ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನಸ್ಸೂ ಗಟ್ಟಿ, ಕೈಕಾಲೂ ಗಟ್ಟಿ

Last Updated 8 ಜನವರಿ 2011, 13:35 IST
ಅಕ್ಷರ ಗಾತ್ರ

ಸಚಿನ್ ತೆಂಡೂಲ್ಕರ್ ಇನ್ನೂ ಎಷ್ಟು ವರ್ಷ ಟೆಸ್ಟ್ ಕ್ರಿಕೆಟ್ ಆಡಬಹುದು? ಈ ಪ್ರಶ್ನೆಗೆ ಉತ್ತರವನ್ನು ಇನ್ನೂ ಯಾವ ಜ್ಯೋತಿಷಿಯೂ ಹೇಳಿದಂಗಿಲ್ಲ. ಜ್ಯೋತಿಷಿಗಳೆಲ್ಲ ರಾಜಕೀಯ ಭವಿಷ್ಯ ಹೇಳುವುದರಲ್ಲೇ ಬ್ಯೂಸಿ! ಬಹುಶಃ ಸಚಿನ್ ಅವರಿಗೇ ತಾನು ಯಾವಾಗ ನಿವೃತ್ತಿಯಾಗುತ್ತೇನೆ ಎಂದು ಗೊತ್ತಿಲ್ಲ.

ಆಗೊಮ್ಮೆ ಈಗೊಮ್ಮೆ ಆ ಯೋಚನೆ ಮನದಲ್ಲಿ ಮೂಡಿರಬಹುದೇನೋ. ಆದರೆ ಆ ಕೂಡಲೇ ಅವರು ಸಿಕ್ಸರ್ ಎತ್ತಿದಂತೆ ಆ ಯೋಚನೆಯನ್ನು ಮನದಿಂದ ಹೊರಹಾಕುವಂತೆ ಕಾಣುತ್ತಿದೆ. ಅವರಿಗೆ ಈಗಿನ್ನೂ 37 ವರ್ಷ ವಯಸ್ಸು! ಇವರಿಗಿಂತ ನಾಲ್ಕು ತಿಂಗಳು ದೊಡ್ಡವರಾದ ರಾಹುಲ್ ದ್ರಾವಿಡ್ ಕೂಡ ಇನ್ನೂ ಉತ್ಸಾಹದಿಂದಲೇ ಆಡುತ್ತ ನಿವೃತ್ತಿಯ ಮಾತು ಆಡದಿರುವಾಗ ಐವತ್ತು ಶತಕಗಳ ವೀರ  ‘ನಿವೃತ್ತಿ ಅಂದರೆ ಏನು?’ ಎಂದು ಕೇಳುತ್ತಿರಬಹುದು.

ಒಂದು ಕಾಲ ಇತ್ತು. ಇಂಗ್ಲೆಂಡ್‌ನಲ್ಲಿ ಟೆಸ್ಟ್ ಆಡುವ ಅವಕಾಶ ಸಿಗುವ ಹೊತ್ತಿಗೆ ವಯಸ್ಸು 30 ಸಮೀಪಿಸಿರುತ್ತಿತ್ತು. ವಯಸ್ಸು ನಲವತ್ತು ದಾಟಿದ ಮೇಲೂ ಹಲವು ಮಂದಿ ಆಡಿದ್ದಾರೆ. ಕ್ರಿಕೆಟ್‌ನಲ್ಲಿ ಅಂಕಿ ಅಂಶಗಳು ಬಹಳ ರೋಚಕ. ಹಳೆಯ ದಾಖಲೆಗಳನ್ನು ಓದುವುದೇ ಒಂದು ಖುಷಿ. ಸಚಿನ್ ಇನ್ನೂ ಮೂರ್ನಾಲ್ಕು ವರ್ಷ ಆಡಬಹುದೇ ಎಂದು ಯೋಚಿಸುತ್ತಿದ್ದಾಗ ವಿಲ್‌ಫ್ರೆಡ್ ರೋಡ್ಸ್, ಡಬ್ಲ್ಯು. ಜಿ. ಗ್ರೇಸ್, ಸಿ.ಕೆ. ನಾಯ್ಡು ಮುಂತಾದ ಆಟಗಾರರ ಹೆಸರುಗಳು ನೆನಪಿಗೆ ಬಂದವು.

‘ಕ್ರಿಕೆಟ್ ಬರೀ ಮೂರ್ಖರ ಆಟವಲ್ಲ, ಮುದುಕರ ಆಟವೂ ಹೌದು’ ಎಂದು ಬರೆದದ್ದನ್ನು ಎಲ್ಲೂ ಓದಿದ ನೆನಪಿಲ್ಲ. ಇಂಗ್ಲೆಂಡ್‌ನ ವಿಲ್‌ಫ್ರೆಡ್ ರೋಡ್ಸ್ 1930ರಲ್ಲಿ ತಮ್ಮ ಕೊನೆಯ ಟೆಸ್ಟ್ ಪಂದ್ಯ ಆಡಿದಾಗ ಅವರಿಗೆ 52 ವರ್ಷ 156 ದಿನಗಳಾಗಿದ್ದವು. ಇವರಿಗಿಂತ ಮೊದಲು ಅಂದರೆ 1877 ರಲ್ಲಿ, ಜೇಮ್ಸ್ ಸದರ್‌ಟನ್ ಎಂಬ ಆಟಗಾರ ತನ್ನ ಮೊದಲ ಟೆಸ್ಟ್ ಆಡಿದಾಗ ಅವರಿಗೆ 49 ವರ್ಷ 139 ದಿನಗಳಾಗಿದ್ದವು. ಕ್ರಿಕೆಟ್‌ನ ಪಿತಾಮಹ ಎಂದು ಹೆಸರಾಗಿದ್ದ ಡಬ್ಲ್ಯು.ಜಿ. ಗ್ರೇಸ್ ಕೂಡ ತಮ್ಮ 50ನೇ ವಯಸ್ಸಿನ ವರೆಗೂ ಟೆಸ್ಟ್ ಪಂದ್ಯಗಳನ್ನಾಡಿದ್ದರು.

ಭಾರತ ಕ್ರಿಕೆಟ್‌ನ ಆರಂಭದ ವರ್ಷಗಳಲ್ಲಿ ಗೌರವದ ಸ್ಥಾನ ಪಡೆದಿದ್ದ ಸಿ.ಕೆ. ನಾಯ್ಡು ತಮ್ಮ 62ನೇ ವಯಸ್ಸಿನಲ್ಲಿ ರಣಜಿ ಪಂದ್ಯ ಆಡಿದ್ದರು. ಅವರು ಎಷ್ಟು ಸಿಕ್ಸರ್ ಹೊಡೆದಿದ್ದರು ಎಂಬ ದಾಖಲೆ ಸಿಗಲಿಲ್ಲ. ಅದರೆ ಅವರಲ್ಲಿ ಆಡುವ ಉತ್ಸಾಹ ಇಳಿವಯಸ್ಸಿನಲ್ಲೂ ಕಡಿಮೆಯಾಗಿರಲಿಲ್ಲ ಎಂಬುದು ಸ್ಪಷ್ಟ. 1950 ರಲ್ಲಿ ಇಂಗ್ಲೆಂಡ್‌ನ ಕಾಮನ್‌ವೆಲ್ತ್ ತಂಡ ಭಾರತಕ್ಕೆ ಬಂದು ಮುಂಬೈ ಗವರ್ನರ್ಸ್ ಇಲೆವೆನ್ ವಿರುದ್ಧ ಪ್ರಥಮ ದರ್ಜೆ ಪಂದ್ಯವನ್ನು ಆಡಿತ್ತು. ಅದರಲ್ಲಿ 72 ವರ್ಷ ವಯಸ್ಸಿನ ರಾಜಾ ಮಹಾರಾಜ್ ಸಿಂಗ್ ಆಡಿ, ನಾಲ್ಕು ರನ್ ಮಾಡಿದ್ದಾಗ ಜಿಮ್ ಲೇಕರ್ (ಟೆಸ್ಟ್ ಇನಿಂಗ್ಸ್ ಒಂದರಲ್ಲಿ ಎಲ್ಲ ಹತ್ತು ವಿಕೆಟ್ ಗಳಿಸಿದ ಮೊದಲ ಬೌಲರ್; ಎರಡನೆಯವರು ಅನಿಲ್ ಕುಂಬ್ಳೆ) ಅವರಿಗೆ ವಿಕೆಟ್ ಒಪ್ಪಿಸಿದ್ದರು. ಎಪ್ಪತ್ತನೇ ವಯಸ್ಸಿನಲ್ಲಿ ಪಂದ್ಯ ಆಡಿದ ದಾಖಲೆ ಮತ್ತೆಲ್ಲೂ ಇಲ್ಲ.

ಈ ಎಲ್ಲ ಆಟಗಾರರು ಆ ವಯಸ್ಸಿನಲ್ಲೂ ಆಡಲು ಅವರು ಮಾನಸಿಕವಾಗಿ ‘ಮುದುಕ’ರಾಗದೇ, ಅವರ ಕೈಕಾಲುಗಳನ್ನು  ಗಟ್ಟಿಯಾಗಿ ಇಟ್ಟುಕೊಂಡಿದ್ದೇ ಕಾರಣವಾಗಿರಬೇಕು. ಡಬ್ಲ್ಯು.ಜಿ. ಗ್ರೇಸ್ ಕಾಲದ ಕ್ರಿಕೆಟ್‌ಗೂ ಈಗಿನ ಕ್ರಿಕೆಟ್‌ಗೂ ಬಹಳ ವ್ಯತ್ಯಾಸ ಇದೆ. ಆಟಗಾರರು ಈಗ ವರ್ಷವಿಡೀ ಟೆಸ್ಟ್, 50 ಓವರು, 20 ಓವರು ಹೀಗೆ ಸತತವಾಗಿ ಆಡುತ್ತಲೇ ಇರುತ್ತಾರೆ. ಈಗ 40 ದಾಟಿದ ಆಟಗಾರರು ಯಾರೂ ಅಂತರರಾಷ್ಟ್ರೀಯ ರಂಗದಲ್ಲಿ ಆಡುತ್ತಿಲ್ಲ. ಸಚಿನ್ ದೈಹಿಕವಾಗಿ, ಮಾನಸಿಕವಾಗಿ ಗಟ್ಟಿ ಮನುಷ್ಯ.

ಇನ್ನೂ ಒಂದೆರಡು ವರ್ಷ ಅವರು ಮುಂದುವರಿಯುವ ಎಲ್ಲ ಲಕ್ಷಣಗಳೂ ಅವರಲ್ಲಿವೆ. ಅವರೀಗ ಹೆಚ್ಚು ಕಡಿಮೆ ಕ್ರಿಕೆಟ್‌ನ ಎಲ್ಲ ದಾಖಲೆಗಳನ್ನೂ ಮುರಿದಿದ್ದಾರೆ. ಟೆಸ್ಟ್‌ನಲ್ಲಿ ಐವತ್ತನೇ ಶತಕವಂತೂ ಅವರೇ ಸ್ಥಾಪಿಸಿರುವ ದಾಖಲೆ. ಅದನ್ನು ಮುರಿಯುವ ಆಟಗಾರ ಇವರಿಗಿಂತಲೂ ಶ್ರೇಷ್ಠ ಆಟಗಾರನಾಗಿ ರೂಪುಗೊಂಡಿರಬೇಕಾಗುತ್ತದೆ. ದಾಖಲೆಗಳು ಇರುವುದೇ ಮುರಿಯುವುದಕ್ಕಾಗಿ. ಹೊಸ ದಾಖಲೆಯೊಂದು ಬಂದಾಗ, ಅದನ್ನು ದಾಟುವ ಕನಸು ಆಟಗಾರರಲ್ಲಿ ಜಾಗೃತವಾಗುತ್ತದೆ. ಹಳೆಯ ದಾಖಲೆಗಳನ್ನು ಅಳಿಸಿಹಾಕಿ ಹೊಸದನ್ನು ಬರೆಯುವ ಸಾಧನೆಗಳು ಬರುತ್ತಿದ್ದರೆ ಮಾತ್ರ ಆಟ ಬೆಳೆಯುತ್ತಿರುತ್ತದೆ. ಯಾವುದೇ ಕ್ರೀಡೆಯ ಸೌಂದರ್ಯ ಅದರ ಬೆಳವಣಿಗೆಯಲ್ಲೇ ಅಡಗಿರುತ್ತದೆ. ಸಚಿನ್ ಇಂಥ ಬೆಳವಣಿಗೆಗೆ ಸುಂದರ ರೂಪ ಕೊಟ್ಟಿದ್ದಾರೆ.

ಸುನೀಲ್ ಗಾವಸ್ಕರ್ ಆಡುವಾಗಲೂ ಅವರ ದಾಖಲೆಗಳನ್ನು ಮುರಿಯುವುದು ಕಷ್ಟ ಎಂಬ ಮಾತು ಕೇಳಿಬರುತ್ತಿತ್ತು. ಆದರೆ ಗಾವಸ್ಕರ್ ಅವರ ದಾಖಲೆಗಳನ್ನು ಸಚಿನ್ ಮಾತ್ರ ಅಲ್ಲ, ಆಸ್ಟ್ರೇಲಿಯದ ರಿಕಿ ಪಾಂಟಿಂಗ್, ದಕ್ಷಿಣ ಆಫ್ರಿಕದ ಜ್ಯಾಕ್ ಕಾಲಿಸ್ ಕೂಡ ದಾಟಿದ್ದಾರೆ. ಈಗ ಆ ದಾಖಲೆಗಳು ಬಹಳ ದೊಡ್ಡವು ಎಂದು ಯಾರಿಗೂ ಅನಿಸುವುದಿಲ್ಲ. ಆದರೆ ಸಚಿನ್ ಅವರ ಐವತ್ತು ಶತಕಗಳನ್ನು ದಾಟುವುದು ಮಾತ್ರ ಯಾರಿಗಾದರೂ ಕಷ್ಟ ಎಂದು ಹೇಳಬಹುದು. ಅದೇ ರೀತಿ ಒಂದು ದಿನದ ನಿಗದಿತ ಓವರುಗಳ ಪಂದ್ಯದಲ್ಲಿ ಅವರು 46 ಶತಕಗಳನ್ನು ಹೊಡೆದಿದ್ದಾರೆ.

ಅಲ್ಲೂ ಅವರು ಐವತ್ತು ಶತಕಗಳನ್ನು ಪೂರೈಸಿದರೆ, ಟೆಸ್ಟ್ ಮತ್ತು ಒಂದು ದಿನದ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ನೂರು ಶತಕಗಳನ್ನು ಗಳಿಸಿದ ಮೊಟ್ಟಮೊದಲ ಆಟಗಾರನಾಗುತ್ತಾರೆ. ಇದು ಇಲ್ಲಿಗೇ ನಿಲ್ಲುವುದಿಲ್ಲ. ಬರುವ ವರ್ಷ ವಿಶ್ವ ಕಪ್ ಕ್ರಿಕೆಟ್ ಟೂರ್ನಿ ಭಾರತದಲ್ಲಿ ನಡೆಯಲಿದೆ. ಒಂದು ದಿನದ ಪಂದ್ಯಗಳಲ್ಲಿ ಮೊಟ್ಟಮೊದಲ ದ್ವಿಶತಕ ಬಾರಿಸಿದ ದಾಖಲೆಯನ್ನೂ ಹೊಂದಿರುವ ಸಚಿನ್, ಇನ್ನೂ ಎಷ್ಟು ಶತಕಗಳನ್ನು ಹೊಡೆಯುವರೋ ಯಾರಿಗೆ ಗೊತ್ತು. ದೇವರಿಗೆ ಗೊತ್ತು ಎಂದು ಹೇಳಲಾಗದು. ಯಾಕೆಂದರೆ ‘ಸಚಿನ್ ಕ್ರಿಕೆಟ್‌ನ ದೇವರು’ ಎಂದು ಎಲ್ಲರೂ ಹೇಳುತ್ತಿದ್ದಾರೆ. ಅವರು ದಕ್ಷಿಣ ಆಫ್ರಿಕದಲ್ಲಿ ತಮ್ಮ ಐವತ್ತನೇ ಶತಕದ ನಂತರ ಮುಂದೆ ಎಷ್ಟು ಶತಕಗಳನ್ನು ಗಳಿಸಬಹುದು ಎಂಬುದರ ಬಗ್ಗೆ ಮಾತ್ರ ಭವಿಷ್ಯ ಹೇಳಿಲ್ಲ.

‘ಸುನೀಲ್ ಗಾವಸ್ಕರ್ ಬರೀ ದಾಖಲೆಗಳಿಗಾಗಿ ಆಡುತ್ತಾರೆ, ಅವರು ಶತಕ ಗಳಿಸಿದಾಗೆಲ್ಲ ಭಾರತ ಗೆದ್ದಿಲ್ಲ ಅಥವಾ ಭಾರತದ ಗೆಲುವಿನಲ್ಲಿ ಅವರ ಶತಕಗಳು ಪ್ರಮುಖ ಪಾತ್ರ ವಹಿಸಿಲ್ಲ’ ಎಂಬ ಟೀಕೆ ಇತ್ತು. ‘ಸಚಿನ್ ದಾಖಲೆಗಳಿಗಾಗಿ ಆಡುತ್ತಾರೆ’ ಎಂದು ಯಾರೂ ಹೇಳದಿದ್ದರೂ ಅವರು ಶತಕ ಹೊಡೆದಾಗ ಭಾರತ ಗೆದ್ದಿಲ್ಲ ಎಂಬ ಟೀಕೆ ಮಾತ್ರ ಇದೆ. ದಕ್ಷಿಣ ಆಫ್ರಿಕ ವಿರುದ್ಧವೂ ಹಾಗೆಯೇ ಆಯಿತು.

ಭಾರತ ಸೋಲಿನಿಂದ ಪಾರಾಗುವ ಸ್ಥಿತಿಯೇ ಇರಲಿಲ್ಲ. ಆದರೆ ಮರ್ಯಾದೆಯಿಂದ ಸೋಲಲು ಸಚಿನ್ ಅವರ ಹೋರಾಟದ ಶತಕ ನೆರವಾಗಿದ್ದಂತೂ ನಿಜ. ನೂರು ಹೊಡೆದರೂ ಗೆಲ್ಲಲಿಲ್ಲ ಅಥವಾ ಸೋಲಿನಿಂದ ಪಾರಾಗಲಿಲ್ಲ ಎಂಬುದು ಚರ್ಚೆಗೊಂದು ವಿಷಯವೇ ಹೊರತು ಆ ನೂರರ ಮಹತ್ವ ಕಡಿಮೆಯಾಗುವುದಿಲ್ಲ. ಕ್ರಿಕೆಟ್‌ನಲ್ಲಿ ನೂರು ನೂರೇ.

ಸಚಿನ್ ಇನ್ನೂ ಆಡುತ್ತಿರುವುದರಿಂದ ಯಾರಿಗೂ ಬೇಸರವಂತೂ ಆಗಿಲ್ಲ. 2010ರಲ್ಲಂತೂ ಅವರು ವರ್ಷದ ಆಟಗಾರನೇ ಆಗಿದ್ದಾರೆ. ಅವರ ಬ್ಯಾಟಿನಿಂದ ರನ್ನುಗಳು ಇನ್ನೂ ಹರಿಯುತ್ತಿರುವುದರಿಂದಲೇ ಎಲ್ಲರೂ ಖುಷಿಯಿಂದ ಹೊಗಳುತ್ತಿದ್ದಾರೆ. ಅವರೊಬ್ಬ ಅಸಾಮಾನ್ಯ ಆಟಗಾರನಾಗಿರುವುದರಿಂದಲೇ ವಯಸ್ಸೆಂಬುದು ಅವರಿಗೆ ಅಡ್ಡಿಯಾಗಿಲ್ಲ. ಆದರೆ ಅವರ ಎಲ್ಲ ಚಿನ್ನದ ಸಾಧನೆಗಳ ಕಪಾಟಿನಲ್ಲಿ ಒಂದು ಕಪ್ ಮಾತ್ರ ಇಲ್ಲ. ಅದೇ ವಿಶ್ವ ಕಪ್. ಅವರೀಗ ತಮ್ಮ ಆರನೇ ವಿಶ್ವ ಕಪ್ ಟೂರ್ನಿಯಲ್ಲಿ ಆಡಲು ತಯಾರಾಗಿದ್ದಾರೆ. ಅವರ ಆಟ ಭಾರತಕ್ಕೆ ವಿಶ್ವ ಕಪ್ ಗೆದ್ದುಕೊಟ್ಟಲ್ಲಿ ಅವರು ಬರೀ ಕ್ರಿಕೆಟ್ ಅಲ್ಲ ಭಾರತ ರತ್ನವೇ ಆಗುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT