ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರುಕಳಿಕೆ – ಮರುಗಳಿಕೆ

Last Updated 18 ಡಿಸೆಂಬರ್ 2016, 5:15 IST
ಅಕ್ಷರ ಗಾತ್ರ

ಇತಿಹಾಸವು ಮರುಕಳಿಸುವ ಸ್ವ–ಭಾವದ್ದು. ಆದುದರಿಂದಲೇ ‘ಇತಿಹಾಸಚಕ್ರ’ ಎನ್ನುತ್ತೇವೆ. ಚಕ್ರಕ್ಕೆ ತನ್ನಲ್ಲೇ ತಾನು ಉರುಳುತ್ತಿರುವ, ತನ್ನಲ್ಲೇ ಮರುಕಳಿಸುತ್ತಿರುವ ಅನುಭವ!

ಚಕ್ರವು ಮುಂದೆ ಸಾಗುತ್ತದೆಯಾದರೂ ಹಾಗೆ ಸಾಗುತ್ತಿರುವ ಅನುಭವವೂ ಕೂಡ ತನ್ನೊಳಗೇ ತಾನು ಉರುಳದೆ ಉಂಟಾಗುವಂತಿಲ್ಲ. ಮನುಷ್ಯರಲ್ಲಿ ಸಹಜವಾಗಿರುವ ಅನುಕರಣ ಪ್ರವೃತ್ತಿ, ತಾವು ಕಂಡದ್ದನ್ನು ಕೇಳಿದ್ದನ್ನು ಇನ್ನೊಂದರೊಡನೆ ಹೋಲಿಸಿ; ಅದರಂತೆ ಇದು ಇದೆ ಅಥವಾ ಇಲ್ಲ, ಅದೇ ಇಲ್ಲಿ ಮರುಕಳಿಸಿದೆಯೋ ಎಂದು ತೂಗಿ ನೋಡುವ ಪ್ರವೃತ್ತಿ, ತಾವು ಮಾಡುತ್ತಿರುವುದಕ್ಕೆ ಹಿನ್ನೆಲೆಯಾಗಿ ಒಂದು ಪ್ರೇರಣೆ – ಒಂದು ಪ್ರಚೋದನೆ ಇರುತ್ತದೆ ಎಂಬಂಥ ತಿಳಿವಳಿಕೆ – ಇವೆಲ್ಲವೂ ಇತಿಹಾಸದ ಮರುಕಳಿಕೆಯ ಗುಣವನ್ನೇ ಸೂಚಿಸುತ್ತವೆ.

ವ್ಯಕ್ತಿಗಳ ನೆಲೆಯಲ್ಲಿ ನೋಡಿದರೆ ಕೆಲವರನ್ನು ತಮ್ಮ ಮಾದರಿಯಾಗಿ ಕಲ್ಪಿಸಿಕೊಂಡು ಅವರಂತೆ ತಮ್ಮ ವ್ಯಕ್ತಿತ್ತ್ವವನ್ನು ರೂಪಿಸಿಕೊಳ್ಳುವ ಪ್ರಯಾಸವಾಗಿಯೂ ಇದು ಕಾಣಿಸುತ್ತದೆ. ಅಂದರೆ ತನ್ನನ್ನೇ ತಾನು ಆ ಇನ್ನೊಬ್ಬನಂತೆ– ಇನ್ನೊಬ್ಬಳಂತೆ ಮರುಕಳಿಸಿಕೊಳ್ಳುವುದು! ಇದೊಂದು ತನ್ನದೇ ‘ಸಾಧ್ಯತೆ’ ಕೂಡ! ಹೀಗೆನ್ನುವಾಗ ‘ವಾಸ್ತವ’ಕ್ಕೆ ‘ಪ್ರತೀಕ’ದ ಗುಣ ಬಂದುಬಿಡುತ್ತದೆ!

‘ವಾಸ್ತವ’ವೆಂದರೆ ನಾವು ಕಂಡದ್ದು, ಕೇಳಿದ್ದು; ನಮಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ ನಾವು ಅನುಕರಿಸುವಂಥದು. ಹೊರನೋಟದ ಅನುಕರಣೆ. ‘ಪ್ರತೀಕ’ವೆಂದಾಗ ಅದು ನಮಗೆ ಪ್ರಜ್ಞಾಪೂರ್ವಕವಾಗಿ ಮಾದರಿಯಾಗಿ ಕಾಣಿಸಿದ್ದು, ಹಾಗೆ ಕಾಣಿಸಿ ನಮ್ಮ ಉಪಾಸನೆಗೆ ಯೋಗ್ಯವಾದ್ದು ಮತ್ತು ನಮ್ಮ ಉಪಾಸನೆಯ ಮೇಲಿನಿಂದ ನಮ್ಮನ್ನು ಅದರಂತೆ ಮಾಡಬಲ್ಲದ್ದು ಎಂದು.

ನಮ್ಮೊಳಗಿರುವ, ಅದರಂತೆ ಆಗಬಲ್ಲ ನಮ್ಮ ಅಂತಃಶಕ್ತಿಯನ್ನು ಉದ್ದೀಪಿಸುವಂಥದು ಎಂದು. ಹೊರನೋಟದ ಅನುಕರಣೆಗಿಂತ ಹೆಚ್ಚಾಗಿ ಒಳನೋಟದ ತಾದಾತ್ಮ್ಯವನ್ನು ಸಾಧಿಸುವುದಕ್ಕೆ ಅನುವು ಮಾಡಿಕೊಡಬಲ್ಲದು ಎಂದು. ಈ ಅರ್ಥದಲ್ಲಿಯೂ, ಅದು ತನ್ನನ್ನೇ ನಮ್ಮಲ್ಲಿ ಮರುಕಳಿಸಿಕೊಳ್ಳುತ್ತದೆ ಎಂದಾಗಿ, ಇತಿಹಾಸದ ಮರುಕಳಿಕೆಯ ಸ್ವಭಾವವು ತನ್ನ ಲೌಕಿಕ ನೆಲೆಯನ್ನು ಕಳೆದುಕೊಳ್ಳದೆ ಆಧ್ಯಾತ್ಮಿಕ ನೆಲೆಯನ್ನು ಪಡೆದುಕೊಳ್ಳುತ್ತದೆ. ಆಧ್ಯಾತ್ಮಿಕ ನೆಲೆ ಎಂದರೆ ಒಳನೋಟದ ನೆಲೆ. ತಾದಾತ್ಮ್ಯದ ನೆಲೆ. ನಮ್ಮ ಕಲ್ಪಿತ ಮಿತಿಯನ್ನು ಮೀರಿ ಅವನಂತೆ ಆಗಬಲ್ಲೆವು ಎಂಬ ನೆಲೆ. ಅವನಂತೆ ಆಗುವುದೇ ಅವನ ಅನುಗ್ರಹ ಎಂಬ ನೆಲೆ.

ಏಕಲವ್ಯನ ಸಂದರ್ಭದಲ್ಲಿ ಈ ತಾದಾತ್ಮ್ಯ ಸಂಭವಿಸಿಬಿಟ್ಟಿತ್ತು. ಮತ್ತು ಒಂದು ಅನೂಹ್ಯವಾದ ರೀತಿಯಲ್ಲಿ ಒಂದು ಹೆಜ್ಜೆ ಮುಂದೆ ಹೋಗಿತ್ತು. ಏಕಲವ್ಯನ ಕಥೆ ಆಧ್ಯಾತ್ಮಿಕ ನೆಲೆಯ ಕಥೆಯೂ ಆಗಿರುವುದರಿಂದ, ಅದು ಸೂಕ್ಷ್ಮವಾಗಿ ಕಾಡುತ್ತಲೇ ಇರುತ್ತದೆ. ಕಾಡುತ್ತಲೇ ಮನಸ್ಸುಗಳನ್ನು ಇನ್ನಷ್ಟು ಸೂಕ್ಷ್ಮಗೊಳಿಸುತ್ತಲೇ ಇರುತ್ತದೆ. ಆದುದರಿಂದಲೇ ಕಥೆ ಬೇರೆ ಬೇರೆ ರೀತಿಗಳಲ್ಲಿ ವ್ಯಕ್ತಗೊಳ್ಳುತ್ತಲೇ ಇರುತ್ತದೆ.

ಮಹಾಭಾರತದಲ್ಲಿ ಬಂದಿರುವ ವಿವರಗಳಿಗಿಂತ ತುಸು ಭಿನ್ನವಾಗಿ ಜೈನಪರಂಪರೆಯಲ್ಲಿ ಏಕಲವ್ಯನ ಕಥೆ ಕಾಣಿಸಿಕೊಂಡಿದೆ. ಅಲ್ಲಿ ಏಕಲವ್ಯ ಎಂಬ ಹೆಸರಿಲ್ಲ. ‘ಭೀಮಲ’ ಎಂಬ ಭಿಲ್ಲ ಹುಡುಗನ ಕಥೆ ಅದು. ಆದರೆ ಕಥೆ ಏಕಲವ್ಯನದೇ. ಹೇಮ ವಿಜಯನೆಂಬ ಜೈನ ವಿದ್ವಾಂಸನ ‘ಕಥಾರತ್ನಾಕರ’ದಲ್ಲಿ ಕಾಣಿಸಿಕೊಳ್ಳುವ ಕಥೆ ಅದು. ಅದು ಹೀಗಿದೆ:

ಹಸ್ತಿನೆಯ ರಾಜಕುಮಾರ ಅರ್ಜುನ. ಗುರು ದ್ರೋಣನಲ್ಲಿ ಬಿಲ್ವಿದ್ಯೆಯನ್ನು ಶ್ರದ್ಧೆಯಿಂದ ಸಾಂಗೋಪಾಂಗ ಕಲಿತಿದ್ದಾನೆ. ತನ್ನ ಶ್ರದ್ಧೆ– ಅಭ್ಯಾಸಗಳಿಂದ ಅರ್ಜುನ, ದ್ರೋಣನ ಇನ್ನೊಂದು ಮೂರ್ತಿಯಂತೆಯೇ ಆಗಿಬಿಟ್ಟಿದ್ದಾನೆ. (ಗಮನಿಸಿ: ದ್ರೋಣನ ಇನ್ನೊಂದು ಮೂರ್ತಿ!) ಗುರುವಿಗೆ ರಾಜೋಚಿತವಾದ ಗುರುದಕ್ಷಿಣೆಯನ್ನೂ ಕೊಟ್ಟಿದ್ದಾನೆ. ಇವೆಲ್ಲದರಿಂದ ಸಂತೃಪ್ತನಾದ ದ್ರೋಣನಿಂದ, ಲೋಕದಲ್ಲಿ ತನ್ನಂಥ ಇನ್ನೊಬ್ಬ ಬಿಲ್ಗಾರನಿರಬಾರದೆಂಬ ಅತಿ ಮಹತ್ತ್ವಾಕಾಂಕ್ಷೆಯ ವರವನ್ನೂ ಅರ್ಜುನ ಪಡೆದುಕೊಂಡಿದ್ದಾನೆ.

ಹೀಗಿರಲಾಗಿ, ಗಂಗಾ ಬಯಲಿನ ಕಡೆಯ ಭಿಲ್ಲರ ಹುಡುಗನೊಬ್ಬ – ಅವನ ಹೆಸರು ‘ಭೀಮಲ’ – ದ್ರೋಣನಲ್ಲಿಗೆ ಬಂದು, ತಾನು ದ್ರೋಣನನ್ನು ತನ್ನ ಗುರುವಾಗಿ ಭಾವಿಸುತ್ತಿರುವೆನೆಂದೂ, ತನ್ನ ಶಿಷ್ಯಭಾವವನ್ನು ದ್ರೋಣನು ಒಪ್ಪಿಕೊಳ್ಳುವ ಕೃಪೆ ಮಾಡಿದರೆ ತಾನು ಧನ್ಯನೆಂದೂ ಕಳಕಳಿಯಿಂದ ಪ್ರಾರ್ಥಿಸುತ್ತಾನೆ. ಗುರುದ್ರೋಣ ಈ ಬಿನ್ನಹವನ್ನು ಅಂಗೀಕರಿಸುತ್ತಾನೆ. ಹೀಗೆ ದ್ರೋಣ–ಭೀಮಲರ ಅಗೋಚರ ಗುರು–ಶಿಷ್ಯಸಂಬಂಧವೊಂದು ಬೆಳೆಯತೊಡಗುತ್ತದೆ. ಭೀಮಲ, ಗಂಗಾತೀರದ ತನ್ನ ಕಾಡಿಗೆ ತೆರಳಿ, ತಾನಿದ್ದಲ್ಲೇ ಗುರುವಿನ ಮಣ್ಣಿನ ಮೂರ್ತಿಯನ್ನು ರಚಿಸಿ, ಅದರ ಸನ್ನಿಧಿಯಲ್ಲಿ ತನ್ನ ಬಿಲ್ಗಾರಿಕೆಯ ಅಭ್ಯಾಸದಲ್ಲಿ ತತ್ಪರನಾಗುತ್ತಾನೆ. ತನ್ನ ಉತ್ಕಟವಾದ ಶ್ರದ್ಧೆಯಿಂದ ಈ ಭಿಲ್ಲ ಹುಡುಗ ಇನ್ನೊಬ್ಬ ಅರ್ಜುನನಂತೆ ಆಗಿಬಿಡುತ್ತಾನೆ. (ಗಮನಿಸಿ: ಅರ್ಜುನನ ಇನ್ನೊಂದು ಮೂರ್ತಿ!)

ಒಮ್ಮೆ ದ್ರೋಣ–ಅರ್ಜುನ ಗಂಗೆಯತ್ತ ತೆರಳುತ್ತಾರೆ. ಜೊತೆಗೆ ಅರ್ಜುನನ ನಾಯಿ. ಮುಂದೆ ಸಾಗುತ್ತಿದ್ದ ನಾಯಿ ಇದ್ದಕಿದ್ದಂತೆ ಬಾಯ್ತುಂಬ ಬಾಣಗಳನ್ನು ಹೊತ್ತು ಹಿಂದಕ್ಕೋಡಿ ಬಂತು. ಅದರ ಮುಖ, ಹಲ್ಲು, ನಾಲಗೆ ಎಲ್ಲೂ ಗಾಯಗಳಿಲ್ಲ. ಆದರೆ ಬಾಯ್ತುಂಬ ಬಾಣಗಳು. ಚಕಿತನಾದ ಅರ್ಜುನ ಇಂಥ ಬಿಲ್ವಿದ್ಯೆ ತನಗೆ ಮಾತ್ರ ಸಾಧ್ಯ; ತನ್ನಂಥ ಇನ್ನೊಬ್ಬ ಯಾರು ಎಂದು ಹುಡುಕುತ್ತ ಭೀಮಲನನ್ನು ಭೆಟ್ಟಿಯಾಗುತ್ತಾನೆ.

ಅರ್ಜುನನಿಗೆ ಎಲ್ಲವೂ ತಿಳಿದುಹೋಯಿತು. ಅವನು ಗುರುವನ್ನು ಆಕ್ಷೇಪಿಸಿದ. ದ್ರೋಣ: ಈ ಬಗೆಯ ಸಿದ್ಧಿಯು ಭೀಮಲನ ಉತ್ಕಟವಾದ ಗುರುಭಕ್ತಿಯ ಫಲ ಎನ್ನುತ್ತಾನೆ. ಈ ಹಂತದಲ್ಲಿ ಅರ್ಜುನ, ಭೀಮಲನೊಡನೆ ಸ್ನೇಹದಿಂದೆಂಬಂತೆ ಮಾತನಾಡುತ್ತ, ಅವನ ಗುರುಭಕ್ತಿಯನ್ನು ಹೊಗಳುತ್ತ, ಇಂಥ ಸಿದ್ಧಿಯನ್ನು ಅನುಗ್ರಹಿಸಿದ ಆ ಗುರುಮೂರ್ತಿಯನ್ನು, ಶಿಷ್ಯನಾದವನು ತನ್ನ ಬಲಗೈಯ ಹೆಬ್ಬೆರಳನ್ನು ಅರ್ಪಿಸಿ ಪೂಜಿಸುವುದು ಪೂಜೆಗಳಲ್ಲೇ ಶ್ರೇಷ್ಠವಾದುದೆಂದು ಸೂಚಿಸುತ್ತಾನೆ. ಮುಗ್ಧ ಭೀಮಲ ಈ ಮಾತನ್ನು ನಂಬಿ ಹಾಗೆಯೇ ಆಗಲೆಂದು ತನ್ನ ಹೆಬ್ಬೆರಳನ್ನು ಅರ್ಪಿಸಿಬಿಡುತ್ತಾನೆ! ದ್ರೋಣನ ಮೂರ್ತಿ ಮತ್ತು ಮೂರ್ತಿಮತ್ತಾದ ದ್ರೋಣ – ಇವರ ಮುಂದೆಯೇ ಇದು ನಡೆದುಹೋಗುತ್ತದೆ!

ದ್ರೋಣನಿಗೆ ಒಳ–ಸುಳಿಗಳು ಅರ್ಥವಾದವು. ಅರ್ಜುನನನ್ನು ಅವನು ಆಕ್ಷೇಪಿಸಿದ. ಅವನ ಮಾತ್ಸರ್ಯಕ್ಕಾಗಿ; ಭೀಮಲನಿಗೆ ಮಾಡಿದ ದ್ರೋಹಕ್ಕಾಗಿ; ಜಾಣತನವು ಮುಗ್ಧತೆಯನ್ನು ತನ್ನ ಸ್ವಾರ್ಥಕ್ಕಾಗಿ ಬಳಸಿಕೊಂಡುದಕ್ಕಾಗಿ. ಅಲ್ಲದೆ ಭೀಮಲನ ಮೂಲಕ ಭಿಲ್ಲರೆಲ್ಲರಿಗೆ ವರವೊಂದನ್ನು ದ್ರೋಣ ನೀಡುತ್ತಾನೆ. ಅದೇನೆಂದರೆ – ಹೆಬ್ಬೆರಳು ಇಲ್ಲದಿದ್ದರೂ; ಅದು ಇದ್ದರೆ ಹೇಗೋ ಹಾಗೆ ಅಷ್ಟೇ ಸಮರ್ಥವಾಗಿ ತೋರ್ಬೆರಳು ಮತ್ತು ನಡುಬೆರಳುಗಳ ಬಲದಿಂದ ಈ ಭಿಲ್ಲ ಹುಡುಗರು ಇನ್ನು ಮುಂದೆ ಬಿಲ್ಗಾರಿಕೆಯನ್ನು ಮೆರೆಸುವಂತೆ ಆಗಲಿ ಎಂದು. ಅದರಂತೆ ಈಗಲೂ ಭಿಲ್ಲರು ಹೆಬ್ಬೆರಳಿನ ಸಹಾಯವಿಲ್ಲದೆ ಬಿಲ್ಗಾರಿಕೆಯನ್ನು ಸಮರ್ಥವಾಗಿಯೇ ನಡೆಸುವರು ಎಂದು ಸೂಚಿಸುತ್ತ ಕಥೆ ಮುಗಿಯುತ್ತದೆ.

ಮಹಾ ಭಾರತದ ವ್ಯಾಖ್ಯೆ – ‘ಭಾರತ ಭಾವ ದೀಪ’ಕ್ಕೆ ಈ ಕಥೆಯ ಸುಳಿವು ಸಿಕ್ಕಿದೆ. ‘ಸ ಸತ್ಯಸಂಧಂ ನೈಷಾದಿಂ ದೃಷ್ಟ್ಯಾ ಪ್ರೀತೋsಬ್ರವೀದಿದಂ | ಏವಂ ಕರ್ತವ್ಯಮಿತಿ ವಾ ಏಕಲವ್ಯ ಮಭಾಷತ||’ ಎಂಬೊಂದು ಪದ್ಯವನ್ನು ಕೆಲವರು ಪಠಿಸುವರು ಎನ್ನುತ್ತದೆ ವ್ಯಾಖ್ಯಾನ. ಸತ್ಯನಿಷ್ಠನಾದ ಏಕಲವ್ಯನನ್ನು ಪ್ರೀತಿಯಿಂದ ನುಡಿಸುತ್ತ ಇನ್ನು ಮುಂದೆ ಬಿಲ್ಗಾರಿಕೆಯನ್ನು ಹೀಗೆ ನಡೆಸು ಎಂದು ಗುರು ದ್ರೋಣ ತಿಳಿಸಿಕೊಟ್ಟನು ಎನ್ನುವುದು ಪದ್ಯದ ಅರ್ಥ.

‘ಹೀಗೆ ನಡೆಸು’ ಎಂದರೆ ಹೇಗೆ? ತೋರ್ಬೆರಳು – ನಡುಬೆರಳುಗಳಿಂದ ಬಾಣ ಪ್ರಯೋಗವನ್ನು ನಡೆಸುವ ಬಗೆಯನ್ನು ತಾನು ಅಭಿನಯಿಸಿ ತೋರಿಸಿದನು – ತರ್ಜನೀ ಮಧ್ಯಮಾಭ್ಯಾಂ ಶರಂ ಧೃತ್ತ್ವಾಜ್ಯಾಕರ್ಷಣಂ ಕರ್ತವ್ಯ ಮಿತಿ ಅಭಿನೀಯ ದರ್ಶಯತಿ – ಎಂದು ವ್ಯಾಖ್ಯಾನವು ವಿವರಿಸುತ್ತದೆ ಕೂಡ. ‘ಅಭಿನಯಿಸಿ ತೋರಿಸಿದನು’ ಎನ್ನುವ ಮಾತು ಮುಖ್ಯ. ಅಷ್ಟುಹೊತ್ತು ಗುರುವಿಗೂ ಹೆಬ್ಬೆರಳು ಕತ್ತರಿಸಲ್ಪಟ್ಟಂತೆ ಅಲ್ಲವೆ!
ಈ ಕಥೆಯಲ್ಲಿ ಎಷ್ಟೊಂದು ಮೂರ್ತಿಗಳು! ಎಷ್ಟೊಂದು ಮರುಕಳಿಕೆಗಳು!

ದ್ರೋಣನಿಂದ ನೇರವಾಗಿ ಕಲಿತ ಅರ್ಜುನ ದ್ರೋಣನದೇ ಇನ್ನೊಂದು ಮೂರ್ತಿ! ಇನ್ನೊಂದು ಮುಖ. ಹಾಗೆ ನೇರವಾಗಿ ಕಲಿಯದ ಭೀಮಲ ತನ್ನ ಭಾವ ಬಲದಿಂದ – ಅರ್ಜನನ ಇನ್ನೊಂದು ಮೂರ್ತಿ! ದ್ರೋಣನದೇ ಒಂದು ಮಣ್ಣಿನ ಮೂರ್ತಿ – ಭೀಮಲನ ಮುಂದೆ. ಆ ಮೂರ್ತಿ ದ್ರೋಣನದೇ ಆದರೂ ಭೀಮಲನ ಒಳಮನದಲ್ಲಿದ್ದ ಮೂರ್ತಿ ಅರ್ಜುನನದೇ.

ಪ್ರತಿಮೂರ್ತಿಗಳಂತೆಯೇ ಆದರೂ ಈ ಮರುಕಳಿಕೆಗಳಲ್ಲಿ ಎಷ್ಟೊಂದು ಅಂತರ! ಭಿನ್ನತೆ! ವಿದ್ಯೆಯಲ್ಲಿ ಪ್ರತಿ ದ್ರೋಣನಂತೆಯೇ ಆದ ಅರ್ಜುನ ಅಂತಃಕರಣದಲ್ಲಿ ದ್ರೋಣನಂತಲ್ಲ. ಬಿಲ್ಲುಗಾರಿಕೆಯಲ್ಲಿ ಪ್ರತಿ ಅರ್ಜುನನಂತೆಯೇ ಆದ ಭೀಮಲನೂ ಹೃದಯಭಾವದಲ್ಲಿ ಅರ್ಜುನನಿಗಿಂತ ತೀರ ಭಿನ್ನ. ಈ ಎಲ್ಲ ಘಟನೆಗಳಿಗೆ ಮೂಕಸಾಕ್ಷಿಯಾದ ಮಣ್ಣಿನ ಮೂರ್ತಿ ದ್ರೋಣನಿಗಿಂತಲೂ ಹೆಚ್ಚು ಭೀಮಲನಿಗೇ ಅನ್ವಯವಾಗುವಂತಿದೆ – ತನ್ನ ಸ್ತಬ್ಧಮೌನದಲ್ಲಿ. ಅದರ ಮೌನವೇ ಎಲ್ಲ ಮಾತುಗಳಿಗಿಂತ ಹೆಚ್ಚು ಜೀವಂತ.

ಆ ಮೌನಕ್ಕೆ ಮಾತು ಬಂತೆಂಬಂತೆ, ದ್ರೋಣ; ಭೀಮಲನನ್ನು ನಿಮಿತ್ತವಾಗಿಸಿ, ಸಮುದಾಯಕ್ಕೇ ಆಳವಾಗಿ ಸ್ಪಂದಿಸಿ, ಭಿಲ್ಲ ಹುಡುಗರಿಗೆಲ್ಲ ವರವನ್ನು ನೀಡಿದಂತಾಯಿತು. ಈ ಘಟನೆಯ ನೆನಪು ಸಮುದಾಯದ ಮನದಲ್ಲಿ ಚಿರಂತನವಾಗಿ ಉಳಿಯುವಂತಾಯಿತು ಕೂಡ. ಅದಕ್ಕಾಗಿಯೇ ವರವನ್ನು ನೀಡಿದನೆನ್ನಬೇಕು! ಆದರೆ, ದ್ರೋಣನು ಗುರುದಕ್ಷಿಣೆಯಾಗಿ ಕೇಳಿದಾಗ ಹೆಬ್ಬೆರಳನ್ನು ಅರ್ಪಿಸಲು ದೊಡ್ಡ ಅನಿವಾರ್ಯ ಕಾರಣವೊಂದು ಒದಗಿದಂತೆ, ಅರ್ಜುನನು ಭೀಮಲನಿಗೆ ಕೊಡುವ ಸೂಚನೆಯು ಅಂಥದೊಂದು ಪ್ರಬಲ ಕಾರಣವಾಗಲಾರದೆನ್ನುವುದು ಕಥೆಯ ದುರ್ಬಲ ಅಂಶವಾಗಿ ತೋರುತ್ತದೆ.

ಇತಿಹಾಸವು ಮರುಕಳಿಸುವಂತೆ, ಅಧ್ಯಾತ್ಮವೂ ಒಳಗಿನ ತಾದಾತ್ಮ್ಯವಾಗಿ; ಪ್ರತಿ–ಮೂರ್ತಿಗಳನ್ನು ಸೃಷ್ಟಿಸುತ್ತ ಅಂದರೆ ಮರುಕಳಿಸುತ್ತ ನಡೆವ ವಿದ್ಯಮಾನ ಎಂದೆ. ಆದರೆ ಈ ವಿದ್ಯಮಾನವು ಬರಿಯ ಪ್ರತಿ–ರೂಪಗಳನ್ನು ಸೃಷ್ಟಿಸಿ ತೃಪ್ತವಾಗುವುದಿಲ್ಲ. ಅದು ತನ್ನನ್ನು ತಾನು ಮೀರುವುದಕ್ಕಾಗಿ ಈ ಪ್ರತಿ–ರೂಪಗಳನ್ನು ಸೃಷ್ಟಿಸುವಂತಿದೆ. ಏಕಲವ್ಯನು ಅರ್ಜುನನ ಪ್ರತಿ–ರೂಪ ಹೌದು. ಇನ್ನೊಬ್ಬ ಅರ್ಜುನನೇ ಹೌದು. ಆದರೆ ಪ್ರತಿ ರೂಪವು ಅರ್ಜುನನನ್ನು ಮೀರಿಸಿದ್ದೂ ಹೌದು. ಈ ಮೀರುವ ಅಂಶದಲ್ಲಿಯೇ ಮರುಕಳಿಕೆಯ ಸಾರ್ಥಕತೆ ಇರುವುದು ಎನ್ನಿಸುತ್ತದೆ.

ಈ ಅರ್ಥದಲ್ಲಿ ಇದು ಮರುಕಳಿಕೆ ಮಾತ್ರವಲ್ಲ, ಮರು–ಗಳಿಕೆಯೂ ಹೌದು. ಅಂದರೆ ‘ಪ್ರಕೃತಿ’ಯಲ್ಲಿ ಬರಿಯ ಮುಂದುವರಿಕೆ ಮಾತ್ರವಲ್ಲ, ಆ ಮುಂದುವರಿಕೆಯು ಒಂದು ಪ್ರಯೋಗವೂ ಆಗಿದೆ. ಪ್ರಕೃತಿಯು ಯಾವುದರ ಜೊತೆಗೆ ಪ್ರಯೋಗವನ್ನು ನಡೆಸುತ್ತದೆ? ನಡೆಸಬೇಕು? ನಡೆಸುವುದು ಸಾಧ್ಯ? ತನಗೆ ಈಗಾಗಲೇ ತಿಳಿದಿರುವುದರ ಜೊತೆಗಲ್ಲವೆ? ಜೊತೆಗಲ್ಲದೆ? ಈಗಾಗಲೇ ತಿಳಿದಿರುವುದನ್ನು ‘ಸಂಸ್ಕೃತಿ’ ಎಂದು ಕರೆದರೆ – ಈ ಸಂಸ್ಕೃತಿಯ ಜೊತೆಗೆ ಪ್ರಕೃತಿಯು ಪ್ರಯೋಗ ಮಾಡುತ್ತಲೇ ಇದೆ!

‘ಸಂಸ್ಕೃತಿ’ ಕಲಿತುದೆಲ್ಲವೂ ‘ಪ್ರಕೃತಿ’ಯಿಂದಲೇ ಬಂದುದೂ ಹೌದು. ಗುರು–ಶಿಷ್ಯ ಸಂಬಂಧವನ್ನು ನೋಡಿದರೆ, ಸಂಸ್ಕೃತಿಯು ಗುರು–ಶಿಷ್ಯ ಸಂಬಂಧವನ್ನು ನೇರವಾಗಿ ಗ್ರಹಿಸಿ – ಸಾಂಸ್ಥಿಕಗೊಳಿಸಿದರೆ; ಪ್ರಕೃತಿಯು ಗುರು–ಶಿಷ್ಯ ಸಂಬಂಧದಲ್ಲಿ ಪರೋಕ್ಷಗುಣವಿದೆ ಎಂದು ಸೂಚಿಸಿ ಅನೇಕ ರೀತಿಗಳಲ್ಲಿ ಶಿಷ್ಯಭಾವವು ಸಾಧ್ಯ ಎಂಬುದನ್ನು ಎತ್ತಿಹಿಡಿಯುತ್ತದೆ.

ಪ್ರಕೃತಿಯಲ್ಲಿ ಅನೇಕ ಒಳದಾರಿಗಳಿವೆ. ಈ ಒಳದಾರಿಗಳೆಲ್ಲವೂ ಹೆದ್ದಾರಿಗಳೇ. ಗುರುವಿಗೆ, ಅವನಿಗೇ ತಿಳಿದಿರದ ಅವನದೇ ಮುಖವನ್ನು ತೋರಿಸಿ, ಈ ಅರ್ಥದಲ್ಲಿ ಶಿಷ್ಯನೇ ಗುರುವಾಗಬಲ್ಲ. ಇದಕ್ಕೆ ಬೇಕಾದದ್ದು ಮಣ್ಣಿನ ಒಂದು ಮೂರ್ತಿ! ಉಳಿದುದೆಲ್ಲ ಪ್ರಕೃತಿ; ಶಿಷ್ಯನ ಅಂತಃಕರಣದಲ್ಲಿ ನಡೆಸುವ ಪ್ರಯೋಗ! ಮಣ್ಣಿನ ಮೂರ್ತಿ ಸಂಕೇತವಾಗುವುದಾದರೆ ಹೆಬ್ಬೆರಳೂ ಸಂಕೇತವಾಗಬಹುದಲ್ಲವೆ? ಒಂದು ಬದಿಯಲ್ಲಿ ‘ಸಂಸ್ಕೃತಿ’ ಇದೆ. ಅಂದರೆ ಇದುವರೆಗೆ ಕಲಿತ ಎಲ್ಲ ತಿಳಿವಳಿಕೆ ಇದೆ. ವಿದಗ್ಧತೆ ಇದೆ. ಇನ್ನೊಂದು ಬದಿಯಲ್ಲಿ ‘ಮುಗ್ಧತೆ’ ಇದೆ. ಸಂಸ್ಕೃತಿಗೆ ತಾನು ಸಂಸ್ಕೃತಿ ಎಂದು ತಿಳಿದಿರುವುದರಿಂದ ತನ್ನನ್ನು ಎಲ್ಲರೂ ಮನ್ನಿಸಬೇಕೆಂದು ಅದು ಬಯಸುತ್ತದೆ. ಅಂದರೆ – ಇನ್ನೊಂದು ರೀತಿಯಲ್ಲಿ ಹೇಳುವುದಾದರೆ, ತನಗಾಗಿ ಮುಗ್ಧತೆಯ ಬಲಿಯನ್ನು ಅದು ಬಯಸುತ್ತದೆ.

ಮುಗ್ಧತೆಯಾದರೋ ಏನೂ ಕಳವಳಗೊಳ್ಳದೇ ತನ್ನ ಬಲಿಯನ್ನು ನೀಡುತ್ತ ‘ಸಂಸ್ಕೃತಿ’ಯನ್ನು ಮತ್ತೆ ಮತ್ತೆ ಮಂತ್ರಮುಗ್ಧಗೊಳಿಸುತ್ತದೆ! ಮುಗ್ಧತೆಯ ಸನಿಹ ಬಂದವರು ತಾವೂ ಮುಗ್ಧರಾಗುವರು. ಇಂಥದೊಂದು ಪ್ರಯೋಗ ನಡೆಯುತ್ತಲೇ ಇದೆ. ಈ ಪ್ರಯೋಗದಲ್ಲಿ ಕೊನೆಯ ಮಾತು ಎಂದಿರಲಾರದು.

ಕೊನೆಯದ್ದು ಮಾತಲ್ಲ; ಮೌನವೇ. ತಾನು; ಇನ್ನೊಬ್ಬನಂತೆ, ತನ್ನ ಮಾದರಿಯಾಗಿ ಸ್ವೀಕರಿಸಿದ ಇನ್ನೊಬ್ಬನಂತೆ, ಆಗುವುದು ಸಾಧ್ಯ ಎನ್ನುವುದು ಆಳದ ಅಧ್ಯಾತ್ಮ. ತಾನಿರುವಾಗಲೇ ತನ್ನಂಥ ಇನ್ನೊಬ್ಬನನ್ನು ಸಹಿಸುವುದು ಅಸಾಧ್ಯ ಎನ್ನುವುದು ತೀವ್ರವಾದ ಲೌಕಿಕ. ಈ ಎರಡನ್ನೂ ಮುಟ್ಟಿಕೊಂಡಿರಬೇಕಾದ ‘ಇತಿಹಾಸ’, ತನ್ನ ಸ್ವಭಾವದಂತೆ ಅದು ಮರುಕಳಿಕೆಯ ಪರವಾಗಿದ್ದರೂ ಅದು ಲೌಕಿಕದ ವಿಪರ್ಯಾಸಗಳ ಜೊತೆಗೇ ಸಾಗಬೇಕಾಗಿದೆ. ಮಹಾಭಾರತವಂತೂ ಅರಿವೆಂದರೆ ಅದು ವಿಪರ್ಯಾಸಗಳ ಅರಿವೇ ಎಂದು ತನ್ನೊಳಗೇ ಅಂದುಕೊಳ್ಳುತ್ತಿದ್ದರೆ ಅದು ಹೆಚ್ಚಿನ ಮಾತಾಗದು. ಅಂಬೆ–ಭೀಷ್ಮರ ಪ್ರಕರಣವನ್ನು ನೋಡಬಹುದು.

ಶಂತನುವಿನ ಈರ್ವರು ಮಕ್ಕಳಲ್ಲಿ ಚಿತ್ರಾಂಗದನು ತಾರುಣ್ಯದಲ್ಲೇ ಸಾವನ್ನಪ್ಪಿದ್ದನು. ವಿಚಿತ್ರವೀರ್ಯನು ಗದ್ದುಗೆಯನ್ನೇರಬೇಕಾಯಿತು. ಅಂಬಿಕೆ, ಅಂಬಾಲಿಕೆಯರನ್ನು ಭೀಷ್ಮನೇ ತಮ್ಮನಿಗೆ – ವಿಚಿತ್ರವೀರ್ಯನಿಗೆ ಮದುವೆ ಮಾಡಿಸಿ, ಅಂಬೆಯ ಪ್ರಕರಣವೊಂದು ವೃಥಾ ಕಗ್ಗಂಟಾಯಿತೆಂದು ಬೇಸರಿಸಿದ್ದನು. ವಿಚಿತ್ರವೀರ್ಯನ ಪರವಾಗಿ ಭೀಷ್ಮನೇ ಈ ಮೂವರು ಕನ್ಯೆಯರ ಸ್ವಯಂವರಸಭೆಗೆ ನುಗ್ಗಿದ್ದನು. ಇದೊಂದು ಪ್ರಾಯಃ ಇದುವರೆಗೆ ಎಲ್ಲೂ ನಡೆದಿರದ ಸಂಗತಿಯಾಗಿತ್ತು! ಏಕೆಂದರೆ ಮದುವೆಯಾಗಬೇಕಾದ, ‘ವರ’ನಾದ ವಿಚಿತ್ರವೀರ್ಯನೇ ಹೋಗಬೇಕಾದ ಸ್ವಯಂವರ ಸಭೆ ಅದು.

ಅವನ ಬೆಂಗಾವಲಾಗಿ ಭೀಷ್ಮ ಇರಬಹುದಾಗಿತ್ತು. ವಿಚಿತ್ರವೀರ್ಯನೇಕೆ ಬಾರದೆ ಉಳಿದನು? ತಾಯಿ ಸತ್ಯವತಿ ಕೂಡ, ಮಗನಪರವಾಗಿ ಭೀಷ್ಮನನ್ನೇಕೆ ಕಳುಹಿಸಲು ಒಪ್ಪಿದಳು? ವಿಚಿತ್ರವೀರ್ಯನು ದುರ್ಬಲನಿದ್ದನು. ಸ್ವಯಂವರಸಭೆಗಳಲ್ಲಿ ಸಣ್ಣ ಯುದ್ಧಗಳೇ ನಡೆಯುವುದು ಒಂದು ಪದ್ಧತಿಯೇ ಆಗಿತ್ತು. ಕಲ್ಯಾಣ ಮತ್ತು ಕಾಳಗ ಯಾವಾಗಲೂ ಒಡನಾಡಿಗಳು! ಇದೇ ಕಾರಣಕ್ಕೆ ವಿಚಿತ್ರವೀರ್ಯನು ಬಾರದುಳಿದಿರಬಹುದಾದರೂ, ಭೀಷ್ಮನು ಅವನ ಜೊತೆಗೂಡಿ ಬರಬಹುದಿತ್ತು.

ಚಿತ್ರಾಂಗನದ ಸಾವಿನ ಅನಂತರ, ವಿಚಿತ್ರವೀರ್ಯನ ಮೇಲೆ ಉಂಟಾದ ಸಹಜ ಕಾಳಜಿ, ಭೀಷ್ಮನನ್ನು ಏಕಾಂಗಿಯಾಗಿ ಸ್ವಯಂವರಕ್ಕೆ ಕರೆತಂದಿತು. ತಾನು ಬ್ರಹ್ಮಚರ್ಯದ ಪ್ರತಿಜ್ಞೆಯನ್ನು ಮಾಡಿದ್ದನ್ನು ಲೋಕವೇ ಬಲ್ಲುದಾಗಿ, ತನ್ನ ತಮ್ಮನಿಗಾಗಿ – ಹಸ್ತಿನೆಯ ದೊರೆ ವಿಚಿತ್ರವೀರ್ಯನಿಗಾಗಿ – ತಾನು ಬಂದಿರುವುದಾಗಿ ಭೀಷ್ಮನು ಅಲ್ಲಿ ಸಾರಿದನು. ತಡೆವವರು ಬನ್ನಿರೆಂದು, ಕನ್ಯೆಯರು ತನ್ನ ರಥ ಏರಿರೆಂದು ವೀರಾಹ್ವಾನವನ್ನು ಕೊಟ್ಟು, ನಡೆದ ಕಾಳಗದಲ್ಲಿ ಎಲ್ಲರನ್ನೂ ಗೆದ್ದು, ಸ್ವಯಂವರದ ಕಲ್ಪನೆಯನ್ನೇ ತುಸು ಪಲ್ಲಟಿಸಿದನು.

ಸ್ವಯಂವರವೆಂದರೆ ಬಯಸಿದವನನ್ನು ಪಡೆಯುವುದಲ್ಲವೆ? ಹಾಗೆ ಬಯಸಿದುದನ್ನು ಪಡೆಯುವುದಕ್ಕಿಂತ ಪಡೆದುದನ್ನೇ ಬಯಸಿದ್ದಂತೆ ಬದುಕುವ ಬಗೆಯೂ ಇದೆ ಎಂದು ಕನ್ಯೆಯರು ತಮ್ಮಲ್ಲೇ ಒಪ್ಪುವಂತೆ ಮಾಡಿಬಿಟ್ಟನು. ಹಾಗೆ ಅಂಬೆಯ ತಂಗಿಯರು – ಅಂಬಿಕೆ; ಅಂಬಾಲಿಕೆಯರು ವಿಚಿತ್ರವೀರ್ಯನ ಮಡದಿಯರಾದರು. ಆದರೆ ಅಂಬೆ? ಅವಳಿಗೆ ತನ್ನದೇ ಆದ ಮನಸ್ಸಿತ್ತು. ಅಂಬೆ ಮತ್ತು ಸಾಲ್ವನೆಂಬ ಓರ್ವ ದೊರೆ ಪರಸ್ಪರ ಪ್ರೇಮಿಸುತ್ತಿದ್ದರು. ಭೀಷ್ಮ, ಸಭೆಗೆ ನುಗ್ಗದಿರುತ್ತಿದ್ದರೆ ಅಂಬೆ ಸಾಲ್ವನ ಕೊರಳಿಗೇ ಮಾಲೆ ಸೂಡುತ್ತಿದ್ದಳು. ಅವನ ಬಳಿ ನಾಚಿ ನಿಲ್ಲುತ್ತಿದ್ದಳು.

ನಿಜ; ಭೀಷ್ಮನ ರಥವನ್ನು ತಂಗಿಯರೊಂದಿಗೆ ಅವಳು ಏರಿದ್ದಳು. ಅದು ಸರಿಯಾಗಲಿಲ್ಲ. ಆದರೆ ಅಂಬೆ, ಹಸ್ತಿನೆಗೆ ಬಂದಮೇಲೂ ತನ್ನ ತಂಗಿಯರಂತೆ ದೊರೆಯ ಮಡದಿಯಾಗಿ – ಅದರಲ್ಲೂ ಪಟ್ಟಮಹಿಷಿಯಾಗಿ; ಏಕೆಂದರೆ ಅಂಬೆ ಹಿರಿಯಾಕೆಯಲ್ಲವೆ – ಬಾಳಲು ಬಯಸಲಿಲ್ಲವೆನ್ನುವುದು, ಭೀಷ್ಮನಲ್ಲಿ ತನ್ನ ಸಾಲ್ವ ಪ್ರೀತಿಯನ್ನು ಮುಚ್ಚಿಡಲಿಲ್ಲವೆನ್ನುವುದು, ಗೆದ್ದ ಭೀಷ್ಮನೇ ಸಾಲ್ವನಲ್ಲಿಗೆ ತನ್ನನ್ನು ಮರಳಿ ಕಳುಹಿಸುವಂತೆ ಮಾಡಿದಳೆನ್ನುವುದು– ಇದು ಅಂಬೆಯ ಪ್ರೇಮದ ಕುರುಹೇ ಅಲ್ಲವೆ? ಆದರೆ ಸಾಲ್ವನಿಗೆ ತಾನು ಭೀಷ್ಮನಿಗೆ ಸೋತ ಹತಾಶೆಯಲ್ಲಿ ಈ ಕುರುಹು ಕಾಣಿಸದೆ ಹೋಯಿತು.

ಸೋತವನನ್ನು ಹುಡುಕಿಕೊಂಡು ಬಂದಂತೆ ಅಂಬೆ ಮರಳಿ ಬಂದಳೆನ್ನುವುದನ್ನೂ ಸಾಲ್ವನು ಗುರುತಿಸದಾದನು. ಪಂಪ, ಈ ಸಂದರ್ಭದಲ್ಲಿ, ಸಾಲ್ವನಿಂದ ಅಂಬೆಗೆ – ‘ಪೆಂಡಿರ್‌ ಪೆಂಡಿರೊಳ್‌ ಅದೆಂತು ಬೆರಸುವರಬಲೇ’ ಎಂದು ಮಾರ್ಮಿಕವಾಗಿ ಹೇಳಿಸಿದ್ದಾನೆ. ‘ನಡೆದ ಕಾಳಗದಲ್ಲಿ ನಾನು ಸೋತೆ. ಸೋತು ಭೀಷ್ಮನಿಗೆ ನಾನೇ ಹೆಂಡಿರಂತಾಗಿಬಿಟ್ಟೆ. ನಾನೆಂತು ನಿನ್ನ ಬೆರೆಯಲಿ?’. ಪಂಪ, ಈ ಮಾತಿನಲ್ಲಿ ಹೆಚ್ಚಿನದೇನನ್ನೋ ಹೇಳಲು ತವಕಿಸುತ್ತಿರುವಂತೆ ಕೇಳಿಸುತ್ತದೆ.

ನಿಜಕ್ಕೂ ಹತಾಶಳಾದವಳು; ಹತಾಶಳಾಗಿ ಉಗ್ರಳಾದವಳು – ಅಂಬೆ. ಸಾಲ್ವನು ತನ್ನನ್ನೊಪ್ಪದೆ ಇದ್ದಾಗ ಅವಳ ಕೋಪವೆಲ್ಲ ಭೀಷ್ಮನತ್ತ ತಿರುಗಿತು. ಸಾಲ್ವನ ಮೇಲಲ್ಲ. ಆ ಛಲಗಾತಿ, ಪರಶುರಾಮನಿಂದ ಭೀಷ್ಮನಿಗೆ ಹೇಳಿಸಿದಳು. ಆ ಪ್ರಯತ್ನಗಳೆಲ್ಲ ವ್ಯರ್ಥವಾದ ಮೇಲೆ, ಇಚ್ಛಾಮರಣಿ ಎನ್ನಿಸಿದ ಭೀಷ್ಮನಿಗೆ ತನ್ನಿಂದಲೇ ಮರಣ ಬರಬೇಕೆಂದು ತೀವ್ರವಾಗಿ ಇಚ್ಛಿಸಿದಳು – ಶಂತನುವಿನ ವರವೇ ಪಲ್ಲಟವಾಗುವಂತೆ! ಈ ಜನುಮದಲ್ಲಿ ಅದು ಸಾಧ್ಯವಾಗದೆಂದರಿವಾಗಿ ತನ್ನನ್ನು ತಾನು ಸುಟ್ಟುರಿಸಿಕೊಂಡು ನೀಗಿಕೊಂಡಳು. ಅಗ್ನಿಕಾಂಡ ತುಂಬಿರುವ ಮಹಾಭಾರತದ ಮೊದಲ ನಿಗಿನಿಗಿ ಕೆಂಡ – ಅಂಬೆ!

ಈ ಬೆಂಕಿ ಹರಡುವ ಪರಿಯನ್ನು ನೋಡಿ! ಕುರುಪಿತಾಮಹನೆನ್ನಿಸಿದ ಭಿಷ್ಮನ ಮರಣಕ್ಕಾಗಿ, ಕುರುಗಳಿಗೆ ಹಗೆಯಾದ ಪಾಂಚಾಲರ ರಾಜ ದ್ರುಪದನಿಗೆ ಮಗಳಾಗಿ ಜನಿಸಿದಳು. ದ್ರುಪದ ಗಂಡುಮಗುವಿಗೆ ಹಂಬಲಿಸಿದ್ದ. ಮಗಳು ಹುಟ್ಟಿದಳು. ಈ ಹೆಣ್ಣುಮಗಳನ್ನು, ಗಂಡಿನಂತೆಯೇ ದ್ರುಪದ ಬೆಳೆಸಿದ. ಈ ಕಾರಣವೂ ಸೇರಿಕೊಂಡಂತೆ, ಹೆಣ್ಣುಹುಡುಗಿ, ಗಂಡೇ ಆಗಿ ಬದಲಾಗಿಬಿಟ್ಟಳು. ಅವನ ಹೆಸರು ಶಿಖಂಡಿ. ಶಿಖಂಡಿ ಎಂದರೆ ನಪುಂಸಕನೆಂದಲ್ಲ. ಹೆಣ್ಣು ಗಂಡಾದವನೆಂದೂ ಅಲ್ಲ. ಶಿಖಂಡಿ ಎಂದರೆ ಕೇಶಾಲಂಕರ ಮಾಡಿಕೊಂಡಿರುವವನೆಂದು. ಕೃಷ್ಣ, ತಲೆಯಲ್ಲಿ ನವಿಲುಗರಿ ಸಿಕ್ಕಿಸಿಕೊಂಡು ಚಂದಕಾಣುತ್ತಿರಲಿಲ್ಲವೆ? – ಹಾಗೆ. ಹೆಣ್ಣಾಗಿದ್ದಾಗ ಅವಳು ಶಿಖಂಡಿನೀ. ಈಗ ಗಂಡಾಗಿ ಶಿಖಂಡಿ.

ವಿಲಕ್ಷಣವೆಂಬಂತೆ, ಭೀಷ್ಮ ಒಂದು ಪ್ರತಿಜ್ಞೆಯನ್ನು ಮಾಡಿದ್ದ. ಹೆಣ್ಣಾಗಿ ಹುಟ್ಟಿ ಗಂಡಾಗಿ ಬದಲಾಗಿ ಬೆಳೆದವರೆದುರು ತಾನು ಯುದ್ಧ ಮಾಡುವವನಲ್ಲವೆಂದು! ಅಂಥವರು ತನಗೆ ಯುದ್ಧದಲ್ಲಿ ಎದುರಾದರೆ ಶಸ್ತ್ರಗಳನ್ನು ಕೈ ಚೆಲ್ಲುವೆನೆಂದು! ಮಹಾಭಾರತಯುದ್ಧದಲ್ಲಿ ಹಾಗೆಯೇ ನಡೆದುಹೋಯಿತು. ಭೀಷ್ಮನ ಮುಂದೆ ಈ ಶಿಖಂಡಿಯನ್ನು ನಿಲ್ಲಿಸಿ – ತನ್ನ ಮಾತಿನಂತೆ ಭೀಷ್ಮನು ಶಸ್ತ್ರಸನ್ಯಾಸ ಮಾಡಿದ ಹೊತ್ತಿನಲ್ಲಿ ಅವನ ಮೇಲೆ ಅರ್ಜುನಾದಿಗಳು ಬಾಣಗಳ ಮಳೆಗರೆದು – ಈ ಅರ್ಜುನನೂ ಒಂದು ವರ್ಷ ‘ಬೃಹನ್ನಳೆ’ಯಾಗಿದ್ದನೆನ್ನುವುದು; ಭೀಷ್ಮನ ಮುಂದೆ ನಿಂತಾಗ ಒಂದು ಕುತೂಹಲಕರ ಅಂಶ – ಅದೇ ಶರಶಯ್ಯೆಯಾಗಿ, ಅದರ ಮೇಲೆಯೇ ಭೀಷ್ಮ ಕುಸಿದುಬಿದ್ದ. ಶಿಖಂಡಿ ಇದನ್ನು ಕಣ್ತುಂಬ ನೋಡಿದ! ಅಂಬೆ, ಬೆಂಕಿಯಲ್ಲಿ ಹೊತ್ತಿ ಉರಿದಾಗಲೇ ಭೀಷ್ಮನ ಶರಶಯ್ಯೆ ರಚಿತಗೊಳ್ಳುತ್ತಿದ್ದಿರಬೇಕು!

ಪಂಪ, ‘ಪೆಂಡಿರ್‌ ಪೆಂಡಿರೊಳ್‌ ಎಂತು ಬೆರೆಸುವರಬಲೇ’ ಎಂದು ಸಾಲ್ವನ ಮುಖದಿಂದ ಅಂಬೆಗೆ ಹೇಳಿಸಿದಾಗ – ಗಂಡಾದ ನಾನೇ ಭೀಷ್ಮನೆದುರು ಸೋತು ಹೆಣ್ಣಿನಂತಾದೆ. ಭೀಷ್ಮನನ್ನು ಗೆಲ್ಲಬೇಕಾದರೆ ನೀನೇ ಗಂಡಾಗಬೇಕು ಎಂದು ಗುಟ್ಟೊರೆದಂತೆ ಕೇಳಿಸುತ್ತದೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT