ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಂತ್ರಿಕ ಸ್ಪರ್ಶ

Last Updated 28 ಜನವರಿ 2015, 19:30 IST
ಅಕ್ಷರ ಗಾತ್ರ

ಅಂತರ್‌ರಾಷ್ಟ್ರೀಯ ಖ್ಯಾತಿಯ ಕೃಷಿ ತಜ್ಞ ನಾರಾಯಣರೆಡ್ಡಿ ಅವರ ಬದುಕು ಪಾರದರ್ಶಕ. ಶ್ರೀಗಂಧದಂತೆ ತನ್ನನ್ನು ತೇಯ್ದುಕೊಂಡು ಜಗತ್ತಿಗೆ ಸುಗಂಧವನ್ನು ನೀಡುವ ಕಾಯಕ ಅವರದು. ತಮ್ಮ ಎಂಬತ್ತನೆಯ ವಯಸ್ಸಿ­ನಲ್ಲಿ ಹದಿನೆಂಟರ ಹರೆಯದವರನ್ನು ನಾಚಿಸುವ ಉತ್ಸಾಹ.

ಮೊನ್ನೆ ಅವರೊಂದಿಗೆ ಒಂದೆರಡು ಗಂಟೆಗಳ ಕಾಲ ಕಳೆದಾಗ ಅವರು ಹೇಳಿದ ಒಂದು ಘಟನೆ ನನ್ನ ಮನಸ್ಸಿನಲ್ಲಿ ಗಟ್ಟಿಯಾಗಿ ಕುಳಿತಿತು. ಅದು ಪ್ರಪಂಚ­ಕ್ಕೊಂದು ಮಾದರಿ­­­ಯಾಗು­ತ್ತದೆಂದು ಎನ್ನಿಸಿತು. ನಾರಾಯಣರೆಡ್ಡಿ ದಂಪತಿ ಹಾಗೂ ಸ್ನೇಹಿ­ತರು ರೈಲಿನಲ್ಲಿ ಪ್ರವಾಸ ಮಾಡುತ್ತಿದ್ದರು. ರೈಲಿನಲ್ಲಿ ಊಟ­ಕ್ಕೆಂದು ಅವರ ಶ್ರೀಮತಿ ಹೋಳಿಗೆ, ಅವರೆಕಾಳು ಹುಳಿ, ಅನ್ನ ಮಾಡಿ ತಂದಿ­ದ್ದರು. ಆಕೆ ಅನ್ನ­ಪೂರ್ಣೆಯ ಪ್ರತಿ­ಮೂರ್ತಿ. ಎಲ್ಲರೂ ಹೊಟ್ಟೆ ತುಂಬ ತಿಂದರೂ ಇನ್ನೂ ಹತ್ತು ಜನಕ್ಕೆ ಆಗು­ವಷ್ಟು ಮಿಕ್ಕಿತ್ತು. ಆಗಲೇ ರಾತ್ರಿಯಾ­ಗುತ್ತಿದೆ. ಅಷ್ಟು ಒಳ್ಳೆಯ ಪದಾರ್ಥ ಕೆಟ್ಟು ಹೋಗುತ್ತದಲ್ಲ ಎಂಬ ದುಃಖ ಅವರನ್ನು ಕಾಡಿತು.

ಇವರಿದ್ದದ್ದು ಕಾಯ್ದಿರಿಸಿದ ಬೋಗಿಯಾಗಿದ್ದರಿಂದ ಮತ್ತೆ ಬೇರೆ ಯಾರೂ ಬರುವಂತಿರಲಿಲ್ಲ. ಯಾರಾದರೂ ಊಟ ದೊರಕದೆ ಇದ್ದವರು ಸಿಕ್ಕಾರೆಯೇ ಎಂದು ಹುಡುಕಿ­ಕೊಂಡು ನಾರಾಯಣ­ರೆಡ್ಡಿ ಅವರು ಬೇರೆ ಬೋಗಿಗಳಿಗೆ ಹೊರಟರು. ಮುಂದೆ ಒಂದೆರಡು ಬೋಗಿಗಳಲ್ಲಿ ಜನಜಾತ್ರೆ. ಅವು ಮೊದಲೇ ಕಾದಿರಿಸ­ದಿದ್ದ ಬೋಗಿ­ಗಳು. ಅಲ್ಲಿ ಒಂದೊಂದ­ರಲ್ಲಿ ನೂರು ಜನ ತುಂಬಿದ್ದಾರೆ. ಬಹಳಷ್ಟು ಜನ ನಿಂತೇ ಇದ್ದಾರೆ. ರೆಡ್ಡಿಯವರು ಗಮನಿಸಿದರು, ಅವರಲ್ಲಿ ಕೆಲವರು ತರುಣ, ತರುಣಿ­ಯರು. ಅವರೆಲ್ಲ ಪೊಲೀಸ್ ಇಲಾಖೆಯ ಸ್ಥಾನಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗೆ ಕಟ್ಟಲು ಬಂದವರು. ತುಂಬ ಬಡವರಂತೆ ಕಂಡರು. ಬಹುಶಃ ಅವರು ಊಟ ಮಾಡಿ­­­ರಲಿಕ್ಕಿಲ್ಲ ಎಂದುಕೊಂಡು ಅವರನ್ನು, ‘ಊಟ ಮಾಡಿದ್ದೀರೇ­ನಪ್ಪಾ?’ ಎಂದು ಕೇಳಿದರು. ಅವರು ಮಾಡಿದ್ದೇವೆ ಎಂಬಂತೆ ತಲೆ ಅಲ್ಲಾಡಿ­ಸಿದರು.

ಇವರು, ‘ಅಲ್ಲಪ್ಪಾ, ನಿಮ್ಮ ಮುಖ ನೋಡಿದ್ರೆ ಊಟ ಆಗಿಲ್ಲ ಎಂದು ಗೊತ್ತಾ­ಗು­ತ್ತದೆ. ಬನ್ನಿ, ನಾವು ತಂದಿದ್ದರಲ್ಲಿ ತುಂಬ ಊಟ ಉಳಿದಿದೆ. ಒಳ್ಳೇ ಪದಾರ್ಥ ಕೆಟ್ಟು ಹೋಗಬಾ­ರದಲ್ಲವೇ?’ ಎಂದು ಹೇಳಿ ಒಪ್ಪಿಸಿ­ಕೊಂಡು ತಮ್ಮ ಬೋಗಿಗೆ ಕರೆದು ತಂದರು. ಅವರನ್ನೆಲ್ಲ ಕೂಡ್ರಿಸಿ ಪ್ರೀತಿ­ಯಿಂದ ಬಡಿಸಿದರು. ಪಾಪ!  ಅವರಿಗೆ ಮಧ್ಯಾಹ್ನದ ಊಟವೂ ಸಿಕ್ಕಿರ­ಲಿಕ್ಕಿಲ್ಲ. ಮಕ್ಕಳು ಚೆನ್ನಾಗಿ ಊಟ ಮಾಡಿ­ದರು. ನಂತರ ಅಲ್ಲಿಗೆ ಟಿಕೆಟ್ ಪರೀಕ್ಷಕ ಬಂದಾಗ, ಇವರು, ‘ಸಾರ್, ಮಕ್ಕಳು ಇಲ್ಲಿಯೇ ಕೆಳಗೆ ಮಲಗಲಿ ಬಿಡಿ. ಪಾಪ! ಅಲ್ಲಿ ಬೆಳಗಿನವರೆಗೆ ಹೇಗೆ ನಿಂತಾರು?’ ಎಂದಾಗ ಆತ, ‘ಹಾಗಲ್ಲ ಅವರ ಬಳಿ ರಿಸರ್ವೇಶನ್ ಇಲ್ಲವಲ್ಲ?’ ಎಂದ.

ಇವರು, ‘ಬಿಡಿ ಸಾರ್, ಅವರ ಬಳಿ ಟಿಕೆಟ್ ಇದೆ. ಅವರೇನೂ ಕಳ್ಳರಲ್ಲ. ಅಷ್ಟಕ್ಕೂ ನಾವೇ ತಾನೇ ತಕರಾರು ಮಾಡ­ಬೇಕು?’ ಎಂದು ಬೋಗಿಯಲ್ಲಿ ಸುತ್ತಮುತ್ತ ಇದ್ದ­ವರನ್ನು ಒಪ್ಪಿಸಿ ಅಲ್ಲಿಯೇ ಕೆಳಗೆ ಮಲಗುವಂತೆ ವ್ಯವಸ್ಥೆ ಮಾಡಿದರು. ಆ ಟಿ.ಸಿ ಕೂಡ ದೊಡ್ಡ ಮನಸ್ಸಿನವನು, ಒಪ್ಪಿಕೊಂಡು ಹೋದ.
ಈ ಮಕ್ಕಳ ಕಣ್ಣಲ್ಲಿ ನೀರು, ‘ಸಾರ್, ನಮಗೆ ಹೊಟ್ಟೆ ತುಂಬ ಊಟ ಕೊಟ್ಟು ಮಲಗಲು ವ್ಯವಸ್ಥೆ ಮಾಡಲು ನೀವು ದೇವರಂತೆ ಬಂದಿರಿ’ ಎಂದರು.

ಆಗ ರೆಡ್ಡಿ­ಯವರು, ‘ಮಕ್ಕಳೇ, ದಯವಿಟ್ಟು ಈ ಘಟನೆಯನ್ನು ಮರೆಯಬೇಡಿ. ದೇವರ ದಯ­ದಿಂದ ನೀವು ಪರೀಕ್ಷೆ ಪಾಸಾಗಿ ಪೊಲೀಸ್ ಇಲಾಖೆಯನ್ನು ಸೇರಿದರೆ ಮನುಷ್ಯತ್ವ­ವನ್ನು ಕಳೆದು­ಕೊಳ್ಳದೇ ಪ್ರೀತಿಯಿಂದ, ಪ್ರಾಮಾಣಿಕತೆ­ಯಿಂದ ಜನರ ಸೇವೆ ಮಾಡಿ, ನಿಮ್ಮ ಬದುಕು ಬಂಗಾರವಾಗುತ್ತದೆ’ ಎಂದರು.

ಮಕ್ಕಳ ಕಣ್ಣಲ್ಲಿ ಮಿನುಗಿದ ಹನಿನೀರು, ತುಟಿಯಲ್ಲಿ ಹೊಳೆದ ಆತ್ಮವಿಶ್ವಾಸದ ಮಂದಹಾಸ, ಅವರು ಹಾಗೆಯೇ ಆಗುತ್ತಾರೆಂಬ ಭರವಸೆ ನೀಡಿತು. ರೆಡ್ಡಿಯವರು ಹೇಳು­ತ್ತಾರೆ, ‘ನಮ್ಮ ಯುವಕರದು ಯಾವುದೂ ತಪ್ಪಿಲ್ಲ, ತಪ್ಪೆಲ್ಲ ನಮ್ಮದೇ, ಹಿರಿಯರದು. ನಾವು ಅತ್ಯಂತ ಪ್ರೀತಿಯಿಂದ, ಪ್ರಾಮಾ­ಣಿ­ಕತೆ­ಯಿಂದ ಹೇಳಿದರೆ ಅವರನ್ನು ಖಂಡಿತವಾಗಿ ಪರಿವರ್ತಿಸಬಹುದು’. ನನಗೂ ಅದರಲ್ಲಿ ಖಚಿತವಾದ ನಂಬಿಕೆ ಇದೆ. ಮಕ್ಕಳನ್ನು ತಮ್ಮ ಪ್ರೀತಿಯ ಸ್ಪರ್ಶ­ದಿಂದ ಬದಲಾಯಿಸುವ ಶಕ್ತಿ­ಯನ್ನು ಪಡೆದ ನಾರಾಯಣರೆಡ್ಡಿ ಅವ­ರಂತಹ ಹಿರಿಯರ ಸಂಖ್ಯೆ ಸಾವಿರವಾಗಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT