ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಲ್ ಜೀವನದ ಸುತ್ತ

Last Updated 20 ಜನವರಿ 2013, 19:59 IST
ಅಕ್ಷರ ಗಾತ್ರ

ಬೆಂಗಳೂರಿನ ಜನರ ಮಾಲ್ ಅಲೆಯುವ ಚಟ ಅಷ್ಟೇನೂ ಹಳೆಯದಲ್ಲ. ಈ ಊರಿಗೆ ಬಂದ ಮೊಟ್ಟಮೊದಲ ಮಾಲ್ ಅಂದರೆ ಫೋರಮ್. ಕೋರಮಂಗಲದಲ್ಲಿರುವ ಈ ಸಂಕೀರ್ಣ 2004ರಲ್ಲಿ ಕಟ್ಟಿ ಮುಗಿಸಿದರು. ನಂತರ ಹಲವಾರು ಮಾಲ್‌ಗಳು ತಲೆ ಎತ್ತಿದವು. ನಗರದ ಮಧ್ಯೆ ಇರುವ ಎಲ್ಲ ಮಾಲ್‌ಗಳಲ್ಲಿಯೂ ನೂರಕ್ಕೆ ನೂರರಷ್ಟು ಸ್ಥಳ ಭರ್ತಿಯಾಗಿದೆ.

ನಗರದ ಹೊರವಲಯದಲ್ಲಿರುವ ಮಾಲ್‌ಗಳಲ್ಲಿ ಇನ್ನೂ ಒಂದಷ್ಟು ಅಂಗಡಿಗಳು ಖಾಲಿ ಬಿದ್ದಿವೆ. ಒಟ್ಟಾರೆ, 2011ರಲ್ಲಿ ಶೇಕಡ 11ರಷ್ಟು ಖಾಲಿಯಿದ್ದ ಈ ಮಾಲ್‌ಗಳು ಈ ವರ್ಷ ಶೇಕಡ 8.3ರಷ್ಟು ಮಾತ್ರ ಖಾಲಿ ಇವೆ. ನಗರದ ಕೇಂದ್ರದಿಂದ ದೂರ ಎನಿಸಿಕೊಂಡ ಮಾಲ್‌ಗಳು ಕೂಡ ಕ್ರಮೇಣ ಭರ್ತಿಯಾಗುತ್ತಿವೆ. ಅಂದರೆ, ಮಾಲ್ ನಿರ್ಮಾಣ ಮಾಡಲು ಬಂಡವಾಳ ಹೂಡಿದವರು ನೆಮ್ಮದಿಯಿಂದಿದ್ದಾರೆ.

ಮಾಲ್‌ಗಳು ಹೊಸ ಬೆಂಗಳೂರಿನ ಟೊಳ್ಳುತನದ, ಸಂಸ್ಕೃತಿ ಹೀನತೆಯ ಸಂಕೇತವಾಗಿ ಹಲವರಿಗೆ ಕಾಣುತ್ತದೆ. ಮೊದಲು ಗಾಯನ ಸಮಾಜಕ್ಕೋ, ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌ಗೋ ಹೋಗಿ ಸಂಗೀತ, ಭಾಷಣ ಕೇಳುತ್ತಿದ್ದ ಅಭ್ಯಾಸ ತಪ್ಪಿ ಹೋಗಿ, ಸುಮ್ಮನೆ ಅಂಗಡಿಗಳಿಗೆ ಹೊಗುವ ಅಥವಾ ವಿಂಡೋ ಶಾಪಿಂಗ್ ಮಾಡುವ ಅಭ್ಯಾಸ ಜನರಲ್ಲಿ ಬೆಳೆಯುತ್ತಿದೆ ಎಂದು ಹಲವರು ದೂರುತ್ತಿರುತ್ತಾರೆ. ಪಾರ್ಕ್‌ಗಳು ವಿರಳವಾಗುತ್ತಿದ್ದಂತೆ ಕಾಲೇಜ್ ಹುಡುಗ ಹುಡುಗಿಯರೂ ಮಾಲ್‌ಗಳಲ್ಲಿ ಹೋಗಿ ಕಾಲ ಕಳೆಯುತ್ತಿದ್ದಾರೆ.

ಒಂದೇ ಜಾಗದಲ್ಲಿ ಸಿನಿಮಾ ನೋಡಿ, ತಿಂಡಿ ತಿಂದು, ಸುತ್ತಿ ಬರಲು ದೊಡ್ಡ ಮಾಲ್‌ಗಳು ಸೌಲಭ್ಯಗಳನ್ನು ಕಲ್ಪಿಸಿರುತ್ತವೆ. ಆದರೆ ಮಾಲ್ ಅಂದ ಮಾತ್ರಕ್ಕೆ ಎಲ್ಲವೂ ವಿಶಾಲವಾಗಿರುವುದಿಲ್ಲ. ಕೆಲವಂತೂ ತೀರ ಇಕ್ಕಟ್ಟಿನ, ವಾಹನ ನಿಲ್ಲಿಸಲು ಸ್ಥಳಾವಕಾಶವಿಲ್ಲದ, ವ್ಯಾಪಾರದ ದುರಾಸೆಯ ಕೊಂಪೆಗಳಂತೆ ಕಾಣುತ್ತವೆ. ಮೊನ್ನೆ 80 ತುಂಬಿದ ಯು.ಆರ್.ಅನಂತಮೂರ್ತಿ ಅವರನ್ನು ಕಂಡಾಗ, ಮಲ್ಲೆೀಶ್ವರದ ಮಂತ್ರಿ ಮಾಲ್‌ನ ಬಗ್ಗೆ ತುಂಬಾ ಸಿಟ್ಟು ಮತ್ತು ವ್ಯಥೆಯಿಂದ ಮಾತಾಡಿದರು. ಜಯನಗರದ ವಿಶಾಲವಾದ ಶಾಪಿಂಗ್ ಕಾಂಪ್ಲೆಕ್ಸ್ ಕೂಡ ಈಗ ಮಾಲ್ ಆಗಲು ಹೊರಟಿದೆ.

ಜಯನಗರದ ಸ್ವಾಗತ್ ಗರುಡ ಮಾಲ್‌ನ ಕಥೆ ಹಲವು ದ್ವಂದ್ವಗಳನ್ನು ಬಿಂಬಿಸುತ್ತದೆ. ಈ ಮಾಲ್ ಇರುವುದು ಒಂದು ಸ್ಲಂ ಆಗಿದ್ದ ಪ್ರದೇಶದಲ್ಲಿ. ನನಗೆ ಜ್ಞಾಪಕವಿರುವಂತೆ ಅಲ್ಲಿ ಲಕ್ಷ್ಮಿ ಟೂರಿಂಗ್ ಟಾಕೀಸ್ ಎಂಬ ಹೆಸರಿನ ಟೆಂಟ್ ಸಿನಿಮಾ ಇತ್ತು. ಆಮೇಲೆ ಸ್ವಾಗತ್ ಚಿತ್ರಮಂದಿರ ಬಂತು. ಈಗಲೂ ಆ ಪ್ರದೇಶದ ಸುತ್ತ ಮುತ್ತ ಬಡ ಜನ ವಾಸಿಸುತ್ತಾರೆ. ಅಲ್ಲಿ ಮೊದಮೊದಲು ಒಂದು ವಿಚಿತ್ರ ನಡೆಯುತ್ತಿತ್ತು. ಮಾಲ್‌ಗೆ ವ್ಯಾಪಾರ ಮಾಡಲು ಬಂದ ಹುಡುಗರು ಯಾವುದಾದರೂ ವಸ್ತುವನ್ನು ಕೈಗೆತ್ತಿಕೊಂಡು ಓಡಿ ಹೋಗುತ್ತಿದ್ದರು.

ಸೆಕ್ಯುರಿಟಿ ಸಿಬ್ಬಂದಿ ಅವರನ್ನು ಹಿಡಿಯುವುದಾಗಲಿ, ಹೊಡೆಯುವುದಾಗಲಿ ಮಾಡುತ್ತಿರಲಿಲ್ಲ. ಕಾರಣ: ರಾತ್ರಿ ಒಂಬತ್ತು ಗಂಟೆಯಾದ ಮೇಲೆ ಈ ಸಿಬ್ಬಂದಿ ಅದೇ ಪ್ರದೇಶವನ್ನು ಹಾದು ಮನೆಗೆ ಹೋಗಬೇಕು. ಆಗ ಅದೇ ಹುಡುಗರ ಕೈಗೆ ಸುಲಭವಾಗಿ ಸಿಕ್ಕಿ ಬೀಳುವ ಅಪಾಯವಿತ್ತು. (ಶಿರಸಿ ವೃತ್ತದ ಹತ್ತಿರ ಇರುವ ಗೋಪಾಲನ್ ಮಾಲ್ ಅಷ್ಟು ಏಳಿಗೆಯಾಗಿಲ್ಲ. ಅದಕ್ಕೂ ಕಾರಣ ಸುತ್ತ ಮುತ್ತಲಿನ ಬಡತನದ ವಾತಾವರಣ ಎಂದು ಪೇಟೆ ತಜ್ಞರು ವ್ಯಾಖ್ಯಾನಿಸುತ್ತಾರೆ).

ಮಾಲ್‌ಗಳಲ್ಲಿ ಸಿನಿಮಾ ನೋಡಲು ಮಲ್ಟಿಪ್ಲೆಕ್ಸ್ ಇರುತ್ತದೆಯೇ ಹೊರತು ಸಂಗೀತ, ನಾಟಕ, ಭಾಷಣದಂಥ ಸಾಂಸ್ಕತಿಕ ಚಟುವಟಿಕೆಗೆ ಅವಕಾಶವಿರುವುದಿಲ್ಲ. ಹಾಗಾಗಿ ಅಲ್ಲಿ ವ್ಯಾಪರವಲ್ಲದೆ ಬೇರೇನಕ್ಕೂ ಎಡೆಯಿಲ್ಲ ಎಂಬ ಭಾವನೆ ನಿಜವೇ?. ಮಾಲ್‌ಗಳಲ್ಲಿ ಪುಸ್ತಕದ ಅಂಗಡಿಗಳು ನಡೆಯುತ್ತಿಲ್ಲ. ಸ್ವಾಗತ್ ಗರುಡ ಮಾಲ್‌ನಲ್ಲಿದ್ದ ಲ್ಯಾಂಡ್‌ಮಾರ್ಕ್ ಪುಸ್ತಕದ ಅಂಗಡಿ ಮುಚ್ಚಿ ಹೋಗಿದೆ.

ಯುಬಿ ಸಿಟಿ ಮಾಲ್‌ನಲ್ಲಿ ಪುಸ್ತಕ, ಸಂಗೀತ ಮಾರುವ ಅಂಗಡಿಯೇ ಇಲ್ಲ. ಬೆಂಗಳೂರಿನ ಅತಿ ದೊಡ್ಡ ಸಮಸ್ಯೆಯೆಂದರೆ ರಿಯಲ್ ಎಸ್ಟೇಟ್. ಜನಸಂಖ್ಯೆ ಮತ್ತು ವಾಹನಸಂಖ್ಯೆ ಹೆಚ್ಚುತ್ತಿದ್ದಂತೆ ಸಾರ್ವಜನಿಕ ಸ್ಥಳಗಳ ಮೇಲೆ ಒತ್ತಡ ತೀವ್ರವಾಗಿದೆ ಮತ್ತು ಹೇರಳವಾಗಿ ಆದಾಯ ತಂದು ಕೊಡುವ ವ್ಯಾಪಾರಗಳು ಮಾತ್ರ ಇಂಥ ಸ್ಥಳಗಳಲ್ಲಿ ಬೇರೂರುತ್ತಿವೆ.

ಹೀಗಿರುವ ಸಂದರ್ಭದಲ್ಲಿ ವ್ಯಾಪಾರದ ಸೋಂಕಿಲ್ಲದೆ ನಾಟಕ, ಸಂಗೀತ, ಭಾಷಣ, ಕಾವ್ಯವಾಚನ ಏರ್ಪಡಿಸುವವರು ಎಲ್ಲಿ ಹೋಗಬೇಕು? ಶಾಲಾ ಕಾಲೇಜುಗಳಲ್ಲಿ ಇಂಥ ಚಟುವಟಿಕೆಗೆ ಮೊದಲಿದ್ದ ಪ್ರೋತ್ಸಾಹ ಇಂದು ಇಲ್ಲ. ನ್ಯಾಷನಲ್ ಕಾಲೇಜ್‌ನಂಥ ಸಂಸ್ಥೆಗಳಲ್ಲಿ ನಾಟಕದ ತಾಲೀಮು ಮತ್ತು ಪ್ರದರ್ಶನಕ್ಕೆ ಧಾರಾಳವಾಗಿ ಸ್ಥಳ ಬಿಟ್ಟುಕೊಡುವ ಸಂಪ್ರದಾಯವಿದೆ. ಆದರೆ ಎಷ್ಟೋ ಹೊಸ ವಿದ್ಯಾ ಸಂಸ್ಥೆಗಳು ತಮ್ಮ ಸುತ್ತಲಿನ ಸಮುದಾಯಕ್ಕೆ ತೆರೆದುಕೊಂಡಿಲ್ಲ. ಹೊರಗಿನವರು ಹೋಗಿ ಒಂದು ಸಂಜೆಯ ಕಾರ್ಯಕ್ರಮಕ್ಕೆ ಸ್ಥಳಾವಕಾಶ ಕೇಳಿದರೆ ಕಮರ್ಷಿಯಲ್ ಬಾಡಿಗೆ ಕೇಳುವ ಮಟ್ಟಕ್ಕೆ ಇಳಿದಿವೆ. ಶಾಲಾ ಕಾಲೇಜುಗಳು ಸುತ್ತಮುತ್ತಲಿನ ಸಾಂಸ್ಕತಿಕ ಮತ್ತು ಬೌದ್ಧಿಕ ಚಟುವಟಿಕೆಗಳಿಗೆ ಮುಕ್ತ ಅವಕಾಶ ಕಲ್ಪಿಸುವ ಕೇಂದ್ರಗಳಾಗುವುದು ಹಿಂದೆಂದಿಗಿಂತಲೂ ಇಂದು ಅಗತ್ಯವಾಗಿದೆಯೇನೋ.

ರಜನೀಕಾಂತ್ ಜೀವನ ಕಥೆ
ಒಂದು ಕಾಲಕ್ಕೆ ರಜನಿಕಾಂತ್ ಮತ್ತು ಕಮಲ ಹಾಸನ್ ಸ್ನೇಹಪೂರ್ಣ ಪೈಪೋಟಿಯಲ್ಲಿ ತೊಡಗಿದ್ದರು. ವ್ಯಾಪಾರ ಮತ್ತು ಮಾಧ್ಯಮದ ದಷ್ಟಿಯಿಂದ ಇಂದು ರಜನೀಕಾಂತ್ ತುಂಬಾ ಮುಂದೆ ಸಾಗಿಬಿಟ್ಟಿದ್ದಾರೆ. ಕಮಲ್ ತಮ್ಮ ಜೀವನದ ಉಳಿತಾಯವನ್ನೆಲ್ಲ ಹೂಡಿ ಹೊಸ ಚಿತ್ರವನ್ನು ತಯಾರಿಸಿ ಬಿಡುಗಡೆ ಮಾಡಲು ಹಾತೊರೆಯುತ್ತಿರುವ ಸಮಯಕ್ಕೇ ರಜನಿಕಾಂತ್ ಜೀವನ ಚರಿತ್ರೆಯೊಂದು ಮಾರುಕಟ್ಟೆಗೆ ಬಂದಿದೆ.

ರಜಿನಿಕಾಂತ್: ದಿ ಡೆಫಿನಿಟಿವ್ ಬಯಾಗ್ರಫಿ (ಪೆಂಗ್ವಿನ್, ರೂ. 699) ಎಂಬ ಹೆಸರಿನ ಈ ಪುಸ್ತಕದ ಕರ್ತ ನಾಮನ್ ರಾಮಚಂದ್ರನ್. ಪುಸ್ತಕವನ್ನು ವಿಮರ್ಶೆ ಮಾಡಿದ ಸದಾನಂದ ಮೆನನ್ ಇದನ್ನು `ಬೋಗಸ್ ಬಯಾಗ್ರಫಿ' ಎಂದು ಕಿತ್ತೊಗೆದಿದ್ದಾರೆ. ಅವರು ಹೇಳುವುದು ತುಂಬ ಸ್ವಾರಸ್ಯವಾಗಿರುವುದರಿಂದ ಇಲ್ಲಿ ಉಲ್ಲೇಖಿಸುತ್ತಿದ್ದೇನೆ.

ಜ್ವಾಲಾಮುಖಿಯನ್ನು ಒಂದೇ ಉಸಿರಿಂದ ಆರಿಸಬಲ್ಲ, ಮೂರು ಜನರನ್ನು ಎರಡೇ ಬುಲ್ಲೆಟ್‌ನಿಂದ ಮುಗಿಸಬಲ್ಲ ರಜಿನಿಕಾಂತ್ ಬೋರ್ ಹೊಡೆಯುವ ಜೀವನ ಚರಿತ್ರೆಗಳನ್ನು ಮಾತ್ರ ನಿಲ್ಲಿಸುವ ಶಕ್ತಿ ಯಾಕೋ ಪಡೆದಿಲ್ಲ ಎನ್ನುವ ಮೆನನ್, ಪುಸ್ತಕದ ತುಂಬ ಸೂಪರ್ ಸ್ಟಾರ್‌ನ ಸಿನಿಮಾ ಕಥೆಗಳ ಸಾರಾಂಶ ಬರೆಯುವುದರಲ್ಲೇ ತೃಪ್ತಿಗೊಳ್ಳುವ ವ್ಯರ್ಥ ಪ್ರಯತ್ನ ಇದು ಎಂದು ತೀರ್ಮಾನಿಸುತ್ತಾರೆ.

ನಟನೊಬ್ಬನ ಜೀವನ ಚರಿತ್ರೆ ಬರೆಯಬಹುದೇ ಹೊರತು ಸ್ಟಾರ್‌ನ ಜೀವನ ಚರಿತ್ರೆ ಬರೆಯಲಾಗುವುದಿಲ್ಲ. ಅಬ್ಬಬ್ಬ ಅಂದರೆ ಸ್ಟಾರ್‌ನ ವ್ಯಂಗ್ಯ ಚಿತ್ರಣ (caricature) ಮಾಡಬಹುದು ಎಂದು ಹೇಳುವ ಮೆನನ್ ಮುಖವಾಡ ಹೊತ್ತ ಸ್ಟಾರ್‌ಗಳ ಜೀವನದಲ್ಲಿ ಬರೆಯುವುದೇನೂ ಇರುವುದಿಲ್ಲ ಎಂದು ಸ್ವಲ್ಪ ತಮಾಷೆಯಾಗಿ, ಅಷ್ಟೇ ತೀಕ್ಷ್ಣವಾಗಿ ಬರೆದಿದ್ದಾರೆ.


 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT