ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರುಕಟ್ಟೆಯ ಮಾತು, ಇತಿಹಾಸದ ಸಂದೇಶ

Last Updated 1 ಏಪ್ರಿಲ್ 2018, 19:30 IST
ಅಕ್ಷರ ಗಾತ್ರ

‘ಅತಂತ್ರ ಲೋಕಸಭೆ’ ಎನ್ನುವ ಮಾತು ಷೇರು ಮಾರುಕಟ್ಟೆಯನ್ನು ಭೀತಿಗೆ ನೂಕುತ್ತದೆ. ಬಲಿಷ್ಠ ಮತ್ತು ದೃಢ ನಿರ್ಧಾರಗಳನ್ನು ಕೈಗೊಳ್ಳುವ ನಾಯಕತ್ವವನ್ನು ನಮ್ಮ ಅರ್ಥ ವ್ಯವಸ್ಥೆ ಬಯಸುತ್ತದೆ, ಒಂದೇ ಪಕ್ಷಕ್ಕೆ ಬಹುಮತ ಸಿಗದಿದ್ದರೆ ಅಂತಹ ನಾಯಕತ್ವ ದೊರೆಯುವುದಿಲ್ಲ ಎಂಬ ಚಿಂತನಾಕ್ರಮ ನಮ್ಮಲ್ಲಿದೆ.

‘ಒಂದೇ ಪಕ್ಷಕ್ಕೆ ಬಹುಮತ ಸಿಗದಿದ್ದರೆ, ಗಟ್ಟಿ ನಾಯಕತ್ವ ಸಿಗದಿದ್ದರೆ ಆರ್ಥಿಕತೆಗೆ ಸಂಬಂಧಿಸಿದ ಕಾರ್ಯಕ್ರಮಗಳಿಗೆ ನಿರ್ದಿಷ್ಟ ದಿಕ್ಕು ಇರುವುದಿಲ್ಲ, ಜಿಡಿಪಿ (ಒಟ್ಟು ಆಂತರಿಕ ಉತ್ಪನ್ನ) ಬೆಳವಣಿಗೆ ದರ ಕಡಿಮೆ ಇರುತ್ತದೆ. ಕೇಂದ್ರದ ಸಚಿವ ಸಂಪುಟದಲ್ಲಿ ಸ್ಥಾಪಿತ ಹಿತಾಸಕ್ತಿಗಳು ಹಲವಾರು ಇರುತ್ತವೆ, ಕೇಂದ್ರದ ನಾಯಕರು ಏನು ಮಾಡಬೇಕು ಮತ್ತು ಏನು ಮಾಡಬಾರದು ಎನ್ನುವ ವಿಚಾರದಲ್ಲಿ ಪ್ರಾದೇಶಿಕ ಪಕ್ಷಗಳೇ ಪರಮಾಧಿಕಾರ ಹೊಂದಿರುತ್ತವೆ...’ ಬಹುಮತ ಹೊಂದಿರುವ ಸರ್ಕಾರದ ಪರವಾಗಿ, ಮೈತ್ರಿಕೂಟ ಸರ್ಕಾರಗಳ ವಿರುದ್ಧವಾಗಿ ಇರುವ ಆಲೋಚನೆಗಳಿಗೆ ಈ ಮೇಲಿನ ಮಾತುಗಳು ಆಧಾರವಾಗಿ ನಿಂತಿವೆ.

ಆದರೆ, ಈಚಿನ ವರ್ಷಗಳ ಬೆಳವಣಿಗೆಗಳು ಈ ಬಗೆಯ ಆಲೋಚನಾ ಕ್ರಮವನ್ನು ಸಮರ್ಥಿಸುವಂತೆ ಇಲ್ಲ. ಯುಪಿಎ-1ರ ಆಡಳಿತ ಅವಧಿಯಲ್ಲಿ (2005ರಿಂದ 2009) ದೇಶದ ಜಿಡಿಪಿ ಬೆಳವಣಿಗೆ ದರ ಶೇಕಡ 8.5ರಷ್ಟು ಇತ್ತು. ದೇಶದ ಇತಿಹಾಸದ ಯಾವುದೇ ಐದು ವರ್ಷಗಳಿಗೆ ಹೋಲಿಕೆ ಮಾಡಿದರೂ ಇದು ಅತ್ಯಂತ ಹೆಚ್ಚಿನ ಬೆಳವಣಿಗೆ ದರ. ಈ ಬೆಳವಣಿಗೆ ದರ ಸಾಧ್ಯವಾಗಿದ್ದು ಕಾಂಗ್ರೆಸ್ಸಿನ ನೇತೃತ್ವದಲ್ಲಿ ನಡೆಯುತ್ತಿದ್ದ ಒಂದು ಮೈತ್ರಿಕೂಟದ ಆಡಳಿತದ ಅವಧಿಯಲ್ಲಿ. ಆ ಸಂದರ್ಭದಲ್ಲಿ ಲೋಕಸಭೆಯಲ್ಲಿ ಕಾಂಗ್ರೆಸ್ಸಿನ ಸಂಖ್ಯಾಬಲ 145 ಮಾತ್ರ. ಮಾಹಿತಿ ಹಕ್ಕು ಕಾಯ್ದೆ ಸೇರಿದಂತೆ ನಾವು ಕಂಡ ಕೆಲವು ಅತ್ಯುತ್ತಮ ಕಾಯ್ದೆಗಳು ಆ ಅವಧಿಯಲ್ಲಿ ಮೂಡಿಬಂದವು.

ಮುಂದಿನ ಚುನಾವಣೆಯಲ್ಲಿ (2009ರಲ್ಲಿ) ಕೂಡ ಇದೇ ಮೈತ್ರಿಕೂಟ ಅಧಿಕಾರಕ್ಕೆ ಬಂತು. ಆಗ ಕಾಂಗ್ರೆಸ್ ತನ್ನ ಸಂಖ್ಯಾಬಲವನ್ನು 200ಕ್ಕಿಂತ ಹೆಚ್ಚು ಮಾಡಿಕೊಂಡಿತು. ಇದರ ಪರಿಣಾಮವಾಗಿ ಇನ್ನಷ್ಟು ಹೆಚ್ಚು ಗಟ್ಟಿ ನಿರ್ಧಾರಗಳನ್ನು ಕೈಗೊಳ್ಳುವ, ಹೆಚ್ಚು ಸ್ವತಂತ್ರವಾಗಿ ತೀರ್ಮಾನಗಳನ್ನು ಕೈಗೊಳ್ಳುವ ಸರ್ಕಾರ ರಚನೆಯಾಗಬೇಕಿತ್ತು. ಸರ್ಕಾರ ಅದೇ ರೀತಿಯಲ್ಲಿ ಇದ್ದಿದ್ದಿರಬಹುದು. ಆದರೆ, ಆ ಅವಧಿಯ ಜಿಡಿಪಿ ಅಂಕಿ-ಅಂಶಗಳು ಈ ಮಾತಿಗೆ ಪುಷ್ಟಿ ನೀಡುವುದಿಲ್ಲ. ಆಗ ಅರ್ಥ ವ್ಯವಸ್ಥೆಯ ವಾರ್ಷಿಕ ಸರಾಸರಿ ಬೆಳವಣಿಗೆ ದರ ಶೇಕಡ 7ರಷ್ಟಕ್ಕಿಂತ ತುಸು ಕಡಿಮೆಯೇ ಇತ್ತು. ಈ ಸಂದರ್ಭದಲ್ಲಿ ಇಡೀ ವಿಶ್ವವು ಆರ್ಥಿಕ ಬಿಕ್ಕಟ್ಟಿನಿಂದ ಹೊರಬರುತ್ತಿತ್ತು ಎಂಬುದನ್ನೂ ನಾವು ಒಪ್ಪಿಕೊಳ್ಳಬೇಕು. ಅಂದರೆ, ಆ ಸಂದರ್ಭದಲ್ಲಿ ಹೆಚ್ಚಿನ ಬೆಳವಣಿಗೆ ದರ ಸಾಧಿಸಲು ಬಾಹ್ಯ ಬೆಂಬಲ ತೀರಾ ಕಡಿಮೆ ಇತ್ತು.

ಕಳೆದ ಹದಿನೈದು ವರ್ಷಗಳ ಅವಧಿಯಲ್ಲಿ ಅತ್ಯಂತ ಕಡಿಮೆ ಪ್ರಮಾಣದ ಆರ್ಥಿಕ ಬೆಳವಣಿಗೆ ದರವನ್ನು ನಾವು ಕಂಡಿರುವುದು ಕೇಂದ್ರದಲ್ಲಿ ಸ್ಪಷ್ಟ ಬಹುಮತದ ಸರ್ಕಾರ ಇರುವಾಗ, ಜಾಗತಿಕ ಅರ್ಥ ವ್ಯವಸ್ಥೆ ದೊಡ್ಡ ಬೆಳವಣಿಗೆ ಸಾಧಿಸುತ್ತ ಇರುವಾಗ. ನಾನು ಸರ್ಕಾರದ ಸಾಧನೆಯ ಬಗ್ಗೆ ಪ್ರತಿಕ್ರಿಯೆ ನೀಡಲು ಹೋಗುವುದಿಲ್ಲ. ಷೇರು ಮಾರುಕಟ್ಟೆ ಮತ್ತು ಅದರ ವಿಶ್ಲೇಷಕರು ಹೇಳುತ್ತಿರುವಂತೆ, ಬಹುಮತ ಹೊಂದಿರುವ ಸರ್ಕಾರಕ್ಕೂ ಹೆಚ್ಚಿನ ಜಿಡಿಪಿ ಬೆಳವಣಿಗೆ ದರಕ್ಕೂ ಸಂಬಂಧ ಇರುವಂತೆ ಕಾಣುತ್ತಿಲ್ಲ ಎಂಬುದನ್ನು ವಿವರಿಸುವುದಷ್ಟೇ ನನ್ನ ಯತ್ನ.

ಮೈತ್ರಿಕೂಟ ಸರ್ಕಾರಗಳು ಪ್ರಮುಖ ಸುಧಾರಣಾ ಕ್ರಮಗಳನ್ನು ಜಾರಿಗೆ ತರಲಾರವು ಎಂಬುದು ಅವುಗಳ ಬಗ್ಗೆ ಇರುವ ಇನ್ನೊಂದು ಕಳವಳದ ಮಾತು. ಆದರೆ, 1991ರ ನಂತರ ನಡೆದ, ದೇಶ ಕಂಡ ಅತಿದೊಡ್ಡ ಆರ್ಥಿಕ ಸುಧಾರಣೆ ಜಾರಿಗೆ ಬಂದಿದ್ದು ಬಹುಮತ ಇಲ್ಲದ ಸರ್ಕಾರದ ಅವಧಿಯಲ್ಲಿ. ಈ ಸರ್ಕಾರ ತನ್ನ ಅವಧಿಯುದ್ದಕ್ಕೂ ಪತನದ ಭೀತಿ ಎದುರಿಸುತ್ತಲೇ ಇತ್ತು. 'ಕನಸಿನ ಬಜೆಟ್' ಎಂದು ಕರೆಸಿಕೊಂಡಿರುವ, 1998ರ ಬಜೆಟ್‌ ಮಂಡಿಸಿದ್ದು ಬಹುಶಃ ಭಾರತ ಕಂಡ ಅತ್ಯಂತ ಸಣ್ಣ ಸರ್ಕಾರ (ಈ ಸರ್ಕಾರಕ್ಕೆ ಕಾಂಗ್ರೆಸ್ ಬಾಹ್ಯ ಬೆಂಬಲ ನೀಡಿತ್ತು). ನಮ್ಮ ಇತಿಹಾಸ ಹೀಗಿರುವ ಕಾರಣ, ಮೈತ್ರಿಕೂಟ ಸರ್ಕಾರಗಳು ಭಾರತಕ್ಕೆ ಒಳ್ಳೆಯದಲ್ಲ ಎಂದು ಷೇರು ಮಾರುಕಟ್ಟೆ ಏಕೆ ಭಾವಿಸುತ್ತಿದೆ ಎಂಬುದನ್ನು ಗೊತ್ತುಮಾಡಿಕೊಳ್ಳುವುದು ಸುಲಭದ ಕೆಲಸವಲ್ಲ.

ವಿಶ್ವ ಬ್ಯಾಂಕ್‌ ಸಿದ್ಧಪಡಿಸುವ 'ಜಾಗತಿಕ ಆಡಳಿತ ಮಟ್ಟ ಸೂಚಿ'ಯಲ್ಲಿನ ಅಂಕಿ-ಅಂಶಗಳನ್ನು ಯುಪಿಎ-1, ಯುಪಿಎ-2 ಮತ್ತು ಈಗಿನ ಎನ್‌ಡಿಎ ಸರ್ಕಾರಗಳ ಜೊತೆ ಕಳೆದ ವರ್ಷ ಹೋಲಿಕೆ ಮಾಡಿದ್ದರು ಪತ್ರಕರ್ತರಾದ ಟಿ.ಎನ್. ನೈನನ್. ಭ್ರಷ್ಟಾಚಾರ ನಿಗ್ರಹದ ವಿಚಾರದಲ್ಲಿ ಭಾರತದ ಶೇಕಡಾವಾರು ರ‍್ಯಾಂಕ್ 2013ರಲ್ಲಿ 37.0 ಇದ್ದಿದ್ದು 2016ರ ವೇಳೆಗೆ 47.1ಕ್ಕೆ ಸುಧಾರಣೆ ಕಂಡಿತ್ತು. ಆದರೆ, ಇದು 2006ರಲ್ಲಿ ಮನಮೋಹನ್ ಸಿಂಗ್ ನೇತೃತ್ವದ ಸರ್ಕಾರ ಪಡೆದಿದ್ದ ರ‍್ಯಾಂಕ್‌ಗಿಂತ (46.8) ಬಹಳ ಉತ್ತಮವಾಗಿಯೇನೂ ಇಲ್ಲ. ಸರ್ಕಾರದ ಆಡಳಿತ ಎಷ್ಟು ಪರಿಣಾಮಕಾರಿ ಎನ್ನುವ ವಿಚಾರದಲ್ಲಿ ಭಾರತದ ರ‍್ಯಾಂಕ್ 2014ರಲ್ಲಿ 45.2 ಆಗಿತ್ತು. 2016ರಲ್ಲಿ ಇದು 57.2 ಆಯಿತು. ಹಾಗೆಯೇ, ಯುಪಿಎ-1ರ ಅವಧಿಯಲ್ಲಿ, 2007ರಲ್ಲಿ ಇದು 57.3 ಆಗಿತ್ತು.

ಸರ್ಕಾರದ ನೀತಿ ನಿರೂಪಣೆ ವಿಚಾರದಲ್ಲಿ 2012ರಲ್ಲಿ ಭಾರತದ ಅಂಕ 35.1 ಆಗಿದ್ದು 2016ರಲ್ಲಿ 41.3ಕ್ಕೆ ಏರಿತು. ಆದರೆ ಇದು 2006ರಲ್ಲಿ 45.1ರಲ್ಲಿ ಇತ್ತು. ರಾಜಕೀಯ ಸ್ಥಿರತೆ ಮತ್ತು ಹಿಂಸಾಚಾರ ಇಲ್ಲದಿರುವಿಕೆ ವಿಚಾರದಲ್ಲಿ ಭಾರತದ ರ‍್ಯಾಂಕ್ ಕಡಿಮೆ ಇತ್ತು ಎಂಬುದನ್ನು ನೈನನ್ ಗುರುತಿಸಿದ್ದಾರೆ. ಈ ಎರಡು ವಿಚಾರದಲ್ಲಿ ಭಾರತದ ರ‍್ಯಾಂಕ್ 2005ರಲ್ಲಿ 17.5ರಲ್ಲಿ, 2014ರಲ್ಲಿ 13.8ರಲ್ಲಿ ಇತ್ತು. ಹಾಗೆಯೇ ಇದು 2015ರಲ್ಲಿ 17.1 ಆಗಿತ್ತು. 2016ರಲ್ಲಿ 14.3ಕ್ಕೆ ಕುಸಿಯಿತು. ಇದು 2005ಕ್ಕಿಂತ ಕಡಿಮೆ ಎಂಬುದನ್ನು ಗಮನಿಸಬೇಕು. ಲಿಖಿತ ಕಾನೂನುಗಳಿಗೆ ಅನುಗುಣವಾಗಿ ದೇಶದ ಆಡಳಿತ ನಡೆಯುವ ವಿಚಾರದಲ್ಲಿ 2016ರಲ್ಲಿ ದೇಶ ಹೊಂದಿದ್ದ ರ‍್ಯಾಂಕ್ (52.4) 2013ರಲ್ಲಿನ ರ‍್ಯಾಂಕ್‌ಗಿಂತ (53.1) ತುಸು ಕಡಿಮೆ. ಹಾಗೆಯೇ ಇದು 2006ರಲ್ಲಿನ (58.4) ರ‍್ಯಾಂಕ್‌ಗಿಂತ ಬಹಳ ಕಡಿಮೆ. ದೇಶದ ಜನ ಪ್ರಜಾತಾಂತ್ರಿಕ ಪ್ರಕ್ರಿಯೆಗಳಲ್ಲಿ ಪಾಲ್ಗೊಳ್ಳುವ, ಮುಕ್ತವಾಗಿ ಅಭಿವ್ಯಕ್ತಿಸುವ ವಿಚಾರಗಳಲ್ಲಿ ದೇಶದ ರ‍್ಯಾಂಕ್ 2013ರಲ್ಲಿ 61.5 ಇದ್ದಿದ್ದು 2016ರಲ್ಲಿ 58.6ಕ್ಕೆ ಇಳಿಯಿತು.

ನೈನನ್‌ ನೀಡಿರುವ ಅಂಕಿ-ಅಂಶಗಳು ಸ್ಪಷ್ಟವಾಗಿರುವಂತೆ ಇವೆ. 'ಬಲಿಷ್ಠ ಮತ್ತು ನಿರ್ಣಯ ಕೈಗೊಳ್ಳಲು ಸಮರ್ಥವಾಗಿರುವ' ಸರ್ಕಾರ ಏನನ್ನೋ ಮಾಡಬಲ್ಲದು, ಆದರೆ ಅದನ್ನು 'ದುರ್ಬಲ' ಮೈತ್ರಿಕೂಟ ಸರ್ಕಾರ ಮಾಡಲಾರದು ಎಂದು ಹೇಳಲು ನಮ್ಮ ಬಳಿ ಏನೂ ಇಲ್ಲ - ಆದರೆ ಬಹುಮತದ ಸರ್ಕಾರಗಳು ಹಾಗೊಂದು ಕ್ರಮ ಕೈಗೊಳ್ಳಬಲ್ಲವು ಎಂದು ಮಾರುಕಟ್ಟೆ ಮತ್ತು ಅಲ್ಲಿನ ವಿಶ್ಲೇಷಕರು ನಂಬಿರುವಂತೆ ಇದೆ. ನಾಯಕತ್ವ ಮತ್ತು ಅದು ಹೊರಟಿರುವ ದಿಕ್ಕು ಬಹುಮುಖ್ಯವೇ ವಿನಾ ಲೋಕಸಭೆಯ ರಚನೆ ಹೇಗಿದೆ ಎಂಬುದು ಬಹುಮುಖ್ಯ ಸಂಗತಿ ಅಲ್ಲ ಎಂದು ಅನಿಸುತ್ತದೆ. ರಾಷ್ಟ್ರದ ನೈಜ ಹಿತಾಸಕ್ತಿಯ ಬಗ್ಗೆ ಚರ್ಚೆ ನಡೆಯುವಾಗ, ಸ್ಪಷ್ಟ ಬಹುಮತ ಇಲ್ಲದಿದ್ದರೂ ಎಲ್ಲ ಪಕ್ಷಗಳನ್ನು ಒಂದೇ ವೇದಿಕೆಯಡಿ ತರುವುದು ಕಷ್ಟದ ಕೆಲಸವೆಂದು ಅನಿಸುತ್ತಿಲ್ಲ. ಸ್ಪಷ್ಟ ಬಹುಮತವು ಅಷ್ಟೇನೂ ಒಳ್ಳೆಯದು ಮಾಡದ ಸಂದರ್ಭಗಳೂ ಇವೆ ಎಂಬುದು ನನ್ನ ವಾದ. ಅತ್ಯಂತ ವೈವಿಧ್ಯಮಯವಾಗಿರುವ ಭಾರತದಂತಹ ದೇಶಗಳಲ್ಲಿ, ಜೂಜಿನಂತಹ ಕೆಲವು ದಿಟ್ಟ ನಿರ್ಧಾರಗಳನ್ನು ಕೈಗೊಳ್ಳುವುದಕ್ಕಿಂತ ಎಚ್ಚರಿಕೆಯಿಂದ ಮಧ್ಯಮ ಪಥವನ್ನು ಆಯ್ಕೆ ಮಾಡಿಕೊಳ್ಳುವುದು ಹೆಚ್ಚು ವಿವೇಕದ ಕೆಲಸ.

ಒಂದೇ ಪಕ್ಷದ ಸರ್ಕಾರ ಇರಬೇಕು ಎಂಬ ಆಲೋಚನೆಯು ಅಷ್ಟಿಷ್ಟು ಪ್ರಮಾಣದಲ್ಲಿ ಪೂರ್ವಗ್ರಹಪೀಡಿತವಾಗಿದೆ ಎಂಬುದನ್ನು ನಾವು ಒಪ್ಪಿಕೊಳ್ಳಬೇಕು. ಪ್ರಾದೇಶಿಕ ಪಕ್ಷಗಳೆಲ್ಲವೂ ಭ್ರಷ್ಟಗೊಂಡಿವೆ, ಅವು ಯಾವಾಗಲೂ ಸ್ವಹಿತಾಸಕ್ತಿಯಿಂದ ವರ್ತಿಸುತ್ತವೆ, ಜಾತಿ ಆಧಾರಿತ ಪಕ್ಷಗಳು ವಿವೇಕಯುತವಾಗಿ ನಿರ್ಧಾರ ಕೈಗೊಳ್ಳುತ್ತವೆ ಎಂದು ನಂಬುವಂತಿಲ್ಲ ಎಂಬ ಮಾತುಗಳು ಈ ಪೂರ್ವಗ್ರಹಗಳಿಗೆ ಕೆಲವು ಉದಾಹರಣೆಗಳು. ಇಂತಹ ಮಾತುಗಳಲ್ಲಿ ವಿಶ್ಲೇಷಣೆಗಿಂತಲೂ ಪೂರ್ವಗ್ರಹಗಳೇ ಹೆಚ್ಚು. ನಮ್ಮ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಯಾವುದೇ ಪಕ್ಷ ಇನ್ನೊಂದು ಪಕ್ಷಕ್ಕಿಂತ ಯಾವುದೇ ವಿಧದಲ್ಲೂ ಹೆಚ್ಚು ಉತ್ತಮ ಎಂದು ಹೇಳಿಕೊಳ್ಳುವ ಸ್ಥಿತಿಯಲ್ಲಿ ಇಲ್ಲ.

2019ರಲ್ಲಿ ನಮ್ಮಲ್ಲಿ ಅತಂತ್ರ ಲೋಕಸಭೆ ರಚನೆಯಾಗುವ ಸಾಧ್ಯತೆ ಇದೆ, ಆಡಳಿತ ಪಕ್ಷವು ಬಹುಮತ ಪಡೆಯುವ ಸಾಧ್ಯತೆ ಇಲ್ಲ ಎಂಬುದನ್ನು ಉತ್ತರ ಭಾರತದಲ್ಲಿನ ಕೆಲವು ಬೆಳವಣಿಗೆಗಳು ಸೂಚಿಸುತ್ತಿವೆ. ಆ ಕಾರಣಕ್ಕೆ ನಾನು ಈ ಬರಹ ಬರೆದೆ. ಆ ಸೂಚನೆಗಳು ನಿಜ ಆಗುತ್ತವೆಯೇ ಎಂಬುದನ್ನು ಅಂದಾಜಿಸುವ ಕೆಲಸವನ್ನು ಸಮೀಕ್ಷೆಗಳು ಈ ವರ್ಷದ ಮುಂದಿನ ದಿನಗಳಲ್ಲಿ ಮಾಡಲಿವೆ. ಸೂಚನೆಗಳು ನಿಜ ಆಗುತ್ತವೆ ಎಂದಾದರೆ, ರಾಜಕೀಯ ಸ್ಥಿರತೆ ಮತ್ತು ಅರ್ಥ ವ್ಯವಸ್ಥೆಯ ಪಾಲಿಗೆ ಇದು ಬಹಳ ಕೆಟ್ಟದ್ದು ಎಂದು ಮಾರುಕಟ್ಟೆ ವಿಶ್ಲೇಷಕರು ಮತ್ತು ವಾಣಿಜ್ಯ ಪತ್ರಿಕೆಗಳು ನಮಗೆ ಹೇಳಲಿವೆ. ಆದರೆ, ಹೀಗಾಗುವುದು ಸಮಸ್ಯೆಯೇನೂ ಅಲ್ಲ ಎನ್ನುವುದನ್ನು ನಮ್ಮ ಇತಿಹಾಸ ಹೇಳುತ್ತಿದೆ. ಅತಂತ್ರ ಲೋಕಸಭೆಯು ಸ್ವಾಗತಾರ್ಹ ಎಂಬ ಆಲೋಚನೆಯನ್ನೂ ನಮ್ಮಲ್ಲಿ ಹಲವರು ಹೊಂದಿದ್ದಾರೆ.

(ಲೇಖಕ: ಅಂಕಣಕಾರ ಹಾಗೂ ಅಮ್ನೆಸ್ಟಿ ಇಂಟರ್‌ನ್ಯಾಷನಲ್‌ ಇಂಡಿಯಾದ ಕಾರ್ಯನಿರ್ವಾಹಕ ನಿರ್ದೇಶಕ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT