ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನದ ಭಾವ ‘ಹಸೆ’ಯಾಗಿ...

Last Updated 15 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಕಾಜಾಣ ಹೀಗೊಂದು ಮಹಿಳಾ ಕವಿ­ಗೋಷ್ಠಿ ನಡೆದಿತ್ತು. ರೂಪಾ, ಶಮ್ಮಿ, ಭಾರತಿ, ಚಂದ್ರಿಕಾ, ಮಂಜುಳಾ ಹೀಗೆ ಕವಯಿತ್ರಿ­ಯರ ಸಾಲೆ ಅಲ್ಲಿತ್ತು. ಅವರು ಕಟ್ಟಿಕೊಂಡ ರೂಪಕ ಸಾಮ್ರಾಜ್ಯದಲ್ಲಿ ಬಹುತೇಕ ಅವರೇ ಇದ್ದರು. ಹೇಳಿಕೊಳ್ಳದ, ಹೇಳಲಾಗದ ಅಂತ­ರಂಗದ ಮಾತುಗಳೆಲ್ಲ ಕವನದ ರೂಪ ಪಡೆದಿ­ದ್ದವು. ಅದರಿಂದ ಒಂದಂಶ ಸ್ಪಷ್ಟವಾಗಿತ್ತು, ಹೆಣ್ಣಿನ ತುಮುಲಗಳನ್ನು ಹೊರಹಾಕಲು ಆಸ್ಪದ ಸಿಕ್ಕರೆ ಸಾಕು ಅವು ಹೊರ ಬರಲು ತವಕಿಸುತ್ತಿವೆ. ಹಾಗೆ ಬಿಕ್ಕಿದ ಉಕ್ಕಿದ ಭಾವಗಳು ನೋಟ್ಸ್ ನ ಕಡೆಯ ಪುಟದಲ್ಲಿ ಅಡಗಿರುತ್ತಿದ್ದವು. ಅವು ಹೊರಬರಲು ಕಂಡ ಸೆಲೆ ‘ಫೇಸ್‌ಬುಕ್’ ಆಗಿದೆ. ಎಲ್ಲಾ ಅವಾಂತರಗಳ ನಡುವೆ ಫೇಸ್‌ಬುಕ್‌ ಅನ್ನು ವೇದಿಕೆಯಾಗಿಸಿಕೊಂಡು ಆಗುತ್ತಿರುವ ಕವಿಗಳ ಹುಟ್ಟು ಸೊಗಸಲ್ಲವೆ?

ಹೆಣ್ಣುಮಕ್ಕಳು ಕಳಿಸುವ ಮೆಸೇಜ್‌ಗಳಲ್ಲಿ ತೂರಿ­ಬರುವ ಭಾವದ ತುಣುಕುಗಳೂ, ಅಂದು ಹುಟ್ಟಿ ಅಂದೇ ಸಾಯುವ ಹಾಯ್ಕುಗಳು, ಚುಟು­ಕ­ಗಳು ಇವನ್ನೆಲ್ಲಾ ಹೆಣ್ಣುಮಕ್ಕಳ ಸಾಹಿತ್ಯವೆಂಬ ಲಘು ವಿಮರ್ಶೆಯ ಬರೆ ಎಳೆಯದೆ ಬೇರೆಯದೇ ಆದ ನೆಲೆಯಿಂದ ಅವರ ಸಾಹಿತ್ಯವನ್ನು ಗಮನಿಸ­ಬೇಕಾಗಿದೆ. ಏಕೆಂದರೆ ಹೆಣ್ಣಿನದೇ ಆದ ಸಾಹಿತ್ಯ ಪ್ರಕಾರವೊಂದು ಈವರೆಗೆ ಹುಟ್ಟಿಬರಲಿಲ್ಲ. ಅದ­ಕ್ಕಾಗಿ ಬಹುಶಃ ಇನ್ನೂ ಕಾದು ನೋಡಬೇಕಾಗಿದೆ. ಅವಳ ಅನುಭವಗಳು ಭಿನ್ನವಾದರೂ ಭಾಷೆ ಭಿನ್ನವಾಗದಿರುವುದು ಅವಳಿಗೆದುರಾದ ತೊಡಕೇ ಆಗಿರಬಹುದು. ಒಂದು ಕಾಲಕ್ಕೆ ಮಹಿಳಾ ಸಾಹಿತ್ಯ­-­­ವೆಂದರೆ ‘ಮ್ಯಾಚಿಂಗ್ ಬ್ಲೌಸ್ ಮತ್ತು ಸೀರೆ’ ಎಂಬ ಕಟು ವಿಮರ್ಶೆಗೆ ಒಳಗಾಗ­ಬೇಕಾ­ಗಿತ್ತು.  ಅಥವಾ ಮಹಿಳಾ ಸಾಹಿತ್ಯಕ್ಕೆ ವಿಮರ್ಶೆ ಬರೆಯುವುದು ಅಪವಾದವೇ ಆಗಿತ್ತು. ಅಡುಗೆ ಮನೆ ಪ್ರಪಂಚದಾಚೆಗೆ ಬಂದು ಅವಳು ಲೇಖನಿ ಹಿಡಿದು ಮಾತನಾಡುವ ಹೊತ್ತಿಗೆ ಒಂದು ಶತ­ಮಾನವೇ ಸಂದುಹೋಗಿದೆ. ನಿಧಾನ­ವಾಗಿ ಒಂದಾದ ಮೇಲೊಂದು ಜಾತಿ ಹಿನ್ನೆಲೆಯ ಹೆಣ್ಣು­ಮಕ್ಕಳು ಸಾಹಿತ್ಯ ರಚನೆಗೆ ತೊಡಗಿಕೊಂಡ ಅನು­ಕ್ರಮಣಿಕೆಯು ಶ್ರೇಣೀಕೃತ ವ್ಯವಸ್ಥೆಗೆ ಅನು-­ಗುಣ­ವಾಗಿಯೇ ಇದೆ. ಹೆಣ್ಣಾಗಿ ಮಾತ್ರವಲ್ಲ ಅವಳ ಸಾಮಾಜಿಕ ಹಿನ್ನೆಲೆ ಅವಳ ಬರವಣಿಗೆ­ಯಲ್ಲಿ ಕಂಡೂಕಾಣದಂತೆ ಸುಳಿದು ಹೋಗು­ತ್ತದೆ. ಸಂವೇದನೆಗಳೇ ಸಾಹಿತ್ಯದ ಶಕ್ತಿ.

ಹೆಣ್ಣಿನ ಮೌನ ಮುರಿಯಲು ಕವಿತೆಯೊಂದು ಮಾರ್ಗವೆನಿಸುತ್ತದೆ. ಯಾರು ಓದಲಿ ಬಿಡಲಿ, ವಿಮರ್ಶೆಗಳು ಅಬ್ಬರಿಸಲಿ ಬಿಡಲಿ ಹೆಣ್ಣುಮಕ್ಕಳು ಬರೆಯುವುದನ್ನು ನಿಲ್ಲಿಸದಿರಲಿ. ಸಾಗ­ಬೇಕಾದ ದಾರಿ ಇನ್ನೂ ಬಹಳವೇ ಇದೆ. ವಿಮರ್ಶೆ­ಯಾಚೆಗೆ ಅವರು ಹೇಳುವುದೇನೋ ಇದೆ ಅದನ್ನು ಕಿವಿ­ಗೊಟ್ಟು ಕೇಳಬೇಕಾಗಿದೆ.

ಆದರೊಂದು ಮಾತು, ಅಲ್ಲಿದ್ದವರೆಲ್ಲ ಕಲಿತ ಹೆಣ್ಣುಮಕ್ಕಳು. ಹಾಗಾದರೆ ಬರಹವಿಲ್ಲದ ಹೆಣ್ಣುಮಕ್ಕಳ ಮನಕ್ಕೊಂದು  ಬೆಳಕಿಂಡಿ ಇರ­ಬೇಕಲ್ಲಾ? ಅವಳು ಹಾಡುವ ಹಾಡುಗಳೇ ಅವಳ ಮನದ ಕೀಲಿ ಕೈ ಆಗಿರಬೇಕು. ತೊಟ್ಟಿಲು ತೂಗು­ವಾಗ, ರಾಗಿ ಬೀಸುವಾಗ, ನಾಟಿಮಾಡು­ವಾಗ ಹಾಡಿದ್ದಳು. ಹೂವಿನ ಸರ ಪೋಣಿಸಿದಂತೆ ಹಾಡು ಕಟ್ಟಿ­ದಳು. ಅವೆಲ್ಲವೂ ಅವಳವೇ ಎಂದೂ ಹೇಳ­ಲಾ­ಗದು. ಕಿವಿಗೆ ಬಿದ್ದ ಕಥೆಗಳು, ಆ ಸಮಾಜ ಒಪ್ಪಿದ್ದ ಮಾತುಗಳು ಅವಳದಾಗಿ ಹೊರ­ಬಂದಿ­ರಲೂಬಹುದು. ಆದರೂ ಬಸುರ ಬಯಕೆಯಿಂದ ಮಸಣದವರೆಗೆ ಅವರ ಸೊಲ್ಲು ಕೇಳಿತ್ತು.

ಹೆಣ್ಣಿನ ಭಾವದ ಕಟ್ಟುಗಳು ಹೇಗೆ ಹೇಗೋ ಒಡೆದು ಮೂಡಿವೆ. ಅಂಗಳದ ತುಂಬಾ ಉಲಿ­ದಾ­ಡುವ ಕೈಯ ಭಾಷೆಗೆ ವ್ಯಾಕರಣ ಬೇರೆಯದೇ ಇದೆ. ಸರಳವಾದ ಗೆರೆಗಳು ಅದರಲ್ಲೊಂದು ಲಯ, ಹೀಗೆ ಮನೆಮುಂದೆ ದಿನ ನಿತ್ಯ ಬಿಡುವ ಹಸೆಗೆ ಸಾಟಿ ಯಾವುದಿದೆ?  ಆ ಲಯ ಸಮು­ದ್ರದ ಅಲೆಯ ಹಾಗೆ. ಎಲೆ ಹೂ ಬಳ್ಳಿಯ ಬಾಗು ಬಳುಕು ಇಂದು ನೆನ್ನೆಯದಲ್ಲ, ಬುಡಕಟ್ಟು ಮಹಿಳೆಯರು ಗೋಡೆಯ ಮೇಲೆ ಬಿಡಿಸಿದ ಹಸೆ ಆಧುನಿಕರಲ್ಲಿ ಕೌತುಕವನ್ನು ಮೂಡಿಸುತ್ತಿದೆ. ಸಂಶೋಧನೆಗಳು ಹೇಳುತ್ತಿವೆ ಆ ಗೆರೆಗಳ ಲಯ ಧ್ವನಿ ತರಂಗವನ್ನು ಹೋಲುತ್ತದೆಯೆಂದು. ಹಸೆ ರಂಗೋಲಿ, ರಂಗವಲ್ಲಿ ಎಂದು ಕರೆಸಿಕೊಳ್ಳುವ ಮನೆಯನ್ನು ಅಂದಗೊಳಿಸುವ ಈ ಕಲೆ ಮಾರು­ಕಟ್ಟೆಯ ಮಾಲಲ್ಲ. ಅದನ್ನು ಬಿಡಿಸುವಾಗಿನ ಅವಳ ತಲ್ಲೀನತೆ ಅವಳ ನಿತ್ಯದ ಬದುಕಿನ ಜಂಜಾ­ಟವನ್ನು ತುಸುಕಾಲ ಮರೆಯುವಂತೆ ಮಾಡುತ್ತಾ ಬಂದಿದೆ. ಮತ್ತು ಅವು ಯಾರದೋ  ಒತ್ತಾಯಕ್ಕೆ ಮಣಿದು ಮೂಡುವುದಿಲ್ಲ. ಬಿಳಿಯ ಕಲ್ಲಿನ ಪುಡಿ­ಯಲ್ಲಿ ಕಾಸಿಲ್ಲದೆ, ಯಾರ ಹಂಗಿಲ್ಲದೆ ಅರಳುವ ಎಲೆ, ಹೂ, ಬಳ್ಳಿ ತುಳಿದು ಹಾಳು ಮಾಡಿದರೆ ಬೇಸರವಿಲ್ಲ. ಮತ್ತೆ ಮುಂಜಾನೆ ಗಿಡದಲ್ಲಿ ಮಲ್ಲಿಗೆ ಹೂ ಅರಳುವಂತೆ ಸಗಣಿ ನೆಲದ ಮೇಲೆ ಬಿಳಿಯ ಚುಕ್ಕಿಗಳ ಲಾಸ್ಯ. ಹಂಸ­ಗಳು ಮಾತನಾಡುತ್ತವೆ, ನವಿಲು ನಾಟ್ಯವಾಡು­ತ್ತದೆ. ಕೇರಳದ ಹೆಣ್ಣು­ಮಕ್ಕಳಿಗೆ ಹೂವು ಹಣ್ಣು ಎಲೆ ಕಾಳುಕಡ್ಡಿ ಎಲ್ಲವೂ ಪರಿಕರಗಳೇ. ಅದರದೇ ಒಂದು ಭಾಷೆ, ಬಲ್ಲವರೇ ಬಲ್ಲರು ಅದರ ಸೊಬಗ.

ನೆಲ, ಗೋಡೆ, ಗಡಿಗೆ, ಬೆತ್ತದ ಬುಟ್ಟಿ, ತೂಗುವ ತೊಟ್ಟಿಲು, ಒಲೆಗೂಡು ಎಲ್ಲವೂ ಅವಳ ಕ್ಯಾನ್‌ವಾಸ್. ಹೆಣ್ಣಿನ ಅಭಿವ್ಯಕ್ತಿ ದೇಗು­ಲದ ಶಿಲ್ಪವಾಗಲಿಲ್ಲ, ಅರಮನೆಯ ಪೀಠೋ­ಪ­ಕರ­ಣ­ವಾಗಲಿಲ್ಲ, ಚಿನ್ನಾಭರಣಗಳನ್ನು ಮಾಡ­ಲಿಲ್ಲ. ಅವಳ ಮನದಂಗಳದಲ್ಲಿ ಮೂಡಿದ ಭಾವಕ್ಕೆ ಮನೆಯಂಗಳದಲಿ ರಂಗವಲ್ಲಿ­ಯಾ­ಗಲು ಜಾಗ ಸಿಕ್ಕಿತ್ತು. ಇಂತಹ ಗಳಿಗೆಯೊಂದರಲ್ಲಿ ಕವಿ ಪುತಿನ ಅವರು ಮೇಲುಕೋಟೆ ದೇವಾ­ಲ­ಯದ ಮುಂದೆ ತೀರ ಬಡವೆ, ಸುಕ್ಕು ಮುಖದ ಮುದುಕಿ­ಯೊಬ್ಬಳು ಬಿಟ್ಟ ಹಸೆಯ ಕಂಡು ಬರೆದ ಸಾಲು ‘ದೇವ ಬೊಂಬೆ ಪೂಜೆ ಆಟ ಭಕ್ತಿ ಸೋಜಿಗ’. ಧರ್ಮದ ಹೊದಿಕೆ ಇಲ್ಲದೆ, ದೇವರ ಕಾಟವಿಲ್ಲದೆ, ಬರದ ಬೇಗೆಯಲ್ಲೂ ಮೂಡಿ­ಬರುವ ಕಲೆಯ ಒಳಗೆ ಹೆಣ್ಣಿನ ಕಾವ್ಯ ಅಡಗಿದೆ. ನಿತ್ಯ ನೂತನ.. ಹಾಗೆಯೇ ಚಿರಂತನ.

ಚಿತ್ತಾರಕ್ಕೊಂದು ಹಿಂಬದಿಯಲ್ಲಿ ಬಟ್ಟೆ ಬೇಕಲ್ಲಾ. ಉಟ್ಟು ಹಳೆಯದಾದ ಬಟ್ಟೆ, ಒಂದನ್ನು ಮತ್ತೊಂದಕ್ಕೆ ಹಚ್ಚಿ ಜೋಡಿಸಿ ಅದಕ್ಕೇ ಒಂದು ಹೊಸತನವನ್ನು ಕೊಟ್ಟು ಕೌದಿ ಮಾಡುತ್ತಾಳೆ. ಆ ಕೌದಿಯ ಮೇಲೆ ಸೂಜಿ ದಾರ­ದಲ್ಲಿ ಹಸೆ ಬರೆಯುತ್ತಾಳೆ. ಮನದ ಮಾತಿಗೆ ಕಾಸು ಬೇಕಿಲ್ಲ. ಈ ಸವಾಲುಗಳು ಜಾಗತಿಕ ಮಾರುಕಟ್ಟೆಗೂ ಸೆಡ್ಡು ಹೊಡೆಯುತ್ತವೆ.

ಇದೇ ಹಸೆಗೆ ದೇಹವೇ ಭಿತ್ತಿಯಾದಾಗ ಹಚ್ಚೆಯಾಗುತ್ತದೆ. ಹಾಗೆಯೇ ಮುಂದುವರೆದು ಹೆಣ್ಣಿನ ಅಭಿವ್ಯಕ್ತಿಯ ನೆಲೆಗಳನ್ನು ಹುಡುಕಿದರೆ ಕಾಣ­ವುದು ಅವಳ ಅಂಗೈ ಮುಂಗೈ ಮೇಲೆ ಬಿಡಿ­ಸಿಕೊಳ್ಳುವ ಮದರಂಗಿ (ಮೆಹಂದಿ) ಅಥವಾ ಹೆನ್ನಾ. ಗೋರಂಟಿ ಗಿಡದ ಸೊಪ್ಪನ್ನು ಅರೆದು ಮೈಮೇಲೆ ಬಣ್ಣ ಬರಿಸಿಕೊಳ್ಳುತ್ತಾಳೆ. ಹೆಣ್ಣು ಮಕ್ಕಳು ತಮ್ಮನ್ನು ತಾವು ಅಲಂಕರಿಸಿ ಕೊಳ್ಳುವು­ದರಲ್ಲೇ ಕಳೆದು ಹೋಗುತ್ತಿದ್ದಾರಲ್ಲಾ ಎಂದು ಬೇಸರಿಸುತ್ತಿದ್ದೆ. ಆದರೆ ಈಗ ಅನ್ನಿಸುತ್ತಿದೆ ಇಲ್ಲಾ ಹೆಣ್ಣು ತನ್ನ ದೇಹವನ್ನೇ ಕ್ಯಾನ್ವಾಸ್ ಆಗಿಸಿ­ಕೊಂಡಿ­ದ್ದಾಳೆ. ಬೇರೆ ಭಿತ್ತಿಗಳನ್ನು ಹೊಂದಿಸಿ­ಕೊಳ್ಳಲು ಸಾಧ್ಯವಾಗಿತ್ತೋ ಇಲ್ಲವೋ ಅವಳ ದೇಹವೇ ಭಿತ್ತಿಯಾದರೆ ಕೇಳುವವರಾರು. ಬಹುಶಃ ಹೆಣ್ಣು ಅವಳ ಅಭಿವ್ಯಕ್ತಿಗೆ ಹುಡುಕಿ­ಕೊಂಡ ತನ್ನದೇ ಆದ ನೆಲೆಗಳು. ಮಣಿ. ಹವಳ, ಕವಡೆ, ಕನ್ನಡಿ, ದಂತ, ಹಕ್ಕಿ ಪುಕ್ಕ, ಹೂವು, ಎಲೆ ಸಿಕ್ಕಿದ್ದೆಲ್ಲಾ ಅವಳಿಗೆ ಆಭರಣಗಳೇ ಆಗಿವೆ. ಚಿನ್ನ ಬೆಳ್ಳಿ ದಕ್ಕಿದ್ದು ಕೆಲವರಿಗೆ ಮಾತ್ರ. ದಕ್ಕಿದಾಗ  ತನ್ನನ್ನು ತಾನು ಅಂದಗೊಳಿಸಿಕೊಳ್ಳಲು ಹಿಂದೆ ಬಿದ್ದಿಲ್ಲ. ಅವರ ಸೌಂದರ್ಯ ಪ್ರಜ್ಞೆ ಇಲ್ಲಿನ ಪ್ರಶ್ನೆ­ಯಲ್ಲ. ಇವೆಲ್ಲಾ ಅಭಿವ್ಯಕ್ತಿಯ ಮಾರ್ಗಗ­ಳೆಂ­ಬು­ದನ್ನು ಯೋಚಿಸಿ­ದರೆ ಅವೆಲ್ಲವನ್ನೂ ಗೌರವಿಸ­ಬೇಕೆ­ನಿಸುತ್ತದೆ. ಅದೇ ಸಂಪ್ರದಾಯವೆಂಬ ಹೇರಿಕೆ­ಯಾಗತೊಡಗಿದರೆ ಅದರಿಂದ ತಪ್ಪಿಸಿ­ಕೊಳ್ಳುವುದು ಅವಳ ಬಿಡುಗ­ಡೆಯ ದಾರಿಯಾಗಿ ಕಂಡಿರುತ್ತದೆ.ಆಧುನಿಕ ಸಂದ­ರ್ಭದಲ್ಲಿ ಯುವತಿ­ಯರು  ಸಾಂಪ್ರದಾಯಿಕ­ವಾದ ಹೆಣ್ಣಿನ ಅಲಂಕಾ­ರವನ್ನು ಕಳಚಿಟ್ಟಾಗ, ಅದಕ್ಕೆ ಕಾರಣ ಅವೆಲ್ಲವೂ ಒತ್ತಡವಾಗಿ ಕಂಡಿತ್ತು. ತನ್ನ ಕಣ್ಣಿಗೆ ಕಾಡಿಗೆ ಇಡುವಾಗ ತುಟಿಗೆ ರಂಗನ್ನು ಏರಿಸಿಕೊಳ್ಳುವಾಗ ಅವಳ ಮುಖಕ್ಕಿಂತ, ಮುಖ ಕಾಣುವ ಕನ್ನಡಿ ಕ್ಯಾನ್‌ವಾಸ್ ಆಗಿರುತ್ತದೆ. ಕೆಲವರಿಗೆ ಕನ್ನಡಿ ಸಂಗಾತಿಯೇ ಆಗಿರುತ್ತದೆ. ತನ್ನದೇ ಮುಖವನ್ನು ಅಲಂಕಾರದ ವೇದಿಕೆ­ಯಾಗಿ­ಸಿಕೊಳ್ಳದಿದ್ದರೂ ಮತ್ತೊಂದು ಹೆಣ್ಣನ್ನು ತನ್ನ ಕಲ್ಪನೆಯ ಕುಂಚಕ್ಕೆ ಹಾಳೆಯಾಗಿಸಿಕೊಳ್ಳುತ್ತಾಳೆ. ಅವರಿವರ ಜಡೆ ಹೆಣೆದು ಮಲ್ಲಿಗೆಯ ಹೂ ಪೋಣಿಸುತ್ತಾ ಕಳೆವ ಅವಳ ಗಳಿಗೆ ಆಪ್ಯಾಯ­ಮಾನವಾಗಿರುತ್ತದೆ. ಒಮ್ಮೆ ಮೈಸೂರಿನಿಂದ ಬೆಂಗ­ಳೂರಿಗೆ ಬರಲು ಮುಂಜಾನೆ ಆರು ಗಂಟೆಯ ರೈಲಿನಲ್ಲಿ ಹೊರಟೆ. ಲೇಡೀಸ್ ಕಂಪಾ­ರ್ಟ್‌­ಮೆಂಟ್. ಅದರಲ್ಲಿದ್ದ ಬಹುತೇಕ ಹೆಣ್ಣು­ಮಕ್ಕಳು ಗಾರ್ಮೆಂಟ್ಸ್ ನಲ್ಲಿ ದುಡಿಮೆಗೆ ಹೋಗು­ವವರು. ಬೆಂಗಳೂರು ತಲು­ಪುವ ಹೊತ್ತಿಗೆ ಆ ಬೋಗಿ ಕಿಕ್ಕಿರಿದು ಹೋಗಿತ್ತು. ಯಾರೋ ಯಾರಿಗೋ ಜಡೆ ಹಾಕುತ್ತಿದ್ದರು. ಮತ್ತೊಬ್ಬರು ಸೀರೆಯ ಸೆರಗನ್ನು  ಓರಣ ಮಾಡಿ ಪಿನ್ ಹಾಕು­ತ್ತಿದ್ದರು. ರೈಲಿನ ಸದ್ದಿನ ಹಿಮ್ಮೇಳ­ದಲ್ಲಿ ಅವರ ನೋವು–ನಲಿವುಗಳು ಪಿಸು­ಗುಟ್ಟಿದ್ದವು.

ಹೆಣ್ಣು ತನ್ನ ಎಳೆಯ ಕಂದಮ್ಮನಿಗೆ ಹೆಣೆ­ಯುವ ಕುಚ್ಚು ಕುವಾಲಿ ಒಡಲ ಸಂಭಾಷಣೆ­ಯಾಗಿ­ರುತ್ತದೆ. ಹಗಲು–ರಾತ್ರಿ ಮೈಮುರಿದು ದುಡಿ­ಯುವ ಹೆಣ್ಣಿಗೆ ಇಂತಹ ಗಳಿಗೆ ಅವಳ ಭಾವ­ಕ್ಕೊಂದು ತಂಗುದಾಣವಾಗುತ್ತದೆ. ಗಳಿಗೆ ಕಳೆದು ಮತ್ತೆ ಮುಳ್ಳಿನ ಹಾದಿಯಲ್ಲಿ ಹೆಜ್ಜೆ­ಹಾಕು­ತ್ತಾಳೆ. ಅವಳಿಗಲ್ಲಿ ತನ್ನದೆಂಬ ಹೆಸರಾಸೆ ಇಲ್ಲ. ಮುಂಜಾನೆ ಅರಳಿ ಮುಸ್ಸಂಜೆಗೆ ಅವಳ ಕಲೆ ಮಾಯ­ವಾಗುತ್ತದೆ. ಅವಳ ಜೀವ ಚೈತನ್ಯ ಬಾಡದೆ ಸೆಲೆ ಸಿಕ್ಕಾಗ ಮತ್ತೆ ಅರಳುತ್ತದೆ.

ಬೇರೆಬೇರೆ ಸಾಮಾಜಿಕ ಹಿನ್ನೆಲೆಯಲ್ಲಿ ಬೇರೆ­ಯದೇ ರೀತಿಯ ದಾರಿಗಳನ್ನು ಕಂಡು­ಕೊಂಡಿ­ದ್ದಾಳೆ ಎನಿಸುತ್ತದೆ. ದಸರಾ ಹೊತ್ತಿಗೆ ಮೈಸೂರು ಮತ್ತು ಸುತ್ತಮುತ್ತಲ ಊರುಗಳಲ್ಲಿ ಕಾಣುವ ಗೊಂಬೆ ಹಬ್ಬದಲ್ಲಿ ಇಂತಹದೇ ಮರ್ಮ ಕಾಣು­ತ್ತದೆ. ತಮಿಳುನಾಡಿನಿಂದ ಅದರಲ್ಲೂ ಆಳುವ ವರ್ಗದ ನೆಲೆಯಿಂದ ಹರಿದು ಬಂದಿರುವ ಈ ಕಲೆ ಹೆಣ್ಣುಮಕ್ಕಳ ಆಕರ್ಷಣೆಯಾಗಿ ಉಳಿದು ಬಂದಿದೆ. ಇದಕ್ಕೊಂದು ಸಣ್ಣ ಪ್ರಮಾಣದ ಧರ್ಮದ ಹೊದಿಕೆಯಿದ್ದು ಆ ಹೊದಿಕೆ­ಯಿಂದಾಗಿ ಆ ಕಲೆಯನ್ನು ಜೀವಂತವಾಗಿ ಉಳಿಸಿಕೊಳ್ಳಲು ಸಾಧ್ಯವಾಗಿದೆ. ಹಿಂದೆ ಹೆಣ್ಣುಮಕ್ಕಳನ್ನು ಮದುವೆ ಮಾಡಿ ಕಳುಹಿಸಿ ಕೊಡುವಾಗ ಅವರು ಸಣ್ಣ ವಯಸ್ಸಿನವರಾಗಿ­ರುತ್ತಿದ್ದರು. ಏಳೆಂಟು ವರ್ಷ­ದಲ್ಲಿ ಗೊಂಬೆಯ ಜೊತೆ ಆಟವಾಡ­ಬೇಕಾದ ಆ ಮಕ್ಕಳ ಕೈಗೆ ಮರದ ಗೊಂಬೆಯನ್ನು ಕೊಡು­­ತ್ತಿ­ದ್ದರು. ಮರ­ದಲ್ಲಿ ಮಾಡಿದ ರಾಜಾ–ರಾಣಿ­ಯರ ಆ ಗೊಂಬೆ­ಗಳನ್ನು ಹಬ್ಬದಲ್ಲಿಟ್ಟು ಪೂಜೆ­ಮಾಡುತ್ತಿದ್ದರು. ಅದು ಹಬ್ಬವಾಗದಿದ್ದರೆ ಆ ಗೊಂಬೆಗಳಿಗೆ ಪುಟಾಣಿ ಲಂಗ ಸೀರೆಯನ್ನು ಉಡಿಸಿ ಆಟ­ವಾಡಲು ಯಾರೂ ಬಿಡುತ್ತಿರಲಿಲ್ಲ. ಹಬ್ಬದ ನೆಪದಲ್ಲಿ ಗೊಂಬೆಗಳನ್ನು ಕೂಡಿಹಾಕಲು ಅವಳಿಗೆ ಅವಕಾಶ ಸಿಕ್ಕಿರಬೇಕು.

ಮೈಸೂರಿನಲ್ಲಿರುವ  ಎಪ್ಪತ್ತರ ಹರೆಯದ ವನಜಾ ಅವರದ್ದು  ಈಗಲೂ ಬತ್ತದ ಚೈತನ್ಯ. ಇಂದಿಗೂ ಮನೆಯ ತುಂಬಾ ಗೊಂಬೆಗಳನ್ನಿಟ್ಟು ಅಲಂಕರಿ­ಸುತ್ತಾರೆ. ಈ ಇಳಿ ವಯಸ್ಸಿನಲ್ಲೂ ತನ್ನೊಳಗಿನ ಮಗುವಿನ ಭಾವವನ್ನು ಜೀವಂತ­ವಾಗಿರಿಸಿ­ಕೊಂಡಿ­ದ್ದಾರೆ. ಕೆಲಸ ಮುಗಿಸಿ ಬಿಡು­ವಾದಾಗಲೆಲ್ಲಾ ಗೊಂಬೆಗಳ ಸೀರೆಗೆ ಅಂಚು­ಕಟ್ಟುತ್ತಾರೆ. ಕೊಳ್ಳೆ­ಗಾಲದ ನೇಯ್ಗೆ ಹಿನ್ನೆಲೆಯ ಲತಾ, ಶಾರದಾ ಅಕ್ಕ­ತಂಗಿಯರು ಮನೆಯಲ್ಲಿ ಜಾಗವಿಲ್ಲದಿದ್ದರೆ ನೇಯುವ ರಾಟೆಯ ಸಂದಿ­ಗೊಂದಿಯಲ್ಲೆಲ್ಲಾ ಗೊಂಬೆ­ಗಳನ್ನು  ಜೋಡಿಸು­ತ್ತಾರೆ. ಪುಡಿಗಾಸು ಉಳಿಸಿ ಅವರಿವರಿಂದ ಗೊಂಬೆಗಳನ್ನು ತರಿಸಿ­ಕೊಳ್ಳು­ತ್ತಾರೆ. ದಸರಾ ಮೆರವಣಿಗೆಯ ಒಂದೊಂದು ಗೊಂಬೆಯೂ ಅವರ ಕೈಯಲ್ಲಿ ಜೀವ ಪಡೆಯುತ್ತದೆ.

ಮೈಸೂರು, ಕೊಳ್ಳೆಗಾಲ, ಚಾಮರಾಜನಗರ, ತಮಿಳುನಾಡು, ಆಂಧ್ರ, ಮಹಾರಾಷ್ಟ್ರಗಳಲ್ಲಿ ರೂಢಿಯಲ್ಲಿರುವ ಈ ಹಬ್ಬ ಎಲ್ಲಾ ಇಕ್ಕಟ್ಟುಗಳ ನಡುವೆ ಹೆಣ್ಣು ತನ್ನ ಎಳೆ­ತನ­ವನ್ನು ಉಳಿಸಿ­ಕೊಳ್ಳುವಂತೆ ಮಾಡಿದೆ. ಹೊರ­ಜಗ­ತ್ತಿನ ಗಮನಕ್ಕೆ ಬರಲಿ ಬಿಡಲಿ ಅವಳ ಮೌನದಲ್ಲಿ ಗೊಂಬೆಗಳು ಮಾತನಾಡುತ್ತವೆ. ಅವಳ ಸಂಸಾ­ರದಲ್ಲಿ ಸುಖ­ವಿ­ದೆಯೋ ಇಲ್ಲವೋ ಅವಳ ಗೊಂಬೆಯ ಸಂಸಾ­ರ­ದಲ್ಲಿ ಸದಾ ಸಂಭ್ರಮ­ವಿರು­ತ್ತದೆ. ಆ ದಿನಕ್ಕಾಗಿ ವರ್ಷವೆಲ್ಲಾ ಸಿದ್ಧತೆ ಮಾಡಿ­ಕೊಳ್ಳುತ್ತಾಳೆ. ಗೊಂಬೆ­­ಯಾಟಕ್ಕೂ ಹಬ್ಬದ ಮೆರಗು ಮೂಡುತ್ತದೆ.

ನಿಮ್ಮ ಅನಿಸಿಕೆ ತಿಳಿಸಿ:  editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT