ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ಕಾಲೇಜು, ಮಹಿಳಾ ವಿವಿ ಮತ್ತು ಸಶಕ್ತೀಕರಣ

Last Updated 25 ಏಪ್ರಿಲ್ 2011, 19:30 IST
ಅಕ್ಷರ ಗಾತ್ರ

ಕರ್ನಾಟಕದ ಏಕೈಕ ಹಾಗೂ ದೇಶದ ಆರನೆಯ ಮಹಿಳಾ ವಿಶ್ವವಿದ್ಯಾನಿಲಯ 2003ರಲ್ಲಿ ಬಿಜಾಪುರದಲ್ಲಿ ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯ ಎಂಬ ಹೆಸರಿನಿಂದ ಅಸ್ತಿತ್ವಕ್ಕೆ ಬಂತು. ಈ ಸಂದರ್ಭದಲ್ಲಿ ಬಿಡುಗಡೆಯಾದ ಕರ್ನಾಟಕ ರಾಜ್ಯ ಪತ್ರದಲ್ಲಿ ರಾಜ್ಯದ ಮಹಿಳೆಯರಿಗೆ ಹೆಚ್ಚಿನ ಉನ್ನತ ಶಿಕ್ಷಣಾವಕಾಶಗಳನ್ನು ಕಲ್ಪಿಸುವ ಹಾಗೂ ಅವರು ಬೋಧನೆ ಮತ್ತು ಸಂಶೋಧನೆಯ ಕ್ಷೇತ್ರಗಳಲ್ಲಿ ಹೆಚ್ಚಿನ ಪ್ರಗತಿಯನ್ನು ಸಾಧಿಸಲು ಅವಶ್ಯವಾದ ವ್ಯವಸ್ಥೆಯನ್ನು ಸೃಷ್ಟಿಸುವ ದೃಷ್ಟಿಯಿಂದ ಈ ವಿಶ್ವವಿದ್ಯಾನಿಲಯವನ್ನು ಸ್ಥಾಪಿಸಲಾಗುತ್ತಿದೆ ಎಂಬ ಸೂಚನೆಯನ್ನು ನೀಡಲಾಗಿತ್ತು. ಇದೇ ಪತ್ರದಲ್ಲಿ ಕರ್ನಾಟಕದ ಎಲ್ಲ ಮಹಿಳಾ ಕಾಲೇಜುಗಳು ಹಾಗೂ ಇತರ ಮಹಿಳಾ ಶಿಕ್ಷಣ ಸಂಸ್ಥೆಗಳು ಮಹಿಳಾ ವಿಶ್ವವಿದ್ಯಾನಿಲಯದ ಆಡಳಿತಕ್ಷೇತ್ರ ವ್ಯಾಪ್ತಿಗೆ ಒಳಪಡಲಿವೆ ಎಂಬ ಇಂಗಿತ ಕೂಡ ವ್ಯಕ್ತವಾಗಿತ್ತು.

ಮಹಿಳಾ ವಿಶ್ವವಿದ್ಯಾನಿಲಯದ ಕಾರ್ಯಕ್ಷೇತ್ರ ಇಡೀ ರಾಜ್ಯಕ್ಕೆ ವಿಸ್ತರಿಸಬಹುದೆಂಬ ಸೂಚನೆ ಅಧಿಕೃತ ದಾಖಲೆಗಳಲ್ಲಿ ಮೂಡಿ ಬಂದಿದ್ದರೂ ವಾಸ್ತವದಲ್ಲಿ ಕರ್ನಾಟಕದ ಹನ್ನೆರಡು (ಯಾದಗೀರ್ ಜಿಲ್ಲೆ ಅಸ್ತಿತ್ವಕ್ಕೆ ಬಂದ ಮೇಲೆ 13) ಜಿಲ್ಲೆಗಳಲ್ಲಿರುವ ಮಹಿಳಾ ಕಾಲೇಜುಗಳನ್ನು ಮಾತ್ರ ಮಹಿಳಾ ವಿಶ್ವವಿದ್ಯಾನಿಲಯದ ಸಂಯೋಜನೆಗೆ (ಅಫಿಲಿಯೇಷನ್) ಒಳಪಡಿಸಲಾಯ್ತು. ಈ ಜಿಲ್ಲೆಗಳೆಂದರೆ ಉತ್ತರ ಕನ್ನಡ, ಕೊಪ್ಪಳ, ಗದಗ, ಗುಲ್ಬರ್ಗಾ, ಧಾರವಾಡ, ಬಳ್ಳಾರಿ, ಬಾಗಲಕೋಟೆ, ಬಿಜಾಪುರ, ಬೀದರ್, ಬೆಳಗಾವಿ, ರಾಯಚೂರು ಮತ್ತು ಹಾವೇರಿ.

ಇತ್ತೀಚೆಗೆ ಬಿಜಾಪುರ ಭಾಗದ ರಾಜಕೀಯ ಮುಖಂಡರೊಬ್ಬರು ‘ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿರುವ ಮಹಿಳಾ ಕಾಲೇಜುಗಳನ್ನು ಮಾತ್ರ ಏಕೆ ಮಹಿಳಾ ವಿಶ್ವವಿದ್ಯಾಲಯದ ಸಂಯೋಜನೆಗೆ ಒಳಪಡಿಸಬೇಕು, ರಾಜ್ಯದ ಎಲ್ಲ ಮಹಿಳಾ ಕಾಲೇಜುಗಳನ್ನೂ ಈ ವಿಶ್ವವಿದ್ಯಾಲಯದ ಸಂಯೋಜನಾ ವ್ಯಾಪ್ತಿಯ ಒಳಗೆ ತರಬೇಕು’ ಎಂಬ ಕರೆಯನ್ನು ನೀಡಿದ್ದಾರೆ.

ಎಲ್ಲೋ ಆಗೊಮ್ಮೆ ಈಗೊಮ್ಮೆ ಚರ್ಚೆಗೆ ಒಳಪಟ್ಟು ಮತ್ತೆ ನೇಪಥ್ಯಕ್ಕೆ ಸರಿಯುವ ಈ ಸಂಯೋಜನೆಯ ವಿಚಾರವನ್ನು ವೈಚಾರಿಕ ವಿಶ್ಲೇಷಣೆಗೆ ಒಳಪಡಿಸಿ, ಕೆಲವು ಮೂಲಭೂತ ಪ್ರಶ್ನೆಗಳನ್ನು ಎತ್ತುವ ಕಾಲ ಈಗ ಸನ್ನಿಹಿತವಾಗಿದೆ. ಈ ಪ್ರಶ್ನೆಗಳಲ್ಲಿ ಮುಖ್ಯವಾದುವೆಂದರೆ:

1. ಮಹಿಳಾ ಕಾಲೇಜುಗಳೆಂಬ ಏಕೈಕ ಕಾರಣಕ್ಕಾಗಿ ಈ ಸಂಸ್ಥೆಗಳು ಮಹಿಳಾ ವಿಶ್ವವಿದ್ಯಾಲಯದ ಸಂಯೋಜನೆಗೆ ಒಳಪಡಬೇಕೆ?
2. ಮಹಿಳಾ ಕಾಲೇಜುಗಳನ್ನು ಮಹಿಳಾ ವಿಶ್ವವಿದ್ಯಾಲಯದ ಸಂಯೋಜನೆಗೆ ಒಳಪಡಿಸಿದ್ದರಿಂದ ಆ ಶಿಕ್ಷಣ ಸಂಸ್ಥೆಗಳ ಕಾರ್ಯವೈಖರಿಯಲ್ಲಾಗಲಿ, ಕಾರ್ಯಕ್ರಮಗಳಲ್ಲಾಗಲಿ ಇದುವರೆಗೂ ಆಗಿರುವಂಥ ಬದಲಾವಣೆಗಳ ಸ್ವರೂಪವಾದರೂ ಏನು?
3. ಇದುವರೆಗೂ ಮಹಿಳಾ ವಿಶ್ವವಿದ್ಯಾಲಯದ ಸಂಯೋಜನಾ ವ್ಯಾಪ್ತಿಗೆ ಒಳಪಡದ ಅಥವಾ ಸಹಶಿಕ್ಷಣ ಕಾಲೇಜುಗಳಲ್ಲಿ ಅಧ್ಯಯನ ಮಾಡುತ್ತಿರುವ ಹೆಣ್ಣು ಮಕ್ಕಳು ಪಡೆಯುತ್ತಿರುವ ಶಿಕ್ಷಣ ಹಾಗೂ ಅವರ ಸಶಕ್ತೀಕರಣಕ್ಕಾಗಿ ರೂಪಿಸಿರುವ ಕಾರ್ಯಕ್ರಮಗಳಿಗೂ ಮಹಿಳಾ ವಿಶ್ವವಿದ್ಯಾಲಯದ ಸಂಯೋಜನೆಗೆ ಒಳಪಟ್ಟಿರುವ ಮಹಿಳಾ ಕಾಲೇಜುಗಳ ವಿದ್ಯಾರ್ಥಿನಿಯರು ಪಡೆಯುತ್ತಿರುವ ಶಿಕ್ಷಣ ತರಬೇತಿ- ಸಶಕ್ತೀಕರಣದ ಅನುಭವಗಳಿಗೂ ಇರುವ ವ್ಯತ್ಯಾಸಗಳಾದರೂ ಎಂತಹುದು?
ಮಹಿಳಾ ಕಾಲೇಜುಗಳನ್ನು ಮಾತ್ರ ಮಹಿಳಾ ವಿಶ್ವವಿದ್ಯಾಲಯದ ಸಂಯೋಜನೆಗೆ ಒಳಪಡಿಸಬೇಕೆಂಬ ನಿರ್ಧಾರದ ಹಿಂದಿದ್ದ ಉದ್ದೇಶವೇನೋ ನನಗೆ ಸ್ಪಷ್ಟವಾಗಿಲ್ಲ.

ಉನ್ನತ ಶಿಕ್ಷಣಾವಕಾಶಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಮಹಿಳೆಯರಿಗೆ ಒದಗಿಸಬೇಕೆನ್ನುವುದರ ಜೊತೆಜೊತೆಗೆ ಲಿಂಗ ಅಸಮಾನತೆಯನ್ನು ತೊಡೆದು ಹಾಕುವ, ನಾಯಕತ್ವದ ಸ್ಥಾನಗಳನ್ನು ನಿರ್ವಹಿಸಲು ಮಹಿಳೆಯರಲ್ಲಿ ಕೌಶಲಗಳನ್ನು ಬೆಳೆಸುವ ಹಾಗೂ ಬದಲಾಗುತ್ತಿರುವ ಸಾಮಾಜಿಕ ಆರ್ಥಿಕ ಸಂದರ್ಭಗಳು ತಂದೊಡ್ಡುವ ಸವಾಲುಗಳನ್ನು ಸಮರ್ಥವಾಗಿ ಎದುರಿಸುವುದಕ್ಕೆ ಅವರನ್ನು ತಯಾರು ಮಾಡುವ ವಿಶೇಷ ಉದ್ದೇಶಗಳನ್ನೂ ಮಹಿಳಾ ವಿಶ್ವವಿದ್ಯಾಲಯ ಹೊಂದಿದೆ. ಮಹಿಳೆಯರ ಅಭಿವೃದ್ಧಿಗೆಂದೇ ಸೃಷ್ಟಿಯಾದ ಸಂಸ್ಥೆಯೊಂದಕ್ಕೆ ಈ ಗುರಿಗಳೆಲ್ಲಾ ಇರಬೇಕಾದದ್ದು ಸಹಜವೇ ಸರಿ.

ಆದರೆ ಈ ವಿಶ್ವವಿದ್ಯಾಲಯದ ಸಂಯೋಜನೆಗೆ ಆ ಕಾಲೇಜುಗಳು ಒಳಪಟ್ಟರೆ ಮಾತ್ರ ಮಹಿಳಾ ಕಾಲೇಜುಗಳಲ್ಲಿ ಅಧ್ಯಯನ ಮಾಡುತ್ತಿರುವ ಹೆಣ್ಣು ಮಕ್ಕಳು ಸಶಕ್ತರಾಗುತ್ತಾರೆ ಎಂಬ ಆಲೋಚನೆಯಾಗಲಿ, ಹಿಂದುಳಿದ ಪ್ರದೇಶಗಳು ಎಂದು ಗುರುತಿಸಲಾಗುತ್ತಿರುವ ಜಿಲ್ಲೆಗಳಲ್ಲಿರುವ ಮಹಿಳಾ ಕಾಲೇಜುಗಳು, ಇದೇ ಪ್ರದೇಶದಲ್ಲಿ ಮಹಿಳಾ ವಿಶ್ವವಿದ್ಯಾಲಯವೊಂದು ಸ್ಥಾಪಿತವಾಯಿತು ಎಂಬ ಕಾರಣಕ್ಕಾಗಿ ಆ ವಿಶ್ವವಿದ್ಯಾಲಯದ ಸಂಯೋಜನೆಗೆ ಒಳಪಡಬೇಕು ಎಂಬ ನಿರ್ಧಾರವಾಗಲಿ ಅನುಭವ ಅಧ್ಯಯನ ಚರ್ಚೆ ಚಿಂತನೆಗಳ ಹಿನ್ನೆಲೆಯಲ್ಲಿ ಮೂಡಿ ಬಂದಂಥವೇ ಎನ್ನುವ ಪ್ರಶ್ನೆಗೆ ಈಗ ಉತ್ತರಿಸುವವರು ಯಾರು?

ಸಂಯೋಜನೆಗೆ ಸಂಬಂಧಿಸಿದ ಹಾಗೆ ಮತ್ತೆರಡು ಪ್ರಶ್ನೆಗಳನ್ನು ಇಲ್ಲಿ ಎತ್ತುವುದು ಅಪ್ರಸ್ತುತವೆನಿಸಲಾರದು. ಇವುಗಳಲ್ಲಿ ಮೊದಲನೆಯದು, ಮಹಿಳಾ ವಿಶ್ವವಿದ್ಯಾಲಯ ಅಸ್ತಿತ್ವಕ್ಕೆ ಬರುವ ಮುನ್ನವೇ ಸ್ಥಾಪಿತವಾಗಿದ್ದ ಮಹಿಳಾ ಕಾಲೇಜುಗಳಲ್ಲಿ ಮಹಿಳಾಪರವಾದಂಥ ಕಾರ್ಯಕ್ರಮಗಳಾಗಲಿ, ಬೋಧನೆ-ಸಂಶೋಧನೆಗಳಾಗಲಿ ನಡೆಯುತ್ತಿರಲಿಲ್ಲವೇ ಎಂಬುದು ಹಾಗೂ ಎರಡನೆಯದಾಗಿ, ಇದುವರೆಗೂ ಮಹಿಳಾ ವಿಶ್ವವಿದ್ಯಾಲಯದ ಸಂಯೋಜನೆಗೆ ಒಳಪಡದ 68 ಕಾಲೇಜುಗಳಲ್ಲಿ (ಲಭ್ಯವಿರುವ ಮಾಹಿತಿಯ ಅನ್ವಯ ಕರ್ನಾಟಕದಲ್ಲಿರುವ ಒಟ್ಟು ಮಹಿಳಾ ಕಾಲೇಜುಗಳ ಸಂಖ್ಯೆ 130 ಆಗಿದ್ದು, ಇದರಲ್ಲಿ 72 ಮಹಿಳಾ ಕಾಲೇಜುಗಳು ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯದ ಸಂಯೋಜನೆಗೆ ಒಳಪಟ್ಟಿವೆ) ಮಹಿಳಾ ಸಶಕ್ತೀಕರಣಕ್ಕೆ ಸಂಬಂಧಿಸಿದ ಚಿಂತನೆ-ಸಂಶೋಧನೆ ಕಾರ್ಯಕ್ರಮಗಳು ನಡೆಯುತ್ತಿಲ್ಲವೇ ಎನ್ನುವುದು.

ಈ ಪ್ರಶ್ನೆಗಳ ಹಿನ್ನೆಲೆಯಲ್ಲಿ ಮಹಿಳಾ ವಿಶ್ವವಿದ್ಯಾಲಯದ ಸಂಯೋಜನೆಗೆ ಒಳಪಟ್ಟಿರುವ ಹಾಗೂ ಒಳಪಡದ ಕಾಲೇಜುಗಳ ನಡುವಣ ಒಂದು ತುಲನಾತ್ಮಕ ಅಧ್ಯಯನವನ್ನು ಕೈಗೊಳ್ಳುವುದು ಎಷ್ಟು ಅವಶ್ಯವೋ, ಮಹಿಳಾ ವಿಶ್ವವಿದ್ಯಾಲಯದ ಸಂಯೋಜನೆಗೆ ಒಳಪಡುವ ಮುನ್ನ ಮತ್ತು ಒಳಪಟ್ಟ ನಂತರದಲ್ಲಿ ಮಹಿಳಾ ಕಾಲೇಜುಗಳಲ್ಲಿ ಉಂಟಾಗಿರುವ ಬದಲಾವಣೆಗಳನ್ನು ಕುರಿತೂ ಅಧ್ಯಾಪಕರು, ವಿದ್ಯಾರ್ಥಿಗಳು, ಪೋಷಕರು, ಆಡಳಿತ ವ್ಯವಸ್ಥೆ ಹಾಗೂ ವಿಷಯ ತಜ್ಞರೊಡನೆ ಸಮಾಲೋಚಿಸುವಂಥ ಒಂದು ಹೆಜ್ಜೆಯನ್ನು ಈಗಲಾದರೂ ಸರ್ಕಾರ ತೆಗೆದುಕೊಳ್ಳುವುದು ಸೂಕ್ತ.

ಮಹಿಳಾ ವಿಶ್ವವಿದ್ಯಾಲಯ ಅಸ್ತಿತ್ವಕ್ಕೆ ಬಂದ ಮೇಲೆ ಗುಲ್ಬರ್ಗಾ ಮತ್ತು ಕರ್ನಾಟಕ ವಿಶ್ವವಿದ್ಯಾನಿಲಯಗಳ ಸಂಯೋಜನಾವ್ಯಾಪ್ತಿಗೆ ಒಳಪಡುವ ಮಹಿಳಾ ಕಾಲೇಜುಗಳ ಸಂಯೋಜನೆಯನ್ನು ಮಾತ್ರ ಮಹಿಳಾ ವಿಶ್ವವಿದ್ಯಾಲಯಕ್ಕೆ ವರ್ಗಾಯಿಸಲಾಯಿತು. ಇತ್ತೀಚೆಗಷ್ಟೇ ಬೆಳಗಾವಿ ಮತ್ತು ಬಳ್ಳಾರಿಯಲ್ಲಿ ಸ್ಥಾಪಿಸಲಾದ ಎರಡು ಹೊಸ ವಿಶ್ವವಿದ್ಯಾನಿಲಯಗಳ ವ್ಯಾಪ್ತಿಗೆ ಸೇರ್ಪಡೆಯಾದ ಮಹಿಳಾ ಕಾಲೇಜುಗಳೂ ಈ ಮೊದಲು ಕರ್ನಾಟಕ ಅಥವಾ ಗುಲ್ಬರ್ಗಾ ವಿಶ್ವವಿದ್ಯಾನಿಲಯಗಳ ಸಂಯೋಜನೆಗೆ ಒಳಪಟ್ಟಿದ್ದರಿಂದ ಈ ಕಾಲೇಜುಗಳು ಸಹಜವಾಗಿಯೇ ಈಗ ಮಹಿಳಾ ವಿಶ್ವವಿದ್ಯಾಲಯದ ಸಂಯೋಜನೆಗೆ ಒಳಪಡುತ್ತವೆ.

ಉತ್ತರ ಕರ್ನಾಟಕದ ಜಿಲ್ಲೆಗಳ ಮಹಿಳಾ ಕಾಲೇಜುಗಳನ್ನು ಮಾತ್ರ ಮಹಿಳಾ ವಿಶ್ವವಿದ್ಯಾಲಯದ ಸಂಯೋಜನೆಗೆ ಒಳಪಡಿಸುವ ಸರ್ಕಾರದ ನಿರ್ಧಾರದಿಂದ, ಕ್ರಮೇಣ ಈ ಕಾಲೇಜುಗಳಲ್ಲಿ ಡಿಗ್ರಿಗಳನ್ನು ಪಡೆದಂಥ ವಿದ್ಯಾರ್ಥಿನಿಯರಿಗೆ ಕರ್ನಾಟಕ ಮತ್ತು ಗುಲ್ಬರ್ಗಾ ವಿಶ್ವವಿದ್ಯಾನಿಲಯಗಳಲ್ಲಿ ಸ್ನಾತಕೋತ್ತರ ಕೋರ್ಸುಗಳಿಗೆ ಪ್ರವೇಶಾವಕಾಶಗಳೇ ಸಂಕುಚಿತವಾದವು. ಇವರನ್ನು ಹೊರ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳೆಂಬ ವರ್ಗದಡಿ ಪರಿಗಣಿಸುತ್ತಿರುವುದರಿಂದ ಈ ಪರಿಸ್ಥಿತಿ ಸೃಷ್ಟಿಯಾಗಿದ್ದು, ಬಳ್ಳಾರಿ ಮತ್ತು ಬೆಳಗಾವಿಯಲ್ಲಿ ಅಸ್ತಿತ್ವಕ್ಕೆ ಬಂದಿರುವ ವಿಶ್ವವಿದ್ಯಾನಿಲಯಗಳಿಗೂ ಇದೇ ನಿಯಮ ಅನ್ವಯಿಸುತ್ತದೆ.

ಸ್ನಾತಕೋತ್ತರ ಶಿಕ್ಷಣ ಪಡೆಯಲು ಈ 13 ಜಿಲ್ಲೆಗಳ ಹೆಚ್ಚಿನ ಸಂಖ್ಯೆಯ ಹೆಣ್ಣು ಮಕ್ಕಳು ಈಗ ಬಿಜಾಪುರಕ್ಕೆ ಹೋಗಬೇಕಾದಂಥ ಪರಿಸ್ಥಿತಿ ಸೃಷ್ಟಿಯಾಗಿದ್ದು, ಅನೇಕ ಕುಟುಂಬಗಳಲ್ಲಿ ಆರ್ಥಿಕ ಕಾರಣಗಳಿಗಾಗಿಯೋ ಅಥವಾ ಹೆಣ್ಣು ಮಕ್ಕಳನ್ನು ಅಷ್ಟು ದೂರ ಕಳುಹಿಸಲು ಮನಸ್ಸಿಲ್ಲದಿರುವುದರಿಂದಲೋ ಅವರನ್ನು ಉನ್ನತ ಶಿಕ್ಷಣಾವಕಾಶಗಳಿಂದ ವಂಚಿಸಿರುವಂಥ ಸಂದರ್ಭಗಳು ಹೆಚ್ಚುತ್ತಿವೆ.

ಹಾಗೆಂದ ಮಾತ್ರಕ್ಕೆ ಈ ಹೆಣ್ಣು ಮಕ್ಕಳಿಗೆ ಅವರ ಜಿಲ್ಲೆಗಳಲ್ಲಿಯೇ ಸ್ನಾತಕೋತ್ತರ ಶಿಕ್ಷಣಕ್ಕೆ ಪರ್ಯಾಯ ಅವಕಾಶಗಳೇ ಇಲ್ಲವೆಂದಲ್ಲ. ಇವರು ಪೇಮೆಂಟ್ ಕೋಟಾದಡಿಯಲ್ಲಿಯೋ ಅಥವಾ ಇತರ ಶಿಕ್ಷಣ ಸಂಸ್ಥೆಗಳಲ್ಲಿಯೋ ಪ್ರವೇಶ ಪಡೆಯುವ ಸಾಧ್ಯತೆಗಳು ಇವೆ. ಆದರೆ ಎಲ್ಲ ವಿದ್ಯಾರ್ಥಿನಿಯರಿಗೂ ಹೀಗೆ ಮಾಡಲು ಸಾಧ್ಯವಾಗಲಿಲ್ಲ.

ಮಹಿಳಾ ಕಾಲೇಜುಗಳೆಂಬ ಏಕೈಕ ಕಾರಣಕ್ಕೆ ಮಹಿಳಾ ವಿಶ್ವವಿದ್ಯಾಲಯದ ಸಂಯೋಜನೆಗೆ ಅವುಗಳನ್ನು ಒಳಪಡಿಸಬೇಕೆಂಬ ಏಕಮುಖಿ ಚಿಂತನೆಗೆ ಬದ್ಧವಾಗಿದ್ದ ವ್ಯಕ್ತಿ ವ್ಯವಸ್ಥೆಗಳು ತಮ್ಮ ನಿರ್ಧಾರದಿಂದ ಉಂಟಾಗಬಹುದಾದ ಪರಿಣಾಮಗಳ ಬಗ್ಗೆ ಗಮನಹರಿಸಿಲ್ಲವೆನ್ನುವುದು ಸ್ಪಷ್ಟವಾಗುತ್ತದೆ.

ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿರುವ ಮಹಿಳಾ ಕಾಲೇಜುಗಳನ್ನು ಮಾತ್ರ ಮಹಿಳಾ ವಿಶ್ವವಿದ್ಯಾನಿಲಯದ ಆಡಳಿತ ವ್ಯಾಪ್ತಿಗೆ ತರುವ ನಿರ್ಧಾರಕ್ಕೆ ಈ ಪ್ರದೇಶದಲ್ಲಿ ಕೆಲ ಪ್ರತಿಭಟನೆಯ ಧ್ವನಿಗಳೆದ್ದಿದ್ದವು. ಆದರೆ ಸರ್ಕಾರ ತನ್ನ ನಿರ್ಧಾರವನ್ನು ಬದಲಿಸಲಿಲ್ಲ. ಅದೇ ರಾಜ್ಯದ ಬೇರೆ ಬೇರೆ ಜಿಲ್ಲೆಗಳ ಮಹಿಳಾ ಕಾಲೇಜುಗಳಿಗೂ ಇದೇ ನೀತಿಯನ್ನು ಅಳವಡಿಸುವ ಸೂಚನೆ ಹೊರ ಹೊಮ್ಮಿದಾಗ ಅವುಗಳಿಂದ ಅನೇಕ ಪ್ರತಿಭಟನೆಗಳು ಹೊರ ಹೊಮ್ಮಿದವು. ಇಂದಿಗೂ ರಾಜ್ಯದ 17 ಜಿಲ್ಲೆಗಳ ಮಹಿಳಾ ಕಾಲೇಜುಗಳ ವಿದ್ಯಾರ್ಥಿನಿಯರಾಗಲಿ ಅಥವಾ ಮಹಿಳಾ ವಿಶ್ವವಿದ್ಯಾಲಯದ ಸಂಯೋಜನೆಗೆ ಒಳಪಟ್ಟಿರುವ 13 ಜಿಲ್ಲೆಗಳಲ್ಲಿಯೇ ಸಹಶಿಕ್ಷಣ ಕಾಲೇಜುಗಳಲ್ಲೇ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿನಿಯರಾಗಲಿ ಮಹಿಳಾ ವಿಶ್ವವಿದ್ಯಾಲಯದ ವ್ಯಾಪ್ತಿಗೆ ಒಳಪಡದಿರುವುದನ್ನು ನೋಡಿದರೆ ನಮ್ಮ ಶಿಕ್ಷಣ ವ್ಯವಸ್ಥೆಯಲ್ಲಿ ಕಂಡು ಬರುವ ದ್ವಂದ್ವ ನಿಲುವುಗಳ ಬಗ್ಗೆಯೇ ಜುಗುಪ್ಸೆ ಮೂಡುತ್ತದೆ.

ಬಿಜಾಪುರ ಜಿಲ್ಲೆಯಲ್ಲಿ ಮಹಿಳಾ ವಿಶ್ವವಿದ್ಯಾಲಯ ಸ್ಥಾಪನೆಯಾಗಿದ್ದು, ಮೂಲ ಸೌಕರ್ಯಗಳ ಅಭಾವದಿಂದಲೂ, ಶೈಕ್ಷಣಿಕ  ಆರ್ಥಿಕ ಅಸಮಾನತೆಗಳಿಂದಲೂ ನರಳುತ್ತಿದ್ದ ಪ್ರದೇಶದಲ್ಲಿ ಅನೇಕ ಹೆಣ್ಣು ಮಕ್ಕಳಿಗೆ ಉನ್ನತ ಶಿಕ್ಷಣಾವಕಾಶಗಳ ಬಾಗಿಲನ್ನು ತೆರೆಯಿತೆನ್ನುವುದು ನಿಜ. ಪ್ರಾದೇಶಿಕ ಅಸಮತೋಲನದ ಹೊರೆಯನ್ನು ತೀವ್ರ ಸ್ವರೂಪದಲ್ಲಿ ಅನುಭವಿಸುತ್ತಿರುವ ಈ ಪ್ರದೇಶದಲ್ಲಿ ಸ್ನಾತಕೋತ್ತರ ಮಟ್ಟದಲ್ಲಿ ಶಿಕ್ಷಣಾವಕಾಶಗಳು ಸನಿಹದಲ್ಲೇ ಲಭ್ಯವಿದೆಯೆಂಬ ಏಕೈಕ ಕಾರಣಕ್ಕಾಗಿಯೇ ಅನೇಕ ಸಂಪ್ರದಾಯಸ್ಥ ಕುಟುಂಬಗಳು ತಮ್ಮ ಹೆಣ್ಣು ಮಕ್ಕಳನ್ನು ಈ ವಿಶ್ವವಿದ್ಯಾನಿಲಯಕ್ಕೆ ಕಳುಹಿಸಿದ್ದು ಕೂಡ ನಿಜ.

ಆದರೆ ಮಹಿಳಾ ವಿಶ್ವವಿದ್ಯಾನಿಲಯ ಜವಾಬ್ದಾರಿ ಕೇವಲ ದಾಖಲಾತಿ ಹಾಜರಾತಿ ಪ್ರಕ್ರಿಯೆಗಳಿಗೆ, ಸಂಯೋಜನೆ ನೀಡಿಕೆಗೆ, ಸಾಂಪ್ರದಾಯಿಕ ಡಿಗ್ರಿಗಳನ್ನು ಪ್ರದಾನ ಮಾಡುವುದಕ್ಕೆ ಸೀಮಿತವಾಗಿರಬಾರದು. ಕರ್ನಾಟಕದ ಮಹಿಳೆಯರನ್ನು ಕುರಿತಂತೆ ಸಮೃದ್ಧವಾದ ಮಾಹಿತಿ ಭಂಡಾರವನ್ನು ಸೃಷ್ಟಿಸುವಲ್ಲಿ, ಪ್ರಾದೇಶಿಕ ಅಸಮತೋಲನ ಆ ಪ್ರದೇಶದ ಮಹಿಳೆಯರ ಅಭಿವೃದ್ಧಿಯ ಹಾದಿಯಲ್ಲಿ ತರುವ ಅಡ್ಡಿಗಳನ್ನು ಗುರುತಿಸಿ, ತೊಡೆದು ಹಾಕುವಲ್ಲಿ ಹಾಗೂ ಮಹಿಳೆಯರ ಬದುಕಿನ ಗುಣಮಟ್ಟವನ್ನು ಏರಿಸುವಂಥ ಕಾರ್ಯಕ್ರಮಗಳನ್ನು ಬೃಹತ್ ಪ್ರಮಾಣದಲ್ಲಿ ಕೈಗೊಳ್ಳಬೇಕು. ಈಗಾಗಲೇ ಕನ್ನಡ ಭಾಷಾಭಿವೃದ್ಧಿ, ಟೆಲಿ ಶಿಕ್ಷಣ ಹಾಗೂ ಮೊಬೈಲ್ ಮೂಲಕ ಕಲಿಕೆ ಯೋಜನೆಗಳಡಿಯಲ್ಲಿ ಕೆಲ ಅರ್ಥಪೂರ್ಣ ಸಂಯೋಜನೆಗಳು ಇಲ್ಲಿ ಪ್ರಾರಂಭವಾಗಿವೆ. ಆದರೆ ಇನ್ನೂ ಮಹತ್ತರವಾದ ಮಹಿಳಾ ಪರವಾದ ಕಾರ್ಯಕ್ರಮಗಳು ಈ ವಿಶ್ವವಿದ್ಯಾನಿಲಯದಿಂದ ಹೊರಹೊಮ್ಮಬೇಕಿದೆ.

ಇನ್ನೇನು ಎರಡು ವರ್ಷಗಳಲ್ಲಿ ದಶಮಾನೋತ್ಸವವನ್ನು ಆಚರಿಸಲಿರುವ ಮಹಿಳಾ ವಿಶ್ವವಿದ್ಯಾಲಯದ ಗುರಿಗಳು, ಕಾರ್ಯಕ್ಷೇತ್ರ, ಕಾರ್ಯವೈಖರಿ, ಇದುವರೆಗಿನ ಅನುಭವಗಳ ಹಿನ್ನೆಲೆಯಲ್ಲಿ ಭವಿಷ್ಯಕ್ಕಾಗಿ ಕುರಿತಂತೆ ತಯಾರಿಸಬೇಕಾದ ದಿಕ್ಸೂಚಿಯ ರೂಪುರೇಷೆಗಳು ಇವೇ ಮುಂತಾದ ವಿಷಯಗಳನ್ನು ಕುರಿತಂತೆ ವಿಷಯತಜ್ಞರು ಹಾಗೂ ಮಹಿಳಾ ಚಳವಳಿಗಳ ಹಿನ್ನೆಲೆಯಿಂದ ಬಂದವರೊಡನೆ ಗಂಭೀರವಾದ ಚರ್ಚೆ, ಸಮಾಲೋಚನೆಗಳನ್ನು ನಡೆಸುವುದು ಸಂಸ್ಥೆಯ ಬೆಳವಣಿಗೆಯ ದೃಷ್ಟಿಯಿಂದ ಒಳಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT