ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾದೇಗೌಡ, ಪಿಎಸ್‌ವಿಗೆ ಅಭಿನಂದನೆಗಳು

Last Updated 28 ಆಗಸ್ಟ್ 2011, 19:30 IST
ಅಕ್ಷರ ಗಾತ್ರ

ಇಂದು, ಆಗಸ್ಟ್ 29, ರಾಷ್ಟ್ರೀಯ ಕ್ರೀಡಾ ದಿನ. ಭಾರತದ ಹಾಕಿ ಆಟವನ್ನು ಸುವರ್ಣಾಕ್ಷರಗಳಲ್ಲಿ ಬರೆದಿಟ್ಟ ಮಾಂತ್ರಿಕ ಧ್ಯಾನಚಂದ್ ಅವರ ಜನ್ಮದಿನ. ವಿಶ್ವ ಹಾಕಿ ರಂಗದಲ್ಲಿ ಭಾರತಕ್ಕೆ ಹೆಸರು ತಂದುಕೊಟ್ಟ ಧ್ಯಾನಚಂದರಿಗೆ ಬದುಕಿದ್ದಾಗಲೂ ಏನೂ ಸಿಗಲಿಲ್ಲ.

ಸತ್ತ ಮೇಲೂ ಏನೂ ಸಿಗಲಿಲ್ಲ. ಆದರೆ ಅವರ ಹೆಸರಿನಲ್ಲಿ ಕ್ರೀಡಾ ದಿನಾಚರಣೆ ಆಚರಿಸುತ್ತಿರುವುದೇ ಅವರಿಗೆ ನಾವು ಸಲ್ಲಿಸಿರುವ ದೊಡ್ಡ ಗೌರವ. ಅವರಿಗೆ ಮರಣೋತ್ತರವಾಗಿ `ಭಾರತ ರತ್ನ~ ಪ್ರಶಸ್ತಿ ಕೊಡಬೇಕು ಎಂದು ಅವರ ಮಗ ಅಶೋಕಕುಮಾರ್ (ಇವರೂ ಕೂಡ ಅಂತರರಾಷ್ಟ್ರೀಯ ಹಾಕಿ ಆಟಗಾರ) ಹೇಳಿದ್ದನ್ನು ಯಾರೂ ಕಿವಿಯ ಮೇಲೆ ಹಾಕಿಕೊಂಡಂತಿಲ್ಲ.

ಜನರಿಗೆ ಸಹಜವಾಗಿಯೇ ಪ್ರತಿದಿನ ಸಚಿನ್ ತೆಂಡೂಲ್ಕರ್ ನೆನಪಾದರೆ, ಧ್ಯಾನಚಂದ್ ವರ್ಷಕ್ಕೊಮ್ಮೆ ನೆನಪಾಗುತ್ತಾರೆ. ಭಾರತದ ಹಾಕಿ ರಂಗ ಕುಸಿದು ಪಾತಾಳ ಸೇರಿದ ಮೇಲಂತೂ ಯಾವ ಹಾಕಿ ಆಟಗಾರನ ಬಗ್ಗೆಯೂ ಜನ ಯೋಚಿಸುವುದಿಲ್ಲ.

ದೇಶದ ಅಗ್ರಮಾನ್ಯ ಕ್ರೀಡಾಪಟುಗಳಿಗೆ ವಿವಿಧ ರಾಷ್ಟ್ರೀಯ ಪ್ರಶಸ್ತಿಗಳನ್ನು ನೀಡಲಾಗುತ್ತದೆ. ಅರ್ಜುನ ಪ್ರಶಸ್ತಿಯೇ ಆಗಲಿ, ಖೇಲ್ ರತ್ನ ಅಥವಾ ದ್ರೋಣಾಚಾರ್ಯ, ಧ್ಯಾನಚಂದ್ ಪ್ರಶಸ್ತಿಗಳೇ ಆಗಲಿ ಎಂದೂ ವಿವಾದಗಳಿಂದ ಮುಕ್ತವಾಗೇ ಇಲ್ಲ.

ಈ ಸಲ `ರಾಜೀವ್ ಗಾಂಧೀ ಖೇಲ್ ರತ್ನ~ ಪ್ರಶಸ್ತಿಗೆ ಪಾತ್ರರಾಗಿರುವ ಷೂಟರ್ ಗಗನ್ ನಾರಂಗ್ ಅದು ತಮಗೆ ಕಳೆದ ವರ್ಷವೇ ಬರಬೇಕಿತ್ತು ಎಂದು ಹೇಳಿದ್ದರು. ಅರ್ಜುನ ಪ್ರಶಸ್ತಿಗಂತೂ ಪ್ರತಿವರ್ಷ ನೂರಾರು ಮಂದಿ ಕ್ರೀಡಾಪಟುಗಳು ವಶೀಲಿ ಹಚ್ಚುತ್ತಾರೆ, ದುಡ್ಡು ಖರ್ಚು ಮಾಡುತ್ತಾರೆ.

ಎಲ್ಲ ರೀತಿಯ ಗೋಲ್‌ಮಾಲ್ ನಂತರ ಪ್ರಶಸ್ತಿ ಸಿಗದಾಗ ಟೀಕಿಸತೊಡಗುತ್ತಾರೆ. ಈ ಸಲವೂ ಅಸಮಾಧಾನದ ಹೊಗೆ ಆಡುತ್ತಲೇ ಇದೆ. (ಅಥ್ಲೆಟಿಕ್ ಫೆಡರೇಷನ್ ಕಾರ್ಯದರ್ಶಿ ಲಲಿತ್ ಭಾನೊಟ್ ತಿಹಾರ್ ಜೈಲಿನಲ್ಲಿ ತಮ್ಮ ಗುರು ಸುರೇಶ್ ಕಲ್ಮಾಡಿ ಜೊತೆ ಹಲ್ಲು ಮಸೆಯುತ್ತ ಕುಳಿತಿರುವುದರಿಂದ  ಅಥ್ಲೆಟಿಕ್ಸ್‌ನಲ್ಲಿ ಹೆಚ್ಚಿನ ವಿವಾದ ಇರಲಿಕ್ಕಿಲ್ಲ.)

ಇದೇ ಸಂದರ್ಭದಲ್ಲಿ ಇಂದು ಬೆಂಗಳೂರಿನಲ್ಲೂ `ಏಕಲವ್ಯ~ ಪ್ರಶಸ್ತಿ ವಿತರಿಸಲಾಗುತ್ತಿದೆ. ಪರಿಸ್ಥಿತಿ ಇಲ್ಲೂ ಹಾಗೆಯೇ ಇದೆ. ಆದರೆ ಜೀವಮಾನ ಸಾಧನೆಗಾಗಿ ಇಬ್ಬರು ತರಬೇತುದಾರರಿಗೆ ಪ್ರಶಸ್ತಿ ಕೊಡಲಾಗುತ್ತಿದೆ.
 
ವಾಲಿಬಾಲ್‌ನ ಎಂ. ಎಸ್. ಮಾದೇಗೌಡ ಮತ್ತು ಕ್ರಿಕೆಟ್‌ನ ಪಿ. ಎಸ್. ವಿಶ್ವನಾಥ್ ಈ ಗೌರವಕ್ಕೆ ಪಾತ್ರರಾಗಿದ್ದಾರೆ. ಇವರಿಬ್ಬರ ಬಗ್ಗೆ ಯಾರೂ ತಕರಾರು ಎತ್ತಿಲ್ಲ, ಎತ್ತುವ ಹಾಗೂ ಇಲ್ಲ. ಇಬ್ಬರೂ ತಮ್ಮ ಕ್ಷೇತ್ರಗಳಲ್ಲಿ ಸುದೀರ್ಘ ಸೇವೆ ಸಲ್ಲಿಸಿದವರು.

`ತಡವಾದರೂ ತಪ್ಪಿಹೋಗಬಾರದು~ ಎಂಬ ಮಾತಿನಂತೆ ಇಬ್ಬರಿಗೂ ಇದು ತಡವಾಗಿ ಬಂದರೂ ಬಂತಲ್ಲ ಎಂಬ ಸಮಾಧಾನ ಇದೆ. ಕರ್ನಾಟಕ ವಾಲಿಬಾಲ್ ತಂಡದ ಆಟ ನೋಡಲು ಹೋದರೆ ಮೊದಲು ಕೇಳಿಬರುತ್ತಿದುದು ಮಾದೇಗೌಡ ಅವರ ಜೋರು ಧ್ವನಿ. ಅವರಿಗೆ ಆಟ ಬಿಟ್ಟು ಇನ್ನೇನೂ ಕಾಣುತ್ತಿರಲಿಲ್ಲ.

ವಿಶ್ವವಿದ್ಯಾಲಯ ಮತ್ತು ರಾಜ್ಯ ಆಟಗಾರರಾಗಿ ಹಲವು ರಾಷ್ಟ್ರೀಯಚಾಂಪಿಯನ್‌ಷಿಪ್‌ಗಳಲ್ಲಿ ಆಡಿದ ಅವರು ಎನ್‌ಐಎಸ್ ಪರೀಕ್ಷೆ ಪಾಸಾಗಿ ತರಬೇತುದಾರರಾದರು.

ಕಳೆದ 32 ವರ್ಷಗಳಿಂದ ವಾಲಿಬಾಲ್ ತರಬೇತುದಾರರಾಗಿರುವ ಮಾದೇಗೌಡ ಹತ್ತಾರು ಅಂತರರಾಷ್ಟ್ರೀಯ ಆಟಗಾರರನ್ನು ರೂಪಿಸಿದವರು. ಇವರ ಕೈಲಿ ಆಟ ಕಲಿತ ನೂರಾರು ಮಂದಿ ರಾಷ್ಟ್ರೀಯ ಮಟ್ಟದ ಆಟಗಾರರಾಗಿ ಹೊರಹೊಮ್ಮಿದ್ದಾರೆ.

ಕರ್ನಾಟಕದ ವಾಲಿಬಾಲ್ ಎಂದರೆ ಕೇಳಿಬರುವ ಮೊದಲ ಹೆಸರೇ ಮಾದೇಗೌಡ. ಇವರು ಭಾರತ ತಂಡದ ತರಬೇತುದಾರರಾಗಿಯೂ ಕೆಲಸ ಮಾಡಿದ್ದಾರೆ. 2004 ರ ಏಷ್ಯನ್ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಗೆದ್ದ ಭಾರತದ ಯುವ ತಂಡಕ್ಕೆ ಇವರೇ ತರಬೇತುದಾರರಾಗಿದ್ದರು. ವಯಸ್ಸು 61 ತುಂಬಿದರೂ ಅವರ ಉತ್ಸಾಹ, ಆಟದ ಮೇಲಿನ ಪ್ರೀತಿ ಕಡಿಮೆಯಾಗಿಲ್ಲ. ಆದರೆ ಇವರನ್ನು ಇನ್ನೂ ಧ್ಯಾನಚಂದ್ ಅಥವಾ ದ್ರೋಣಾಚಾರ್ಯ ಪ್ರಶಸ್ತಿಗೆ ಪರಿಗಣಿಸಲಾಗಿಲ್ಲ.

ಕ್ರಿಕೆಟ್‌ನಲ್ಲಿ ಇದೇ ರೀತಿ ಹೆಸರು ಮಾಡಿದವರು ಪಿ.ಎಸ್. ವಿಶ್ವನಾಥ್. ಇವರು ಮಾದೇಗೌಡ ಅವರಿಗಿಂತ ಹಳಬರು. ಐವತ್ತರ ದಶಕದಲ್ಲಿ ರಾಜ್ಯ ರಣಜಿ ತಂಡದಲ್ಲಿದ್ದ ಅವರು ಆಕರ್ಷಕ ಬ್ಯಾಟ್ಸಮನ್ ಆಗಿದ್ದರು.
 
1965 ರಿಂದ ತರಬೇತಿ ನೀಡಲು ಆರಂಭಿಸಿದ ಇವರು ಜಿ. ಆರ್. ವಿಶ್ವನಾಥ್, ಬ್ರಿಜೇಶ್ ಪಟೇಲ್, ಅನಿಲ್ ಕುಂಬ್ಳೆ, ರಾಹುಲ್ ದ್ರಾವಿಡ್ ಮುಂತಾದ ಅಂತರರಾಷ್ಟ್ರೀಯ ಆಟಗಾರರನ್ನು ಬೆಳೆಸಿದವರು.

ರಣಜಿ ಆಡಿದ ಆಟಗಾರರಿಗಂತೂ ಲೆಕ್ಕವಿಲ್ಲ. ಸೌಮ್ಯ ಸ್ವಭಾವದ ಅವರು ಎಲ್ಲ ಆಟಗಾರರಿಂದ ಅಪಾರ ಗೌರವ ಸಂಪಾದಿಸಿದವರು. ಅವರಿಗೀಗ 85 ವರ್ಷ ವಯಸ್ಸು. ಫೋನಿನಲ್ಲಿ ಮಾತನಾಡಿದಾಗ, ಅವರಿಗೆ ಬಹಳ ಸಂತೋಷವಾಗಿತ್ತು.

ತಡವಾದರೂ ರಾಜ್ಯ ಸರ್ಕಾರ ತಮ್ಮನ್ನು ಗುರುತಿಸಿತಲ್ಲ ಎಂಬ ಸಮಾಧಾನ ಅವರಲ್ಲಿತ್ತು. ಇವರಿಗೆ ಜೀವಮಾನ ಸಾಧನೆ ಗೌರವ ಸಂದಿರುವುದು ಅನಿಲ್ ಕುಂಬ್ಳೆ ಅವರಲ್ಲೂ ಸಂತಸ ಮೂಡಿಸಿರಬಹುದು.

ರಾಜ್ಯ ಕ್ರಿಕೆಟ್ ಸಂಸ್ಥೆ ಅಧ್ಯಕ್ಷರಾಗಿರುವ ಅನಿಲ್ ತಮ್ಮ ಗುರುವಂದನೆ ಸಲ್ಲಿಸಲು ಇದು ಸಕಾಲ. ಹಿರಿಯ ಆಟಗಾರರು ಮತ್ತು ತರಬೇತುದಾರರನ್ನು ಸನ್ಮಾನಿಸುವುದು ಸಂಸ್ಥೆಯ ಕರ್ತವ್ಯವೂ ಹೌದು, ಹೆಮ್ಮೆಯ ವಿಷಯವೂ ಹೌದು.

ಕ್ರೀಡೆಯ ಹೆಸರಲ್ಲಿ ಧ್ಯಾನಚಂದ್ ಜನ್ಮದಿನಾಚರಣೆ, ಕ್ರೀಡೆಯ ಅತ್ಯುನ್ನತ ಪ್ರಶಸ್ತಿಗಳ ವಿತರಣೆ ಸಂಭ್ರಮದಲ್ಲೂ ಭಾರತದ ಇಂದಿನ ಕ್ರೀಡಾರಂಗ ಬಡವಾಗಿಯೇ ಕಾಣುತ್ತಿದೆ. ಹಾಕಿ ತಂಡ ಲಂಡನ್ ಒಲಿಂಪಿಕ್ ಕ್ರೀಡೆಗಳಿಗೆ ಇನ್ನೂ ಅರ್ಹತೆ ಗಳಿಸಿಲ್ಲ.

ಉದ್ದೀಪನ ಮದ್ದು ಸೇವಿಸಿದ್ದಕ್ಕಾಗಿ ಪ್ರತಿಬಂಧಕ್ಕೊಳಗಾಗಿರುವ ಅಶ್ವಿನಿಗೆ ಯಾವ ಪ್ರಶಸ್ತಿಯೂ ಸಿಗುವುದಿಲ್ಲ. ಭಾರತ ಕ್ರಿಕೆಟ್ ತಂಡ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯಗಳಲ್ಲಿ ಹಿಗ್ಗಾಮುಗ್ಗಾ ಹೊಡೆಸಿಕೊಂಡಿದೆ. ಆದರೂ ನಾಯಕ ಮಹೇಂದ್ರಸಿಂಗ್ ದೋನಿ ಮುಖದಲ್ಲಿ ನಗು ಅರಳಿದೆ. ಧ್ಯಾನಚಂದ್ ಜನ್ಮದಿನದಂದು ಅವರು ಡಾ. ಮಹೇಂದ್ರಸಿಂಗ್ ದೋನಿ ಆಗಲಿದ್ದಾರೆ.

ಲೀಸ್ಟರ್‌ನ ಡಿ ಮಾಂಟ್‌ಫರ್ಟ್ ವಿಶ್ವವಿದ್ಯಾಲಯ, ವಿಶ್ವ ಕಪ್ ಗೆದ್ದದ್ದಕ್ಕಾಗಿ ದೋನಿ ಅವರಿಗೆ ಗೌರವ ಡಾಕ್ಟರೇಟ್ (Doctor of Laws) ನೀಡಲಿದೆ. ಸೋಮವಾರ ಭಾರತ ತಂಡ ಲೀಸ್ಟರ್‌ಷೈರ್ ವಿರುದ್ಧ ಅಭ್ಯಾಸ ಪಂದ್ಯವೊಂದನ್ನು ಆಡಲಿದೆ.
 
ಡಾ. ದೋನಿ ಅವರಿಗೆ ಈ ಗೌರವ, ಇಂಗ್ಲೆಂಡ್ ವಿರುದ್ಧದ ಒಂದು ದಿನಗಳ ಪಂದ್ಯದಲ್ಲಿ ಶುಭದಾಯಕವಾಗುವುದೇ ಎಂಬುದನ್ನು ಕಾಯ್ದುನೋಡಬೇಕಷ್ಟೇ. ಟೆಸ್ಟ್‌ನಲ್ಲಿ ಹೋಗಿರುವ ಮಾನ ದಿಢೀರ್ ಕ್ರಿಕೆಟ್‌ನಲ್ಲಾದರೂ ಬರಲಿ.

ಲಾಸ್ಟ್ ಬಾಲ್: ಟೆಸ್ಟ್ ಸರಣಿಯ ಸೋಲಿನ ನಂತರ ದೋನಿ ಹಾಗೂ ಅವರ ತಂಡದವರು ಅಣ್ಣಾ ಹಜಾರೆ ಅವರಿಗೆ,  ಅಣ್ಣಾ ಅವರೇ, ನೀವು ಜನಲೋಕಪಾಲ ಮಸೂದೆಗಾಗಿ ಒತ್ತಾಯಿಸಿ, ಇಡೀ ದೇಶದ ಗಮನವನ್ನು ನಮ್ಮಿಂದ ಅಂದರೆ ಭಾರತ ಕ್ರಿಕೆಟ್ ತಂಡದ ಮೇಲಿಂದ ಬೇರೆ ಕಡೆ ತಿರುಗಿಸಿರುವುದಕ್ಕೆ ಧನ್ಯವಾದಗಳು ಎಂಬ ಎಸ್‌ಎಂಎಸ್ ಕಳಿಸಿದರಂತೆ!
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT