಸಾವಿರಾರು ಕೊಲೆಗಳು ನಡೆಯುತ್ತವೆ ಮತ್ತು ಅವೆಲ್ಲವೂ ಖಂಡನಾರ್ಹವೇ.

ಆದರೆ ಒಂದು ಹಳ್ಳಿಯಲ್ಲಿ, ಒಬ್ಬ ದಲಿತ ಹೆಣ್ಣುಮಗಳು ಊರೊಳಗಿನ ಕೊಳವೆಬಾವಿ ಮುಟ್ಟಿದ್ದು ಅಪರಾಧ ಎಂದು ಅವಳನ್ನು ಎಳೆದೊಯ್ದು ಅತ್ಯಾಚಾರ ಮಾಡಿ ಕತ್ತು ಹಿಸುಕಿ ಹೊಲದ ಬದಿ ಎಸೆದರೆ, ಅದಕ್ಕೆ ಕೊಲೆಯ ಜೊತೆ ಇನ್ನಿತರ ಸಾಮಾಜಿಕ ಆಯಾಮಗಳೂ ಇರುತ್ತವೆ. ಕಾಲೇಜು ಓದುವ ಹುಡುಗ ಹುಡುಗಿ ಜೊತೆಯಲ್ಲಿ ಓಡಾಡಬಾರದು ಎಂದು ಯಾರೋ ಪೊಲೀಸ್‌ಗಿರಿ ಮಾಡಿದರೆ ಅದು ಬರೀ ಹುಡುಗಾಟವಲ್ಲ ಧಾರ್ಮಿಕ ಪುಂಡಾಟ ಎಂಬುದು ತಕ್ಷಣ ಗಮನಕ್ಕೆ ಬರುತ್ತದೆ.

ವಿಚಾರವಾದಿಗಳ ಹತ್ಯೆ ನಡೆದರೆ ಅದು ಬರೀ ಹಣಕಾಸಿನ ದರೋಡೆ ಆಗಿರುವುದಿಲ್ಲ ಎನ್ನುವುದು ಕೂಡಲೇ ತಿಳಿಯುತ್ತದೆ. ಅಂಥವನ್ನು ಕುರಿತು ಮಾತನಾಡುವುದು ಅತಿರೇಕಿಗಳ ಅವಕಾಶವಾದ ಎಂದು ವಾದಿಸುವುದಾದರೆ, ಮಾತನಾಡದಿರಲು ಪ್ರಜ್ಞಾಪೂರ್ವಕವಾಗಿ ತೀರ್ಮಾನಿಸುವುದೂ ಅವಕಾಶವಾದ. ಮಧ್ಯಮ ಮಾರ್ಗ ಎನ್ನುವುದು ಇಲ್ಲದಿದ್ದರೂ ಅದರ ಬಗ್ಗೆ ಜಗತ್ತಿನಲ್ಲಿ ಬಹಳ ಚಿಂತನೆ ನಡೆದಿದೆ.

ಅಲಿಪ್ತ ನೀತಿಯೂ ಮಧ್ಯಮ ಮಾರ್ಗವೂ ಒಂದೇ ಅಲ್ಲ ಎಂದು ಹೇಳುತ್ತಾರೆ. ಆದರೆ ಬೇಕೆಂದೇ ದೂರ ನಿಲ್ಲುವ ಅಲಿಪ್ತರು ಮತ್ತು ನಿರ್ಲಿಪ್ತರೆಂದರೆ ಅಧಿಕಾರದಲ್ಲಿ ಇರುವ ಯಾವ ಸಿದ್ಧಾಂತದ ಜನರಿಗಾದರೂ ಪರಮಾಪ್ತವಂತೆ. ಏಕೆಂದರೆ ದೂರ ನಿಲ್ಲುವವರು ವಾಸ್ತವವಾಗಿ ತಮಗೆ ಹತ್ತಿರದವರೇ ಆಗಿರುತ್ತಾರೆ, ಅವರ ಇಂಥ ನಿಲುವು ತೆರೆಮರೆಯಲ್ಲಿ ತಮ್ಮ ಪರವಾದ ಒಲವು ಆಗಿರುತ್ತದೆ ಎನ್ನುವುದು ಅವರಿಗೆ ತಿಳಿದೇ ಇರುತ್ತದಂತೆ.

ಪರವಾದವರು ಮತ್ತು ವಿರೋಧಿಗಳಿಗಿಂತ ದೂರ ನಿಲ್ಲುವ ಜಾಣರ ಸಂಖ್ಯೆಯೇ ಅಪಾರವಾಗಿರುವುದು ಅವರಿಗೆ ನೆಮ್ಮದಿಯ ಸಂಗತಿಯೂ ಆಗಿರುತ್ತದೆ. ಮಧ್ಯಮ ಮಾರ್ಗ ಎಂದರೆ ಅದೊಂದು ಬಗೆಯ ಬೌದ್ಧಿಕ ಪಿತೂರಿ, ಸಾಮಾಜಿಕ ಅಸಮಾನತೆ ಬಗ್ಗೆ ಮಾತನಾಡದೆ ಸುಮ್ಮನಿರುವವರೇ ಸಾಮಾಜಿಕ ಶ್ರೇಣೀಕರಣದ ಬೆಂಬಲಿಗರು ಮುಂತಾದ ವ್ಯಾಖ್ಯಾನಗಳು ಬಂದು ಬಹಳ ಕಾಲವಾಗಿವೆ.

ಚಿಂತನೆಯ ಧ್ರುವೀಕರಣವನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳುತ್ತಾರೆ. ಮಧ್ಯಮ ಮಾರ್ಗಕ್ಕೆ ಸ್ಫೂರ್ತಿ, ಹುಮ್ಮಸ್ಸು ತುಂಬುವ ಶಕ್ತಿ ಇಲ್ಲ ಎಂದೂ ವಿಶ್ಲೇಷಿಸಲಾಗಿದೆ.

ಒಬ್ಬ ಹುಡುಗ ಕೀಟಲೆ ಮಾಡಿದರೆ ಶಿಕ್ಷಕರು ಇಡೀ ತರಗತಿಯನ್ನು ಬೈಯುವುದು ನಮಗೆ ಹೊಸದೇನಲ್ಲ. ಒಂದು ಮಾರ್ಗ ಟೀಕಿಸಲಾರದೆ ಎಲ್ಲ ಮಾರ್ಗಗಳಿಗೂ ‘ನೋ ಎಂಟ್ರಿ’ ಎಂದು ಹೇಳಿ, ಇಲ್ಲದಿರುವ ಮಧ್ಯಮ ಮಾರ್ಗ ಹುಡುಕಿ ಎನ್ನುವ ಪಾಠದ ಬಗ್ಗೆ ಇನ್ನು ತಲೆಕೆಡಿ ಸಿಕೊಳ್ಳುವುದು ಬೇಡ. ಏಕೆಂದರೆ ಎಷ್ಟಾದರೂ  ‘When things fall apart, the centre can not hold!’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT