ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರ ಮತ್ತು ಮುದುಮಲೈ

Last Updated 10 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ
ಮುದುಮಲೈ ಕಾಡಿನ ನಮ್ಮ ಆರಂಭದ ದಿನಗಳು. ಕಾಲ್ನಡಿಗೆಯಲ್ಲಿ ಕಾಡು ಸುತ್ತುವುದೇ ನಮಗೆ ಚಟವಾಗಿದ್ದ ಸಮಯ. ಆದರೆ ಆಗಿನ್ನೂ ಕಾಡನ್ನು ಓದುವ ಜಾಣ್ಮೆ ನಮಗೆ ಒಲಿದಿರಲಿಲ್ಲ. ತಿಳಿವಳಿಕೆ, ಅನುಭವಗಳ ಕೊರತೆ ಇದ್ದಾಗ ಧೈರ್ಯ ಎಲ್ಲೆ ಮೀರಿ ಕೆಲಸ ಮಾಡುವುದು ಸಹಜ. ಈ ಕಾರಣಗಳಿಂದ ನಾವು ಪದೇ ಪದೇ ಸಮಸ್ಯೆಗಳಲ್ಲಿ ಸಿಕ್ಕಿಬೀಳುವುದು ನಮ್ಮ ದಿನಚರಿಯ ಒಂದು ಭಾಗವಾಗಿತ್ತು. 
 
ಬೇಸಿಗೆಯ ಆ ದಿನ ಕಾಡಿನಿಂದ ವಾಪಸಾಗುವಾಗ ಸಂಜೆ ಸಮೀಪಿಸಿತ್ತು. ಕತ್ತಲು ತುಂಬಿಕೊಳ್ಳುವ ಮುನ್ನ ಮನೆ ತಲುಪಲು ಮೊಯಾರ್ ಹೊಳೆಯನ್ನು ದಾಟಬೇಕಿತ್ತು. ಹೊಳೆಯನ್ನು ಸರಾಗವಾಗಿ ದಾಟಲು ಕೆಲವು ನಿರ್ದಿಷ್ಟ ಸ್ಥಳಗಳ ಅರಿವಿತ್ತು. ಈ ಉದ್ದೇಶದಿಂದ ಹೊಳೆ ಬದಿಯ ಪ್ರಾಣಿಗಳ ಜಾಡಿನಲ್ಲಿ ಸಾಗಿದ್ದೆವು. ಆ ಜಾಡು ಕಡಿದಾಗಿತ್ತು. ಕಾಡಾನೆಗಳು ನಿರಂತರವಾಗಿ ತಿರುಗಾಡಿ ಸವೆದು ನುಣುಪಾಗಿದ್ದ ಹಾದಿಯಲ್ಲಿ ಹೆಜ್ಜೆಗಳು ಜಾರುತ್ತಿದ್ದವು.
 
ಹೊಳೆಗಿಳಿದು ಬಂಡೆಗಳಿಂದ ಬಂಡೆಗಳಿಗೆ ಹಾರಿ ಸಾಗುತ್ತಿರುವಾಗ ಎದುರು ದಡದಲ್ಲಿ ಹದಿವಯಸ್ಸಿನ ಸಲಗವೊಂದು ಗೋಚರಿಸಿತು. ನಮಗೆ ಬೆನ್ನು ಮಾಡಿ ಹುಲ್ಲು ತಿನ್ನುತ್ತಿದ್ದ ಅದು ನಾವು ಹೊಳೆ ದಾಟಲು ಆಯ್ಕೆ ಮಾಡಿಕೊಂಡಿದ್ದ ಓಣಿಗೆ ಅಡ್ಡವಾಗಿತ್ತು. ಬೇರೊಂದು ಜಾಡಿಗೆ ತೆರಳಿ ಹೊಳೆ ದಾಟಬಹುದಿತ್ತಾದರೂ ಅದು ಅಲ್ಲಿಂದ ಬಹು ದೂರವಿತ್ತು. ಹಾಗಾಗಿ ಕ್ಷಣಕಾಲ ಹಾಗೇ ನಿಂತು ಪರಿಸ್ಥಿತಿಯನ್ನು ನಿಭಾಯಿಸುವ ಮಾರ್ಗೋಪಾಯಗಳ ಬಗ್ಗೆ ಚಿಂತಿಸಿದೆವು.
 
ಕಾಡು ಕುರುಬರಿಂದ ಕಲಿತಿದ್ದ ಪಾಠಗಳನ್ನೆಲ್ಲಾ ನೆನಪಿಸಿಕೊಂಡು, ಆನೆಗೆ ನಮ್ಮ ಇರುವಿಕೆಯ ಸುಳಿವನ್ನು ನೀಡಿದರೆ ಅದು ದೂರ ಸರಿಯಬಹುದೆಂದು ಯೋಚಿಸಿದೆವು.
 
ನಮ್ಮ ವಾಸನೆ ಆನೆಗೆ ಸಿಗಲೆಂದು ಹೊಳೆಯ ನಡುವೆ ಇದ್ದ ಎತ್ತರದ ಬಂಡೆ ಏರಿದೆವು. ಆದರೆ ನಮ್ಮ ಆ ನಿರ್ಧಾರ ತದ್ವಿರುದ್ಧವಾಗಿ ಕೆಲಸ ಮಾಡಿತು. ಸಾಮಾನ್ಯವಾಗಿ ಕಾಡಾನೆಗಳು ಮನುಷ್ಯರ ಸುಳಿವು ಸಿಕ್ಕಾಗ ಅಲ್ಲಿಂದ ಜಾಗ ಖಾಲಿಮಾಡುತ್ತವೆ. ಆದರೆ ಈ ಆನೆ ತನ್ನ ಸೊಂಡಿಲನ್ನು ಹಿಂದಕ್ಕೆ ತಿರುವಿ ಅರ್ಧ ಮಾತ್ರ ಮೇಲಕ್ಕೆ ಎತ್ತಿತು. ಸ್ವಲ್ಪ ಕಾಲ ಹಾಗೇ ನಿಂತು, ನಮ್ಮ ಗಾಳಿ ಹಿಡಿದು ಇದ್ದಕ್ಕಿದ್ದಂತೆ ರಭಸದಿಂದ ಸೊಂಡಿಲೆತ್ತಿ ಕಿವಿಯಗಲಿಸಿ ನಮ್ಮತ್ತ ತಿರುಗಿ ನಿಂತಿತು. ನಂತರ ನೀರಿಗಿಳಿದು ನಿಧಾನವಾಗಿ ಹತ್ತು ಹೆಜ್ಜೆ ನಡೆದುಬಂತು. ಮನುಷ್ಯರ ಇರುವನ್ನು ಕಂಡುಕೊಂಡ ಅದು ಹಿಂದಿರುಗಿ ಹೋಗಬಹುದೆಂದು ನಿರೀಕ್ಷಿಸುತ್ತಿದ್ದೆವು. ಆದರೆ ಅದು ತನ್ನ ಸೊಂಡಿಲನ್ನು ಅತ್ತಿತ್ತ ಆಡಿಸಿ ನಮ್ಮ ವಾಸ್ತವ್ಯವನ್ನು ಖಚಿತಗೊಳಿಸಿಕೊಂಡು ವೇಗವಾಗಿ ನಮ್ಮತ್ತ ಬರಲಾರಂಭಿಸಿತು. ಬೆದರಿದ್ದ ನಾವು ಮೆಲ್ಲನೆ ಹಿಂದೆ ಸರಿದು ಸುರಕ್ಷಿತ ಬಂಡೆಯೊಂದಕ್ಕೆ ಹಾರಿಕೊಂಡೆವು. ಸ್ವಲ್ಪ ದೂರ ದೌಡಾಯಿಸಿ ಬಂದ ಆನೆ ನಾವು ದಾಟಲು ಸೂಕ್ತವೆನಿಸಿದ್ದ ಪುಟ್ಟ ನಡುಗಡ್ಡೆಯೊಂದನ್ನು ಹತ್ತಿ ನಮ್ಮನ್ನೇ ದುರುಗುಟ್ಟಿ ನೋಡುತ್ತಾ ನಿಂತಿತು. 
 
ನಮ್ಮ ಮತ್ತು ಆನೆಯ ನಡುವೆ ಹರಿಯುವ ಹೊಳೆ ಮತ್ತು ಕಡಿದಾದ ಬಂಡೆಗಳಿದ್ದವು. ಆನೆ ನಮ್ಮನ್ನು ಮುಟ್ಟಲಾಗದ ಸುರಕ್ಷಿತ ಸ್ಥಳದಲ್ಲಿ ನಾವಿದ್ದೆವು. ಆದರೆ ಸಿಟ್ಟಿಗೆದ್ದ ಕಾಡಾನೆ ಎದುರು ನಿಂತಿದ್ದಾಗ ಅಡಿಪಾಯವೆಲ್ಲಾ ಅದುರಿದಂತಾಗಿ, ತರ್ಕಗಳೆಲ್ಲಾ ಗಾಳಿಗೆ ತೂರಿ ಹೋಗಿ ಕೈಕಾಲುಗಳು ಆಧಾರ ತಪ್ಪುತ್ತವೆ. ಮತ್ತೊಮ್ಮೆ ಆನೆ ಸೊಂಡಿಲನ್ನು ನಮ್ಮೆಡೆಗೆ ಬೀಸಿ ವಿಚಿತ್ರವಾದ ಸದ್ದನ್ನು ಹೊಮ್ಮಿಸಿತು. ತೆರೆದುಕೊಂಡಿದ್ದ ಅದರ ಕಿವಿಗಳು ಹೊಯ್ದಾಡಿ ಬಡಿದುಕೊಂಡವು. ಅದು ನಿಸ್ಸಂಶಯವಾಗಿ ವಿಪರೀತ ಸಿಟ್ಟಾಗಿ, ಉದ್ರೇಕಗೊಂಡ ಮನೋಭಾವವನ್ನು ಸೂಚಿಸುತ್ತಿತ್ತು.
 
ಬಳಿಕ ನೆಲಕ್ಕೆ ಒದ್ದು, ಪಕ್ಕದಲ್ಲಿ ಬೆಳೆದಿದ್ದ ಹುಲ್ಲನ್ನು ಗೋಚಿ ಬೆನ್ನ ಮೇಲೆ ಎಸೆದುಕೊಂಡಿತು. ನಂತರ ಒಂದೆರಡು ಹೆಜ್ಜೆ ಹಿಂದಕ್ಕೆ ಸರಿದು ನಮ್ಮತ್ತ ದೃಷ್ಟಿಸಿ ನೋಡುತ್ತಲೆ ತನ್ನ ಬಲಗಾಲನ್ನು ಅರ್ಧ ಮಡಚಿ ಮೆಲ್ಲನೆ ನೆಲಕ್ಕೆ ತಾಗಿದರೂ ತಾಗದಂತೆ ಆಡಿಸುತ್ತಾ ನಿಂತಿತು. ಅದು ನಮ್ಮನ್ನು ನೆಲಕ್ಕೆ ಹಾಕಿಕೊಂಡು ಹೇಗೆ ಉಜ್ಜಬಲ್ಲೆನೆಂದು ತೋರಿಸುತ್ತಿದ್ದಂತಿತ್ತು. ಸಂಜೆಯ ತಂಗಾಳಿಯಲ್ಲೂ ನಾವು ಬೆವೆತಿದ್ದೆವು. ಆಗ ಒಮ್ಮೆಲೆ ಅದು ತನ್ನ ಸೊಂಡಿಲನ್ನು ನೆಲಕ್ಕೆ ಬಡಿದು ಭಯಾನಕವಾದ ಸದ್ದೊಂದನ್ನು ಮೂಡಿಸಿತು. ಹೇಗೊ ನಮ್ಮ ಕಾಲಿನ ಮೇಲೆ ನಾವು ನಿಂತಿದ್ದೆವು ಎನ್ನುವುದೇ ಸಮಾಧಾನದ ವಿಷಯವಾಗಿತ್ತು. ಮೂಡಿದ ಆ ಸದ್ದನ್ನಾಗಲಿ, ಆ ಕ್ಷಣದ ಆತಂಕವನ್ನಾಗಲಿ, ಸನ್ನಿವೇಶದ ಪ್ರಖರತೆಯನ್ನಾಗಲಿ ಬರೆದು ಬಣ್ಣಿಸಲು ಕಷ್ಟಸಾಧ್ಯ. 
 
ಆ ದಿನಗಳಲ್ಲಿ ನಮಗೆ ಕಾಡಿನ ಅರಿವು ಕಡಿಮೆ ಇದರೂ ವಿಜ್ಞಾನಿಗಳೊಂದಿಗೆ, ಕಾಡು ಕುರುಬರೊಂದಿಗೆ ಕಾಡು ಸುತ್ತುತ್ತಿದ್ದರಿಂದ ಕಾಡಾನೆಗಳ ನಡವಳಿಕೆಯ ಕುರಿತ ತಿಳಿವಳಿಕೆ ಬಹುಬೇಗ ವಿಸ್ತರಿಸುತ್ತಿತ್ತು. 
 
ಹಾಗೆ ನೋಡಿದರೆ ಇದು ಕಾಡಾನೆಗಳ ಸಹಜ ಸ್ವಭಾವವಲ್ಲ. ಎಂದೂ ಅವು ಅನವಶ್ಯಕವಾಗಿ ಮನುಷ್ಯನನ್ನು ಬೆನ್ನಟ್ಟಿ ಸಂಘರ್ಷಕ್ಕೆ ಇಳಿಯಲು ಇಚ್ಛಿಸುವುದಿಲ್ಲ. 
ನಮ್ಮ ಮೇಲೆ ಎರಗುತ್ತಿದ್ದ ಆನೆಗೆ ಹದಿನಾರು ವರ್ಷ ವಯಸ್ಸಿರಬಹುದು. ಆ ವಯಸ್ಸಿನ ಗಂಡು ಆನೆಗಳೇ ಹಾಗೆ, ನಮ್ಮ ಹದಿವಯಸ್ಸಿನ ಹುಡುಗರಂತೆಯೇ... ದೇಹ ಬೆಳೆದಿದ್ದರೂ ಸ್ವಭಾವದಲ್ಲಿ, ನಡವಳಿಕೆಗಳಲ್ಲಿ, ತೀರ್ಮಾನಗಳಲ್ಲಿ ಪ್ರೌಢತೆ ಇರುವುದಿಲ್ಲ. ಆ ವಯಸ್ಸಿನಲ್ಲಿ ಅಡ್ಡಾದಿಡ್ಡಿ ಉತ್ಪತ್ತಿಯಾಗುವ ಬಗೆಬಗೆಯ ಹಾಮೋರ್ನ್‌ಗಳು ಅವುಗಳ ಅಪ್ರಬುದ್ಧ ನಡವಳಿಕೆಗೆ ಕಾರಣವಾಗಿರುತ್ತವೆ. ಹಾಗಾಗಿ ಅವುಗಳು ನಡೆದದ್ದೇ ಸರಿ ದಾರಿ. 
 
ಈ ಪರಿಸ್ಥಿತಿಯನ್ನು ಹೇಗೆ ನಿಭಾಯಿಸಬೇಕೆಂದು ನಮಗೆ ಹೊಳೆಯಲಿಲ್ಲ. ಆ ಹೊತ್ತಿಗಾಗಲೆ ಸೂರ್ಯ ಮರಗಳ ಹಿಂದೆ ಸರಿಯುತ್ತಿದ್ದ. ಮನೆ ತಲುಪಲು ಇನ್ನೂ ಎರಡು ಕಿ.ಮೀ. ಸಾಗಬೇಕಿತ್ತು. ಕತ್ತಲಾದಮೇಲೆ ಪರಿಚಯವಿಲ್ಲದ ಬೇರೊಂದು ಜಾಡು ಹಿಡಿಯುವ ಆತ್ಮವಿಶ್ವಾಸ ನಮ್ಮಲ್ಲಿರಲಿಲ್ಲ.
 
ಅಷ್ಟರಲ್ಲಿ ಹೊಳೆಯಾಚೆಯ ದಿಗಂತದ ದಿಬ್ಬದಲ್ಲಿ ದೊಡ್ಡ ಸಲಗವೊಂದು ಪ್ರತ್ಯಕ್ಷಗೊಂಡಿತು. ಅದು ಎಲ್ಲಿಂದ ಬಂದಿತೆಂದು ನಮಗೆ ತಿಳಿಯಲಿಲ್ಲ. ಬಳಿಕ ಆ ಆನೆಯ ಮೇಲೆ ಮಾವುತನೊಬ್ಬ ಕುಳಿತಿರುವುದು ಗೋಚರಿಸಿತು. ನಂತರ ಅದರ ಹಿಂದೆ ಇನ್ನೆರಡು ಆನೆಗಳು ಪ್ರತ್ಯಕ್ಷಗೊಂಡವು.
 
ಆ ಕ್ಷಣ ನಮಗೆ ಮರುಜೀವ ಬಂದಂತಾಯಿತು. ತಕ್ಷಣ ಎರಡೂ ಕೈಗಳನ್ನು ಬೀಸುತ್ತಾ ಮಾವುತರ ಗಮನ ಸೆಳೆಯಲು ಪ್ರಯತ್ನಿಸಿದೆವು. ನಮ್ಮನ್ನು ಕಂಡ ಕೂಡಲೆ ಅವರಿಗೆ ಪರಿಸ್ಥಿತಿಯ ಅರಿವಾಯಿತು. ಆದರೆ ನಮ್ಮತ್ತ ದೃಷ್ಟಿಯನ್ನು ಕೇಂದ್ರೀಕರಿಸಿ ನಿಂತಿದ್ದ ಕಾಡಾನೆಗೆ ಮಾತ್ರ ತನ್ನ ಹಿಂಭಾಗದಲ್ಲಿ ಜರುಗುತ್ತಿರುವ ಆಗುಹೋಗುಗಳ ಪರಿವೆಯೆ ಇರಲಿಲ್ಲ.
 
ಒಂದೆರಡು ನಿಮಿಷಗಳಲ್ಲಿ ತನ್ನ ಬೆನ್ನ ಹಿಂದೆ ಏನೋ ಸಂಭವಿಸಿದ ಸುಳಿವು ಆ ಕಾಡಾನೆಗೆ ಸಿಕ್ಕಿತು. ಕುಪಿತಗೊಂಡ ಅದು ರಭಸದಿಂದ ಹಿಂದಿರುಗಿದಾಗ ಅದಕ್ಕೆ ಮೂವತ್ತು ಅಡಿಗಳ ಎತ್ತರದಲ್ಲಿ ಬೆಟ್ಟಗಳ ಸಾಲು ಚಲಿಸಿದಂತೆ ತನ್ನೆಡೆಗೆ ಬರುತ್ತಿದ್ದ ಆನೆಗಳು ಗೋಚರಿಸಿದವು. ಪರಿಸ್ಥಿಯ ಸಂಪೂರ್ಣ ಅರಿವಿಲ್ಲದ ಆ ಕಾಡಾನೆ ಅವುಗಳತ್ತ ಒಂದೆರಡು ಹೆಜ್ಜೆ ಇರಿಸಿತು. ಆದರೆ ಗಾಳಿ ತಿರುಗಿದಾಗ ಸಾಕಾನೆಗಳ ದಿಕ್ಕಿನಿಂದ ತೇಲಿ ಬಂದ ಸುದ್ದಿ ವಿರೋಧಪಕ್ಷದ ಪೂರ್ವಾಪರಗಳನ್ನು ವಿವರವಾಗಿ ಒದಗಿಸಿತು.
 
ಸಾವಧಾನವಾಗಿ ನಡೆದು ಬರುತ್ತಿದ್ದ ಸಾಕಾನೆಗಳ ಮಧ್ಯದಿಂದ ಒಂದು ಆನೆ ಇದ್ದಕಿದ್ದಂತೆ ಓಡುತ್ತಾ ಮುಂದೆ ಬಂತು. ನಮಗೆ ತಕ್ಷಣ ಅದರ ಗುರುತು ಸಿಕ್ಕಿತು. ಮುದುಮಲೈ ಎಂಬ ಹೆಸರಿನ ಈ ಆನೆ ತನ್ನ ಮಾವುತ ಮಾರನೊಡಗೂಡಿ ನಮ್ಮ ರಕ್ಷಣೆಗೆ ಓಡಿ ಬರುತ್ತಿತ್ತು. ಮುದುಮಲೈ ಆನೆ ಮತ್ತು ಮಾರನ ಆಗಮನ ನಮಗೆ ಭರವಸೆಯ ಬೆಳ್ಳಿಗೆರೆಯಂತೆ ಕಂಡಿತ್ತು. ನಮ್ಮ ಸಂತೋಷಕ್ಕೆ ಎಣೆಯೇ ಇರಲಿಲ್ಲ.
 
ಒಂಬತ್ತು ಅಡಿ ಎತ್ತರದ ಆನೆ ಮುದುಮಲೈ ತನ್ನ ವಿಶಾಲವಾದ ತಲೆಯನ್ನು ಮೇಲೆತ್ತಿ ಓಡಿಬರುವಾಗ ಬೃಹದಾಕಾರವಾಗಿ ಕಾಣುತ್ತಿತ್ತು. ಅದು ಧಾವಿಸಿ ಬಂದ ಭಂಗಿ ಯಾವುದೇ ಆನೆಯ ಹೃದಯದಲ್ಲಿ ದಿಗಿಲು ಹುಟ್ಟಿಸುವಂತಿತ್ತು.
 
ಮಾರ ಆನೆಗೆ ಏನೋ ಪಿಸುಗುಟ್ಟಿರಬಹುದು. ಆ ಗಂಭೀರ ಎಚ್ಚರಿಕೆಯ ಸಂದೇಶವನ್ನು ಮುದುಮಲೈ ಆ ಕಾಡಾನೆಗೆ ರವಾನಿಸಿರಬಹುದು. ಅರ್ಧ ತಾಸು ನಮ್ಮನ್ನು ಒತ್ತೆ ಇರಿಸಿಕೊಂಡಿದ್ದ ಆ ಕಾಡಾನೆಯ ಶೂರತ್ವ, ಘನತೆಗಳೆಲ್ಲ ಕ್ಷಣದಲ್ಲಿ ಕಾಣೆಯಾಗಿತ್ತು. ಭಯಗೊಂಡು ಮುಖ ಮುಚ್ಚಿಕೊಳ್ಳುವಂತೆ ಅವುಗಳತ್ತ ಬೆನ್ನು ತಿರುಗಿಸಿ ತಾನು ಹುಲ್ಲು ಮೇಯುತ್ತಿರುವುದಾಗಿ ನಟಿಸಿತು. ಆದರೆ, ವಿಪರೀತ ಗಾಬರಿಗೊಂಡಿದ್ದ ಅದು ಬಾಯಲ್ಲಿ ಇರಿಸಿಕೊಂಡಿದ್ದ ಹುಲ್ಲನ್ನು ಜಗಿಯಲು ಮರೆತೇಬಿಟ್ಟಿತ್ತು. ಭಯವೆಂದರೆ ಹಾಗೆಯೇ, ಮೆದುಳಿನ ಸರಳ ಆಜ್ಞೆಗಳನ್ನು ನಿರ್ವಹಿಸಲು ಕೂಡ ಹೀನಾಯವಾಗಿ ಸೋಲುವಂತೆ ಮಾಡುತ್ತದೆ. ಒಂದೆರಡು ನಿಮಿಷಗಳಲ್ಲಿ ತನ್ನ ಗಾಂಭೀರ್ಯವನ್ನೆಲ್ಲ ಒತ್ತೆ ಇಟ್ಟ ಕಾಡಾನೆ ತಲೆ ತಗ್ಗಿಸಿ ನಿಂತು, ಲದ್ದಿಹಾಕಿ, ತನ್ನ ಅಧೀನತೆಯನ್ನು ಶರಣಾಗತಿಯನ್ನು ಪ್ರಕಟಿಸಿತು. ಆನಂತರ ಅಲುಗುತ್ತಿದ್ದ ಕಾಲುಗಳನ್ನು ಮೆಲ್ಲನೆ ಎಳೆದು ಸದ್ದಿಲ್ಲದೆ ನೀರಿಗಿಳಿದು ಹೊಳೆ ದಾಟಿ ಕಾಡಿನಲ್ಲಿ ಮರೆಯಾಯಿತು. 
 
‘ಇನ್ನೇನಾದರು ಸಹಾಯ ಬೇಕೆ?’ ಎಂದು ಮಾರ ಸನ್ನೆ ಮಾಡಿ ಕೇಳಿದ. ಅಷ್ಟೊತ್ತಿಗೆ ನೀರಿಗಿಳಿದ್ದಿದ್ದ ಮುದುಮಲೈ ಆನೆ ಕೂಡ ಸೊಂಡಿಲನ್ನೊಮ್ಮೆ ಬೀಸಿ ‘ಹೇಗಿತ್ತು?’ ಎಂದು ಕೇಳಿದಂತೆ ನಮಗನ್ನಿಸಿತು. ನಮ್ಮ ಲೆಕ್ಕದಲ್ಲಿ ಮುದುಮಲೈಗೆ ಎರಡು ಬೆಲ್ಲದಚ್ಚುಗಳನ್ನು ಹೆಚ್ಚುವರಿಯಾಗಿ ನೀಡುವಂತೆ ಮಾರನಿಗೆ ಕೂಗಿ ಹೇಳಿದೆವು. 
ಹಾಗೆ ನೋಡಿದರೆ ಈ ಸಾಕಾನೆಗಳಾಗಲಿ ಮಾವುತರಾಗಲಿ ನಮ್ಮ ಆಸಕ್ತಿಯನ್ನು ಎಂದೂ ಕೆರಳಿಸಿರಲಿಲ್ಲ. ಬಹುಶಃ ಕಾಡಿನಲ್ಲಿ ಅವುಗಳ ಸ್ವಚ್ಛಂದವಾದ, ಸಂಕೀರ್ಣವಾದ ಬದುಕನ್ನು ಸ್ವಲ್ಪವಾದರೂ ಅರ್ಥಮಾಡಿಕೊಂಡಿದ್ದರ ಹಿನ್ನೆಲೆ ಇದಕ್ಕೆ ಕಾರಣವಿರಬಹುದು.
 
ಚರಿತ್ರೆಯುದ್ದಕ್ಕೂ ಮಾನವ ಈ ಸಲಗಗಳನ್ನು ನಿರಂತರವಾಗಿ ಶೋಷಿಸಿದ. ದಂತಕ್ಕೆ ಮಾರುಕಟ್ಟೆ ಸೃಷ್ಟಿಸಿ ಸಾವಿರಾರು ಆನೆಗಳನ್ನು ಹತ್ಯೆ ಮಾಡಿದ. ಬಹುಶಃ ಅವುಗಳ ಕೆಲಸ ನಿರ್ವಹಿಸುವ ಸಾಮರ್ಥ್ಯಕ್ಕೋ ಅಥವ ಬುದ್ದಿವಂತಿಕೆಗೋ ಅವುಗಳನ್ನು ಬಂಧಿಯಾಗಿಸಿದ. ಕಾಡಾನೆಗಳ ಸಹಜ ಬದುಕನ್ನು ಗಮನಿಸಿದವರಿಗೆ, ಮೇಲಿನ ಎಲ್ಲಾ ಚಟುವಟಿಕೆಗಳು ಮನುಷ್ಯರನ್ನು ಮನುಷ್ಯರೇ ಹಿಡಿದು ಮಾರಾಟ ಮಾಡುತ್ತಿದ್ದ ಗುಲಾಮಗಿರಿಯ ಕರಾಳದಿನಗಳನ್ನು ನೆನಪಿಗೆ ತರುತ್ತವೆ. ಹಾಗಾಗಿ ಸಾಕಾನೆಗಳ ಬಗ್ಗೆಯಾಗಲಿ, ಮಾವುತರ ಬಗ್ಗೆಯಾಗಲಿ ನಮಗೆ ಹೆಚ್ಚಿನ ಆಸಕ್ತಿ ಮೂಡಿರಲಿಲ್ಲ.
 
ಆದರೆ ಮಾರ ಮತ್ತು ಮುದುಮಲೈರನ್ನು ಹತ್ತಿರದಿಂದ ನೋಡುತ್ತಿದ್ದಾಗ ನಮ್ಮ ನಿಲುವು ಸ್ವಲ್ಪ ಬದಲಾಯಿತು.
 
ಜೇನು ಕುರುಬ ಮಾರನ ಪಾಲಿಗೆ ಎಲ್ಲವೂ ಆಗಿದ್ದ ಆನೆ ಮುದುಮಲೈ, ತಮಿಳುನಾಡಿನ ಮುದುಮಲೈ ಕಾಡಿನಲ್ಲಿರುವ ಅರಣ್ಯ ಇಲಾಖೆಯ ಸಾಕಾನೆಗಳ ಶಿಬಿರದಲ್ಲಿದ್ದ ಒಂದು ಅಪೂರ್ವವಾದ ಆನೆ. ಮಾರನ ಆಜ್ಞೆಗಳನ್ನು ಮಾತ್ರ ಅದು ಪಾಲಿಸುತ್ತಿತ್ತು. ಮುದುಮಲೈನ ಸಾಮರ್ಥ್ಯ ಜ್ಞಾನವನ್ನೆಲ್ಲಾ ಮಾರ ಚೆನ್ನಾಗಿ ಅರಿತಿದ್ದ. ಮಾರ ತನ್ನ ಆನೆಯನ್ನು ನಿಯಂತ್ರಿಸಲು ಎಂದೂ ಅಂಕುಶವನ್ನು ಬಳಸುತ್ತಿರಲಿಲ್ಲ. ಬದಲಾಗಿ ಸಣ್ಣ ಬೆತ್ತದ ಕಡ್ಡಿಯನ್ನಷ್ಟೆ ಹಿಡಿದಿರುತ್ತಿದ್ದ. ತನ್ನ ಮಾತಿನ ಸಂಜ್ಞೆಗಳನ್ನು ಆನೆಗೆ ತಿಳಿಸಲಷ್ಟೇ ಆ ಕಡ್ಡಿಯನ್ನು ಬಳಸುತ್ತಿದ್ದ. ವಿವರಿಸಲಾಗದ, ವಿಶದೀಕರಿಸಲಾಗದ ವಿಚಿತ್ರ ಸಂಬಂಧ ಅವರನ್ನು ಬಂಧಿಸಿದಂತೆ ಕಾಣುತ್ತಿತ್ತು.
ಅನಿವಾರ್ಯ ಕಾರಣಗಳಿಂದ ಕಾಡಾನೆಗಳನ್ನು ಸೆರೆಹಿಡಿಯಬೇಕಾದ ಸಂದರ್ಭಗಳಲ್ಲಿ ಇವರಿಬ್ಬರ ಪಾತ್ರ ನಿರ್ಣಾಯಕವಾಗುತ್ತಿತ್ತು. ಅಪಾಯದ ಸನ್ನಿವೇಶಗಳಲ್ಲಿ ಪಶುವೈದ್ಯರಿಗೆ, ವಿಜ್ಞಾನಿಗಳಿಗೆ ಅಥವ ಇತರ ಆನೆ ಮತ್ತು ಮಾವುತರಿಗೆ ಕೂಡ ಮಾರ ಮತ್ತು ಮುದುಮಲೈ ಜೋಡಿ ಭರವಸೆಯ ಸಂಕೇತವಾಗಿತ್ತು.
ಅದೊಂದು ಮಂಜು ಕವಿದ ಮುಂಜಾನೆ. ಯಾವುದೋ ಚಿತ್ರೀಕರಣದ ಕೆಲಸದ ಮೇರೆಗೆ ನಾವು ನೆರೆಯ ಕಾಡಿಗೆ ಹೋಗುತ್ತಿದ್ದೆವು.
 
ಮೈಸೂರಿನಿಂದ ಕೇರಳಕ್ಕೆ ತರಕಾರಿ ಸಾಗಿಸುತ್ತಿದ್ದ ಮಿನಿಟ್ರಕ್ ಚಾಲಕನ ನಿಯಂತ್ರಣ ತಪ್ಪಿ, ಮೂವತ್ತು ಅಡಿ ಜಾರಿ, ಮೊಯಾರ್ ಹೊಳೆಗೆ ಬಿದ್ದಿತ್ತು. ಚಾಲಕ ಅಪಾಯದಿಂದ ಪಾರಾಗಿದ್ದ. ಆದರೆ ಸೂರ್ಯ ಬೆಳಗುವ ಮುನ್ನ ತರಕಾರಿಯನ್ನು ಕೇರಳಕ್ಕೆ ತಲುಪಿಸಬೇಕಿದ್ದ ಆತ ಆತಂಕದಲ್ಲಿದ್ದ. ಅಪಘಾತದಿಂದ ಆದ ನಷ್ಟದ ಲೆಕ್ಕಾಚಾರ ಹಾಕುತ್ತ ಮಾಲೀಕ ತನ್ನ ಸಂಬಳದಲ್ಲಿ ಮುರಿದುಕೊಳ್ಳಬಹುದಾದ ಮೊತ್ತವನ್ನು ಅಂದಾಜಿಸುತ್ತಿದ್ದ. ಅತ್ತ ಬಂದ ಬೇರೆ ವಾಹನಗಳ ಚಾಲಕರು ಆತನ ನೆರವಿಗೆ ಮುಂದಾದರು. ಟ್ರ್ಯಾಕ್ಟರ್‌ಗೆ ಹಗ್ಗಗಳನ್ನು ಬಿಗಿದು ಉರುಳಿದ ಟ್ರಕ್‌ ಅನ್ನು ಮೇಲೆತ್ತಲು ಪ್ರಯತ್ನಿಸಿದರು. ತರಕಾರಿ ತುಂಬಿದ್ದ ಟ್ರಕ್ ಅಲುಗಾಡಲಿಲ್ಲ. ಆದರೆ ಆ ಪ್ರಯತ್ನದಿಂದ ಟ್ರಕ್ ಮತ್ತಷ್ಟು ಹಾನಿಯಾಗುತ್ತಿರುವುದನ್ನು ಕಂಡು ಚಾಲಕ ಚಿಂತೆಗೊಳಗಾದ. ಮುಂಜಾನೆಯ ಸ್ನಾನಕ್ಕೆಂದು ಹೊಳೆಯತ್ತ ಬರುತ್ತಿದ್ದ ಮಾರ ಮತ್ತು ಮುದುಮಲೈ, ಟ್ರಕ್ ಮೇಲೆತ್ತಲು ನಡೆದಿದ್ದ ಎಲ್ಲಾ ಕಸರತ್ತುಗಳನ್ನು ದೂರದಿಂದಲೇ ಗಮನಿಸುತ್ತಿದ್ದರು.
 
ಮಾರ ಖಂಡಿತವಾಗಿ ಸಹಾಯ ಮಾಡಬಲ್ಲ ಎಂದು ಅರಣ್ಯ ಇಲಾಖೆಯ ಗಾರ್ಡ್‌ಗಳು ಚಾಲಕನಿಗೆ ತಿಳಿಸಿದರು. ಕೂಡಲೇ ಹತ್ತಾರು ಮಂದಿ ಹೊಳೆಯಲ್ಲಿ ಅರ್ಧ ಹೂತಿದ್ದ ಟ್ರಕ್‌ಗೆ ಹಗ್ಗಗಳನ್ನು ಬಿಗಿದು ಮತ್ತೊಂದು ತುದಿಯನ್ನು ಆನೆಯ ಬಳಿ ತಂದರು. ಆನೆಯ ಮೇಲೆ ಕುಳಿತಿದ್ದ ಮಾರ ಪಾದಗಳಿಂದ ಮುದುಮಲೈನ ಕೊರಳುಗಳನ್ನು ಮೆಲ್ಲನೆ ಸ್ಪರ್ಶಿಸಿದ. ಸೊಂಡಿಲಿನಲ್ಲಿ ಹಗ್ಗವನ್ನು ಹಿಡಿದ ಮುದುಮಲೈ ಒಮ್ಮೆ ಜಗ್ಗಿ ಎಳೆದು ಟ್ರಕ್‌ನ ತೂಕವನ್ನು ಅಂದಾಜಿಸಿ ಮತ್ತೆ ಹಗ್ಗವನ್ನು ನೆಲದಮೇಲಿಟ್ಟಿತು. ಬಳಿಕ ಒಂದು ಹೆಜ್ಜೆ ಹಿಂದಕ್ಕೆ ಸರಿದು ಎಡಗಾಲನ್ನು ಮಡಚಿ ಮೇಲಕ್ಕೆತ್ತಿ ಹಿಡಿಯಿತು. ಆನೆಯ ಕಾಲಿನ ಮೇಲೆ ಹೆಜ್ಜೆ ಇರಿಸಿದ ಮಾರ ಜಾರಿದಂತೆ ನೆಲಕ್ಕಿಳಿದ. ಅಲ್ಲಿದ್ದವರಿಗೆ ಮಾರ ಮತ್ತು ಮುದುಮಲೈ ನಡುವೆ ನಡೆದ್ದಿದ್ದ ಸಂವಾದದ ಧ್ವನಿ ಕೇಳಲಿಲ್ಲ. ಬೆವರು ಸುರಿಸುತ್ತ ನಿಂತಿದ್ದ ಚಾಲಕ ಒಮ್ಮೆಲೆ ಮಾರನತ್ತ ಓಡಿ ಬಂದು ಏನನ್ನೋ ಪರಿಪರಿಯಾಗಿ ಕೇಳಿಕೊಂಡ. ಬಳಿಕ ಮಾರ, ಕಟ್ಟಿದ್ದ ಹಗ್ಗವನ್ನು ಮತ್ತೊಮ್ಮೆ ಪರೀಕ್ಷಿಸಿ, ಗಂಟೊಂದನ್ನು ಸರಿಪಡಿಸಿ ಹಗ್ಗದ ಮತ್ತೊಂದು ತುದಿಯನ್ನು ಮುದುಮಲೈ ಬಳಿ ತಂದಿರಿಸಿದ.
 
ಆನಂತರ ಆನೆಯ ಮೇಲೇರಿ ಕುಳಿತು ಒಂದೇ ಸ್ವರದಲ್ಲಿ ನಾಲ್ಕಾರು ಅಕ್ಷರಗಳನ್ನು ಗುನುಗಿದ. ಅಲ್ಲಿದ್ದವರಿಗಾರಿಗೂ ಅದು ಭಾಷೆಯಂತೆ ಕೇಳಲಿಲ್ಲ. ಏನೂ ಅರ್ಥವಾಗಲಿಲ್ಲ. ಬಿದ್ದಿದ್ದ ಹಗ್ಗವನ್ನು ಮುದುಮಲೈ ಎತ್ತಿ ಬಾಯಲ್ಲಿ ಇರಿಸಿಕೊಂಡು ಮೃದುವಾಗಿ ಎಳೆದಾಗ ಹಿಡಿತ ಬಿಗಿಯಾಯಿತು.
 
ಆಗಲೇ ಪ್ರೇಕ್ಷಕರ ಸಂಖ್ಯೆ ಇನ್ನಷ್ಟು ಬೆಳೆದಿತ್ತು. ಒಮ್ಮೆಲೇ ನೆರೆದಿದ್ದ ಜನ ‘ಅಯ್ಯೋ’ ಎಂದು ಉದ್ಗರಿಸಿದರು. ಟ್ರಕ್ ಆಯ ತಪ್ಪಿ ಮತ್ತೊಂದು ದಿಕ್ಕಿಗೆ ಓಲುತ್ತಿತ್ತು. ಪರಿಸ್ಥಿತಿಯನ್ನು ಅರ್ಥಮಾಡಿಕೊಂಡ ಮಾರ, ಮುದುಮಲೈಗೆ ಏನೋ ಹೇಳಿರಬಹುದು. ಮುದುಮಲೈ ನಿಂತ ಭಂಗಿಯಲ್ಲೇ ಅಲುಗಾಡದೆ ನಿಂತಿತು. ಬಳಿಕ ಮಾರನ ಆಜ್ಞಾಪನೆಯಂತೆ ಹಗ್ಗಗಳ ಹಿಡಿತವನ್ನು ಸರಿಹೊಂದಿಸಿಕೊಂಡು ಯಾವುದೋ ಲೆಕ್ಕಾಚಾರವನ್ನು ಅನ್ವಯಿಸಿದಾಗ ವಾಲಿದ್ದ ಟ್ರಕ್ ನೆಟ್ಟಗೆ ನಿಂತಿತು. ಮತ್ತೆ ಹಗ್ಗವನ್ನು ಸರಿಪಡಿಸಿ, ಬಿಗಿದು, ಮುದುಮಲೈಗೆ ಕೊಟ್ಟ ಮಾರ ಯಾವುದೋ ಆಜ್ಞೆಯನ್ನು ನೀಡಿದ. ಬಾಯಿಯಲ್ಲಿ ಹಗ್ಗವನ್ನು ಹಿಡಿದಿದ್ದ ಆನೆ ಒಂದು ಅಡಿ ಹಿಂದಕ್ಕೆ ಸರಿಯಿತು. ನಂತರ ಸೊಂಡಿಲಿನಲ್ಲಿ ಹಗ್ಗವನ್ನು ಸುತ್ತಿ ಹಿಡಿದು, ಸ್ವಲ್ಪ ಎಳೆದು, ನಂತರ ಕಾಲಿನಲ್ಲಿ ಮೆಟ್ಟಿ, ಉಸಿರನ್ನು ಎಳೆದು, ಹಗ್ಗವನ್ನು ಭದ್ರಪಡಿಸಿಕೊಂಡು ಮೆಲ್ಲನೆ ಹಿಂದಕ್ಕೆ ಜಗ್ಗಿತು. ಮುಂದಿನ ಇಪ್ಪತ್ತು ನಿಮಿಷಗಳ ಕಾಲ ಜಾಗರೂಕತೆಯಿಂದ ಹಿಂದಡಿಯಿಡುತ್ತಾ, ನಡುನಡುವೆ ಹಗ್ಗವನ್ನು ಬಿಗಿಗೊಳಿಸಿಕೊಳ್ಳುತ್ತಾ, ಟ್ರಕ್‌ನ ಸಮತೋಲನವನ್ನು ಎಚ್ಚರಿಕೆಯಿಂದ ಗಮನಿಸುತ್ತಾ ನಿರ್ವಹಿಸಿದ ಕಾರ್ಯಾಚರಣೆಯಲ್ಲಿ, ಹೊಳೆಯಲ್ಲಿ ಉರುಳಿಬಿದ್ದಿದ್ದ ಟ್ರಕ್ ಯಾವ ಅಪಾಯವಿಲ್ಲದೆ ಮೇಲೇರಿ ಬಂತು.
 
ನೆರೆದಿದ್ದ ಮಂದಿ ಮಾರ ಮತ್ತು ಅವನ ಆನೆಯ ಕಾರ್ಯಕೌಶಲ್ಯಕ್ಕೆ ಬೆರಗಾದರು. ಹರ್ಷೋದ್ಘಾರ ಕೂಗಿದರು. ಟ್ರಕ್‌ನಲ್ಲಿದ್ದ ತರಕಾರಿಗಳಿಗೆ ಗಾಳ ಬೀಸಿ ಕುಳಿತಿದ್ದ ಮಂಗಗಳ ಗುಂಪು ಆ ಗದ್ದಲಕ್ಕೆ ಬೆದರಿ ಚದುರಿದವು. ತಪ್ಪಿಹೋದ ಭೋಜನದ ಅವಕಾಶಕ್ಕೆ ಶಪಿಸಿದವು. 
 
ನಮ್ರತೆಯಿಂದ ಕೃತಜ್ಞತೆಯನ್ನು ಸೂಚಿಸುತ್ತ ಚಾಲಕ ಮಾದನಿಗೆ ಹಣ ನೀಡಲು ಮುಂದಾದ. ತಲೆಯಾಡಿಸಿದ ಮಾದ ಹಣ ತೆಗೆದುಕೊಳ್ಳಲು ನಿರಾಕರಿಸಿ, ಕಾರ್ಯಾಚರಣೆಯಲ್ಲಿ ಮುದುಮಲೈಗೆ ಏನಾದರೂ ಗಾಯಗಳಾಗಿರಬಹುದೆ ಎಂದು ಪರೀಕ್ಷಿಸುವುದರಲ್ಲಿ ಮಗ್ನನಾಗಿದ್ದ. ವಿಜಯೋತ್ಸಾಹದಲ್ಲಿ, ನೆರೆದಿದ್ದ ಜನರಿಗೆ ಹೊರಬಂದ ಟ್ರಕ್ ಮರೆತೇ ಹೋಯಿತು. ಪಕ್ಕದ ಅಂಗಡಿಯಲ್ಲಿದ್ದ ಬಾಳೆ, ತೆಂಗಿನಕಾಯಿಗಳನ್ನು ಕೊಂಡು ಮುದುಮಲೈಗೆ ಅರ್ಪಿಸಲು ಮುಂದಾದರು. ಮುದುಮಲೈ ಉಡುಗೊರೆಗಳನ್ನು ಸ್ವೀಕರಿಸಲು ಮಾರ ಬೇಡವೆನ್ನಲಿಲ್ಲ. ‘ಅಬ್ಬಬ್ಬ... ಏನದ್ಭುತ! ಇಂತಹ ಆನೆ–ಮಾವುತರ ಜೋಡಿಯನ್ನೇ ನೋಡಿಲ್ಲ’ ಎಂಬ ಮಾತುಗಳು ತಮಿಳು, ಕನ್ನಡ, ಮಲೆಯಾಳಂ ಭಾಷೆಗಳಲ್ಲಿ ತೇಲಿಬರುತ್ತಿತ್ತು. ಜನರ ಪ್ರಶಂಸೆಗಳಿಗೆ ತಲೆಕೆಡಿಸಿಕೊಳ್ಳದ ಮಾರ ಕಾಡುಕುರುಬರ ಸಹಜ ಸ್ವಭಾವದಂತೆ ನಿರ್ಲಿಪ್ತನಾಗಿ ಮುದುಮಲೈನೊಂದಿಗೆ ಕಾಡಿನಲ್ಲಿ ಮರೆಯಾದ.
 
ಇದೇನೇ ಆದರೂ ಮಾರ ಮನುಷ್ಯನೆ! ಕೆಲವೊಮ್ಮೆ ಆತ ಸಿಟ್ಟಾಗುತ್ತಿದ್ದ. ಆದರೆ ಸಿಟ್ಟನ್ನಾಗಲೀ ಸುಖದುಖಃಗಳನ್ನಾಗಲೀ ಬಹಿರಂಗವಾಗಿ ಪ್ರಕಟಿಸಿದ್ದು ನಮಗೆ ನೆನಪಿಲ್ಲ. ಆತ ಸರಳವಾಗಿ ಕಂಡರೂ ಮಾಂತ್ರಿಕನಂತೆ ತನ್ನ ಗುಟ್ಟುಗಳನ್ನು ಎಂದೂ ಬಿಟ್ಟುಕೊಡುತ್ತಿರಲ್ಲಿಲ್ಲ. 
 
ಅರಣ್ಯ ಇಲಾಖೆಯಲ್ಲಿ ಆಗ ಮಾವುತರಿಗೆ ಸಂಬಳ ವಿಲೇವಾರಿ ಮಾಡುತ್ತಿದ್ದುದು ವಲಯ ಅರಣ್ಯಾಧಿಕಾರಿಗಳು. ಹಾಗಾಗಿ ತಿಂಗಳಿಗೊಮ್ಮೆ ಮಾವುತರೆಲ್ಲ ತಮ್ಮ ಆನೆಗಳೊಂದಿಗೆ ಅವರ ಕಚೇರಿಯ ಮುಂದೆ ಬಂದುನಿಲ್ಲುತ್ತಿದ್ದರು.
 
ಅಂದು ಸಂಬಳದ ದಿನ. ಏನೋ ಕೆಲಸವಿದ್ದುದರಿಂದ ನಾವು ಕೂಡ ಅಲ್ಲಿಗೆ ಹೋಗಿದ್ದೆವು. ಹೊರಗೆ ಕಾದಿದ್ದ ಮಾವುತರ ಆನೆಗಳೆಲ್ಲ ಹುಲ್ಲು ಮೇಯುತ್ತಿದ್ದವು. ಶಾಲೆಗೆ ರಜೆ ಇದ್ದುದರಿಂದ ಅಧಿಕಾರಿಯ ಮಗ ಸಹ ಊರಿನಿಂದ ಬಂದಿದ್ದ. ಜೊತೆಯಲ್ಲಿ ತಂದಿದ್ದ ಫುಟ್‌ಬಾಲ್ ಒದೆಯುತ್ತಾ ಆಟವಾಡುತ್ತಿದ್ದ. ಚೆಂಡು ಆನೆಗಳ ಕಾಲಿನಡಿಯಲ್ಲಿ ಹೋದಾಗ ಬೆಚ್ಚುತ್ತಿದ್ದ ಆನೆಗಳನ್ನು ಕಂಡು ಚಪ್ಪಾಳೆ ತಟ್ಟಿ ಆನಂದಿಸುತ್ತಿದ್ದ. ಕೆಲವೊಮ್ಮೆ ಹಾರಿದ ಚೆಂಡು ಆನೆಗಳ ಹೊಟ್ಟೆಗೆ, ಸೊಂಡಿಲಿಗೆ ಬಡಿದಾಗ ಆತ ಕೇಕೆ ಹಾಕುತ್ತಾ ನಗುತ್ತಿದ್ದ. ಆನೆಗಳು ತಾಳ್ಮೆಯಿಂದ ನಿಂತಿದ್ದವು. ಆಟ ಮುಂದುವರಿದಿದ್ದಾಗ ಮಾರ ಸಂಬಳ ಹಿಡಿದು ಹೊರಬಂದ. ಅಧಿಕಾರಿ ಏನೋ ಕಿರಿಕಿರಿಯ ಮಾತನಾಡಿದ್ದನೇನೊ, ಮಾರ ಸಿಟ್ಟಿನಲ್ಲಿದ್ದಂತೆ ಕಂಡ. ಮುದುಮಲೈ ಆನೆ ಮೂವತ್ತು ಮೀಟರ್ ದೂರದಲ್ಲಿ ನಿಂತಿತ್ತು. ಆಗ ಅರಣ್ಯಾಧಿಕಾರಿಯ ಮಗ ಒದ್ದ ಚೆಂಡು ಮುದುಮಲೈ ಆನೆಯ ಬಳಿಗೆ ಬಂತು. ಮಾರ ಮುದುಮಲೈನತ್ತ ನೋಡಿದ. ಮರುಕ್ಷಣದಲ್ಲಿ ತನ್ನ ಬಳಿ ಉರುಳುತ್ತಿದ್ದ ಚೆಂಡಿನ ಮೇಲೆ ಕರಾರುವಕ್ಕಾಗಿ ಮುದುಮಲೈ ಕಾಲಿರಿಸಿತು. ನಂತರ ಮಾರನತ್ತ ನೋಡಿದಂತಾಯಿತು. ಮಾರ ಏನೂ ಹೇಳಿದಂತೆ ಕಾಣಲಿಲ್ಲ. ಮುದುಮಲೈ ತನ್ನ ತೂಕದ ಸ್ವಲ್ಪ ಭಾಗವನ್ನು ಚೆಂಡಿನ ಮೇಲೆ ವರ್ಗಾಯಿಸಿತು. ಆಗ ಬಂದ ಸದ್ದು ಕಾಡಿಗೆಲ್ಲ ಕೇಳಿಸಿತು. ಚೆಂಡು ಹಾಳೆಯಂತೆ ಅಪ್ಪಚ್ಚಿಯಾಗಿತ್ತು. ಕಣ್ಣಲ್ಲಿ ನೀರು ಸುರಿಸುತ್ತಾ, ಗಟ್ಟಿಯಾಗಿ ಅಳುತ್ತಾ ಬಾಲಕ ಅಧಿಕಾರಿ ಅಪ್ಪನತ್ತ ಓಡಿದ. ಮಾರ ಮತ್ತು ಮುದುಮಲೈ ಬಗ್ಗೆ ದೂರು ನೀಡಿದ.
 
ಆದರೆ ಮಾರ ಮುದಮಲೈಗೆ ಚೆಂಡನ್ನು ಧ್ವಂಸಮಾಡಲು ಸೂಚನೆ ನೀಡಿದ್ದನೋ ಇಲ್ಲವೋ ಎಂದು ಅಲ್ಲಿ ನೆರೆದಿದ್ದ ಯಾರಿಗೂ ತಿಳಿದಿರಲಿಲ್ಲ. ಹಾಗಾಗಿ ಯಾವುದೇ ಸಾಕ್ಷ್ಯಾಧಾರವಿಲ್ಲದ ಕಾರಣ ಅದೊಂದು ಆಕಸ್ಮಿಕ ಘಟನೆ ಎಂದು ವಿಚಾರಣೆ ಮುಕ್ತಾಯ ಕಂಡಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT