ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆಗೆಲಸಕ್ಕೆ ಬೇಕಾಗಿರುವುದು ಸಂಭಾವನೆಯೊಂದೇ ಅಲ್ಲ

Last Updated 24 ಸೆಪ್ಟೆಂಬರ್ 2012, 19:30 IST
ಅಕ್ಷರ ಗಾತ್ರ

ಸುಮಾರು ಮೂರು ದಶಕಗಳ ಹಿಂದಿನ ಮಾತದು. ಮಹಿಳಾ ಸಂಘವೊಂದರ ವಾರ್ಷಿಕ ಸಮಾರಂಭದಲ್ಲಿ ನಾನು ಅತಿಥಿಯಾಗಿ ಪಾಲ್ಗೊಂಡಿದ್ದೆ. ಕಾರ್ಯಕ್ರಮ ಮುಗಿದ ನಂತರ ಅಧ್ಯಕ್ಷರು ತಮ್ಮ ಸಂಘದ ಸದಸ್ಯರನ್ನು ನನಗೆ ಪರಿಚಯಿಸುತ್ತಿದ್ದರು.

ಇವರು ವೈದ್ಯರು, ಇವರು ಅಧ್ಯಾಪಕರು, ಇವರು ವಕೀಲರು -ಹೀಗೆ ತಮ್ಮ ಸದಸ್ಯರ ವ್ಯಕ್ತಿ ಪರಿಚಯವನ್ನು ಅವರವರ ವೃತ್ತಿಯನ್ನು ಸೂಚಿಸುವುದರ ಮೂಲಕ ಮಾಡುತ್ತಾ ಹೋದವರು, ಗುಂಪಿನಲ್ಲಿದ್ದ ತಮ್ಮ  ಸದಸ್ಯೆಯೊಬ್ಬರನ್ನು ಪರಿಚಯ ಮಾಡುವಾಗ ಮಾತ್ರ “ಇವರು ಎಲ್ಲೂ ಕೆಲಸ ಮಾಡುತ್ತಿಲ್ಲ, ಮನೆಯಲ್ಲೆೀ ಇದ್ದಾರೆ”  ಎಂದರು.
 
ತಕ್ಷಣವೇ ಆ ಮಹಿಳೆ  `ಎಲ್ಲೂ ಕೆಲಸ ಮಾಡುತ್ತಿಲ್ಲ ಎಂದು ಯಾಕ್ರೀ ಹೇಳುತ್ತೀರಿ, ನಾನು ಮನೆಯಲ್ಲಿ ಮಾಡುವ ಕೆಲಸಗಳೆಲ್ಲಾ ಕೆಲಸವಲ್ಲವೇ? ಅವುಗಳಿಗೇನೂ ಬೆಲೆಯೇ ಇಲ್ಲವೇ ?~ ಎಂದು ಸ್ವಲ್ಪ ಖಾರವಾಗಿಯೇ ಪ್ರತಿಕ್ರಿಯಿಸಿದಾಗ ಅಲ್ಲಿ ನೆರೆದಿದ್ದವರನ್ನೆಲ್ಲಾ ಅಲುಗಾಡಿಸುವಂತಹ ಸತ್ಯವೊಂದು ಧುತ್ತೆಂದು ಎದುರು ನಿಂತಿತ್ತು.

ಮಹಿಳೆಯರು ಮನೆಯ ಒಳಗೆ ಮಾಡುವ `ಅಗೋಚರ~ ವೇತನರಹಿತ  ಕೆಲಸಗಳನ್ನು ಅಪ್ರಯೋಜಕವೆಂಬಂತೆ ಪರಿಗಣಿಸಿ ಸಮಾಜದ ಉಳಿವಿಗೆ ಮತ್ತು ಅಭಿವೃದ್ಧಿಗೆ ಅದು ನೀಡುವ ಕೊಡುಗೆಯನ್ನು ಸಂಪೂರ್ಣವಾಗಿ ಅಲಕ್ಷಿಸುವ ಧೋರಣೆ ಸಾರ್ವತ್ರಿಕ ಮತ್ತು ಸಾರ್ವಕಾಲಿಕ.

ಹೆಣ್ಣಾಗಿ ಹುಟ್ಟಿದ ಮೇಲೆ ಗೃಹಕೃತ್ಯಗಳನ್ನು ನಿಭಾಯಿಸುವುದು ಮತ್ತು ಕುಟುಂಬದ ಸದಸ್ಯರ ಪಾಲನೆ-ಪೋಷಣೆ ಮಾಡುವುದು ಅವಳ ಆದ್ಯ ಕರ್ತವ್ಯ, ಅದಕ್ಕೆ ವಿಶೇಷ ಮಾನ್ಯತೆ ನೀಡುವ ಅಗತ್ಯವೇನಿದೆ ಎನ್ನುವ ಭಾವನೆಯನ್ನು ಮಹಿಳೆಯರೂ ಸೇರಿದಂತೆ ಈ ಸಮಾಜದಲ್ಲಿ ಬಹು ಮಂದಿ ಬೆಳೆಸಿಕೊಂಡಿದ್ದಾರೆ.

ಆದ್ದರಿಂದಲೇ ಮನೆಗೆಲಸಕ್ಕೆ ಒಂದು ಗುರುತಿಸುವಿಕೆಯನ್ನು ನೀಡಿ, ಅದಕ್ಕೆ ಸೂಕ್ತ ಪ್ರತಿಫಲವನ್ನು ನೀಡಬೇಕೆಂಬ ಸಲಹೆ ಬಂದ ಕೂಡಲೇ ನಮ್ಮ ಸಮಾಜದಲ್ಲಿ ಪ್ರತಿಭಟನೆಯ ಬಿರುಗಾಳಿ ಬೀಸಲಾರಂಭಿಸುವುದು. ಕಳೆದ ಕೆಲ ದಿನಗಳಿಂದ ದೇಶದೆಲ್ಲೆಡೆ ಚರ್ಚೆ, ವಿರೋಧ, ಟೀಕೆ-ಟಿಪ್ಪಣಿಗಳಿಗೆ ಗ್ರಾಸವಾಗಿರುವ ಉದ್ದೇಶಿತ ಮಸೂದೆಯೊಂದರ ಕಥೆಯೂ ಇದೇನೆ.

ಕೇಂದ್ರ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಮಂತ್ರಾಲಯ ಇತ್ತೀಚೆಗೆ ನೀಡಿರುವ ಸೂಚನೆಯ ಪ್ರಕಾರ ಪತಿಯ ಸಂಬಳದಲ್ಲಿ, ಪ್ರತಿ ತಿಂಗಳೂ ಶೇಕಡ 10 ರಿಂದ 20 ರಷ್ಟು ಭಾಗವನ್ನು ಮನೆಯಲ್ಲಿಯೇ ಇರುವ ಪತ್ನಿಯ ಹೆಸರಿನಲ್ಲಿ ತೆರೆಯಲಾಗುವ ಬ್ಯಾಂಕಿನ ಖಾತೆಯಲ್ಲಿಡುವಂಥ ವ್ಯವಸ್ಥೆಯನ್ನು ಜಾರಿಗೆ ತರಲು ಮಸೂದೆಯೊಂದು ಹೊರ ಬೀಳಲಿದೆ. ಮಹಿಳೆಯರು ನಿರ್ವಹಿಸುವ ಎಲ್ಲ ಕೌಟುಂಬಿಕ ಜವಾಬ್ದಾರಿಗಳಿಗೆ ಆರ್ಥಿಕ ಮಾನ್ಯತೆಯನ್ನು ನೀಡುವ ಮಾತಿರಲಿ ಸಾಮಾಜಿಕ ಮನ್ನಣೆಯೂ ಇಲ್ಲ.

ಆಕೆಯನ್ನು `ಗೃಹಿಣಿ~ ಎಂದು ಗುರುತಿಸಿ ನಿರೋದ್ಯೋಗಿಗಳ ಪಟ್ಟಿಗೆ ಸೇರಿಸಲಾಗುತ್ತಿದೆ. ಇದನ್ನು ಕೊನೆಗಾಣಿಸಬೇಕಾದರೆ ಆಕೆ ಮಾಡುವ ಕೆಲಸಕ್ಕೆ ಆರ್ಥಿಕ ಸ್ವರೂಪದ ಪ್ರತಿಫಲ ದೊರೆಯಬೇಕು, ಇಷ್ಟೇ ಅಲ್ಲ `ಗೃಹಿಣಿ~ ಎನ್ನುವ ಪದವನ್ನು ಬಳಸದೆ ಅವರನ್ನು  ಹೌಸ್ ಇಂಜಿನಿಯರ್ಸ್‌  (ಕುಟುಂಬವನ್ನು ನಿರ್ವಹಿಸುವ ಅಭಿಯಂತರು) ಎಂದು ಕರೆಯಬೇಕೆಂಬ ಸಲಹೆಯನ್ನು ಕೂಡ ಸಂಬಂಧಿಸಿದ ಮಂತ್ರಿಗಳು ನೀಡಿದ್ದಾರೆ!

ಮಹಿಳಾ ಸಬಲೀಕರಣದ ದಿಕ್ಕಿನಲ್ಲಿ ಒಂದು ಕ್ರಾಂತಿಕಾರಿ ಹೆಜ್ಜೆ ಎಂದು ಬಿಂಬಿಸಲಾಗುತ್ತಿರುವ ಈ ಉದ್ದೇಶಿತ ಮಸೂದೆಯ ಆಶಯ ಸ್ವಾಗತಾರ್ಹವೇ. ಏಕೆಂದರೆ ಮನೆಯ ಹೊರಗೆ ದುಡಿಯುವ ಮಹಿಳೆಯರಿಗೆ ವೇತನವಷ್ಟೇ ಅಲ್ಲ, ಅನೇಕ ಬಗೆಯ ಸೌಲಭ್ಯಗಳೂ ದೊರೆಯುತ್ತವೆ.

ಆದರೆ, ಹಗಲಿರುಳೆನ್ನದೆ, ರಜಾ ದಿನಗಳಾಗಲಿ, ನಿಗದಿತ ವೇಳಾಪಟ್ಟಿಯಾಗಲಿ ಇಲ್ಲದೆ, ನಿವೃತ್ತಿ ಅಥವಾ ನಿವೃತ್ತಿ ವೇತನದ ಸೌಲಭ್ಯದಿಂದಲೂ ವಂಚಿತಳಾಗಿ ನಿರಂತರವಾಗಿ ದುಡಿಯುತ್ತಾ ಜೀವನವಿಡೀ ಪರಾವಲಂಬಿಯಾಗಿಯೇ ಬದುಕಬೇಕಾದಂಥ ಹೆಣ್ಣಿನ ಸ್ಥಿತಿಯನ್ನು ಊಹಿಸಿಕೊಂಡಿರುವವರೆಷ್ಟು ಮಂದಿ ನಮ್ಮಲ್ಲಿದ್ದಾರೆ? ಹೆಣ್ಣಾದವಳಿಗೆ ತನ್ನದೆಂದು ಹೇಳಿಕೊಳ್ಳುವ ನೆಲೆಯೇ ಇಲ್ಲದೆ ಹೋದರೆ ಸಂಕಷ್ಟ ಪರಿಸ್ಥಿತಿ ಎದುರಾದಾಗ ಆಕೆಯ ನೆರವಿಗೆ ಬರುವ ವ್ಯವಸ್ಥೆಯಿದೆಯೇ ನಮ್ಮಲ್ಲಿ? ಪತಿ ಅಥವಾ ಮಕ್ಕಳ ಆಶ್ರಯದಲ್ಲೇ ಜೀವನವಿಡೀ ಬದುಕಿ ಇದ್ದಕ್ಕಿದ್ದ ಹಾಗೆ ಹೊರಹಾಕಲ್ಪಟ್ಟ ಎಷ್ಟು ಸಾವಿರ ಮಂದಿ ಮಹಿಳೆಯರು ನಮ್ಮ ಸಮಾಜದಲ್ಲಿಲ್ಲ? ಇಂಥ ಪ್ರಶ್ನೆಗಳನ್ನು ಕೇಳುತ್ತಾ ಹೋದರೆ ಪರಾವಲಂಬಿತನದ ನೊಗದಿಂದ ತಪ್ಪಿಸಲು ಮಹಿಳೆಯರಿಗೆ ಆರ್ಥಿಕ ನೆಲೆಯೊಂದನ್ನು ಒದಗಿಸುವ ಪ್ರಯತ್ನ ಸರಿಯಾದದ್ದೇ ಎನಿಸದಿರುವುದಿಲ್ಲ.

ಮಹಿಳೆಯರು ಮನೆಯಲ್ಲಿ ಮಾಡುವ ಪ್ರತಿ ಕೆಲಸಕ್ಕೂ ಬೆಲೆ ಕಟ್ಟಿ ಅದನ್ನು ವೇತನದ ದುಡಿಮೆಯ ಚೌಕಟ್ಟಿನಲ್ಲಿ  ತರುವಂಥ ಪ್ರಯತ್ನ ಸುಲಭಸಾಧ್ಯವಾದುದಲ್ಲ. ಏಕೆಂದರೆ ಗೃಹಕೇಂದ್ರಿತ ದುಡಿಮೆ ಸಮಾಜಗಳ ಇಡೀ ಆರ್ಥಿಕ ವ್ಯವಸ್ಥೆಯನ್ನೇ ಪೋಷಿಸುವಂಥ ಶಕ್ತಿಯನ್ನು ಹೊಂದಿರುವಂತಹುದು ಎಂಬುದು ಕೆಲ ಚಿಂತಕರ ಅಭಿಪ್ರಾಯ. ಮನೆಗೆಲಸಕ್ಕೆ ವೇತನ ನೀಡಬೇಕೆಂಬ ಚಳವಳಿಗೆ 1972 ನೇ ಇಸವಿಯಲ್ಲೆೀ ನಾಂದಿ ಹಾಡಿದ ಅಮೆರಿಕಾದ ಸಾಮಾಜಿಕ ಕಾರ್ಯಕರ್ತೆ ಸೆಲ್ಮಾ ಜೇಮ್ಸನ ಪ್ರಕಾರ ಮನೆಯ ಒಳಗಡೆ ದುಡಿಯುವ ಮಹಿಳೆಯರು ಸಾಂಸಾರಿಕ ಜವಾಬ್ದಾರಿಗಳನ್ನೂ ತಾವು ಹೊತ್ತುಕೊಂಡು, ಇತರರನ್ನು ಅದರಿಂದ ವಿಮುಕ್ತಿಗೊಳಿಸುತ್ತಾರೆ.
 
ಈ ಮೂಲಕ ಮಾರುಕಟ್ಟೆ ಆಧಾರಿತ ಆರ್ಥಿಕ ವ್ಯವಸ್ಥೆಯನ್ನು ನಿರ್ವಹಿಸಲು ಅಗತ್ಯವಾದ ಶ್ರಮಿಕ ವರ್ಗವೊಂದನ್ನು ಸೃಷ್ಟಿಸಿ ಸಮಾಜಗಳ ಬೆಳವಣಿಗೆಗೆ ಕಾರಣರಾಗುತ್ತಾರೆ. ಆದ್ದರಿಂದ ರಾಜ್ಯ ಸರ್ಕಾರಗಳೇ ಮನೆಗೆಲಸದಲ್ಲಿ ನಿರತರಾಗಿರುವ ಮಹಿಳೆಯರಿಗೆ ವೇತನವನ್ನು ನೀಡುವ ಜವಾಬ್ದಾರಿಯನ್ನು ಹೊತ್ತುಕೊಳ್ಳಬೇಕು ಎಂಬುದು ಜೇಮ್ಸನ ವಾದ.

ತಾನು ಸ್ಥಾಪಿಸಿದ ಮನೆಗೆಲಸಕ್ಕೆ ವೇತನ ಅಂತಾರಾಷ್ಟ್ರೀಯ ಒಕ್ಕೂಟದ ಆಶ್ರಯದಲ್ಲಿ ಇತರ ಶಾಖೆಗಳನ್ನೂ ತೆರೆದು ವಿಶ್ವದ ವಿವಿಧ ಭಾಗಗಳಲ್ಲಿ ತನ್ನ ಹೋರಾಟವನ್ನು ಮುಂದುವರೆಸಿದ ಸೆಲ್ಮಾ ಜೇಮ್ಸ ಮನೆಗೆಲಸಕ್ಕೆ ಸಾರ್ವಜನಿಕ ವಲಯದಲ್ಲಿ ಗೋಚರತೆಯನ್ನು ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದರು.

1985ರಲ್ಲಿ ಕೀನ್ಯಾ ದೇಶದ ನೈರೋಬಿ ನಗರದಲ್ಲಿ ನಡೆದ ವಿಶ್ವ ಮಹಿಳಾ ಸಮ್ಮೇಳನದಲ್ಲಿ ಸರ್ಕಾರಗಳು ಮಹಿಳೆಯರ ವೇತನರಹಿತ ದುಡಿಮೆಯನ್ನು ಗಣನೆಗೆ ತೆಗೆದುಕೊಂಡು ಅದನ್ನು ರಾಷ್ಟ್ರೀಯ ದುಡಿಮೆಯ ಅಂಕಿ-ಅಂಶಗಳ ಪರಿಧಿಯೊಳಗೆ ತರಬೇಕೆಂಬ ಜೇಮ್ಸನ ಒಕ್ಕೂಟದ ಬೇಡಿಕೆಗೆ ವಿಶ್ವ ಸಂಸ್ಥೆಯ ಸ್ವೀಕೃತಿ ದೊರೆಯಿತು.
 
ಭಾರತವೂ ಸೇರಿದಂತೆ ಕೆಲ ಆಸಕ್ತ ರಾಷ್ಟ್ರಗಳು ರಚಿಸಿಕೊಂಡ  `ಇಂಟರ್‌ನ್ಯಾಷನಲ್ ವಿಮೆನ್ ಕೌಂಟ್ ನೆಟ್‌ವರ್ಕ್~ ಎಂಬ ಸಂಸ್ಥೆ ಮಹಿಳೆಯರು ಮನೆಯಲ್ಲಿ ಮಾಡುವ ಕೆಲಸಕ್ಕೆ ಮಾನ್ಯತೆ ದೊರೆಯದಿದ್ದರೆ, ಅದು ಸ್ತ್ರೀಯರ ಮತ್ತು ಹೆಣ್ಣು ಮಕ್ಕಳ ಬದುಕನ್ನೇ ಅಪಮೌಲ್ಯಗೊಳಿಸಿದಂತೆ ಎಂದು ವಾದಿಸಿ, ಜೇಮ್ಸ ಪ್ರಾರಂಭಿಸಿದ ಹೋರಾಟವನ್ನು 1995ರಲ್ಲಿ ಬೀಜಿಂಗ್‌ನಲ್ಲಿ ನಡೆದ ವಿಶ್ವ ಮಹಿಳಾ ಸಮ್ಮೇಳನದಲ್ಲೂ ಮುಂದುವರೆಸಿದರು.
 
ಭಾರತದಲ್ಲಿ  ಮನೆಗೆಲಸಕ್ಕೆ ವೇತನದ ಕೂಗು ಸ್ವಲ್ಪ ಗಟ್ಟಿಯಾಗಿ ಕೇಳಿ ಬಂದದ್ದು 1985ರ ವೇಳೆಗೆ. ಮಹಿಳಾ ಚಳವಳಿಯ ಕಾವೇರುತ್ತಿದ್ದ ಕಾಲವದು. ವಿಶ್ವ ಮಹಿಳಾ ದಶಕ ಕೊನೆಗೊಂಡದ್ದೂ ಇದೇ ಇಸವಿಯಲ್ಲಿ ಆ ಕಾಲ ಘಟ್ಟದಲ್ಲಿ ವಿಷಯವನ್ನು ಕುರಿತಂತೆ ವಿಚಾರ ಸಂಕಿರಣಗಳು, ಸಂವಾದಗಳು, ಬರಹ-ಭಾಷಣಗಳು ದೇಶದ  ನಾನಾ ಭಾಗಗಳಲ್ಲಿ ನಡೆದು ಪ್ರಗತಿಪರ ಮನಸ್ಸುಗಳು ಇಂತಹುದೊಂದು ಕ್ರಮದ ಸಕಾರಾತ್ಮಕ ಆಯಾಮಗಳನ್ನು ಕುರಿತು ಚರ್ಚೆಯಲ್ಲಿ ತೊಡಗಿದ್ದವು.

ಆದರೆ ಸಾರ್ವಜನಿಕ ವಲಯದಲ್ಲಿ ಇಂದಿನ ಹಾಗೆ ಅಂದೂ ಕೂಡ ಮಹಿಳೆಯರು ಮನೆಯಲ್ಲಿ ಮಾಡುವ ಕೆಲಸಕ್ಕೆ ವೇತನವನ್ನು ಕೊಡುವ ಸಲಹೆಯೇ ಅನೇಕರಿಂದ ತೀವ್ರ ಸ್ವರೂಪದ ವಿರೋಧವನ್ನು ಎದುರಿಸಿತು.

ಮನೆಗೆಲಸ, ಮಕ್ಕಳ ಪೋಷಣೆ, ಹಿರಿಯರ ಸೇವೆ ಮುಂತಾದ ಕೆಲಸಗಳು ಹೆಣ್ಣಿನ ಬದುಕಿನ ಅವಿಭಾಜ್ಯ ಅಂಗಗಳು, ಅವುಗಳನ್ನು ಮಾಡಬೇಕೇ ಬೇಡವೇ ಎನ್ನುವ ವಿಚಾರದಲ್ಲಿ ಆಯ್ಕೆಯ ಪ್ರಶ್ನೆಯೇ ಇಲ್ಲ, ಏಕೆಂದರೆ ಅವಳು ಆ ಜವಾಬ್ದಾರಿಗಳನ್ನು ಪ್ರೀತಿಯಿಂದಲೂ ಸ್ವಯಿಚ್ಛೆಯಿಂದಲೂ ಹೊರುತ್ತಾಳೆ, ಆದ್ದರಿಂದ ಸಂಬಳ ಕೊಡುವ ವಿಚಾರವೆಲ್ಲಿ ಬಂತು ಎಂದಿತು ಒಂದು ಗುಂಪು. ಮತ್ತೊಂದು ಗುಂಪಿನ ಟೀಕೆಗೆ ಆಹಾರವಾದದ್ದು ಮಹಿಳಾ ಚಳವಳಿ.
 
ಹೆಂಗಸರು ತಮ್ಮ ಕೌಟುಂಬಿಕ ಕೆಲಸಗಳಲ್ಲಿ ಸಂತೃಪ್ತಿಯನ್ನು ಕಂಡುಕೊಂಡಿದ್ದು, ನೆಮ್ಮದಿಯ ಬಾಳನ್ನು ನಡೆಸುತ್ತಿರುವುದನ್ನು ಸಹಿಸಲಾಗದೆ ಈ ಸ್ತ್ರೀವಾದಿಗಳು ಅವರ ಮನಸ್ಸನ್ನು ಕೆಡಿಸುತ್ತಿದ್ದಾರೆ, ಇವರಿಂದ ಸಂಸಾರದಲ್ಲಿದ್ದ ಪ್ರೀತಿ-ಪ್ರೇಮಗಳೇ ನಾಶವಾಗುತ್ತಿದೆ ಎಂದು ತಮ್ಮ ವಾಗ್ಬಾಣಗಳನ್ನು ಮಹಿಳಾ ಚಳವಳಿಯತ್ತ ಎಸೆದವರನೇಕರು.

ಹೆಣ್ಣಿಗೆ ಆಸ್ತಿಯಲ್ಲಿ ಪಾಲು ನೀಡುವ ಸಂದರ್ಭ ಎದುರಾದಾಗ ಅಥವಾ ಆಕೆಯೊಡನೆ ತನ್ನ ಧನ ಸಂಪನ್ಮೂಲವನ್ನು ಹಂಚಿಕೊಳ್ಳುವ ವಿಚಾರ ಬಂದಾಗ ಮಾತ್ರ ಅನೇಕ ಪುರುಷರಿಗೆ ಪ್ರೀತಿ-ಪ್ರೇಮದ ಪ್ರಶ್ನೆಗಳು ಏಳುತ್ತವೆ. ಆದರೆ ನೈಜವಾದ ಪ್ರೀತಿ ಇದ್ದಾಗ ಯಾರೂ ಕೇಳದೆಯೇ, ಕಾನೂನಿನ ಒತ್ತಡವಿಲ್ಲದೆಯೇ ಕೌಟುಂಬಿಕ ಸಂಪನ್ಮೂಲಗಳ ಸಮಾನ ಹಂಚಿಕೆ ಮಾಡಬಾರದೇಕೆ ಎನ್ನುವ ಪ್ರಶ್ನೆಗೂ ಇಂಥವರು ಉತ್ತರ ನೀಡಬೇಕಾಗುತ್ತದೆ.

ಮಹಿಳೆಯರು ಮನೆಯಲ್ಲಿ ಮಾಡುವ ಎಲ್ಲ ಕೆಲಸಗಳನ್ನೂ ಹಣ ತೆತ್ತು ಮನೆಯ  ಹೊರಗೆ  ಅಥವಾ  ಹೊರಗಿನವರಿಂದ  ಮಾಡಿಸಿದಾಗ ಮಾತ್ರ ನಮಗೆ ಅದರ ಮೌಲ್ಯದ ಅರಿವು ಉಂಟಾಗುವುದು. ಸಾಮಾಜಿಕ ಬದುಕು ಸಂಕೀರ್ಣವಾಗುತ್ತಾ ಹೋದ ಹಾಗೆಲ್ಲಾ ಕುಟುಂಬ ನಿರ್ವಹಿಸುತ್ತಿದ್ದ ಬಹುತೇಕ ಜವಾಬ್ದಾರಿಗಳನ್ನು ಇತರ ಸಂಸ್ಥೆಗಳಿಗೆ ವರ್ಗಾಯಿಸ ಬೇಕಾದಂಥ ಪರಿಸ್ಥಿತಿ ಬಂತು ನಿಜ.
 
ಆದರೆ ಇವುಗಳನ್ನು ಬಳಸಬೇಕಾದರೆ ಅದಕ್ಕೆ ಬೆಲೆ ತೆರಬೇಕು. ಹಣವಂತರಿಗೆ ಅಥವಾ ಮಧ್ಯಮ ವರ್ಗದವರಿಗೆ ಇದು ಸಾಧ್ಯವಾಗಬಹುದು. ಆದರೆ ತೀವ್ರ ಸ್ವರೂಪದ ಸಾಮಾಜಿಕ-ಆರ್ಥಿಕ ಅಂತರಗಳಿಂದ ನರಳುತ್ತಿರುವ ಭಾರತೀಯ ಸಮಾಜದಲ್ಲಿ ಎಲ್ಲ ಕುಟುಂಬಗಳಿಗೂ ಬೆಲೆ ತೆತ್ತು ಅವಶ್ಯ ಸೇವೆಗಳನ್ನು ಪಡೆಯಲು ಸಾಧ್ಯವೇ?

ಹೆಂಗಸರಿಗೆ ಮನೆಗೆಲಸಕ್ಕೆ ಸಂಬಳವೇಕೆ ನೀಡಬೇಕು, ಅವರು ಮನೆಗೆಲಸದವರು, ಅಡಿಗೆಯವರು ಹಾಗೂ ಆಯಾಗಳಿಂದ ಮನೆಗೆಲಸ ಮತ್ತು ಮಕ್ಕಳ ಆರೈಕೆಯನ್ನು ಮಾಡಿಸಿ ತಾವು ವೃಥಾ ಕಾಲ ಹರಣ ಮಾಡುತ್ತಾರೆ ಎಂದು ಉದ್ದೇಶಿತ ಮಸೂದೆಯನ್ನು ಟೀಕಿಸಿರುವ ಪುರುಷರ ಹಕ್ಕು ರಕ್ಷಣಾ ವೇದಿಕೆಗಳ ದೃಷ್ಟಿಕೋನ ಅವರ ಅಸೂಕ್ಷ್ಮತೆ ಹಾಗೂ ಸಂಕುಚಿತ ಮನೋಭಾವನೆಗಳಿಗೆ ಸಾಕ್ಷಿಯಾಗಿದೆ.

ತಮ್ಮ ಬದುಕಿನ ಬಹು ಭಾಗವನ್ನು ಮನೆಯ ನಾಲ್ಕು ಗೋಡೆಗಳೊಳಗೆ ಕಳೆಯುತ್ತಾ, ಕುಟುಂಬದ ಸದಸ್ಯರ ಬೇಕು-ಬೇಡಗಳನ್ನು ಗಮನಿಸುತ್ತಾ ನಿರಂತರ ಅಭದ್ರತೆಯ ಸ್ಥಿತಿಯಲ್ಲಿ ಜೀವನವನ್ನು ಸವೆಸುತ್ತಿರುವ ಮಹಿಳೆಯರಿಗೆ ಆರ್ಥಿಕ ಸ್ವರೂಪದ ರಕ್ಷಣೆಯ ಅಗತ್ಯವಿದೆ ಎನ್ನುವುದು ಸರಿಯೇ, ಆದರೆ ಈ ಮಸೂದೆ ಅನೇಕ ಅನುಮಾನಗಳಿಂದ ಸುತ್ತುವರೆದಿದೆ.

ಒಂದು ನಿಶ್ಚಿತ ಮಾಸಿಕ ವೇತನವನ್ನು ಪಡೆಯುತ್ತಿರುವ ಪುರುಷರಿಗೆ ಮಾತ್ರ ಇದು ಅನ್ವಯಿಸುತ್ತದೆಯೇ ಅಥವಾ ಅಸಂಘಟಿತ ವಲಯದಲ್ಲಿ ದುಡಿಯುತ್ತಿದ್ದು, ಸ್ವತಃ ಆರ್ಥಿಕ ಅಭದ್ರತೆಯನ್ನು ಅನುಭವಿಸುತ್ತಿರುವವರೂ ಈ ಮಸೂದೆಯ ವ್ಯಾಪ್ತಿಗೆ ಸೇರುತ್ತಾರೋ ಸ್ಪಷ್ಟವಾಗಿಲ್ಲ.

ಹೆಂಡತಿಯ ಹೆಸರಿನಲ್ಲಿ ಬ್ಯಾಂಕಿನಲ್ಲಿ  ಖಾತೆ ತೆಗೆಯುವುದೇನೋ ಸರಿ, ಆದರೆ ಪ್ರತಿ ತಿಂಗಳೂ ಹಣ ಜಮಾ ಆಗುತ್ತಿದೆಯೋ ಇಲ್ಲವೋ ಎಂದು ಗಮನಿಸುವವರು ಯಾರು? ಪತಿಯ ವೇತನದಿಂದ ನೇರವಾಗಿ ಖಾತೆಗೆ ಹಣ ಹೋದರೆ ಸರಿ. ಇಂತಹುದೊಂದು ವ್ಯವಸ್ಥೆಯನ್ನು ಏರ್ಪಡಿಸಲು ಸರ್ಕಾರವಾಗಲಿ, ಉದ್ಯೋಗ ಸಂಸ್ಥೆಗಳಾಗಲಿ ಸಿದ್ಧವಿದೆಯೇ?

ಅಸಮಾನ ಸಂಬಂಧಗಳಿಗೆ ಹೆಸರಾದ ಭಾರತೀಯ ಕುಟುಂಬ ವ್ಯವಸ್ಥೆಯಲ್ಲಿ ಎಷ್ಟು ಮಂದಿ ಹೆಣ್ಣುಗಳಿಗೆ ತಮ್ಮ ಪಾಲಿಗೆ ಬಂದ ಹಣವನ್ನು ಖರ್ಚು ಮಾಡಲು ಸ್ವಾತಂತ್ರ್ಯವಿದೆ? ಉದ್ದೇಶಿತ ಮಸೂದೆ ಮಹಿಳಾ ಶೋಷಣೆಯ ಮತ್ತೊಂದು ಸಾಧನವಾಗದಂತೆ ನೋಡಿಕೊಳ್ಳುವವರ‌್ಯಾರು?

ಹೆಣ್ಣು ಮಾಡುವ ಮನೆಗೆಲಸಕ್ಕೆ ವೇತನ ನೀಡುವುದರಿಂದಾಗಲಿ, ಆಕೆಯನ್ನು ಬೇರೆ ಬೇರೆ ಹೆಸರುಗಳಿಂದ ಕರೆಯುವುದರಿಂದಾಗಲಿ ಮಹಿಳಾ ಸಮಾನತೆಯನ್ನು ಸಾಧಿಸಲು ಸಾಧ್ಯವಿಲ್ಲ. ಮನೆಗೆಲಸದಲ್ಲಿ ತೊಡಗಿರುವ ಮಹಿಳೆಯರನ್ನೂ ದುಡಿಮೆಗಾರರೆಂದು ಗುರುತಿಸಿ, ಅವರ ಕೆಲಸವನ್ನು ಗೌರವಿಸಿ, ಕಾಯದೆ ಇರಲಿ-ಬಿಡಲಿ ಅವರಿಗೆ ನ್ಯಾಯಬದ್ಧವಾಗಿ ಸಲ್ಲಬೇಕಾದ ಪಾಲನ್ನು ನೀಡುವುದು ನಿಜವಾದ ಮಹಿಳಾ ಸಬಲೀಕರಣ.
 ನಿಮ್ಮ ಅನಿಸಿಕೆ ತಿಳಿಸಿ:
editpagefeedback@prajavani.co.in

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT