ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಣಿಪ್ಪಾಡಿ ವರದಿ:ಮುಖ್ಯಮಂತ್ರಿ ಕೈಗೆ ಬಂದ ಮಾಣಿಕ್ಯ

Last Updated 11 ಏಪ್ರಿಲ್ 2016, 19:33 IST
ಅಕ್ಷರ ಗಾತ್ರ

ನಮ್ಮ ದೇಶದಲ್ಲಿ ನಡೆಯುವುದೆಲ್ಲವೂ ದೇವರ ಹೆಸರಿನಲ್ಲೇ ನಡೆಯುತ್ತದೆ- ಬಹಳ ದೊಡ್ಡ ಹಗಲು ದರೋಡೆಗಳೂ ಅಷ್ಟೆ. ದರೋಡೆಕೋರರು ದೇವರಿಗೂ ಹೆದರುವುದಿಲ್ಲ. ದೇವರು ಇಲ್ಲ ಅಥವಾ ಕಲ್ಲುಗುಡಿಯಲ್ಲಿ ದೇವರು ಇರುವುದಿಲ್ಲ ಎಂಬ ದಿವ್ಯಜ್ಞಾನ ಅವರಿಗೆ ಇರುತ್ತದೆಂದಲ್ಲ. ತಾವು ನಡೆಸುವ ದರೋಡೆಯಲ್ಲಿ ದೇವರಿಗೂ ಪಾಲು ಕೊಟ್ಟರಾಯಿತು ಎಂಬ ಭಂಡತನ ಅವರಿಗೆ ಇದ್ದೇ ಇರುತ್ತದೆ.

ದೇವರ ತಲೆ ಅಲಂಕರಿಸುವ ಹೊಳೆಹೊಳೆವ ವಜ್ರದ ಕಿರೀಟಗಳನ್ನು ಮೊದಲು ತಮ್ಮ ತಲೆ ಮೇಲೆ ಇಟ್ಟುಕೊಂಡು ಹೋಗಿ ಯಾವ್ಯಾವ ದೇವರಿಗೆ  ಯ್‍ಯಾರ್‍್ಯಾರು ಅರ್ಪಿಸಿದರು ಎನ್ನುವುದು ಎಲ್ಲರಿಗೂ ನೆನಪಿದೆ. ಸರ್ಕಾರದ ಸಂಪತ್ತು ದರೋಡೆ ಮಾಡಿ ಪಾಲು ಕೊಡುವ ವಿಷಯ ಬಿಡಿ, ಸ್ವಂತ ಒಡವೆವಸ್ತ್ರವನ್ನೇ ಕದ್ದರೂ ಕೊಲ್ಲೂರು ಮೂಕಾಂಬಿಕೆಯಂತೆ ದೇವರುಗಳೆಲ್ಲ ಬಾಯಿಲ್ಲದ ಮೂಕರು ಎನ್ನುವುದು ದರೋಡೆಕೋರರಿಗೆ ಚೆನ್ನಾಗಿ ಗೊತ್ತು. 

‘ಮನುಷ್ಯ ದೇವರ ಸೃಷ್ಟಿ ಅಲ್ಲ, ದೇವರು ಮನುಷ್ಯನ ಸೃಷ್ಟಿ’  ಎನ್ನುವ ವಾದಕ್ಕೆ ಇದೇ ಮೂಕಸಾಕ್ಷಿ ಆಗಿಬಿಡಬಹುದು! ಈಗ ‘ದೇವರ ಹೆಸರಿನಲ್ಲಿ ನಡೆವ ಅತ್ಯಂತ ದೊಡ್ಡ ಹಗಲು ದರೋಡೆ’ ಎಂಬ ಬಿರುದು ಬಂದಿರುವುದು ನಮ್ಮ ದೇಶದ ವಕ್ಫ್ ಮಂಡಲಿಗಳ ಭ್ರಷ್ಟಾಚಾರಕ್ಕೆ. ಅವುಗಳ ಸಂಪತ್ತೂ ಅಪರಿಮಿತ, ಅದರಂತೆ ಭ್ರಷ್ಟಾಚಾರವೂ ಅಪರಿಮಿತ.

ನಮ್ಮ ಚರಿತ್ರೆಯಲ್ಲಿ ಸುವರ್ಣ ಯುಗ ಎನ್ನುವುದು ಎಂದೂ ಇರಲಿಲ್ಲವಾದ್ದರಿಂದ ಎಲ್ಲ ಕಾಲದಲ್ಲೂ ಬಡತನ ಇತ್ತು ಮತ್ತು ಬಡವರಿಗಾಗಿ ಶ್ರೀಮಂತರು ದಾನಧರ್ಮ ಮಾಡುವುದು ಇದ್ದೇ ಇತ್ತು. ಹತ್ತಿರ ಸಾವಿರ ವರ್ಷಗಳ ಕಾಲ ಮುಸ್ಲಿಂ ದೊರೆಗಳ ಆಡಳಿತ ಕಂಡ ನಮ್ಮ ದೇಶದಲ್ಲಿ, ಎಲ್ಲದಕ್ಕೂ ಇರುವ ಹಾಗೆ ವಕ್ಫ್ ವ್ಯವಹಾರಕ್ಕೂ ಶತಮಾನಗಳ ಪರಂಪರೆ ಇದೆ. ವಕ್ಫ್‌ನ ಮೊದಲ ವಿವರ ಸಿಗುವುದು 13ನೇ ಶತಮಾನದಲ್ಲಿ ದೆಹಲಿಯ ಜಲಾಲುದ್ದೀನ್ ಖಿಲ್ಜಿಯ ಕಾಲದ ಬರಹದಲ್ಲಿ.  ಆ ಕಾಲಕ್ಕೂ ಹಿಂದಿನ, ಎರಡು ಹಳ್ಳಿಗಳ ರೂಪದಲ್ಲಿದ್ದ ವಕ್ಫ್ ಬಗ್ಗೆ ಈ ವಿವರ ಇದೆ.

ವಕ್ಫ್ ಎಂದರೆ ಸ್ಥೂಲವಾದ ಅರ್ಥದಲ್ಲಿ ಬಡವರು, ಅನಾಥರು, ದಿಕ್ಕಿಲ್ಲದ ಮಕ್ಕಳು, ವಿಧವೆಯರು, ತಲಾಕ್‌ನಿಂದ ನೊಂದ ಹೆಣ್ಣುಮಕ್ಕಳು ಮುಂತಾದವರಿಗೆ ಅನ್ನ ಬಟ್ಟೆ ವಸತಿ ಕೊಡುವುದಕ್ಕೆ, ಧರ್ಮಾರ್ಥ ಕಾರ್ಯಗಳಿಗೆ ಮತ್ತು ಬಡವರನ್ನು ಮೇಲೆತ್ತುವ ಶೈಕ್ಷಣಿಕ ಕಾರ್ಯಗಳಿಗೆ ವಿನಿಯೋಗಿಸಲೆಂದು ಶ್ರೀಮಂತರು ದೇವರ ಹೆಸರಿನಲ್ಲಿ ಮಾಡಿದ ದಾನದೇಣಿಗೆದತ್ತಿ.

ವಕ್ಫ್ ಎಂದರೆ ಉಳ್ಳವರು ದೇವರ ಹೆಸರಿನಲ್ಲಿ, ಇಲ್ಲದವರ ಉದ್ಧಾರಕ್ಕಾಗಿ ಕೊಟ್ಟಿರುವ ತಮ್ಮ ಗಳಿಕೆಯ ಒಂದು ಪಾಲು ಎನ್ನಬಹುದು. ಇದು ಜಮೀನು, ಕಟ್ಟಡ ಮೊದಲಾದ ಸ್ಥಿರಾಸ್ತಿ ರೂಪದಲ್ಲಿ ಇರಬಹುದು. ವಕ್ಫ್ ನಿರ್ವಹಿಸುವವರು ಶ್ರದ್ಧೆ, ಪ್ರಾಮಾಣಿಕತೆಗಳಿಂದ ಅದನ್ನು ಬಡವರ ಉದ್ಧಾರಕ್ಕೆ ವಿನಿಯೋಗಿಸುವ ಕೆಲಸ ಮಾಡಬೇಕು ಎನ್ನುವುದು ಮುಖ್ಯ ಆಶಯ.  

ಬ್ರಿಟಿಷರು ನಮ್ಮ ದೇಶವನ್ನು ಆಕ್ರಮಿಸುವ ಹೊತ್ತಿಗೆ ವಕ್ಫ್ ಪ್ರಮಾಣ ಎಷ್ಟಿತ್ತೆಂದರೆ, ಎಲ್ಲ ಬ್ರಿಟಿಷ್ ಪ್ರೆಸಿಡೆನ್ಸಿ ಆಡಳಿತಗಳೂ ವಕ್ಫ್‌ಗಳ ನಿರ್ವಹಣೆಯ ವಿಚಾರಕ್ಕೆ ವಿಶೇಷ ಗಮನ ಕೊಡಬೇಕಾಯಿತು. ದೆಹಲಿಯ ಭೂಪ್ರದೇಶದಲ್ಲಿ ಅಕ್ಷರಶಃ ಮುಕ್ಕಾಲು ಭಾಗ ವಕ್ಫ್‌ಗೆ ಸೇರಿತ್ತಂತೆ- ಇನ್ನು ಉಳಿದ ಊರುಗಳದು ಊಹೆಗೆ ಬಿಟ್ಟ ವಿಚಾರ.

ಸ್ವಾತಂತ್ರ್ಯ ಬಂದ ಮೇಲೆ 1954ರಲ್ಲಿ ಕಾಯಿದೆ ಬಂದರೂ ಯಾವ ಸರ್ಕಾರವೂ ವಕ್ಫ್ ನಿರ್ವಹಣೆಗೆ ಸರಿಯಾದ ವ್ಯವಸ್ಥೆ ಕಲ್ಪಿಸಲಿಲ್ಲ. ದೇಶದಲ್ಲಿ ಎಲ್ಲ ಕಡೆ ಬೆಳೆದ ಭ್ರಷ್ಟಾಚಾರದ ಪಿಡುಗು ವಕ್ಫ್‌ಗೂ ವಕ್ಕರಿಸಿತು. ಈಗ ದೇಶದಾದ್ಯಂತ 27 ರಾಜ್ಯ ವಕ್ಫ್ ಮಂಡಲಿಗಳಿವೆ, ಕೇಂದ್ರದಲ್ಲೂ ಇದೆ. 

ಮುಂದೆ 1995ರಲ್ಲಿ ವಕ್ಫ್ ಕಾಯಿದೆ ಸುಧಾರಣೆ ಕಂಡರೂ ದುರುಪಯೋಗವೂ ಅಗಾಧವಾಗಿ ಬೆಳೆಯಿತು. ಕಾಯಿದೆ ಪ್ರಕಾರ ವಕ್ಫ್ ಮಂಡಲಿಗಳಿಗೆ ಮುಸ್ಲಿಮ್ ಐಎಎಸ್ ಅಧಿಕಾರಿಗಳನ್ನೇ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಓ) ಹುದ್ದೆಗೆ ನೇಮಕ ಮಾಡಬೇಕು. ಮೊದಲಿಗೆ ಅಷ್ಟು ಮಂದಿ ಆ ದರ್ಜೆಯ ಅಧಿಕಾರಿಗಳು ಇರುವುದೇ ದುಸ್ತರ. ಮಂಡಲಿಯ ಅಧ್ಯಕ್ಷ ಸ್ಥಾನವೇನೋ ಆಯಾ ಪಕ್ಷದ ರಾಜಕೀಯ ಬೆಂಬಲಿಗರ ಪಾಲಾಗುತ್ತದೆ. ಆದರೆ, ಅನೇಕ ರಾಜ್ಯಗಳಲ್ಲಿ ವಕ್ಫ್ ಮಂಡಲಿಗಳನ್ನು ಯಾರೆಂದರೆ ಅವರು, ಹೇಗೆಂದರೆ ಹಾಗೆ ನಿರ್ವಹಣೆ ಮಾಡುತ್ತಾರೆ.   

ನಮ್ಮ ದೇಶದಲ್ಲಿ ಅತಿ ಹೆಚ್ಚು ಪ್ರಮಾಣದ ಜಮೀನು ಇರುವುದು ರೈಲ್ವೆ ಇಲಾಖೆಯ ಒಡೆತನದಲ್ಲಿ. ನಂತರದ ದೊಡ್ಡ ಭೂಮಾಲೀಕನೆಂದರೆ ರಕ್ಷಣಾ ಇಲಾಖೆ. ಮೂರನೆಯ ಸ್ಥಾನ ವಕ್ಫ್ ಮಂಡಲಿಗಳಿಗೆ. ಅಪಾರವಾದ ಈ ವಕ್ಫ್ ಭೂಸಂಪತ್ತಿನಲ್ಲಿ, ಕಳೆದ ಆರು ದಶಕಗಳಲ್ಲಿ ಶೇ 70ರಷ್ಟು ಪರಭಾರೆ ಆಗಿಹೋಗಿದೆಯಂತೆ.

ದೇಶದಲ್ಲಿ ಇನ್ನಳಿದುಳಿದ ವಕ್ಫ್ ಜಮೀನೂ ಸತತವಾಗಿ ಭೂಗಳ್ಳರ ಆಡುಂಬೊಲ. ಹೋಟೆಲ್‌ಗಳು, ಕ್ರೀಡಾಂಗಣಗಳು, ಕಾರ್ಖಾನೆಗಳು, ಮಾಲ್‌ಗಳು, ಮನೆಗಳು ಮುಂತಾದುವೆಲ್ಲ ಅಲ್ಲಿ ಬಂದು, ವರ್ಷಕ್ಕೆ ಪುಡಿಗಾಸು ಬಾಡಿಗೆ ಕೊಟ್ಟು ಮೆರೆಯುತ್ತಿವೆ. ಅಕ್ರಮ, ಅತಿಕ್ರಮಣ ಇತ್ಯಾದಿ ಏನೇನು ಅನೈತಿಕ ಕೆಲಸಗಳು ನಡೆಯಬಹುದೋ ಅವೆಲ್ಲವೂ ದೇವರ ಹೆಸರಿನಲ್ಲಿ ಕೊಟ್ಟ ಈ ಆಸ್ತಿಯಲ್ಲಿ ನಡೆಯುತ್ತಿವೆ.

ಈ ವಿವರಗಳನ್ನೆಲ್ಲಾ ನಮಗೆ ತಿಳಿಸಿ ಹೇಳಿದ್ದು, ರಾಜ್ಯಸಭೆಯ ಅಧ್ಯಕ್ಷರಾಗಿದ್ದ ಕೆ. ರೆಹಮಾನ್ ಖಾನ್ ನೇತೃತ್ವದ ಜಂಟಿ ಸಂಸದೀಯ ಸಮಿತಿಯ ವರದಿ. ಅವರೂ ಇಂಥದೊಂದು ಬ್ಯಾಂಕ್ ಆಸ್ತಿ ಅಕ್ರಮದ ಫಲಾನುಭವಿ ಎಂದು ಬೇರೊಂದು ವರದಿ ಹೇಳಿದ್ದು ಬೇರೆ ವಿಚಾರ.

ನ್ಯಾಯಮೂರ್ತಿ ರಾಜೇಂದ್ರ ಸಾಚಾರ್ ವರದಿ (2006) ಹೇಳುವ ಹಾಗೆ ದೇಶದಲ್ಲಿ 5 ಲಕ್ಷ  ನೋಂದಾಯಿತ ವಕ್ಫ್‌ಗಳಿವೆ. ಅವುಗಳ ಸುಪರ್ದಿಯಲ್ಲಿ 6 ಲಕ್ಷ ಎಕರೆ ಜಮೀನು ಇದೆ. ಇಂದಿನ ಮಾರುಕಟ್ಟೆ ದರದಲ್ಲಿ ಅದರ ಮೌಲ್ಯವೇ ಊಹಾತೀತ. ದೇಶದಾದ್ಯಂತ ಎಲ್ಲಾ ರಾಜ್ಯಗಳಲ್ಲಿ ವಕ್ಫ್ ಆಸ್ತಿಯನ್ನು ಬಲಾಢ್ಯರು ನುಂಗಿಹಾಕಿದ್ದಾರೆ.

ಎಲ್ಲೆಲ್ಲಿ ಎಷ್ಟೆಷ್ಟು ವಕ್ಫ್ ಆಸ್ತಿಯನ್ನು ಯಾರ್‍ಯಾರು ಎಷ್ಟೆಷ್ಟು ಅತಿಕ್ರಮಣ ಮಾಡಿಕೊಂಡಿದ್ದಾರೆ ಮುಂತಾದುವನ್ನೆಲ್ಲ ಸರಿಯಾಗಿ ತಿಳಿಯಲು ಒಂದು ರಾಷ್ಟ್ರೀಯ ಸಂಶೋಧನಾ ಆಯೋಗವೇ ಬೇಕಾಗುತ್ತದೆ. ಮುಂಬೈನಲ್ಲಿ ಕಣ್ಣುಕುಕ್ಕುವ ಮುಕೇಶ್ ಅಂಬಾನಿಯ ಬಹುಮಹಡಿ ಅರಮನೆಯೂ ಬಡವರ ಉದ್ಧಾರಕ್ಕಾಗಿ ಕೊಡಲಾಗಿದ್ದ ವಕ್ಫ್ ಆಸ್ತಿಯ ಮೇಲೇ ನಿಂತಿದೆ ಎಂಬ ಆರೋಪವಿದ್ದ ಮೇಲೆ, ಹೆಚ್ಚು ಹೇಳಬೇಕಿಲ್ಲ.

ಈ ಹಿನ್ನೆಲೆ ತಿಳಿದುಕೊಂಡರೆ ಕರ್ನಾಟಕದಲ್ಲೂ ವಕ್ಫ್ ಆಸ್ತಿ ಅಪಾರ ಪ್ರಮಾಣದಲ್ಲಿದೆ, ಹಾಗೆಯೇ ಅಪಾರವಾದ ಅಕ್ರಮ ಆಗಿಯೇ ಇರುತ್ತದೆ ಎನ್ನುವುದು ಯಾರಿಗಾದರೂ ಸುಲಭವಾಗಿ ಅರ್ಥವಾಗುತ್ತದೆ. ಆದರೆ ಏನು ಮಾಡೋಣ, ಅನ್ವರ್ ಮಾಣಿಪ್ಪಾಡಿ ವರದಿಯಲ್ಲಿ ಅಕ್ರಮ- ಅತಿಕ್ರಮಣ ಕುರಿತ ವಿವರಗಳಿದ್ದರೂ ಮತ್ತು ಅವು ಚೆನ್ನಾಗಿ ಅರ್ಥವಾಗುವಂತಿದ್ದರೂ ಇದರಲ್ಲಿ ಏನೂ ಇಲ್ಲ ಎಂದು ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಕೂಗಿ ಹೇಳುತ್ತದಲ್ಲ? ರಾಜಕಾರಣಿಗಳು ಮತ್ತು ರಾಜಕೀಯ ಪಕ್ಷಗಳು ತಮ್ಮ ರಾಜಕಾರಣಕ್ಕೋಸ್ಕರ ಬೇಕಾದಾಗ ಅಲ್ಪಸಂಖ್ಯಾತರ ಪರವಾಗಿಯೂ ಇರುತ್ತಾರೆ-

ರಾಜಕಾರಣದಲ್ಲಿ ತಾವು ಉಳಿಯ ಬೇಕಾದಾಗ ಅಲ್ಪಸಂಖ್ಯಾತರ ಹಿತರಕ್ಷಣೆ ಬಲಿಕೊಟ್ಟು ಅದಕ್ಕೆ ಸಂಬಂಧಿಸಿದ ಮುಖ್ಯವರದಿಯನ್ನೂ ವಿರೋಧಿಸುತ್ತಾರೆ. ರಾಜ್ಯದಲ್ಲಿ ವಕ್ಫ್ ಆಸ್ತಿಪಾಸ್ತಿಯನ್ನು ರಾಜಕಾರಣಿಗಳು ಸೇರಿ ಅನೇಕರು ದುರ್ಬಳಕೆ ಮಾಡಿಕೊಂಡಿರುವ ಅತಿದೊಡ್ಡ ಅಕ್ರಮವನ್ನು, ಅದನ್ನು ಕುರಿತ ವರದಿಯನ್ನು ರಾಜಕೀಯ ಪಕ್ಷಗಳು ಅವರವರ ಲಾಭಕ್ಕೆ ಅವರವರ ಕುಯುಕ್ತಿಗೆ ತಕ್ಕಂತೆ ಬಳಸಿಕೊಳ್ಳುತ್ತಿವೆ.

ಕಳೆದ ವಿಧಾನ ಮಂಡಲ ಅಧಿವೇಶನದಲ್ಲಿ ವಿಧಾನ ಪರಿಷತ್ತಿನಲ್ಲಿ ನಡೆದ ‘ವಕ್ಫ್ ವರದಿ ಮಂಡನೆ’ ಕುರಿತ ಬೃಹನ್ನಾಟಕ, ರಂಗದ ಮೇಲೆ ಹಲವು ಅಂಕಗಳನ್ನೂ ನೇಪಥ್ಯದಲ್ಲಿ ಹಲವು ಅಂಶಗಳನ್ನೂ ಒಳಗೊಂಡಿತ್ತು.

ನಮ್ಮ ರಾಜ್ಯದಲ್ಲಿ ಇರುವ ವಕ್ಫ್ ಆಸ್ತಿಪಾಸ್ತಿಯಲ್ಲಿ ಅರ್ಧದಷ್ಟು ಭಾಗ ದುರುಪಯೋಗವಾಗಿದೆ, ಅದರಲ್ಲಿ ಎಲ್ಲ ಪಕ್ಷಗಳ ಪ್ರಭಾವಿ ರಾಜಕಾರಣಿಗಳು, ಸರ್ಕಾರಿ ಅಧಿಕಾರಿಗಳು, ಭೂಮಿ ನುಂಗುವ ತಿಮಿಂಗಿಲಗಳು, ಭೂಗತಲೋಕದ ರಾಕ್ಷಸರು, ಸ್ಥಳೀಯ ಪುಂಡುಪೋಕರಿಗಳು ಪಾಲ್ಗೊಂಡಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಲೇ ಇದ್ದವು.

ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷರಾಗಿದ್ದ ಅನ್ವರ್ ಮಾಣಿಪ್ಪಾಡಿ ಈ ಕುರಿತು ಇಡೀ ರಾಜ್ಯದಲ್ಲಿ ತನಿಖೆಗಳನ್ನು ನಡೆಸಿ 7000 ಪುಟಗಳ ಮಹಾವರದಿಯನ್ನು 2012ರ ಮಾರ್ಚ್‌ನಲ್ಲಿ ಅಂದಿನ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಅವರಿಗೆ ಸಲ್ಲಿಸಿದ್ದರು.

‘ವಿಧಾನ ಮಂಡಲದಲ್ಲಿ ವರದಿ ಮಂಡನೆ ಮಾಡಲಾಗುವುದು, ಅತಿಕ್ರಮಣವಾಗಿರುವ ವಕ್ಫ್ ಜಮೀನಿನಲ್ಲಿ ಒಂದು ಅಂಗುಲವನ್ನೂ ವಾಪಸ್ ಪಡೆಯದೆ ಬಿಡುವುದಿಲ್ಲ’ ಎಂದು ವರದಿ ಸ್ವೀಕರಿಸಿದ ಅಂದಿನ ಮುಖ್ಯಮಂತ್ರಿಗಳೇನೋ ಘೋಷಿಸಿದ್ದರು.

ವರದಿಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್‌ಗೆ ಸೇರಿದ ಸುಮಾರು 38 ಮಂದಿ ಪ್ರಭಾವಿ ರಾಜಕಾರಣಿಗಳು ವಕ್ಫ್ ಆಸ್ತಿಪಾಸ್ತಿ ಕಬಳಿಸಿರುವ, ಮಾರಾಟ ಮಾಡಿಸಿರುವ, ಖರೀದಿಸಿರುವ ವಿವರಗಳಿವೆ ಎಂಬುದೆಲ್ಲ ಬಹಿರಂಗವಾಗಿತ್ತು. ಬಿಜೆಪಿ ಆಡಳಿತದ ಅವಧಿಯಲ್ಲಿ ನೇಮಕಗೊಂಡ ಆಯೋಗ ಒಪ್ಪಿಸಿದ ವರದಿಯಲ್ಲಿ, ಬಿಜೆಪಿ ರಾಜಕಾರಣಿಗಳ ಹೆಸರು ಇಲ್ಲದಿರುವುದು ತೀರಾ ಸಹಜವಷ್ಟೆ ಎಂದು ಹೇಳಬೇಕಿಲ್ಲ.

ಆದರೆ ಸಾವಿಲ್ಲದ ಮನೆಯ ಸಾಸಿವೆ ಇಲ್ಲದಿರುವಂತೆ, ವಕ್ಫ್ ಆಸ್ತಿ ಕಬಳಿಸದವರಿಲ್ಲದ ರಾಜಕೀಯ ಪಕ್ಷವೂ ಇಲ್ಲ. ಕೊನೆಗೆ ಸದಾನಂದಗೌಡರು ವರದಿಯನ್ನು ಲೋಕಾಯುಕ್ತಕ್ಕೆ ಒಪ್ಪಿಸಿ ತನಿಖೆ ಮಾಡುವಂತೆ ಹೇಳಿಬಿಟ್ಟರು. ಮುಂದೆ ಅಧಿಕಾರ ಹಿಡಿದ ಜಗದೀಶ ಶೆಟ್ಟರ್ ಅದರ ಬಗ್ಗೆ ಕ್ರಮ ಕೈಗೊಳ್ಳುವಷ್ಟರಲ್ಲಿ ಸರ್ಕಾರದ ಅವಧಿ ಮುಗಿದು ಚುನಾವಣೆ ಬಂತು. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ದಿನವೇ ಆ ವರದಿ ಸತ್ತುಹೋಯಿತು ಎಂದು ಹೇಳಬಹುದು.

ದೇಶದಲ್ಲಿ ಎಷ್ಟೋ ಸರ್ಕಾರಗಳ ಅವಧಿಯಲ್ಲಿ ಎಷ್ಟೆಷ್ಟೋ ಆಯೋಗಗಳು ನೀಡಿರುವ ವರದಿಗಳು ಒಪ್ಪಿಗೆ ಪಡೆಯದೆ, ಮಂಡನೆಯಾಗದೆ, ಮಂಡಿತವಾಗಿ ಒಪ್ಪಿಗೆ ಪಡೆದರೂ ಜಾರಿಯಾಗದೆ ಕೊಳೆಯುತ್ತಿರುವ ಭಂಡ ಇತಿಹಾಸ ಇರುವಾಗ, ನಾವು ಯಾರಿಗೂ ಹೆದರಬೇಕಿಲ್ಲ ಎಂದು ಸರ್ಕಾರ ಅಂದುಕೊಂಡಿತ್ತು. ಆದರೆ ಈ ಅವಹೇಳನ ವಿರೋಧಿಸಿ ಬಂದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯಲ್ಲಿ ಹೈಕೋರ್ಟ್‌ನ ಮುಂದೆ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಅವರು, ಪ್ರಮಾಣಪತ್ರ ಸಲ್ಲಿಸಿ ವಿಧಾನ ಮಂಡಲದಲ್ಲಿ ಮಾಣಿಪ್ಪಾಡಿ ವರದಿ  ಮಂಡಿಸುವುದಾಗಿ ಹೇಳಿದ್ದರು.

ಸರ್ಕಾರ ಮಾಣಿಪ್ಪಾಡಿ ವರದಿ ಮಂಡನೆ ಮಾಡದೆ ಮೊಂಡಾಟ ಮಾಡುತ್ತಿರುವುದೇ ಅದರ ಹೂರಣವನ್ನೂ ಕಾರಣವನ್ನೂ ಸಾರಿ ಹೇಳುತ್ತಿದೆ. ವರದಿ ಮಂಡನೆ ವಿಚಾರದಲ್ಲಿ ಮೂರೂಬಿಟ್ಟ ಸರ್ಕಾರ, ಮಾಧ್ಯಮದ ವರದಿ-ವಿಚಾರಣೆಗಳಿಗಂತೂ ಹೆದರುವುದಿಲ್ಲ. ಹೈಕೋರ್ಟ್‌ ಮುಂದೆ ತಾನೇ ನೀಡಿದ್ದ ಪ್ರಮಾಣಪತ್ರವನ್ನೂ  ಗಣನೆಗೆ ತೆಗೆದುಕೊಳ್ಳದ ಸರ್ಕಾರ, ವಿರೋಧ ಪಕ್ಷಗಳ ಆಗ್ರಹಕ್ಕೆ, ವಿಧಾನ ಪರಿಷತ್ ಸಭಾಪತಿಯ ರೂಲಿಂಗ್‌ಗೆ ಅಥವಾ ರಾಜ್ಯಪಾಲರ ಕೋಪತಾಪಕ್ಕೆ ಹೆದರುವುದಿಲ್ಲ.

ವರದಿ ಮಂಡನೆಗೆ ಯೋಗ್ಯವಲ್ಲ, ವರದಿಯನ್ನು ತಿರಸ್ಕರಿಸಲಾಗಿದೆ ಎಂದೆಲ್ಲ ಹೇಳಿದ ಸರ್ಕಾರ, ವರದಿ ಮೇಲೆ ಕ್ರಮ ಕೈಗೊಂಡ ವರದಿಯನ್ನು ಮಂಡಿಸಲಾಗಿದೆ ಎಂದು ಹೇಳುತ್ತಿದೆ. ಆದರೆ ಹಿಂದಿನ ಸರ್ಕಾರ ವರದಿಯನ್ನು ಲೋಕಾಯುಕ್ತಕ್ಕೆ ಒಪ್ಪಿಸಿದ್ದ ಆದೇಶವನ್ನು ಗಡಿಬಿಡಿಯಲ್ಲಿ ಹಿಂತೆಗೆದುಕೊಂಡಿದೆ. ಇವೆಲ್ಲಾ ನಿಜವಾಗಿ ಏನನ್ನು ಹೇಳುತ್ತಿವೆ?

ಮಾಣಿಪ್ಪಾಡಿ ವರದಿ ಮಂಡನೆ ಆಗಬೇಕು ಎಂಬ ವಿರೋಧ ಪಕ್ಷಗಳ ಆಗ್ರಹಕ್ಕೆ ಅವರದೇ ಆದ ಹಲವು ಕಾರಣಗಳು ಇದ್ದೇ ಇರುತ್ತವೆ. ಆದರೆ ಆ ವರದಿ ಮಂಡನೆ ಮಾಡದಿರುವುದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಅವರದೇ ಆದ ಹಲವು ಕಾರಣಗಳು ಇದ್ದೇ ಇವೆ. ಮುಖ್ಯವಾಗಿ, ಮುಖ್ಯಮಂತ್ರಿಗಳು ತಮ್ಮ ಅಲುಗಾಡುತ್ತಿರುವ(?) ಖುರ್ಚಿಗೆ ವರದಿಯನ್ನು ಊರುಗೋಲು ಮಾಡಿಕೊಂಡಿದ್ದಾರೆ ಎಂಬ ವರದಿಯೂ ನಿಜವಿರಬಹುದು.

ತಮ್ಮ ಏಳಿಗೆಗಾಗಿ ಬಳಕೆಯಾಗಬೇಕಾದ ಅಪಾರ ಸಂಪತ್ತನ್ನು ಲೂಟಿಕೋರರಿಗೆ ಕಳೆದುಕೊಂಡ ಬಡಮುಸ್ಲಿಮರ ದೌರ್ಭಾಗ್ಯವೇ ಮುಖ್ಯಮಂತ್ರಿಗಳ ಪಾಲಿಗೆ ಊರುಗೋಲು ಭಾಗ್ಯವಾಗಿ ಅಥವಾ ಕೈಗೆ ಸಿಕ್ಕ ಬೆದರಿಕೆ ದಂಡದ ಭಾಗ್ಯವಾಗಿ ಪರಿಣಮಿಸಿರಬಹುದು. ಜೊತೆಗೆ, ಮುಗುಳ್ನಗೆ ಭಾಗ್ಯವನ್ನೂ ಕೊಡದಿದ್ದ ಮಲ್ಲಿಕಾರ್ಜುನ ಖರ್ಗೆ ಮೆಲ್ಲಗೆ ಇಲ್ಲಿಗೇ ಬಂದು ಭೇಟಿ ಭಾಗ್ಯವನ್ನು ಕೊಟ್ಟರು.

ತಮ್ಮ ನಾಯಕರು ಕಬಳಿಸಿದ ವಕ್ಫ್ ಆಸ್ತಿ ವಶಕ್ಕೆ ಒತ್ತಾಯಿಸಿ ಭಿನ್ನಮತೀಯರು ಹೈಕಮಾಂಡ್‌ಗೆ ದೂರು ಕೊಡಬಹುದಲ್ಲಾ ಅಂದುಕೊಂಡರೆ, ಅದರ ನಾಯಕರೇ ನ್ಯಾಷನಲ್ ಹೆರಾಲ್ಡ್ ಆಸ್ತಿ ನುಂಗಿದ್ದನ್ನು ಜೀರ್ಣಿಸಿಕೊಳ್ಳಲುಪರದಾಡುತ್ತಿದ್ದಾರೆ. ಒಟ್ಟಿನಲ್ಲಿ ಮಾಣಿಪ್ಪಾಡಿ ವರದಿ ಸರ್ಕಾರದ ಪಾಲಿಗೆ ಮಾಣಿಕ್ಯದೀಪವಾಗಿ ಕಂಡಿರಬಹುದು. ಇದರಿಂದ ಸಿದ್ದರಾಮಯ್ಯನವರ ಆಡಳಿತ ಏನು ಉಳಿಸಿಕೊಂಡಿತೋ ಗಳಿಸಿಕೊಂಡಿತೋ ಗೊತ್ತಿಲ್ಲ, ಆದರೆ ಕಳೆದುಕೊಂಡದ್ದು ಜನತೆ ಇಟ್ಟಿದ್ದ ನಂಬಿಕೆಯನ್ನು ಎಂದು ಮಾತ್ರ ಗೊತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT