ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳೆ ವಿರುದ್ಧ ದೌರ್ಜನ್ಯಕ್ಕೆ ಕೊನೆ ಎಂದು?

Last Updated 27 ನವೆಂಬರ್ 2012, 21:51 IST
ಅಕ್ಷರ ಗಾತ್ರ

ತಾಲಿಬಾನ್ ಉಗ್ರರ ಗುಂಡೇಟಿಗೆ ಸಿಲುಕಿ ತೀವ್ರವಾಗಿ ಗಾಯಗೊಂಡಿದ್ದ ಪಾಕಿಸ್ತಾನದ ಮಲಾಲ ಯೂಸುಫ್‌ಝಾಯಿ ಎಂಬ 14ರ ಹರೆಯದ ಬಾಲಕಿ ಇದೀಗ ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾಳೆ.

ಸ್ವಾತ್ ಪ್ರಾಂತ್ಯದ ಈ ಬಾಲಕಿ ತಾನು ಶಾಲೆಗೆ ಹೋಗುತ್ತೇನೆ ಎಂದು ಪಟ್ಟು ಹಿಡಿದು ಶಿಕ್ಷಣದ ಮೌಲ್ಯಗಳನ್ನು ಎತ್ತಿ ಹಿಡಿದು ಉಗ್ರರ ಕೆಂಗಣ್ಣಿಗೆ ಗುರಿಯಾಗಿದ್ದಳು. ಏಷ್ಯಾ ಉಪಖಂಡದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ಇಷ್ಟಕ್ಕೇ ಸೀಮಿತಗೊಂಡಿರುವುದೇನಲ್ಲ.

ಎಲ್ಲಾ ಕಡೆ ಕಂಡು ಬರುತ್ತಿದೆ. ನಮ್ಮ ಹರಿಯಾಣ ರಾಜ್ಯದಲ್ಲಿ ಈಚೆಗೆ ದಲಿತ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರಗಳು ನಡೆದ ಸುದ್ದಿ ಬಂದಿದೆ. ಪಾಕಿಸ್ತಾನದ ಉತ್ತರ ಭಾಗದಲ್ಲಿ ಕೌಟಂಬಿಕ ಗೌರವವನ್ನು ಕಾಪಾಡುವ ನಿಟ್ಟಿನಲ್ಲಿ ಹೆತ್ತವರೇ ತಮ್ಮ ಮಗಳನ್ನು ಕೊಂದು ಹಾಕಿರುವ ಘಟನೆ ಮೊನ್ನೆಮೊನ್ನೆಯಷ್ಟೇ ನಡೆದಿದೆ. ದೆಹಲಿಯಲ್ಲಿ ವಿವಾಹಿತ ಯುವತಿಯೊಬ್ಬಳು ತನ್ನ ಪುಟ್ಟ ಮಗಳೊಂದಿಗೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಮದುವೆಯಾಗಿ ಐದು ವರ್ಷಗಳ ನಂತರವೂ ಗಂಡನ ಮನೆಯಲ್ಲಿ ವರದಕ್ಷಿಣೆಗಾಗಿ ನೀಡುತ್ತಿದ್ದ ಕಿರುಕುಳ ಸಹಿಸಲಾರದೆ ಆಕೆ ಈ ನಿರ್ಧಾರ ತೆಗೆದುಕೊಂಡಿದ್ದಳು. ನಿತ್ಯವೂ ಮಾಧ್ಯಮಗಳಲ್ಲಿ ಇಂತಹ ಒಂದಿಲ್ಲಾ ಒಂದು ಸುದ್ದಿ ಇದ್ದೇ ಇರುತ್ತದೆ.

ಘಟನೆಗಳು ಬೇರೆ ಬೇರೆ ಪ್ರಾಂತ್ಯಗಳಲ್ಲಿ ಸ್ಥಳಗಳಲ್ಲಿ ವಿಭಿನ್ನ ಸ್ವರೂಪದ್ದಾಗಿರಬಹುದು. ಮಹಿಳೆ ತನ್ನ ಹಕ್ಕುಗಳನ್ನು, ಸಮಾನತೆಯನ್ನು ಎತ್ತಿಹಿಡಿಯುವ ಬಗ್ಗೆ ಅಸಹನೆ ಮಾತ್ರ ಎದ್ದು ಕಾಣುತ್ತಿರುವುದಂತೂ ನಿಜ. ಭಾರತ, ಪಾಕಿಸ್ತಾನ ಅಥವಾ ಬಾಂಗ್ಲಾದೇಶಗಳಲ್ಲಿ ಇದು ವ್ಯಾಪಕವಾಗಿ ಕಂಡು ಬರುತ್ತಿದೆ. ಪಾಶ್ಚಿಮಾತ್ಯ ದೇಶಗಳಲ್ಲಿ ಮಹಿಳೆಯರ ಮೇಲಿನ ದಬ್ಬಾಳಿಕೆ ನಡೆಯುತ್ತಲೇ ಇಲ್ಲ ಎನ್ನುವಂತಿಲ್ಲ. ಅಲ್ಲಿಯೂ ಸುಸಂಸ್ಕೃತ ವ್ಯವಸ್ಥೆಯ ಚೌಕಟ್ಟಿನೊಳಗೇ ಮಹಿಳೆಯರ ಮೇಲಣ ದೌರ್ಜನ್ಯವೂ ವ್ಯವಸ್ಥಿತವಾಗಿಯೇ ಇದೆ ಎಂದರೆ ಅತಿಶಯೋಕ್ತಿಯಂತೂ ಅಲ್ಲವೇ ಅಲ್ಲ.

ಆದರೆ ಏಷ್ಯಾ ಉಪಖಂಡದ ಹಲವೆಡೆ ಹೆಣ್ಣು ಮಕ್ಕಳನ್ನು ಕೆಲವು ಹೆತ್ತವರು ಶಾಪವೆಂದೋ, ಹೊರೆಯೆಂದೋ ಪರಿಗಣಿಸುತ್ತಾರೆ. ಗಂಡು ಮಕ್ಕಳನ್ನು ದುಡಿದು ತರುವವರು ಎಂದು ಪರಿಗಣಿಸುವ ಇಲ್ಲಿನ ಕೌಟಂಬಿಕ ವ್ಯವಸ್ಥೆಯು ಹೆಣ್ಣು ಮಕ್ಕಳನ್ನು ಆ ರೀತಿ ನಂಬುವುದಿಲ್ಲ.

ಆರ್ಥಿಕ ಕಾರಣಗಳೂ ಇಂತಹ ಸಾಮಾಜಿಕ ಸಮಸ್ಯೆಗಳ ಆಳದಲ್ಲಿವೆ ಎನ್ನುವುದು ನಿಜವೇ ಆದರೂ, ಇತರ ಕಾರಣಗಳೂ ಅಷ್ಟೇ ಮುಖ್ಯವಾಗಿವೆ. ದುರಂತವೆಂದರೆ ಮಹಿಳೆಯ ಮೇಲೆ ನಡೆಯುವ ಇಂತಹ ದುಷ್ಟ ಕೃತ್ಯಗಳ ಹಿಂದೆ ಬಹಳಷ್ಟು ಸಂದರ್ಭಗಳಲ್ಲಿ ಮಹಿಳೆಯರೇ ಇರುತ್ತಾರೆ. ತಾಯಂದಿರು, ಅತ್ತೆ, ನಾದಿನಿಯರು ಅತ್ಯಂತ ಕ್ರೂರವಾಗಿ ನಡೆದುಕೊಂಡಿರುತ್ತಾರೆ. ಇಂತಹ ಮಹಿಳೆಯರೇ ವರದಕ್ಷಿಣೆ ಕಿರುಕುಳ ಅಥವಾ ಕೌಟಂಬಿಕ ಗೌರವವನ್ನು ಕಾಪಾಡಿಕೊಳ್ಳುವುದಕ್ಕಾಗಿ ನಡೆಸುವ ಹೆಣ್ಣುಮಕ್ಕಳ ಕಗ್ಗೊಲೆಗಳ ಹಿಂದಿರುತ್ತಾರೆ.

ಇಂತಹ ಪ್ರಕರಣಗಳ ವಿರುದ್ಧ ಕೆಲವು ದುರ್ಬಲ ಧ್ವನಿಗಳು ಕೇಳಿಸುತ್ತವಷ್ಟೇ, ಮತ್ತೆ ಅವು ದಿನ ಕಳೆದಂತೆ ಮರೆತೂ ಹೋಗುತ್ತವೆ. ನಂತರ ಯಥಾಪ್ರಕಾರ ಎಲ್ಲವೂ ನಡೆಯುತ್ತಿರುತ್ತವೆ. ಮಲಾಲ ಪ್ರಕರಣವನ್ನು ಕೇಂದ್ರವಾಗಿಟ್ಟುಕೊಂಡು ಪಾಕಿಸ್ತಾನದಲ್ಲಿ ನೊಂದವರೆಲ್ಲಾ ಒಗ್ಗೂಡಬಹುದೆಂಬ ಆಶಯ ನನ್ನದು. ಇದು ಮುಂದೊಂದು ದಿನ ವಜೀರಿಸ್ತಾನ ಮತ್ತು ಸ್ವಾತ್ ಕಣಿವೆ ಪ್ರದೇಶಗಳಲ್ಲಿ ತಾಲಿಬಾನ್ ಉಗ್ರರನ್ನು ಸದೆಬಡಿಯುವ ಪ್ರಕ್ರಿಯೆಗೆ ನೆರವಾಗಲೂ ಬಹುದು.

ಇಂತಹ ದುಷ್ಕೃತ್ಯಗಳ ವಿರುದ್ಧ ಸಮಾಜದಲ್ಲಿ ಕ್ರೋಧವಿದೆ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಆದರೆ ಅಂತಹ ಸಿಟ್ಟು, ಅಸಮಾಧಾನ, ಪ್ರತಿಭಟನೆಗಳನ್ನು ಸರಿಯಾದ ದಿಕ್ಕಿನತ್ತ ಕೊಂಡೊಯ್ಯುವ ಚಾಲನಾಶಕ್ತಿಯ ಅಗತ್ಯವಿದೆ. ಆದರೆ ಧಾರ್ಮಿಕ ಮೂಲಭೂತವಾದಿಗಳು ಇಂತಹ ಪ್ರತಿಭಟನೆಗಳಿಗೆ ಎದುರಾಗಿ ಬರುವುದಂತೂ ನಿಜ.

ತಾಲಿಬಾನ್ ಉಗ್ರರ ವಿರುದ್ಧ ಸೇನಾ ಕಾರ್ಯಾಚರಣೆ ಸಾಂಗವಾಗಿ ನಡೆದಿದೆ ಎಂದು ಸರ್ಕಾರ ನಿರಂತರವಾಗಿ ಹೇಳಿಕೆಗಳನ್ನು ಕೊಡುತ್ತಲೇ ಬಂದಿದೆ. ಆದರೆ ಇಂತಹ ಕಾರ್ಯಾಚರಣೆಗಳಲ್ಲಿ ದೃಢವಿಶ್ವಾಸ ಕಂಡು ಬರುತ್ತಿಲ್ಲ. ಇದಕ್ಕೆ ಹತ್ತು ಹಲವು ಕಾರಣಗಳೂ ಇವೆ. ಸೇನೆಯೊಳಗೂ ತಾಲಿಬಾನ್ ತನ್ನ `ನುಸುಳುವಿಕೆ'ಯಲ್ಲಿ ಸಫಲವಾಗಿರಲೂ ಬಹುದು !

ಏಷ್ಯಾ ಭೂಖಂಡದಲ್ಲಿ ಅಭಿವೃದ್ಧಿ ಹೊಂದಿರುವ ದೇಶಗಳಲ್ಲಿ ಭಾರತ ಮುಂಚೂಣಿಯಲ್ಲಿದೆ. ಮಹಿಳೆಯರ ಮೇಲೆ ನಡೆದಿರುವ ದೌರ್ಜನ್ಯಗಳ ವಿರುದ್ಧದ ಧ್ವನಿ ಸಹಜವಾಗಿಯೇ ಈ ಪ್ರದೇಶದಲ್ಲಿ ದೊಡ್ಡದಾಗಿಯೇ ಕೇಳಿಸುತ್ತಿದೆ. ಸೋನಿಯಾ ಗಾಂಧಿಯವರೂ ಸೇರಿದಂತೆ ಇಲ್ಲಿ ಪ್ರಭಾವಿ ರಾಜಕೀಯ ಮುಖಂಡರು, ಸಾಮಾಜಿಕ ಚಳವಳಿಯ ಹೋರಾಟಗಾರರು ಮಹಿಳೆಯರೇ ಆಗಿದ್ದಾರೆ. ಆದರೂ ಇವರೆಲ್ಲರೂ ಮಹಿಳೆಯರಿಗಾಗಿ ಗಮನಾರ್ಹ ಕೊಡುಗೆಯನ್ನಂತೂ ನೀಡಲು ಸಾಧ್ಯವಾಗಿಲ್ಲ. ಮಹಿಳೆಯರಿಗೆ ಶೇಕಡ 33ರಷ್ಟು ಮೀಸಲಾತಿ ನೀಡುವುದಕ್ಕೆ ಸಂಬಂಧಿಸಿದಂತೆ ಸಂವಿಧಾನಕ್ಕೆ ತಿದ್ದುಪಡಿ ತರಲೂ ಸಾಧ್ಯವಾಗಿಲ್ಲ. ಸಂಸತ್ತಿನಲ್ಲಿ ಈ ಮಸೂದೆಗಿನ್ನೂ ಹಸಿರು ನಿಶಾನೆ ಸಿಕ್ಕಿಯೇ ಇಲ್ಲ.

ಮಹಿಳೆಯರಿಗೆ ಶೇಕಡ 33ರಷ್ಟು ಮೀಸಲಾತಿ ಸಿಕ್ಕಿದರೆ ಅದರ ಲಾಭ ನಗರಗಳಲ್ಲಿರುವ ಸುಶಿಕ್ಷಿತ ಮಹಿಳೆಯರೇ ಪಡೆದುಕೊಂಡು ಬಿಡುತ್ತಾರೆ ಎಂದು ಲೋಕಸಭೆಯಲ್ಲಿ ಹಲವು ಸಂಸದರು ಗದ್ದಲ ಎಬ್ಬಿಸಿದ್ದಾರೆ. ಹೀಗೆ ಮಹಿಳಾ ಮೀಸಲಾತಿಯ ವಿರುದ್ಧ ಮಾತನಾಡಿರುವವರು ಹೆಚ್ಚು ಮಂದಿ ದಲಿತ ಮತ್ತು ಹಿಂದುಳಿದ ಜಾತಿಗೆ ಸೇರಿದ ಜನಪ್ರತಿನಿಧಿಗಳೇ ಆಗಿರುವುದೊಂದು ವಿಪರ್ಯಾಸ.

ಆದರೆ ಈ ತೆರನಾದ ಆತಂಕಕ್ಕೆ ಯಾವುದೇ ಆಧಾರಗಳಿಲ್ಲ, ಸಮರ್ಥನೆಗಳೂ ಇಲ್ಲ. ಈಗಾಗಲೇ ಪಂಚಾಯತಿ ಮಟ್ಟಗಳಲ್ಲಿ ಮಹಿಳೆಯರು ತಮ್ಮ ಹೆಚ್ಚುಗಾರಿಕೆ ತೋರಿರುವುದನ್ನು ನಾವು ಲಘುವಾಗಿ ಕಾಣುವಂತಿಲ್ಲ.

ಸರ್ಕಾರದ ಅಧಿಕೃತ ವರದಿ `ಪುರುಷ ಮತ್ತು ಮಹಿಳೆ-2012' ರಲ್ಲಿಯೇ ಆಡಳಿತ ಮತ್ತು ಆರ್ಥಿಕ ಕ್ಷೇತ್ರಗಳಲ್ಲಿ ಮಹಿಳೆಯರ ಸೀಮಿತ ಪಾಲ್ಗೊಳ್ಳುವಿಕೆ ಬಗ್ಗೆ ಸ್ಪಷ್ಟ ಪಡಿಸಲಾಗಿದೆ. ಅಷ್ಟೇ ಅಲ್ಲ, ಆರೋಗ್ಯ, ಶಿಕ್ಷಣ, ಹಣಕಾಸು ಮತ್ತು ಅಪರಾಧಕ್ಕೆ ಸಂಬಂಧಿಸಿದ ಅಂಕಿಅಂಶಗಳು ಕೂಡಾ ಆತಂಕ ಮೂಡಿಸುವಂತಿದೆ. ಸುಪ್ರೀಂ ಕೋರ್ಟ್‌ನಲ್ಲಿರುವ 40 ನ್ಯಾಯಮೂರ್ತಿಗಳಲ್ಲಿ ಇಬ್ಬರಷ್ಟೇ ಮಹಿಳೆಯರು.

ಹೈಕೋರ್ಟ್‌ಗಳಲ್ಲಿರುವ ಸುಮಾರು 634 ನ್ಯಾಯಮೂರ್ತಿಗಳಲ್ಲಿ 54ಮಂದಿಯಷ್ಟೇ ಮಹಿಳೆಯರು. 2009ರ ಅಂಕಿಅಂಶಗಳ ಪ್ರಕಾರ ಕೇಂದ್ರ ಸರ್ಕಾರದ ನೌಕರಿಯಲ್ಲಿ ಶೇಕಡ 9ರಷ್ಟು ಮಹಿಳೆಯರಿದ್ದಾರಷ್ಟೇ. ಆದರೆ 2010ರ ಅಂಕಿಅಂಶಗಳನ್ನು ಗಮನಿಸಿದಾಗ ವಾಣಿಜ್ಯ ಬ್ಯಾಂಕುಗಳಲ್ಲಿ ಶೇಕಡ 16.6ರಷ್ಟು ಮಹಿಳಾ ಉದ್ಯೋಗಿಗಳಿರುವುದನ್ನು ಕಂಡು ಒಂದಿನಿತು ಪರವಾಗಿಲ್ಲ ಎನಿಸುತ್ತದೆ.

ಇನ್ನು ಮುಸ್ಲಿಮ್ ಸಮುದಾಯದ ಮಹಿಳೆಯರಿಗಂತೂ ಇನ್ನಿಲ್ಲದ ಕಟ್ಟುಪಾಡುಗಳು. ಇತರ ಧರ್ಮೀಯರಿಗಿಂತ ಇವರ ಸಮಸ್ಯೆಗಳು ಬಹಳಷ್ಟು. ಮುಸ್ಲಿಮ್ ಮಹಿಳೆಯರು ಎಲ್ಲಾ ಧಾರ್ಮಿಕ ಕೇಂದ್ರಗಳಿಗೆ ಹೋಗುವಂತಿಲ್ಲ. ಇವರಿಗೆ ದೆಹಲಿಯ ನಿಜಾಮುದ್ದೀನ್ ದರ್ಗಾ ಬಾಗಿಲು ತೆರೆಯುವುದೇ ಇಲ್ಲ. ಮುಂಬೈನ ಹಾಜಿ ಅಲಿ ದರ್ಗಾದ ಒಳಗೂ ಮುಸ್ಲಿಂ ಮಹಿಳೆಯರಿಗೆ ಪ್ರವೇಶವನ್ನು ನಿಷೇಧಿಸಲಾಗಿದೆ. ಇವುಗಳೆಲ್ಲದರ ನಡುವೆಯೂ ವಿಧವಾ ವಿವಾಹಕ್ಕೆ ಯಾವುದೇ ಅಡ್ಡಿ ಆತಂಕಗಳಿಲ್ಲದ್ದನ್ನೂ ಮುಸ್ಲಿಮರಲ್ಲಿ ಕಾಣಬಹುದು. ಇದು ಈ ಧರ್ಮದ ಪ್ರಗತಿಪರತೆಯನ್ನು ಎತ್ತಿ ಹಿಡಿಯುತ್ತದೆ. ಇಂತಹ ಹಲವು ಮಾನವತೆಯ ಹೆಚ್ಚುಗಾರಿಕೆಗಳೂ ಈ ಧರ್ಮದಲ್ಲಿವೆ.

ಮಹಿಳೆಯರ ಭಾವನೆಗಳನ್ನು ತಿರಸ್ಕಾರ ಭಾವದಿಂದ ಕಾಣುವ ಪುರುಷರ ಸೂಕ್ಷ್ಮತೆಯೇ ಇಲ್ಲದ ಮನಸ್ಸುಗಳ ಬಗ್ಗೆ ಸಾಕಷ್ಟು ನಿದರ್ಶನಗಳಿವೆ. ಮಹಿಳೆಯ ಪ್ರತಿಭೆ, ಕೌಶಲ್ಯಗಳನ್ನು ಅರ್ಥಮಾಡಿಕೊಳ್ಳುವುದು, ಅಭಿನಂದಿಸುವುದು ಕೂಡಾ ಇಂತಹ ಪುರುಷರಿಂದ ಅಸಾಧ್ಯ ಎಂಬುದೂ ನಿಜ. ತನ್ನ ಮೇಲರಿಮೆಯನ್ನು ಎತ್ತಿ ಹಿಡಿಯುವ ದಿಸೆಯಲ್ಲಿ ಪುರುಷ ಕೆಲವು ಹಿಂಸಾತ್ಮಕ ಚಟುವಟಿಕೆಗಳಿಗೆ ಜೋತು ಬಿದ್ದಿರುತ್ತಾನೆನಿಸುತ್ತದೆ. ಗಲಭೆ ಪೀಡಿತ ಪ್ರದೇಶಗಳಲ್ಲಿ ಮಹಿಳೆಯರು ಅತ್ಯಾಚಾರಕ್ಕೆ ಒಳಗಾಗುವ ಹಿನ್ನೆಲೆಯನ್ನು ಗಮನಿಸಿದಾಗಲೂ ಇಂತಹದೇ ಸೂಕ್ಷ್ಮಗಳು ಬಿಚ್ಚಿಕೊಳ್ಳುತ್ತವೆ ಎಂದೆನಿಸುತ್ತದೆ.

ಆದರೆ ಅತ್ಯಾಚಾರವನ್ನು ಸರ್ಕಾರವು ಕೇವಲ ಅಪರಾಧ ಪ್ರಕರಣವನ್ನಾಗಿಯಷ್ಟೇ ನೋಡುತ್ತಿರುವುದೊಂದು ದುರದೃಷ್ಟವೇ ಆಗಿದೆ. ಇಂತಹ ಪ್ರಕರಣಗಳಲ್ಲಿ ಅಪರಾಧಿಗೆ ಮಾತ್ರ ಶಿಕ್ಷೆಯಾಗುತ್ತದೆ. ಆದರೆ ಇದಕ್ಕೆ ಮೌನ ಸಾಕ್ಷಿಯಾಗಿದ್ದವರನ್ನು ಎಲ್ಲರೂ ಮರೆತು ಬಿಡುತ್ತಾರೆ.

ಇನ್ನು ಹರಿಯಾಣದ ಖಾಪ್ ಪಂಚಾಯತ್‌ಗಳ ಅಮಾನುಷತೆ ಎಲ್ಲರಿಗೂ ಗೊತ್ತಿರುವಂತಹದ್ದೇ ಆಗಿದೆ. ಹೆಣ್ಣು ಮಗಳೊಬ್ಬಳು ತನಗಿಷ್ಟವಾದ ಉಡುಪು ಧರಿಸುವುದು ಅಥವಾ ತನಗೆ ಇಷ್ಟವಾದವನನ್ನು ಮದುವೆಯಾಗುವ ಅಭಿಲಾಷೆ ವ್ಯಕ್ತ ಪಡಿಸುವುದೂ ಕುಟುಂಬದ ಅಥವಾ ಸಂಬಂಧಪಟ್ಟ ಸಮಾಜದ ಹಿರಿಯರಿಗೆ ಅಪರಾಧದಂತೆ ಕಂಡು ಆಕೆಗೆ ಕಠಿಣವಾದ ಶಿಕ್ಷೆಯನ್ನೇ ವಿಧಿಸುತ್ತಾರೆ.

ಭಾರತ, ಪಾಕಿಸ್ತಾನ, ಬಾಂಗ್ಲಾದೇಶಗಳ ಮಟ್ಟಿಗಂತೂ ಮಹಿಳಾ ದೌರ್ಜನ್ಯದ ವಿರುದ್ಧ ಆಂದೋಲನದ ಅನಿವಾರ್ಯತೆ ಇದೆ. ಮಹಿಳೆಯರ ಮೇಲೆ ಇವತ್ತಿಗೂ ನಡೆಯುತ್ತಿರುವ ದಬ್ಬಾಳಿಕೆಯ ವಿರುದ್ದ ಜನಜಾಗೃತಿ ಮೂಡಿಸಿ, ಅವರನ್ನು ಪ್ರತಿಭಟನೆಯ ಹಾದಿಯಲ್ಲಿ ಕರೆದೊಯ್ಯುವ ಜನಾಂದೋಲನದ ಅಗತ್ಯವಿದೆ.

ಸಮಾಜದಲ್ಲಿ ಮಹಿಳೆಯರಿಗೂ ಸರಿಸಮವಾದ ಸ್ಥಾನಮಾನದ ಹಕ್ಕು ಇದೆ, ಅದು ರಾಜಕೀಯ ಕ್ಷೇತ್ರವಿರಲಿ, ಆರ್ಥಿಕ, ಸಾಮಾಜಿಕ ಕ್ಷೇತ್ರಗಳೇ ಆಗಲಿ ಮಹಿಳೆಯರೂ ಯಾರಿಗಿಂತ ಕಡಿಮೆಯಲ್ಲ ಎಂಬ ವಿಚಾರ ಮೊದಲಿಗೆ ಮಹಿಳೆಯರಿಗೆ ತಲುಪಿ ಅವರಲ್ಲಿ ಆತ್ಮವಿಶ್ವಾಸದ ಸೆಲೆ ಮೂಡಬೇಕಿದೆ. ಇತರರೂ ಈ ಕುರಿತು ಅರಿವು ಮೂಡಿಸಿಕೊಳ್ಳಬೇಕಿದೆ.

ಈ ನಿಟ್ಟಿನಲ್ಲಿಯೇ ಜನಜಾಗೃತಿಯ ಆಂದೋಲನದ ಅಗತ್ಯವಿದೆ. ಯಾವ ಸಮಾಜದಲ್ಲಿ ಅಥವಾ ದೇಶದಲ್ಲಿ ಮಹಿಳೆಯರನ್ನು ಕಡೆಗಣಿಸಲಾಗುತ್ತದೋ, ಎಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ನಡೆಯುತ್ತಿರುತ್ತದೋ ಅಂತಹ ಸಮಾಜವನ್ನು ಅಥವಾ ದೇಶವನ್ನು ಅಭಿವೃದ್ಧಿ ಹೊಂದಿದವುಗಳೆಂದು ಪರಿಗಣಿಸುವುದು ಅರ್ಥಹೀನ.
ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in-

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT