ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರೆಯಾದ ಪರಂಪರೆ

Last Updated 7 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಒಂದು ಊರಿನಲ್ಲಿ ಒಬ್ಬ ಸಾತ್ವಿಕ ಮನುಷ್ಯನಿದ್ದ. ಆತ ಸದಾ ಭಗವಂತನ ಧ್ಯಾನದಲ್ಲೇ ಮುಳುಗಿದ್ದು, ಯಾವಾಗಲೂ ಒಳ್ಳೆಯ ಚಿಂತನೆಗಳನ್ನೇ ಮಾಡುತ್ತ ಎಲ್ಲರಿಗೂ ಒಳ್ಳೆಯದನ್ನು ಬಯಸುತ್ತಿದ್ದ. ಸುತ್ತಮುತ್ತಲಿನ ಊರಿನ ಜನರು ತಮಗೆ ಯಾವುದಾದರೂ ತೊಂದರೆ ಬಂದರೆ ಅವನ ಹತ್ತಿರ ಬಂದು ಹೇಳಿಕೊಳ್ಳುತ್ತಿದ್ದರು. ಆತ ಅವುಗಳನ್ನೆಲ್ಲ ಪಟ್ಟಿ ಮಾಡಿ ಇಟ್ಟುಕೊಳ್ಳುತ್ತಿದ್ದ.

ಪ್ರತಿ ಭಾನುವಾರ ಆತ ಆ ಪಟ್ಟಿಯನ್ನು ತೆಗೆದುಕೊಂಡು ಹತ್ತಿರದ ಕಾಡಿನಲ್ಲಿ ತುಂಬ ಒಳಗೆ ಹೋಗಿ ಒಂದು ಸ್ಥಾನದಲ್ಲಿ ಕುಳಿತು ದೇವರನ್ನು ಪ್ರಾರ್ಥಿಸಿ ಎಲ್ಲ ಜನರು ಹೇಳಿದ ಕಷ್ಟಗಳ ಪಟ್ಟಿಯನ್ನು ಓದಿದ ವಾರದಲ್ಲೇ ಅವರ ಎಲ್ಲ ಕಷ್ಟಗಳು ಪರಿಹಾರವಾಗುತ್ತಿದ್ದುವಂತೆ. ಹೀಗೆಯೇ ಹಲವಾರು ವರ್ಷಗಳು ಕಳೆದವು. ಒಂದು ದಿನ ಈ ಸಾತ್ವಿಕ ಮರಣಹೊಂದಿದ.

ಅವನ ಮಗನಿಗೆ ತಂದೆ ಹೇಳುತ್ತಿದ್ದ ಪ್ರಾರ್ಥನೆ ತಿಳಿದಿತ್ತು. ಈತ ಆ ಸಾತ್ವಿಕನ ಮಗನೆಂದು ಊರಿನ ಅನೇಕ ಜನ ಇವನ ಬಳಿಗೂ ಬಂದು ತಮ್ಮ ಕಷ್ಟಗಳನ್ನು ಹೇಳಿಕೊಳ್ಳುತ್ತಿದ್ದರು. ಇವನೂ ತಂದೆಯಂತೆ ಕಷ್ಟಗಳ ಪಟ್ಟಿ ಮಾಡಿ ಇಡುತ್ತಿದ್ದ. ಪ್ರತಿ ಭಾನುವಾರ ತನ್ನ ಮನೆಯಲ್ಲೇ ದೇವರ ಪೂಜೆ ಮಾಡಿ, ಪಟ್ಟಿಯಲ್ಲಿದ್ದ ವಿವರಗಳನ್ನು ಓದಿ ಭಕ್ತಿಯಿಂದ ಈ ಕಷ್ಟಗಳನ್ನು ನಿವಾರಿಸಬೇಕೆಂದು ಬೇಡಿಕೊಳ್ಳುತ್ತಿದ್ದ. ಆಶ್ಚರ್ಯವೆಂದರೆ ಜನರ ಕಷ್ಟಗಳು ನಿವಾರಣೆಯಾಗುತ್ತಿದ್ದವು. ಇದೊಂದಿಷ್ಟು ವರ್ಷಗಳ ಕಾಲ ನಡೆಯಿತು. ನಂತರ ಅವನದು ದಿನ ತುಂಬಿ ಅವನೂ ಭಗವಂತನ ಪಾದ ಸೇರಿದ.

ಅವನ ಮಗನಿಗೆ ಯಾವ ಪ್ರಾರ್ಥನೆಯೂ ತಿಳಿಯದು. ಅವನಿಗೆ ಅದರ ಅವಶ್ಯಕತೆ ಎನ್ನಿಸಿರಲಿಲ್ಲ. ಆದರೆ ಒಂದೆರಡು ಬಾರಿ ಅಜ್ಜನ ಜೊತೆಗೆ ಕಾಡಿನಲ್ಲಿ ಆ ರಹಸ್ಯದ ಜಾಗೆಗೆ ಹೋಗಿದ್ದ. ಅದರ ನೆನಪು ಅವನಿಗಿತ್ತು. ಅಜ್ಜ ಮತ್ತು ಮಗನ ಹತ್ತಿರ ಹೇಗೆ ಜನ ತಮ್ಮ ತಾಪತ್ರಯಗಳನ್ನು ಹೇಳಿಕೊಳ್ಳುತ್ತಿದ್ದರೋ ಹಾಗೆಯೇ ಇವನ ಬಳಿಗೂ ಹೇಳತೊಡಗಿದರು.

ತಲೆತಲಾಂತರದಿಂದ ಭಗವಂತನ ಕೃಪೆ ಈ ಮನೆತನದ ಮೇಲೆ ಇಳಿದು ಬಂದಿದೆ ಎಂಬ ನಂಬಿಕೆ ಜನರಿಗೆಲ್ಲ. ಮೊದಲಿನ ಹಾಗೆ ಹೆಚ್ಚು ಜನ ಬರದಿದ್ದರೂ ಕೆಲವರು ವಿಶ್ವಾಸದಿಂದ ಬಂದೇ ಬರುತ್ತಿದ್ದರು. ಈ ಮೊಮ್ಮಗ ಆ ಕಷ್ಟಗಳ ಪಟ್ಟಿಯನ್ನು ಮಾಡಿಟ್ಟುಕೊಂಡು ತಿಂಗಳಿಗೊಮ್ಮೆ ಕಾಡಿನ ಆ ಸ್ಥಳಕ್ಕೆ ಹೋಗಿ ಕಣ್ಣುಮುಚ್ಚಿ,  `ದೇವರೇ ಇವರ ಕಷ್ಟಗಳನ್ನೆಲ್ಲ ಪರಿಹಾರ ಮಾಡು~ ಎಂದು ಕೇಳಿಕೊಳ್ಳುತ್ತಿದ್ದ. ವಿಚಿತ್ರವೆಂದರೆ ಇವನು ಬೇಡಿದಾಗಲೂ ಜನರ ಕಷ್ಟಗಳು ಕರಗಿ ಹೋಗುತ್ತಿದ್ದವು. ಮುಂದೊಂದು ದಿನ ಇವನದೂ ಆಯಸ್ಸು ಮುಗಿಯಿತು.

ಅವನ ಮಗನಿಗೆ ಅಂದರೆ ಸಾತ್ವಿಕನ ಮರಿಮಗನಿಗೆ ಆ ರಹಸ್ಯ ಸ್ಥಳವೂ ತಿಳಿಯದು, ಮಂತ್ರಗಳು, ಪ್ರಾರ್ಥನೆಗಳಂತೂ ಮೊದಲೇ ತಿಳಿಯವು. ಅದಲ್ಲದೇ ಅವುಗಳ ಬಗ್ಗೆ ಅವನಿಗೆ ತಾತ್ಸಾರ. ಮನೆಗೆ ಯಾರಾದರೂ ಹಿಂದಿನಂತೆ ಬಂದು ಕಷ್ಟಗಳನ್ನು ಹೇಳಿಕೊಂಡರೆ ಕೂಗಾಡುತ್ತಿದ್ದ,  `ನಾನೇನು ದೇವರ ಏಜಂಟನೇ? ನಿಮ್ಮ ಕಷ್ಟಗಳನ್ನು ನೀವೇ ಹೇಳಿಕೊಳ್ಳಿ.
 
ಅವನಿಗೆ ನಿಮ್ಮ ಮೇಲೆ ಕರುಣೆ ಬಂದರೆ ಅವುಗಳನ್ನು ನಿವಾರಿಸುತ್ತಾನೆ. ಇಲ್ಲವಾದರೆ ಅನುಭವಿಸಿ, ನಮ್ಮನ್ನು ಕಾಡಬೇಡಿ~ ಎಂದು ಕೂಗಾಡಿ ಅವರನ್ನು ಕಳುಹಿಸಿಬಿಡುತ್ತಿದ್ದ. ನಿಧಾನವಾಗಿ ಜನ ಅವನ ಮನೆಗೆ ಬರುವುದು ಕಡಿಮೆಯಾಗುತ್ತ ಒಂದು ದಿನ ಅದು ನಿಂತೇ ಹೋಯಿತು. ಮುಂದೆ ಜನರ ಕಷ್ಟಗಳು ಅವರವರ ಕರ್ಮಗಳಿಗೆ ಅನುಸಾರವಾಗಿ ಹೆಚ್ಚು ಕಡಿಮೆಯಾಗುತ್ತಿದ್ದವು. ಆದರೆ ಮರಿಮಗನ ಕಷ್ಟಗಳು ಹೆಚ್ಚಾಗತೊಡಗಿದವು. ಅವನಿಗೆ ದಿಕ್ಕೇ ತೋಚಲಿಲ್ಲ. ತಮ್ಮಂತಹ ಸಾಧಕರ ಮನೆಗೆ ಯಾಕೆ ಈ ಕಷ್ಟಗಳು ಬರುತ್ತವೆ ಎಂದು ಚಿಂತಿಸಿದ. ಅವನಿಗೆ ಪ್ರಾರ್ಥನೆಯೂ ಬರದು, ರಹಸ್ಯ ಸ್ಥಳವೂ ತಿಳಿಯದು. ಅವನು ಈ ಕೊರಗಿನಲ್ಲೇ ತೀರಿ ಹೋದ.

ಇದು ಒಂದು ಕಥೆ ಎಂದೆನಿಸಿದರೂ ಇದರ ಹಿಂದೆ ಒಂದು ಆಳವಾದ ಸತ್ಯವಿದೆ. ನಮ್ಮ ದೇಶದ ಪರಂಪರೆ ಬಹುದೊಡ್ಡದು, ಅದರ ಸಂಸ್ಕೃತಿ ಅತ್ಯದ್ಭುತವಾದದ್ದು, ಪುರಾತನವಾದದ್ದು ಎಂದು ಹೆಮ್ಮೆ ಪಡುವಾಗಲೇ ನಮ್ಮ ಹೊಸ ಜನಾಂಗದ ತರುಣರು ಅದರಿಂದ ವಂಚಿತರಾಗುತ್ತಿದ್ದಾರೆ ಎನ್ನಿಸುವುದಿಲ್ಲವೇ? ಆ ಸಾತ್ವಿಕ ಮನೆತನದಂತೆ ತಲೆಮಾರಿನಿಂದ ತಲೆಮಾರಿಗೆ ನಮ್ಮ ದೇಶದ ಕಿರಿಯರಿಂದ ಆದರ್ಶಗಳು, ಚಿಂತನೆಗಳು, ಮಹಾನುಭಾವರ ಜೀವನಗಳ ದರ್ಶನಗಳೂ ದೂರವಾಗುತ್ತ್ತಿವೆ ಎಂಬ ಭಾವನೆ ಬರುತ್ತಿದೆ.
 
ಇದಕ್ಕೆ ಕಾರಣ ಅವರಲ್ಲ, ನಾವೇ. ಸಾತ್ವಿಕ ತನ್ನ ಮಗನಿಗೆ ತನ್ನ ಬಗೆಯನ್ನು ತಿಳಿಸಲಿಲ್ಲ. ಅವನು ತನ್ನ ಮಗನಿಗೆ ಅದರ ಪರಿಚಯ ಮಾಡಲಿಲ್ಲ. ಹೀಗಾಗಿ ಅವುಗಳ ಮಹತ್ವ ಮರಿಮಗನಿಗೆ ತಿಳಿಯಲೇ ಇಲ್ಲ. ಇದನ್ನು ಸ್ವಲ್ಪವಾದರೂ ಸರಿಮಾಡಬೇಕಾದರೆ ಹಿರಿಯರು, ಶಿಕ್ಷಣ ಸಂಸ್ಥೆಗಳು ಆಸಕ್ತಿ ವಹಿಸಿ ಅದನ್ನು ಕಿರಿಯರಿಗೆ ತಿಳಿಸುವ ಪ್ರಯತ್ನ ಮಾಡಬೇಕು. ಇಲ್ಲದಿದ್ದರೆ ನಮ್ಮ ಸಂಸ್ಕೃತಿಗೆ ನಾವೇ ಪರಕೀಯರಾಗಿ ಬಿಡುತ್ತೇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT