ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರೆತವರಿಗಾಗಿ ಇದುವರೆಗಿನ ಕಥೆ...

Last Updated 29 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ಅಪ್ಪಾಜಿ ಇಂಗ್ಲೆಂಡ್ ಮತ್ತು ಅಮೆರಿಕಗಳಲ್ಲಿ ಶಿಶುತಜ್ಞರೆಂಬ ಅರ್ಹತೆ ಪಡೆದು ಆಗಷ್ಟೇ ಹಿಂದಿರುಗಿದ್ದರು. ಅವರ ಪೂರ್ವಾಧಿಕಾರಿ ಡಾ. ಸಂಪತ್ ಲೋಕನಾಥನ್ ಮಕ್ಕಳಿಗಾಗಿಯೇ ಪ್ರತ್ಯೇಕ ಆಸ್ಪತ್ರೆಯೊಂದರ ಅಗತ್ಯವಿದೆ ಎಂಬುದನ್ನು `ಡೆಕ್ಕನ್ ಹೆರಾಲ್ಡ್' ಪತ್ರಿಕೆಯಲ್ಲಿ ಪಂಡಿತ್ ಜವಾಹರಲಾಲ್ ನೆಹರೂ ಅವರ ಜನ್ಮದಿನದಂದು (1966, ನ.14) ಬರೆದ ಲೇಖನದಲ್ಲಿ ಪ್ರತಿಪಾದಿಸಿದ್ದರು.

ಅದೇ ದಿನ ಆ ಕನಸನ್ನು ನನಸು ಮಾಡುವುದಾಗಿ ಅಪ್ಪಾಜಿ ಮನಸ್ಸಿನಲ್ಲೇ ಪ್ರತಿಜ್ಞೆ ಮಾಡಿದ್ದರು. ಡಾ. ಸಂಪತ್ ಅವರ ಉತ್ತರಾಧಿಕಾರಿ ಡಾ. ಪಿ.ಸಿ. ಬೋಪಯ್ಯ ಸಹ ಇದೇ ಅಭಿಪ್ರಾಯ ಹೊಂದಿದ್ದರು.

1988ರ ಮೇ 31ರಂದು ಅಪ್ಪಾಜಿ 58ನೇ ವಯಸ್ಸಿನಲ್ಲಿ ನಿವೃತ್ತರಾದರು. ಆದರೆ ಮಕ್ಕಳಿಗಾಗಿ ಪ್ರತ್ಯೇಕ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಪ್ರಾರಂಭಿಸುವ ಅವರ ಕನಸು ಈಡೇರಿರಲಿಲ್ಲ. ಆ ಸಮಯದಲ್ಲಿ ನಾನು ವಾಣಿ ವಿಲಾಸ ಆಸ್ಪತ್ರೆಯ ಶಿಶುವೈದ್ಯಕೀಯ ವಿಭಾಗಕ್ಕೆ ಸೇರಿಕೊಂಡಿದ್ದೆ.

ವಾಣಿ ವಿಲಾಸ ಆಸ್ಪತ್ರೆಗೆ ಅವರು ವಿದಾಯ ಹೇಳುವ ಆ ಭಾವಪೂರ್ಣ ಗಳಿಗೆಯಲ್ಲಿ ನಾನು ಅವರೊಂದಿಗೆ ಇರಬೇಕೆಂದು ಅಮ್ಮ ಹೇಳಿದ್ದರು. ಅಪ್ಪಾಜಿ ಎಂದಿನಂತೆ ತುರ್ತು ಚಿಕಿತ್ಸೆ ವಾರ್ಡ್ ಮತ್ತು ತಮ್ಮ ಘಟಕದಲ್ಲಿ ದಾಖಲಾಗಿದ್ದ ಎಲ್ಲಾ ರೋಗಿಗಳನ್ನು ನೋಡಿ ಬಂದರು. ನಂತರ ವಿಭಾಗದ ಮುಖ್ಯಸ್ಥರ ಕೊಠಡಿಯ ಕೀಲಿಕೈಯನ್ನು ಅಟೆಂಡರ್ ಗೋಪಾಲ್ ಅವರ ಕೈಗೆ ನೀಡಿದರು.

ನಾನು ಸಣ್ಣ ಬ್ರೀಫ್‌ಕೇಸ್‌ನಲ್ಲಿ ಅವರಿಗೆ ಸಂಬಂಧಿಸಿದ ಎಲ್ಲಾ ವಸ್ತುಗಳನ್ನು ಒಪ್ಪವಾಗಿ ಜೋಡಿಸಿದೆ. ಅದರಲ್ಲಿ ನನ್ನ ದಿವಂಗತ ಸಹೋದರಿ ನಿಶಾಳ ಚಿತ್ರ ಮತ್ತು ಆಕೆಯ ನಿಘಂಟು ಅತ್ಯಂತ ಅಮೂಲ್ಯವಾಗಿದ್ದವು.

ಅವರ ವೃತ್ತಾಕಾರದ ಎರಡು ಅರೆಗಳ ಸ್ಟೀಲ್‌ನ ಟಿಫನ್ ಕ್ಯಾರಿಯರ್ ಮತ್ತು ಅವರ ವೈಯಕ್ತಿಕ ಕಡತಗಳೆಲ್ಲವನ್ನೂ ತಮ್ಮ ಮೂವತ್ತು ವರ್ಷದ ಸರ್ಕಾರಿ ಸೇವೆಯ ಬಳಿಕ ಮನೆಗೆ ತೆಗೆದುಕೊಂಡು ಹೋದರು. ದಿ. ಡಾ. ಟಿ.ಎಸ್. ಮಲ್ಲೇಶ್, ಮುದ್ದುಲಿಂಗಪ್ಪ ಮತ್ತು ಅಟೆಂಡರ್ ಗೋಪಾಲ್ ಕಾರಿನವರೆಗೂ ಬಂದು ಬೀಳ್ಕೊಟ್ಟರು.

ಅಲ್ಲಿಂದ ಮನೆಯವರೆಗಿನ ನಮ್ಮ ಪಯಣದುದ್ದಕ್ಕೂ ಅಪ್ಪಾಜಿ ತೀವ್ರ ಭಾವುಕರಾಗಿ ಮೌನದಿಂದ ಕುಳಿತಿದ್ದರು. ನನ್ನನ್ನು ಮನೆ ಎದುರು ಕಾರಿನಿಂದ ಇಳಿಸಿದ ಅವರು, `ನಾಳೆಯಿಂದ ನೀನು ಬಸ್‌ನಲ್ಲಿ ಓಡಾಡಬೇಕಾಗುತ್ತದೆ' ಎಂದರು. ನಾನೂ ಪ್ರತಿಕ್ರಿಯೆ ನೀಡಲಾರದಷ್ಟು ಮೂಕಳಾಗಿದ್ದೆ.
ಮನೆಗೆ ತಲುಪಿದ ನಂತರ ನನ್ನಮ್ಮನ ಬಳಿ, `ಸುವರ್ಣ ಇಂದಿನಿಂದ ನನಗೆ ಕೆಲಸವಿಲ್ಲ.

ನನ್ನ ಕನಸು ಸಾಕಾರಗೊಳ್ಳಲಿಲ್ಲ. ಇನ್ನುಮುಂದೆ ನನ್ನನ್ನು ನೀನು ನೋಡಿಕೊಳ್ಳುತ್ತೀಯಾ?' ಎಂದರು. ಅಪ್ಪಾಜಿಯ ಸರ್ಕಾರಿ ಸೇವೆ ಕೊನೆಗೊಂಡ ಬಳಿಕ ಅವರನ್ನು ಸಮಾಧಾನ ಪಡಿಸಲು ಅಮ್ಮ ಹರಸಾಹಸಪಟ್ಟರು.

ಅವರು ಶಿಶುವೈದ್ಯಕೀಯ ವಿಭಾಗದ ಮುಖ್ಯಸ್ಥರಾಗಿದ್ದ ಅವಧಿಯ ಬಿಡುವಿನ ಪ್ರತಿ ಸಮಯವನ್ನು ಕಳೆದದ್ದು ಕರ್ನಾಟಕ ಮಕ್ಕಳ ಆರೋಗ್ಯ ಸಂಸ್ಥೆ ಎಂಬ ಬಡಮಕ್ಕಳಿಗಾಗಿ ಒಂದು ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಕುರಿತ ಚಿಂತನೆಯಲ್ಲಿ. ಕರ್ನಾಟಕ ಸರ್ಕಾರದ ಮುಖ್ಯ ವಾಸ್ತು ಸಂಯೋಜಕರಾಗಿದ್ದ ಅವರ ಆಪ್ತ ಸ್ನೇಹಿತ ಟಿ.ಜೆ.ಜಾರ್ಜ್, 1982ರಲ್ಲೇ ಅತ್ಯಂತ ಉತ್ಸಾಹದಿಂದ ಸೂಕ್ಷ್ಮವಾದ ನೀಲನಕ್ಷೆಯೊಂದನ್ನು ತಯಾರಿಸಿಕೊಟ್ಟಿದ್ದರು.

ದೇಣಿಗೆ ಸಂಗ್ರಹಿಸಲು ಅನುಕೂಲವಾಗುವಂತೆ 1984ರ ಆಗಸ್ಟ್ 17ರಂದು ಅದು ನೊಂದಾಯಿತ ಸಂಸ್ಥೆಯಾಗಿ, ಸಮಿತಿ ರಚನೆಯಾಯಿತು. ದಿ. ವಿ.ಎಸ್. ಕೃಷ್ಣ ಅಯ್ಯರ್ ಅಧ್ಯಕ್ಷರಾದರೆ, ಬಿ.ಎಲ್.ಎಸ್. ಮೂರ್ತಿ ಖಜಾಂಚಿಯಾಗಿ ಆಯ್ಕೆಯಾದರು. ಅಪ್ಪಾಜಿ ಸಮಿತಿಯ ಸಂಚಾಲಕರಾದರು. ವಿ.ಎಸ್. ಕೃಷ್ಣ ಅಯ್ಯರ್ ಹಾಗೂ ಬಿ.ಎಲ್.ಎಸ್. ಮೂರ್ತಿ ಇಬ್ಬರೂ ವಾಣಿವಿಲಾಸ ಆಸ್ಪತ್ರೆಯ ಬೋರ್ಡ್ ಆಫ್ ವಿಸಿಟರ್ಸ್‌ನ ಸದಸ್ಯರಾಗಿದ್ದರು.

ಮೇಲ್ವಿಚಾರಕರಾಗಿದ್ದ ಡಾ.ಡಿ.ಜಿ. ಬೆನಕಪ್ಪ ಅವರೊಂದಿಗೆ ಸಮಾಲೋಚನೆ ನಡೆಸುತ್ತಿದ್ದರು. ಅಪ್ಪಾಜಿಯ ಈ ಸಂಸ್ಥೆ ಸ್ಥಾಪನೆ ಕುರಿತ ತೀರ್ಮಾನಕ್ಕೆ ಎಷ್ಟು ಅಂಟಿಕೊಂಡಿದ್ದರೆಂದರೆ, ಅವರು ಅದಕ್ಕೆ ಕೈಜೋಡಿಸಿದ್ದಲ್ಲದೆ, ಅಪ್ಪಾಜಿಯ ಕೈಗಳನ್ನೂ ಬಲಪಡಿಸಿದರು.

ಕನಸಿನಲ್ಲಿ ಕಟ್ಟಿದ ಕಟ್ಟಡವನ್ನು ವಾಸ್ತವಕ್ಕೆ ತರುವಲ್ಲಿ ದಣಿವು ಮರೆತು ಶ್ರಮವಹಿಸಿದರು. ಕೊನೆಗೂ 1987ರ ಡಿಸೆಂಬರ್ 26ರಂದು ಬೆಳಿಗ್ಗೆ 10.45ಕ್ಕೆ ಮುಖ್ಯಮಂತ್ರಿಗಳಾಗಿದ್ದ ದಿ. ರಾಮಕೃಷ್ಣ ಹೆಗ್ಡೆಯವರು ಶಂಕುಸ್ಥಾಪನೆ ನೆರವೇರಿಸಿದರು.

1985ರಂದು ಸರ್ಕಾರ ತೆರಿಗೆ ವಿನಾಯಿತಿಯ ಜೊತೆಯಲ್ಲಿ ದೇಣಿಗೆ ಸಂಗ್ರಹಿಸಲು ಅನುಮತಿ ನೀಡಿತ್ತು. ಮುದ್ದುಲಿಂಗಪ್ಪ ಹೊಸ ರಸೀದಿ ಪುಸ್ತಕವನ್ನು ಅಪ್ಪಾಜಿಯ ಚೇಂಬರ್‌ಗೆ ತಂದಾಗ, `ಇದರ ಮೊದಲ ಕಾಣಿಕೆ ನನ್ನ ಮಗಳು ಆಶಾಳದ್ದಾಗಿರುತ್ತದೆ. ಏಕೆಂದರೆ ಆಕೆ ನನ್ನ ಪಾಲಿಗೆ ಅದೃಷ್ಟದೇವತೆ' ಎಂದಿದ್ದರು. ನಾನು ಸಂತೋಷದಿಂದ ನನ್ನ ಆ ತಿಂಗಳ ಸಂಬಳವನ್ನು ದೇಣಿಗೆಯಾಗಿ ನೀಡಿದೆ.

ಆ ರಸೀದಿ ನಂಬರ್ 1 ಇಂದಿಗೂ ನನ್ನ ಬಳಿಯಿದೆ. ನಂತರದ ಮೊದಲ ದಾನಿ ಬಿ.ಎಲ್.ಎಸ್.ಮೂರ್ತಿ ಅವರು. ನೆರವು ನೀಡುವಂತೆ ಸಾರ್ವಜನಿಕರು, ಹಿತೈಷಿಗಳು, ರೋಗಿಗಳು, ಲೋಕೋಪಕಾರಿಗಳು, ಸಂಸ್ಥೆಗಳು ಮುಂತಾದೆಡೆ ಮನವಿ ಸಲ್ಲಿಸಲಾಯಿತು. ಸಾರ್ವಜನಿಕರಿಂದ ಸಂಗ್ರಹವಾದ ಹಣವೇ ಮೂರು ಕೋಟಿ ರೂ. ಮುಟ್ಟಿತು.

ರಹಮಾನ್ ಖಾನ್ 15 ಲಕ್ಷ ರೂ ಹೊಂದಿಸಿಕೊಟ್ಟರೆ, ಬಿ.ಕೆ. ಹರಿಪ್ರಸಾದ್, ಬಿ.ಎಲ್. ಎಸ್.ಮೂರ್ತಿ, ಅನಂತಕುಮಾರ್, ಬಿಎಂಪಿ ಮೇಯರ್ ಡಾ.ಎಂ.ಜಿ. ಶೇಷಾದ್ರಿ ತಲಾ ಐದು ಲಕ್ಷ ರೂ. ಕಾಣಿಕೆ ನೀಡಿದರು. ದಿ. ಆರ್.ಕೆ. ಹೆಗ್ಡೆ, ಸೋಮಣ್ಣ ಮತ್ತು ಜಿಂದಾಲ್ ಸಹ ಆರ್ಥಿಕ ನೆರವು ನೀಡಿದರು.

ಅಪ್ಪಾಜಿ ಅವರ ಸ್ನೇಹಿತ, ಉದ್ಯಮಿ ದಿ. ನಾಗರಾಜ್ ರಾವ್ ಜಗದಾಳೆ ಅಪಾರ ಮೊತ್ತದ ಹಣ ನೀಡಿದರು. ವಾಣಿ ವಿಲಾಸ ಆಸ್ಪತ್ರೆಯ ಆಗಿನ ನರ್ಸಿಂಗ್ ಸಿಬ್ಬಂದಿ ಹಾಗೂ ವೈದ್ಯರುಗಳು ಕೈಜೋಡಿಸಿದರು. ಹೀಗೆ ನೆರವು ನೀಡಿದವರ ಸಂಖ್ಯೆ ಬಹಳ- ಪಟ್ಟಿಯೂ ದೊಡ್ಡದಿದೆ.
ಆದರೆ ಅಪ್ಪಾಜಿ 1988ರ ಮೇ ತಿಂಗಳಿನಲ್ಲಿ ನಿರಾಶೆಯಿಂದಲೇ ನಿವೃತ್ತರಾಗುವಂತಾಯಿತು.

ಇಬ್ಬರು ಸಿಬ್ಬಂದಿ ಜೊತೆಗೆ ಯೋಜನಾ ವರದಿ ತಯಾರಿಸಲು ಅವರು ವಿಶೇಷ ಅಧಿಕಾರಿಯಾಗಿ ನೇಮಕಗೊಂಡ ಬಳಿಕ ಸಾರ್ವಜನಿಕರಿಂದ ಒತ್ತಡ ತೀವ್ರವಾಯಿತು. ಮುದ್ದುಲಿಂಗಪ್ಪ ಮತ್ತು ಅವರ ನಂಬಿಕಸ್ಥ ಅಟೆಂಡರ್ ಗೋಪಾಲ್ ಅವರಿಗೆ ನೆರವಾಗಲು ನಿಯೋಜಿತರಾದರು.

ಸಂಸ್ಥೆಯ ಕಚೇರಿಗಾಗಿ ವಾಣಿ ವಿಲಾಸದ ಆವರಣದಲ್ಲಿನ ನೆಲಮಾಳಿಗೆಯ 10x10 ವಿಸ್ತೀರ್ಣದ ಉಗ್ರಾಣದ ಕೊಠಡಿಯಲ್ಲಿ ಒಂದು ಕುರ್ಚಿ ಮತ್ತು ಟೇಬಲ್ ಒದಗಿಸಲಾಯಿತು. ನಂತರದ ದಿನಗಳಲ್ಲಿ ಅಪ್ಪಾಜಿ ಸಾಕಷ್ಟು ವಿರೋಧ ಮತ್ತು ಅವಮಾನ ಎದುರಿಸುವಂತಾಯಿತು. ಒಬ್ಬ ನಿವೃತ್ತ ಸರ್ಕಾರಿ ಅಧಿಕಾರಿಯನ್ನು ಯಾರು ತಾನೆ ಗೌರವಿಸಿಯಾರು?

ಒಂದು ದಿನ, `ಮಕ್ಕಳ ಆರೋಗ್ಯ ಸಂಸ್ಥೆಯ ಕಚೇರಿ' ಎಂಬ ಫಲಕ ತುಂಡು ತುಂಡಾಗಿ ಬಿದ್ದು, ಕೊಠಡಿಯ ಬಾಗಿಲು ತೆರೆದು, ಕಡತಗಳನ್ನು ಚೆಲ್ಲಾಡಿದ್ದು ನನ್ನ ಕಣ್ಣಿಗೆ ಬಿತ್ತು. ನಾನು ಅಪ್ಪಾಜಿಗೆ ವಿಷಯ ತಿಳಿಸಿದ ಕೂಡಲೇ ಅವರು ಸಂಸ್ಥೆಯ ಕಾಗದ ಪತ್ರಗಳನ್ನು ಮತ್ತು ತುಂಡಾದ ಫಲಕವನ್ನು ತೆಗೆದುಕೊಳ್ಳಲು ತಮ್ಮ ಇಬ್ಬರು ನಿಯೋಜಿತ ಸಹಾಯಕರೊಂದಿಗೆ ಬಂದರು. ಆ ದಿನ ನಾನು ಅಪ್ಪಾಜಿಯ ಕಣ್ಣಲ್ಲಿ ಕಂಡದ್ದು ಕಣ್ಣೀರಲ್ಲ, ರಕ್ತವನ್ನು.

ಸಂಸ್ಥೆಯ ಕಾಗದ ಪತ್ರಗಳನ್ನು ಆನಂದರಾವ್ ವೃತ್ತದಲ್ಲಿದ್ದ ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯದ ಒಂದನೇ ಮಹಡಿಯ ಕಾರಿಡಾರ್‌ನಲ್ಲಿದ್ದ ಪುಟ್ಟ ಜಾಗಕ್ಕೆ ವರ್ಗಾಯಿಸುವ ಕೆಲಸದಲ್ಲಿ ನಾನೂ ಜೊತೆಗೂಡಿದೆ. ದಾನಿಗಳು ಅಪ್ಪಾಜಿಯನ್ನು ನೋಡಲು ಬಂದಾಗ ಅವರಿಗೆ ತಮ್ಮ ಯೋಜನಾ ಕಚೇರಿಯನ್ನು ತೋರಿಸಲು ನೋವು ಹಾಗೂ ಮುಜುಗರ ಉಂಟಾಗುತ್ತಿತ್ತು.

ಸೂಕ್ತ ಪರಿಕರ ಸಾಮಗ್ರಿಗಳು, ಕುರ್ಚಿಗಳು ಅಲ್ಲಿರಲಿಲ್ಲ. ದಾನಿಗಳನ್ನು ಕೂರಿಸಿ ಅಪ್ಪಾಜಿ, ಮುದ್ದುಲಿಂಗಪ್ಪ ಮತ್ತು ಗೋಪಾಲ್ ನಿಂತುಕೊಳ್ಳುತ್ತಿದ್ದರು. ಮೂವರೂ ಆಯಾಸವನ್ನು ತೋರಗೊಡದೆ ಅವಿರತ ಶ್ರಮವಹಿಸಿ ಕಾರ್ಯರೂಪಕ್ಕೆ ತರುವಂಥ ಯೋಜನಾ ವರದಿಯನ್ನು ನಾಲ್ಕು ತಿಂಗಳಲ್ಲಿ ಸಿದ್ಧಪಡಿಸಿದರು.

ಬದಲಾದ ಸರ್ಕಾರ ಮತ್ತು ಅದರ ಆದ್ಯತೆಗಳ ಕಾರಣದಿಂದಾಗಿ ಯೋಜನೆ ನಿಷ್ಕ್ರಿಯ ಸ್ಥಿತಿಗೆ ತಲುಪಿತು. ಇದರಿಂದ ಬೇಸತ್ತ ಅಪ್ಪಾಜಿ ಮುದ್ದಲಿಂಗಪ್ಪ ಹಾಗೂ ಗೋಪಾಲ್ ಅವರನ್ನು ಮನೆಗೆ ಕಳುಹಿಸಿ ತಾವೂ ಮನೆಗೆ ಬಂದರು. ಇದುವರೆಗೆ ಪಟ್ಟ ಶ್ರಮವನ್ನು ಬಿಟ್ಟುಬಿಡಲು ಮುದ್ದುಲಿಂಗಪ್ಪ ಹಾಗೂ ಗೋಪಾಲ್ ಇಬ್ಬರೂ ನಿರಾಕರಿಸಿದರು.

ಆದರೆ ಈ ಹೋರಾಟ ನಡೆಸಲು ಅಪ್ಪಾಜಿ ಮನವೊಲಿಸಲು ಅವರಿಗೆ ಸಾಧ್ಯವಾಗಲಿಲ್ಲ. ಮನೆಗೆ ಮರಳುವಾಗ ಅವರ ನಿರಾಶೆ ದ್ವಿಗುಣಗೊಂಡಿತ್ತು. ಅದೇ ವೇಳೆ ಧಾರವಾಡದ ಮಾಧ್ಯಮಿಕ ಶಾಲೆಯ ನಿವೃತ್ತ ಶಿಕ್ಷಕರೊಬ್ಬರು ಮಕ್ಕಳ ಆರೋಗ್ಯ ಸಂಸ್ಥೆಗಾಗಿ ತಮ್ಮ ಪಿಂಚಣಿ ಹಣದಿಂದ ನೂರು ರೂಪಾಯಿಯ ಮನಿ ಆರ್ಡರ್ ಮಾಡಿದರು. ಆ ಮನಿ ಆರ್ಡರ್ ಅಪ್ಪಾಜಿಯ ಮನಸ್ಸನ್ನು ಬದಲಿಸಿತು!

`ಧೈರ್ಯವಂತರನ್ನು ಮಾತ್ರ ಯಶಸ್ಸು ಅಪ್ಪಿಕೊಳ್ಳುತ್ತದೆ, ಅಂಜುವವರ ಬಳಿ ಇಲ್ಲವೇ ಇಲ್ಲವೆನ್ನುವಂತೆ ಬಂದ ಹಾಗೆ ಸೋಗುಹಾಕುತ್ತದೆ' ಎಂಬ ಪಂಡಿತ್ ನೆಹರೂ ಮಾತು ಅವರ ಮನದಲ್ಲಿ ಬೇರೂರಿತು.

ಈ ನಡುವೆ ಅವರ ಆಪ್ತ ಗೆಳೆಯರಾಗಿದ್ದ ದಿ. ನಾಗರಾಜರಾವ್ ಜಗದಾಳೆಯವರಿಗೆ ತಮ್ಮ ಸ್ನೇಹಿತನಿಗಾದ ನೋವು, ಹತಾಶೆ, ಅವಮಾನವನ್ನು ತಾಳಿಕೊಳ್ಳಲು ಆಗಲಿಲ್ಲ. `ಡಾ. ಬೆನಕಪ್ಪ ಎಡೆಬಿಡದೆ ಹೆಣಗಾಡುತ್ತಿರುವ ಸರ್ಕಾರದ ಈ ನಿಷ್ಪ್ರಯೋಜಕ ಕಸರತ್ತಿನ ಬದಲು, ಡಾ. ಬೆನಕಪ್ಪ ಮಕ್ಕಳ ಆಸ್ಪತ್ರೆಯನ್ನು ಖಾಸಗಿ ಅಥವಾ ಟ್ರಸ್ಟ್ ರೂಪದಲ್ಲಿ ನೀವ್ಯಾಕೆ ನಡೆಸಬಾರದು' ಎಂಬ ಸಲಹೆ ನೀಡಿದರು.

ಅದಕ್ಕೆ ಅಪ್ಪಾಜಿ ತಕ್ಷಣ ಪ್ರತಿಕ್ರಿಯಿಸಿದ್ದು, `ನನ್ನ ಉದ್ದೇಶ ಕುಟುಂಬದ ಹೆಸರು ಅಥವಾ ಲಾಭವಲ್ಲ. ನನ್ನ ಮುಖ್ಯ ಕಾಳಜಿ ಇರುವುದು ಕರ್ನಾಟಕದ ಬಡ ಮಕ್ಕಳ ಬಗ್ಗೆ'. ಆಗಿನ ದಿನಗಳಲ್ಲಿ ಜನರು ಉತ್ತಮ ಮನಸ್ಸುಳ್ಳವರು ಮತ್ತು ನಿಸ್ವಾರ್ಥಿಗಳಾಗಿದ್ದರು. ಅವರು ಹಣದ ನೆರವು ಮಾತ್ರವಲ್ಲ ಜಮೀನನ್ನೂ ನೀಡಿದ್ದರು. ಹೀಗಾಗಿ ಅಪ್ಪಾಜಿ ನಮ್ಮ ಯಾರೊಬ್ಬರ ಮಾತೂ ಕೇಳಲಿಲ್ಲ.

ಮುಂದೆ ಸರ್ಕಾರ ಬದಲಾಗಿ ದಿ. ನಾಗರತ್ನಮ್ಮ ಆರೋಗ್ಯ ಸಚಿವರಾಗಿ, ಬಿ.ಎನ್. ಬೆಟ್ಕೆರೂರ್ ಆರೋಗ್ಯ ಕಾರ್ಯದರ್ಶಿ ಮತ್ತು ಎಸ್.ಬಿ. ಮುದ್ದಪ್ಪ ಆರ್ಥಿಕ ಆಯುಕ್ತರಾಗಿ ನೇಮಕವಾದ ಬಳಿಕ ಯೋಜನೆ ಮತ್ತೆ ಜೀವ ಪಡೆದುಕೊಂಡಿತು, ಅದೂ `ಇಂದಿರಾಗಾಂಧಿ ಮಕ್ಕಳ ಆರೋಗ್ಯ ಸಂಸ್ಥೆ' (ಐಜಿಐಸಿಎಚ್) ಎಂಬ ಹೆಸರು ಇಡಬೇಕೆಂಬ ಒಂದು ಷರತ್ತಿನ ಮೇಲೆ.

ಅಪ್ಪಾಜಿಗೆ ಸಂಸ್ಥೆಯ ಹೆಸರು ಮುಖ್ಯ ವಿಷಯವಾಗಿರಲಿಲ್ಲ. ಆದರೆ ಅದಕ್ಕೊಂದು ಹೆಸರು ಇರಲೇಬೇಕಾಗಿತ್ತು. ಇಷ್ಟೆಲ್ಲಾ ಆದರೂ ಸಂಸ್ಥೆ ಉಸಿರಾಟ ಪ್ರಾರಂಭಿಸಲಿಲ್ಲ. ಅದು ಶುರುಮಾಡಿದ್ದು ಪುಟ್ಟಸ್ವಾಮಿಗೌಡ ಆರೋಗ್ಯ ಸಚಿವರಾಗಿ 1991ರಲ್ಲಿ ಅಪ್ಪಾಜಿ ಅವರನ್ನು ಐಜಿಐಸಿಎಚ್‌ನ ನಿರ್ದೇಶಕರನ್ನಾಗಿ ನೇಮಿಸಿದ ಬಳಿಕ.

ಅರವತ್ತೊಂದರ ಹರೆಯದ ಅಪ್ಪಾಜಿ ಹೊಸ ಚೈತನ್ಯ ತುಂಬಿಕೊಂಡು ತಮ್ಮ ನೋಯುವ ಕಾಲುಗಳನ್ನು ಎಳೆದುಕೊಂಡು ಸುತ್ತಲೂ ಓಡಾಡಿ ನೆರವು ಸಂಗ್ರಹಿಸಿದರಲ್ಲದೆ ಕಟ್ಟಡ ನಿರ್ಮಾಣದ ಮೇಲ್ವಿಚಾರಣೆಯನ್ನೂ ನೋಡಿಕೊಂಡರು. ಚಿಕ್ಕ ವಯಸ್ಸಿನಿಂದಲೂ ಅಪ್ಪಾಜಿ  ರಕ್ತನಾಳದ ಊತದಿಂದ ಅತೀವ ನೋವು ಅನುಭವಿಸುತ್ತಿದ್ದಾರೆ.

ಇಂದಿಗೂ ಅದನ್ನು ಎದುರಿಸುತ್ತಿದ್ದಾರೆ. ಅಮೆರಿಕದ ಮಯೊ ಕ್ಲಿನಿಕ್‌ನಲ್ಲಿ ಅವರನ್ನು ಪರೀಕ್ಷಿಸಿದ ತಜ್ಞವೈದ್ಯರೊಬ್ಬರು ಅದಕ್ಕೆ ಶಸ್ತ್ರಚಿಕಿತ್ಸೆ ಮಾಡಲು ಸಾಧ್ಯವಿಲ್ಲ ಮತ್ತು ಜೀವನಪರ್ಯಂತ ನೋಯುವ ಕಾಲುಗಳೊಂದಿಗೆ ಬದುಕು ಸಾಗಿಸಬೇಕಾಗುತ್ತದೆ ಎಂದಿದ್ದರು.

ಕೆಲವು ನೆನಪುಗಳು
ಆರೋಗ್ಯ ಸಚಿವರಾಗಿದ್ದ ಎಚ್.ಟಿ. ಕೃಷ್ಣಪ್ಪ ಅವರ ಮನೆಗೆ ಅಪ್ಪಾಜಿ ಜೊತೆಗೆ ನಾನೂ ಹೋಗಿದ್ದೆ. ದೀರ್ಘಕಾಲ ಕಾದ ಬಳಿಕ ನಮಗೆ ಒಳಗೆ ಬರಬಹುದೆಂಬ ಕರೆ ಬಂತು. ನಿಮ್ಹಾನ್ಸ್ ಪಕ್ಕದಲ್ಲಿ ಆಸ್ಪತ್ರೆ ನಿರ್ಮಾಣಕ್ಕೆ ಜಾಗವನ್ನು ಗುರುತಿಸಿದ್ದು, ಅದಕ್ಕೆ ನಾಲ್ಕೂವರೆ ಎಕರೆ ಭೂಮಿ ನೀಡಬೇಕು ಎಂದು ಹಿಂಜರಿಕೆಯಿಂದಲೇ ಅಪ್ಪಾಜಿ ಅವರನ್ನು ಕೇಳಿದರು.

ಆದರೆ ಕೃಷ್ಣಪ್ಪ ಎಂಟು ಎಕರೆ ಮಂಜೂರು ಮಾಡಿದರು (ಇದೆಲ್ಲವೂ ನನ್ನಿಂದಲೇ ಆದದ್ದೆಂದು ನಾನು ಭಾವಿಸಿದ್ದೇನೆ!- `ಅದೃಷ್ಟಶಾಲಿ ಮಹಿಳೆ'). ಸಾಗರದಾಚೆಗಿನ ಸ್ನೇಹಿತರಾದ ಡಾ. ವಿದ್ಯಾಸಾಗರ್, ಡಾ. ರಾಜಮ್ ರಾಮಮೂರ್ತಿ, ಡಾ. ಟಿ.ಎಸ್. ಸುರ್ಪುರೆ, ಡಾ. ಪಾಂಡುರಂಗಿ ಮುಂತಾದವರು, ಅಮೆರಿಕ/ಇಂಗ್ಲೆಂಡ್ ಆಸ್ಪತ್ರೆಗಳಿಗೆ ಸರಿಸಮನಾಗಿರುವಂತೆ ತಾಂತ್ರಿಕ ಸಲಹೆಗಳನ್ನು ನೀಡಿದ್ದಲ್ಲದೆ, ತಮ್ಮಿಂದಾದ ಸಹಾಯವನ್ನೂ ಮಾಡಿದರು.

ಭರವಸೆ ನೀಡಿದಂತೆ, 1989ರಲ್ಲಿ ನಾನು ಷಿಕಾಗೊದಿಂದ ಮರಳುವಾಗ ಡಾ. ವಿದ್ಯಾಸಾಗರ್ ನನ್ನೊಂದಿಗೆ ವೆಂಟಿಲೇಟರ್ ಒಂದನ್ನು ಕಳುಹಿಸಿದ್ದರು. ಆಗಿನ ದಿನಗಳಲ್ಲಿ ಭಾರತದಲ್ಲಿ ವೆಂಟಿಲೇಟರ್ ಸುಲಭವಾಗಿ ಲಭ್ಯವಾಗುತ್ತಿರಲಿಲ್ಲ. ವೆಂಟಿಲೇಟರ್‌ಗೆ ಜಾಗ ಮಾಡಿಕೊಳ್ಳಲಿಕ್ಕಾಗಿ ನಾನು ನನ್ನ ಸಾಮಾನು ಸರಂಜಾಮುಗಳನ್ನು ತ್ಯಾಗ ಮಾಡಿದ್ದೆ.

ಆದರೆ ಸಂಸ್ಥೆ ತಲೆ ಎತ್ತುವವರೆಗೂ ಅದು ಹಲವು ಕಾಲ ವಿವಿಧ ಸ್ಥಳಗಳಲ್ಲಿ ಬಿದ್ದಿರುವಂತಾಗಿತ್ತು! ಬಳಿಕ ಅದನ್ನು ಸೇಂಟ್ ಜಾನ್ಸ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಡಾ. ವಿದ್ಯಾಸಾಗರ್ ಅವರು ದಾನವಾಗಿ ನೀಡಿದರು. ಆ ದಿನದಂದು ಅಪ್ಪಾಜಿಯವರ ಮುಖವನ್ನು ಎದುರಿಸುವ ಸಾಮರ್ಥ್ಯ ನನಗಿರಲಿಲ್ಲ.

ಸರ್ಕಾರ ಪತನಗೊಂಡ ಬಳಿಕ ಅಧಿಕಾರ ಕಳೆದುಕೊಂಡಿದ್ದ ದಿ. ಪುಟ್ಟಸ್ವಾಮಿ ಗೌಡ ಮತ್ತು ಎ.ಬಿ. ಪಾಟೀಲ್ ಅವರನ್ನು ಮಧ್ಯಾಹ್ನದ ಊಟಕ್ಕೆಂದು ನಮ್ಮ ಮನೆಗೆ ಆಹ್ವಾನಿಸಲಾಗಿತ್ತು. ಅವರಿಬ್ಬರೂ ಅಪ್ಪಾಜಿಗೆ ಹೇಳುತ್ತಿದ್ದ ಮಾತು ನನಗೆ ಸ್ಪಷ್ಟವಾಗಿ ನೆನಪಿದೆ, `ಡಾ. ಬೆನಕಪ್ಪ ಅವರೇ, ಎಷ್ಟು ಚಿಕ್ಕ ಮನೆಯನ್ನು ಹೊಂದಿದ್ದೀರಿ.

ನೀವು ದೊಡ್ಡ ಬಂಗಲೆಯಲ್ಲಿ ವಾಸಿಸುತ್ತಿದ್ದೀರಿ ಎಂದೇ ನಾವು ಭಾವಿಸಿದ್ದೆವು.' ಆಗ ಅವರು ಪ್ರತಿಕ್ರಿಯಿಸಿದ್ದು, `ಸರ್ ನನ್ನ ಆಸ್ತಿಗಳೆಂದರೆ ಒಂದು ಮನೆ, ಒಂದು ಕಾರು, ಒಂದು ಹೆಂಡತಿ, ಆದರೆ ಇಬ್ಬರು ಮಕ್ಕಳು'.

ಮಕ್ಕಳ ಆರೋಗ್ಯದಲ್ಲಿನ ಅವರ ಸೇವೆಯನ್ನು ಪರಿಗಣಿಸಿ ಕರ್ನಾಟಕ ಸರ್ಕಾರ 1986ರಲ್ಲಿ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿತು. ಅದೇ ದಿನ ನಟ ದಿ. ಬಾಲಕೃಷ್ಣ ಅವರನ್ನೂ ಗೌರವಿಸಿದ್ದು ನನಗೆ ನೆನಪಿದೆ. ಅವರು ನನ್ನ ಬಳಿ ಬಂದು ಕೇಳಿದ್ದು `ಈ ಪದಕ ನಿಜಕ್ಕೂ ಚಿನ್ನದ್ದೇ?'

ಅಪ್ಪಾಜಿ ಬಿ.ಸಿ.ರಾಯ್ ರಾಷ್ಟ್ರೀಯ ಪ್ರಶಸ್ತಿಯನ್ನು ಎರಡು ಸಲ (1999ರಲ್ಲಿ ಡಾ.ಬಿ.ಸಿ. ರಾಯ್ ಸಂಶೋಧನಾ ಯೋಜನೆಯು, ಸಂಶೋಧನಾ ಯೋಜನೆಗಳಿಗೆ ನೀಡುವ ಅನುದಾನ ಅಥವಾ ನೆರವಿನ ಅಡಿಯಲ್ಲಿ ಮತ್ತು 2000ದಲ್ಲಿ ವೈದ್ಯಶಾಸ್ತ್ರದ ವಿವಿಧ ವಿಭಾಗಗಳಲ್ಲಿ ವೈಶಿಷ್ಟ್ಯಗಳ ಅಭಿವೃದ್ಧಿಗೆ ಸ್ಫೂರ್ತಿ ನೀಡುವಲ್ಲಿನ ಅತ್ಯುತ್ತಮ ಪ್ರತಿಭೆ) ಪಡೆದ ಮೊದಲ ಭಾರತೀಯ.

ಅಪ್ಪಾಜಿ ದೆಹಲಿಗೆ ತೆರಳುವಾಗ ಅಮ್ಮನೂ ಅವರ ಜೊತೆಗೆ ಇದ್ದರು. 2000ನೇ ಇಸವಿಯಲ್ಲಿ ಆಗಿನ ರಾಷ್ಟ್ರಪತಿಗಳಾಗಿದ್ದ ಅಬ್ದುಲ್ ಕಲಾಂ ಅವರಿಂದ ಪ್ರಶಸ್ತಿ ಸ್ವೀಕರಿಸಿದರು, ಅಪ್ಪಾಜಿ ಯಾವಾಗಲೂ ಛಾಯಾಚಿತ್ರಗಳಿಗೆ ಮುಖವೊಡ್ಡಲು ಸಂಕೋಚಪಟ್ಟುಕೊಳ್ಳುತ್ತಿದ್ದರು. ಆದರೆ ರಾಷ್ಟ್ರಪತಿಗಳು ಅವರನ್ನು ಮುಂದೆ ಕರೆತಂದು ಛಾಯಾಚಿತ್ರ ತೆಗೆಸಿಕೊಂಡರು.

ಈ ಪ್ರಶಸ್ತಿಗಳಿಂದ ಅವರು ಪಡೆದ ಲಕ್ಷಗಟ್ಟಲೆ ಮೊತ್ತವನ್ನು ಕೂಡ ಐಜಿಐಸಿಎಚ್‌ಗೆ ದಾನ ಮಾಡಿದರು. ಆಯಾಸವೇ ಅರಿಯದೆ, ನಿಸ್ವಾರ್ಥ ಪ್ರಯತ್ನಗಳಿಂದ ಸರ್ಕಾರಗಳು, ಸಚಿವರುಗಳು, ಪಕ್ಷಗಳು ಮತ್ತು ವೈಯಕ್ತಿಯವಾಗಿ ಜನರು ಸಹಾಯ, ಕಾಣಿಕೆ ನೀಡುವುದರ ಮೂಲಕ ಐಜಿಐಸಿಎಚ್‌ನ ಬೆಳವಣಿಗೆಗೆ ಕಾರಣವಾದರೂ, ಡಾ. ಡಿ.ಜಿ. ಬೆನಕಪ್ಪ, ಶ್ರೀ ಮುದ್ದುಲಿಂಗಪ್ಪ ಮತ್ತು ಶ್ರೀ ಗೋಪಾಲ್ ಐಜಿಐಸಿಎಚ್ ಅನ್ನು ಹಂತಹಂತವಾಗಿ ಸ್ಥಾಪಿಸುವ ಕಾರ್ಯವನ್ನು ಮುನ್ನಡೆಸಿದರು.

ಇಂದು ಇದು 250 ಹಾಸಿಗೆಗಳಿರುವ, 15 ಶಿಶುವೈದ್ಯ ತಜ್ಞರನ್ನು ಒಳಗೊಂಡ ಆಸ್ಪತ್ರೆ. ಐಜಿಐಸಿಎಚ್‌ಗಾಗಿ ಯಾವ ಅಪೇಕ್ಷೆಗಳಿಲ್ಲದೆ ನೆರವು ನೀಡಿದ ಎಲ್ಲಾ ನಿಸ್ವಾರ್ಥ ಜನರಿಗೂ ನನ್ನ ವಂದನೆಗಳು.

ಇಂದಿನ ಸಮಾಜದಲ್ಲಿ `ಹಣ ಸಂದಾಯ ಮಾಡುತ್ತದೆ- ಭ್ರಷ್ಟಾಚಾರ ಕೆಲಸ ಮಾಡುತ್ತದೆ'. ಇಲ್ಲಿ ನನ್ನ ಸಂಪತ್ತೆಂದರೆ ನನ್ನ ವಿದ್ಯಾರ್ಥಿಗಳು (ಅಧಿಕಾರ ಇಲ್ಲದವರು) ಮತ್ತು ಬಡ ರೋಗಿಗಳು (ದನಿಯಿಲ್ಲದವರು). ಸದ್ಗುಣಗಳಾದ ಅರ್ಹತೆ ಮತ್ತು ಪ್ರಾಮಾಣಿಕತೆ ಇತಿಹಾಸದ ಪುಟಗಳಿಗೆ ಸೇರುತ್ತಿದೆ ಎಂಬುದರ ಬಗ್ಗೆ ನನಗೆ ದುಃಖವಾಗುತ್ತಿದೆ. ಮುಂದಿನ ಪೀಳಿಗೆಗಾಗಿ ಅವುಗಳಿಗೆ ಪುನರ್ಜನ್ಮ ನೀಡುವ ಕೆಲಸವನ್ನು ಮಾಡಬೇಕಾದ ಸಮಯವಿದು.

ಇಂದು ನಾನು ಕೆಲವೊಮ್ಮೆ ವೈಫಲ್ಯಗಳಿಂದ ನಿರಾಶೆಗೊಂಡಾಗ ಅಪ್ಪಾಜಿ ಈ ಕಥೆಯನ್ನು ತೆರೆದಿಟ್ಟು ಹೇಳುವುದು- “ದೈವವೇ ದಾರಿ ತೋರುತ್ತದೆ” ಎಂದು. ಐಜಿಐಸಿಎಚ್ ಅನ್ನು ಪ್ರಾರಂಭಿಸಿದ್ದು ಹಾಗೂ ಶಿಶುವೈದ್ಯಕೀಯವನ್ನು ಒಂದು ಘಟಕ ಮತ್ತು ಸ್ಪೆಷಾಲಿಟಿಯಾಗಿ ಪರಿಚಯಿಸಿರುವ ಅವರಿಗೆ `ಪದ್ಮಶ್ರೀ' ನೀಡಬೇಕೆನ್ನವುದು ಅವರ ಹಿತೈಷಿಗಳ ಅಭಿಪ್ರಾಯ. 
 
`ಐಜಿಐಸಿಎಚ್' ಮೈಲುಗಲ್ಲುಗಳು
1982 ಮುಖ್ಯ ವಾಸ್ತುಶಿಲ್ಪಿ ಟಿ.ಜೆ. ದಾಸ್ ನೀಲನಕ್ಷೆ ತಯಾರಿಸಿದರು.
17.08.1984ರಲ್ಲಿ ಮಕ್ಕಳ ಆರೋಗ್ಯ ಸಂಸ್ಥೆಯ ನೋಂದಣಿ.
17.12.1987ರಲ್ಲಿ ಮುಖ್ಯಮಂತ್ರಿ ರಾಮಕೃಷ್ಣ ಹೆಗ್ಡೆ ಅವರಿಂದ ಶಂಕುಸ್ಥಾಪನೆ.
19.11.1993ರಲ್ಲಿ ಮುಖ್ಯಮಂತ್ರಿ ಎಂ.ವೀರಪ್ಪಮೊಯ್ಲಿ ಅವರಿಂದ ರೋಗಿಗಳ ಘಟಕದ ಉದ್ಘಾಟನೆ.

14.11.1995ರಲ್ಲಿ ಮುಖ್ಯಮಂತ್ರಿ ಎಚ್.ಡಿ. ದೇವೇಗೌಡ ಅವರಿಂದ ಒಳರೋಗಿಗಳ ಘಟಕದ ಉದ್ಘಾಟನೆ.

05.07.1999ರಂದು ಮುಖ್ಯಮಂತ್ರಿ ಜೆ.ಎಚ್. ಪಟೇಲ್ ಐಜಿಐಸಿಎಚ್‌ಅನ್ನು ದೇಶಕ್ಕೆ ಸಮರ್ಪಿಸಿದರು.

30.10.2002ರಂದು ಅಪ್ಪಾಜಿ ಸಂಸ್ಥಾಪಕ ನಿರ್ದೇಶಕ ಸ್ಥಾನದಿಂದ ನಿವೃತ್ತರಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT