ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆ ಊಟಕ್ಕೆ ಜೋತಿದ್ರೆ ಅಲೆಕ್ಸಾಂಡ್ರು ದೇಸ್‌ಗಳ ಗೆಲ್ತಿದ್ನಾ?

Last Updated 23 ಮಾರ್ಚ್ 2016, 19:30 IST
ಅಕ್ಷರ ಗಾತ್ರ

ಊರಿಗೆ ಹೊರಡಲು ಬ್ಯಾಗುಗಳನ್ನು ಕಟ್ಟುವ ಕಾಲ ಸನ್ನಿಹಿತವಾದಂತೆಲ್ಲ ಬಹಳ ಸಂಕಟವಾಗುತ್ತಿತ್ತು. ಸ್ನೇಹಿತರನ್ನು ಬಿಟ್ಟು ಹೋಗುತ್ತೇವೆ ಅನ್ನುವುದಕ್ಕಿಂತ ಮುಂದೇನು ಎನ್ನುವ ಪ್ರಶ್ನೆ ಬಹಳ ದೊಡ್ಡದಾಗಿತ್ತು. ‘ರಿಂಕ್ಸ್ ವಾಟ್ ನೆಕ್ಸ್ಟ್?’ ಅಂತ ಇಂದುಮತಿ ರಿಂಕಿಯನ್ನು ಕೇಳುತ್ತಿದ್ದರೆ ಎಲ್ಲರಿಗೂ ಹೊಟ್ಟೆಯಲ್ಲಿ ಹಿಟ್ಟು ಕಲಸಿದಂತೆ ತಳಮಳ.|

ಇಲ್ಲೇನೋ ಆರಾಮಾಗಿ ಇದ್ದುಬಿಟ್ಟಿವಿ. ಹೊರಗೆ ಹೋದರೆ ಸಾವಿರ ಪ್ರಶ್ನೆಗಳಿವೆ, ನೂರಾರು ಕೆಲಸಗಳಿವೆ. ‘ಎಷ್ಟೊಂದ್ ಜನ ಇಲ್ಲಿ ಯಾರು ನಮ್ಮೋರು?’ ಎನ್ನುವಂಥ ಪರಿಸ್ಥಿತಿ.

ಹೊಸ ಸಂಬಂಧಗಳನ್ನು ಬೆಳೆಸಬೇಕು. ಹೊಸ ದಾರಿಗಳನ್ನು ಹುಡುಕಬೇಕು. ಹಾಗೆ ಹುಡುಕುವಾಗ ದಾರಿ ಯಾವದೂಂತಲಾದರೂ ಸ್ಪಷ್ಟವಾಗಿರಬೇಕು ಅಲ್ವಾ? ಅದೇ ಮತ್ತೆ, ಭಾರೀ ಕಷ್ಟ! ಬರುವಾಗ ತಂದ ಬ್ಯಾಗುಗಳಿಗಿಂತ ಹೋಗುವಾಗಿನ ಬ್ಯಾಗುಗಳು ಬಹಳ ತೂಕ ಇದ್ದವು.

ಮಾನಸಿಕವಾಗಿಯೂ. ಸಾಕಷ್ಟು ಸಾಮಾನುಗಳನ್ನು ಜೂನಿಯರ್ಸುಗಳಿಗೆ ಕೊಡುವ ಪರಿಪಾಠ ಇತ್ತು. ಹಾಗೆ ನಡೆಯಿತು ಕೂಡ. ಹಲವಾರು ದಿನಗಳಲ್ಲಿ, ಅಪರಾತ್ರಿಗಳಲ್ಲಿ ಹಸಿದ ಹೊಟ್ಟೆಗೆ ಬೆಂದ ಆಹಾರದಂಥ ವಸ್ತುವನ್ನು ಕಾಣಿಸಿದ ಪಾತ್ರೆಗಳು, ಸ್ಟೌ, ಉಂಡ ತಟ್ಟೆಗಳು, ಮೊಸರನ್ನೂ ಟೀಯನ್ನೂ ಸಮಾನವಾಗಿ ತುಂಬಿಸಿಕೊಳ್ಳುತ್ತಿದ್ದ  ಲೋಟಗಳು, ಚಮಚೆಗಳು, ಪುಸ್ತಕಗಳು, ಹಾಸಿಗೆಗಳು – ಒಂದೇ... ಎರಡೇ!

ಹಾಸ್ಟೆಲಿಗೆ ಹೊಸದಾಗಿ ಸೇರಲು ಬಂದ ಹುಡುಗಿಯರಲ್ಲಿ ಎಲ್ಲರೂ ಸ್ಥಿತಿವಂತರೇನೂ ಇರುವುದಿಲ್ಲವಲ್ಲ? ಅಂಥವರಲ್ಲಿ ಕೆಲವರಿಗೆ ಹಂಚಿಕೆಯಾಯಿತು. ಇನ್ನು ಕೆಲವರು ಹೆಚ್ಚುವರಿ ವಸ್ತುಗಳನ್ನು ಒಪ್ಪಿಸಿಕೊಂಡು, ಮುಂದೆ ಬಂದು ಸೇರುವ ಹುಡುಗಿಯರಿಗೆ ಕೊಡುತ್ತೇವೆ ಅಂತ ಜವಾಬ್ದಾರಿ ತೆಗೆದುಕೊಂಡರು.

ರಿಂಕಿ ಮತ್ತು ಇಂದುಮತಿಗೆ ತಳಮಳವಾದಂತಿತ್ತು. ಹಾಗೆ ನೋಡಿದರೆ ಎಲ್ಲರಿಗೂ ಸ್ವಲ್ಪ ಆತಂಕವೇ. ಆದರೆ, ಇವರಿಬ್ಬರಿಗೆ ಇನ್ನೂ ಹೆಚ್ಚು. ಏಕೆಂದರೆ ಮನೆಗೆ ಹೋದರೆ ಹಾಸ್ಟೆಲಿನ ಸ್ವಾತಂತ್ರ್ಯ ಇರುವುದಿಲ್ಲವಲ್ಲ ಅಂತ. ಈಶ್ವರಿ ಆಗಲೇ ತಿರುಪತಿ ಎಕ್ಸ್ ಪ್ರೆಸ್ಸಿಗೆ ಟಿಕೇಟು ಮಾಡಿಸಿ ಬಂದಿದ್ದಳು.

ಮನೆಗೆ ಹೋಗಲು ಬಹಳ ಧಾವಂತವಿತ್ತು ಅವಳಿಗೆ. ಹಾಸ್ಟೆಲು ವಾಸ ಸಾಕಾಗಿತ್ತು ಅಂತಲ್ಲ, ಮನೆಗೆ ಹೋದರೆ ಮುಂದಿನ ಪ್ಲಾನುಗಳನ್ನು ಖಚಿತ ಮಾಡಿಕೊಳ್ಳಬಹುದು ಅಂತ.

‘ಯಾಕೆ? ಯಾರೂ ಮತ್ತೆ ಮೀಟ್ ಆಗೋದೇ ಇಲ್ವಾ?’ ರಶ್ಮಿಗೆ ಸೋಜಿಗ.‘ಆಗ್ಬೋದೇನೋ. ಆಗ್ಲಿಲ್ಲಾಂದ್ರೂ ಏನೂ ಲಾಸ್ ಇಲ್ಲ. ಅಲ್ವಾ?’ ರಿಂಕಿಯ ವಾಸ್ತವದ ಮಾತುಗಳು.

ಕೆಲಸಕ್ಕೆ ಹೋಗುತ್ತೇವೆ ಎನ್ನುವ ವಿಶ್ವಾಸ ಎಲ್ಲರಿಗೂ ಇದ್ದಂತಿರಲಿಲ್ಲ. ಹೋಗುವುದಾದರೂ ಇಂಥ ಕಡೆಗೇ ಎನ್ನುವಷ್ಟು ಖಚಿತತೆಯೂ ಅವಕಾಶಗಳೂ ಇದ್ದ ಕಾಲವಲ್ಲ ಅದು.

‘ಜಾಬ್ ಮಾಡ್ತೀಯಾ?’ ‘ಮಾಡ್ತೀನಿ. ಆದರೆ ಯಾವದೂಂತ ಗೊತ್ತಿಲ್ಲ’ ಬಹುತೇಕರದ್ದು ಇದೇ ಉತ್ತರ. ಇದ್ದ ಒಂದೇ ಒಂದು ಲ್ಯಾಂಡ್ ಲೈನಿನ ನಂಬರ್ ಕೊಟ್ಟು ತಗೊಳ್ಳುವ ಪ್ರಕ್ರಿಯೆಯನ್ನು ಮುಗಿಸಿ ಎಲ್ಲರೂ ಹಾಸ್ಟೆಲಿಗೆ ವಿದಾಯ ಹೇಳಿದರು.

ಚಂದ್ರಣ್ಣ, ಮೇರಿಯಮ್ಮ, ಮರಿಯಮ್ಮ, ಮನೋಹರ, ಮೋಹನ ಎಲ್ಲರೂ ನಿನ್ನೆಯ ತನಕ ಸಾದೃಶ್ಯವಾಗಿ ಜೀವನದ ಒಂದು ಭಾಗವಾಗಿದ್ದವರು, ಹಾಸ್ಟೆಲು ಬಿಟ್ಟ ಕೆಲವೇ ನಿಮಿಷಗಳಲ್ಲಿ ನೆನಪಿನ ಭಾಗವಾಗಿಬಿಟ್ಟರು.

ಹುಟ್ಟಿ ಬೆಳೆದ ಊರು ಬಿಡುವಾಗ ಇರುವ ಒಂದು ನಮೂನೆಯ ಭಾವುಕತೆ ಊರಿಗೆ ಮರಳುವಾಗ ಇರುವುದಿಲ್ಲ. ಬೇಕಾದರೆ ಅನಿವಾಸಿ ಭಾರತೀಯರನ್ನೋ ಅಥವಾ ಸಣ್ಣ ಊರುಗಳನ್ನು ಬಿಟ್ಟು ಪಟ್ಟಣಕ್ಕೆ ಬಂದು ಜೀವನವನ್ನು ಸವೆಸುತ್ತಿರುವ ಜನಗಳನ್ನೇ ನೋಡಿ.

ಆಗಾಗ ಊರಿಗೆ ಮರಳುವಾಗ ಎಂಥಾ ಸಂತೋಷದಲ್ಲಿ ಬರುತ್ತಾರೆ ಅಂತೀರಿ! ಅಲ್ಲಿನ ದೂಳು, ಅವ್ಯವಸ್ಥೆ, ನೀರು, ಆಸ್ಪತ್ರೆಯ ಸಾಲುಗಳು, ಗಲೀಜು, ಜನರ ಅವಿವೇಕಿತನ ಎಲ್ಲವೂ ಒಂದು ಹಂತದ ತನಕ ಸಹ್ಯ ಅನ್ನಿಸುತ್ತದೆ. ಬೈಯುವವರು ಇಲ್ಲವೆಂದೇನೂ ಅರ್ಥವಲ್ಲ.

ಆದರೆ ಯಾಕೋ ತಮ್ಮ ಬಾಲ್ಯ ನೆನಪಾದಾಗ ಎಲ್ಲವೂ ಹಚ್ಚ ಹಸಿರು ಕಾಣುತ್ತದೆ. ಆಗಿನ ಕಷ್ಟಗಳೂ ಅಪ್ಯಾಯಮಾನವಾಗಿ ಕಾಣತೊಡಗುತ್ತವೆ. ಯಾಕೆಂದರೆ ಆ ದಿನಗಳಿಗೆ ತಾವು ಮತ್ತೆ ಮರಳುವುದಿಲ್ಲ ಎನ್ನುವ ಧೃಢವಾದ ನಂಬಿಕೆ.

ಆದರೆ ಊರಿಗೆ ಮರಳಬೇಕಾಗಿ ಬಂದಾಗ ಅಥವಾ ಅಲ್ಲಿಗೇ ಹೋಗಿ ಮತ್ತೆ ಜೀವನದ ಇನ್ನೊಂದು ಹಂತಕ್ಕೆ ಮುಖಾಮುಖಿಯಾಗಬೇಕಾಗಿ ಬಂದಾಗ ಹೇಳಲಾರದ ಭಾವನೆಗಳು, ಆತಂಕಗಳು, ಅಭದ್ರತಾ ಭಾವ, ಸಿಟ್ಟು ಸೆಡವುಗಳು ಬಂದು ಸೇರಿಕೊಳ್ಳುತ್ತವೆ.

ಎಲ್ಲರ ಮನೆಯಲ್ಲೂ ಬ್ಯಾಗು ಇಡಲೂ ಪುರುಸೊತ್ತಿಲ್ಲದಂತೆ ಅದೇ ಪ್ರಶ್ನೆ. ‘ಮುಂದೇನು ಮಾಡ್ತೀಯವ್ವಾ?’ ಹೆಚ್ಚು ಬಡಿವಾರ ಮಾಡದೆ, ಮತ್ತೆ ಭೇಟಿಯಾಗುವ ಯಾವ ಲೊಳಲೊಟ್ಟೆ ಪ್ರಾಮಿಸ್ಸುಗಳನ್ನೂ ಮಾಡದೆ, ಭೇಟಿಯಾಗುವ ಉತ್ಸಾಹವನ್ನೂ ಇಟ್ಟುಕೊಳ್ಳದೆ ತಂತಮ್ಮ ಊರುಗಳಿಗೆ ಹೊರಟರು.

ಹೊಸ ಸಂಬಂಧಗಳಿಗೆ ಜೀವನ ತುಡಿಯುವಂತೆಯೇ, ಹೊಸ ದಾರಿಗಳಿಗೂ ಮನಸ್ಸು ತೆರೆದುಕೊಳ್ಳುತ್ತದೆ. ನಿಧಾನವಾಗಿಯಾದರೂ ಸರಿಯೇ, ಭಾವನೆಗಳಿಗೆ ಹೊಸ ದಾರಿಗಳು ಬೇಕಲ್ಲ! ಊರಿಗೆ ಹೋಗಿ ಎಲ್ಲರೂ ಸಮಾಧಾನದಲ್ಲಿ ಇದ್ದದ್ದು ಸ್ವಲ್ಪವೇ ದಿವಸ. ರಿಸಲ್ಟುಗಳು ಬರುವ ತನಕ ಮಾತ್ರ ಅನ್ನಿಸುತ್ತೆ. ಎಲ್ಲರೂ ಒಮ್ಮೆ ಡಿಪಾರ್ಟ್‌ಮೆಂಟಿಗೆ ಫೋನ್ ಮಾಡಿ ತಮ್ಮ ಹಣೆಬರಹವನ್ನು ಅರಿತ ಕೂಡಲೇ ಪ್ರಶ್ನೆ ಮತ್ತೆ ದೆವ್ವದ ಥರಾ ಬಂದು ನಿಂತಿತು.

‘ಮುಂದೇನು?’ ಇಂದುಮತಿ ಮತ್ತೆ ಫೋನಿಗೆ ಸಿಕ್ಕಲಿಲ್ಲ. ‘ನನಗೆ ಫೋನ್ ಮಾಡಬೇಡಿ ಯಾರೂ. ನಮ್ಮನೇಲಿ ನಾನು ಇರ್ತೀನೋ ಇಲ್ಲವೋ ಹೇಳೋದು ಕಷ್ಟ. ಅಲ್ಲದೆ ಯಾರ ಸಂಪರ್ಕವೂ ನನಗೆ ಬೇಕಿಲ್ಲ’ ಅಂತ ಸ್ಪಷ್ಟವಾಗಿ ಹೇಳಿದ್ದಳು.

ವಿಜಿ ದಾವಣಗೆರೆಯಲ್ಲಿ, ರಶ್ಮಿ ಮತ್ತು ಇಂದುಮತಿ ಬೆಂಗಳೂರಿನಲ್ಲಿ, ಈಶ್ವರಿ ತಿರುಪತಿಯಲ್ಲಿ ಹೋಗಿ ಸ್ವಲ್ಪ ದಿನವಾದರೂ ಇದ್ದರು. ಆದರೆ ರಿಂಕಿ ಮಾತ್ರ ಕೆಲವೇ ಕೆಲವು ದಿನ ತನ್ನ ತಂದೆ-ತಾಯಿಯ ಜೊತೆ ಭುವನೇಶ್ವರದಲ್ಲಿ ಇದ್ದು ಮತ್ತೆ ಯಾವುದೋ ಕೋರ್ಸು ಸೇರುವ ನೆಪ ಹೇಳಿ ಮೈಸೂರಿಗೆ ಬಂದುಬಿಟ್ಟಿದ್ದಳು.

ಮನೆಯಲ್ಲಿ ಇರಲಾಗದ ಹುಡುಗಿಗೆ ಮೈಸೂರು ಮನೆ ಅಂತ ಹೇಗೆ ಅನ್ನಿಸಿತೋ! ‘ಬಹಳ ವರ್ಷ ಆಯ್ತು ನಾನು ಅಪ್ಪ ಅಮ್ಮನ ಜೊತೆ ಇರದೆ. ಮೊದಲಿನಿಂದಲೂ ಹಾಸ್ಟೆಲಿನಲ್ಲೇ ಇದ್ದೆನಲ್ಲ! ಹಾಗಾಗಿ ಅವರ ಜೊತೆ ಇರೋಕೆ ಆಗೋದೇ ಇಲ್ಲ. ನಾಲ್ಕು ದಿನ ಕಳೆದ ಮೇಲೆ ಅವರ ಮಾತು, ಅಲ್ಲಿನ ಊಟ, ನನ್ನ ಸಂಬಂಧಿಗಳು – ಎಲ್ಲವೂ ಅಸಹನೀಯ ಅನ್ನಿಸುತ್ತೆ. ಯಾವಾಗ ಇವರಿಂದ ಬಿಡಿಸಿಕೊಂಡು ಓಡಿಹೋದೇನೋ ಅಂತ ಅನ್ನಿಸೋಕೆ ಶುರುವಾಗುತ್ತೆ’ ಅಂತ ಮೈಸೂರು ಸೇರಿದ ಮೇಲೆ ಫೋನು ಮಾಡಿ ರಶ್ಮಿಯ ಹತ್ತಿರ ಮಾತನಾಡಿದ್ದಳು.

ರಿಂಕಿಗಷ್ಟೇ ಏನು, ಬದುಕು ಪಲ್ಲಟವಾಗುವ ಕ್ಷಣದ ಹೊಸ್ತಿಲ ಮೇಲೆ ನಿಂತಿರುವ ಯಾವ ವ್ಯಕ್ತಿಗೂ ಹಾಗೇ ಅನ್ನಿಸುತ್ತೆ. ತನ್ನನ್ನು ಕಟ್ಟಿ ಹಾಕುವ ಎಲ್ಲ ಭವಬಂಧಗಳ ಬಗ್ಗೆಯೂ ಸಿಟ್ಟು ಬರಲು ಶುರುವಾಗುತ್ತೆ, ಹೊರಗಿನ ಜಗತ್ತಲ್ಲಿ ವಿಕಸನಕ್ಕೆ ಅವಕಾಶಗಳು ಅನಂತ. ಹಾಗೇ ಅವೆಲ್ಲ ಊಹೆಗೂ ನಿಲುಕದಂಥವು. ಹೊರಗೆ ಹೋಗಿ ದುಡಿಯಬೇಕೆನ್ನುವ ಒಂದು ನಿರ್ಧಾರವೇ ಆಗಲಿ, ಮದುವೆಗೆ ಹೂಂ ಎನ್ನುವ ಒಂದು ಮನಃಸ್ಥಿತಿಯೇ ಆಗಲಿ – ಸುಲಭದ್ದಲ್ಲ.

ಪ್ರತೀ ನಿರ್ಧಾರ ತರುವ ಸಂಕೀರ್ಣತೆಗಳು ಅನಂತ, ಅಗೋಚರ. ತಂದೆ ತಾಯಿಗಳಿಗೆ ಇವು ಅರ್ಥವಾಗದೆ ‘ಯಾಕೋ ಮುಖ ಕೊಟ್ಟು ಮಾತೇ ಆಡಲ್ಲ. ಸಿಡ್ ಸಿಡ ಅಂತಿರುತ್ತೆ’ ಅಂತ ಮಗನ ಬಗ್ಗೆಯೋ ಮಗಳ ಬಗ್ಗೆಯೋ ಗೊಂದಲಕ್ಕೆ, ಮಾನಸಿಕ ಕ್ಷೋಭೆಗೆ ಒಳಗಾಗುತ್ತಾರೆ.

ಆಶ್ಚರ್ಯವೆಂದರೆ ಬೆಂಗಳೂರಿನಲ್ಲಿದ್ದ ರಶ್ಮಿ ಮನೆಗೆ ಹೋದ ಕೂಡಲೇ ಉಪ್ಪಿಟ್ಟು ಪ್ರೋಗ್ರಾಮಿಗೆ ಬಲಿಯಾದಳು. ಬಂದ ಐದು ಗಂಡುಗಳಲ್ಲಿ ಯಾರೋ ಒಬ್ಬನನ್ನು ಒಪ್ಪಿಕೊಂಡೂ ಬಿಟ್ಟಳು. ಇಲ್ಲದಿದ್ದರೆ ಅವರಪ್ಪ ಸುಮ್ಮನೆ ಬಿಡುವ ಹಾಗೆ ಇರಲಿಲ್ಲವಂತೆ.

‘ಆಬ್ಜೆಕ್ಟಿವ್ ಟೈಪ್ ಕ್ವೆಶ್ಚನ್ಸಿಗೆ ಉತ್ತರ ಕೇಳೋ ಹಾಗೆ ಆಡಿದ್ರು ಕಣೆ. ಈಗ ಬಂದಿದ್ದ ಐದು ಜನರಲ್ಲಿ ಒಬ್ಬನ್ನ ಒಪ್ಕೋ. ಎನಿ ಒನ್. ಡೋಂಟ್ ಸೇ ನನ್!’ ಅಂತ ಒಳ್ಳೆ ಮಾತಲ್ಲಿ ನಂತರ ಅತಿ ಕ್ರೂರತೆಯ ಪ್ರಯೋಗದಿಂದ ಅವಳಿಂದ ಒಂದು ನಿರ್ಧಾರ ಹೊರಡಿಸಿಯೇ ಬಿಟ್ಟರು.

‘ಯಾರಿಗ್ ಹೂಂ ಅಂದೆ ಈಗ?’ ವಿಜಿ ಕೇಳಿದಳು. ‘ಇದ್ದಿದ್ರಲ್ಲಿ ಡೀಸೆಂಟಾಗಿ ಕಾಣೋ ಹುಡುಗ ಒಬ್ಬ ಇದ್ದ. ಸ್ವಲ್ಪ ಆಂಬಿಷಿಯಸ್ ಆಗಿರೋ ಹಾಗಿದಾನೆ. ಅವನನ್ನ ಮದುವೆಯಾದ್ರೆ ನಾನು ಕೆಲಸ ಮಾಡೋಕೆ ಆಗಬಹುದೇನೋ ಅಂತ ಒಂದು ಗೆಸ್ ವರ್ಕ್ ಅಷ್ಟೇ’ ‘ಅವನು ಕೆಲಸ ಮಾಡೋದು ಬ್ಯಾಡ ಅಂದ್ರೆ?’

‘ಬೇಡ ಅಂದ್ರೆ ಒಪ್ಪಿಸೋಕೆ ಬೇರೆ ರೀತೀಲಿ ಟ್ರೈ ಮಾಡ್ತೀನಿ’ ಎಲ್ಲ ಮದುವೆಗಳದ್ದೂ ಇದೇ ಕಥೆಯೇನೋ. ಇಬ್ಬರೂ ಭೇಟಿಯಾದಾಗ ಗಂಡಸು ಮದುವೆಯಾಗೋದ್ ‘ಈ ಹೆಣ್ಣು ಹಿಂಗೇ ಇರ್ತಾಳೆ’ ಅನ್ನೋ ನಂಬಿಕೆಯಿಂದಲಂತೆ. ಹೆಣ್ಣು ಮದುವೆಯಾಗೋದು ‘ಹೆಂಗಿದ್ರೇನು ಆಮೇಲೆ ರಿಪೇರಿ ಮಾಡ್ಕೊಂಡ್ರಾಯ್ತು’ ಅನ್ನೋ ಧೈರ್ಯದ ಮೇಲಂತೆ. ಆದರೆ ಇಬ್ಬರಿಗೂ ವ್ಯತಿರಿಕ್ತ ಫಲಿತಾಂಶಗಳೇ ಸಿಗುತ್ತವಂತೆ.

ವಿಜಿಗೆ ಇದ್ದಷ್ಟು ದಿನ ದಾವಣಗೆರೆ ಉಲ್ಲಾಸದಾಯಕವಾಗಿಯೇ ಇತ್ತು. ಆದರೆ ಇದು ತಾನು ಬಿಟ್ಟು ಹೋದ ಊರಲ್ಲ. ಭಾವುಕವಾಗಿ ಊರಿನ ಬಗ್ಗೆ, ಮನೆ ಊಟದ ಬಗ್ಗೆ ಯೋಚಿಸುವುದರಿಂದ ಮುಂದೆ ನಡೆಯಲು ಸಾಧ್ಯವಿಲ್ಲ. ಸದಾ ಸುರಕ್ಷೆ ಬಯಸುವ ಮನಸ್ಸು ಮತ್ತು ಪರಿಚಿತ ರುಚಿ ಬೇಡುವ ನಾಲಿಗೆ – ಈ ಎರಡನ್ನೂ ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದನ್ನು ಕಲಿತರೆ ಜಗತ್ತನ್ನೇ ಗೆಲ್ಲಬಹುದೇನೋ.

‘ನೀ ಏಳದು ಕರೆಕ್ಟು ಕಣೇ. ಮನೆ ಊಟಕ್ಕೆ ಜೋತು ಬಿದ್ದಿದ್ರೆ, ವೊರಗ್ ಬಿಸ್ಲು ಅಂತ ಕುಂತಿದ್ರೆ ಅಲೆಕ್ಸಾಂಡ್ರು ದ ಗ್ರೇಟು ದೇಶ್-ದೇಶ ಗೆಲ್ಲಕ್ಕೆ ಆಗ್ತಿತ್ತಾ ಏಳು? ಸುಮ್ಕೆ ಬ್ಯಾಳೆ ಸಾರು, ಮೆಣ್ಸಿನ್ಕಾಯಿ ಚಟ್ನಿ, ಮುದ್ದೆ ಅಂತ ಕುಂತಿದ್ರೆ ಈ ಊರ್‍್ನಾಗೇ ಇರ್ಬೇಕಾಗ್ತತಿ. ಸುಮ್ಮುಕ್ ವೋಗೇ ಬೆಂಗ್ಳೂರಿಗೆ. ಅದೇನ್ ಕೆಲ್ಸ ಸಿಕ್ತತೋ ಮಾಡು. ಆಮೇಲಿಂದು ಆಮೇಲ್ ನೋಡ್ಕಣನ’ ಅಂದಳು ಒಬ್ಬ ಗೆಳತಿ.

‘ಕೆರೆಗೆ ಹಾರ’ದ ಭಾಗೀರಥಿಯ ಸಾಲುಗಳು ಪಕ್ಕನೆ ನೆನಪಾದವು ವಿಜಿಗೆ. ‘ನಮ್ಮತ್ತೆ ನಮ್ಮಾವ ಕೆರೀಗ್ ಹಾರ ಕೊಡತಾರಂತ’ ಅಂತ ಭಾಗೀರಥಿ ಗೆಳತಿಯ ಹತ್ತಿರ ಹೇಳಿಕೊಂಡರೆ ‘ಕೊಟ್ಟರೆ ಕೊಡಲೇಳು ಇಟ್‍ಹಾಂಗ ಇರಬೇಕ’ ಅಂತ ಹೇಳಲು ಸಾಧ್ಯವಿದ್ದದ್ದು ಅವಳ ಗೆಳತಿಗೆ ಮಾತ್ರವೇ!

ಬಹಳಷ್ಟು ಜನ ಗೆಳತಿಯರಿಗೆ ಆಗಲೇ ಮದುವೆಯಾಗಿತ್ತು. ಇನ್ನು ಕೆಲವರು ಎಂಗೇಜ್ಮೆಂಟು ಮಾಡಿಕೊಂಡು ಮದುವೆಯ ಡೇಟು ಹತ್ತಿರ ಬರಲು ಕಾಯುತ್ತಾ ಕುಳಿತಿದ್ದರು. ಬದನಿಕಾಯಿ ಪಲ್ಯ, ಮೆಂತ್ಯ ಚಟ್ನಿ, ಮುದ್ದಿ, ರೊಟ್ಟಿ ಟ್ರೇನಿಂಗು ತೆಗೆದುಕೊಳ್ಳುತ್ತಾ, ಸಂಜೆಯಾದರೆ ಬಂಗಾರದ ಅಂಗಡಿಗೆ ಹೋಗಿ ಹೊಸ ಡಿಸೈನುಗಳನ್ನು ನೋಡಿ ಆಯ್ಕೆ ಮಾಡುತ್ತಾ ಕಾಲ ಕಳೆಯುತ್ತಿದ್ದರು.

ಇಲ್ಲಿ ಇರುವುದು ಅನರ್ಥಕಾರೀ ಕೆಲಸ ಅನ್ನಿಸಿತು ವಿಜಿಗೆ. ಇದ್ದಕ್ಕಿದ್ದ ಹಾಗೆ ಎಲ್ಲರಿಗೂ ಇದ್ದ ಸೇತುವೆಯೊಂದು ಮುರಿದು ಬಿದ್ದು ತಾನೊಬ್ಬಳೇ ಒಂದು ದ್ವೀಪವಾದ ಅನುಭವ.

ತನ್ನ ಅಭದ್ರತೆಗಳನ್ನು, ತನ್ನ ಆಲೋಚನೆಗಳನ್ನು ಹೇಳಿಕೊಳ್ಳಲು, ತನ್ನ ಪ್ಲಾನುಗಳನ್ನು ಇನ್ನೂ ಸಾಣೆ ಹಿಡಿದು ಹರಿತ ಮಾಡಲು ಸಮಾನಮನಸ್ಕರು ಇದ್ದ ಹಾಗೆ ಕಾಣಲಿಲ್ಲ.

ಡಾಕ್ಟರು ಎಂಜಿನಿಯರು ಆದವರು ತಮ್ಮ ದಾರಿ ಹಿಡಿದು ಸಾಗಿದ್ದರು. ಇವಳು ಮಾತಾಡುತ್ತಿದ್ದ ಜಗತ್ತಿನ ಬಗ್ಗೆ ಅರಿವೇ ಇರಲಿಲ್ಲ ಅವಳ ಗೆಳತಿಯರಿಗೆ. ತಪ್ಪು ಅವರದ್ದಲ್ಲ. ಆ ಕಾಲಘಟ್ಟದಲ್ಲಿ ತನ್ನನ್ನು ತಾನು ಆಯ್ಕೆಗಳ ಮೂಲಕ ಹೊರತಾಗಿಸಿಕೊಂಡ ಕಾರಣಕ್ಕೆ ಒಬ್ಬಳೇ ನಡೆಯಬೇಕಾದ ದಾರಿಯಲ್ಲಿ ಬಂದು ನಿಂತಿದ್ದಳು.

ಸ್ವಲ್ಪ ದಿನದಲ್ಲೇ ಮುಂದಿನ ದಾರಿ ಹುಡುಕಿಕೊಂಡು ವಿಜಿ ಕೂಡ ಬೆಂಗಳೂರಿಗೆ ಬಂದು ಒಂದು ಪೇಯಿಂಗ್ ಗೆಸ್ಟ್ ಅಕಾಮಡೇಷನ್ನಿಗೆ ಸೇರಿಕೊಂಡಳು. ಎಲ್ಲೆಲ್ಲಿ ನೋಡಿದರೂ ಇಂಗ್ಲೀಷಿನ ದರ್ಬಾರು.

ಕಾಫಿ ಕೊಡೋ ಹುಡುಗನಿಗೂ ತನಗಿಂತ ಹೆಚ್ಚು ಇಂಗ್ಲೀಷು ಬರುತ್ತೆ ಎನ್ನುವ ಸತ್ಯ ದೃಗ್ಗೋಚರವಾದಾಗ ಇನ್ನೂ ಹೆಚ್ಚು ಕೀಳರಿಮೆಯಿಂದ ನರಳಿ ತನ್ನ ಚಿಪ್ಪಿನೊಳಕ್ಕೆ ಹುದುಗಿ ಹೋದಳು. ತನ್ನ ಕೈಲಿ ಏನು ಮಾಡಲೂ ಸಾಧ್ಯವಿಲ್ಲದೇ ಹೋಗಬಹುದು. ಒಂದು ನೌಕರಿಯನ್ನು ಗಿಟ್ಟಿಸಿಕೊಳ್ಳಲೂ ನಾಲಾಯಕ್ ತಾನು ಎನ್ನಿಸಿ ಬಹಳ ಕಷ್ಟವಾಗತೊಡಗಿತು.

ಯಾವುದೋ ಒಂದು ಆಫೀಸಿನಲ್ಲಿ ಪುಟ್ಟ ಕೆಲಸ ಸಿಕ್ಕಿತು. ಅದನ್ನು ಹೇಳಲು ರಶ್ಮಿಗೆ ಫೋನು ಮಾಡಿದರೆ ಅವಳು ಎದೆ ಒಡೆದುಹೋಗುವಂಥಾ ಸುದ್ದಿ ಹೇಳಿದಳು.‘ಇಂದುಮತಿಗೆ ಏನೋ ಆಗಿದೆ ಕಣೇ! ಅವಳ ಫೋಟೊ ಪೇಪರಲ್ಲಿ ಬಂದಿದೆ!’ ‘ಯಾವ್ ಪೇಪರ್ರು?’ ‘ಯಾವ್ದೂಂತ ಗೊತ್ತಿಲ್ಲ. ಕನ್ನಡ ಪೇಪರ್ರು’ ರಶ್ಮಿ ಅನಿವಾಸಿ ಕನ್ನಡಿಗಳಲ್ಲವೇ? ಒಂದಕ್ಷರ ಕನ್ನಡವನ್ನೂ ಓದಲು ಬರುತ್ತಿರಲಿಲ್ಲ.

‘ಯಾವಾಗಿನ ಸುದ್ದಿ ಇದು!’ ‘ಅಯ್ಯೋ ಇದು ಫ್ರೂಟ್ ಪ್ಯಾಕ್ ಮಾಡಿ ಬಂದಿದ್ ಪೇಪರು. ಅದ್ರಲ್ಲಿ ಅವ್ಳ್ ಫೋಟೊ ಇತ್ತು. ಯಾವತ್ತಿಂದು ಅಂತ ಗೊತ್ತಿಲ್ಲ’ ‘ಸುದ್ದಿ ಥರಾ ಇತ್ತಾ?’
‘ಇಲ್ಲ. ಒಂಥರಾ ಪುಟ್ಟದಾಗಿ ಫ್ರೇಮ್ ಹಾಕಿದ್ ಥರಾ ಇತ್ತು’ ‘ಅಯ್ಯೋ ದೇವರೇ! ಏನಾದರೂ ಅನಾಹುತ ಆಯಿತಾ? ಓದ್ ಹೇಳಕ್ಕೆ ಯಾರೂ ಇಲ್ವಾ ಮನೇಲಿ? ಪಕ್ಕದ್ ಮನೇಲಿ ಯಾರನ್ನಾದ್ರೂ ಕೇಳು’

‘ಕನ್ನಡ ಇಲ್ಲಿ ಯಾರ್ಗೂ ಬರಲ್ಲ ಕಣೇ. ನೀನೇ ಸಾಯಂಕಾಲ ಬಾ. ತೋರಿಸ್ತೀನಿ. ನನಗೂ ಅದನ್ನ ನೋಡಿ ಟೆನ್ಷನ್ ಆಗಿದೆ’  ಇಂತಹಾ ಸಮಯದಲ್ಲಿ ಕಾಲ ಮುಂದಕ್ಕೆ ಸರಿಯುವುದಿಲ್ಲ ಎನ್ನುವ ಮಾತು ಅನುಭವಕ್ಕೆ ಬಂದಾಗಲೇ ಅರ್ಥವಾಗುವುದು. ಇಂದುಮತಿ ಧೈರ್ಯವಂತೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಕಾಲದ ಕೈಗೆ ಸಿಕ್ಕ ಎಲ್ಲರ ಧೈರ್ಯವೂ ಚೂರಾಗಿದ್ದನ್ನು ನೋಡಿದ್ದೇವಲ್ಲವೇ? ಅತ್ತಲಿಂದ ರಶ್ಮಿ ಅಳುವುದು ಕೇಳುತ್ತಿತ್ತು. ಎದೆ ಗಟ್ಟಿ ಮಾಡಿಕೊಂಡಳು ವಿಜಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT