ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ಮೀಸಲು: ಇನ್ನು ವಿಳಂಬ ಬೇಡ

Last Updated 24 ಜುಲೈ 2017, 19:30 IST
ಅಕ್ಷರ ಗಾತ್ರ

ಬೆಂಗಳೂರಿನಲ್ಲಿ ರಾಜ್ಯ ಸರ್ಕಾರ ಆಯೋಜಿಸಿದ್ದ ಡಾ. ಬಿ.ಆರ್. ಅಂಬೇಡ್ಕರ್ 126ನೇ ಜನ್ಮ ವರ್ಷಾಚರಣೆ ಉದ್ಘಾಟನಾ ಸಮಾರಂಭದಲ್ಲಿ ಯಾರೂ ಮಹಿಳೆಯರೇ ಇರಲಿಲ್ಲ ಎಂಬುದು ಚರ್ಚೆಯ ಸಂಗತಿಯಾಯಿತು. ಮಹಿಳಾ ಚಳವಳಿಯ ಘೋಷವಾಕ್ಯವಾದ ‘ವೈಯಕ್ತಿಕವಾದದ್ದು ರಾಜಕೀಯವಾದದ್ದು’ ಎಂಬ ನಿಲುವನ್ನು ಅಂಬೇಡ್ಕರ್ ಹೊಂದಿದ್ದರು. ಮನೆಯೊಳಗೆ ಖಾಸಗಿಯಾಗಿ ಮಹಿಳೆಯರು ಅನುಭವಿಸುವ ದೌರ್ಜನ್ಯಗಳನ್ನು ಕಾನೂನಿನ ಚೌಕಟ್ಟಿನ ಮೂಲಕ ಸಾರ್ವಜನಿಕ ವಲಯಕ್ಕೆ ತರಲು ಭಾರತದ ಮೊದಲ ಕಾನೂನು ಸಚಿವರಾದ ಅವರು ಪ್ರಯತ್ನಿಸಿದರು ಎಂಬುದನ್ನು ನಾವು ನೆನಪಿಡಬೇಕು.

ಹಿಂದೂ ಸಾಮಾಜಿಕ ಕಾನೂನುಗಳಿಗೆ ಸುಧಾರಣೆ ತಂದು ಮಹಿಳೆಯ ಸ್ಥಾನಮಾನ ಸುಧಾರಿಸುವುದಕ್ಕಾಗಿ ಅವರು ರೂಪಿಸಿದ ಹಿಂದೂ ಕೋಡ್ ಬಿಲ್ ಸಂಪ್ರದಾಯವಾದಿಗಳ ಕೆಂಗಣ್ಣಿಗೆ ಗುರಿಯಾಯಿತು. ಯಥಾವತ್ತಾಗಿ ಹಿಂದೂ ಕೋಡ್ ಬಿಲ್‌ ಜಾರಿಯಾಗದ ಕಾರಣ ನೊಂದುಕೊಂಡು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದವರು ಅಂಬೇಡ್ಕರ್. ಬಹುಶಃ ಮಹಿಳಾ ಪರ ಕಾಳಜಿಯ ವಿಚಾರಗಳಿಗಾಗಿ ಸಂಪುಟ ತೊರೆದ ಏಕೈಕ ಸಚಿವ ಭಾರತದ ರಾಜಕಾರಣದ ಇತಿಹಾಸದಲ್ಲಿ ಅವರೊಬ್ಬರೇ ಇರಬೇಕು. ಇಂತಹ ವ್ಯಕ್ತಿಯ ಸ್ಮರಣಾರ್ಥ ಸಮ್ಮೇಳನದ ಉದ್ಘಾಟನೆಯಲ್ಲಿ ಮಹಿಳಾ ಪ್ರಾತಿನಿಧ್ಯವನ್ನು ಮರೆಯಲಾಯಿತು ಎಂಬುದು ವಿಪರ್ಯಾಸ. ಪ್ರಾತಿನಿಧ್ಯವನ್ನೇ ನೀಡದ ಕಡೆ ಪ್ರಾತಿನಿಧ್ಯ ದಕ್ಕಿಸಿಕೊಳ್ಳಲು ಮೀಸಲಾತಿ ಎಷ್ಟು ಅಗತ್ಯ ಎಂಬುದನ್ನು ಪದೇಪದೇ ಇಂತಹ ಬೆಳವಣಿಗೆಗಳು ನೆನಪಿಸುತ್ತಲೇ ಇರುತ್ತವೆ.

ಕಳೆದ ವಾರದಿಂದ (ಜುಲೈ 17) ಸಂಸತ್‌ನ ಮುಂಗಾರು ಅಧಿವೇಶನವೂ ಆರಂಭವಾಗಿರುವ ಸದ್ಯದ ಸಂದರ್ಭದಲ್ಲಿ ಮಹಿಳಾ ಮೀಸಲು ಮಸೂದೆ ಮತ್ತೊಮ್ಮೆ ಸದ್ದು ಮಾಡುತ್ತಿದೆ. ಪ್ರತಿ ಸಂಸತ್ ಅಧಿವೇಶನದ ಸಂದರ್ಭದಲ್ಲೂ ಒಂದಷ್ಟು ಸದ್ದುಮಾಡಿ ಮಾಧ್ಯಮಗಳಲ್ಲಿ ಮಿಂಚಿ ಮರೆಯಾಗುವ ಮರೀಚಿಕೆಯಾಗಿಬಿಟ್ಟಿದೆ ಈ ಮಸೂದೆ. ಕೇಂದ್ರದ ಸಂಯುಕ್ತ ರಂಗ ಸರ್ಕಾರದಲ್ಲಿ ಎಚ್.ಡಿ. ದೇವೇಗೌಡ ಅವರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ 1996ರ ಸೆಪ್ಟೆಂಬರ್ 12ರಂದು ಮೊದಲ ಬಾರಿಗೆ ಲೋಕಸಭೆಯಲ್ಲಿ ಮಂಡಿತವಾದದ್ದು ಈ ಮಹಿಳಾ ಮೀಸಲು ಮಸೂದೆ. ಬರೋಬ್ಬರಿ 21 ವರ್ಷಗಳು ಗತಿಸಿವೆ. ಸ್ವತಃ ದೇವೇಗೌಡರೇ ಈಗ ಮಹಿಳಾ ಮೀಸಲು ಮಸೂದೆ ಜಾರಿಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಒತ್ತಾಯಿಸಿ ಪ್ರಧಾನಿಗೆ ಪತ್ರ ಬರೆದಿದ್ದಾರೆ ಎಂಬುದು ವಿಶೇಷ.

ಲೋಕಸಭೆಯಲ್ಲಿ ಈಗ ಬಿಜೆಪಿಗೆ ಭಾರಿ ಬಹುಮತವಿದೆ. ಹೀಗಾಗಿ ಮಸೂದೆ ಅಂಗೀಕಾರಕ್ಕೆ ಯಾವುದೇ ಅಡ್ಡಿಆತಂಕಗಳಂತೂ ಇಲ್ಲ. ಜೊತೆಗೆ 2014ರ ಸಾರ್ವತ್ರಿಕ ಚುನಾವಣಾ ಪ್ರಣಾಳಿಕೆಯಲ್ಲಿ ಮಹಿಳಾ ಮೀಸಲು ಮಸೂದೆ ಜಾರಿಗೊಳಿಸುವ ಭರವಸೆಯನ್ನು ಬೇರೆ ಬಿಜೆಪಿ ನೀಡಿದೆ. ಕಾಂಗ್ರೆಸ್ ಹಾಗೂ ಎಡಪಕ್ಷಗಳು ಸೇರಿದಂತೆ ಅನೇಕ ಪ್ರತಿಪಕ್ಷಗಳೂ ಮಸೂದೆ ಪರವಾಗಿವೆ ಎಂಬುದನ್ನೂ ಮಾಜಿ ಪ್ರಧಾನಿಗಳು ಕಳೆದ ವಾರ ಬೆಂಗಳೂರಿನಲ್ಲಿ ನಡೆದ ಜೆಡಿಎಸ್ ಮಹಿಳಾ ರ್‍ಯಾಲಿಯಲ್ಲಿ ನೆನಪಿಸಿದ್ದಾರೆ.

ರಾಜ್ಯದಲ್ಲಿ ವಿಧಾನಸಭೆ ಚುನಾವಣೆಗಳು ಬೇರೆ ಹತ್ತಿರವಾಗುತ್ತಿವೆ. ಇಂತಹ ಸಂದರ್ಭದಲ್ಲಿ ಈ ಡಿಸೆಂಬರ್ ಅಂತ್ಯಕ್ಕಾದರೂ ಮಸೂದೆ ಅಂಗೀಕಾರವಾಗಲು ಮೋದಿಯವರು ಕ್ರಮ ಕೈಗೊಳ್ಳುತ್ತಾರೆಂಬ ಆಶಯ ದೇವೇಗೌಡ ಅವರದು. ಈ ಮಸೂದೆ ಕಾಯಿದೆಯಾಗಿ ಸಾಕಾರವಾದರೆ ಕರ್ನಾಟಕದಲ್ಲಿ 84 ಶಾಸಕಿಯರಿರುತ್ತಾರೆ ಎಂಬಂತಹ ಲೆಕ್ಕವನ್ನೂ ಮಾಜಿ ಪ್ರಧಾನಿಗಳು ನೀಡಿದ್ದಾರೆ.

ದೇವೇಗೌಡರ ಕುಟುಂಬದೊಳಗೇ ರಾಜಕೀಯ ಆಸಕ್ತಿ ಹೊಂದಿರುವ ಮಹಿಳಾ ಸದಸ್ಯೆಯರಿಗೆ (ಅನಿತಾ ಕುಮಾರಸ್ವಾಮಿ ಹಾಗೂ ಭವಾನಿ ರೇವಣ್ಣ ) ಮುಂದಿನ ವಿಧಾನಸಭೆ ಚುನಾವಣೆಗೆ ಟಿಕೆಟ್ ಸಿಗಲಿದೆಯೇ ಎಂಬ ಜಿಜ್ಞಾಸೆ ನಡೆಯುತ್ತಿರುವ ಪ್ರಸಕ್ತ ಸಂದರ್ಭದಲ್ಲಿ, ಮುಂದಿನ ವಿಧಾನಸಭೆ ಚುನಾವಣೆಗೆ ಮಂಚೆಯೇ ಮಹಿಳಾ ಮೀಸಲು ಮಸೂದೆ ಜಾರಿಯಾಗಲಿದೆ ಎಂಬಂತಹ ಆಶಾಭಾವವನ್ನು ದೇವೇಗೌಡ ವ್ಯಕ್ತಪಡಿಸಿದ್ದಾರೆ. ಮಹಿಳಾ ಅಭ್ಯರ್ಥಿಗಳನ್ನು ಗುರುತಿಸುವ ಕೆಲಸವನ್ನು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಮಾಡಬೇಕು ಎಂದೂ ದೇವೇಗೌಡರು ಹೇಳಿದ್ದಾರೆ.

ಡಿಎಂಕೆ ಕಾರ್ಯಕಾರಿ ಅಧ್ಯಕ್ಷ ಎಂ.ಕೆ, ಸ್ಟಾಲಿನ್ ಸಹ ಈ ಬಗ್ಗೆ ಇದೇ ವರ್ಷದ ಮಾರ್ಚ್ ತಿಂಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದರು. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಸಹ ಮಹಿಳಾ ಮೀಸಲಿಗಾಗಿ ಸಹಿ ಸಂಗ್ರಹ ಕಾರ್ಯ ಆರಂಭಿಸಿದ್ದಾರೆ. ಕಳೆದ ಮೇ 21ರಿಂದ ಆರಂಭವಾಗಿದೆ ಈ ಅಭಿಯಾನ. ಮಹಿಳಾ ಕಾಂಗ್ರೆಸ್ ಕಾರ್ಯಕರ್ತರು ಮನೆಮನೆಗೆ ಹೋಗಿ ಸಹಿ ಸಂಗ್ರಹಿಸುತ್ತಿದ್ದಾರೆ. ಮುಂದಿನ ಆಗಸ್ಟ್ 20ರಂದು ರಾಜೀವ್ ಗಾಂಧಿಯವರ ಜನ್ಮದಿನೋತ್ಸವದಂದು ಈ ಕುರಿತಾದ ಮನವಿಯನ್ನು ರಾಷ್ಟ್ರಪತಿಗೆ ಸಲ್ಲಿಸಲು ನಿರ್ಧರಿಸಲಾಗಿದೆ.

ಈ ಮಧ್ಯೆ, ಲೋಕಸಭೆ ಹಾಗೂ ರಾಜ್ಯ ಶಾಸನಸಭೆಗಳಲ್ಲಿ ಮೀಸಲು ಪ್ರಮಾಣ ಶೇ 50ರಷ್ಟಿರಬೇಕೆಂಬ ಒತ್ತಾಯವನ್ನು ಜುಲೈ17ರಿಂದ ಸಂಸತ್ತಿನ ಮುಂಗಾರು ಅಧಿವೇಶನ ಆರಂಭವಾಗುತ್ತಿದ್ದಂತೆಯೇ 1600ಕ್ಕೂ ಹೆಚ್ಚು ಸಂಘಟನೆಗಳನ್ನು ಹೊಂದಿರುವ ಮಹಿಳಾ ರಾಷ್ಟ್ರೀಯ ಮೈತ್ರಿಕೂಟ ಮುಂದಿಟ್ಟಿದೆ. ‘ಈಗ 33% ಬೇಡ, 50 %’ ( ಅಬ್ 33% ನಹೀ 50 %)ಎಂಬ ಬೇಡಿಕೆಯನ್ನು ಈ ಮೈತ್ರಿಕೂಟ ಮುಂದಿಟ್ಟಿದೆ. ಆಗಸ್ಟ್ 11ಕ್ಕೆ ಮುಕ್ತಾಯವಾಗಲಿರುವ ಇದೇ ಅಧಿವೇಶನದಲ್ಲೇ ಮಹಿಳಾ ಮೀಸಲು ಮಸೂದೆ ಕೈಗೆತ್ತಿಕೊಳ್ಳಬೇಕೆಂದು ಸಿಪಿಎಂ ಸಹ ಆಗ್ರಹಿಸಿದೆ.

ಆಫ್ರಿಕನ್ ರಾಷ್ಟ್ರಗಳ ಸಂಸತ್‌ಗಳಲ್ಲಿ ಮಹಿಳೆಯರ ಪ್ರಾತಿನಿಧ್ಯದ ಬಾಹುಳ್ಯವನ್ನು ಪ್ರಧಾನಿಯವರು ಶ್ಲಾಘಿಸಿದ್ದಾರೆ. ಆದರೆ ಸ್ವಂತ ರಾಷ್ಟ್ರದಲ್ಲಿ ಮಹಿಳಾ ಪ್ರಾತಿನಿಧ್ಯ ಹೆಚ್ಚಿಸುವ ಮಸೂದೆ ಬಗ್ಗೆ ಪ್ರಧಾನಿಯವರು ಮೌನವಾಗಿಯೇ ಇದ್ದಾರೆ ಎಂಬುದು ವಿಪರ್ಯಾಸ. ಆದರೆ ಪ್ರಧಾನಿ ನರೇಂದ್ರ ಮೋದಿಯವರು ಮಹಿಳಾ ಸಶಕ್ತೀಕರಣದ ಬಗ್ಗೆ ಅನೇಕ ಸಲ ಮಾತನಾಡಿದ್ದಾರೆ. 2014ರ ಮೇ ತಿಂಗಳಲ್ಲಿ ಅವರ ಸರ್ಕಾರ ಅಧಿಕಾರ ಗದ್ದುಗೆಗೆ ಏರಿದ ಸಂದರ್ಭದಲ್ಲಿ ಮೊದಲ ಬಾರಿಗೆ ಲೋಕಸಭೆಯನ್ನುದ್ದೇಶಿಸಿ ಮಾತನಾಡಿದ ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ಮಹಿಳಾ ಮೀಸಲು ಮಸೂದೆ ಕುರಿತಾದ ಸರ್ಕಾರದ ದೃಷ್ಟಿಕೋನವನ್ನು ಮುಂದಿಟ್ಟಿದ್ದರು. ಸಂಸತ್‌ನ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಿದ್ದ ಪ್ರಣವ್ ಮುಖರ್ಜಿ ಅವರು, ‘ಸಮಾಜದ ಅಭಿವೃದ್ಧಿ ಹಾಗೂ ರಾಷ್ಟ್ರದ ಬೆಳವಣಿಗೆಯಲ್ಲಿ ನಮ್ಮ ಮಹಿಳೆಯರ ಮುಖ್ಯ ಪಾತ್ರವನ್ನು ನಮ್ಮ ಸರ್ಕಾರ ಗುರುತಿಸುತ್ತದೆ. ಲೋಕಸಭೆ ಹಾಗೂ ರಾಜ್ಯ ವಿಧಾನಸಭೆಗಳಲ್ಲಿ ಶೇ 33ರಷ್ಟು ಮೀಸಲಿಗೆ ನಮ್ಮ ಸರ್ಕಾರ ಬದ್ಧವಾಗಿದೆ’ಎಂದೂ ಹೇಳಿದ್ದರು.

ರಾಷ್ಟ್ರಪತಿಯವರ ಈ ಭಾಷಣದ ನಂತರ ಈ ದಿಸೆಯಲ್ಲಿ ಸರ್ಕಾರ ಏನೂ ಮಾಡಿಲ್ಲ. ಪ್ರತಿ ಬಾರಿ ಸಂಸತ್ ಅಧಿವೇಶನ ಆರಂಭವಾಗುವ ಮೊದಲು ಇತರ ಅನೇಕ ಮಸೂದೆಗಳ ಬಗ್ಗೆ ಹೇಳಿಕೆಗಳು, ಮುಚ್ಚಿದ ಬಾಗಿಲುಗಳ ಹಿಂದೆ ಸಭೆಗಳು ಹಾಗೂ ಸಂಧಾನ ಮಾತುಕತೆಗಳು ಇದ್ದೇ ಇರುತ್ತವೆ. ಆದರೆ ಈ ಚರ್ಚೆಯಲ್ಲಿ ಮಹಿಳಾ ಮೀಸಲು ಮಸೂದೆ ಬರುವುದೇ ಇಲ್ಲ ಎಂಬುದು ವಿಷಾದನೀಯ. ಆದರೆ, ‘ರಾಜ್ಯಸಭೆಯಲ್ಲಿ ಎನ್‌ಡಿಎಗೆ ಬಹುಮತ ಸಿಗುವವರೆಗೆ ಮಹಿಳಾ ಮೀಸಲು ಮಸೂದೆ ಕಾಯಬೇಕಾಗುತ್ತದೆ’ ಎಂದು ಕೆಲವು ತಿಂಗಳುಗಳ ಹಿಂದೆ ಹಿರಿಯ ನಾಯಕ ವೆಂಕಯ್ಯನಾಯ್ಡು ಅವರು ಹೇಳಿದ ಮಾತು ವಿವಾದವನ್ನು ಸೃಷ್ಟಿಸಿತ್ತು.

ಸರ್ಕಾರ ಮತ್ತು ಪ್ರತಿಪಕ್ಷಗಳ ಮಧ್ಯೆ ಒಮ್ಮತ ಇದ್ದರೆ ಮಹಿಳಾ ಮೀಸಲು ಮಸೂದೆ ಅನುಷ್ಠಾನ ಏಕೆ ಕಷ್ಟವಾಗುತ್ತದೆ? ಜಿಎಸ್‌ಟಿ ಮಸೂದೆಗೆ ಎಲ್ಲಾ ವಿರೋಧಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡ ಹಾಗೆ ಮಹಿಳಾ ಮೀಸಲು ಮಸೂದೆ ವಿಚಾರಕ್ಕೂ ಏಕೆ ಗಮನ ನೀಡಲಾಗುವುದಿಲ್ಲ? ಕಾಂಗ್ರೆಸ್, ಎಡಪಕ್ಷ, ಡಿಎಂಕೆ, ಎಐಎಡಿಎಂಕೆ ಹಾಗೂ ತೆಲುಗುದೇಶಂ ಪಕ್ಷಗಳು ಮಸೂದೆಗೆ ಬೆಂಬಲ ನೀಡುವುದಂತೂ ಖಚಿತವಿದೆ. ಈ ಸಾಂವಿಧಾನಿಕ ತಿದ್ದುಪಡಿಗೆ ಉಭಯ ಸದನಗಳಲ್ಲೂ ಬಹುಮತಕ್ಕೆ ಕೊರತೆ ಇಲ್ಲ ಎಂಬುದೂ ನಿಚ್ಚಳ.

ಬಹುಶಃ ರಾಷ್ಟ್ರದ ಸಂಸದೀಯ ಚರಿತ್ರೆಯಲ್ಲಿ ಸಂಸತ್‌ನಲ್ಲಿ ಬಹುಮತವಿದ್ದರೂ ಕಾಯಿದೆಯಾಗಿಲ್ಲದಿರುವುದು ಎಂದರೆ ಮಹಿಳಾ ಮೀಸಲು ಮಸೂದೆ ಮಾತ್ರ ಎನ್ನಬಹುದು. ಆದರೆ ರಾಜಕೀಯ ಒಮ್ಮತ ಇದ್ದರೆ ಮಾತ್ರ ಮಸೂದೆ ಜಾರಿಗೊಳಿಸಬೇಕು ಎಂದು ಸಂವಿಧಾನದಲ್ಲಿ ಬರೆದಿಲ್ಲ ಅಥವಾ ಕಾನೂನೂ ಹೇಳುವುದಿಲ್ಲ. ಸಂಸತ್‌ನಲ್ಲಿ ತೀವ್ರ ವಿರೋಧದ ನಡುವೆಯೂ ಅನೇಕ ಕಾಯಿದೆಗಳು ರಚನೆಯಾಗಿರುವುದು ಗೊತ್ತೇ ಇರುವ ಸಂಗತಿ. ಈ ಬಗ್ಗೆ ರಾಜಕೀಯ ಪಕ್ಷಗಳು ಕೊಡುತ್ತಿರುವ ನೆಪಗಳು ರಾಜಕೀಯ ಇಚ್ಛಾಶಕ್ತಿಯ ಕೊರತೆಗೆ ದ್ಯೋತಕ. ಮಹಿಳೆಯರ ರಾಜಕೀಯ ಸಬಲೀಕರಣಕ್ಕೆ ಅಡ್ಡಿಯಾಗಿರುವುದು ಪಿತೃಪ್ರಧಾನ ರಾಜಕೀಯ ಮೌಲ್ಯ ವ್ಯವಸ್ಥೆ ಎಂದಷ್ಟೇ ಇಲ್ಲಿ ಹೇಳಬೇಕಾಗುತ್ತದೆ.

2010ರಲ್ಲಿ ರಾಜ್ಯಸಭೆಯಲ್ಲಿ ಮಹಿಳಾ ಮೀಸಲು ಮಸೂದೆ ಅಂಗೀಕಾರವಾದಾಗ ಇನ್ನೇನು ಈ ಮಸೂದೆ ಕಾಯಿದೆ ಆಗುವ ದಿನಗಳು ದೂರವಿಲ್ಲ ಎಂಬ ಭರವಸೆಯನ್ನು ಕಟ್ಟಿಕೊಟ್ಟಿತ್ತು. ಆದರೆ ಲೋಕಸಭೆಯಲ್ಲಿ ಮಂಡನೆಗೆ ಕಾದಿದ್ದ ಈ ಮಸೂದೆ 2014ರ ಆರಂಭದಲ್ಲಿ 15ನೇ ಲೋಕಸಭೆ ವಿಸರ್ಜನೆಯೊಂದಿಗೆ ಅಸ್ತಿತ್ವ ಕಳೆದುಕೊಂಡಿತು.
ಸಂಸತ್ ಹಾಗೂ ರಾಜ್ಯ ವಿಧಾನಸಭೆಗಳಲ್ಲಿ ಮಹಿಳಾ ಪ್ರಾತಿನಿಧ್ಯ 140 ರಾಷ್ಟ್ರಗಳ ಜಾಗತಿಕ ಪಟ್ಟಿಯಲ್ಲಿ ಭಾರತದ ಸ್ಥಾನ 103ರಲ್ಲಿದೆ. ಸಂಸತ್ ನಲ್ಲಿ ಮಹಿಳೆಯರ ಪ್ರಾತಿನಿಧ್ಯದ ಜಾಗತಿಕ ಸರಾಸರಿ ಶೇ 22.4. ಆದರೆ ಭಾರತದಲ್ಲಿರುವ ಸಂಸದರ ಪ್ರಮಾಣ ಶೇ 12. ಏಷ್ಯಾದ 18 ರಾಷ್ಟ್ರಗಳಲ್ಲಿ ಭಾರತದ ಸ್ಥಾನ 13ನೆಯದಾಗಿದೆ.

ವಿಶ್ವದ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ದ ಸಂಸತ್ ಹಾಗೂ ಶಾಸನಸಭೆಗಳಲ್ಲಿ ಭಾರತೀಯ ಮಹಿಳೆಯರಿಗೆ ಸಿಗಬೇಕಾದ ಅವಕಾಶ ಸಿಕ್ಕಿಲ್ಲ. ಪಿತೃಪ್ರಧಾನ ಮನಸ್ಥಿತಿ ಇದಕ್ಕೆ ಕಾರಣ. ‘ಮಹಿಳಾ ಮೀಸಲು ಮಸೂದೆಯಿಂದ ಲಾಭವಾಗುವುದು ಮೇಲ್ವರ್ಗದ ಮಹಿಳೆಯರಿಗೆ. ತುಂಡುಗೂದಲಿನ ಮಹಿಳೆಯರು , ನಮ್ಮ ಮಹಿಳೆಯರ ಬಗ್ಗೆ ಮಾತನಾಡಬಲ್ಲರೆ’ ಎಂದು ಜೆಡಿಯುನ ಶರದ್ ಯಾದವ್ ವ್ಯಂಗ್ಯವಾಡಿದ್ದರು. ಪುರುಷ ರಾಜಕಾರಣಿಗಳು ಎಷ್ಟೇ ಕೆಟ್ಟದಾಗಿ ಮಾತನಾಡಿದರೂ ಮಹಿಳಾ ಮೀಸಲಾತಿಯಿಂದ ಸಮಾಜಕ್ಕೆ ಅನುಕೂಲವಾಗಿರುವುದನ್ನು ಕಡೆಗಣಿಸಲಾಗದು.

1992ರಲ್ಲಿ ಸಂವಿಧಾನದ 73 ಹಾಗೂ 74ನೇ ತಿದ್ದುಪಡಿಗಳ ಮೂಲಕ ಪಂಚಾಯಿತಿ ಹಾಗೂ ನಗರ ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳಾ ಮೀಸಲಾತಿಗೆ ಅವಕಾಶ ಲಭ್ಯವಾಯಿತು. ‘ಇಂಡಿಯಾ ಸ್ಪೆಂಡ್’ ವರದಿಯ ಪ್ರಕಾರ, ಮಹಿಳಾ ಪಂಚಾಯಿತಿ ನಾಯಕಿಯರಿಂದ ಭಿನ್ನ ಪರಿಣಾಮಗಳು ಸಾಧ್ಯವಾಗಿವೆ. ಉದಾಹರಣೆಗೆ ತಮಿಳುನಾಡಿನಲ್ಲಿ ರಸ್ತೆ ನಿರ್ಮಾಣಕ್ಕೆ ಶೇ 48ರಷ್ಟು ಹೆಚ್ಚು ಹಣವನ್ನು ಪುರುಷ ನಾಯಕರಿಗಿಂತ ಮಹಿಳಾ ನಾಯಕಿಯರು ವಿನಿಯೋಗಿಸಿದ್ದಾರೆ. ಹರಿಯಾಣದಲ್ಲಿ ಬಡವರಿಗೆ ಮನೆಗಳನ್ನು ಕಟ್ಟಿಕೊಟ್ಟಿರುವು ದಲ್ಲದೆ ಹೆಣ್ಣುಭ್ರೂಣ ಹತ್ಯೆ ವಿರುದ್ಧ ಪ್ರಚಾರಾಂದೋಲನ ನಡೆಸಿದ್ದಾರೆ.

ಉತ್ತರ ಪ್ರದೇಶ ಮುಖ್ಯಮಂತ್ರಿಯಾಗಿರುವ ಯೋಗಿ ಆದಿತ್ಯನಾಥ ಅವರು ಮಹಿಳಾ ಮೀಸಲು ಮಸೂದೆಯ ತೀವ್ರ ವಿರೋಧಿ. ‘ಅನೇಕ ಕ್ಷೇತ್ರಗಳಲ್ಲಿ ಈಗಾಗಲೇ ಮಹಿಳೆಯರಿಗೆ ಮೀಸಲು ಇದೆ. ಗ್ರಾಮಸಭೆ, ಪಂಚಾಯಿತಿ ಹಾಗೂ ಸ್ಥಳೀಯ ಸಂಸ್ಥೆಗಳಲ್ಲಿ ಇದರ ಪರಿಣಾಮ ವಿಶ್ಲೇಷಿಸಿ ಅಧ್ಯಯನ ಮಾಡಬೇಕು. ಪುರುಷರಂತೆ ಸಕ್ರಿಯ ರಾಜಕಾರಣ ಹಾಗೂ ಸಾರ್ವಜನಿಕ ಬದುಕಿನಲ್ಲಿರುವ ಮಹಿಳೆಯರು ಈ ಪ್ರಕ್ರಿಯೆಯಲ್ಲಿ ತಾಯಿ, ಮಗಳು ಹಾಗೂ ಸೋದರಿಯರಾಗಿ ತಮ್ಮ ಪ್ರಾಮುಖ್ಯ ಕಳೆದುಕೊಳ್ಳುವುದಿಲ್ಲವೇ ಎಂಬುದನ್ನು ನಿರ್ಧರಿಸಬೇಕು’ ಎಂದು ಯೋಗಿ ಆದಿತ್ಯನಾಥ ಹೇಳಿರುವುದು ವಿವಾದಾಸ್ಪದವಾದ ವಿಚಾರ.

ಪ್ರಜಾಪ್ರಭುತ್ವ ಎಂಬುದು ಮಾನವ ನಾಗರಿಕತೆಯಲ್ಲಿ ಬಹು ಜನರಿಗೆ ಪ್ರಾತಿನಿಧ್ಯ ನೀಡುವ ಅತ್ಯುತ್ತಮ ವ್ಯವಸ್ಥೆ. ಆದರೆ ಅರ್ಧದಷ್ಟು ಜನಸಂಖ್ಯೆ ಇರುವ ಮಹಿಳೆಯರ ಪ್ರಾತಿನಿಧ್ಯ ಕೇವಲ ಶೇ 12 ರಷ್ಟು ಮಾತ್ರವೇ ಇದ್ದರೆ ಆ ಪ್ರಜಾಪ್ರಭುತ್ವಕ್ಕೆ ಅರ್ಥ ಬರುವುದು ಹೇಗೆ? ಸಮಾಜದ ಎಲ್ಲಾ ವರ್ಗಗಳ ರಾಜಕೀಯ ಪಾಲ್ಗೊಳ್ಳುವಿಕೆ ಪ್ರಜಾಪ್ರಭುತ್ವದ ಅಗತ್ಯ.

ಮಹಿಳಾ ಮೀಸಲು ಮಸೂದೆಗೆ ಬದ್ಧವಾಗಿರುವುದಾಗಿ ಭರವಸೆ ನೀಡಿದ್ದ ಬಿಜೆಪಿ ಆ ಭರವಸೆಯನ್ನು ಈಗ ಕಾರ್ಯರೂಪಕ್ಕಿಳಿಸಬೇಕಿದೆ. ‘ಬೇಟಿ ಬಚಾವೊ ಬೇಟಿ ಪಢಾವೊ’ ಘೋಷಣೆಗಷ್ಟೇ ಸರ್ಕಾರ ಸೀಮಿತವಾಗಬಾರದು. ರಾಜಕೀಯ ಹಕ್ಕುಗಳನ್ನು ಎತ್ತಿ ಹಿಡಿಯುವುದೂ ಸರ್ಕಾರದ ಆದ್ಯಕರ್ತವ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT