ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರೆಯಲಾಗದ ಮೂರು ಚಿತ್ರಗಳು

Last Updated 16 ಜೂನ್ 2018, 9:16 IST
ಅಕ್ಷರ ಗಾತ್ರ

ನಾನು ಬೆಂಗಳೂರುವಾಸಿಯಾದರೂ ತಂತ್ರಜ್ಞಾನದ ವಿಷಯದಲ್ಲಿ ಅತ್ಯಂತ ಹಿಂದುಳಿದವನು. ಮನೆಯಲ್ಲಿ ಲೈಟ್ ಬಲ್ಬ್ ಬದಲಾಯಿಸಬಲ್ಲೆ. ಆದರೆ, ಓವೆನ್ ಅಥವಾ ಮೈಕ್ರೊ ಓವೆನ್ ಬಳಸಬೇಕಾಯಿತು ಎಂದರೆ ಏನನ್ನಾದರೂ ಸೀಯಿಸದೆ ಬಿಡುವುದಿಲ್ಲ.
 
ಈ ನನ್ನ ದಡ್ಡತನದಿಂದಾಗಿ (ಈ ವಿಚಾರದಲ್ಲಿ) ನನ್ನ ಹೆಚ್ಚು ಪ್ರತಿಭಾವಂತೆ ಪತ್ನಿ ಹಾಗೂ ಮಕ್ಕಳಿಗೆ ಸದಾ ನಾನು ರಂಜನೆಯ ಮೂಲ. ಅದೃಷ್ಟವಶಾತ್ ನನಗೆ ನೆರವು ಬೇಕಾದಾಗ, ಉದಾಹರಣೆಗೆ ನನ್ನ ಬರಹ ಇರುವ ಫೈಲ್ ಅನ್ನು ಹಾರ್ಡ್ ಡಿಸ್ಕ್‌ನಿಂದ ಸಿಡಿಗೆ ವರ್ಗಾಯಿಸಬೇಕಾದ ಸಂದರ್ಭಗಳಲ್ಲಿ, ಅವರು ಅಷ್ಟೇ ಉದಾರಿಗಳು.

  ಈ ಆಧುನಿಕತೆಯ ವಸ್ತುಗಳಲ್ಲಿ ಕ್ಯಾಮೆರಾ ಮಾತ್ರ ನನಗೆ ನಿರ್ವಹಿಸುವುದೇ ಸಾಧ್ಯವಿಲ್ಲವೇನೊ ಅನಿಸುತ್ತದೆ. ಇದೊಂದು ಕೊರತೆ ಎಂದೇ ನನಗೆ ತೀವ್ರವಾಗಿ ಅನಿಸಿದ್ದೂ ಇದೆ.
 
ಬೆಂಗಳೂರಿನ ದಿನನಿತ್ಯದ ಬದುಕು ಹಾಗೂ ಭಾರತದ ಇತರ ಭಾಗಗಳಲ್ಲಿ ನಾನು ಪ್ರವಾಸ ಮಾಡುವಾಗ 12ನೇ ಶತಮಾನ, 21ನೇ ಶತಮಾನ, ಅದೇ ರೀತಿ ಮಧ್ಯದ ಎಲ್ಲಾ ಶತಮಾನಗಳೂ ಏಕಕಾಲಕ್ಕೆ ಕಂಡು ಬರುವಂತಹ (ಲೇಖಕ ಯು ಆರ್ ಅನಂತಮೂರ್ತಿ ಒಮ್ಮೆ ಹೇಳಿದಂತೆ) ವೈರುಧ್ಯಗಳುಳ್ಳ ಗಮನ ಸೆಳೆಯುವಂತಹ ನೋಟಗಳು ನನಗೆ ಪದೇ ಪದೇ ಎದುರಾಗಿವೆ.

ಕೆಲವು ವರ್ಷಗಳ ಹಿಂದೆ ಶಿಮ್ಲಾದಿಂದ, ನಾನು ಹುಟ್ಟಿ ಬೆಳೆದ ಡೆಹ್ರಾಡೂನ್‌ಗೆ ಹೋಗುವಾಗ ನನ್ನ ಬಳಿ ಕ್ಯಾಮೆರಾ ಇರಬೇಕಿತ್ತು ಎಂದು ನನಗನ್ನಿಸಿತ್ತು. ಚಿಕ್ಕ ಹುಡುಗನಾಗಿದ್ದಾಗ, ಯಮುನಾ ನದಿ ದಂಡೆಯಲ್ಲಿರುವ ಫಾಂಟಾ ಸಾಹಿಬ್‌ನಲ್ಲಿರುವ ಗುರುದ್ವಾರಕ್ಕೆ ಕುಟುಂಬದವರ ಜೊತೆ ವಿಹಾರಾರ್ಥ ನಾನು ಆಗಾಗ್ಗೆ ಹೋಗಿದ್ದಿದೆ.

ಅಲ್ಲಿಗೆ ತಲುಪಲು ಬತ್ತದ ಗದ್ದೆಗಳು ಹಾಗೂ ಸಾಲ್ ಅರಣ್ಯಗಳ ಮೂಲಕ ಡೆಹ್ರಾಡೂನ್‌ನಿಂದ ಪಶ್ಚಿಮಕ್ಕೆ ಡ್ರೈವ್ ಮಾಡುತ್ತಾ (ಒಂದು ಸಂದರ್ಭದಲ್ಲಿ  ಸೈಕಲ್ ತುಳಿಯುತ್ತಾ) ಹೋಗುತ್ತಿದ್ದೆವು.

ಈ ಬಾರಿ, ನಾನು ಪಶ್ಚಿಮದಿಂದ ಪೂರ್ವಕ್ಕೆ ಕಾರಿನಲ್ಲಿ ಬರುತ್ತಿದ್ದೆ. ಬೆಳಗಿನ ಉಪಾಹಾರ ಮುಗಿಸಿ ಶಿಮ್ಲಾ ಬಿಟ್ಟು ಮಧ್ಯದಲ್ಲಿ ನಾಹನ್ ಬಳಿ ಧಾಬಾದಲ್ಲಿ ಸ್ವಲ್ಪ ಸಮಯ ಕಳೆದು ಮಧ್ಯಾಹ್ನಕ್ಕೆ ಸ್ವಲ್ಪ ಮುಂಚೆಯೇ ಗುರುದ್ವಾರವನ್ನು ತಲುಪಿದೆ.

ಮಂದಿರದೊಳಗೆಲ್ಲಾ ಓಡಾಡುತ್ತಾ, ನದಿಯ ಕಡೆಗೆ ಬಂದು ನಂತರ ಮತ್ತೆ ಕಾರಿನ ಬಳಿ ಸಾಗುತ್ತಿದ್ದಾಗ ಬಾಲ್ಯದ ಆ ಸಹಜ ಸುಂದರ ಸ್ನೇಹದ ನೆನಪುಗಳು ಮನದಲ್ಲಿ ಹಾದುಹೋದವು.

ಗುರುದ್ವಾರವನ್ನು ಬಿಟ್ಟು ಅದಕ್ಕೆ ತಗಲಿಕೊಂಡಿರುವ ಕಿರಿದಾದ ರಸ್ತೆಗಳಲ್ಲಿ ಸಾಗುತ್ತಾ ಉತ್ತರಾಖಂಡದ ಜೊತೆ ಹಿಮಾಚಲ ಪ್ರದೇಶವನ್ನು ಸಂಪರ್ಕಿಸುವ ಹೆದ್ದಾರಿಯನ್ನು ಹುಡುಕುತ್ತಾ ಸಾಗಿದೆವು.

ತಕ್ಷಣವೇ ನಾವು ಎರಡೂ ರಾಜ್ಯಗಳನ್ನು ವಿಭಜಿಸುವ ನದಿಗೆ ಅಡ್ಡಲಾಗಿ ಹಾಕಿದ ಹೊಸ ಸೇತುವೆ ಮೇಲಿದ್ದೆವು. ಈ ಸೇತುವೆಯ ಮೇಲೆ ನಾವು ಒಬ್ಬ ನಿಹಾಂಗ್ ಸಿಖ್‌ನನ್ನು ಹಾದು ಹೋದೆವು.

ಹಿಂದಿನ ಕಾಲದಲ್ಲಿ ಆತ ಕುದುರೆ ಸವಾರಿ ಮಾಡುತ್ತಿರುತ್ತಿದ್ದ. ಇಲ್ಲಿ ಲೌಕಿಕದ ವರ್ತಮಾನದಲ್ಲಿ, ಆತ ಬೈಸಿಕಲ್‌ನಲ್ಲಿದ್ದ. ಆತ ಭವ್ಯವಾಗಿ ಕಾಣುತ್ತಿದ್ದ. ಹೀಗಿದ್ದೂ ತನ್ನ ಪಂಥದವರ ಶೋಭಾಯಮಾನವಾದ ನೀಲಿ ಉಡುಪು ತೊಟ್ಟಿದ್ದ.

ತಲೆಯ ಮೇಲೆ ಸೊಗಸುಗಾರಿಕೆಯ ಪೇಟ ಹಾಗೂ ಸೊಂಟದಲ್ಲಿ ಕಿರ್‌ಪಾಣ್ ಧರಿಸಿದ್ದ. ಭಕ್ತಿಯಿಂದ (ಅಥವಾ ಬಹುಶಃ ಮತ್ತಿನ್ಯಾವುದರಿಂದಲೊ) ಈಗಾಗಲೇ ಕಂಗೊಳಿಸುತ್ತಿದ್ದ ಮುಖಕ್ಕೆ, ಮುಳುಗುವ ಸೂರ್ಯನಿಂದಾಗಿ ಆತನ ಕತ್ತಿಯ ಹೊಳಪೂ ಮುಖದ ಮೇಲೆ ಆಗಾಗ ಪ್ರತಿಫಲಿಸುತ್ತಿತ್ತು.

ನಾವು ಸೇತುವೆ ಬಿಟ್ಟಾಗ ಮತ್ತೊಂದು ಅಂತಿಮ ನೋಟ ಎಂದು ತಿರುಗಿದೆ. ಅಲ್ಲಿ ಆತ ಇದ್ದ. ಹಿನ್ನೆಲೆಯಲ್ಲಿ ಹಿಮಾಲಯದ ತಪ್ಪಲು, ಕೆಳಗೆ ಹರಿಯುವ ನದಿ,  ರಸ್ತೆಯಲ್ಲಿ ಏಕಾಂಗಿಯಾಗಿ ಠೀವಿಯಿಂದ ಸೈಕಲ್ ತುಳಿಯುತ್ತಿದ್ದ ಆತ.
 
ನನ್ನ ಬಳಿ ಆಗ ಕ್ಯಾಮೆರಾ ಇದ್ದಿದ್ದರೆ, ನನಗೆ ಅದನ್ನು ಬಳಸಲು ಬಂದಿರುತ್ತಿದ್ದರೆ, ನನ್ನ ಕಣಿವೆಗೆ ಆಗಮಿಸುತ್ತಿರುವ ಆ ಸಿಖ್‌ನ ಚಿತ್ರ ಎಂದೆಂದೂ ನಾನು ಬರೆಯುವ ಕಂಪ್ಯೂಟರ್‌ನಲ್ಲಿ ನನ್ನ ಸ್ಕ್ರೀನ್ ಸೇವರ್ ಆಗಿ ಕುಳಿತಿರುತ್ತಿತ್ತು.

ಸೇತುವೆಯ ಮೇಲಿನ ಆ ಸಿಖ್‌ನ ಚಿತ್ರ ನೆನಪಿಂದ ಮರೆಯಾಗುತ್ತಿದ್ದಂತೆಯೇ, ಒಂದು ವರ್ಷದ ನಂತರ ನಾನು ಪಟ್ನಾದಲ್ಲಿದ್ದೆ. ಅ್ಲ್ಲಲಿಯೇ ಬಾಲ್ಯ ಕಳೆದಿದ್ದ ನನ್ನ ಸ್ನೇಹಿತೆ ನಗರ ಸುತ್ತಾಡಲು ಕರೆದೊಯ್ದಳು.
 
ಗೋಲ್‌ಘರ್, ಗಾಂಧಿ ಮೈದಾನ, ಕದಮ್ ಕೌನ್‌ನಲ್ಲಿ ಜಯಪ್ರಕಾಶ್ ನಾರಾಯಣರ ಮನೆ, ಪಟ್ನಾ ಕಾಲೇಜು.. ಹೀಗೆ. ಊಟಕ್ಕೆಂದು ವಿರಮಿಸುವ ಸಂದರ್ಭದಲ್ಲಿ ಆಕೆಯ ಸಹೋದ್ಯೋಗಿಯೊಬ್ಬರು ಎದುರಾದರು. ನಾವು ನೋಡಿದ್ದನ್ನೆಲ್ಲಾ ವರ್ಣಿಸುತ್ತಿದ್ದಾಗ, ತಬ್ಬಿಬ್ಬುಗೊಂಡು ಸೌಜನ್ಯದಿಂದಲೇ ಪ್ರಶ್ನಿಸಿದರು `ಆಪ್ ಗಂಗಾಜಿ ನಹಿ ದೇಖೆ ಕ್ಯಾ?~

ಊಟದ ನಂತರ, ತಪ್ಪಿಹೋದ ಈ ಸ್ಥಳವನ್ನು ನೋಡಲು ಹೊರಟೆವು. ದರ್ಭಾಂಗ ಮಹಾರಾಜನ ಒಂದಾನೊಂದು ಕಾಲದ ಅರಮನೆಯ ಮೂಲಕ ನದಿಯ ನೋಟ ಚೆನ್ನಾಗಿ ಕಾಣಿಸುತ್ತದೆ ಎಂದು ನನ್ನ ಸ್ನೇಹಿತೆ ಭಾವಿಸಿದಳು.
 
ಹೀಗಾಗಿ ವಿಶ್ವವಿದ್ಯಾಲಯದ ಬಳಿಯಿಂದ ನಿಧಾನಕ್ಕೆ ನಡೆದು, ಬದಿಯ ರಸ್ತೆಗೆ ಹೋದೆವು. ಅಲ್ಲಿಂದ ನಾವು ಸೇರಬೇಕಾದ ಸ್ಥಳ ಸೇರಿದೆವು. ನಾನಂತೂ ದಾರಿಯಲ್ಲೇ ಅರಮನೆಯ ಮೈದಾನದ ಗೋಡೆಯನ್ನು ನೋಡಿ ದಿಗ್ಮೂಢನಾಗಿ ನಿಂತುಬಿಟ್ಟೆ.

ಮಹಾರಾಜ ಅಲ್ಲಿ ಬದುಕಿದ್ದಾಗ ಗೋಡೆ ಹೇಗೆ ಕಾಣುತ್ತಿತ್ತೊ ಎಂಬುದು ದೇವರಿಗೇ ಗೊತ್ತು. ಈಗಂತೂ ಅದು ಬೆರಣಿಗಳಿಂದ ಮುಚ್ಚಿಹೋಗಿತ್ತು. ಬದಿಯಲ್ಲೇ ಎಂಜಿನಿಯರಿಂಗ್ ಕಾಲೇಜುಗಳ ಪ್ರವೇಶಕ್ಕೆ ಕೋಚಿಂಗ್ ಕ್ಲಾಸ್‌ಗಳ ಜಾಹೀರಾತುಗಳು ರಾರಾಜಿಸುತ್ತಿದ್ದವು.

ಬೆರಣಿಯ ಸಾಲುಗಳ ಜೊತೆಜೊತೆಗೇ ಪೋಸ್ಟರ್‌ಗಳ ಸಾಲುಗಳು. ನಗರದ ನಿವಾಸಿಗಳಿಗೆ ಹಾಲು ಸರಬರಾಜು ಮಾಡುವ ಎಮ್ಮೆಗಳನ್ನು ಇಟ್ಟುಕೊಂಡವರು ಹಾಗೂ ಬಿಹಾರಿ ಹುಡುಗರಿಗೆ ಅದರಲ್ಲೂ ಆಧುನಿಕ, ಜಾಗತಿಕ ಆರ್ಥಿಕತೆಯ ಭಾಗವಾಗಲು ಬಯಸುತ್ತಾ ತಮ್ಮ ಪಾರಂಪರಿಕ ನೆಲೆ ತೊರೆಯಲು ಬಯಸುವ ಹುಡುಗಿಯರಿಗಾಗಿ ತರಗತಿಗಳನ್ನು ನಡೆಸುತ್ತಿರುವವರ ಮಧ್ಯದ ಸಹಕಾರದ ಮೈತ್ರಿಯನ್ನು ಹೇಳುವುದಾಗಿತ್ತು ಇದು.

ಹೊಸದಾದ ಅಂದದ ಸೇತುವೆಯ ಮೇಲೆ ಕಂಡು ಬಂದ ಕಟ್ಟುಮಸ್ತಾದ ನಿಹಾಂಗ್, ಯೂರೋಪಿಯನ್ನರು ಅಥವಾ ಅಮೆರಿಕನ್ನರಂತಲ್ಲದೆ ಭಾರತೀಯರು ವರ್ತಮಾನದೊಂದಿಗಷ್ಟೇ ಅಲ್ಲದೆ ಭೂತಕಾಲದಲ್ಲೂ ಬದುಕುತ್ತಾರೆ ಎಂಬ ಯು. ಆರ್. ಅನಂತಮೂರ್ತಿಯವರ ಪ್ರತಿಪಾದನೆಗೆ ರುಜುವಾತು ಮಾಡುವಂತಿದ್ದ.

ಆದರೆ, ಪಟ್ನಾದಲ್ಲಿನ ಗೋಡೆ ಭವಿಷ್ಯತ್ತನ್ನೂ ಚೆನ್ನಾಗಿಯೇ ಆವಾಹಿಸಿಕೊಂಡಿತ್ತು. 19ನೇ ಶತಮಾನದಲ್ಲಿ ನಿರ್ಮಿತವಾಗಿದ್ದ ಅದು ಸಹಸ್ರ ಸಹಸ್ರಮಾನಗಳಿಂದ ಉಳಿದು ಬಂದ ಸಂಪನ್ಮೂಲಗಳ ರೀತಿನೀತಿಗಳ ಜೊತೆಜೊತೆಗೇ 21ನೇ ಶತಮಾನದ ಉದ್ಯೋಗಗಳ ಜಾಹಿರಾತುಗಳನ್ನೂ ಬಿತ್ತರಿಸಿತ್ತು.

ಯಮುನಾದ ಸುತ್ತಮುತ್ತ ಕಾರಿನಲ್ಲಿ ಓಡಾಟ ಹಾಗೂ ಗಂಗಾ ನದಿಗೆ ತಿರುಗಾಟವೆರಡೂ ಹಗಲಿನಲ್ಲೇ ನಡೆದಿದ್ದವು. ಮತ್ತೊಂದು ಸಂದರ್ಭದಲ್ಲಿ, ನಾನು ರಾತ್ರಿ 10ರ ವೇಳೆಯಲ್ಲಿ ಮನೆಗೆ ಕಾರಿನಲ್ಲಿ ಹೋಗುತ್ತಿದ್ದೆ.
 
ಆಗ ಅಪಘಾತವೊಂದರ ಪರಿಣಾಮವಾಗಿ ವಾಹನಗಳನ್ನೆಲ್ಲಾ ಹಲಸೂರು ಮಾರುಕಟ್ಟೆ ಮೂಲಕ ಹಾದು ಹೋಗುವ ರಸ್ತೆಗೆ ತಿರುಗಿಸಲಾಗುತ್ತಿತ್ತು. ಹಲಸೂರು ಬೆಂಗಳೂರಿನ ಕಂಟೋನ್ಮೆಂಟ್‌ನ ಅತ್ಯಂತ ಹಳೆಯ ವಸತಿ ಪ್ರದೇಶ.

ಈ ಬೀದಿಯಲ್ಲಿನ ವೈಶಿಷ್ಟ್ಯವೆಂದರೆ 19ನೇ ಶತಮಾನದಲ್ಲಿ ಕಟ್ಟಿದ ಚಿಕ್ಕದಾದ, ಸದಭಿರುಚಿಯ ವೆಸ್ಲಿ ಚರ್ಚ್. ಚರ್ಚ್ ಬಾಗಿಲು ಮುಚ್ಚಿದ್ದು ಅಲ್ಲಿ ಕತ್ತಲು ಕವಿದಿತ್ತು. ಆದರೆ ಅದರ ಎದುರಿನ ಅಂಗಡಿ ತೆರೆದಿದ್ದು ಢಾಳಾಗಿ ಬೆಳಕು ತುಂಬಿತ್ತು. ನಾನು ಆ ನೋಟ ಕಣ್ಣಲ್ಲಿ ತುಂಬಿಕೊಳ್ಳಲು ತಿರುಗಿದೆ.

ಉದ್ದವಾದ  ಕುಳ್ಳಮೇಜಿನ ಮೇಲೆ ಎತ್ತರಕ್ಕೆ ಜೋಡಿಸಿಡಲಾದ ನಸುಗೆಂಪಿನ ವಿವಿಧ ಛಾಯೆಗಳ ಒಳಉಡುಪುಗಳು. ಐದು, ಹತ್ತು ಹಾಗೂ ಹದಿನೈದು ರೂಪಾಯಿಗಳ ಬೆಲೆಗಳದ್ದೆಂದು ಇವನ್ನು ವಿವಿಧ ವರ್ಗಗಳಡಿ ವಿಂಗಡಿಸಿಡಲಾಗಿತ್ತು.

ಸಾಮಾನ್ಯವಾಗಿ `ರಫ್ತಿನಲ್ಲಿ ತಿರಸ್ಕೃತ~ವಾದ ವಸ್ತುಗಳನ್ನು ಮಾರುವಂತಹ ಅಂಗಡಿ ಇದು. ಆದರೆ ಇವು ಮತ್ತಿನ್ನೇನೋ ಆಗಿದ್ದವು.  ನಾನು ಮನೆಗೆ ಹೋಗುವ ಆತುರದಲ್ಲಿದ್ದೆ. ಹೀಗಾಗಿ ವಿಚಾರಿಸಲು ನಿಲ್ಲಲಿಲ್ಲ. ಆದರೆ ನನ್ನ ಊಹೆ ಏನೆಂದರೆ ಈ ಪಿಂಕ್ ಚಡ್ಡಿಗಳನ್ನು ಪ್ರಮೋದ್ ಮುತಾಲಿಕ್ ಎಂಬೊಬ್ಬರಿಂದ ಪಡೆದುಕೊಂಡಿದ್ದಿರಬೇಕು.

ಏಕೆಂದರೆ  ಕೆಲವು ತಿಂಗಳುಗಳ ಹಿಂದಷ್ಟೇ ಆಗ ಅವರು ಅಂಚೆ ಮತ್ತು ಕೊರಿಯರ್ ಮೂಲಕ ಸುಮಾರು ಅಂದಾಜು ಹದಿನೆಂಟು ಸಾವಿರ ಒಳ ಉಡುಪುಗಳನ್ನು ಪಡೆದುಕೊಂಡಿದ್ದರು.

ಇವುಗಳನ್ನು ಅವರಿಗೆ ಕಳಿಸಿದ್ದುದು ಬೆಂಗಳೂರಿನ ಪ್ರಜಾಸತ್ತಾತ್ಮಕ ಮನೋಭಾವದ ನಾಗರಿಕರು. ಮುತಾಲಿಕ್ ಮತ್ತವರ ಶ್ರೀರಾಮ ಸೇನೆ ಕರ್ನಾಟಕದ ವಿವಿಧ ಊರುಗಳಲ್ಲಿ ಹೆಣ್ಣುಮಕ್ಕಳ ಮೇಲೆ ಆಕ್ರಮಣ ನಡೆಸಿದ್ದು ಓದುಗರಿಗೆ ನೆನಪಿರುತ್ತದೆ.

ಸಂಪ್ರದಾಯಗಳ ಪ್ರಕಾರ ಮದುವೆಯಾಗದೆ ಸಾರ್ವಜನಿಕವಾಗಿ ಒಟ್ಟಾಗಿ ತಿರುಗುವ ಯಾವುದೇ ಯುವ ದಂಪತಿಗಳ ಮೇಲೆ ಆಕ್ರಮಣ ನಡೆಸುವುದಾಗಿ ಅವರು ಬೆದರಿಕೆ ಒಡ್ಡಿದ್ದರು. ಈ ಬೆದರಿಕೆ ವ್ಯಾಪಕ ಟೀಕೆಗಳಿಗೆ ಗುರಿಯಾಗಿದ್ದಲ್ಲದೆ ಪ್ರತಿಭಟನೆಗೂ ಕಾರಣವಾಯಿತು.
 
ಈ ಹಿನ್ನೆಲೆಯಲ್ಲಿ ರಾಷ್ಟ್ರದ ಮೂಲೆಮೂಲೆಗಳಿಂದ ಮುತಾಲಿಕ್‌ಗೆ ನಸುಗೆಂಪು ಚೆಡ್ಡಿಗಳನ್ನು ಅಂಚೆಯಲ್ಲಿ ಕಳಿಸಲಾಗಿತ್ತು. ಈಗ, ಆ ಚಡ್ಡಿಗಳನ್ನು ಮಾರಿ ಹಾಕಿದ್ದಿರಬಹುದೇ ಎಂಬಂತಹ ಊಹೆಯೊಂದು ಪರಿಗಣಿಸಬಹುದಾದ ವಿಷಯ.

 ತಾಂತ್ರಿಕವಾಗಿ ನನಗೆ ಹೆಚ್ಚು ನೈಪುಣ್ಯ ಇದ್ದಿದ್ದರೆ, ನಾನು ಆ ಮೂರೂ ಕ್ಷಣಗಳನ್ನು ಸೆರೆ ಹಿಡಿದಿರುತ್ತಿದ್ದೆ. ಯಮುನಾ ನದಿಗೆ ಅಡ್ಡಲಾಗಿ ಇರುವ ಸೇತುವೆಯ ಮೇಲಿನ ನಿಹಾಂಗ್ ಸಿಖ್, ಭೂತ ಹಾಗೂ ಭವಿಷ್ಯತ್ತಿನ ನಡುವೆ ಸಮಚಿತ್ತದಲ್ಲಿರುವಂತೆ ಕಂಡು ಬಂದ ಪಟ್ನಾದ ಗೋಡೆ, ಬೆಂಗಳೂರಿನಲ್ಲಿ ಹಳೆಯ ಚರ್ಚ್‌ಗೆ ಎದುರಾಗಿ ಮಾರಾಟಕ್ಕಿಟ್ಟ ನಸುಗೆಂಪು ಚಡ್ಡಿಗಳನ್ನು ಚಿತ್ರಗಳಾಗಿ ಸೆರೆ ಹಿಡಿದಿರುತ್ತಿದ್ದೆ.

ಅಕ್ಷರಗಳಲ್ಲಿ ಸಂಕೋಚದಿಂದ ಈ ಪ್ರಬಂಧ ಬರೆಯುವುದಕ್ಕಿಂತ ಹೆಚ್ಚು ಕಾಲ ಇರುವಂತಹ ಹೆಚ್ಚು ಸೂಕ್ಷ್ಮವಾಗಿರುವ ರೂಪದಲ್ಲಿ ಇವು ಸೆರೆಯಾಗಿರುತ್ತಿದ್ದವು. ನನಗೆ ಫೋಟೊ ತೆಗೆಯುವ ಕೌಶಲ ಅಥವಾ ಕ್ಯಾಮೆರಾ ಬಳಸುವ ಧೈರ್ಯ ಇರಬೇಕಿತ್ತು ಎಂದನ್ನಿಸಿದ ಇನ್ನೂ ಎಷ್ಟೋ ಸಂದರ್ಭಗಳು ಇವೆ.

ಕ್ಯಾಮೆರಾ ಬಳಕೆಗೆ ಒಂದಿಷ್ಟು ದೈಹಿಕ ಬಲವೂ ಇರಬೇಕಾಗಿದ್ದ ಡಿಜಿಟಲ್‌ಯುಗಕ್ಕಿಂತ ಮುಂಚಿನ ಕಾಲದಲ್ಲಿ ನಾನು ಬರೆಯಲು ಹಾಗೂ ಪ್ರವಾಸ ಮಾಡಲು ಆರಂಭಿಸಿದೆ ಎಂದು ನನ್ನ ಅಸಮರ್ಥತೆಯನ್ನು ಎಷ್ಟೋ ಸಲ ಕ್ಷಮಿಸಿಕೊಂಡಿದ್ದಿದೆ.

ಈಗ ಮಾರಾಟಕ್ಕಿರುವ ಮಾದರಿಗಳು ಒಟ್ಟಾರೆ ಮೂರ್ಖರೂ ಬಳಸಬಹುದಾದಂತಹದ್ದು ಎಂದು ನನ್ನ ಮಗಳು ಹೇಳುತ್ತಾಳೆ. ಇದನ್ನು ಬಳಸುವುದು ಅಥವಾ ದುರ್ಬಳಕೆ ಮಾಡುವುದು ಹೇಗೆಂಬುದನ್ನು ಅವಳು ನನಗೆ ತೋರಿಸಿಕೊಡಲು ಬಹುಶಃ ಇನ್ನೂ ಸಮಯವಿದೆ ಎನಿಸುತ್ತೆ.

   (ನಿಮ್ಮ ಅನಿಸಿಕೆ ತಿಳಿಸಿ:editpagefeedback@prajavani.co.in)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT