ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ಹೋರಾಟದ ದಿಟ್ಟ ಹೆಜ್ಜೆಗಳು

Last Updated 30 ಮಾರ್ಚ್ 2011, 19:00 IST
ಅಕ್ಷರ ಗಾತ್ರ


ಮಹಿಳಾ ದಿನಾಚರಣೆಯ ಅಂಗವಾಗಿ ಅಂದು ನೀಲಮ್ಮನಿಗೆ ಸನ್ಮಾನ ಸಮಾರಂಭ ನಡೆದಿತ್ತು. ಸ್ಮಶಾನ ಎಂದರೆ ಗಂಡಸರೂ ಹೆದರಿ ಓಡುತ್ತಾರೆ. ಆದರೆ ನೀಲಮ್ಮ ತನ್ನ ಗಂಡ ಕಾಲವಾದ ನಂತರವೂ ಮಕ್ಕಳೊಡನೆ ಸ್ಮಶಾನದಲ್ಲಿಯೇ ವಾಸಮಾಡಿಕೊಂಡು ಗಂಡನ ಕಾಯಕವಾಗಿದ್ದ ಶವ ಸಂಸ್ಕಾರವನ್ನು ನಿರ್ಭಯವಾಗಿ ಮುಂದುವರಿಸಿಕೊಂಡು ಬಂದಿದ್ದಾಳೆ.

ಶವ ಹೂಳಲು ಗುಂಡಿ ತೆಗೆದು ಶವ ಸಂಸ್ಕಾರ ಮಾಡುತ್ತಾಳೆ. ಅಷ್ಟೇ ಅಲ್ಲ, ಇದೊಂದು ಪವಿತ್ರ ಕಾಯಕ ಎಂದು ಭಾವಿಸಿ, ಬದುಕಿನ ಅರ್ಥವನ್ನು ಅಳೆಯಬಲ್ಲ ಏಕಮಾತ್ರ ಗಜಕಡ್ಡಿ ‘ಸಾವು’ ಎಂಬ ಅಳತೆಗೋಲಿನಿಂದ ಬದುಕನ್ನು ಮುಖಾಮುಖಿಯಾಗಿ ಎದುರಿಸಿ ನಿಂತು ದುಡಿಯುತ್ತಿದ್ದಾಳೆ.

ಸಾವು ಖಚಿತ ಎಂದು ಅರಿತ ಮೇಲೆ ಆವರಿಸುವ ಶಾಂತಿ ಆಕೆಯ ಮುಖದಲ್ಲಿ ನೆಲೆಸಿರುವುದು ಸ್ಪಷ್ಟವಾಗಿ ಕಾಣುತ್ತಿತ್ತು. ಬಹಳ ಸಂತೋಷದಿಂದಲೇ ಸನ್ಮಾನ ಸ್ವೀಕರಿಸಿದ ನೀಲಮ್ಮನನ್ನು ಮಾತನಾಡಲು ಒತ್ತಾಯಿಸಿದೆವು. ಆಕೆ ಒಪ್ಪಲಿಲ್ಲ. ‘ಮಾತನಾಡಲು ಏನು ತಾನೇ ಇದೆ’ ಎನ್ನುತ್ತ ಎಲ್ಲರಿಗೂ ಕೈ ಜೋಡಿಸಿ ನಮಸ್ಕರಿಸಿದಳು. 

 ಕಾರ್ಯಕ್ರಮದ ನಂತರ ಗಂಡು ಮಕ್ಕಳ ಕಲೆ ‘ಕಂಸಾಳೆ’ ಜನಪದ ನೃತ್ಯವನ್ನು ಹೆಣ್ಣು ಮಕ್ಕಳು ಮಾಡಿ ತೋರಿಸಿದರು. ಈ ಗಂಡು ಕಲೆಯನ್ನು ಹೆಣ್ಣು ಮಕ್ಕಳು ಯಾರಿಗೂ ಕಡಿಮೆ ಇಲ್ಲದಂತೆ ಪ್ರದರ್ಶಿಸಿದರು. ಜೊತೆಗೆ ಅದರ ವೈವಿಧ್ಯಮಯ ಅಪಾಯಕಾರಿ ಸರ್ಕಸ್‌ಗಳನ್ನು ಮಾಡಿದರು.

ಸಮಾರಂಭದಲ್ಲಿ ಮಾತನಾಡಿದ ಮಹಿಳಾ ಅತಿಥಿ ಹೇಳಿದರು ‘ನಮ್ಮ ಹೋರಾಟ ಗಂಡಸರ ವಿರುದ್ಧ ಎಂದು ಯಾರೂ ಭಾವಿಸಬೇಕಾಗಿಲ್ಲ. ನಾವು ನಮ್ಮ ಹಕ್ಕುಗಳಿಗಾಗಿ ಹೋರಾಡುತ್ತಿದ್ದೇವೆ’.

ಈ ಮಾತುಗಳಲ್ಲಿ ಎಲ್ಲ ಹೋರಾಟಗಳಲ್ಲೂ ಸಾಮಾನ್ಯವಾಗಿ ಅಂತರ್ಗತವಾಗಿರುವ ಸ್ಪರ್ಧೆಯ ದನಿ ಇರಲಿಲ್ಲ. ಶತಮಾನದ ಮಹಿಳಾ ಹೋರಾಟ ಒಂದು ಪಕ್ವ ನೆಲೆಯನ್ನು ಕಂಡುಕೊಳ್ಳುವತ್ತ ಹೆಜ್ಜೆ ಇಡುತ್ತಿದೆ ಎಂಬುದನ್ನು ಈ ಮಾತುಗಳು ಸ್ಪಷ್ಟವಾಗಿ ಸೂಚಿಸುತ್ತಿತ್ತು.

ಜೊತೆಗೆ ಚಾರಿತ್ರಿಕವಾದ ಮಹಿಳಾ ವಿರೋಧಿ ಪುರುಷ ಧೋರಣೆಗಳಿಗೆ, ಸಾಮಾಜಿಕ ಅನ್ಯಾಯಗಳಿಗೆ ಪ್ರತಿಯಾಗಿ ಹೊಮ್ಮುವ ಸೇಡಿನ ದನಿ ಮಹಿಳಾ ವಿಮೋಚನೆಗೆ ಸಹಾಯವಾಗಲಾರದು ಎಂಬ ಅರಿವು ಈ ಮಾತಿನಲ್ಲಿತ್ತು. ಇದಕ್ಕೆ ಕಾರಣವೂ ಇಲ್ಲದೆ ಇಲ್ಲ. ನಮ್ಮ ಸಮಾಜವೂ ಇಂದು ತನ್ನ ಹಳೆಯ ಸ್ತ್ರೀ ವಿರೋಧಿ ಧೋರಣೆಗಳಿಂದ ಸ್ವಲ್ಪವಾದರೂ ಹೊರಬಂದು ಹೊಸ ದೃಷ್ಟಿಯನ್ನು ಬೆಳೆಸಿಕೊಳ್ಳುವ ಪ್ರಯತ್ನ ಮಾಡುತ್ತಿದೆ.
ಬದಲಾದ ಈ ದೃಷ್ಟಿಕೋನಕ್ಕೆ ಪುರುಷರ ಔದಾರ್ಯವಷ್ಟೇ ಕಾರಣವಲ್ಲ. ಚಾರಿತ್ರಿಕವಾಗಿ ನಮ್ಮ ಭಾರತೀಯ ಸಮಾಜದ ದುರೀಣರು ತೆಗೆದುಕೊಂಡ
ತಾತ್ವಿಕ ನಿಲುವುಗಳೂ ಬಹುಶಃ ಇದಕ್ಕೆ ಕಾರಣ. ಜೊತೆಗೆ ಈ ನಿಲುವುಗಳು ಕ್ರಮೇಣ ಕಾನೂನುಗಳಾಗಿ ಮಾರ್ಪಟ್ಟು ಜನಸಾಮಾನ್ಯರು ತಮ್ಮ ಸ್ತ್ರೀ ವಿರೋಧಿ ಧೋರಣೆಗಳನ್ನು ಬದಲಿಸಿಕೊಳ್ಳಲೇಬೇಕಾದ ಅನಿವಾರ್ಯತೆ ಮೂಡಿದೆ.

ಯುರೋಪ್ ಮತ್ತು ಅಮೆರಿಕಾದ ಸ್ತ್ರೀವಾದಿ ಚಳವಳಿಗಳನ್ನು ಗಮನಿಸಿದರೆ ಅದು ಮಹಿಳಾ ನಾಯಕತ್ವದಲ್ಲಿ ಪ್ರಾರಂಭವಾಗಿ ಅಪಾರ ಸಂಖ್ಯೆಯ ಸಾಮಾನ್ಯ ಸ್ತ್ರೀಯರ ಸಹಭಾಗಿತ್ವದಲ್ಲಿ ನಡೆದದ್ದು ಕಂಡು ಬರುತ್ತದೆ. ಈ ಸಂದರ್ಭದಲ್ಲಿ ಕ್ಲಾರಾ ೆಟ್‌ಕಿನ್ ಎಂಬ ಧೀಮಂತ ಮಹಿಳೆಯನ್ನು ಸ್ಮರಿಸಬೇಕು. 1857ರಲ್ಲಿ ಜನಿಸಿದ ಈಕೆ ಜರ್ಮನಿಯ ಸಮಾಜವಾದಿ ಪಕ್ಷದ ಪ್ರಭಾವಿ ರಾಜಕಾರಣಿಯಾಗಿದ್ದಳು.

ಮಹಿಳೆಯರಿಗೆ ಸಿಗಬೇಕಾದ ಸಮಾನ ಅವಕಾಶಗಳು ಹಾಗೂ ಮಹಿಳೆಯರ ಮತದಾನದ ಹಕ್ಕುಗಳ ಕುರಿತು ಈಕೆ ಚಳವಳಿ ಕೈಗೊಂಡಳು. ಈ ಧೈರ್ಯಶಾಲಿ ಮಹಿಳೆ ಅಂದಿನ ಸರ್ವಾಧಿಕಾರಿ ಹಿಟ್ಲರ್‌ನ ವಿರುದ್ಧವೇ ದೊಡ್ಡ ಭಾಷಣ ಮಾಡಿದ್ದಳು. ಕ್ಲಾರಾ ೆಟ್ ಕಿನ್ ಅವರ ಹೋರಾಟ ಅಂತರರಾಷ್ಟ್ರೀಯ ಮಹಿಳಾ ಹಕ್ಕುಗಳ ಹೋರಾಟವಾಗಿ ಪರಿಣಮಿಸಿತು.

ಯುರೋಪ್-ಅಮೆರಿಕಾದ ಮಹಿಳಾ ಹಕ್ಕು ಹೋರಾಟದ ಚರಿತ್ರೆಗೂ ಭಾರತದ ಮಹಿಳಾ ವಿಮೋಚನೆಯ ಹೋರಾಟಕ್ಕೂ ಮೂಲಭೂತವಾದ ವ್ಯತ್ಯಾಸವಿದೆ. ಚಾರಿತ್ರಿಕವಾಗಿ ಭಾರತದ ಮಹಿಳಾ ಪರ ಹೋರಾಟ, ಯುರೋಪ್‌ನಲ್ಲಿ ಪ್ರಾರಂಭವಾಗುವ ಸುಮಾರು 75 ವರ್ಷಗಳ ಮೊದಲೇ ಪ್ರಾರಂಭವಾಗಿತ್ತು.

ನಮ್ಮ ದೇಶದ ತುಳಿತಕ್ಕೆ ಒಳಗಾದ ಎಲ್ಲರೂ ‘ನಾವು ಅನ್ಯಾಯಕ್ಕೆ ಒಳಗಾಗಿದ್ದೇವೆ’ ಎಂಬ ಅರಿವೂ ಇಲ್ಲದೆ ಮೌನವಾಗಿ ಪರಿಸ್ಥಿತಿಯನ್ನು ನಿಸ್ಸಹಾಯಕವಾಗಿ ಒಪ್ಪಿಕೊಂಡು ಬದುಕಿ ಬರುವ ಪರಿಪಾಠವನ್ನು ಮೈಗೂಡಿಸಿಕೊಂಡಿದ್ದಾರೆ. ಹಾಗಾಗಿ ಈ ಸಮಸ್ಯೆಯಿಂದ ಹೊರ ನಿಂತ ಪುರುಷರೇ ಮಹಿಳಾ ಪರ ಹೋರಾಟವನ್ನು ಪ್ರಾರಂಭಿಸಿದರು.

ಅನ್ಯಾಯಕ್ಕೆ ಒಳಗಾದವರ ನಿಷ್ಕ್ರಿಯತೆ ನಮ್ಮ ದೇಶದ ತುಳಿತಕ್ಕೆ ಒಳಗಾದ ಪ್ರತಿಯೊಂದು ಗುಂಪಿಗೂ ಅನ್ವಯಿಸುವ ಸತ್ಯ. ಇದಕ್ಕೆ ಇರಬಹುದಾದ ಪ್ರಮುಖ ಕಾರಣ ಎಂದರೆ ನಮ್ಮ ಶೋಷಣೆಯ ಸಂಸ್ಕೃತಿಗೆ ಧರ್ಮ ಮತ್ತು ರಾಜಾಶ್ರಯಗಳ ಶ್ರೀರಕ್ಷೆ ದೊರೆತಿರುವುದು. ಹಾಗಾಗಿ ತುಳಿತಕ್ಕೆ ಒಳಗಾದ ಎಲ್ಲ ಸಂದರ್ಭಗಳಲ್ಲೂ ಈ ವಿಷವರ್ತುಲದಿಂದ ಹೊರಗೆ ನಿಂತ ಕೆಲವು ಪ್ರಜ್ಞಾವಂತರು ಮಾತ್ರ ಇವರ ನೆರವಿಗೆ ಬರಲು ಸಾಧ್ಯವಾಗುತ್ತದೆ.

ಹೀಗೆ ಸ್ತ್ರೀಯರ ನೆರವಿಗೆ ಬಂದ ರಾಜಾರಾಮ ಮೋಹನ ರಾಯ್ ಅವರನ್ನು ಅಧುನಿಕ ಭಾರತದ ಪಿತಾಮಹ, ಮಹಿಳಾ ಹಕ್ಕುಗಳ ನೇತಾರ ಎಂದೆಲ್ಲ ಬಣ್ಣಿಸಲಾಗುತ್ತದೆ.  ಆದರೆ ರಾಮ ಮೋಹನರಾಯ್ ವೈಯಕ್ತಿಕ ಜೀವನದಲ್ಲಿ ಸ್ತ್ರೀಯರನ್ನು ಚೆನ್ನಾಗಿ ನಡೆಸಿಕೊಂಡಿಲ್ಲ ಎಂಬ ಆಪಾದನೆ ಇದೆ. ಹೆತ್ತ ತಾಯಿಯ ವಿರುದ್ಧವೇ ಆಸ್ತಿಗಾಗಿ ಮೊಕದ್ದಮೆ ನಡೆಸಿದ ಎಂಬ ಆಪಾದನೆಯೂ ಇದೆ.

ರಾಜಾರಾಮ ಮೋಹನರಾಯ್‌ನ ನಂತರ ಬಂದ ಈಶ್ವರಚಂದ್ರ ವಿದ್ಯಾಸಾಗರ, ಕೇಶವ ಚಂದ್ರಸೇನ, ದಯಾನಂದ ಸರಸ್ವತಿ, ಗೋವಿಂದ ಮಾಧವ ರಾನಡೆ ಮುಂತಾದವರು ಶಿಕ್ಷಣದ ಮುಖಾಂತರ ಮಹಿಳಾ ವಿಮೋಚನೆಯನ್ನು ಪ್ರಬಲವಾಗಿ ಮಂಡಿಸಿದರು. ಈಶ್ವರಚಂದ್ರರು ವಿಧವೆಯರ ಶೋಚನೀಯ ಸ್ಥಿತಿಗೆ ಮರುಗಿ ವಿಧವಾ ವಿವಾಹವನ್ನು ಎತ್ತಿ ಹಿಡಿದರು.

ಆದರೆ ಅಂದಿನ ಕಾನೂನು ವಿಧವಾ ವಿವಾಹವನ್ನು ಒಪ್ಪುತ್ತಿರಲಿಲ್ಲ. ವಿಧವಾ ವಿವಾಹದ ಪರವಾಗಿ ಸಾವಿರಾರು ಸಹಿಗಳನ್ನು ಸಂಗ್ರಹಿಸಿ ಈಶ್ವರಚಂದ್ರರು ಬ್ರಿಟಿಷ್ ಸರ್ಕಾರಕ್ಕೆ ಕಾಯಿದೆ ಮಾಡಬೇಕೆಂದು ಮನವಿ ಸಲ್ಲಿಸಿದರು. ಆಶ್ಚರ್ಯವೆಂದರೆ ವಿಧವಾ ವಿವಾಹವನ್ನು ವಿರೋಧಿಸಿ ಇದಕ್ಕಿಂತ ಹೆಚ್ಚಿನ ಜನ ಸಹಿ ಮಾಡಿ ಸರ್ಕಾರಕ್ಕೆ ತಮ್ಮ ವಿರೋಧವನ್ನು ವ್ಯಕ್ತಪಡಿಸಿದರು.

ಬಹುಸಂಖ್ಯಾತರ ಈ ಅಹವಾಲನ್ನು ಮನ್ನಿಸದ ಅಂದಿನ ಬ್ರಿಟಿಷ್ ಸರ್ಕಾರ ಮಾನವೀಯ ಕಾರಣಗಳಿಗಾಗಿ 1856ರಲ್ಲಿ ‘ವಿಧವೆಯರ ಪುನರ್ವಿವಾಹ ಕಾಯಿದೆ’ಯನ್ನು ಜಾರಿಗೊಳಿಸಿತು.

ಹೆಣ್ಣು ಮಕ್ಕಳ ಶಿಕ್ಷಣವನ್ನು ಒತ್ತಿ ಹೇಳಿದ ಸ್ವಾಮಿ ವಿವೇಕಾನಂದರು ವಿಧವಾ ವಿವಾಹವನ್ನು ಅಷ್ಟೊಂದು ಗಂಭೀರವಾಗಿ ಪರಿಗಣಿಸಲಿಲ್ಲ. ಒಂದು ದೇಶದ ಪ್ರಗತಿ ಆ ದೇಶದ ಎಷ್ಟು ಜನ ವಿಧವೆಯರು ಮರುಮದುವೆಯಾದರು ಎಂಬುದನ್ನು ಅವಲಂಬಿಸಿಲ್ಲ ಎಂದುಬಿಟ್ಟರು.

ವಿರಸಲಿಂಗಂ ಎಂಬ ಗೋದಾವರಿ ಪ್ರದೇಶದ ತೆಲುಗು ಸುಧಾರಕ ಈಶ್ವರಚಂದ್ರರ ಸಮಕಾಲೀನ. ಇವರೂ ಸಹ ವಿಧವಾ ವಿವಾಹ ಮತ್ತು ಹೆಣ್ಣು ಮಕ್ಕಳ ಶಿಕ್ಷಣವನ್ನು ಚಳವಳಿಗಳ ಮೂಲಕ ಒತ್ತಾಯಿಸಿದರು. ಆಶ್ಚರ್ಯವೆಂದರೆ ವಿಧವಾ ವಿವಾಹ ಕಾಯಿದೆಯನ್ನು 1856ರಲ್ಲಿ ಅಂಗೀಕರಿಸಿದರೂ ಬಹುಪತ್ನಿತ್ವವನ್ನು ನಿಷೇಧಿಸುವ ಕಾಯಿದೆ 1955ರ ವರೆಗೆ ಜಾರಿಗೆ ಬರಲಿಲ್ಲ.

ಇಸ್ಲಾಂ ಧರ್ಮೀಯರು ಇಂದಿಗೂ ಬಹುಪತ್ನಿತ್ವ ಪದ್ಧತಿಯನ್ನು ಉಳಿಸಿಕೊಂಡಿರುವುದು ನಿಜವಾದರೂ ಕಾಯಿದೆಗೆ ಪೂರ್ವದಲ್ಲಿ ಹಿಂದೂಗಳು ಮತ್ತು ಬೌದ್ಧರು ಈ ಬಹುಪತ್ನಿತ್ವದಲ್ಲಿ ಎಂದೂ ಹಿಂದೆ ಬಿದ್ದಿರಲಿಲ್ಲ ಎಂಬುದನ್ನು ಗಮನಿಸಬೇಕು. ಅಷ್ಟೇ ಏಕೆ ಕೆಲವು ಅಂಕಿಅಂಶಗಳ ಪ್ರಕಾರ ಒಂದು ಹೆಜ್ಜೆ ಮುಂದೆಯೇ ಇದ್ದರು.

19ನೇ ಶತಮಾನದ ಮಹಿಳಾಪರವಾದ ಈ ಗಂಡು ದನಿಗಳ ನಡುವೆ ಅಲ್ಲೊಂದು ಇಲ್ಲೊಂದು ಹೆಣ್ಣು ದನಿಗಳು ಕೇಳಿ ಬರುತ್ತಿದ್ದವು. 1876ರಲ್ಲಿ ರಾಸ್ಸುಂದರಿದೇವಿ ಎಂಬ ಬಂಗಾಲಿ ಮಹಿಳೆ ಕದ್ದುಮುಚ್ಚಿ ಓದು ಬರಹ ಕಲಿತು ಅಮರ್ ಜೀವನ್ ಅಥವಾ ‘ನನ್ನ ಜೀವನ’ ಎಂಬ ತನ್ನ ಜೀವನ ವೃತ್ತಾಂತವನ್ನು ಬರೆದಳು.  ವಿಜಯಲಕ್ಷ್ಮಿ ಎಂಬ ಬ್ರಾಹ್ಮಣ ವಿಧವೆ ಬಲಾತ್ಕಾರಕ್ಕೆ ಒಳಗಾಗಿ ಮಗುವನ್ನು ಹೆತ್ತು ಆ ಮಗುವನ್ನು ದಾರಿ ಕಾಣದೆ ಕೊಂದುಬಿಟ್ಟಳು. ಇದರಿಂದಾಗಿ ಆಕೆಗೆ ಕೋರ್ಟ್ ಮರಣದಂಡನೆ ವಿಧಿಸಿತು.

ನಂತರ ಮರಣದಂಡನೆಗೆ ತೀವ್ರ ಪ್ರತಿಭಟನೆ ಬಂದಿದ್ದರಿಂದ ಜೀವಾವಧಿ ಶಿಕ್ಷೆ ವಿಧಿಸಲಾಯಿತು. ಆದರೆ ಕೊನೆಗೆ ಮರುಕಗೊಂಡ ನ್ಯಾಯಾಧೀಶರು ಆಕೆಯ ಶಿಕ್ಷಾ ಅವಧಿಯನ್ನು 5 ವರ್ಷಗಳಿಗೆ ಇಳಿಸಿದರು. ಈ ಸಂಬಂಧವಾಗಿ 1881ರ ಸುಮಾರಿನಲ್ಲಿ ತಾರಾಬಾಯಿ ಶಿಂಧೆ ಎಂಬ ಮರಾಠಿ ಮಹಿಳೆ, ವಿಧವೆಯೊಬ್ಬಳಿಗೆ ಆದ ಅನ್ಯಾಯ ಕುರಿತು ‘ಸ್ತ್ರೀ ಪುರುಷ ತುಲನ’ ಎಂಬ ಅಭಿಪ್ರಾಯವನ್ನು ಪ್ರಕಟಿಸಿದಳು. ಹೀಗೆ ಅಪರೂಪವಾಗಿ ಕೆಲವು ಸ್ತ್ರೀಯರಾದರೂ ಸ್ತ್ರೀಪರ ದನಿಯನ್ನು ಧೈರ್ಯವಾಗಿ ಹೊರಡಿಸುತ್ತಿದ್ದರು. 

ಅನೇಕ ವಿಷಯಗಳಲ್ಲಿ ಭಾರತೀಯ ಮಹಿಳೆಯರ ಸ್ಥಿತಿಗತಿಗಳು ಯೂರೋಪಿನ ಸ್ತ್ರೀಯರಿಗಿಂತ ಶೋಚನೀಯವಾಗಿದ್ದರೂ ವಿಶ್ವವಿದ್ಯಾನಿಲಯಕ್ಕೆ ಪ್ರವೇಶ ಪಡೆಯುವಾಗ ಅಥವಾ ಮತದಾನದ ಹಕ್ಕು ಪಡೆಯುವಲ್ಲಿ ಭಾರತೀಯ ಮಹಿಳೆಯರೇ ಯೂರೋಪಿನ ಮಹಿಳೆಯರಿಗಿಂತ ಅದೃಷ್ಟಶಾಲಿಗಳು ಎಂದು ಹೇಳಬಹುದು. ಪ್ರಪಂಚದ ಅತ್ಯಂತ ಶ್ರೀಮಂತ ದೇಶ ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ಮಹಿಳೆಯರಿಗೆ 1970ರ ದಶಕದವರೆಗೆ ಮತದಾನದ ಹಕ್ಕು ಇರಲಿಲ್ಲ.  ಇಂಗ್ಲೆಂಡ್‌ನಲ್ಲೂ ಸಹ ಮಹಿಳೆಯರಿಗೆ ಮತದಾನದ ಹಕ್ಕನ್ನು ತುಂಬಾ ತಡವಾಗಿ ನೀಡಲಾಯಿತು. 

ಆಕ್ಸ್‌ಫರ್ಡ್‌ನಂತಹ, ಪ್ರಪಂಚದಲ್ಲೇ ಅತ್ಯಂತ ಹಳೆಯ ವಿಶ್ವವಿದ್ಯಾನಿಲಯ 1940 ರವರೆಗೆ ಸ್ತ್ರೀಯರಿಗೆ ಪೂರ್ಣ ಪ್ರಮಾಣದ ಪ್ರವೇಶಕ್ಕೆ ಅನುಮತಿ ನೀಡಲಿಲ್ಲ. ಆದರೆ 1877 ರಲ್ಲೇ ಕೊಲ್ಕತ್ತಾ ಮತ್ತು ಮುಂಬೈ ವಿಶ್ವವಿದ್ಯಾನಿಲಯಗಳಲ್ಲಿ ನಮ್ಮ ದೇಶದ ಕೆಲವು ಹೆಣ್ಣುಮಕ್ಕಳು ಪ್ರವೇಶ ಪಡೆದು ಪದವೀಧರರಾದರು. 1918ರಲ್ಲಿ ಕಾಂಗ್ರೆಸ್ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಿದ ಸರೋಜಿನಿ ನಾಯ್ಡು ರವರು ಮಹಿಳೆಯರಿಗೆ ಮತದಾನದ ಹಕ್ಕು ಇರಲೇಬೇಕೆಂದು ಆಗ್ರಹಿಸಿದರು.

ಇದೆಲ್ಲವೂ ಇಂದು ಚರಿತ್ರೆ ಮಾತ್ರ. ನಮ್ಮ ಗ್ರಾಮೀಣ ಮಹಿಳೆಯರ ಸ್ಥಿತಿಗತಿಗಳನ್ನು ಗಮನಿಸಿದಾಗ ನಮ್ಮ ನಿರೀಕ್ಷೆಯ ಆದರ್ಶಪ್ರಾಯವಾದ ಸ್ತ್ರೀ ವಿಮೋಚನೆ ಕನಸಾಗಿಯೇ ಉಳಿದಿದೆ. ಮಹಿಳೆಯರ ವಿರುದ್ಧ ಆಗುವ ಅನ್ಯಾಯದ ಪ್ರಕರಣಗಳೆಲ್ಲ ಮೂರು ಸರಣಿ ಘಟನೆಗಳ ಸುತ್ತ ಗಿರಕಿ ಹೊಡೆಯುವುದನ್ನು ನೋಡುತ್ತೇವೆ.

 ಮೊದಲಿಗೆ ಘರ್ಷಣೆ, ನಂತರ ನಿಧಾನವಾಗಿ ಸಂಧಾನದ ಕೆಲಸ ನಡೆಯುತ್ತದೆ. ಕೊನೆಗೆ ಆದದ್ದನ್ನೆಲ್ಲ ಮರೆತು ಮನಸ್ತಾಪ ಪರಿಹಾರದ ಹೆಸರಿನಲ್ಲಿ ಮಹಿಳೆಗೆ ಸಿಗಬೇಕಾದ ನ್ಯಾಯ ಸಿಗುವುದೇ ಇಲ್ಲ. ಬಹುಶಃ ಇದು ಎಲ್ಲಾ ಕೌಟುಂಬಿಕ ಸಲಹಾ ಕೇಂದ್ರಗಳಲ್ಲಿ ನಡೆಯುವ ಸಾಮಾನ್ಯ ಕಾರ್ಯವೈಖರಿ.

ಕೌಟುಂಬಿಕ ದೌರ್ಜನ್ಯ ತಡೆ ಕಾಯಿದೆ, ಅನೇಕ ಬಗೆಯ ಮಹಿಳಾ ಶೋಷಣೆಗಳನ್ನು ತಡೆಯುವ ಕಾಯಿದೆಗಳು ಜಾರಿಯಲ್ಲಿದ್ದರೂ ಕಾಯಿದೆಯ ಅನುಷ್ಠಾನ ಸಾಧ್ಯವಾಗುವುದು ಇದಕ್ಕೆ ಪೂರಕವಾದ ಮನೋಧರ್ಮವನ್ನು ಶ್ರೀಸಾಮಾನ್ಯರು ಅಂಗೀಕರಿಸಿ ಗೌರವಿಸಿದಾಗ ಮಾತ್ರ. ಹಾಗಾಗಿ ಇನ್ನು ಮುಂದೆ ಸ್ತ್ರೀ ಹಕ್ಕು ಹೋರಾಟ ಎನ್ನುವುದು ಶ್ರೀಸಾಮಾನ್ಯನ ಅರಿವಿನ ಮಟ್ಟವನ್ನು ಹೆಚ್ಚಿಸುವುದಲ್ಲದೆ ಬೇರೇನೂ ಆಗಲಾರದು. 

ಈ ಕೆಲಸದಲ್ಲಿ ಅಸಂಖ್ಯಾತ ಪ್ರಗತಿಪರ ಮಹಿಳೆಯರು ಸಮಾಜದ ಎಲ್ಲಾ ಸ್ತರಗಳನ್ನು ಪ್ರವೇಶಿಸಿ ಅರಿವು ಮೂಡಿಸುವ ಕೆಲಸ ಮಾಡಬೇಕು. ಅದರಲ್ಲೂ ಮುಖ್ಯವಾಗಿ ಮಧ್ಯಮ ವರ್ಗದ ಕುಟುಂಬದ ಮಹಿಳೆಯರು ಕೌಟುಂಬಿಕ ದೌರ್ಜನ್ಯಕ್ಕೆ ಒಳಗಾಗಿ ತಾವು ಕಳೆದುಕೊಂಡ ವ್ಯಕ್ತಿತ್ವವನ್ನು ಮತ್ತು ಸ್ವಾತಂತ್ರ್ಯವನ್ನು ಮರಳಿ ಪಡೆಯಲು ನೆರವಾಗಬೇಕು.
 


 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT