ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳೆಯರಿಗಿಲ್ಲ ಇಲ್ಲಿ ಗೌರವ

Last Updated 7 ಮಾರ್ಚ್ 2013, 19:59 IST
ಅಕ್ಷರ ಗಾತ್ರ

ದೇಶದಲ್ಲಿ ಪ್ರತೀ 20 ನಿಮಿಷಕ್ಕೊಂದು ಅತ್ಯಾಚಾರವಾಗುತ್ತಿದೆ. ಪ್ರತೀ ಗಂಟೆಗೊಂದು ವರದಕ್ಷಿಣೆ ಸಾವು ಸಂಭವಿಸುತ್ತಿದೆ. ಅರ್ಧಗಂಟೆಗೊಂದು ಮಾನಭಂಗ ಪ್ರಕರಣ ವರದಿಯಾಗುತ್ತಿದೆ. ಇಷ್ಟು ಸಾಲದೆಂಬಂತೆ ಒಂದೇ ದಿನಕ್ಕೆ ಐವತ್ತಕ್ಕೂ ಹೆಚ್ಚು ಮಹಿಳೆಯರ ಅಪಹರಣವಾಗುತ್ತಿದೆ. ಚುಡಾಯಿಸುವ ಪ್ರಕರಣಗಳಂತೂ ಅಸಂಖ್ಯವೆಂಬಷ್ಟಿದೆ, ಮಹಿಳೆಯರ ವಿರುದ್ಧ ನಡೆಯುತ್ತಿರುವ ದೌರ್ಜನ್ಯವಂತೂ ಗಳಿಗೆ ಗಳಿಗೆಗೂ ವರದಿಯಾಗುತ್ತಿದೆ.

ಮಹಿಳಾ ದಿನ ಬರುತ್ತದೆ, ಹೋಗುತ್ತದೆ. ಆದರೆ ಬೆಚ್ಚಿ ಬೀಳಿಸುವಂತಹ ಇಂತಹ ದೌರ್ಜನ್ಯಗಳಂತೂ ಅಂಕಿ ಅಂಶಗಳ ಸಹಿತ ಪ್ರತಿನಿತ್ಯ ವರದಿಯಾಗುತ್ತಲೇ ಇವೆ. ಆದರೆ ರಾಷ್ಟ್ರದ ಅತ್ಯಂತ ಪ್ರಭಾವಶಾಲಿ ಮಾಧ್ಯಮವಾದ ಸಿನಿಮಾಗಳಲ್ಲಿ ನಾಯಕ-ನಾಯಕಿಯರು ಮರ ಸುತ್ತುತ್ತಾ, ಹಾಡು ಹೇಳುತ್ತಾ ಸುಖವಾಗಿ ಇರುತ್ತಾರೆ.

ನಾಯಕಿಯರಿಗೆ ಎಲ್ಲಿಯವರೆಗೆ ತುಂಡುಡುಗೆ ತೊಡಿಸಬೇಕೆಂದು ನಿರ್ದೇಶಕ ಆಲೋಚಿಸುತ್ತಿರುತ್ತಾನೆ. ಮೊನ್ನೆ ಮೊನ್ನೆ ಬಂದ ತಾಜಾ ಸುದ್ದಿಯ ಪ್ರಕಾರ ನಾಯಕನೊಬ್ಬ, ನಾಯಕಿಗೆ ಚಲನಚಿತ್ರಕ್ಕಾಗಿ ಮೂವತ್ತೆರೆಡು ಬಾರಿ ಚುಂಬಿಸಿ ಹಳೆಯ ದಾಖಲೆಗಳನ್ನೆಲ್ಲಾ ಮುರಿದಿದ್ದಾನಂತೆ!

ನಮ್ಮ ಭಾರತೀಯ ಚಿತ್ರರಂಗ ಮಹಿಳೆಯರಿಗೆ ಸಂಬಂಧಪಟ್ಟಂತೆ ವಿಲಕ್ಷಣ ಕಲ್ಪನೆಯಲ್ಲಿಯೇ ಇದೆ. ಎಷ್ಟೇ ಪ್ರಗತಿ ಆದರೂ, ದೇಶ ಎಷ್ಟೇ ಮುಂದುವರೆದರೂ, ಪುರುಷರಿಗೆ ಸಮಾನವಾದ ಸರಿಸಾಟಿಯಾದ ಪೈಪೋಟಿ ನೀಡಿದರೂ, ಸಾಂಪ್ರದಾಯಿಕವಾಗಿ ನಂಬಿಕೊಂಡು ಬಂದ ತತ್ವಗಳಿಗೇ ಜೋತುಬಿದ್ದು, ಗಂಡಸು ಮಹಿಳೆಯರ ಸಂರಕ್ಷಕ, ಆಪತ್‌ರಕ್ಷಕ ಎಂಬ ಭಾವನೆಯನ್ನೇ ಒಟ್ಟು ಆಶಯವನ್ನಾಗಿ ಹೊಂದಿದೆ.

ನಾಯಕ ನಾಯಕಿಯನ್ನು ನೋಡುತ್ತಾನೆ. ಆಕೆಯನ್ನು ಗೆಲ್ಲುವುದೇ ಅವನ ಗುರಿಯಾಗುತ್ತದೆ. ಜಗತ್ತಿನ ಎಲ್ಲ ಒಳ್ಳೆಯ ಗುಣಗಳನ್ನು ತಾನೊಬ್ಬನೇ ಆವಾಹಿಸಿಕೊಂಡಂತಿರುವ ನಾಯಕ ಅವಳನ್ನು ಗೆಲ್ಲುತ್ತಾನೆ. ಮಹಿಳೆಯರ ಮೇಲೆ ದೌರ್ಜನ್ಯ ಎಸಗುವುದು, ಅತ್ಯಾಚಾರ ನಡೆಸುವುದು, ಇತ್ಯಾದಿಗಳೆಲ್ಲಾ `ಖಳ'ನ ಕೆಲಸ.

ಒಟ್ಟಿನಲ್ಲಿ ಇಡೀ ಚಿತ್ರದ ಸೂತ್ರವೇ ಪುರುಷ ಪ್ರಾಧಾನ್ಯವನ್ನು ಗಟ್ಟಿಯಾಗಿ ಪ್ರತಿಪಾದಿಸುವುದಾಗಿರುತ್ತದೆ. ಈ ಒಳರಹಸ್ಯವೇ ವಿಜೃಂಭಣೆಯಾಗುವುದರಿಂದ ಚಲನಚಿತ್ರ ವೀಕ್ಷಿಸುವ ಸಾಮಾನ್ಯ ಜನ ಈ ಅಂಶಗಳನ್ನೇ `ಮೌಲ್ಯ'ಗಳನ್ನಾಗಿ ತಿಳಿದು ತಪ್ಪುಹಾದಿಯಲ್ಲಿ ಸಾಗಲು ಪ್ರೇರೇಪಿಸಿದಂತಾಗುತ್ತದೆ. ಮಹಿಳಾ ಸಬಲೀಕರಣದ ವಸ್ತುವನ್ನು ಒಳಗೊಂಡ ಎಷ್ಟೋ ಚಲನಚಿತ್ರಗಳು ಬಂದಿವೆ.

ಸಾಕ್ಷ್ಯಚಿತ್ರಗಳೂ ತಯಾರಾಗಿವೆ. ಆದರೆ ನಗರ ಕೇಂದ್ರೀಕೃತವಾದ ಇಂತಹ ಚಿತ್ರಗಳಿಂದ ಉದ್ದೇಶ ಸಾರ್ಥಕವಾಗುತ್ತಿಲ್ಲ. ಚಲನಚಿತ್ರಗಳಲ್ಲಿ ಮಹಿಳೆಯರನ್ನು ಬಿಂಬಿಸುತ್ತಿರುವವರ ಮನಸ್ಥಿತಿಯಲ್ಲಿ ಬದಲಾವಣೆಯಾಗದ ಹೊರತು, ಚಲನಚಿತ್ರ ಪರದೆಯ ಮೇಲಾಗಲಿ, ಹೊರಗಾಗಲಿ ಮಹಿಳೆಯರಿಗೆ ನ್ಯಾಯ ಸಿಗುವುದಿಲ್ಲ.

ದಶಕದಿಂದ ದಶಕಕ್ಕೆ ಹಂತ ಹಂತವಾಗಿ ಚಿತ್ರರಂಗ ಬೆಳವಣಿಗೆಯಾಗುತ್ತಿದೆ. ಬದಲಾಗುತ್ತಿರುವ ಪ್ರಪಂಚಕ್ಕೆ ತನ್ನನ್ನು ಒಡ್ಡಿಕೊಳ್ಳುತ್ತಾ ಬರುತ್ತಿದ್ದರೂ ಮಹಿಳೆಯರ ಬಗ್ಗೆ ಇರುವ ಪೂರ್ವಗ್ರಹ ದೂರವಾಗಿಲ್ಲ. ಪ್ರಾಧಾನ್ಯತೆಯನ್ನು ಬಿಟ್ಟುಕೊಡಲು ಸಿದ್ಧರಿಲ್ಲ. ಸ್ವಾತಂತ್ರ್ಯಪೂರ್ವ ಹಾಗೂ ಸ್ವಾತಂತ್ರ್ಯೋತ್ತರ ಸಮಯದಲ್ಲಿ ಮಾನಸಿಕ ಸಿದ್ಧತೆ ಆನಂತರದ ದಿನಗಳಲ್ಲಿ ಮರೆಯಾಯಿತು.

ಮೆಹಬೂಬ್‌ಖಾನರ ಔರತ್, 1956 ರಲ್ಲಿ `ಮದರ್ ಇಂಡಿಯಾ' ಆಗಿ ಬಂದಾಗ ಹೊಸ ರಾಷ್ಟ್ರದ ಕಲ್ಪನೆಯಲ್ಲಿ ನಾವು ಬೀಗುತ್ತಿದ್ದೆವು. ತಾಯಿ ಮತ್ತು ದೇಶವನ್ನು ಒಂದು ರೀತಿಯಲ್ಲಿ ಸಮೀಕರಿಸುವ ಕೆಲಸ ನಡೆಯಿತು. ಇವೆರಡೂ ಸಾಂಪ್ರದಾಯಿಕ ಮಾದರಿ ಹಾಗೂ ಅನನ್ಯತೆಯ ಸಂಕೇತವಾಯಿತಲ್ಲದೆ, ದೇಶದ ಜನಪ್ರಿಯ ಸಾಕ್ಷಿಪ್ರಜ್ಞೆಯಾಯಿತು.

ಭಾರತೀಯ ಸಂಸ್ಕೃತಿಯನ್ನು ವಿಶ್ವ ಮಾರುಕಟ್ಟೆಗೆ ಪ್ರಸ್ತುತಪಡಿಸಿದ್ದೇ ಹೀಗೆ. ಇಂತಹ ಒಂದು ಪ್ರತೀಕ ಚಿತ್ರರಂಗವನ್ನು ನೂರು ವರ್ಷ ಆಳುತ್ತದೆ ಎಂಬುದೇ ಕೌತುಕ ಸತ್ಯ. ಪತಿಯೇ ಪರದೈವ, ಪತಿಭಕ್ತಿ ಮೊದಲಾದ ತತ್ವಗಳನ್ನು ಬಿಂಬಿಸಲು ಸಿನಿಮಾಗಳು ಆರಂಭಿಸಿದವು. ಮಹಿಳೆಯ ಕೆಲಸವೇ ಮನೆಯೊಳಗೆ ಎನ್ನುವಂತದೂ, ಕುಟುಂಬದಲ್ಲಿರುವ ಎಲ್ಲರ ಸೇವೆ ಮಾಡುವುದೇ ಅವಳ ಕೆಲಸ ಎಂದೂ ಹೇಳಲಾರಂಭಿಸಿದವು.

ಕನ್ನಡದ ಮೊದಲ ವಾಕ್ಚಿತ್ರದ ನಾಯಕಿಯನ್ನೇ ನೋಡಿ, ಪಡಬಾರದ ಪಾಡು ಪಡುತ್ತಾ ಕಣ್ಣೀರು ಸುರಿಸುತ್ತಾ ಸತ್ತ ಗಂಡನ ಜೊತೆ ಸಹಗಮನ ಮಾಡುತ್ತಾಳೆ. ಪ್ರೇಕ್ಷಕರ ಕಣ್ಣೀರು ಇಲ್ಲಿ ಯಶಸ್ಸಿನ ಸೂತ್ರ. ಅಂದಿನಿಂದ ಇಂದಿನವರೆಗೂ `ಕಣ್ಣೀರು' ಚಲನಚಿತ್ರಗಳ ಸ್ಥಾಯೀಭಾವವಾಗಿ ಉಳಿದುಕೊಂಡು ಬಂದಿದೆ. ಮದರ್ ಇಂಡಿಯಾ ಮಾಡಿದ್ದೂ ಅದೇ.

ಸಿನಿಮಾರಂಗಕ್ಕೆ ಮಹಿಳೆಯರ ಪ್ರವೇಶವಾದಂದಿನಿಂದಲೇ ಸಿನಿಮಾ ಕ್ಷೇತ್ರ ಕೆಟ್ಟುಹೋಯಿತು ಎನ್ನುವ ಗೊಣಗುಗಳು ಆರಂಭದ ದಿನಗಳಲ್ಲಿ ನಡೆಯಿತು. ಮೂಕಿ ಚಿತ್ರ ತಯಾರಿಕೆ ಕಾಲದಿಂದಲೇ ನಟಿಯರಿಗೆ ಶೋಷಣೆ ತಪ್ಪಿರಲಿಲ್ಲ. ಸಿನಿಮಾದಲ್ಲಿ ಅಭಿನಯಸುವುದೇ ಕೀಳು ಕೆಲಸ ಎಂಬ ಭಾವನೆ ಆ ಕಾಲದಲ್ಲಿ ದಟ್ಟವಾಗಿದ್ದುದರಿಂದ, ದಾದಾಸಾಹೇಬ್ ಫಾಲ್ಕೆಯವರೇ ಮಹಿಳಾ ಪಾತ್ರಗಳು ಸಿಗದೆ, ಪುರುಷರಿಗೆ ಸ್ತ್ರೀವೇಷ ತೊಡಿಸಿ ಸಿನಿಮಾ ಮಾಡಬೇಕಾಯಿತು. 1

914ರಲ್ಲಿ ಫಾಲ್ಕೆಯವರು `ಮೋಹಿನಿ ಭಸ್ಮಾಸುರ' ಮೂಕಿ ಚಿತ್ರ ತಯಾರಿಸುವಾಗ ಕಮಲಾಬಾಯಿ ಗೋಖಲೆ ಅವರು ಅದರಲ್ಲಿ ಪಾತ್ರ ವಹಿಸಲು ಮುಂದಾದರು. ಇದುವರೆಗೆ ಸ್ತ್ರೀಪಾತ್ರ ವಹಿಸುತ್ತಿದ್ದ ನಟ ಇದನ್ನು ತೀವ್ರವಾಗಿ ವಿರೋಧಿಸಿದನಲ್ಲದೆ, ಕಮಲಾಬಾಯಿ ಅವರನ್ನು ದ್ವೇಷಿಸಲಾರಂಭಿಸಿದನಂತೆ. ಕಮಲಾಬಾಯಿ ಪ್ರವೇಶದಿಂದ ತನ್ನ ಕೆಲಸಕ್ಕೆ ಸಂಚಕಾರ ಬಂತು ಎನ್ನುವುದು ಅವನ ದ್ವೇಷಕ್ಕೆ ಕಾರಣ. ಬಹುಶಃ ಮಹಿಳೆಯರನ್ನು ದೂರವಿಡುವ ಸಿನಿಮಾ ಪದ್ಧತಿ ಇಲ್ಲಿಂದಲೇ ಆರಂಭ ಎಂದು ಕಾಣುತ್ತದೆ.

ಸಿನಿಮಾ ಪರದೆಯ ಮೇಲೆ ಮಹಿಳೆಯರನ್ನು ಅಗೌರವದಿಂದ ಕಾಣುವ ರೀತಿ ಒಂದು ಕಡೆ ಆದರೆ, ತೆರೆಯ ಹಿಂದೆ ಅವರನ್ನು ಅವಮಾನಿಸುವ ಘಟನೆಯೂ ಇದೆ. ದೃಶ್ಯಮಾಧ್ಯಮ ದುಡಿಯುವ ಮಹಿಳೆಯರನ್ನು ಗೌರವದಿಂದ ಕಂಡುದೇ ಅಪರೂಪ. “ನಮ್ಮ ಚಿತ್ರಗಳಲ್ಲಿ ಸ್ತ್ರೀಯರನ್ನು ನಿರ್ವೀರ್ಯ ಭಾರತದ ಮಹಿಳೆಯಾಗಿಸಿ, ಚರಣದಾಸಿ ಮಾಡಿ ತೋರಿಸಿರುವುದು ಸರಿಯಲ್ಲ” ಎಂದು 1944ರಲ್ಲೇ ಅನಕೃ ಅಭಿಪ್ರಾಯಪಟ್ಟಿದ್ದರು.

ಅಷ್ಟರಲ್ಲಿ `ದೇವದಾಸ್' ಜನಪ್ರಿಯವಾಗಿತ್ತು. `ದೇವದಾಸ್' ಕತೆ ಗೊತ್ತಲ್ಲ. ಭಾರತೀಯ ಚಲನಚಿತ್ರರಂಗ ಈಗ ಶತಮಾನೋತ್ಸವ ಸಂಭ್ರಮದಲ್ಲಿದೆ. ನೂರು ವರ್ಷಗಳಿಂದಲೂ ಮಹಿಳೆಯನ್ನು ಮನೆಯೊಳಗೇ ಇಟ್ಟು, ಅದೇ ಹಾಡು, ಅದೇ ಗೋಳುಗಳನ್ನು ಹೇಳುತ್ತಾ ಚಿತ್ರರಂಗ ಜಡ್ಡುಗಟ್ಟಿ ಹೋಗಿದೆ. ಬದಲಾವಣೆಯ ಗತಿಯಲ್ಲಿ ಮಹಿಳೆಯ ಪಾತ್ರವೂ ಬದಲಾಗಿರುವುದನ್ನು ಸಿದ್ಧಸೂತ್ರಕ್ಕೆ ಬದ್ಧರಾಗಿರುವ ಚಲನಚಿತ್ರ ನಿರ್ದೇಶಕರು ಒಪ್ಪಿಕೊಳ್ಳಲು ಸಿದ್ಧರಿಲ್ಲ.

ನಗರ ಪ್ರದೇಶದ ಹಾಗೂ ಗ್ರಾಮೀಣ ಪ್ರದೇಶದ ಮಹಿಳೆಯರು ಬೆಲೆ ಏರಿಕೆಯ ಬಿಸಿಯಲ್ಲಿ ದಿನನಿತ್ಯ ಬೆಂದು ಹೋಗುತ್ತಿದ್ದಾರೆ. ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಮಹಿಳೆಯರನ್ನು ಮೈಲುಗಟ್ಟಲೆ ನಡೆಯುವಂತೆ ಮಾಡಿದೆ. ದುಡಿಯುವ ಮಹಿಳೆಯೂ ಕಚೇರಿಯಲ್ಲಿನ ಶೋಷಣೆಯ ಜೊತೆಗೆ ಮನೆಗೆಲಸವನ್ನು ನಿಭಾಯಿಸಬೇಕಿದೆ.

ಅತ್ಯಾಚಾರ, ಮಾನಭಂಗ ಘಟನೆಗಳಂತೂ ಹಳ್ಳಿ ದಿಲ್ಲಿಯೆನ್ನದೆ ಎಲ್ಲ ಕಡೆ ಘಟಿಸುತ್ತಿದೆ. ಹಳ್ಳಿಗಳಲ್ಲಿ ಅನಕ್ಷರತೆ ತಾಂಡವವಾಡುತ್ತಿದೆ. ಹೇಳಲಾಗದ ರೋಗರುಜಿನಗಳು ಮಹಿಳೆಯರನ್ನು ಕಾಡುತ್ತಿದೆ. ವರದಕ್ಷಿಣೆ ಸಾವು, ಹೆಣ್ಣು ಭ್ರೂಣಹತ್ಯೆ ಸಾಮಾಜಿಕ ಪಿಡುಗಾಗಿದೆ. ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಮಹಿಳೆ ಸಮಸ್ಯೆಯ ಸುಳಿಯಲ್ಲೇ ಬೇಯುತ್ತಿದ್ದಾಳೆ.

ಆದರೆ ನಮ್ಮ ಚಲನಚಿತ್ರಗಳನ್ನು ವೀಕ್ಷಿಸಿದರೆ ಮಹಿಳೆ ಪುರುಷನ ಆಶ್ರಯದಲ್ಲಿ ನೆಮ್ಮದಿಯಿಂದಿದ್ದಾಳೆ! ಮಹಿಳೆಯರ ಸುತ್ತ ಕಥೆ ನೇಯ್ದು ಅದೇ ಭ್ರಾಂತಿಯ ಸಿನಿಮಾಗಳನ್ನು ಅನೂಚಾನವಾಗಿ ತಯಾರಿಸುತ್ತಿರುವುದರಿಂದಲೇ ನಮ್ಮ ಸಿನಿಮಾ ಮಹಿಳೆಯರ ಬಗ್ಗೆ ವಾಸ್ತವಿಕ ಚಿತ್ರಣ ಕೊಡಲು ಸಾಧ್ಯವಾಗಿಲ್ಲ.

ಟೀವಿ ಚಾನೆಲ್‌ಗಳು ಬಂದ ನಂತರ ಮಹಿಳಾಲೋಕದ ಚಿತ್ರಣದ ಸ್ವರೂಪವೇ ಬದಲಾಗಿದ್ದನ್ನು ಗುರುತಿಸಬಹುದು. ಎಪ್ಪತ್ತರ ದಶಕ ಇದ್ದಕ್ಕಿದ್ದಂತೆ ಒಂದು ಬದಲಾವಣೆಯನ್ನು ತಂದಿತು. ವಿದೇಶಿ ವಿಲಾಸದ ಬದುಕಿನತ್ತ ತುಡಿಯುತ್ತಿರುವ ಜೀವನದ ಚಿತ್ರಣ ಪ್ರೇಕ್ಷಕನಿಗೆ ಬದಲಾವಣೆಯತ್ತ ಗಮನಹರಿಸುವಂತೆ ಮಾಡಿತು. ಟೀವಿಗಳಲ್ಲಿ ಮಹಿಳಾ ಕಾರ್ಯಕ್ರಮಗಳು, ಧಾರಾವಾಹಿಗಳು ಚಿಂತನೆಯ ದಿಕ್ಕನ್ನು ಬದಲಾಯಿಸಿದರೂ, ಐಷಾರಾಮಿ ಜೀವನವನ್ನೇ ಮುಂದಿಡಲು ಆರಂಭಿಸಿದ್ದು ಮತ್ತೊಂದು ರೀತಿಯ ಬೆಳವಣಿಗೆ ಆಯಿತು.

ಇಂದು ನಾವು ನೋಡುತ್ತಿರುವ ನಗರ ಜೀವನಶೈಲಿಗೆ ಬಹುತೇಕ ಟೀವಿ ಚಾನೆಲ್‌ಗಳೇ ಕಾರಣ. ರಾಷ್ಟ್ರೀಯ ಚಾನೆಲ್‌ಗಳಲ್ಲಿ ಬರುವ ಧಾರಾವಾಹಿಗಳು ಬದುಕಿನ ಸಂಕೀರ್ಣತೆಯನ್ನು ಹೇಳುತ್ತಲೇ, ದ್ವಂದ್ವ ಮನಸ್ಥಿತಿಯನ್ನು ಕಣ್ಣಮುಂದಿಡುತ್ತವೆ. ಸಂಪ್ರದಾಯಬದ್ಧ ಮಾರ್ಗಗಳ ಕಟ್ಟುಪಾಡುಗಳನ್ನು ಮೀರುತ್ತಿವೆ. ಮಹಿಳೆಯರೇ ನಿರ್ದೇಶಕಿಯಾದರೂ, ಮಹಿಳೆಯರೇ ನಿರ್ಮಾಪಕಿಯಾದರೂ ಮಾರುಕಟ್ಟೆಯ ಅಂತರಂಗಕ್ಕೆ ತಕ್ಕಂತೆ ಚಿತ್ರ ನಿರ್ಮಿಸುತ್ತಾರೆಯೇ ಹೊರತು, ವಾಸ್ತವಿಕ ಚಿತ್ರಣ ನೀಡಲು ಮುಂದಾಗುವುದಿಲ್ಲ ಎನ್ನುವುದು ವಿಪರ್ಯಾಸ.

ಸಿನಿಮಾ, ಟೀವಿ ಚಾನಲ್‌ಗಳು ಮಹಿಳೆಗೆ ಹೊಸ ಹೊಸ ಇಮೇಜುಗಳನ್ನು ಕೊಡಲಾರಂಭಿಸಿ, ಮಧ್ಯಮವರ್ಗದ ಮಹಿಳೆಯರ ಕನಸುಗಳಿಗೆ ಹುಸಿ ರೆಕ್ಕೆಪುಕ್ಕ ಕಟ್ಟುವ ಕೆಲಸ ಮಾಡಲಾರಂಭಿಸಿದರು. ಹೀಗಾಗಿ ಮಹಿಳೆಯರ ಬಗ್ಗೆ ಹುಸಿ ಸಂಸ್ಕೃತಿಯೊಂದು ರೂಪುಗೊಳ್ಳುತ್ತಾ ಹೋಯಿತು.

ಈ ಗುಳ್ಳೆಗಳೂ ಒಡೆಯುವ ಕಾಲ ದೂರವಿಲ್ಲ.ಇಂತಹ ಜವಾಬ್ದಾರಿರಹಿತ ಮಾಧ್ಯಮಗಳನ್ನು ಏಕಸೂತ್ರಕ್ಕೆ ತರುವ ಕೆಲಸ ಆಗಬೇಕು. ಸಿನಿಮಾಗಾದರೆ ಸೆನ್ಸಾರ್ ಇದೆ. ಟೀವಿ ಚಾನೆಲ್‌ಗಳಿಗೆ ಯಾವುದೇ ಲಂಗುಲಗಾಮಿಲ್ಲ. ಮಾಧ್ಯಮಗಳ ರೂಪುರೇಷೆಗೆ ರಾಷ್ಟ್ರೀಯ ನೀತಿಯೊಂದಿದ್ದರೆ ಇಂತಹ ಎಲ್ಲ ಅನಾಹುತಗಳನ್ನು ತಪ್ಪಿಸಬಹುದು ಎನಿಸುತ್ತದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT