ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆಯೊಳಗೆ ಮನೆಯೊಡೆಯ ಇದ್ದಾನೆಯೇ? ಇಲ್ಲವೇ?

Last Updated 6 ಜನವರಿ 2011, 11:25 IST
ಅಕ್ಷರ ಗಾತ್ರ

ವ್ಯತ್ಯಾಸ ಎದ್ದು ಕಾಣುತ್ತಿತ್ತು; ಕಣ್ಣಿಗೆ ಕುಕ್ಕುವಂತಿತ್ತು. ಅದು ಚಿಕ್ಕೋಡಿ ತಾಲ್ಲೂಕಿನ ಕೊನೆಯ ಗ್ರಾಮ. ಹೆಸರು ಬೋರಗಾಂವಿ. ಈ ಗ್ರಾಮದ ಗಡಿಯಲ್ಲಿಯೇ ಮಹಾರಾಷ್ಟ್ರ ರಾಜ್ಯ ಶುರುವಾಗುತ್ತದೆ. ಯಾವುದೋ ಓಬಿರಾಯನ ಕಾಲದಲ್ಲಿ ರಸ್ತೆ ಬದಿ ಹಾಕಿದ ‘ಮಹಾರಾಷ್ಟ್ರ ಶಾಸನ್’ ಎಂಬ ಫಲಕವಿದೆ. ಆದರೆ, ನಮಗೆ ಫಲಕ ನೋಡಿಯೇನೂ ಪಕ್ಕದ ರಾಜ್ಯದ ಗಡಿ ಶುರುವಾಯಿತು ಎಂದು ತಿಳಿಯಬೇಕಿರಲಿಲ್ಲ. ನಮ್ಮ ಕಾಲ ಕೆಳಗಿನ ರಸ್ತೆಯೇ ಅದನ್ನು ಹೇಳಿತು. ಗಡಿಯಲ್ಲಿ ಈಚೆ ಕರ್ನಾಟಕದ ಗುಂಡಿ ಬಿದ್ದ ರಸ್ತೆ. ಆಚೆ ಅದರ ದುಪ್ಪಟ್ಟು ಅಗಲದ ವಿಶಾಲವಾದ     ಅಚ್ಚುಕಟ್ಟಾದ ಡಾಂಬರು ರಸ್ತೆ. ಚಿಕ್ಕೋಡಿಯಿಂದ 30 ಕಿಲೋ ಮೀಟರ್ ದೂರದ ಬೋರಗಾಂವಿಗೆ ಬರುವಾಗ ಗೆಳೆಯ ಗೋಪಾಲ ಹೆಗಡೆ ಸಿಕ್ಕ ಸಿಕ್ಕವರಿಗೆಲ್ಲ ಶಾಪ ಹಾಕಿದ. ಅವನ ಹೊಸ ಕಾರಿನಲ್ಲಿ ನಾವು ಬೋರಗಾಂವಿಗೆ ಹೊರಟಿದ್ದೆವು. ಇಡೀ 30 ಕಿಲೋ ಮೀಟರ್ ರಸ್ತೆಯುದ್ದಕ್ಕೂ ಹಳ್ಳ ಗುಂಡಿಗಳನ್ನು ದಾಟಿಕೊಂಡು ಬಂದೆವು. ಡಾಂಬರು ಅಲ್ಲಿ ಇಲ್ಲಿ ಮರೀಚಿಕೆಯಂತೆ  ಕಾಣುತ್ತಿತ್ತು.

ಬಂದ ದಾರಿಯಲ್ಲಿಯೇ ಹೋದರೆ ನಾವು ಧಾರವಾಡ ಮುಟ್ಟುವುದು ಮಧ್ಯರಾತ್ರಿಯಾದೀತು, ದಾರಿಯಲ್ಲಿ ಕಾರು ಕೆಟ್ಟು ಫಜೀತಿಯಾದೀತು ಎಂದು ಮಹಾರಾಷ್ಟ್ರದ ರಸ್ತೆಯಲ್ಲಿ ಹೋಗಲು ನಿರ್ಧರಿಸಿದೆವು. ಬಂದ ದಾರಿಗಿಂತ 30-40 ಕಿಲೋ ಮೀಟರ್ ರಸ್ತೆ ಹೆಚ್ಚಾಗುತ್ತದೆ ಎಂದು ಗೊತ್ತಿದ್ದೂ ಅದೇ ದಾರಿ ಹಿಡಿದೆವು. ಧಾರವಾಡ ಮುಟ್ಟಿದಾಗ ಇನ್ನೂ ರಾತ್ರಿ 9 ಗಂಟೆಯೂ ಆಗಿರಲಿಲ್ಲ! ಬೋರಗಾಂವಿಯಿಂದ ಕಾಗಲ್ ಬಳಿ ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಪ್ರವೇಶಿಸುತ್ತಿದ್ದಂತೆಯೇ ನನಗೆ ಸೋಜಿಗವಾಯಿತು. ಈ ರಸ್ತೆಯ ಬಗ್ಗೆ ನಾನು ಬಹಳ ಕೇಳಿದ್ದೆ. ಆದರೆ, ಪ್ರಯಾಣ ಮಾಡಿರಲಿಲ್ಲ. ವಾಜಪೇಯಿಯವರು ಪ್ರಧಾನಿಯಾಗಿದ್ದಾಗ ಸುವರ್ಣ ಚತುಷ್ಪಥ ರಸ್ತೆ ಯೋಜನೆಯಡಿ ಪೂಂಜ್ ಲಾಯ್ಡೆ ಕಂಪೆನಿ ಈ ರಸ್ತೆಯನ್ನು ನಿರ್ಮಿಸಿದೆ. ದಕ್ಷಿಣ ಆಫ್ರಿಕಾಕ್ಕೆ ಹೋಗಿ ಬಂದ ನಂತರ ನಾನು ಅಲ್ಲಿನ ರಸ್ತೆಗಳನ್ನು ಹೊಗಳಿ   ಬರೆದಿದ್ದೆ. ಈ ರಸ್ತೆಯನ್ನು ನೋಡಿದ್ದರೆ ಹಾಗೆ ಬರೆಯುತ್ತಿರಲಿಲ್ಲ   ಅನಿಸಿತು.

ದಕ್ಷಿಣ ಆಫ್ರಿಕಾದ ಹಾಗೆ ಇದು ಷಟ್ಪಥ ರಸ್ತೆಯಲ್ಲ. ಆದರೆ, ರಸ್ತೆಯನ್ನು ನಿರ್ಮಿಸಿ ಆರು ವರ್ಷಗಳಾದರೂ ಈಗಷ್ಟೇ ಡಾಂಬರು ಹಾಕಿದಂತೆ ಕಪ್ಪಗೇ ಹೊಳೆಯುತ್ತದೆ. ರಸ್ತೆಯ ಮಧ್ಯದಲ್ಲಿ ಹಾಕಿದ ಬಿಳಿ ಬಣ್ಣದ ಪಟ್ಟಿಗಳೂ ಅಚ್ಚ ಹೊಸದಾಗಿ ಹೊಳೆಯುತ್ತವೆ. ರಸ್ತೆಯನ್ನು ವಿಭಜಿಸುವ ಮೀಡಿಯನ್‌ಗಳ ನಡುವೆ ಎದುರು ಬರುವ ವಾಹನಗಳ ದೀಪ ಕಣ್ಣು ಕುಕ್ಕದಿರಲಿ ಎಂದು ಗಿಡಗಳನ್ನು ಬೆಳೆಸಿದ್ದಾರೆ. ಅಡ್ಡಾದಿಡ್ಡಿ ಬೆಳೆದ ಗಿಡಗಳ ಟೊಂಗೆಗಳನ್ನು ಅಂದವಾಗಿ ಕತ್ತರಿಸಿದ್ದಾರೆ.

ಚಿಕ್ಕೋಡಿಯಿಂದ   ಬೋರಗಾಂವಿವರೆಗೆ ಬರುವಾಗ ಸಿಕ್ಕ ಸಿಕ್ಕವರಿಗೆ ಶಾಪ ಹಾಕಿದ ನಾವು ಈಗ ಪೂಂಜ್ ಲಾಯ್ಡೋ ಕಂಪೆನಿಯನ್ನು ನೆನಪಿಸಿಕೊಂಡೆವು. ‘ಎಂಥ ಒಳ್ಳೆಯ ಕೆಲಸ!’ ಎಂದು ಕೊಂಡಾಡಿದೆವು. ರಸ್ತೆ ಕೆಲಸ ಆಗುವಾಗ ಚಿಕ್ಕೋಡಿಯಲ್ಲಿಯೇ ಇದ್ದ ಶ್ರೀಪಾದ ಯರೇಕುಪ್ಪಿ ಕೂಡ ನಮ್ಮ ಜತೆಗಿದ್ದರು. ‘ಪೂಂಜ್ ಲಾಯ್ಡಿ ಕಂಪೆನಿ ನಿಗದಿಗಿಂತ ಮುಂಚೆಯೇ ಕೆಲಸ ಮುಗಿಸಿತು. ಅದಕ್ಕಾಗಿ ಶೇ 10ರಷ್ಟು ಪ್ರೋತ್ಸಾಹಧನವನ್ನೂ ಸರ್ಕಾರದಿಂದ ಪಡೆಯಿತು. ಆ ಹಣದಲ್ಲಿ ಪುಣೆಯಿಂದ ಬೆಳಗಾವಿ ನಡುವಿನ ಕೆಲವು ಊರುಗಳ ದೇವಸ್ಥಾನಗಳಿಗೆ ಹೆದ್ದಾರಿಯ ಮಾದರಿಯಲ್ಲಿಯೇ ರಸ್ತೆಯನ್ನೂ ಮಾಡಿಕೊಟ್ಟಿತು’ ಎಂದು ಯರೇಕುಪ್ಪಿ ನೆನಪಿಸಿಕೊಂಡರು. ಒಳ್ಳೆಯ ಕೆಲಸ ಮಾಡಿದ ಆ ಕಂಪೆನಿಗೆ ಎಷ್ಟೊಂದು ಹರಕೆ, ಹಾರೈಕೆ ಎಂದುಕೊಂಡೆ.

ಹಾಗೆ ಅಂದುಕೊಳ್ಳುತ್ತಿರುವಾಗಲೇ ಚಿತ್ರದುರ್ಗ-ಹುಬ್ಬಳ್ಳಿ ನಡುವಿನ ಇದೇ ಹೆದ್ದಾರಿ ನೆನಪಾಯಿತು. ಆ ರಸ್ತೆ ಮಾಡುತ್ತಿರುವ ಗುತ್ತಿಗೆದಾರನಿಗೆ, ಬೇಗ ಕೆಲಸ ಮಾಡಿಸದ ಸರ್ಕಾರಕ್ಕೆ ಎಷ್ಟೊಂದು ಜನ ಶಾಪ ಹಾಕುತ್ತಿರಬಹುದು ಅನಿಸಿತು. ಈ ರಸ್ತೆಯ ಕೆಲಸವೂ ಆಗಲೇ ಮುಗಿಯಬೇಕಿತ್ತು. ಕೇಂದ್ರದಲ್ಲಿ ಯುಪಿಎ-1 ಸರ್ಕಾರ ಬಂದ ಕೂಡಲೇ ಮಾಡಿದ ಮೊದಲ ಕೆಲಸ ಸುವರ್ಣ ಚತುಷ್ಪಥ ರಸ್ತೆ ಯೋಜನೆಯನ್ನು ಅಲಕ್ಷಿಸಿದ್ದು. ನಮ್ಮವರೇ ಆದ ಕೆ.ಎಚ್.ಮುನಿಯಪ್ಪ ಆಗ ಭೂ ಸಾರಿಗೆ ಸಚಿವರು. ಅವರು ಮನಸ್ಸು ಮಾಡಿದ್ದರೆ ಈ ಕೆಲಸ ಮುಗಿಸುವುದು ಅಷ್ಟು ಕಷ್ಟವೇನೂ ಇರಲಿಲ್ಲ. ಅವರಿಗೆ ಆಸಕ್ತಿಯೇ ಇರಲಿಲ್ಲವೇ? ಗುತ್ತಿಗೆದಾರ ಹಾಗೂ ಸರ್ಕಾರದ ನಡುವಿನ ಕಾನೂನು ಸಮರವೇ ಅಷ್ಟು ದೀರ್ಘವಾಗಿತ್ತೇ? ರಾಜ್ಯ ಸರ್ಕಾರ ತೂಕಡಿಕೆ ಬಿಟ್ಟು ಏಳಲೇ ಇಲ್ಲವೇ? ಹೇಳುವುದು ಕಷ್ಟ. ಪರಿಣಾಮ ಏನು ಎಂದರೆ ರಸ್ತೆಯ ಕೆಲಸ ಆಗಲಿಲ್ಲ. ಇನ್ನೂ ಯಾವಾಗ ಆಗುತ್ತದೆ ಎಂದೂ ಗೊತ್ತಿಲ್ಲ. ರಸ್ತೆಗಳು ದೇಶದ ಜೀವನಾಡಿ. ಒಳ್ಳೆಯ ಒಂದು ರಸ್ತೆ ಉಳಿಸುವ ಇಂಧನ ದೇಶದ ಸಂಪತ್ತನ್ನು ಉಳಿಸಿದಂತೆ. ಹಾಗೆಂದು ಯಾರಿಗೆ ಹೇಳುವುದು?...

ಮರುದಿನ ಧಾರವಾಡದಿಂದ ಸವದತ್ತಿ ಮೂಲಕ  ರಾಮದುರ್ಗಕ್ಕೆ ಹೊರಟೆ. ಧಾರವಾಡ ಮತ್ತು ಸವದತ್ತಿ ನಡುವಿನ ಅಂತರ 35 ಕಿಲೋ ಮೀಟರ್. ಚಿಕ್ಕೋಡಿ-ಬೋರಗಾಂವಿ ನಡುವಿನದಕ್ಕಿಂತ ಕೆಟ್ಟ ರಸ್ತೆಯದು. ಇಲ್ಲಿಯೂ ಡಾಂಬರು ಮರೀಚಿಕೆ. ಎಲ್ಲೆಂದರಲ್ಲಿ ಹಳ್ಳ ದಿಣ್ಣೆಗಳು ಇವೆ. ಯಾವ ವಾಹನವಾದರೂ ಗಂಟೆಗೆ ಹತ್ತು ಕಿಲೋ ಮೀಟರ್‌ಗಿಂತ ಹೆಚ್ಚು ವೇಗದಲ್ಲಿ ಹೋಗಲು ಸಾಧ್ಯವಿಲ್ಲ. ಕೇವಲ ಎಂಟು ತಿಂಗಳ ಹಿಂದೆ 15 ಕೋಟಿ ರೂಪಾಯಿ ವೆಚ್ಚದಲ್ಲಿ ಈ ರಸ್ತೆಯನ್ನು ನಿರ್ಮಿಸಲಾಗಿತ್ತು; ಅದೂ 80 ಕೋಟಿ ರೂಪಾಯಿ ವೆಚ್ಚದಲ್ಲಿ ಈ ರಸ್ತೆಯ ಅಗಲೀಕರಣ ಕೆಲಸ ಇನ್ನೇನು ಆರಂಭವಾಗಲಿದೆ ಎಂದು ಗೊತ್ತಿದ್ದ  ನಂತರವೂ. ಈಗ ರಸ್ತೆಯ ಬಣ್ಣ ಬಯಲಾಗಿದೆ. ಸವದತ್ತಿಗೆ ಹೋದರೆ ಈ ದುಡ್ಡು ಯಾರ ಜೇಬಿಗೆ ಹೋಗಿದೆ ಎಂದು ಜನರು ರಸ್ತೆಯಲ್ಲಿಯೇ ಮಾತನಾಡಿಕೊಳ್ಳುವುದು ಕೇಳಿಸುತ್ತದೆ. ಆ ಮಾತು ಆಳುವವರ ಕಿವಿಗೆ ಬಿದ್ದಿದೆಯೋ, ಬಿದ್ದರೂ ಕೇಳದಂತೆ ಸುಮ್ಮನಿದ್ದಾರೋ? ಯಾರಿಗೆ ಹೇಳುವುದು?...

ರಾಮದುರ್ಗಕ್ಕೆ ಹೋಗಿ ‘ನಿಮ್ಮ ಊರಿಗೆ ರಸ್ತೆಯೇ ಇಲ್ಲವಲ್ಲ’ ಎಂದು ಅತ್ತಿಗೆಗೆ ಹೇಳಿದೆ. ‘ನೀವು ಪೇಪರ್‌ನಲ್ಲಿ ಏಕೆ ಇದ್ದೀರಿ?   ಬರೆಯಿರಿ.’ ಎಂದು ಅವರು ನನಗೇ ದಬಾಯಿಸಿದರು. ನನ್ನ    ಅಧಿಕಾರದ ಬಗ್ಗೆ ಅವರಿಗಿದ್ದ ಭ್ರಮೆ ನೋಡಿ ಒಳಗೊಳಗೆ ಮುಸಿ ಮುಸಿ ನಕ್ಕೆ. ‘ಪೇಪರ್‌ನಲ್ಲಿ ಬರೆದು ಬಿಟ್ಟರೆ ರಸ್ತೆ ಆಗುತ್ತದೆಯೇ? ಬರೆದು ಬರೆದು ನಮ್ಮ ಕೈ ಸವೆದುವು’ ಎಂದೆ. ‘ಆ ಯಡಿಯೂರಪ್ಪ ಆ ಕಡೆ ಒಂದು, ಈ ಕಡೆ ಒಂದು ಮಗುವನ್ನು ಬಗಲಲ್ಲಿ ಇಟ್ಟುಕೊಂಡು ಚಿತ್ರ ತೆಗೆಸಿಕೊಳ್ಳುತ್ತಾರೆ. ನೀವು ಅದನ್ನು ಪತ್ರಿಕೆಯಲ್ಲಿ ಪ್ರಕಟಿಸುತ್ತೀರಿ. ನಮ್ಮ ಊರುಗಳ ಗೋಳು ಕೇಳುವವರು ಯಾರು’ ಎಂದು ಅವರು ಮತ್ತೆ ನನಗೇ ಜೋರು ಮಾಡಿದರು. ‘ಊರಿಗೆ ಬಂದ ವೇಳೆಯೇ ಸರಿಯಿಲ್ಲ!’ ಎಂದು ನಾನೇ ವಿಷಯ ಬದಲಿಸಿದೆ.

ಆದರೆ ಆ ಹೆಣ್ಣುಮಗಳು ಹೇಳಿದ್ದರಲ್ಲೂ ಅರ್ಥವಿದೆ ಅನ್ನಿಸಿತು. ಸರ್ಕಾರ ವೈಯಕ್ತಿಕ ಲಾಭದ ಯೋಜನೆಗಳ ಮೇಲೆ ಹಣ ಖರ್ಚು ಮಾಡುತ್ತ ಹೋದಂತೆ, ಅದು ವೋಟು ತಂದು ಕೊಡುತ್ತದೆ ಎಂಬ ಭ್ರಮೆಯಲ್ಲಿ ತೇಲುತ್ತ ಇದ್ದಂತೆ ಸಾಮುದಾಯಿಕ ಪ್ರಯೋಜನದ ಯೋಜನೆಗಳ ಕಡೆಗೆ ಗಮನ ಕಡಿಮೆಯಾಗುತ್ತದೆ. ಗಮನ ಇದ್ದರೂ ಖರ್ಚು ಮಾಡಲು ಹಣ ಇರುವುದಿಲ್ಲ. ಕರ್ನಾಟಕದಲ್ಲಿ ಧರ್ಮಸಿಂಗ್ ಅವರು ಲೋಕೋಪಯೋಗಿ ಸಚಿವರಾಗಿದ್ದಾಗ ಮಾತ್ರ ಒಂದಿಷ್ಟು ರಸ್ತೆ ಅಭಿವೃದ್ಧಿ ಕೆಲಸ ಆಯಿತು. ಈಗಿನ ಲೋಕೋಪಯೋಗಿ ಸಚಿವರು ವರ್ಷಕ್ಕೆ ಒಮ್ಮೆ ವರದಿಗಾರರ ಜತೆಗೆ ಮಾತನಾಡಿದಾಗಲೆಲ್ಲ 20,000 ಕೋಟಿ ರೂಪಾಯಿ ವೆಚ್ಚದಲ್ಲಿ ರಸ್ತೆ ಅಭಿವೃದ್ಧಿ ಮಾಡುವ ಮಾತು ಆಡುತ್ತಾರೆ. ಅವರು ಒಮ್ಮೆ ಚಿಕ್ಕೋಡಿಯಿಂದ ಬೋರಗಾಂವಿಗೆ, ಧಾರವಾಡದಿಂದ ಸವದತ್ತಿಗೆ, ಕುಟ್ಟದಿಂದ ವಿರಾಜಪೇಟೆಗೆ ಅಥವಾ ಹಾವೇರಿ ಸುತ್ತಮುತ್ತ ಕಾರಿನಲ್ಲಿ ಅಡ್ಡಾಡಿದರೂ ಸಾಕು ರಸ್ತೆಗಳ ಸ್ಥಿತಿ ಹೇಗಿದೆ ಎಂದು ತಿಳಿಯುತ್ತದೆ. ಗೋಪಾಲ ಮೊನ್ನೆಯಷ್ಟೇ    ಕೊಪ್ಪಳ ಮಾರ್ಗವಾಗಿ ಹೊಸಪೇಟೆಗೆ ಹೋಗಿದ್ದ. ‘ಹೊಸಪೇಟೆ ಇನ್ನೂ ಮೂರು ಕಿಲೋ ಮೀಟರ್ ಇರುವಾಗ ರಸ್ತೆಯಲ್ಲಿ ಎಂಥೆಂಥ ದೊಡ್ಡ ಕಂದಕಗಳು ಬಿದ್ದಿವೆ ಎಂದರೆ ಬಳ್ಳಾರಿ ಜಿಲ್ಲೆಯ ಎಲ್ಲ ಶಾಸಕರನ್ನು, ಸಚಿವರನ್ನು ಅದರಲ್ಲಿ ಹೂತು ಹಾಕಬಹುದು’ ಎಂದು ಕೂಗಾಡುತ್ತಿದ್ದ. ಹೊಸಪೇಟೆಯಿಂದ ಬಳ್ಳಾರಿಗೆ ಹೋಗುವ ರಸ್ತೆಯ ಸ್ಥಿತಿಯದೂ ಅದೇ ಕಥೆ. ಯಾರಿಗೆ  ಹೇಳುವುದು?...

ಬೆಂಗಳೂರಿಗೆ ವಾಪಸು ಬರುವ ರಾತ್ರಿ, ಹುಬ್ಬಳ್ಳಿಯಲ್ಲಿ ಬಿ.ವಿ.ಬಿ ಕಾಲೇಜಿನಿಂದ ಕಿಮ್ಸ್ ಕಾಲೇಜಿನ ವರೆಗೆ ಪಾದಚಾರಿ ರಸ್ತೆಯಲ್ಲಿ ನಡೆದುಕೊಂಡು ಬರುತ್ತಿದ್ದೆ. ಯಾವಾಗಲೋ ಪಾದಚಾರಿ ರಸ್ತೆಯಲ್ಲಿ ಹಾಕಿದ್ದ ಕಾಂಕ್ರೀಟ್ ಚಪ್ಪಡಿಗಳು ಉದ್ದಕ್ಕೂ ಕಿತ್ತುಕೊಂಡು ಬಂದಿವೆ. ಚಪ್ಪಡಿಗಳನ್ನು ಮತ್ತೆ ಮತ್ತೆ ಜಿಗಿದೇ ರಸ್ತೆಯಲ್ಲಿ ನಡೆಯಬೇಕು. ಚರಂಡಿಯಲ್ಲಿ ಆಳೆತ್ತರ ಕಾಂಗ್ರೆಸ್ ಹುಲ್ಲು ಬೆಳೆದಿದೆ. ಪಾದಚಾರಿ ರಸ್ತೆಯ ಆಚೆ ಬದಿಯೂ ಅದೇ ಹುಲ್ಲಿನ ಸಾಮ್ರಾಜ್ಯ. ಹಳ್ಳಿಗಳನ್ನೂ ನಗರಗಳನ್ನೂ ನಾವು ಹೇಗೆ ಹಾಳು ಮಾಡಿದೆವಲ್ಲ ಅನಿಸಿತು. ಅಭಿವೃದ್ಧಿಗೆ ಬಂದ ಹಣ ಎಲ್ಲಿ ಹೋಗುತ್ತದೆ? ಕರ್ನಾಟಕದ ಎರಡನೇ ರಾಜಧಾನಿ ಹುಬ್ಬಳ್ಳಿಯ ಮುಖ್ಯ ರಸ್ತೆಯ ಪಾಡೇ ಇದಾದರೆ ಒಳಗಿನ ರಸ್ತೆಗಳ ಕಥೆ     ಹೇಗಿರಬೇಡ?

ನಗರಾಭಿವೃದ್ಧಿ ಸಚಿವ ಸುರೇಶಕುಮಾರ್  ಪಾಲಿಕೆಗಳಿಗೆ ಕೋಟಿ ಕೋಟಿ ದುಡ್ಡು ಕೊಟ್ಟಿದ್ದಾರೆ ಅಥವಾ ಹಾಗೆಂದು ಅವರು ಹೇಳುತ್ತಿದ್ದಾರೆ. ಸ್ವಚ್ಛತೆ ಕಾಪಾಡುವ ಪಾಲಿಕೆಗಳಿಗೆ ಬಹುಮಾನ ಕೊಡುವುದಾಗಿಯೂ ಮೊನ್ನೆ ಪ್ರಕಟಿಸಿದ್ದಾರೆ. ಹುಬ್ಬಳ್ಳಿ ರಸ್ತೆಯನ್ನು ಒಂದು ಸಾರಿ ಬಂದು ಅವರೇ ನೋಡಬೇಕೇ? ಅವಳಿ ನಗರದಲ್ಲಿ ಮೇಯರ್ ಇಲ್ಲವೇ? ಪುರಪಿತೃಗಳು ಇಲ್ಲವೇ? ಆಯುಕ್ತರು ಎಂದು ಸರ್ಕಾರದ ಒಬ್ಬ ಪ್ರತಿನಿಧಿ ಇಲ್ಲವೇ? ಇದನ್ನೆಲ್ಲ ಯಾರಿಗೆ ಕೇಳುವುದು?...

ಕೆಲವು ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಗುಂಡಿ ಬಿದ್ದ  ರಸ್ತೆಗಳಲ್ಲಿ ಬಿಜೆಪಿಯ ಧುರೀಣರೊಬ್ಬರು ಗಿಡಗಳನ್ನು ನೆಟ್ಟು ಆಗಿನ ಕಾಂಗ್ರೆಸ್ ಸರ್ಕಾರವನ್ನು ಅಣಕಿಸಿದ್ದರು. ‘ಎಂಥ ಒಳ್ಳೆಯ ಐಡಿಯಾ?’ ಎಂದು ನಾನು ಅವರನ್ನು ಅಭಿನಂದಿಸಿದ್ದೆ. ಈಗ ರಾಜ್ಯದಲ್ಲಿ ಬಿಜೆಪಿ ಸರ್ಕಾರವೇ ಇದೆ. ಮೊನ್ನೆ ಬಿದ್ದ ಒಂದೇ ಮಳೆಗೆ ರಸ್ತೆಗಳಲ್ಲಿ ಅಡಗಿದ್ದ ಗುಂಡಿಗಳು ಎದ್ದು ಕುಳಿತಿವೆ. ಪಾಲಿಕೆಗೆ ಚುನಾವಣೆ ನಡೆಯುವುದಕ್ಕಿಂತ ಮುಂಚೆ ಒಳ್ಳೆಯ ರಸ್ತೆಗಳ ಮೇಲೆ ಮತ್ತೆ ಮತ್ತೆ ಹಾಕಿದ್ದ ಡಾಂಬರು ಹರಿದುಕೊಂಡು ಹೋಗಿದೆ. ಈ ಗುಂಡಿಗಳಲ್ಲಿ ತಾವೂ ಗಿಡ ನೆಟ್ಟು ಬಿಜೆಪಿಯವರನ್ನು  ಅಣಕಿಸಬಹುದು ಎಂಬುದೂ ವಿರೋಧ ಪಕ್ಷಗಳಿಗೆ ಹೊಳೆಯುತ್ತಿಲ್ಲ...

ಮನೆಯೊಳಗೆ ಮನೆಯೊಡೆಯ ಇಲ್ಲದೇ ಇದ್ದರೆ ಹೊಸ್ತಿಲಲ್ಲಿಯೇ ಹುಲ್ಲು ಬೆಳೆಯುತ್ತದೆ ಎಂದರು ಬಸವಣ್ಣ. ಮನೆಯೊಳಗೆ ಮನೆಯೊಡೆಯ ಇದ್ದಾನೆಯೇ? ಇಲ್ಲವೇ? ಗೊತ್ತಿಲ್ಲ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT