ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನುಷ್ಯ ಜೀವಕ್ಕೆ ಬೆಲೆ ಕಟ್ಟಲು ಸಾಧ್ಯವೇ?

Last Updated 2 ಏಪ್ರಿಲ್ 2012, 19:30 IST
ಅಕ್ಷರ ಗಾತ್ರ

ಜೇನುಕುರುಬನಾದ ಬೊಮ್ಮ, ವೊಡೇರಹಳ್ಳಿ ಬುಡಕಟ್ಟು ಹಾಡಿಯಲ್ಲಿ ಪತ್ನಿ ಮತ್ತು ಮೂವರು ಪುಟ್ಟ ಮಕ್ಕಳೊಂದಿಗೆ ವಾಸವಾಗಿದ್ದ. ಏಕತಾನತೆಯಿಂದ ಕೂಡಿದ್ದ ಬದುಕಿನಲ್ಲಿ ನಿತ್ಯ ಯಾವುದಾದರೂ ಕೆಲಸ ಹುಡುಕಿಕೊಳ್ಳುವುದೇ ಅವನಿಗಿದ್ದ ಏಕೈಕ ಚಿಂತೆ. ಅವನ ಪುಟ್ಟ ಗುಡಿಸಲಿನ ಒಲೆ ಉರಿಯಬೇಕೆಂದರೆ ಅದು ಅವನಿಗೆ ಅನಿವಾರ್ಯವೂ ಆಗಿತ್ತು.

ಇಂತಹ ಸ್ಥಿತಿಯಲ್ಲಿ ಅವನಿಗೆ ಅಂಟಿಕೊಂಡಿದ್ದ ಕುಡಿತದ ಚಟ, ಅವನ ಹೆಂಡತಿ ಚಿನ್ನಮ್ಮನ ಮೇಲೆ ಇನ್ನಷ್ಟು ಹೊರೆ ಹೊರಿಸಿತ್ತು. ಆಗ ದುಡಿದು ಆಗ ತಿನ್ನುವುದು ಬಿಟ್ಟರೆ ಆ ಕುಟುಂಬಕ್ಕೆ ಬೇರೆ ಏನೂ ಇರಲಿಲ್ಲ. ಭೂಮಿ ಇಲ್ಲದ ಅವರು ಜೀವನಾಧಾರಕ್ಕಾಗಿ ಸಮೀಪದ ಕಾಡನ್ನು ಅವಲಂಬಿಸಿದ್ದರು.

ತಲೆತಲಾಂತರದಿಂದ ಕಾಡಿನಲ್ಲೇ ಬದುಕುತ್ತಾ ಬಂದಿದ್ದ ಅವನ ಪೂರ್ವಜರಿಗಂತೂ ನಿನ್ನೆಯ ಬಗ್ಗೆ ಚಿಂತೆಯಾಗಲೀ, ನಾಳಿನ ಬಗ್ಗೆ ಆತಂಕವಾಗಲೀ ಇರಲಿಲ್ಲ. ನಿಜ ಹೇಳಬೇಕೆಂದರೆ ಬೊಮ್ಮನ ಪೂರ್ವಜರಿಗೆ ಹಸಿವು ಎಂದರೇನು, ಬಡತನ ಎಂದರೇನು ಎಂಬುದೇ ತಿಳಿದಿರಲಿಲ್ಲ. ಬೇಕಾದ ಎಲ್ಲವನ್ನೂ ಕಾಡು ಅವರಿಗೆ ನೀಡಿತ್ತು.

ಗೆಡ್ಡೆ ಗೆಣಸು, ಜೇನುತುಪ್ಪ, ಜಿಂಕೆ ಮಾಂಸ ಅಥವಾ ಅವರ ಅಪರೂಪಕ್ಕೊಮ್ಮೆ ಬೇಟೆಯಾಡುತ್ತಿದ್ದ ಕಾಡು ಹಂದಿಯ ಮಾಂಸವೇ ಅವರ ಆಹಾರವಾಗಿತ್ತು. ಆದರೆ 1972ನೇ ಇಸವಿ ಇದೆಲ್ಲವನ್ನೂ ಬದಲಿಸಿತು. ಕೇಂದ್ರ ಸರ್ಕಾರ ಅರಣ್ಯ ಸಂರಕ್ಷಣಾ ಕಾಯ್ದೆಯನ್ನು ಜಾರಿಗೆ ತಂದಿತು.

ಬೊಮ್ಮನ ತಲೆಮಾರು ಬದುಕಿ ಬಾಳಿದ್ದ, ಅವರೆಲ್ಲರ ಪ್ರೀತಿಯ ಅರಣ್ಯವನ್ನು `ರಾಷ್ಟ್ರೀಯ ಉದ್ಯಾನ~ ಎಂದು ಘೋಷಿಸಲಾಗಿತ್ತು. ತಮ್ಮದೇ ನೆಲದಲ್ಲಿ ಅವರು ಹೊರಗಿನವರಾದರು. ಅವರು ಅನುಭವಿಸುತ್ತಿದ್ದ ಎಲ್ಲ ಅರಣ್ಯ ಹಕ್ಕುಗಳೂ ನಾಶವಾದವು. ಅವರನ್ನು ಅರಣ್ಯದಿಂದ ತೆರವುಗೊಳಿಸಿ, ಬದುಕಲು ಅಸಹನೀಯವಾದ ಅರಣ್ಯದಂಚಿನ ಪ್ರದೇಶಕ್ಕೆ ದೂಡಲಾಯಿತು.

ಹಠಾತ್ತನೇ ತಮ್ಮನ್ನು ಸಮಾಜದ ಮುಖ್ಯವಾಹಿನಿಗೆ ದೂಡಿದ್ದರಿಂದ ಅವರು ದಿಕ್ಕುತೋಚದಂತಾಗಿ ಕಕ್ಕಾಬಿಕ್ಕಿಯಾದರು. ಇತ್ತ ತಮಗೆ ಅರ್ಥವೇ ಆಗದ ಸಮಾಜದೊಂದಿಗೆ ಬೆರೆಯಲೂ ಆಗದೆ, ಅತ್ತ ತಾವಿದ್ದ ಸುರಕ್ಷಿತ ಅರಣ್ಯ ವಲಯಕ್ಕೆ ವಾಪಸ್ ಮರಳಲೂ ಆಗದೆ ಸಂದಿಗ್ಧಕ್ಕೆ ಸಿಲುಕಿದರು.

ಈ ಬದಲಾವಣೆಗೆ ಹೊಂದಿಕೊಳ್ಳಲು ಬೇಕಾದ ಕೌಶಲವೂ ಅವರಿಗಿರಲಿಲ್ಲ. ಅವರಿಗೆ ತಿಳಿದಿದ್ದ ಒಂದೇ ಕೈಕಸುಬೆಂದರೆ ಜೇನು ಸಂಗ್ರಹ ಕಾರ್ಯ. ಆದರೆ, ಅದಕ್ಕೆ ಅರಣ್ಯದಿಂದ ಹೊರಗೆ ಹೆಚ್ಚಿನ ಹಣವೇನೂ ದಕ್ಕುತ್ತಿರಲಿಲ್ಲ.

ಹೀಗೆ ತನಗೆ ಅರ್ಥವೇ ಆಗದ ಮತ್ತು ತನ್ನನ್ನು ಅರ್ಥ ಮಾಡಿಕೊಳ್ಳುವ ಗೋಜಿಗೂ ಹೋಗದ ಜಗತ್ತಿನಲ್ಲಿ ಬೊಮ್ಮ ಅತಂತ್ರನಾಗಿದ್ದ. ಈಗ ನಾನು ಹೇಳಲು ಹೊರಟಿರುವ ಸಂಗತಿ ಎರಡು ವರ್ಷಗಳಿಗೂ ಹಿಂದೆ ನಡೆದದ್ದು.

ಅಂದು ಮಂಗಳವಾರ. ಗುಡಿಸಲಿನಲ್ಲಿದ್ದ ಗಂಡನಿಗೆ, ಬೇಗ ಕಾಡಿಗೆ ಹೋಗಿ ಅಡುಗೆಗೆ ಬೇಕಾದ ಕಟ್ಟಿಗೆ ತರುವಂತೆ ಚಿನ್ನಮ್ಮ ಹೇಳಿದಳು. ಆದರೆ ಗಂಡನನ್ನು ತಾನು ನೋಡುವುದು ಇದೇ ಕಡೆಯ ಬಾರಿ ಎಂಬ ಅರಿವೇ ಆಕೆಗಿರಲಿಲ್ಲ. ಕೆಲ ಹೊತ್ತಿನ ಬಳಿಕ ಏನೋ ಗದ್ದಲ ಕೇಳಿದಂತಾಗಿ ಚಿನ್ನಮ್ಮ ಹೊರಗೆ ಬಂದಳು.
 
ಜನ ದಿಕ್ಕತೋಚದವರಂತೆ ಗಾಬರಿಯಿಂದ ಓಡಾಡುತ್ತಿದ್ದರು. ಅಕ್ಕಪಕ್ಕದವರಿಂದ ಚಿನ್ನಮ್ಮನಿಗೆ ನಡೆದ ವಿಷಯ ತಿಳಿದು ಬಂತು. ಹಾಡಿಯ ಇನ್ನೊಬ್ಬನೊಟ್ಟಿಗೆ ಅರಣ್ಯದತ್ತ ಹೊರಟಿದ್ದ ಬೊಮ್ಮನ ಮೇಲೆ ಆನೆ ದಾಳಿ ನಡೆಸಿತ್ತು.
 
ಗಾಬರಿಯಾಗಿ ಓಡತೊಡಗಿದಾಗ ಎಡವಿ ಬಿದ್ದ ಅವನನ್ನು ಅದು ತುಳಿದು ಸಾಯಿಸಿತ್ತು. ಆದರೆ ತಪ್ಪಿಸಿಕೊಂಡು ಓಡಿಬಂದ ಅವನ ಸ್ನೇಹಿತ, ಹಾಡಿಯವರಿಗೆ ವಿಷಯ ಮುಟ್ಟಿಸಿದ್ದ. ಜನ ಒಟ್ಟಾಗಿ ಸೇರಿ ಶವವನ್ನು ತರಲು ಸಿದ್ಧತೆ ನಡೆಸಿದ್ದರು.

ಈ ಘಟನೆ ನಡೆದ ಕೆಲ ಗಂಟೆಗಳ ಬಳಿಕ ನನ್ನ ಸಹೋದ್ಯೋಗಿ ಪೋಷಿಣಿ ನನಗೆ ವಿಷಯ ತಿಳಿಸಿದರು. ಸ್ಥಳೀಯ ವಲಯ ಅರಣ್ಯಾಧಿಕಾರಿ ಸ್ಥಳಕ್ಕೆ ಭೇಟಿ ನೀಡಿದ್ದರು. ಆಗಷ್ಟೇ ಈ ಪ್ರದೇಶಕ್ಕೆ ನಿಯೋಜಿತರಾಗಿದ್ದ ಈ ಯುವ ಅಧಿಕಾರಿಯಲ್ಲಿ ಇನ್ನೂ ಮಾನವೀಯತೆ ಉಳಿದುಕೊಂಡಿತ್ತು. ಬೊಮ್ಮನ ಕುಟುಂಬಕ್ಕೆ ಪರಿಹಾರ ನೀಡುವಂತೆ ಸರ್ಕಾರಕ್ಕೆ ಶಿಫಾರಸು ಮಾಡುವುದಾಗಿ ಭರವಸೆ ಇತ್ತರು.

ಈ ಇಡೀ ಘಟನೆ ನನ್ನಲ್ಲಿ ಆಕ್ರೋಶ ಮತ್ತು ನಿಸ್ಸಹಾಯಕತೆಯನ್ನು ಉಂಟು ಮಾಡಿತು. ಆದಿವಾಸಿಗಳಿಗೆ ಅರಣ್ಯದೊಂದಿಗೆ ಇರುವ ಅವಿನಾಭಾವ ನಂಟನ್ನು ಅರ್ಥ ಮಾಡಿಕೊಳ್ಳದ ಸಮಾಜ ಮತ್ತು ವ್ಯವಸ್ಥೆಯ ಬಗ್ಗೆ, ಬಲವಂತವಾಗಿ ಅವರನ್ನು ಹೊರಹಾಕಿದ ಹಲವು ವರ್ಷಗಳ ನಂತರವೂ ಬದುಕಲು ಬೇಕಾದ ಕೌಶಲವನ್ನು ಅವರು ಸಿದ್ಧಿಸಿಕೊಳ್ಳುವಂತೆ ಮಾಡದ ಬಗ್ಗೆ ನನ್ನಲ್ಲಿ ಸಿಟ್ಟು ಮಡುಗಟ್ಟಿತ್ತು.
 
ಒಂದೂವರೆ ಲಕ್ಷ ಅಥವಾ ಇನ್ನೆಷ್ಟೋ ಮೊತ್ತದ ಪರಿಹಾರ ಚಿನ್ನಮ್ಮನ ಬದುಕಿಗೆ ಅರ್ಥ ಕಲ್ಪಿಸಬಲ್ಲದೇ? ಬೊಮ್ಮನ ಬದುಕಿನ ಬೆಲೆ ಕೇವಲ ಒಂದೂವರೆ ಲಕ್ಷ ಎಂದು ಸರ್ಕಾರ ಹೇಗೆ ನಿರ್ಧರಿಸುತ್ತದೆ? ಚಿನ್ನಮ್ಮ ಮತ್ತು ಆಕೆಯ ಕುಟುಂಬಕ್ಕೆ ಬೊಮ್ಮ ನೀಡಿದ್ದ ಭಾವನಾತ್ಮಕ ಹಾಗೂ ಮಾನಸಿಕ ಭದ್ರತೆಗೆ ಈ ಪರಿಹಾರ ನಿಜಕ್ಕೂ ಬೆಲೆ ಕಟ್ಟಬಲ್ಲದೇ?
 
ವಿಮಾನ ದುರಂತದಲ್ಲಿ ಮಡಿದವರಿಗೆ 15 ಲಕ್ಷ ರೂಪಾಯಿ ಪರಿಹಾರ, ರೈಲು ದುರ್ಘಟನೆಯಲ್ಲಿ ಸತ್ತವರ ಕುಟುಂಬಕ್ಕೆ 5 ಲಕ್ಷದಿಂದ 10 ಲಕ್ಷ ರೂಪಾಯಿ, ಆದರೆ ಒಬ್ಬ ಆದಿವಾಸಿ ಬದುಕಿನ ಮೌಲ್ಯ ಮಾತ್ರ ಕೇವಲ ಒಂದೂವರೆ ಲಕ್ಷ ಎಂದು ನಮ್ಮ ಅಧಿಕಾರಶಾಹಿ ಮತ್ತು ರಾಜಕಾರಣಿಗಳು ಹೇಗೆ ತಾನೇ ತೀರ್ಮಾನಿಸುತ್ತಾರೆ? ಯುಕ್ತಾಯುಕ್ತ ವಿವೇಚನೆ ಇಲ್ಲದೆ ಮನುಷ್ಯನ ಬದುಕಿಗೆ ಬೆಲೆ ಕಟ್ಟಲು ಸಾಧ್ಯವೇ?
1970ರಲ್ಲಿ ಅಮೆರಿಕದಲ್ಲಿ ನಡೆದ ದೊಡ್ಡ ಪ್ರಕರಣವೊಂದು ಇಲ್ಲಿ ನನಗೆ ನೆನಪಾಗುತ್ತದೆ.
 
ಫೋರ್ಡ್ ಕಂಪೆನಿ ತಯಾರಿಸುತ್ತಿದ್ದ ಅತ್ಯಂತ ಜನಪ್ರಿಯ ಕಾರು ಪಿಂಟೊದಲ್ಲಿ ಸಮಸ್ಯೆ ಕಾಣಿಸಿಕೊಂಡಿತ್ತು. ಆ ಕಾರಿಗೆ ಹಿಂಬದಿಯಿಂದ ಬೇರೊಂದು ವಾಹನ ಗುದ್ದಿದಾಗ ಅದರ ಇಂಧನ ಟ್ಯಾಂಕ್ ಸ್ಫೋಟಗೊಂಡ ಪ್ರಕರಣಗಳು ವರದಿಯಾಗಿದ್ದವು. ಹೀಗೆ ಕಾರುಗಳಲ್ಲಿ ಹೊತ್ತಿಕೊಂಡ ಬೆಂಕಿಗೆ 500ಕ್ಕೂ ಹೆಚ್ಚು ಜನ ಬಲಿಯಾಗಿದ್ದರು ಮತ್ತು ಹಲವರಿಗೆ ಸುಟ್ಟ ಗಾಯಗಳಾಗಿದ್ದವು.

ಇಂತಹ ಗಾಯಾಳುಗಳಲ್ಲಿ ಒಬ್ಬರು ದೋಷಯುಕ್ತ ವಿನ್ಯಾಸವನ್ನು ಪ್ರಶ್ನಿಸಿ ಫೋರ್ಡ್ ಮೋಟಾರ್ ಕಂಪೆನಿಯ ವಿರುದ್ಧ ಕೋರ್ಟ್ ಮೆಟ್ಟಿಲೇರಿದರು. ಇಂಧನ ಟ್ಯಾಂಕ್‌ನಿಂದ ಆಗಬಹುದಾಗಿದ್ದ ಅಪಾಯದ ಬಗ್ಗೆ ಕಂಪೆನಿಯ ಅಧಿಕಾರಿಗಳಿಗೆ ಮೊದಲೇ ತಿಳಿದಿತ್ತು ಎಂಬ ಸಂಗತಿ ಈ ಸಂದರ್ಭದಲ್ಲಿ ಬಹಿರಂಗವಾಯಿತು.
 
ಅಧಿಕಾರಿಗಳು ಈ ಸಮಸ್ಯೆಗೆ ಸಂಬಂಧಿಸಿದಂತೆ ಲಾಭ- ನಷ್ಟದ ವಿಶ್ಲೇಷಣೆಯೊಂದನ್ನು ನಡೆಸಿದ್ದರು. ಅದರ ಪ್ರಕಾರ, ಪೆಟ್ರೋಲ್ ಟ್ಯಾಂಕ್‌ಗಳ ಸುರಕ್ಷತೆಗಾಗಿ ತಲಾ 11 ಡಾಲರ್ ವೆಚ್ಚದಲ್ಲಿ ದೋಷಯುಕ್ತ ಕಾರುಗಳಿಗೆ ಉಪಕರಣ ಅಳವಡಿಸುವುದಕ್ಕಿಂತ ಜೀವಹಾನಿ ಮತ್ತು ಗಾಯಕ್ಕೆ ನೀಡುವ ಪರಿಹಾರದ ಮೊತ್ತವೇ ಕಡಿಮೆ ಖರ್ಚಿನದಾಗಿತ್ತು.

ಟ್ಯಾಂಕುಗಳನ್ನು ದುರಸ್ತಿ ಮಾಡದೆ ಹಾಗೇ ಬಿಟ್ಟರೆ ಸುಮಾರು 180 ಸಾವುಗಳು ಸಂಭವಿಸಬಹುದು ಮತ್ತು 180 ಜನರಿಗೆ ಗಾಯಗಳಾಗಬಹುದು ಎಂದು ಕಂಪೆನಿ ಅಂದಾಜು ಮಾಡಿತ್ತು. ಇಂತಹ ಪ್ರತಿ ಜೀವಹಾನಿಗೂ ಅವರು ಎರಡು ಲಕ್ಷ ಡಾಲರ್ ಮತ್ತು ಗಾಯಕ್ಕೆ 67 ಸಾವಿರ ಡಾಲರ್ ಪರಿಹಾರದ ಬೆಲೆ ಕಟ್ಟಿದ್ದರು.

ಇದರಿಂದ ಒಟ್ಟಾರೆ ಹಾನಿಯ ಪರಿಹಾರಕ್ಕಾಗಿ ಅವರಿಗೆ 49.5 ದಶಲಕ್ಷ ಡಾಲರ್ ಖರ್ಚು ಬಂದರೆ, 12.5 ದಶಲಕ್ಷ ವಾಹನಗಳಿಗೆ ತಲಾ 11 ಡಾಲರ್ ವೆಚ್ಚದಲ್ಲಿ ಸುರಕ್ಷಾ ಉಪಕರಣ ಅಳವಡಿಸಲು ಹೊರಟರೆ 137.5 ದಶಲಕ್ಷ ಡಾಲರ್ ಖರ್ಚು ತಗುಲುತ್ತದೆ ಎಂದು ಅವರು ಲೆಕ್ಕ ಹಾಕಿದ್ದರು.

ಹೀಗಾಗಿ ಇಂಧನ ಟ್ಯಾಂಕ್ ದುರಸ್ತಿಗಿಂತ ಸಂತ್ರಸ್ತರಾಗುವವರಿಗೆ ಪರಿಹಾರ ಕೊಡುವುದೇ ಲೇಸು ಎಂಬ ಅಂತಿಮ ತೀರ್ಮಾನಕ್ಕೆ ಕಂಪೆನಿ ಬಂದಿತ್ತು.
ಈ ಲೆಕ್ಕಾಚಾರ ಕೇಳಿದ ನ್ಯಾಯಾಧೀಶರು ಕೆಂಡಾಮಂಡಲವಾದರು.

ಫಿರ್ಯಾದುದಾರರಿಗೆ ಬೃಹತ್ ಮೊತ್ತದ ಪರಿಹಾರ ನೀಡುವಂತೆ ಆದೇಶಿಸಿದರು. ಇಂತಹ ಅನೈತಿಕ ವಾದ ಮಂಡಿಸಿದ್ದ ಫೋರ್ಡ್ ಕಂಪೆನಿಯು `ರಾಷ್ಟ್ರೀಯ ಸಂಚಾರ ಸುರಕ್ಷಾ ಆಡಳಿತ ಸಂಸ್ಥೆ~ಯು ಮಾನವನ ಜೀವಕ್ಕೆ ಕಟ್ಟಿದ್ದ ಬೆಲೆಯನ್ನು ತನ್ನ ವಾದಕ್ಕೆ ಆಧಾರವಾಗಿ ಬಳಸಿಕೊಂಡಿತ್ತು.

ಅಮೆರಿಕದ ಈ ಸರ್ಕಾರಿ ಸಂಸ್ಥೆಯು ರಸ್ತೆ ಅಪಘಾತದಿಂದ ಆಗುವ ಜೀವಹಾನಿಗೆ 2 ಲಕ್ಷ ಡಾಲರ್ ಬೆಲೆ ಕಟ್ಟಿತ್ತು. ಈ ಬಗ್ಗೆ ಯೋಚಿಸಿದಾಗ, ಯಾವುದೇ ವ್ಯಕ್ತಿ 2 ಲಕ್ಷ ಡಾಲರ್ ಪರಿಹಾರಕ್ಕಾಗಿ ರಸ್ತೆ ಅಪಘಾತದಲ್ಲಿ ಸಾಯಲು ಬಯಸುತ್ತಾನೆಯೇ ಎಂಬ ಸರಳವಾದ ಪ್ರಶ್ನೆ ನನ್ನಲ್ಲಿ ಮೂಡುತ್ತದೆ.

ವ್ಯಕ್ತಿಯೊಬ್ಬನ ನಿಜವಾದ ಮೌಲ್ಯ ಏನು ಎಂಬುದನ್ನು ನಿರ್ಧರಿಸುವಲ್ಲಿ ಎದುರಾಗುವ ಸವಾಲುಗಳ ಬಗ್ಗೆ ಚರ್ಚಿಸುವಾಗ, ಬಡವನೊಬ್ಬನ ಬದುಕಿಗೆ ಹಣದ ಬೆಲೆ ಕಟ್ಟಲು ಸರ್ಕಾರ ಬಳಸುವ ವಿಶ್ಲೇಷಣಾ ಮಾರ್ಗ ನನ್ನನ್ನು ಕಲಕುತ್ತದೆ.

ಒಬ್ಬ ಶಾಸಕ, ಹಿರಿಯ ಐಎಎಸ್ ಅಧಿಕಾರಿ ಅಥವಾ ಕಾರ್ಪೊರೇಟ್ ಸಂಸ್ಥೆಯೊಂದರ ಸಿಇಒ ಉತ್ಪಾದನಾ ಸಾಮರ್ಥ್ಯವು ಒಬ್ಬ ರೈತ ಅಥವಾ ಗ್ರಾಮೀಣ ಕಸಬುದಾರನಿಗಿಂತ ಹೆಚ್ಚಾಗಿರುತ್ತದೆ ಎಂದು ನಾವು ಹೇಗೆ ತಾನೇ ಹೇಳಲು ಸಾಧ್ಯ? ಜೀವಕ್ಕೆ ಬೆಲೆ ಕಟ್ಟುವಾಗ ವಯಸ್ಸು ಮತ್ತು ಲಿಂಗವನ್ನು ಪರಿಗಣನೆಗೆ ತೆಗೆದುಕೊಳ್ಳಬೇಕೇ?

ನಮ್ಮ ಪ್ರಸ್ತಕ ಗಳಿಕೆಯು ಭವಿಷ್ಯದಲ್ಲೂ ನಾವು ಎಷ್ಟು ಗಳಿಸಬಹುದು ಎಂಬುದರ ಸೂಚ್ಯಂಕವೇ? ಬದುಕಿನ ಅಸಂದಿಗ್ಧ ಸಂದರ್ಭಗಳನ್ನು ಹೇಗೆ ಅಳೆಯಬಹುದು ಮತ್ತು ಅದಕ್ಕೆ ಯಾವ ರೀತಿಯಲ್ಲಿ ಬೆಲೆ ಕಟ್ಟಬಹುದು? ಸಂತ್ರಸ್ತರ ಕುಟುಂಬಗಳಿಗೆ ನೀಡುವ ಆರ್ಥಿಕ ಪರಿಹಾರದಿಂದ ಮುಂದಿನ ಅವರ ಭವಿಷ್ಯಕ್ಕೆ ಭಾವನಾತ್ಮಕ ಮತ್ತು ಮಾನಸಿಕ ಭದ್ರತೆ ಒದಗಿಸಲು ಸಾಧ್ಯವೇ?

ಬೊಮ್ಮನ ಪ್ರಕರಣದಲ್ಲೇ ಹೇಳುವುದಾದರೆ, ಆತ ಅನಾಥವಾಗಿ ಪ್ರಾಣ ಬಿಟ್ಟಿದ್ದು ಸರ್ಕಾರದ ದೃಷ್ಟಿಯಲ್ಲಿ ಸಮರ್ಥನೀಯವೇ? ವಿವಿಧ ಅಭಿವೃದ್ಧಿ ಯೋಜನೆಗಳು ಮತ್ತು ಅರಣ್ಯ ಹಕ್ಕು ಕಾಯ್ದೆಗಳು ಸಮರ್ಪಕವಾಗಿ ಅನುಷ್ಠಾನಗೊಂಡಿದ್ದೇ ಆಗಿದ್ದರೆ ಬೊಮ್ಮನ ಸಾವನ್ನು ತಡೆಯಲು ಅಥವಾ ಅವನಿಗೆ ಮತ್ತು ಅವನ ಕುಟುಂಬಕ್ಕೆ ಉನ್ನತ ಸಾಮಾಜಿಕ, ಆರ್ಥಿಕ ಸ್ಥಾನಮಾನ ತಂದುಕೊಡಲು ಸಾಧ್ಯವಾಗುತ್ತಿತ್ತೇ? ಆಗಲಾದರೂ ಅವನ ಬದುಕಿನ ಮೌಲ್ಯ ಹೆಚ್ಚುತ್ತಿತ್ತೇ? ಬೊಮ್ಮನನ್ನು ಬಡತನದಲ್ಲೇ ಬಿಟ್ಟಿದ್ದಕ್ಕೆ ಸರ್ಕಾರ ತನ್ನ ಅಧಿಕಾರಿಗಳನ್ನೂ ಹೊಣೆ ಮಾಡಲು ಸಿದ್ಧವಿದೆಯೇ?

ಕ್ರೂರ ಮೃಗಗಳ ದಾಳಿ ಅಥವಾ ಅಪಘಾತದಂತಹ ದುರಂತದ ಸಂದರ್ಭದಲ್ಲಿ ಆರ್ಥಿಕ ಪರಿಹಾರ ನೀಡುವುದು ಅಗತ್ಯ ಮತ್ತು ಅತ್ಯವಶ್ಯಕ ಎಂಬುದು ಎಲ್ಲರಿಗೂ ತಿಳಿದಿರುವ ಸಂಗತಿ. ಆದರೆ ಈ ಪರಿಹಾರಕ್ಕೆ ಬೆಲೆ ಕಟ್ಟುವ ವಿಷಯದಲ್ಲಿ ಸರ್ಕಾರ ಮತ್ತು ಸಮಾಜ ಸೂಕ್ಷ್ಮವಾಗಿ ಯೋಚಿಸಬೇಕಾಗುತ್ತದೆ.

ಪ್ರಸ್ತುತದ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಅಂಶಗಳ ಆಚೆಗೆ ಯೋಚಿಸಿ ಒಬ್ಬ ವ್ಯಕ್ತಿಯ ನಿಜವಾದ ಮೌಲ್ಯ ಕಟ್ಟುವುದು ಕಷ್ಟದ ಕೆಲಸವೇ ಹೌದು. ಸರ್ಕಾರದ ಬಳಿ ಇದನ್ನು ಲೆಕ್ಕ ಹಾಕುವಂತಹ ಯಾವುದೇ ಖಚಿತ ವಿಧಾನ ಇಲ್ಲ.
 
ಹೀಗಾಗಿ ಕ್ರಿಕೆಟ್‌ನಲ್ಲಿ ಡಕ್‌ವರ್ತ್- ಲೂಯಿಸ್ ನಿಯಮ ಇರುವಂತೆ ಒಬ್ಬ ವ್ಯಕ್ತಿಯ ನಿಜವಾದ ಮೌಲ್ಯ ನಿರ್ಧರಿಸಲು ಸೂಕ್ತವಾದ ಸೂತ್ರವೊಂದನ್ನು ರೂಪಿಸುವ ಬಗ್ಗೆ ಸಾಮಾಜಿಕ ಚಿಂತಕರು ಮತ್ತು ಆರ್ಥಿಕ ತಜ್ಞರು ಪ್ರಯತ್ನಶೀಲರಾಗಬೇಕು.

ಒಬ್ಬ ವ್ಯಕ್ತಿ ಬದುಕುಳಿದಿದ್ದರೆ ಅಥವಾ ಅಂಗ ಊನನಾಗದೇ ಇದ್ದಿದ್ದರೆ ಆತ ಎಷ್ಟು ವರ್ಷ ಉತ್ಪಾದಕ ವ್ಯಕ್ತಿಯಾಗಿ ಇರುತ್ತಿದ್ದ, ಆತನ ಸಂಪಾದನೆಯ ಸಾಮರ್ಥ್ಯ, ಸಮಾಜಕ್ಕೆ ಆತ ನೀಡುತ್ತಿದ್ದ ಕೊಡುಗೆಯ ಮೊತ್ತ, ಸಾಮಾಜಿಕ ಅಂಶಗಳು, ಲಿಂಗ, ಅವನನ್ನು ಅವಲಂಬಿಸಿದ್ದವರ ಸಂಖ್ಯೆ, ಬಾಧ್ಯತೆಗಳು, ಕಾನೂನು ಕಟ್ಟಳೆಗಳು, ಶಿಕ್ಷೆ ಇತ್ಯಾದಿ ಎಲ್ಲವನ್ನೂ ಸೂತ್ರ ರೂಪಿಸುವ ಸಂದರ್ಭದಲ್ಲಿ ಪರಿಗಣಿಸಬೇಕಾಗುತ್ತದೆ.

ಮಾಡುವುದಕ್ಕಿಂತ ಹೇಳುವುದು ಸುಲಭ ಎಂಬುದರ ಅರಿವು ನನಗಿದೆ. ಆದರೆ ಏನನ್ನು ಹೇಳುತ್ತೇವೆಯೋ ಅದನ್ನು ಕಾರ್ಯರೂಪಕ್ಕೆ ತರುವುದು ಅಸಾಧ್ಯವಾದುದೇನೂ ಅಲ್ಲ. ಪ್ರತಿಯೊಬ್ಬ ವ್ಯಕ್ತಿಗೂ ಒಂದು `ಸಾಮಾಜಿಕ ಮೌಲ್ಯಾಂಕನ~ವನ್ನು ನಿರ್ಧಾರ ಮಾಡಿ, ಅದನ್ನು ನಿಗದಿತ ಪರಿಹಾರ ಮೊತ್ತದೊಂದಿಗೆ ಗುಣಿಸಿ, ಒಟ್ಟಾರೆ ಪರಿಹಾರವನ್ನು ನೀಡುವ ಪದ್ಧತಿ ಜಾರಿಯಾಗಬೇಕು. ಹೀಗೆ ರೂಪಿಸುವ ಸೂತ್ರವನ್ನು ಸಮಯಕ್ಕೆ ಅನುಗುಣವಾಗಿ ಪರಿಷ್ಕೃತಗೊಳಿಸಿ, ವ್ಯಕ್ತಿಯ ಜೀವದ ಬೆಲೆ ಅಪಮೌಲ್ಯವಾಗದಂತೆ ನೋಡಿಕೊಳ್ಳಬೇಕು.

(ನಿಮ್ಮ ಅನಿಸಿಕೆ ತಿಳಿಸಿ: editpagefeedback@prajav ani.co.in)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT