ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲ ಹೊರುವವರ ದೇಶದಲ್ಲಿ ನಿಷೇಧದ ಕತೆ

Last Updated 23 ಜೂನ್ 2014, 19:30 IST
ಅಕ್ಷರ ಗಾತ್ರ

ಇದು ನಮ್ ಕಥೆ. ಬಾಳ ಹಳೇದು. ನಮಗೂ ಒಂದು ಕಥೆಯಿದೆ, ಬದುಕಿದೆ ಅಂತ ಯಾರಿಗೂ ಅನ್ಸೋದಿಲ್ಲ. ಏನೋ ಗೋಳು ಅಂತ ತಿಳಿಬೇಡಿ. ನಮ್ಮ ಕಾಯಕದಿಂದ ನಮ್ಮನ್ನು ಬಿಡು­ಗಡೆಗೊಳಿಸ್ಬೇಕು ಅಂತ ಸುಪ್ರೀಂ ಕೋರ್ಟ್‌ ಇದೇ ವರ್ಷ ಮಾರ್ಚ್‌ ೨೭ರಂದು  ಆದೇಶ ಹೊರ­­­ಡಿಸಿದೆ. ನಮಗೆ ಮನೆಗಳನ್ನು ಕಟ್ಟಿ­ಕೊಡ­ಬೇಕು ಅಂತ ಸರ್ಕಾರಕ್ಕೆ ಸೂಚನೆ ನೀಡಿದೆ. ನಮಗೆ ಅಂಥದ್ದೊಂದು ಕನಸು ಸಹ  ಎಂದೂ ಬಿದ್ದಿ­­ರ­ಲಿಲ್ಲ. ಯಾಕೆಂದರೆ ನಮಗೆ ಮನೆಗಳಲ್ಲಿ ಬದುಕೇ ಗೊತ್ತಿರಲಿಲ್ಲ. ಊರ ಹೊರಗಲ ಕೇರಿಯ ಕೊಂಪೆಗಳಲ್ಲಿ ನಮ್ದೂ ಒಂದು ಜೋಪಡಿ. ನಗರಕ್ ಬಂದ್ರೆ ಅಲ್ಲೂ ನಮಗೇ ಅಂತ ಜಾಗ ಇರೋದೇ ಬಿಡಿ, ಕಾಲೋನಿ ಇಲ್ಲವೇ ಸ್ಲಮ್ಮು ಅಂತೀರ.

ಹಳ್ಳಿಯಾಗಲಿ ಪಟ್ಟಣವಾಗಲಿ, ಬಾಂಬೆ, ಕಲ್ಕತ್ತ ಡೆಲ್ಲಿಯಂತಹ ನಗರಗಳಾಗಲಿ ನಾವೇ  ಅಲ್ವಾ ಕಸ ಬಳ್ದು ಬಾಚೋರು? ಅದರಲ್ಲೂ ನಗರ­­­ಗಳೂ ಹೆಚ್ಚಾದಂಗೆ ನಮಗೆ ಬೇಕಾದಷ್ಟು ಕೆಲಸ. ನಗರದಲ್ಲಿ ಪಕ್ಕ-ಪಕ್ಕ ಮನೆ ಕಟ್ಕೊಂಡು ಊರ ಹೊರಕ್ಕೆ ಪಾಯಿಖಾನೆಗಂತ ಹೋಗೋದು ತಪ್ಪಿ, ಪಾಯಿಖಾನೆ ಅಂದ್ರೆ ಅದೇ ಕಕ್ಕಸು ಮನೆ ಕಟ್ಕೊಳ್ಳೋಕೆ ಶುರು ಮಾಡಿದ್ರಲ್ಲ, ಆಗ ದಿನಾ ಗೋರಿ ಅದನ್ನ ಹಾಕೋಕೆ ನಮ್ಮನ್ನ ಕರ­­ಕೊಂಡ್ರು. ಎಲ್ಲಾ ನಗರದಲ್ಲೂ ಹೀಗೆ ಮನೆ ಕಟ್ಟೋದು ಶುರು ಆಯ್ತು. ಮನೆ ಹಿಂದಿನ ಗಲ್ಲಿಲಿ ಅವರು ಮೈ ತೊಳೆದ ನೀರು ಚರಂಡಿ­ಯಲ್ಲಿ ಹರಿಯೋದು. ಇನ್ನು ಗಟ್ಟಿ ಕಸಕ್ಕೆ ಗುಂಡಿ ಮಾಡೋರು. ಇಲ್ಲಾಂದ್ರೆ ಹಾಗೇ ಒಂದು ಮಡಕೆ ಇಡೋರು. ಕೆಲವು ಕಡೆ ಏನೂ ಇಲ್ಲ. ಚಪ್ಪಡಿ ಕಲ್ಲ ಮೇಲೆ ಎಲ್ಲಾ ಬಂದು ಬೀಳೋದು. ಅದ­ನ್ನೆಲ್ಲ ಒಂದು ತಗಡು ತಗೊಂಡು ಬಾಚಿ ಮಡ­ಕೆಲೋ ಬಕೇಟಿನಲ್ಲೋ ಹಾಕ್ಕೊಂಡು, ತಲೆ ಮೇಲೆ ಹೊತ್ಕೊಂಡು ಹೋಗಿ ಊರ ಹೊರಗೆ ಹಾಕ್ತಿದ್ವಿ. ನಮ್ಮವ್ವ ಅವರವ್ವ ಹೀಗೆ ಎಷ್ಟೋ ತಲೆ­ಮಾರು ತಲೆ ಮೇಲೇ ಮಲ ಹೊತ್ತಿದ್ದೀವಿ. ಹಂಗೆ ಹೊತ್ಕೊಂಡು ಹೋಗುವಾಗ ಅದೆಲ್ಲ ತುಳುಕಿ ಮೈ ಮೇಲೆ ಬೀಳೋದು. ದನದ ಕೊಟ್ಟಿಗೆಯಲ್ಲಿ ಸಗಣಿ ಬಾಚಿ ಹಾಕ್ತಾರಲ್ಲ ಹಾಗೆ. ಅದಕ್ಕೇ ನಾವು ಹಾಗೆ ಹೊತ್ಕೊಂಡು ಹೋಗ್ತಿದ್ರೆ ಜನ ಮೂಗು ಮುಚ್ಕೊಂಡು ದೂರ ಹೋಗೋರು. ಇಲ್ದೇ ಇದ್ರೂ ಅವರೇನು ನಮ್ಮನ್ನ ಮುಟ್ಟಿಸ್ಕೊಳ್ತಿರಲಿಲ್ಲ. ಹಂಗೇನೇ ನಮ್ಮೇಲೆ ಯ್ಯಾರ್‌ ಯ್ಯಾರ್‍ದೋ ನೆರಳು ಬಿದ್ರೆ ನಮಗೆ ಒಳ್ಳೇದಲ್ಲ ಅಂತ ನಮ್ಮಜ್ಜಿ ಹೇಳ್ತಿದ್ರು. ಇಂಥದ್ದೆಲ್ಲ ಹೋಗ್ಬೇಕು ಅಂತ ಬಾಬಾ ಸಾಹೇಬ್ರು ಎಷ್ಟೊ ಹೋರಾಟ ಮಾಡಿದ್ರು. ನಮ್ಮ ದೇಶ ನಮ್ದೇ ಆಯ್ತಂತಲ್ಲ ಆಗ್ಲೇ ಇದ್ನೆಲ್ಲಾ  ಬರದಿಟ್ಟಿದ್ದಾರೆ. ನಮ್ಮನ್ನ ಮುಟ್ಟಿ­ಸ್ಕೊಬಾರ್‌ದವ್ರು ಅಂತ ಏನಾದರೂ ದೂರ ಮಾಡಿದ್ರೆ ಅವರಿಗೆ ಶಿಕ್ಷೆ ಆಗತ್ತಂತೆ. ಅವರು ಬರದಿಟ್ಟು ಹೋದ್ರು, ಆದ್ರೆ ಜನ ಮಾಡೋ­ದನ್ನ ಬಿಡ್ತಾರ? ಗಾಂಧೀ ಅಂತ ಒಬ್ಬ ಮಹಾತ್ಮ ಎಲ್ಲರೂ ಕಕ್ಕಸ್ ಗುಡಿಸಬೇಕು ಅಂತ ಹೇಳಿ ತಾನೂ ಗುಡಿಸಿ ತೋರಿಸಿದ್ರಂತೆ. ಅದಕ್ಕೇ ಏನೋ ಮಹಾತ್ಮ ಅಂತ ಕರೆಯೋರು.

ನಮ್ಮಪ್ಪ ಯಾವತ್ತೂ ಲೋಟದಾಗೆ ಕಾಫಿ ಕುಡಿ­ದಿರಲಿಲ್ವಂತೆ. ಕಕ್ಕಸ್ ಗುಂಡಿ ಗುಡ್ಸಿ ಬಂದ್ರೆ, ಅವ್ರು ಕುಡಿಯೋ ಲೋಟದಲ್ಲಿ ಕಾಫಿ ಇರ್‍ಲಿ ನೀರಾದ್ರೂ ಕೊಡ್ತಾರಾ ನಮಗೆ? ಅದೇ ತೆಂಗಿನ ಚಿಪ್ಪು, ಇಲ್ಲಾಂದ್ರೆ ಮಣ್ಣಿನ ಬಟ್ಲು. ಅಲ್ಲೆ­ಲ್ಲಾದ್ರೂ ಅವರ ಮನೆ ಸೂರಲ್ಲಿಡೋರು. ಮೊದ್ಲೆಲ್ಲ ರಾತ್ರಿ ಉಳಿದಿರೋ ಅನ್ನಾನೋ ತಂಗಳು ಮುದ್ದೆನೋ ನಮಗೆ ಸಿಗೋದು. ಹಾಗೆ ನಮ್ಮ ಅಂಗಿಗೆ ಹಾಕಿಸ್ಕೊಳ್ತಿದ್ವಿ. ನಮ್ಮವ್ವ ಅದನ್ನ ತಂದು ನಮಗೆ ಉಣಿಸೋಳು. ಈಗ ಪ್ಲಾಸ್ಟಿಕ್ ಚೀಲ ಬಂದ್ಮೇಲೆ ಅದರಲ್ಲಿ ಎಲ್ಲಾನೂ ಹಾಕಿ ಮೇಲಿಂದ ನಮ್‌ ಮಡಿಲಿಗೆ ಹಾಕ್ತಾರೆ.
ಕೆಲವರು ಕಕ್ಕಸು ಗುಂಡಿ ತೆಗಸ್ತಾರೆ. ವರ್ಷಕ್ಕೆ ಆ ಗುಂಡಿ ತುಂಬಿದ ಮೇಲೆ ಇನ್ನೊಂದು ಗುಂಡಿ ತೆಗಿ­­ತಾರೆ. ಆದರೆ, ಇದಕ್ಕೆಲ್ಲ ಜಾಗ ಇರಬೇಕಲ್ಲ, ಗುಂಡಿ ತುಂಬಿಹೋದ್ರೆ ಅದನ್ನು ಮುಚ್ಚೋರೂ ನಾವೇ. ನಮ್ಮ ಕಾಯಕ ಅಂತ ಎಲ್ಲನೂ ಮನ­ಸ್ಸಿಟ್ಟೆ ಮಾಡಿದ್ದೀವಿ. ನಮಗೆ ಇದು ಕೆಟ್ಟದು, ಇದು ಒಳ್ಳೇದು ಅಂತ ಗೊತ್ತಿಲ್ಲ. ಯಾವುದನ್ನೂ ಅಸ­ಹ್ಯ­­ಪಟ್ಟುಕೊಂಡು ನೋಡಿಲ್ಲ. ಮೂಗು ಹಿಡ­ಕೊಂಡು ಕೆಲಸ ಮಾಡಿಲ್ಲ.  ನಿಮ್ಮ ಮಕ್ಕಳು ಗಲೀಜು ಮಾಡಿದಾಗ ನೀವು ವರೆಸಿ ಹಾಕ್ತೀರಲ್ಲ ಹಾಗೆ. ಹೊಟ್ಟೆ ಒಳಗೆ ಗಲೀಜು ಇಟ್ಕೊಳೋಕೆ ಆಗುತ್ತಾ? ಪಾಪ ಮನುಷ್ಯರೆಲ್ಲ ನಮ್ಮಕ್ಳು ಇದ್ದಂಗೆ ಅಲ್ವ. 

ನಮ್ಮ ಕೈ,ಮೈ ಹೊಲಸಾದರೂನು ಬೇರೆಯ­ವರಿಗೆ ಕೆಟ್ಟದ್ದು ಬಯಸಬಾರದು ಅಂತ ನಮ್ಮಜ್ಜ ಹೇಳ್ತಿದ್ದ. ಚರಂಡಿ ಕಟ್ಕೊಂಡ್ರೆ ಅವನು ಉದ್ದು­ದ್ದನೇ ಗಳ ಹೊತ್ಕೊಂಡು ಅದನ್ನ ಸರಿಮಾಡಕೆ ಹೋಗ್ತಿದ್ದ. ಒಂದ್ಸಾರಿ ಹಂಗೆ ಮ್ಯಾನ್ಹೋಲ್ ಒಳಗೆ ಇಳಿದು ಕಡ್ಡಿ ಹಾಕೋ ಹೊತ್ತಿಗೆ ಒಳಗೆ ಶಾನೆ ವಿಷದ ಗಾಳಿ ತುಂಬ್ಕೊಂಡು ಸತ್ತೇ ಹೋದ. ನಮ್ ಜನ ಸತ್ರೆ ನಾವೇ ಮಣ್ ಮಾಡ್ತೀವಿ. ಪೇಪರ್‌ನವ್ರು, ಟಿ.ವಿಯವರು ಅಂತ ಒಂದಷ್ಟು ಜನ ನಮ್ ಮನೆ ಹತ್ರ ಬಂದ್ರು. ಅವನ ಹೆಣದ ಮೇಲೆ ಬಟ್ಟೆ ಮುಚ್ಚೋಕೂ  ಕಾಸು ಇರಲಿಲ್ಲ. ಸರ್ಕಾರ ಸತ್ತವರ ಮನೆಗೆ ದುಡ್ಡು ಕೊಡತ್ತೆ ಅಂದ್ರು. ಸಾವೇನ್ರಿ ಎಲ್ರೂ ಮರೆತೇ ಹೋಗ್ತಾರೆ. ಇರಲಿ ಬಿಡಿ, ಅವನು ಬದು­ಕಿದ್ದ ಅಂತ ಗೊತ್ತಾಗಿದ್ರಲ್ವ ಸತ್ತಾಗ ಯಾರಾದ್ರೂ ದುಃಖ ಮಾಡದು? ಏಳೋ ಹೊತ್ತಿಗೆ ಎದೆ ಮಟ್ಟ ಕುಡೀ­ತಿದ್ದ. ಇನ್ನು ಮಲಗುವಾಗ್ಲೂ ಕುಡಿದೇ ಇರ­ತಿದ್ದ. ಹಂಗೆ ಒಂದೊಂದ್ಸಾರಿ ದುಡ್ಡು ಇಲ್ದೇ ಇದ್ದಾಗ ನಮ್ಮವ್ವನಿಗೆ ಬಂದು ಹೊಡೆಯೋನು. ಅವನು ಎಲ್ಲೋ ಕುಡಿದು ಬಿದ್ದಿರೋನು. ನಮ್ಮ­ವ್ವನೆ ಹಿಡ್ಕೊಂಡ್  ಎಳ್ಕೊಂಡು ಬರೋಳು. ಇದು ನಮ್ಮ ಒಬ್ಬರ ಕತೆ ಅಲ್ಲ, ನಮ್ಮಂಗೆ ಜೀವನ ಹೊರೆಯೋ ಹನ್ನೆರಡು ಲಕ್ಷ ಜನರದ್ದು. ಸರ್ಕಾರದ  ಲೆಕ್ಕ ಆರು ಲಕ್ಷ.

ಬೆಳಿಗ್ಬೆಳಿಗ್ಗೆನೆ ಕುಡಿದು ಬರತಿಯಾ ಅಂತ ಎಲ್ರೂ ಅವನ್ಗೆ  ಬಯ್ಯೋರು. ಗುಂಡಿ ಗುಡಿಸಕೆ ಅಂತ ದುಡ್ಡು ಇಸ್ಕೊತೀರ. ಎಲ್ಲ ಕುಡ್ದು ಹಾಳ್ ಮಾಡ್ತಿರ ಅಂತ ಬೋದ್ನೆನೆ ಮಾಡೋರು. ಕಕ್ಕಸ್ ಗುಂಡಿನ ಕಿಲೀನ್ ಮಾಡಿದ್ದಿದ್ರೆ ಗೊತ್ತಾಗುತ್ತೆ, ಕುಡೀದೆ ಇದ್ರೆ ಆ ಕೆಲಸ ಮಾಡಕಾಗತ್ತ ಅಂತ. ನಮ್ಮಪ್ಪ ಮ್ಯಾನ್ಹೋಲ್‌ಗೆ ಇಳಿವಾಗ ಎರಡು ಬಾಟ್ಲಿ­ನಾದ್ರೂ ಕುಡ್ದಿರ್‌ತಿದ್ದ. ಅದ್ರ ವಾಸ್ನೆ ಅವನ್ನ ಆವರ­ಸ್ಕೊಂಡಿರೋದು. ನೊಣ ಹಾರಾಡೊ ಸತ್ತು - ಕೊಳ್ತ ದನ ಎತ್ತಾಕ್ವಾಗ ಅದಕ್ಕೆ ದೂಪದ ಹೊಗೆ ಹಾಕಕ್ಕಾಗತ್ತ? ಸಾರಾಯಿ -ಕುಡಿಬೇಕು, ಮೂಗಿನ ಹೊಳ್ಳೆಗೆ ದನದ ವಾಸನೆ ಬಡೀದಂಗೆ. ಅವ್ನು ಗುಂಡಿಗಿಳಿದು ಸಾಯ್ದೆ ಹೋಗಿದ್ರೆ ಇನ್ನೊಂದೆ­ರಡು ವರ್ಷದಲ್ಲಿ ಸಾರಾಯಿ ಕುಡಿದಿ­ದ್ದ­­ಕ್ಕಾದ್ರೂ ಸಾಯ್ತಿದ್ದ.
ಈ ಊರು ಆ ಊರು ಅಂತ ಇಲ್ಲ.  ಗಲೀಜು ಇಲ್ಲ­ದಲೆ ಠಾಕು ಠೀಕಾಗಿ ಈ ದೇಶದ ಎಲ್ಲಾ ಊರಲ್ಲೂ ಜನ  ಇವತ್ತು  ಬದುಕ್ಬೇಕಾದ್ರೆ ನಾವು ಅವರ ಸೇವೆ ಮಾಡಿದ್ದೀವಿ. ಆದ್ರೆ ಹಾಗಂತ ಯಾರಿಗೂ ಅನ್ನಿಸೋದಿಲ್ಲ. ಈ ಹೊಟ್ಟೆ ಕೇಳಲ್ಲ. ನಾಯಿ ಹಂದಿಗಳ ಜೊತೆ ಹೊಡದಾಡಬೇಕು. ನಾಯಿ­ಗಳೂ ಒಳ್ಳೆ ಬಟ್ಟೆ ನೋಡ್ತಾವೆ. ಹಿಟ್ಟು ಹಾಕಿ­ದ­ವರ ಋಣಕ್ಕೆ ನಮ್ಮನ್ನ ಕಚ್ಚಿಬಿಡ್ತಾವೆ.  

ಇದು ನೆನ್ನೆ, ಇವತ್ತಿಂದೇನಲ್ಲ. ಈ ದೇಶದ್ ಚರಿತ್ರೆ ನಾಲಕ್ ಸಾವ್ರ ವರ್ಷ ಹಳೇದು ಅಂತಾರೆ. ಆ ಕಾಲ್ದಲ್ಲೇ ಒಳಚರಂಡಿ ಇತ್ತಂತೆ. ನಮ್ಮ ಜನ ವಿಮಾನ ಹಾರಿಸ್ತಾರೆ. ಆಗ್ಲೂ ಮನೆ­ಯಿಂದ ಚರಂಡಿಗೆ, ಚರಂಡಿಯಿಂದ ಊರ ಹೊರಕ್ಕೆ ಗಲೀಜು ನೀರು ಹರಕೊಂಡು ಹೋಗ್ಬೇ­ಕಿತ್ತು. ಆಗ್ಲೂ ನಮ್ ಜನಾನೆ ಶುದ್ಧಿ ಮಾಡ್ತಿದ್ರೊ ಏನೋ. ಆದ್ರೆ, ಆಗಿನವರು ಗುಂಡಿ ತೆಗ್ದು ಬಿಟ್ಕೊಂಡಿರಲಿಲ್ಲ.

ಇವತ್ತು ನಮ್ಮ ಪ್ರಧಾನಿಗಳಾಗವ್ರಲ್ಲ ಅವ­ರೂರ್ ಪಕ್ಕದಲ್ಲೂ ನಾವು ಗಲೀಜ್ ಹೊತ್ಕೊಂಡು ಊರ್ ಹೊರಗಡೆ ಹಾಕ್ತೀವಿ. ಅಲ್ಲಿ ಭಂಗಿ, ಸಫಾಯಿ ಅಂತ ಏನೇನೋ ಜಾತಿ ಹೆಸ­ರಿ­ಡಿದು ಕರೀತಾರೆ. ಈ ಕಸಾನ ಕೆಲವ್ರು ತಮ್ ಹೊಲಕ್ಕಾಕುಸ್ಕೊಂಡು ಗೊಬ್ರ ಮಾಡ್ಕೊಂಡು ನಾಲಕ್ಕು ಕಾಸು ಕೊಡೋರು. ಹಂಗೆ ಕಾಸು ಸಿಗುತ್ತೆ ಅಂತ ಗೊತ್ತಾಗಿ ಆ ಊರಿನ ದೊಡ್ಡ ಮನುಸ್ರು ಅವ್ರ್ ಮನೆ ಕಸ ಬಾಚೋದ್ ಮಾತ್ರ ನಮ್ ಕೆಲ್ಸ, ಅದನ್ನೆಲ್ಲ ಅವ್ರ ತಿಪ್ಪೆಗೆ ಹಾಕ್ಬೇಕು ಅಂತ ಹೇಳಿ ಅದ್ರ ಮಾರಾಟಕ್ಕೆ ಅವ್ರೆ ನಿಂತವ್ರೆ. ಸಂತೋಸ.

ಹಿಂಗೆ, ಗುಂಡಿಯಿಲ್ಲದ ಪಾಯಖಾನೇನ ಕಟ್ಟ­ಬಾರದು ಅಂತ ಇಪ್ಪತ್ತು ವರ್ಷದ ಹಿಂದೇನೆ (೧೯೯೩) ಸರ್ಕಾರ ನಿಷೇಧ ತಂದಿತ್ತು. ಅದ್ರು ಪ್ರಕಾರ ಈ ದೇಶ್ದಲ್ಲಿ ಮಲಹೊರೊ ಪದ್ಧತಿ ನಿರ್ಮೂ­ಲನ ಆಗಿದೆ. ಎಲ್ಲ ಕಾಗದ್ದಾಗೆ. ನಾವಂತೂ ಎರಡ್‌ ಅಕ್ಷರ ಕಲ್ತವ್ರಲ್ಲ. ಯಾವತ್ತಾ­ದರೂ ನಮ್ಮ ಮಕ್ಕಳೂ... ಅದನ್ನೆಲ್ಲಾ ತಿಳಿ ಬಯ್ದು. ಇರ್‍ಲಿ. ನಮ್ ಪರವಾಗಿ ಹೋರಾಟ ಮಾಡೋ ನಾಯಕರುಗಳು ಬಂದೇಳ್ತಿದ್ದರು: ಇನ್ಮೇಲೆ ಮಲ –ಮೂತ್ರ ಎಲ್ಲಾ ಚರಂಡೀಲಿ ಹರದು ಹೋಗೋ ಹಾಗೆ ಕಕ್ಕಸ್ ಮನೆ ಕಟ್ಬೇಕು ಅಂತ ಕಾನೂನು ಮಾಡಿದ್ದಾರೆ. ಅಂತವು ಎಪ್ಪತ್ತೆ­ರಡು ಲಕ್ಷ ಮನೆಗಳಿವೆಯಂತೆ. ಅವ್ರು ಹೇಳಿದ್ ನೋಡಿದ್ರೆ ಇನ್ಮೇಲೆ ನಮಗೆ ಆ ಕೆಲಸಾನೂ ಸಿಕ್ಕ­ಲ್ವೇನೊ ಅಂತ ಹೆದರಿದವರೂ ಇದ್ರು, ಯಾಕಂ­ದರೆ ನಾವು ಬೇರೆ ಕೆಲಸ ಕಲ್ತಿಲ್ಲ. ಮಾಡಕ್ಕೂ ನಮ್ಮನ್ನ ಸೇರಿಸ್‌ಕೊಳ್ಳಲ್ಲ. ಈ ಕೆಲಸಕ್ಕಾದರೆ ಯಾರೂ ಬರಲ್ಲ ನೋಡಿ.

ನಮ್ಮ ಹುಟ್ಟಿಗೆ ಅಂಟಿಸಿ ಬಿಟ್ಟವರೆ. ಆದರೆ, ಈ ದೇಶ್ದಾಗೆ ಅಷ್ಟು ಸುಲಭವಾಗಿ ನಮ್ಮನ್ನ ಮನುಸ್ರು ಮಾಡ್ತಾರಾ. ಆ ಕಾಯ್ದೆ ಜಾರಿಗೆ ತರಕ್ಕೆ ೬೦೦ ಕೋಟಿ ರೂಪಾಯಿ ಖರ್ಚು ಮಾಡಬೌದಂತೆ. ಹಂಗಂದ್ರೆ ಎಷ್ಟು ಅಂತ ನಮಗೆ ತಿಳಿಯಲ್ಲ ಬಿಡಿ. ನಮ್ಮ ಮೇಲೆ ಒಂಚೂರಾದರೂ ಅಯ್ಯೋ ಅನ್ನಿಸಿದ್ದರೆ ನಮ್ಮ ಜೋಪಡಿಗೆ ಹೊದಿಸೋಕೆ ಗೋಣಿತಾಟಾ­ದರೂ ಕೊಡಬೌದಾಗಿತ್ತು. ಯಂತ್ರ ತರುಸ್ತಾ­ರೇನೊ- ಆ ದುಡ್ಡಿನಾಗೆ?

ಈಗ ಕಟ್ಟೋ ದೊಡ್ಡ ದೊಡ್ಡ ನಗರಗಳಲ್ಲಿ ಒಳ­ಚರಂಡಿ ಮಾಡ್ತಾರೆ. ಎಲ್ಲಾ ಊರಲ್ಲೂ ಚರಂಡಿ ಕೊಳವೆ ಇದ್ದರೂ ಅದನ್ನ ಶುದ್ಧ ಮಾಡ­ಲಾರ­ದ್ದಕ್ಕೆ ಕುಡಿಯೋ ನೀರಿನ ಹೊಳೆಗೇ ಚರಂಡಿ ನೀರ್ ಸೇರಿಸಿ ಬಿಟ್ತಾರೆ. ಒಳಚರಂಡಿ- ಅದು ಕೆಟ್ಟರೂ ಸರಿ ಮಾಡಕ್ಕೆ ನಾವೇ ಇಳೀಬೇಕಲ್ಲಾ. ಹಾಗೆ ಮ್ಯಾನ್ಹೋಲಿಗೆ ಇಳಿದು ಸತ್ತ ಕುಟುಂಬಕ್ಕೆ ಹತ್ತು ಲಕ್ಷ ರೂಪಾಯಿ ಕೊಡಬೇಕು ಅಂತ ಆಗಿದೆಯಂತೆ. 

ನಾವು ಕೈಯಲ್ಲಿ ಗಲೀಜು ಮುಟ್ಟ ಬಾರದೂ ಅಂತ ಮರುಗೋ ಜೀವಗಳು ಇದ್ದಾವೆ. ಅವರು ನಮಗೆ ಬಿಡುಗಡೆ ಕೊಡಿಸಬೇಕು ಅಂತ ಅಷ್ಟು ವರ್ಷದಿಂದ ಕೋರ್ಟು ಕಚೇರಿ ಅಂತ ತಿರುಗು­ತ್ತಲೇ ಇದ್ದಾರೆ. ಹಾಗೆ ತಿರುಗಿ ತಿರುಗಿ ನಾವು ಅವ­­ರಿಗೆ ಹೊಲೆದುಕೊಟ್ಟ ಮೆಟ್ಟುಗಳು ಹರಿದು ಹೊದೋ. ಮಲ ಮೈ ಮೇಲೆ ಸುರುಕೊಂಡ್ವಿ, ಅದನ್ನು ನೋಡಿ ಯಾರಿಗೂ ಏನೂ ಆಗ್ಲಿಲ್ಲ.

ಇವರ ದನಿ ಕೇಳಿ ಈಗೇನೋ ಕಾನೂನು ಕಣ್ಣು ಬಿಟ್ಟಿದೆಯಂತೆ. ನಮ್ಮ ಸರ್ಕಾರಗಳೂ ಆ ಕೋರ್ಟಿ­­­ನಲ್ಲಿ ಇಲ್ಲದ್ದೆಲ್ಲ ಹೇಳ್ತಾವಂತೆ. ಕೈ ಹಾಕಿ ಗಲೀಜು ತೆಗೆಯೋ ಕೆಲಸ ಮಾಡೋ ಪೌರ­ಕಾರ್ಮಿ­ಕರೇ ಇಲ್ಲಾ ಅಂತಾರಂತೆ. ಆ ಮಟ್ಟಕ್ಕೆ ಯಂತ್ರಗಳನ್ನು ಬಳಸಿ ಚರಂಡಿಯಿಂದ, ಮ್ಯಾನ್ಹೋ­­ಲಿನಿಂದ ಕಟ್ಟಿಕೊಂಡ ಕಸ ತೆಗೆದಿದ್ದರೆ ಇಷ್ಟೊಂದು ಸಮಸ್ಯೆ  ಯಾಕಾಗುತ್ತಿತ್ತು? ಇಷ್ಟು ವರ್ಷ ಪೌರ ಕಾರ್ಮಿಕರಾಗಿ ನಾವು  ಎಂದಾ­ದರೂ ಕಾಯಂ ಆಗಬಹುದು ಅನ್ನೋ ಆಸೇಲಿ ದುಡಿದು ಜೀವನ ಕಳಿತಿದೀವಿ. ರಸ್ತೆಗಳಲ್ಲಿ ಬಗ್ಗಿ ಕಸ ಗುಡಿಸಿ ನಮ್ಮ ಬೆನ್ನುಗಳು ಗೂನಾದರೂ ಪುಡಿ­ಗಾಸಿಗೆ ಕೆಲಸ ಮಾಡ್ತೀವಿ.

ನೀವು ಮೂಗು ಮುಚ್ಚಿಕೊಂಡು ಹೋಗೋ ಜಾಗಗಳಾದ ಆಸ್ಪತ್ರೆ, ಬಸ್‌ ಸ್ಟ್ಯಾಂಡ್‌ ಪಕ್ಕದಲ್ಲಿ, ರಸ್ತೆ ಬದೀಲಿ ಇರೊ ಶೌಚಾಲಯ, ಎಲ್ಲಾ ಕಡೆ ನಾವೇ ಉಜ್ಜಿ ತೊಳಿಬೇಕು. ರೈಲ ಹಳಿ ಮೇಲೆ ಬಿದ್ದ ಗಲೀಜು ತೆಗೆಯೋಕೆ ನಮ್ಮನ್ನ ಕರೆಯ್ತಾರೆ. ಕೈಯಲ್ಲಿ ಗಲೀಜು ಮುಟ್ಟೋ ಕೆಲಸ ತಡೆಯೋಕೆ ಕಾಯ್ದೆ ತಂದಿದೆಯಂತಲ್ಲ. ಯಾವ ಕಾಲಕ್ಕೆ ಜಾರಿ ಮಾಡ್ತಾರೋ? ದಿಟವಾಗಿಯೂ ಅಂತಹ­ದೊಂದು ದಿನ ಬರತ್ತಾ? ಮಾನವಹಕ್ಕು, ಮೂಲ­­ಭೂತ ಹಕ್ಕು ಅಂತ ಏನೇನೋ ಹೇಳ್ತಾ ಇದ್ದರು.  ಆದರೆ ನಾವು ಎಲ್ಲರಂಗೆ ಊಟ ಮಾಡ್ತೀವ? ನಮ್ಮ ಮಕ್ಕಳು ಶಾಲೆ ಮೆಟ್ಟಿಲು ಹತ್ತುತಾವ?

ಎಷ್ಟು ಲಾಯಕ್ಕಾದ ಹೆಸರು ಕೊಟ್ಟಿದ್ದೀರಾ ನಮಗೆ : ಪೌರಕಾರ್ಮಿಕರು, ಸಫಾಯಿ ಕರ್ಮ­ಚಾರಿ­ಗಳು. ಆದರೆ ಜನ ಕರೆಯೋದು ಮಾತ್ರ ನಮ್ಮ ಜಾತಿ ಹೆಸರಿನಿಂದಲೇ: ತೋಟಿ, ಜಾಡ­ಮಾಲಿ, ಜಲಗಾರ, ಮೋಚಿ. ಏನು ಕರೆದರೆ ತಾನೆ ಏನಂತೆ? ಜಾತಿಗೆ ಅಂಟಿದ ಜಾಡ್ಯ, ನಾವು ಮುಟ್ಟಿಸಿಕೊಳ್ಳದ ಜಾತಿಗೆ ಸೇರಿದವರು. ಬಾಬಾ ಸಾಹೇಬರೆ ಮತ್ತೆ ಹುಟ್ಟಿ ಬರಬೇಕಾ ನಿಮ್ಮ ಮನದ ಮೈಲಿಗೆ ತೊಳೆಯೋಕೆ?   

ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT