ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಲ್ಲಿಕಾಳ ಮಗು ಮತ್ತು ಕಾಂಗರೂ ಆರೈಕೆ

Last Updated 6 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಈ ವಾರದ ಅಂಕಣದ ವಿಷಯದ ಕುರಿತು ಚಿಂತಿಸುತ್ತಿರುವಾಗಲೇ ಮಲ್ಲಿಕಾಳ ಮಗು ಹೆಚ್ಚೂ ಕಡಿಮೆ ನನ್ನ ತೊಡೆಯ ಮೇಲೆಯೇ ಕುಳಿತು ತನ್ನ ಕಥೆಯನ್ನು ಬರೆಯುವಂತೆ ಹೇಳತೊಡಗಿತು.

ಪಿಯುಸಿ ಮುಗಿಸಿದ ಕೂಡಲೇ ಹದಿನೆಂಟರ ಹರೆಯದ ಮಲ್ಲಿಕಾಳಿಗೆ ಮದುವೆಯಾಯಿತು. ಮದುವೆಯಾಗಿ ತಿಂಗಳೊಳಗೇ ಆಕೆ ಗರ್ಭಿಣಿಯಾದಳು. ಮಹಿಳೆ ರ್ಭಿಣಿಯಾಗಿರುವುದನ್ನು ಖಚಿತಪಡಿಸಿಕೊಳ್ಳಲು ಮೂತ್ರ ಪರೀಕ್ಷೆ ಸರಳ ಮಾರ್ಗ.

ಗರ್ಭ ದೃಢಪಟ್ಟ ಅವಧಿಯಿಂದ ಏಳು ತಿಂಗಳವರೆಗೆ ಪ್ರತಿ ಗರ್ಭಿಣಿಯೂ ಪ್ರತಿ ತಿಂಗಳೂ ಪ್ರಸವಪೂರ್ವ ಮತ್ತು ನಂತರ ಪ್ರಸವದವರೆಗೂ ಪ್ರತಿ ವಾರ ತಪ್ಪದೆ ತಪಾಸಣೆಗೆ ಒಳಗಾಗಬೇಕು.

ಮೊದಲ ಬಾರಿಗೆ ಗರ್ಭ ಧರಿಸಿರುವ ಮಹಿಳೆಯ ತಪಾಸಣೆಯಲ್ಲಿ `ಎಚ್‌ಬಿ~ ರಕ್ತಪರೀಕ್ಷೆ (ರಕ್ತಹೀನತೆಯ ಪತ್ತೆಗೆ), ಮೂತ್ರ, ರಕ್ತದ ಗುಂಪು ಮತ್ತು `ಆರ್‌ಎಚ್~ ಮಾದರಿಗಳ ಪರೀಕ್ಷೆಯ ಜೊತೆಯಲ್ಲಿ ಎತ್ತರ ಮತ್ತು ತೂಕವನ್ನೂ ಹೆಚ್ಚುವರಿಯಾಗಿ ದಾಖಲಿಸಿಕೊಳ್ಳಲಾಗುತ್ತದೆ.

ಲೈಂಗಿಕವಾಗಿ ಹರಡುವ ರೋಗದ ಪತ್ತೆಗೆ (ವಿಡಿಆರ್‌ಎಲ್/ಎಚ್‌ಐವಿ) ಮತ್ತು ಹೆಪಟೈಟಿಸ್ ಬಿ ಪರೀಕ್ಷೆ ನಡೆಸಲಾಗುತ್ತದೆ. ಗರ್ಭಕೋಶದ ಸ್ಥಿತಿಗತಿಯನ್ನು ಖಚಿತಪಡಿಸಿಕೊಳ್ಳಲು ಮೊದಲ ಮೂರು ತಿಂಗಳು (ಟ್ರೈಮೆಸ್ಟರ್) ಸ್ಕ್ಯಾನಿಂಗ್ ಮಾಡಲಾಗುತ್ತದೆ.

ಭ್ರೂಣದ ಬೆಳವಣಿಗೆ ಮತ್ತು ಭ್ರೂಣ/ಗರ್ಭಕೋಶದಲ್ಲಿ ಸಮಸ್ಯೆಯಿದ್ದರೆ ಪತ್ತೆ ಹಚ್ಚಲು 18 ವಾರಗಳ ನಿರಂತರ ಸ್ಕ್ಯಾನಿಂಗ್ ಮಾಡಲಾಗುತ್ತದೆ. ಈ ಎರಡು ಶ್ರವಣಾತೀತ ಧ್ವನಿ ತರಂಗಗಳ ಸ್ಕ್ಯಾನ್‌ಗಳ ಬಳಿಕ ಮುಂದೆ ಸ್ಕ್ಯಾನ್ ಮಾಡುವ ಅಗತ್ಯ ಇರುವುದಿಲ್ಲ.

ಎರಡನೇ ಟ್ರೈಮೆಸ್ಟರ್‌ನಿಂದ ಭ್ರೂಣದ ಬೆಳವಣಿಗೆಯನ್ನು ಅದರ ಚಲನೆ ಮೇಲೆ ನಿಗಾವಹಿಸುವುದರಿಂದ ಮತ್ತು ತಾಯಿಗೆ ಒದೆಯುವಿಕೆಯಿಂದ ಗುರುತಿಸಲಾಗುತ್ತದೆ- ಗರ್ಭದಲ್ಲಿ ಮಗುವಿನ ಚಲನೆಯು 10 ಗಂಟೆಗೆ 10 `ಒದೆ~ಯಂತೆ ಇರಬೇಕು.

ಪ್ರತಿ ಗರ್ಭಿಣಿಯೂ ಮೊದಲ 100 ದಿನಗಳವರೆಗೆ ವಿವಿಧ ವೇಳೆಗಳಲ್ಲಿ ಹಾಗೂ ಪ್ರಸವದ ನಂತರದ 100 ದಿನಗಳವರೆಗೆ ಕಬ್ಬಿಣದ ಅಂಶವಿರುವ ಮಾತ್ರೆಗಳು, ವಿಟಮಿನ್ `ಬಿ~ ಮತ್ತು ಕ್ಯಾಲ್ಸಿಯಂ ಮಾತ್ರೆಗಳನ್ನು ಸೇವಿಸಬೇಕು. ಮತ್ತು ಗರ್ಭಾವಸ್ಥೆಯಲ್ಲಿದ್ದಾಗ 8-12 ಕೇಜಿಯಷ್ಟು ತೂಕ ಹೆಚ್ಚಿಸಿಕೊಳ್ಳಬೇಕು.

ಮೂರು ಕೇಜಿಯಷ್ಟು ಕೊಬ್ಬಿನ ಅಂಶ ಎದೆಹಾಲಿಗೆ ಮೀಸಲಾದರೆ ಮಗುವಿನ ತೂಕದ ಜೊತೆ 3 ಕೇಜಿ ಜೊತೆ ಹಂಚಿಕೆಯಾಗುತ್ತದೆ. ಗರ್ಭಕೋಶ, ಜರಾಯು, ಹೊಕ್ಕಳ ಬಳ್ಳಿ ಮತ್ತು ದ್ರವ್ಯ (ಗರ್ಭವೇಷ್ಟನೆ ದ್ರವ) ಸುಮಾರು ನಾಲ್ಕು ಕೇಜಿ ಅಷ್ಟಾಗುತ್ತದೆ.

ಗರ್ಭಾವಸ್ಥೆಯ ಆರು ತಿಂಗಳವರೆಗೂ ಮಲ್ಲಿಕಾಳಲ್ಲಿ ಯಾವುದೇ ಸಮಸ್ಯೆ ಎದುರಾಗಿರಲಿಲ್ಲ. ಆದರೆ ಇದ್ದಕ್ಕಿದ್ದಂತೆ ಆಕೆಗೆ ಉರಿ ಮೂತ್ರ ಹಾಗೂ ತೀವ್ರ ಜ್ವರ ಆವರಿಸಿಕೊಂಡಿತು. ಸತತ ಔಷಧೋಪಚಾರ ಮಾಡಿ 15 ದಿನಗಳ ಬಳಿಕ ಆಕೆ ಚೇತರಿಸಿಕೊಂಡಳು. ಈ ಸಂದರ್ಭದಲ್ಲಿ ಆಕೆ ಆರು ಕೇಜಿ ತೂಕ ಪಡೆದುಕೊಂಡಿದ್ದಳಷ್ಟೆ.

ಮಲ್ಲಿಕಾಳ ಕುಟುಂಬದವರು ಈ ಘಟನೆ ಮೂಡಿಸಿದ ಭಯದಿಂದ ಹೊರಬಂದು ತಿಳಿಯಾಗುವಷ್ಟರಲ್ಲಿ ಆಕೆಯ ಗರ್ಭಕೋಶದ ನೀರಿನ ಚೀಲ ಅಕಾಲಿಕವಾಗಿ ಛಿದ್ರಗೊಂಡಿತು. ಮಗು ಇನ್ನೂ ಸರಿಯಾಗಿ ಬೆಳೆದಿಲ್ಲವಾದ್ದರಿಂದ ಅದನ್ನು ತೆಗೆದುಹಾಕಿಸುವಂತೆ ಮಲ್ಲಿಕಾ ಕೇಳಿಕೊಂಡಳು.

ಅವರು ಯೋಚಿಸುವ ಮೊದಲೇ ಆರನೇ ತಿಂಗಳ ಗರ್ಭಾವಸ್ಥೆಯಲ್ಲಿಯೇ ಮಲ್ಲಿಕಾ 920 ಗ್ರಾಂ ತೂಕದ ಹೆಣ್ಣುಮಗುವಿಗೆ ಜನ್ಮವಿತ್ತಳು. ಹಲವಾರು ಕಾರ್ಪೊರೇಟ್ ಹಾಗೂ ಸರ್ಕಾರಿ ಆಸ್ಪತ್ರೆಗಳ ಮೆಟ್ಟಿಲೇರಿದರು. ಎಲ್ಲಾ ಕಡೆಯೂ ಒಂದೇ ಕಥೆ. ಎಲ್ಲಾ ವೈದ್ಯರು ಹೇಳಿದ್ದೂ ಮಗು ಉಳಿಯುವುದಿಲ್ಲವೆಂದು.

ಅವರ ಆರ್ಥಿಕ ಪರಿಸ್ಥಿತಿಯೂ ಮಗುವನ್ನು ಮನೆಗೆ ಕರೆದೊಯ್ದು ಅದು ಕೊನೆಯುಸಿರು ಎಳೆಯುವವರೆಗೆ ಕಾಯುವಂತೆ ಇತ್ತು. ಆಗಲೇ ಆ ಕುಟುಂಬ ಒಂದು ಲಕ್ಷ ರೂಪಾಯಿಯ ಹೊರೆ ಹೊತ್ತುಕೊಂಡು ಆರ್ಥಿಕವಾಗಿ ತೀರಾ ಕಷ್ಟಕ್ಕೆ ಸಿಲುಕಿತ್ತು.

ಪುಟ್ಟ ಮುದ್ದೆಯಂತಿದ್ದ ಮಗುವನ್ನು ಮನೆಯಲ್ಲಿಯೇ ನಿರ್ವಹಣೆ ಮಾಡಲು ಅವರು ನಿರ್ಧರಿಸಿದರು. ಕೆಲವು ತಜ್ಞರ ಸಲಹೆ ಮೇರೆಗೆ ಮಗುವನ್ನು ಟ್ಯೂಬ್‌ಲೈಟ್ ಹಾಗೂ 100 ವ್ಯಾಟ್ ಬಲ್ಬ್ ಶಾಖದಲ್ಲಿ ಆರೈಕೆ ಮಾಡತೊಡಗಿದರು. ದುರದೃಷ್ಟವಶಾತ್ ಬಲ್ಬ್‌ನ ಶಾಖ ಹೆಚ್ಚಾಗಿ ಮಗುವಿನ ಚರ್ಮ ಸುಡತೊಡಗಿತು. ಶಾಯಿ ಹಾಕುವ ನಳಿಕೆ ಮೂಲಕ ಮಗುವಿಗೆ ಎದೆಹಾಲು ಕುಡಿಸುತ್ತಿದ್ದರು.

ಕೊನೆಗೂ ಒಂದು ದಿನ ಅವರ ಬುದ್ಧಿ ಕೆಲಸ ಮಾಡಿತು. ಅಕಾಲಿಕವಾಗಿ ಜನಿಸಿದ್ದ, ಈಗ 12 ವರ್ಷವಾಗಿರುವ ತನ್ನ ಸೋದರನ ಮಗು ವಾಣಿ ವಿಲಾಸ ಆಸ್ಪತ್ರೆಯ ನವಜಾತ ಶಿಶು ವಾರ್ಡ್‌ನಲ್ಲಿ ಮರುಜನ್ಮ ಪಡೆದ ಘಟನೆ ಮಲ್ಲಿಕಾಳಿಗೆ ಇದ್ದಕ್ಕಿದ್ದಂತೆ ನೆನಪಾಯಿತು.

ಕೈಯಲ್ಲಿ ಹಣವಿಲ್ಲದೆ, ಎಲ್ಲಾ ಭರವಸೆಗಳನ್ನು ಕಳೆದುಕೊಂಡಿದ್ದ ಅವರು 2011ರ ಅಕ್ಟೋಬರ್ 15ರಂದು ರಾತ್ರಿ 10 ಗಂಟೆಗೆ ವಾಣಿ ವಿಲಾಸ ಆಸ್ಪತ್ರೆಯ ನವಜಾತ ಶಿಶು ವಿಭಾಗಕ್ಕೆ ಬಂದರು. ಮಗು ಉಸಿರಾಟದ ತೊಂದರೆ, ಸುಟ್ಟ ಚರ್ಮದಿಂದ ಬಳಲುತ್ತಿದ್ದು, ಚಟುವಟಿಕೆಯಿಲ್ಲದೆ ಮಂಕಾಗಿತ್ತು.

ಅದರ ತೂಕ 750 ಗ್ರಾಂಗೆ ಇಳಿದಿತ್ತು. ಆಕೆಯನ್ನು ಎಂಟು ದಿನಗಳ ಕಾಲ ನವಜಾತ ಶಿಶು ತೀವ್ರ ನಿಗಾ ಘಟಕದಲ್ಲಿ ಇಡಲಾಯಿತು. ಬಳಿಕ `ಕಾಂಗರೂ ಮದರ್ ಕೇರ್~ ವಾರ್ಡ್‌ಗೆ ವರ್ಗಾಯಿಸಲಾಯಿತು. ಈ ವಾರ್ಡ್‌ನಲ್ಲಿದ್ದ ತಾಯಿ ಮತ್ತು ಮಗು ಎರಡೂವರೆ ತಿಂಗಳ ಬಳಿಕ ಬಿಡುಗಡೆ ಹೊಂದಿದರು. ಆಗ ಮಗುವಿನ ತೂಕ 1.53 ಕೇಜಿ.

ಏನಿದು ಕಾಂಗರೂ ಮದರ್ ಕೇರ್ (ಕೆಎಂಸಿ)?


ಜನಿಸುವಾಗ ಕಡಿಮೆ ತೂಕ ಹಾಗೂ ಅಕಾಲಿಕ ಜನನದ ಪ್ರಮಾಣ ಶೇಕಡ 30-35ರಷ್ಟಿದೆ. ಈ ಎಲ್ಲಾ ಮಕ್ಕಳನ್ನೂ ನವಜಾತ ಶಿಶು ತುರ್ತು ನಿಗಾ ಘಟಕಕ್ಕೆ ಸೇರಿಸುವುದಾದರೆ, ಸ್ಥಳಾವಕಾಶದ ಲಭ್ಯತೆ, ವೈಯಕ್ತಿಕ (ದಾದಿಯರು/ವೈದ್ಯರು) ನಿಗಾ, ತಪಾಸಣಾ ಉಪಕರಣಗಳು, ಶಾಖ ಒದಗಿಸುವ ಸಾಧನಗಳು ಮತ್ತು ಇನ್‌ಕ್ಯೂಬೇಟರ್ಸ್‌ಗಳ ಮೇಲಿನ ವೆಚ್ಚ ಲಕ್ಷ ಮತ್ತು ಕೋಟಿ ರೂಗಳನ್ನು ಕ್ರಮಿಸುತ್ತದೆ.

ನಾವು ಇದಕ್ಕೆ ಸಂಬಳ, ವಿದ್ಯುತ್ ಹಾಗೂ ನೀರಿನ ಬಿಲ್ ಮುಂತಾದವುಗಳನ್ನೂ ಪರಿಗಣಿಸಬೇಕಾಗುತ್ತದೆ. ಇದು ತೀರಾ ವೆಚ್ಚದಾಯಕ ಮತ್ತು ಮೇಲ್ಮಧ್ಯಮ ವರ್ಗದವರೂ ಈ ಮೊತ್ತವನ್ನು ಪಾವತಿಸಲು ಶಕ್ತರಾಗಿರುವುದಿಲ್ಲ. ಆಸ್ಪತ್ರೆಯಲ್ಲಿ ತಾಯಿ ಉಳಿದುಕೊಳ್ಳುವುದು ಮುಂದುವರಿದರೆ ಅದನ್ನು ವೆಚ್ಚಕ್ಕೆ ಸೇರಿಸಿಕೊಳ್ಳಲಾಗುತ್ತದೆ.

ಕಾಂಗರೂ ಪ್ರಾಣಿ ತನ್ನ ಮರಿಯನ್ನು ಚೀಲದಲ್ಲಿಟ್ಟುಕೊಳ್ಳುವ ಹಾಗೆ ತಾಯಿ ತನ್ನ ಎದೆಯ ನಡುವೆ ಮಗುವನ್ನು ಇರಿಸಿಕೊಳ್ಳುವುದರಿಂದಲೇ ಇದಕ್ಕೆ ಈ ಹೆಸರು.
ಕೊಲೊಂಬಿಯಾದ ಬೊಗೊಟಾದಲ್ಲಿ ರೇ ಮತ್ತು ಮಸಿನೆಜ್ ಎಂಬುವವರು ರೂಪಿಸಿದ `ಕಾಂಗರೂ ಪದ್ಧತಿ~ ಇನ್‌ಕ್ಯುಬೇಟರ್‌ಗಳಿಗೆ ಪರ್ಯಾಯ ವ್ಯವಸ್ಥೆಯಾಗಿದೆ.

ಈ ಪದ್ಧತಿಯಲ್ಲಿ ಮಗುವನ್ನು ಒಂದು ವಿಶೇಷ ಚೀಲದಲ್ಲಿ ಇರಿಸಿ ತಾಯಿಯ ಎದೆಗೆ ಕಟ್ಟಲಾಗುತ್ತದೆ. ಅಮ್ಮನ ಮೊಲೆಗಳ ನಡುವೆ ಮಗು ಬರುವಂತೆ ಚೀಲವನ್ನು ಇರಿಸಲಾಗುತ್ತದೆ. ಈ `ಕೆಎಂಸಿ~ ಇನ್‌ಕ್ಯೂಬೇಟರ್ ಕೇರ್‌ನ ವ್ಯವಸ್ಥೆಗಿಂತಲೂ ಪರಿಣಾಮಕಾರಿ ಎನ್ನಬಹುದು.

ತಾಯಿಯ ಎದೆ ಹಾಗೂ ಮಗುವಿನ ನಡುವಿನ ಚರ್ಮ-ಚರ್ಮಗಳ ಸಂಪರ್ಕ `ಕೆಎಂಸಿ~ಯಲ್ಲಿ ನಿರಂತರ ಹಾಗೂ ದೀರ್ಘಾವಧಿ ಸಾಧ್ಯವಾಗುತ್ತದೆ. ಸ್ತನಗಳು ಮಗುವಿಗೆ ಬಹಳ ಸಮೀಪದಲ್ಲಿ ಇರುವುದರಿಂದ ಎದೆಹಾಲು ಉಣಿಸುವುದೂ ಸುಲಭ. ಇದನ್ನು ಆಸ್ಪತ್ರೆಯಲ್ಲಿಯೇ ಪ್ರಾರಂಭಿಸಬಹುದು ಮತ್ತು ಮನೆಯಲ್ಲಿಯೂ ಮುಂದುವರಿಸಬಹುದು.

ಈ ವಿಧಾನದಿಂದ ಮಗುವಿಗೆ ನೈಸರ್ಗಿಕವಾಗಿ ದಕ್ಕಬೇಕಾದ ಸೂಕ್ತ ಶಾಖ (ಹೆಚ್ಚು ಶಾಖವಾಗುವ ಅಥವಾ ಸುಡುವ ಸಾಧ್ಯತೆಯೇ ಇಲ್ಲ) ಹಾಗೂ ನೈಸರ್ಗಿಕ ಆಹಾರ ದೊರಕುವುದಲ್ಲದೆ, ಯಾವುದೇ ಸೋಂಕು ತಗುಲಲಾರದು. ಇದರಿಂದಾಗಿ ತಾಯಿ ಮತ್ತು ಮಗುವಿನ ಅನುಬಂಧವೂ ಗಟ್ಟಿಯಾಗುತ್ತದೆ.

ಇನ್‌ಕ್ಯೂಬೇಟರ್/ಶಾಖ ಉಪಕರಣಗಳಿಗೆ (ವಾರ್ಮರ್) ಹೋಲಿಸಿದರೆ ತಾಯಿ ಮತ್ತು ಮಗುವಿನ ಒತ್ತಡಗಳು ಇಲ್ಲಿ ಕಡಿಮೆ (ಇನ್‌ಕ್ಯೂಬೇಟರ್ ಗರ್ಭಕೋಶದಂತೆ ಕಾಣುವ ಮುಚ್ಚಿದ ಪೆಟ್ಟಿಗೆ).  ತಪಾಸಣಾ ಉಪಕರಣಗಳಿಂದ ಹೊರಬರುವ ಶಬ್ದ, ಅಲುಗಾಟ ಮತ್ತು ಎನ್‌ಐಸಿಯುನಲ್ಲಿನ `ಜನಸಾಂದ್ರತೆ~ಯಿಂದ ತಾಯಿ -ಮಗು ಕೆಎಂಸಿಯಲ್ಲಿ ಮುಕ್ತವಾಗಿರುತ್ತಾರೆ.

ಮಗುವಿಗೆ ಚರ್ಮ-ಚರ್ಮದ ಸಂಪರ್ಕದಿಂದ ಮತ್ತು ಎದೆಹಾಲುಣಿಸುವ ಸಂದರ್ಭದಲ್ಲಿ ಸ್ಪರ್ಶ, ಬೆಳಕು, ಒತ್ತಡ ಮತ್ತು ಬೆಚ್ಚಗಿನ ಅನುಭವದಿಂದ ಆಕ್ಸಿಟೋಸಿನ್ (ಗರ್ಭಕೋಶಗಳ ಸ್ನಾಯುಗಳ ಸಂಕೋಚನವನ್ನು ಪ್ರಚೋದಿಸುವ ಹಾರ್ಮೋನು) ಹಾರ್ಮೋನು ಸ್ರವಿಸಲು ಕೆಎಂಸಿ ನೆರವಾಗುತ್ತದೆ.

ಆಕ್ಸಿಟೋಸಿನ್ ಮಗುವಿನಲ್ಲಿ ಒತ್ತಡ ಮತ್ತು ಉದ್ವೇಗ ತೊಲಗಿಸಲು ಮತ್ತು ಮೆದುಳಿನ ಬೆಳವಣಿಗೆಗೆ ನೆರವಾಗುತ್ತದೆ. ನಿದ್ರೆಯನ್ನು ನಿಯಂತ್ರಿಸುವ, ಬಾಂಧವ್ಯವನ್ನು ವೃದ್ಧಿಸುವ ಮತ್ತು ಮಗು ಪ್ರಬುದ್ಧವಾಗಿ ಬೆಳೆದ ಬಳಿಕ ಸಾಮಾಜಿಕವಾಗಿ ತೊಡಗಿಕೊಳ್ಳುವ ಪ್ರಕ್ರಿಯೆಗಳಲ್ಲಿಯೂ ಸಹಕಾರಿಯಾಗುತ್ತದೆ.

ತೀವ್ರ ಆತಂಕಕ್ಕೊಳಗಾಗಿ, ತನ್ನೆಲ್ಲಾ ಭರವಸೆಗಳನ್ನು ಕಳೆದುಕೊಂಡಿದ್ದ ಮಲ್ಲಿಕಾಳ ಜೊತೆ ಸಮಾಲೋಚನೆ ನಡೆಸಿ ಕೆಎಂಸಿ ಬಗ್ಗೆ ತಿಳಿ ಹೇಳಲಾಯಿತು. ಆರಂಭದಲ್ಲಿ ಒಲ್ಲದ ಮನಸ್ಸಿನಿಂದಲೇ ಅದರಲ್ಲಿ ಪಾಲ್ಗೊಂಡ ಆಕೆ ನಮ್ಮಂದಿಗೆ ಚೆನ್ನಾಗಿ ಸಹಕರಿಸಿದಳು. 750 ಗ್ರಾಂ ತೂಕದ ಪುಟ್ಟ ಕಂದಮ್ಮ ಎಲ್ಲಿ ಬಿದ್ದುಬಿಡುವುದೋ ಎಂದು ಆಕೆ ಹೆದರಿಕೊಳ್ಳುತ್ತಿದ್ದಳು.

ಕೆಎಂಸಿಯಲ್ಲಿ ಮಗುವನ್ನು ಪುಟ್ಟ ಚೀಲವೊಂದಕ್ಕೆ ಹಾಕಿ ಅದನ್ನು ತಾಯಿಯ ಎದೆಗೆ ಕಟ್ಟಲಾಗುತ್ತದೆ. ಹಾಗಿದ್ದರೂ ಆಕೆ ಪ್ರಾರಂಭದ ಕೆಲವು ದಿನಗಳಲ್ಲಿ ತೀವ್ರ ಭಯದಿಂದ ಆತಂಕಕ್ಕೆ ಒಳಗಾಗಿದ್ದಳು.

ಮಗುವಿಗೆ ಟೋಪಿ, ಸಾಕ್ಸ್ ಮತ್ತು ಗ್ಲೌಸ್‌ಗಳೊಂದಿಗೆ ಉಡುಪು ಹಾಕಲಾಗುತ್ತದೆ. ಎಸೆಯಬಹುದಾದ ಡಯಾಪರ್‌ಗಳನ್ನು ಬಳಸಲು ಆದ್ಯತೆ ನೀಡಲಾಗುತ್ತದೆ. ಚೀಲದೊಳಗೆ ಮಗುವನ್ನು ಇರಿಸಿ ತಾಯಿಗೆ ಅದನ್ನು ಕಟ್ಟಲಾಗುತ್ತದೆ. ಮಗುವಿನ ಎದೆ ಮತ್ತು ಹೊಟ್ಟೆ ತಾಯಿಯ ಎದೆಯೊಂದಿಗೆ ಸಂಪರ್ಕ ಹೊಂದಿರುತ್ತದೆ.

ಮಗುವನ್ನು ಸರಿಯಾಗಿ ಎದೆಗಳ ನಡುವೆ ಬರುವಂತೆ ಕೂರಿಸಲಾಗುತ್ತದೆ. ಸಾಧಾರಣ ಡಯಾಪರ್‌ಗಳು ತಾಯಿ ಮತ್ತು ಮಗುವಿಗೆ ಕೊಳೆ ಅಂಟಿಸುವುದಲ್ಲದೆ ಕಿರಿಕಿರಿ ಮಾಡಬಹುದು. ಮಗು 2.5 ಕೇಜಿ ಮುಟ್ಟುವವರೆಗೂ ಕೆಎಂಸಿಯನ್ನು ನಿರಂತರವಾಗಿ ಮಾಡಿಸಲಾಗುತ್ತದೆ.

ಮಲ್ಲಿಕಾಳ ಪ್ರಕರಣದಲ್ಲಿ ಆಕೆ ಮನೆಗೆ ಹೋದ ನಂತರವೂ ಆಕೆಯ ತಾಯಿ ಮತ್ತು ಪತಿ ಸಹಾಯದಿಂದ ಕೆಎಂಸಿಯನ್ನು ಮತ್ತೆ ಮೂರು ತಿಂಗಳು ಮುಂದವರಿಸಿದರು. ಈಗಲೂ ಆಕೆ ಅದನ್ನು ಮುಂದುವರಿಸಲು ಸಿದ್ಧಳಿದ್ದಾಳೆ. ಆದರೆ ತುಂಟ ಮಗಳು ನುಸುಳಿ ಹೊರಗೆ ಹಾರುತ್ತಾಳೆ!

ಕೆಎಂಸಿ ಮಾಡುವ ಸಲಹೆಯನ್ನು ಒಪ್ಪಿಕೊಂಡು ಆಸ್ಪತ್ರೆಯಲ್ಲಿದ್ದ ದಿನಗಳಲ್ಲಂತೂ 75 ದಿನಗಳ 24 ಗಂಟೆಯೂ ಅದರಲ್ಲಿ ಮಗ್ನಳಾಗಿದ್ದ ಮಲ್ಲಿಕಾಳ ದೃಢ ನಿರ್ಧಾರವನ್ನು ಶ್ಲಾಘಿಸಲೇಬೇಕು. ಕೆಎಂಸಿ ಮಾಡುವ ತಾಯಿಗೆ ಮನಸಿಗೆ ಉಲ್ಲಾಸ ನೀಡುವ ಚಟುವಟಿಕೆಗಳು ಮತ್ತು ಮನಸ್ಸನ್ನು ಸ್ಥಿರವಾಗಿ ಇರಿಸಲು ಪ್ರೇರಣೆ ಅಗತ್ಯವಿರುತ್ತದೆ. ಆ ಕೆಲಸವನ್ನು ಎನ್‌ಐಸಿಯುನಲ್ಲಿ ನಮ್ಮ ಪದವಿ ವಿದ್ಯಾರ್ಥಿಗಳು ಮತ್ತು ದಾದಿಯರು ಮಾಡುತ್ತಿದ್ದರು.

ಕೆಎಂಸಿಯಲ್ಲಿ ಯಶಸ್ಸು ಕಂಡ ಮಲ್ಲಿಕಾ ತನ್ನ ಮಗಳಿಗೆ ಯಶಸ್ವಿನಿ ಎಂದು ಹೆಸರಿಟ್ಟಳು. ಮಲ್ಲಿಕಾಳ ತಾಯಿ ಮತ್ತು ಪತಿ ಇಬ್ಬರೂ ಆಕೆಗೆ ಬೆಂಬಲವಾಗಿ ನಿಂತರಲ್ಲದೆ ಈ ಮಗುವಿನ ಜನನ ತಮ್ಮ ಕುಟುಂಬಕ್ಕೆ ಸಾಕಷ್ಟು ಅದೃಷ್ಟ ತಂದುಕೊಟ್ಟಿದೆ ಎಂದು ಸಂಭ್ರಮಿಸಿದರು.
ಅಕ್ಟೋಬರ್ 2ರಂದು ಯಶಸ್ವಿನಿ ಮೊದಲನೇ ವರ್ಷದ ಹುಟ್ಟುಹಬ್ಬ.

ಆ ಪುಟ್ಟ ಕಂದಮ್ಮ ನನ್ನ ತೊಡೆಯ ಮೇಲೆ ಕುಳಿತು `ರಾಮ-ರಾಮ~ ಆಡುತ್ತಿದ್ದಾಗ, ನನ್ನ ದೇಹದೊಳಗೆ ಪ್ರವಹಿಸಿದ ಭಾವನೆ ಮತ್ತು ಆನಂದವನ್ನು ಯಾರೂ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ. ಇಂತಹ ಯಶಸ್ಸಿನ ಸಂದರ್ಭಗಳನ್ನು ನಾನು `ವೈದ್ಯೆ~ಯಾಗಿ ಸಂಭ್ರಮ ಆಚರಿಸುತ್ತಿರುವಂತೆ ಭಾವಿಸಿಕೊಳ್ಳುತ್ತೇನೆ.

ನೀನು ಮತ್ತು ಯಶಸ್ವಿನಿ ನಮ್ಮ ಪ್ರಧಾನ ರಾಯಭಾರಿಗಳೆಂದು ನಾನು ಮಲ್ಲಿಕಾಳಿಗೆ ತಮಾಷೆಯಿಂದ ಹೇಳುತ್ತಿದ್ದೆ. ಇಂದು ಯಶಸ್ವಿನಿಯ ತೂಕ ಏಳು ಕೇಜಿ. ಮಾಮೂಲಿ ಮಕ್ಕಳಂತೆ ಆರೋಗ್ಯವಂತಳಾಗಿರುವ ಆಕೆ ತೊದಲು ನುಡಿಗಳನ್ನಾಡುತ್ತಾಳೆ, ಕೇಳಿಸಿಕೊಳ್ಳುತ್ತಾಳೆ. ಎರಡು ಹಲ್ಲುಗಳೂ ಸಹ ಆಕೆಯ ಬಾಯಲ್ಲಿ ಮೂಡಿವೆ.

ತಾಯಿ ಮತ್ತು ಮಗುವನ್ನು ಒಟ್ಟಿಗೇ ಇರಿಸಬೇಕು, ಪರಕೀಯವಾದ ಯಂತ್ರಗಳ ಅಸಹಜ ಪ್ರಪಂಚದಲ್ಲಲ್ಲ ಎಂಬ ಚಳವಳಿ ವಿಶ್ವದೆಲ್ಲೆಡೆ ತೀವ್ರಗೊಳ್ಳುತ್ತಿದೆ. ಹೆಚ್ಚಿನ ಅಕಾಲಿಕ ಜನನದ/ಕಡಿಮೆ ಜನನ ತೂಕದ ಮಕ್ಕಳನ್ನು ಯಾವುದೇ ಗೊಂದಲಗಳಿಲ್ಲದೆಯೇ ಆಸ್ಪತ್ರೆ ಹಾಗೂ ಕುಟುಂಬದ ಸದಸ್ಯರ ನೆರವಿನಿಂದ ಕೆಎಂಸಿಯ ಮೂಲಕ ಮನೆಯಲ್ಲಿಯೇ ಸುಲಭವಾಗಿ ನಿರ್ವಹಣೆ ಮಾಡಬಹುದು.

ತಾಯ್ತನದ ಮೂರ್ತರೂಪವಾದ ಮಲ್ಲಿಕಾಳಿಗೆ ಮತ್ತೆ ಅಭಿನಂದನೆ ಸಲ್ಲಿಸುತ್ತೇನೆ. ಮತ್ತು ತನ್ನ ತಾಯಿ ತನಗಾಗಿ ಏನೆಲ್ಲಾ ಮಾಡಿದಳು ಎಂಬುದನ್ನು ಯಶಸ್ವಿನಿ ನೆನಪಿಸಿಕೊಳ್ಳುತ್ತಾಳೆ ಎಂಬ ಭರವಸೆ ಇಟ್ಟುಕೊಂಡಿದ್ದೇನೆ. ಈ ಅನುಭೂತಿಯನ್ನು ಅದು ಬೇರಾವುದೇ ಮಾನವಜೀವಿ ಅಥವಾ ಹೈಟೆಕ್ ಗ್ಯಾಡ್ಜೆಟ್ ಮಾಡಲಾಗದು.
`ಮಲ್ಲಿಕಾಳ ಮಗು ಈಗ ನಮ್ಮ ಸೆಲೆಬ್ರಿಟಿ~.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT