ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾನ್ಯರೆ, ರಾಜಕೀಯದ ಮಧ್ಯೆ ಬಿಡುವು ಬೇಡವೆ?

Last Updated 21 ಜೂನ್ 2016, 19:30 IST
ಅಕ್ಷರ ಗಾತ್ರ

ರಿಸರ್ವ್  ಬ್ಯಾಂಕ್ ಆಫ್ ಇಂಡಿಯಾದ ಗವರ್ನರ್ ರಘುರಾಂ ರಾಜನ್ ತಮ್ಮ ಹುದ್ದೆಗೆ ಗುಡ್‌ಬೈ ಹೇಳಲಿದ್ದಾರೆ. ಈಚಿನ ವರ್ಷಗಳಲ್ಲಿ ಇಷ್ಟು ಕ್ರಿಯಾಶೀಲರಾದ ಬುದ್ಧಿಜೀವಿ ಗವರ್ನರ್ ಒಬ್ಬರನ್ನು ಇಂಡಿಯಾ ಕಂಡಿರಲಿಲ್ಲ. ಜಾಗತಿಕ ಆರ್ಥಿಕ ಏರುಪೇರಿನ ಈ ಕಾಲದಲ್ಲಿ ದೇಶದ ಆರ್ಥಿಕತೆಯನ್ನು ಅಷ್ಟಿಷ್ಟು ಸಮತೋಲನದಲ್ಲಿರಿಸಲು ದಿಟ್ಟಕ್ರಮ ಕೈಗೊಂಡವರು ರಾಜನ್.

ಹಣದುಬ್ಬರದ ಗುಪ್ತತೆರಿಗೆಗಳು ಮಧ್ಯಮವರ್ಗದ ಉಳಿತಾಯಗಾರರು ಹಾಗೂ ಬಡವರ ಮೇಲೆ ಬೀಳದಂತೆ ನೋಡಿಕೊಳ್ಳಬೇಕೆಂದು ರಾಜನ್ ಎಚ್ಚರಿಸುತ್ತಿದ್ದರು. ರಾಜನ್ ಅವರನ್ನು ಇನ್ನೊಂದು ಅವಧಿಗೆ  ಮುಂದುವರಿಸಬೇಕೆಂದು ಹಲವು ವಲಯಗಳು ಹೇಳುತ್ತಿದ್ದಂತೆಯೇ, ಸುಬ್ರಮಣಿಯನ್‌ ಸ್ವಾಮಿ ಎಂಬ ಕಿರುಕುಳಜೀವಿ ಈ ರಾಜನ್ ವಿರುದ್ಧ ಸಡಿಲ ಹೇಳಿಕೆ ಕೊಡತೊಡಗಿದರು. ಇದೆಲ್ಲ ಸರ್ಕಾರದ ‘ಕೂಸು ಚಿವುಟುವ, ತೊಟ್ಟಿಲು ತೂಗುವ’ ಕೆಲಸ ಎನ್ನುವುದು ಎಲ್ಲರಿಗೂ ಹೊಳೆಯತೊಡಗಿತು.

ರಾಜನ್ ಅವರನ್ನು ಇಳಿಸಲು ಕೆಲವು ಶಕ್ತಿಗಳು ಕೆಲಸ ಮಾಡುತ್ತಿರುವುದು ಸ್ಪಷ್ಟವಾಗತೊಡಗಿತು. ಸ್ವತಂತ್ರ ಚಿಂತನೆಯ ರಿಸರ್ವ್ ಬ್ಯಾಂಕ್ ಗವರ್ನರ್ ಅವರನ್ನು ಬದಲಿಸಲು ಕೇವಲ ಇಂಡಿಯಾದೊಳಗಿನ ಶಕ್ತಿಗಳು ಕೆಲಸ ಮಾಡುತ್ತಿರುವುದಿಲ್ಲ; ಅದರ ಹಿಂದೆ ಅಂತರರಾಷ್ಟ್ರೀಯ ಲಾಬಿಗಳೂ ಇರುತ್ತವೆಂಬುದು ಎಲ್ಲರೂ ಬಲ್ಲ ಗುಟ್ಟು.

ಇದೆಲ್ಲದರ  ನಡುವೆ ನನ್ನನ್ನು ಸೆಳೆದದ್ದು ಒಂದು ಬಿಕ್ಕಟ್ಟಿನ ಗಳಿಗೆಯಲ್ಲಿ ರಾಜನ್ ಪ್ರತಿಕ್ರಿಯೆಯಲ್ಲಿದ್ದ ಘನತೆ. ರಾಜನ್ ಮಾತಿನಲ್ಲಿ ನಿರಾಶೆಯಾಗಲೀ ಅಹಂಕಾರವಾಗಲೀ ಇರಲಿಲ್ಲ. ತಮ್ಮ ನಲವತ್ತನೆಯ ವಯಸ್ಸಿಗೇ ‘ಇಂಟರ್ ನ್ಯಾಷನಲ್ ಮಾನಿಟರಿ ಫಂಡ್’ನ ಚೀಫ್ ಎಕಾನಮಿಸ್ಟ್ ಆಗಿದ್ದ, ಈಗ 54 ತಲುಪಿರುವ ರಾಜನ್ ‘ನಾನು ನನ್ನ ಅಕಡೆಮಿಕ್ಸ್‌ಗೆ ವಾಪಸ್ ಹೋಗುತ್ತೇನೆ’ ಎಂದರು.

ರಾಜನ್ ಎದುರು ಅಪಾರ ಶೈಕ್ಷಣಿಕ ಸಾಧ್ಯತೆಗಳು ತೆರೆಯಲಾರಂಭಿಸಿದ್ದವು. ರಾಜನ್ ಮಾತು ಕೇಳುತ್ತಿದ್ದಂತೆ, ಹೀಗೆ ಶೈಕ್ಷಣಿಕ ವಲಯಕ್ಕೆ ಮರಳಿದ ಬುದ್ಧಿಜೀವಿ ರಾಜಕೀಯ ನಾಯಕರು ನೆನಪಾದರು. ರಷ್ಯಾದ ಅಧ್ಯಕ್ಷ ಪದವಿ ಬಿಟ್ಟ ನಂತರ, ವಿಶ್ವವಿದ್ಯಾಲಯಗಳಲ್ಲಿ ಬೋಧಿಸಲಾರಂಭಿಸಿದ ಗೋರ್ಬಚೇವ್, ಈಚೆಗೆ ವಿಶ್ವವಿದ್ಯಾಲಯವೊಂದರ ವಿಸಿಟಿಂಗ್ ಪ್ರೊಫೆಸರ್ ಆದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಥರದವರು ಕಣ್ಣ ಮುಂದೆ  ಸುಳಿಯತೊಡಗಿದರು…
 
ಈ ಉದಾಹರಣೆಗಳು ಸುಳಿಯಲು ಕಾರಣವಿತ್ತು. ಮೊನ್ನೆ ಭಾನುವಾರದಿಂದೀಚೆಗೆ ಮಂತ್ರಿಪದವಿ ಹೋಗಿದ್ದಕ್ಕೆ ಬೊಬ್ಬಿರಿಯುತ್ತಿರುವ, ಸರ್ವನಾಶವಾದಂತೆ ರೋದಿಸುತ್ತಿರುವ ಕರ್ನಾಟಕದ ನಾಯಕರುಗಳಿಗೆ ರಾಜನ್ ಯಾರು ಎಂಬುದಾಗಲೀ ಅವರು ಹೇಗೆ ಪ್ರತಿಕ್ರಿಯಿಸಿದ್ದಾರೆಂಬುದನ್ನು ತಿಳಿಯುವಷ್ಟು ಸಮಯವಾಗಲೀ ಜ್ಞಾನವಾಗಲೀ ಇದ್ದಂತಿಲ್ಲ.

ಹಾಗೆಯೇ,ಈ ನಾಯಕರುಗಳನ್ನು ವಿಸಿಟಿಂಗ್ ಪ್ರೊಫೆಸರುಗಳಾಗಿ ನೇಮಿಸಿಕೊಳ್ಳಲು ಕರ್ನಾಟಕದ ಯಾವ ವಿ.ವಿ.ಯಲ್ಲೂ ಅವಕಾಶಗಳಿರುವಂತಿಲ್ಲ; ಅಕಸ್ಮಾತ್ ಇವತ್ತು ರಾಜಕಾರಣಿಗಳು ವಿ.ವಿ.ಗಳನ್ನು ಹೊಕ್ಕರೆ, ಅಲ್ಲಿ ತಮಗಿಂತ ಪ್ರಚಂಡ ಪುಢಾರಿಗಳಿರುವುದನ್ನು ಕಂಡು ಗಡಗಡ ನಡುಗುವ ಸಾಧ್ಯತೆಗಳೂ ಇರುತ್ತವೆ; ಆ ಮಾತು ಬೇರೆ!

ಅದೇನೇ ಇರಲಿ, ಮೊನ್ನೆ ಮಂತ್ರಿಪದವಿ ಕಳೆದುಕೊಂಡವರು ಆಡುತ್ತಿರುವ ಮಾತುಗಳನ್ನು ನೋಡಿದಾಗ, ಇನ್ನೂ ಎರಡು ವರ್ಷ ಶಾಸಕತ್ವದ ಅವಧಿ ಇದ್ದರೂ, ಮಂತ್ರಿಗಿರಿಯಿಲ್ಲದ ತಮ್ಮ ಜೀವನವೇ ಮುಗಿಯಿತು ಎಂಬಂತೆ ಚೀರುತ್ತಿರುವವರನ್ನು ನೋಡಿದಾಗ, ಇವರಿಗೆ ಜನನಾಯಕನೊಬ್ಬ ಬಹಿರಂಗವಾಗಿ ಹೇಗೆ ನಡೆದುಕೊಳ್ಳಬೇಕು ಎಂಬ ಪ್ರಾಥಮಿಕ ಪಾಠವೇ ಗೊತ್ತಿಲ್ಲವಲ್ಲ ಎನ್ನಿಸತೊಡಗಿತು.

ಕೇವಲ ಎಂಬತ್ತಾರು ವರ್ಷವಾಗಿರುವ ಶಾಮನೂರು ಶಿವಶಂಕರಪ್ಪನವರ ಸಿನಿಕ ಉತ್ತರ ನೋಡಿ: ‘ಇದುವರೆಗೆ ಇನ್ನೋವಾ ಕಾರಿನಲ್ಲಿ ಓಡಾಡುತ್ತಿದ್ದೆ; ಇನ್ನುಮುಂದೆ ಬೆಂಝ್ ಕಾರಿನಲ್ಲಿ ಓಡಾಡುತ್ತೇನೆ’. ‘ಇನ್ನು ಮುಂದೆಯೂ ಎಂದಿನಂತೆ ಜನತಾಸೇವೆ ಮುಂದುವರಿಸುತ್ತೇನೆ’ ಎಂಬ ಕ್ಲೀಷೆಯ ಉತ್ತರವನ್ನು ಕೂಡ ಕೊಡಲಾರದಷ್ಟು ಈ ವೃದ್ಧರಾಜಕಾರಣಿ ಜಡ್ಡುಗಟ್ಟಿ ಹೋದಂತಿದೆ. ಇನ್ನು ಹಲವರು ತಮ್ಮ ಬಂಟರಿಂದ ತಮ್ಮದೇ ಸರ್ಕಾರದ ಬಸ್ಸಿಗೆ ಕಲ್ಲು ಹೊಡೆಸುವ, ಬೆಂಕಿ ಹಚ್ಚುವ  ನೀಚತನದಲ್ಲಿ ನಿರತರಾಗಿದ್ದಾರೆ. ಇನ್ನು ಕೆಲವರು ರಾಜೀನಾಮೆಯ ಬ್ಲ್ಯಾಕ್ ಮೇಲ್ ತಂತ್ರಗಳನ್ನು ಪ್ರಯೋಗಿಸುತ್ತಿದ್ದಾರೆ.

ಕಾಗೋಡು ತಿಮ್ಮಪ್ಪ, ರಮೇಶಕುಮಾರ್ ಎಡೆಬಿಡದೆ ತಮ್ಮದೇ ಸರ್ಕಾರವನ್ನು ‘ವಿಮರ್ಶಿಸಿ’ (ಅಂದರೆ ಚುಚ್ಚಿ, ಚುಚ್ಚಿ!) ಮಂತ್ರಿ ಪದವಿ ಗಳಿಸಲು ಯಶಸ್ವಿಯಾದ ಮೇಲೆ, ಈ ಮಾದರಿಯನ್ನೂ ಪ್ರಯೋಗಿಸಿ ನೋಡೋಣ ಎಂದು ಇನ್ನಿತರರು ಕೊಂಚ ಉಗ್ರವಾಗಿಯೇ ಕಣಕ್ಕಿಳಿದಿರುವಂತಿದೆ! ಈ ಹುಸಿ ಹೋರಾಟಗಳನ್ನು ನೋಡಿ ಜನ ಎಲ್ಲೆಡೆ ಅಸಹ್ಯಪಟ್ಟುಕೊಳ್ಳುತ್ತಿದ್ದಾರೆ ಹಾಗೂ ಮುಂದಿನ ಚುನಾವಣೆಯಲ್ಲಿ ಅದರ ಫಲ ಉಣ್ಣಬೇಕಾಗಬಹುದು ಎಂಬ ಭಯ ಕೂಡ ಈ ನಾಯಕಮಣಿಗಳಿಗೆ ಇದ್ದಂತಿಲ್ಲ.

ಈ ನಡುವೆ, ಕಿಮ್ಮನೆ ರತ್ನಾಕರ್ ಮಾತ್ರ ಸಮತೋಲನವನ್ನು ಕಾಯ್ದುಕೊಂಡಿರುವಂತೆ ಕಾಣುತ್ತದೆ. ಹಾಗೆ ನೋಡಿದರೆ, ಕಾಗೋಡು ತಿಮ್ಮಪ್ಪನವರಿಗೆ ಹಾದಿ ಮಾಡಿಕೊಡಲು ಕಿಮ್ಮನೆ ಕುರ್ಚಿ ಬಿಡಬೇಕಾಯಿತು. ಕಿಮ್ಮನೆ ಈಚೆಗೆ ಪದವಿಪೂರ್ವ ಪರೀಕ್ಷೆಗಳ ಹಲವು ದಶಕಗಳ ಭೀಕರ ಭ್ರಷ್ಟಾಚಾರವನ್ನು ಸರಿಪಡಿಸಲು ಮಾಡಿದ ದಿಟ್ಟಪ್ರಯತ್ನದ ಕಾರಣದಿಂದಾದರೂ ಮಂತ್ರಿಯಾಗಿ ಮುಂದುವರಿಯಬೇಕಿತ್ತು.

ಹಾಗಾಗಲಿಲ್ಲ. ಇಷ್ಟಾದರೂ ಅವರು ಫೇಸ್ ಬುಕ್ಕಿನಲ್ಲಿ ಬರೆದ ಮಾತುಗಳಲ್ಲಿರುವ ಘನತೆ ನಮ್ಮನ್ನು ತಟ್ಟುವಂತಿದೆ: ‘ನೀಡಿದ ಜವಾಬ್ದಾರಿ ನಿರ್ವಹಿಸಿದ್ದೇನೆ. ಇನ್ನು ಮುಂದೆಯೂ ನಿರ್ವಹಿಸುವ ವಿಶ್ವಾಸವಿದೆ’ ಎಂದಿರುವ ರತ್ನಾಕರ್, ‘ಸ್ಥಾನಮಾನಗಳು ಗೂಟದ ಕಾರಿನಲ್ಲಿವೆ ಎಂಬ ನಂಬಿಕೆ ನನಗಿಲ್ಲ’ ಎಂದು ಊರಿಗೆ ಮರಳಿದ್ದಾರೆ.

ಅಷ್ಟೇ ಅಲ್ಲ, ಇನ್ನುಳಿದ ಮಾಜಿಗಳು ತಮ್ಮ ಸರ್ಕಾರದ ವಿರುದ್ಧವೇ ಕಲ್ಲೆಸೆಯುತ್ತಿರುವಾಗ, ರತ್ನಾಕರ್ ತೀರ್ಥಹಳ್ಳಿಯಲ್ಲಿ ಅಂಥ ಯಾವುದಕ್ಕೂ ಪ್ರಚೋದನೆ ಕೊಡದೆ, ತೀರ್ಥಹಳ್ಳಿಯ ಯುವ ಕಾಂಗ್ರೆಸ್, ಕೇಂದ್ರ ಸರ್ಕಾರದ ರೈತವಿರೋಧಿ ನೀತಿಯ ವಿರುದ್ಧ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದಾರೆ. ನಾಯಕನೊಬ್ಬ ಎಂಥ ಬಿಕ್ಕಟ್ಟಿನ ಗಳಿಗೆಯಲ್ಲೂ ತನ್ನ ಕ್ರಿಯಾಶೀಲತೆಯನ್ನು ಉಳಿಸಿಕೊಳ್ಳುವ ಒಂದು ಪುಟ್ಟ ಮಾದರಿಯಿದು.

ನಮ್ಮ ಬುದ್ಧಿಜೀವಿ ನಾಯಕರಲ್ಲೊಬ್ಬರಾದ ಶ್ರೀನಿವಾಸಪ್ರಸಾದ್ ಅವರಿಗೆ ಇಂಥ ಪರ್ಯಾಯವೇ ಹೊಳೆಯದಿರುವುದು ಸೋಜಿಗದಂತಿದೆ! ಶ್ರೀನಿವಾಸಪ್ರಸಾದ್ ಸಚಿವಸಂಪುಟದ ಪುನರ್ ರಚನೆಯ ಮುನ್ನಾ ದಿನ ಮೋದಿಯವರನ್ನು ಪ್ರಶಂಸಿಸಿ ಬಿಜೆಪಿಗೆ ‘ಫೀಲರ್’ ಕಳಿಸಿ, ಕಾಂಗ್ರೆಸ್  ಹೈಕಮಾಂಡಿಗೆ ಎಚ್ಚರಿಕೆಯ ಸಂದೇಶ ಕಳಿಸಲು ನೋಡಿದರು. ಅದೂ ವರ್ಕ್ಔಟ್ ಆಗಲಿಲ್ಲ.

ಅಧಿಕಾರವಿಲ್ಲದೆ ಒಂದು ಕ್ಷಣವೂ ಇರಲಾರೆನೆಂಬಂತೆ ಅವರು ಇದೀಗ ತಮ್ಮ ಜೀವಮಾನದ ದಲಿತ ತಾತ್ವಿಕತೆಗೆ ಕೊನೆ ಹಾಡುವಂತೆ ಮತೀಯವಾದಿಗಳೊಂದಿಗೆ ಸರಸ ಆರಂಭಿಸಿದ್ದಾರೆ.

ಇದರ ಬದಲಿಗೆ, ದಲಿತ ಸಚಿವರ ಹೆಚ್ಚಳಕ್ಕಾಗಿ ಅವರು ಒತ್ತಾಯಿಸಿದ್ದರೆ ಅದಕ್ಕೊಂದು ಘನತೆಯಿರುತ್ತಿತ್ತು. ಈ ಸಲದ ವಿಸ್ತರಣೆಯ ನಂತರವೂ ಇಡೀ ಸಂಪುಟದಲ್ಲಿ ಒಬ್ಬರೇ ಒಬ್ಬರು ಮಹಿಳಾ ಪ್ರತಿನಿಧಿಯಿದ್ದಾರೆ ಎನ್ನುವುದು ಕರ್ನಾಟಕದ ಜನಸಂಖ್ಯೆಯ ಅರ್ಧದಷ್ಟಿರುವ ಮಹಿಳೆಯರಿಗೆ ಮಾಡಿರುವ ಅವಮಾನ. ಈ ಕೊರತೆಯನ್ನು ನೀಗಿಸಲಾದರೂ ಮೋಟಮ್ಮನವರಂಥ ಹಿರಿಯರನ್ನು ಸಂಪುಟಕ್ಕೆ ಸೇರಿಸಿಕೊಳ್ಳಬಹುದಿತ್ತು.

ತಮ್ಮ ಮಂತ್ರಿಗಿರಿ ಹೋಯಿತೆಂದು ಕೊರಗುತ್ತಿರುವ ಅಂಬೇಡ್ಕರ್ ವಾದಿ  ಶ್ರೀನಿವಾಸಪ್ರಸಾದ್ ‘ಒಬ್ಬ ದಲಿತ ಮಹಿಳೆ ಮಂತ್ರಿಯಾಗಲಿ’ ಎಂದು ಒತ್ತಾಯಿಸಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು! ಇತ್ತ ನಟ ಅಂಬರೀಷ್ ತಮ್ಮ ಅನಾರೋಗ್ಯಕ್ಕೆ ಮಂತ್ರಿಗಿರಿಯೇ ಸಿದ್ಧೌಷಧ ಎಂಬ ಭ್ರಮೆಯಿಂದ ಹೊರಬಂದು, ಇದೀಗ ವರದಂತೆ ದೊರೆತ ಬಿಡುವಿನಲ್ಲಿ ತಮ್ಮ ಆರೋಗ್ಯ ಸರಿಮಾಡಿಕೊಳ್ಳಬಹುದಿತ್ತು; ಅಥವಾ ತಮ್ಮ ಸಿನಿಮಾ ನಟನೆಯ ಈವರೆಗಿನ ದೌರ್ಬಲ್ಯಗಳನ್ನು ಸರಿಪಡಿಸಿಕೊಂಡು, ತಮ್ಮ ನಟನೆಯಲ್ಲಿ ಒಂದಿಷ್ಟು ಪರಿಣತಿ ಸಾಧಿಸಲು ಈ ಬಿಡುವನ್ನು ಬಳಸಿಕೊಳ್ಳಬಹುದಿತ್ತು. ಕೊನೆಯ ಪಕ್ಷ, ರಾಜಕಾರಣದ ಕೆಟ್ಟ ಅನುಭವದ ನಂತರ, ಚಿತ್ರರಂಗಕ್ಕೆ ಮರಳಿ ಸೂಪರ್ ಸ್ಟಾರ್ ಆಗಿ ಮತ್ತೆ ಮಿಂಚಿದ ಅಮಿತಾಭ್ ಬಚ್ಚನ್ ಮಾದರಿಯಿಂದ ಒಂದು ಪುಟ್ಟ ಪಾಠವನ್ನಾದರೂ ಅಂಬರೀಷ್ ಕಲಿಯಬಹುದಿತ್ತು.

ಆದರೆ ತಮ್ಮನ್ನು ತಾವು 24x7 ರಾಜಕಾರಣಿಗಳು ಎಂದುಕೊಂಡಿರುವ ನಮ್ಮ ನಾಯಕರು ಯಾವ ಉತ್ತಮ ಮಾದರಿಗಳನ್ನೂ ಕಣ್ಣುಬಿಟ್ಟು ನೋಡುವಂತೆ ಕಾಣುವುದಿಲ್ಲ.ಕುರ್ಚಿಯಾಚೆಗೆ ಏನನ್ನೂ ಕಾಣಲಾರದಷ್ಟು ಅವರ ಇಂದ್ರಿಯಗಳು ಜಡಗಟ್ಟಿದಂತಿರುತ್ತವೆ. ರಾಜಕಾರಣವೆಂದರೆ ಜನರ ಪ್ರೀತಿ ಗಳಿಸುವ ಹಾಗೂ ಅನಂತ ಸಾಧ್ಯತೆಗಳ ವಿಶಾಲ ಅಖಾಡ ಎಂಬ ಸರಳಸತ್ಯವನ್ನೇ ಅವರು ಮರೆತಂತಿದೆ. ‘ರಾಜಕೀಯದ ಮಧ್ಯೆ ಬಿಡುವು’ ದೊರಕಿಸಿಕೊಂಡು ಮಾಡಬೇಕಾದ ಉತ್ತಮ ಕೆಲಸಗಳಿರುತ್ತವೆ ಎಂಬುದು ಕೂಡ ಈ ಮಂದಮತಿಗಳಿಗೆ ಹೊಳೆಯುವುದಿಲ್ಲ.

ಬಿಡುವಿಲ್ಲದ ದಿನಚರಿಯಿಂದಾಗಿ ತಾವು ಕಳೆದುಕೊಂಡಿರುವ, ಸರಿಯಾಗಿ ಯೋಚಿಸುವ ವ್ಯವಧಾನವನ್ನು, ಮಾತಾಡುವ ಕಲೆಯನ್ನಾದರೂ ಈ ಬಿಡುವಿನಲ್ಲಿ ಮತ್ತೆ ಕಲಿಯಬಹುದು ಎಂಬ ಸಾಧ್ಯತೆ ಕೂಡ ಅವರಿಗೆ ಹೊಳೆಯದೇ ಹೋಗುತ್ತದೆ.

ಜೊತೆಗೆ, ಕುರ್ಚಿಯೇ ಅಂತಿಮವೆಂದು ಭ್ರಮಿಸುವ ನಾಯಕರಿಗೆ ಯಾವುದೇ ಬಗೆಯಲ್ಲಿ ಮೈಬಗ್ಗಿಸಿ  ಮಾಡುವ ಕೆಲಸವಾಗಲೀ, ಅಥವಾ ಗಂಭೀರ ಪುಸ್ತಕಗಳನ್ನು ಓದಿ ಜನರ  ಸಮಸ್ಯೆಗಳನ್ನು ಆಳವಾಗಿ ಅರಿಯುವ ಬೌದ್ಧಿಕಶ್ರಮದ ಕೆಲಸವಾಗಲೀ ಹಿಡಿಸುವುದಿಲ್ಲ. ಹಿಂದೆಮುಂದೆ ತೋಟಗಳಿರುವ ಬಂಗಲೆಗಳಲ್ಲಿ ವಾಸಿಸುವ ಬಹುತೇಕ ರಾಜಕಾರಣಿಗಳು ಕೊನೆಯಪಕ್ಷ ದಿನದಲ್ಲಿ ಅರ್ಧಗಂಟೆಯಾದರೂ ಹೂಗಿಡಗಳಿಗೆ ನೀರು ಹಾಕಿ ಪ್ರಕೃತಿಯ ಸಂಗದಲ್ಲಿದ್ದರೆ, ಅವರು ತಂತಮ್ಮ ಕೇಡಿನಿಂದ ಕೆಲವು ಗಳಿಗೆಗಳಾದರೂ ಮುಕ್ತರಾಗುವ ಸಾಧ್ಯತೆ ಇರುತ್ತಿತ್ತು.

ಬಾಯಿಬಿಟ್ಟರೆ ಮಹಾತ್ಮ ಗಾಂಧಿ ಅವರನ್ನು ಉಲ್ಲೇಖಿಸುವ ಈ ನಾಯಕರಿಗೆ ಗಾಂಧೀಜಿ ದೈಹಿಕ ಶ್ರಮದ ಬಗ್ಗೆ ಒತ್ತು ಕೊಟ್ಟದ್ದೇಕೆ ಎಂಬುದು ಅರ್ಥವಾದಂತಿಲ್ಲ. ಹೊಲ, ತೋಟಗಳನ್ನುಳ್ಳ ನಮ್ಮ ಗ್ರಾಮೀಣ ರಾಜಕಾರಣಿಗಳು ‘ಒಂದಷ್ಟುದಿನ ಹೊಲಗದ್ದೆಗಳ ಬಳಿ ಅಡ್ಡಾಡಿಕೊಂಡಿರುತ್ತೇನೆ’ ಎಂದು ಹೇಳಿದ್ದಾಗಲೀ; ಮಾತೆತ್ತಿದರೆ ದೇವಾಲಯಗಳಿಗೆ ಭೇಟಿ ಕೊಡುವ ಈ ನಾಯಕರು ‘ಇನ್ನುಮುಂದೆ ಕೊಂಚ ಧರ್ಮ, ಅಧ್ಯಾತ್ಮದತ್ತ ಗಮನ ಕೊಡುತ್ತೇನೆ’ ಎಂದಿದ್ದಾಗಲೀ ಯಾರ ಕಿವಿಗೂ ಬಿದ್ದಂತಿಲ್ಲ. ಅವರು ನಿತ್ಯ ಎಡತಾಕುವ ಮಠಗಳ ಸ್ವಾಮಿಗಳು ಕೂಡ ಅವರಿಗೆ ಇಂಥ ಹಿತವಚನ ಹೇಳಿದಂತೆ ಕಾಣಲಿಲ್ಲ.

‘ಇರಲಿ, ಈಗ ಕೊಂಚ ಬಿಡುವು ಸಿಕ್ಕಿದೆ, ನನ್ನ ಕ್ಷೇತ್ರದ ಸಮಸ್ಯೆಗಳನ್ನು ಸಮಗ್ರವಾಗಿ ಅರಿಯುವ ಕೆಲಸ ಮಾಡುತ್ತೇನೆ’ ಎಂದು ಹೊರಡುವ ಲಕ್ಷಣ ಕೂಡ ಯಾವ ನಾಯಕರಲ್ಲೂ ಕಾಣುತ್ತಿಲ್ಲ. ‘ಮಂತ್ರಿಪದವಿ ಹೋಯಿತು ಅಥವಾ ಸಿಕ್ಕಲಿಲ್ಲ; ಆದ್ದರಿಂದ ನನ್ನ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿಗೆ ಹಣವನ್ನಾದರೂ ಬಿಡುಗಡೆ ಮಾಡಿ’ ಎಂದು ಒಬ್ಬ ನಾಯಕನಾದರೂ ಮುಖ್ಯಮಂತ್ರಿಗಳನ್ನು ‘ಬ್ಲ್ಯಾಕ್ ಮೇಲ್’ ಮಾಡಿದ್ದು ಕಾಣಲಿಲ್ಲ. 

ಅಥವಾ ಅವರ ಉಗ್ರ ಅಭಿಮಾನಿಗಳು ತಮ್ಮ ಕ್ಷೇತ್ರದಲ್ಲಿ ರಸ್ತೆ, ಶಾಲೆ, ಕುಡಿಯುವ ನೀರು ಇಲ್ಲವೆಂದು ಪೆಟ್ರೋಲ್ ಸುರಿದುಕೊಂಡು, ಅದು ಆವಿಯಾಗುವವರೆಗೂ ಟಿ.ವಿ. ಕ್ಯಾಮೆರಾಗಳಿಗಾಗಿ ಕಾದು ನಿಂತದ್ದನ್ನು ಕೂಡ ಯಾರೂ ಕಂಡಿಲ್ಲ! ನಾಯಕರು ಮತ್ತವರ ಚೇಲಾಗಳು ಹೀಗೆ ಚೆಲ್ಲಾಟವಾಡುತ್ತಿರುವಾಗ, ಇಲ್ಲಿ ಮತದಾರ ಪ್ರಭುಗಳು ಇವನ್ನೆಲ್ಲ ಥಣ್ಣಗಿನ ಸಿಟ್ಟಿನಿಂದ ನೋಡುತ್ತಾ, ತಮ್ಮ ಅಂತಿಮ ನಿರ್ಣಯ ಕೊಡಲು ಕಾಯುತ್ತಿದ್ದಾರೆಂಬುದನ್ನು ಈ ಪ್ರತಿಭಟನೆಯ ನಾಟಕದ ಪಾತ್ರಧಾರಿಗಳೆಲ್ಲ ಮರೆತಂತಿದೆ.

ಕೊನೆ ಟಿಪ್ಪಣಿ: ರಾಜಕಾರಣಿಗಳಿಗೊಂದು ವಚನ ಪಾಠ ಖ್ಯಾತ ಗಾಯಕ ಅಂಬಯ್ಯನುಲಿಯವರ ಬಾಯಲ್ಲಿ ಗಜೇಶ ಮಸಣಯ್ಯನವರ ಈ ವಚನವನ್ನು ಕೇಳಿದಾಗ ಚಣ ಬೆಚ್ಚಿದೆ. ಪದವಿಗಳ ‘ಕಿಂಚಿತ್ ತನ’ದ ಬಗ್ಗೆ ಇದಕ್ಕಿಂತ ಪ್ರಖರವಾಗಿ ನುಡಿದ ಮತ್ತೊಂದು ವಚನವನ್ನು ನಾನು ಕೇಳಿಲ್ಲ:

ಪರಮ ಪದವಿಯ ನಿಮ್ಮ ಕೊರಳಲ್ಲಿ ಕಟ್ಟಿಕೊಳ್ಳಿ
ಪರಮ ಪದವಿಯ ನಿಮ್ಮ ತಲೆಯಲ್ಲಿ ಸುತ್ತಿಕೊಳ್ಳಿ.
ಎನಗೆ ನಿಮ್ಮ ತೊತ್ತು ಸೇವೆಯೆ ಸಾಕು
ಮಹಾಲಿಂಗ ಗಜೇಶ್ವರದೇವಾ,
ಪರಮ ಪದವಿಯ ನಿಮ್ಮ ಎದೆಯಲ್ಲಿ ಇರಿದುಕೊಳ್ಳಿ.

‘ಪರಮ ಪದವಿ’ಯನ್ನು ಧಿಕ್ಕರಿಸುತ್ತಾ, ಗಜೇಶ ಮಸಣಯ್ಯನವರು ಗಜೇಶ್ವರನಿಗೆ ಹೇಳಿದ ಮಾತಿನ ದಿಕ್ಕನ್ನು ಕೊಂಚ ಬದಲಿಸಿ, ‘ಎನಗೆ ನಿಮ್ಮ ತೊತ್ತು ಸೇವೆಯೆ ಸಾಕು’ ಎಂದು ಜನರನ್ನು ಉದ್ದೇಶಿಸಿ ಹೇಳುತ್ತಾ ಹೊರಡಬಲ್ಲ ನಾಯಕರು ಎಲ್ಲಾದರೂ ಸಿಗಬಹುದೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT