ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಹಿತಿ ಎಂಬ ಪ್ರಬಲ ಅಸ್ತ್ರ

Last Updated 3 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಆರು ವರ್ಷಗಳ ಹಿಂದೆ ಅಂದರೆ, 2005ರ ಜೂನ್ 15ರಂದು ಐತಿಹಾಸಿಕ ಶಾಸನವೊಂದಕ್ಕೆ ಭಾರತೀಯ ಸಂಸತ್ತು ಅನುಮೋದನೆ ನೀಡಿತು. ಅದೇ ವರ್ಷದ ಅಕ್ಟೋಬರ್ 12ರಂದು ಈ ಶಾಸನ ಜಾರಿಗೆ ಬಂತು. ಅದೇ ಮಾಹಿತಿ ಹಕ್ಕು ಕಾಯ್ದೆ.

2005ಕ್ಕೂ ಮೊದಲು ಕೆಲವು ರಾಜ್ಯಗಳಲ್ಲಿ ಇದೇ ಬಗೆಯ ಕಾಯ್ದೆಗಳು ವಿವಿಧ ರೂಪದಲ್ಲಿ ಜಾರಿಯಲ್ಲಿ ಇದ್ದವಾದರೂ ಈ ಕಾಯ್ದೆ ಮಾತ್ರ ರಾಷ್ಟ್ರೀಯ ಕಾಯ್ದೆಯಾಗಿ, ಜಮ್ಮು ಕಾಶ್ಮೀರ ಹೊರತುಪಡಿಸಿ ರಾಷ್ಟ್ರದಾದ್ಯಂತ ಜಾರಿಗೆ ಬಂತು. ಜಗತ್ತಿನಾದ್ಯಂತ ಸುಮಾರು 85 ದೇಶಗಳು ಬೇರೆ ಬೇರೆ ಹೆಸರಿನಲ್ಲಿ ಇದೇ ಮಾದರಿಯ ಮಸೂದೆಗಳನ್ನು ಜಾರಿಗೆ ತಂದಿವೆ. ಸ್ವೀಡನ್‌ನ `ಪತ್ರಿಕಾ ಸ್ವಾತಂತ್ರ್ಯ ಕಾಯ್ದೆ~ಯು ಅತ್ಯಂತ ಹಳೆಯದಾಗಿದ್ದು, 1776ರಲ್ಲಿಯೇ ಇದನ್ನು ಅನುಮೋದಿಸಲಾಗಿದೆ.

ಕಳೆದ ಆರು ವರ್ಷಗಳಲ್ಲಿ ಮಾಹಿತಿ ಹಕ್ಕು ಕಾಯ್ದೆಗೆ ಸಂಬಂಧಿಸಿದಂತೆ ಸಾಕಷ್ಟು ಸಂಗತಿಗಳು ಘಟಿಸಿವೆ ಮತ್ತು ದೇಶದಾದ್ಯಂತ ಉತ್ತಮ ಆಡಳಿತ ಜಾರಿಯಲ್ಲಿ ಇದನ್ನು ಒಂದು ಉತ್ತಮ ಸಾಧನವಾಗಿ ಹೇಗೆ ಬಳಸಿಕೊಳ್ಳಬಹುದು ಎಂಬ ಬಗ್ಗೆ ಬಹಳಷ್ಟು ಬರಹಗಳೂ ಬಂದಿವೆ. ಈ ಕಾಯ್ದೆಯ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿಯೇ ವಿಶೇಷ ಪೋರ್ಟಲ್‌ಗಳು ಸಹ ಅಸ್ತಿತ್ವಕ್ಕೆ ಬಂದಿವೆ.

ಇತ್ತೀಚಿನ ದಿನಗಳಲ್ಲಿ ನಾವು ಕಾಣುತ್ತಿರುವ ಸಾಕಷ್ಟು ಹಗರಣಗಳನ್ನು ಬಯಲಿಗೆಳೆಯಲು ಪತ್ರಕರ್ತರು ಈ ಕಾಯ್ದೆಯನ್ನು ಯಶಸ್ವಿಯಾಗಿ ಬಳಸಿಕೊಳ್ಳುತ್ತಿದ್ದಾರೆ.

ವಿಶ್ವವಿದ್ಯಾಲಯಗಳು ಮತ್ತು ಶೈಕ್ಷಣಿಕ ಸಂಸ್ಥೆಗಳಲ್ಲಿ ಈ ವಿಷಯದ ಬಗ್ಗೆ ನಿಯಮಿತವಾಗಿ ವಿಚಾರ ಸಂಕಿರಣಗಳು ನಡೆಯುತ್ತಲೇ ಇರುತ್ತವೆ. ಕಾಯ್ದೆ ಬಳಕೆಯ ಬಗ್ಗೆ ಸಾಕಷ್ಟು ಪುಸ್ತಕಗಳು, ಟೀಕೆ ಟಿಪ್ಪಣಿಗಳೂ ಪ್ರಕಟವಾಗಿವೆ. ಕೆಲ ಸ್ಥಾಪಿತ ಹಿತಾಸಕ್ತಿಗಳ ಕೈಯಲ್ಲಿ ಸಿಲುಕಿ ಕಾಯ್ದೆ `ಬ್ಲ್ಯಾಕ್‌ಮೇಲ್ ಸಾಧನ~ವಾಗಿ ಬಳಕೆಯಾಗುತ್ತಿರುವ ಬಗ್ಗೆಯೂ ಅಲ್ಲಲ್ಲಿ ಗೊಣಗಾಟಗಳು ಕೇಳಿಬಂದಿವೆ.

ಮಾಹಿತಿ ಹಕ್ಕು ಕಾಯ್ದೆ ಜಾರಿಗೆ ಬಂದು ಜನರ ಬದುಕಿನಲ್ಲಿ ಏನಾದರೂ ಬದಲಾವಣೆ ತಂದಿದೆಯೇ ಎಂದು ಚಿಂತಿಸಿದರೆ, ಕೆಲ ಘಟನೆಗಳು ನನ್ನ ಕಣ್ಣ ಮುಂದೆ ಬರುತ್ತವೆ.

ಅನಕ್ಷರಸ್ಥ ರೈತನಾದ ಸೇತುಪತಿ ಮೈಸೂರು ಜಿಲ್ಲೆ ಎಚ್.ಡಿ.ಕೋಟೆ ತಾಲ್ಲೂಕಿನ ವಡ್ಡರಗುಡಿಯ ನಿವಾಸಿ. ಎರಡು ವರ್ಷಕ್ಕೂ ಹಿಂದೆ ಅವನ ಬೆಳೆಯನ್ನು ಆನೆಗಳು ಹಾಳುಮಾಡಿದ್ದವು. ಸಂಬಂಧಪಟ್ಟ ಇಲಾಖೆಯಿಂದ ಪರಿಹಾರಕ್ಕಾಗಿ ಆತ ಅರ್ಜಿ ಸಲ್ಲಿಸಿದ್ದ.
 
ಎರಡು ವರ್ಷಗಳ ಕಾಲ ಸತತವಾಗಿ ಎಡತಾಕಿದ್ದರ ನಡುವೆಯೂ ಪರಿಹಾರ ಮಾತ್ರ ಆತನ ಕೈ ತಲುಪುವ ಯಾವ ಲಕ್ಷಣವೂ ಕಾಣಲಿಲ್ಲ. ಈ ಪರಿಹಾರ ಸೇತುಪತಿಗೆ ಅಂತಹ ಭಾರಿ ಮೊತ್ತವೇನೂ ಆಗಿರಲಿಲ್ಲ. ಆದರೆ ಅಧಿಕಾರಿಗಳ ಪ್ರತಿಕ್ರಿಯೆ ರಹಿತ ಮತ್ತು ಹೊಣೆಗೇಡಿತನದ ವರ್ತನೆ ಆತನಿಗೆ ಸಿಟ್ಟು ತರಿಸಿತ್ತು.

ಒಂದು ದಿನ, ಸ್ಥಳೀಯ ಸರ್ಕಾರೇತರ ಸಂಸ್ಥೆಯೊಂದು ನಡೆಸುತ್ತಿದ್ದ ಮಾಹಿತಿ ಹಕ್ಕು ಕೇಂದ್ರವೊಂದಕ್ಕೆ ಭೇಟಿ ನೀಡುವ ಅವಕಾಶ ಆತನಿಗೆ ದೊರಕಿತು. ಆಗ ತನ್ನ ಅರ್ಜಿಯ ಗತಿ ಏನಾಯಿತು ಎಂಬುದನ್ನು ಮಾಹಿತಿ ಹಕ್ಕು ಕಾಯ್ದೆಯಡಿ ಹೇಗೆ ಅರಿತುಕೊಳ್ಳಬಹುದು ಎಂಬುದು ಆತನಿಗೆ ತಿಳಿಯಿತು.
 
ಅರೆ ಮನಸ್ಸಿನಿಂದಲೇ ಅದಕ್ಕಾಗಿ ಅರ್ಜಿ ಸಲ್ಲಿಸಿದ ಆತನಿಗೆ, ಅದಕ್ಕೆ ಉತ್ತರ ಬರುವ ಬದಲಾಗಿ ಬಂದದ್ದು ಪರಿಹಾರದ ಚೆಕ್! ಇದರಿಂದ ಉತ್ತೇಜಿತನಾದ ಸೇತುಪತಿ ಕಾಯ್ದೆಯ ಬಗ್ಗೆ ಸಂಪೂರ್ಣ ಮಾಹಿತಿ ಅರಿತ. ಪ್ರಸ್ತುತ ಆತ ತನ್ನ ಸಹ ರೈತರಿಗೆ ಕಾಯ್ದೆಯ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಅವರು ಅದನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವಂತೆ ಮಾಡಲು ಸಾಕಷ್ಟು ಸಮಯ ವ್ಯಯಿಸುತ್ತಿದ್ದಾನೆ.

ಗ್ರಾಮ ಪಂಚಾಯಿತಿಯಲ್ಲಿ ನೀರುಗಂಟಿಯಾಗಿದ್ದ ಮಹಾದೇವ (ಹೆಸರು ಬದಲಿಸಲಾಗಿದೆ) ಬಿಲ್ ಕಲೆಕ್ಟರ್ ಹುದ್ದೆಗೆ ಅರ್ಜಿ ಸಲ್ಲಿಸಿದ್ದ. ಈ ಕೆಲಸಕ್ಕೆ ಆತ ಎಲ್ಲ ರೀತಿಯಲ್ಲೂ ಅರ್ಹನಾದ ಅಭ್ಯರ್ಥಿಯಾಗಿದ್ದ. ಪಂಚಾಯಿತಿಯ ಕೆಲವೇ ಕೆಲವು ಪ್ರಾಮಾಣಿಕ ನೌಕರರಲ್ಲಿ ಆತನೂ ಒಬ್ಬನಾಗಿದ್ದ. ಗ್ರಾಮೀಣ ಸಮುದಾಯಕ್ಕಾಗಿ ಸಾಕಷ್ಟು ಸೇವೆಯನ್ನೂ ಸಲ್ಲಿಸಿದ್ದ.

ಇಂತಹ ಪ್ರಾಮಾಣಿಕತೆಯೇ ಅವನ ವೃತ್ತಿ ಬದುಕಿಗೆ ಮುಳುವಾಗಿತ್ತು. ಪಂಚಾಯಿತಿಯ ಅಧ್ಯಕ್ಷರು, ಕಾರ್ಯದರ್ಶಿ ಮತ್ತು ಸದಸ್ಯರಿಗೆ ಆತನಿಗೆ ಬಡ್ತಿ ಕೊಡುವುದು ಬೇಕಿರಲಿಲ್ಲ. ಅವರು ಈ ಹುದ್ದೆಯನ್ನು ಅರ್ಹತೆಯೇ ಇಲ್ಲದ ಮತ್ತೊಬ್ಬ ವ್ಯಕ್ತಿಗೆ ನೀಡಿ ಮಹಾದೇವನನ್ನು ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಿದರು.

ಆದರೆ ಇದರಿಂದ ಎದೆಗುಂದದ ಮಹಾದೇವ ತನಗಾದ ಅನ್ಯಾಯದ ವಿರುದ್ಧ ಹೋರಾಡಲು ನಿರ್ಧರಿಸಿದ. ಆಯ್ಕೆಯಾಗಿದ್ದ ಅಭ್ಯರ್ಥಿಯ ಬಗೆಗಿನ ಎಲ್ಲ ಬಗೆಯ ಮಾಹಿತಿ, ಸಂಪೂರ್ಣ ನೇಮಕಾತಿ ಪ್ರಕ್ರಿಯೆ ಹಾಗೂ ಸಭೆಯ ನಡವಳಿಕೆಗಳ ಪ್ರತಿ ಪಡೆದುಕೊಳ್ಳಲು ಆತ ಮಾಹಿತಿ ಹಕ್ಕು ಕಾಯ್ದೆಯ ಮೊರೆ ಹೋದ.

ಈ ಮೂಲಕ ದೊರೆತ ಮಾಹಿತಿಯಿಂದ ತನಗೆ ದೊರೆಯಬೇಕಿದ್ದ ಕೆಲಸವನ್ನು ಉದ್ದೇಶಪೂರ್ವಕವಾಗಿ ಮತ್ತೊಬ್ಬ ವ್ಯಕ್ತಿಗೆ ನೀಡಿರುವುದು ಮಹಾದೇವನಿಗೆ ಸ್ಪಷ್ಟವಾಯಿತು. ಈ ಎಲ್ಲ ಮಾಹಿತಿಯೊಂದಿಗೆ ಇಲಾಖೆಯ ಹಿರಿಯ ಅಧಿಕಾರಿಗಳನ್ನು ಕಂಡು ಎಲ್ಲವನ್ನೂ ವಿವರಿಸಿದ ಆತ, ಕೊನೆಗೂ ನ್ಯಾಯ ಪಡೆಯುವಲ್ಲಿ ಯಶಸ್ವಿಯಾದ. ಇದರಿಂದ ಬರೀ ಪ್ರಾಮಾಣಿಕವಾಗಿ ಇದ್ದರಷ್ಟೇ ಸಾಲದು, ತನಗಾಗುವ ಅನ್ಯಾಯದ ವಿರುದ್ಧ ಹೋರಾಡುವ ಮನೋಭಾವವೂ ಇರಲೇಬೇಕು ಎಂಬುದು ಮಹಾದೇವನಿಗೆ ಸ್ಪಷ್ಟವಾಗಿತ್ತು.

ಶಿವಕುಮಾರ್ ಮತಕೆರೆ ಪಂಚಾಯಿತಿ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ಯುವ ಕಾರ್ಯಕರ್ತ. ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸುವ ಆತ ಪಂಚಾಯಿತಿಯ ವಿವಿಧ ಅಭಿವೃದ್ಧಿಯ ಯೋಜನೆಯ ಫಲಾನುಭವಿಗಳ ಪಟ್ಟಿ ಇಟ್ಟುಕೊಂಡಿದ್ದಾನೆ. ಇದನ್ನು ಮುಂದಿಟ್ಟು ಪಂಚಾಯಿತಿ ವ್ಯಾಪ್ತಿಗೆ ಸೇರಿರುವ ಹಳ್ಳಿಗಳ ಜನರಲ್ಲಿ ಈ ಬಗ್ಗೆ ಜಾಗೃತಿ ಮೂಡಿಸುತ್ತಾನೆ.

ಇದು ಪಂಚಾಯಿತಿಯ ಸದಸ್ಯರು ಸಮಸ್ಯೆಗಳಿಗೆ ಸ್ಪಂದಿಸುವಂತೆ ಮಾಡಿದೆ ಮತ್ತು ಅವರು ಪ್ರತಿನಿಧಿಸುವ ಜನರ ಬಗೆಗಿನ ಹೊಣೆಗಾರಿಕೆಯನ್ನೂ ಹೆಚ್ಚಿಸಿದೆ. ಪ್ರಸ್ತುತ ಹಲವು ಸಮಿತಿಗಳಲ್ಲಿ ನಾಗರಿಕ ಪ್ರತಿನಿಧಿಯಾಗಿ ಪಾಲ್ಗೊಳ್ಳುವಂತೆ ಪಂಚಾಯಿತಿಯೇ ಆತನನ್ನು ಅಧಿಕೃತವಾಗಿ ಆಹ್ವಾನಿಸಿದೆ.

ಇಂತಹ ವ್ಯಕ್ತಿಗಳು ಎದುರಿಸುವ ತೊಂದರೆಗಳಿಗೆ ಸೋಮಶೇಖರ್ ಒಂದು ಉದಾಹರಣೆ. ಎಚ್.ಡಿ.ಕೋಟೆ ಪಟ್ಟಣದಲ್ಲಿ ಬಳೆ ಅಂಗಡಿ ಇಟ್ಟುಕೊಂಡಿರುವ ಅವರು ಮಾಹಿತಿ ಹಕ್ಕು ಕಾಯ್ದೆಯ ಬಲವಾದ ಪ್ರತಿಪಾದಕ. ತಮ್ಮ ಅಂಗಡಿಯಲ್ಲಿ ಕಾಯ್ದೆಯ ಬಗ್ಗೆ ಕರಪತ್ರಗಳನ್ನು ಇಟ್ಟುಕೊಂಡು ಅವನ್ನು ತಮ್ಮ ಗ್ರಾಹಕರಿಗೆಲ್ಲ ಹಂಚುತ್ತಿದ್ದರು.
 
ಹಲವಾರು ತರಬೇತಿ ಕಾರ್ಯಕ್ರಮಗಳಲ್ಲೂ ಪಾಲ್ಗೊಂಡಿದ್ದ ಅವರು ತಾವು ಪ್ರಬಲವಾಗಿ ಬೆಂಬಲಿಸುವ ಈ ಕಾಯ್ದೆಯ ಮೂಲಕ ಭ್ರಷ್ಟಾಚಾರದ ವಿರುದ್ಧ ಹೇಗೆ ಹೋರಾಡಬಹುದು ಎಂಬ ಬಗ್ಗೆ ಜನರಲ್ಲಿ ಅರಿವು ಮೂಡಿಸುತ್ತಿದ್ದರು. ಸಣ್ಣ ಪಟ್ಟಣವೊಂದರಲ್ಲಿ ವ್ಯಾಪಾರ ಮಾಡುವಾಗ ಸಾಕಷ್ಟು ಹೊಂದಾಣಿಕೆ ಮಾಡಿಕೊಳ್ಳಬೇಕಾಗುತ್ತದೆ. ಸೋಮಶೇಖರ್ ಅವರೂ ಇದಕ್ಕೆ ಹೊರತಾಗಲಿಲ್ಲ. ಅವರ ಜನಪರ ಕಾರ್ಯದಿಂದ ತೊಂದರೆಗೆ ಸಿಲುಕಿದ ಕೆಲವರು ಅವರ ವಿರುದ್ಧವೇ ಪ್ರಚಾರ ಆರಂಭಿಸಿದರು.

ಅಲ್ಲದೆ ಇತರರ ತಪ್ಪುಗಳನ್ನು ಹುಡುಕುವ ಮೊದಲು ಎಲ್ಲ ಬಗೆಯ ತೆರಿಗೆಗಳನ್ನೂ ಕಟ್ಟುವ ಮೂಲಕ ನೀವೇ ಮೊದಲು ಕಾನೂನು ಪಾಲಿಸಿ ಎಂದು ತಾಕೀತು ಮಾಡಿದರು. ಆಗ ಸೋಮಶೇಖರ್ ಅವರಿಗೆ ಉಭಯಸಂಕಟ ತಲೆದೋರಿತು. ಒಂದೋ ಅವರು ವ್ಯಾಪಾರವನ್ನು ಬಿಡಬೇಕು ಇಲ್ಲವೇ ತಮ್ಮ ಜನಜಾಗೃತಿ ಕಾರ್ಯವನ್ನೇ ಕೈಬಿಡಬೇಕು ಎಂಬಂತಹ ಸಂದಿಗ್ಧ ಪರಿಸ್ಥಿತಿ ನಿರ್ಮಾಣವಾಯಿತು.

ದುರದೃಷ್ಟಕರ ಸಂಗತಿಯೆಂದರೆ, ಸಾಮಾಜಿಕ ಸಬಲೀಕರಣಕ್ಕಿಂತ ಹೊಟ್ಟೆಪಾಡೇ ದೊಡ್ಡದು ಎಂದು ಭಾವಿಸಿದ ಅವರು ಇಂದು ಮಾಹಿತಿ ಹಕ್ಕಿಗೆ ಸಂಬಂಧಿಸಿದ ತಮ್ಮ ಕಾರ್ಯಚಟುವಟಿಕೆಯನ್ನು ನಿಲ್ಲಿಸಿದ್ದಾರೆ.

ದೇಶದಲ್ಲಿ ಮಾಹಿತಿ ಹಕ್ಕು ಚಳವಳಿ ಆರಂಭವಾಗಿ ಸುಮಾರು ಎರಡು ದಶಕಗಳೇ ಸಂದಿವೆ. ದೇಶದಾದ್ಯಂತ ಈ ಹಕ್ಕಿಗಾಗಿ ಹೋರಾಡಿದ ಕಾರ್ಯಕರ್ತರು ಇದನ್ನು ಮಸೂದೆಯ ರೂಪಕ್ಕೆ ತರಲು ಕಾರಣರಾಗಿದ್ದಾರೆ. ಭಾರತದ ಈ ಕಾಯ್ದೆ ಇಂದು ಅತ್ಯಂತ ಸಮಗ್ರ ಮತ್ತು ಜನಪರವಾದ ಕಾಯ್ದೆಗಳಲ್ಲಿ ಒಂದಾಗಿದೆ.

ಉತ್ತಮ ಆಡಳಿತವನ್ನು ಗಮನದಲ್ಲಿ ಇಟ್ಟುಕೊಂಡು ನಾಗರಿಕ ಸಮಾಜದ ಕಾರ್ಯಕರ್ತರು ಕಾಯ್ದೆಯ ಬಹುತೇಕ ಭಾಗದ ಕರಡನ್ನು ರೂಪಿಸಿದ್ದಾರೆ. ಕಳೆದ ಆರು ವರ್ಷಗಳ ಅನುಭವಗಳೂ ಉಪಯೋಗಕ್ಕೆ ಬಂದಿವೆ.
 
ಸಾರ್ವಜನಿಕ ಬದುಕಿನಲ್ಲಿ ಇರುವ ಭ್ರಷ್ಟಾಚಾರದ ವಿರುದ್ಧ ಒಂದು ಸಾಧನವಾಗಿ ಇಂದು ಹಲವರು ಇದನ್ನು ಬಳಸುತ್ತಿರುವುದನ್ನು ಕಾಣುತ್ತಿದ್ದೇವೆ. ಪಾರದರ್ಶಕತೆ ಕಾಯ್ದುಕೊಳ್ಳಬೇಕಾದ ಒತ್ತಡವನ್ನೂ ಕಾಯ್ದೆ ಸೃಷ್ಟಿಸುತ್ತಿದೆ ಮತ್ತು `ಪ್ರಬಲ ವ್ಯವಸ್ಥೆ~ಯನ್ನು ನಾವೂ ಪ್ರಶ್ನಿಸಬಹುದು ಎಂಬ ಭಾವನೆ ನಿಧಾನವಾಗಿ ಜನರಲ್ಲಿ ಮೂಡಲಾರಂಭಿಸಿದೆ.

ಕರ್ನಾಟಕದಲ್ಲೂ ಈ ನಿಟ್ಟಿನಲ್ಲಿ ಸಾಕಷ್ಟು ಅನುಭವಗಳಾಗಿವೆ. ಮಾಹಿತಿ ಆಯೋಗಕ್ಕೆ ಎಲ್ಲ ಬಗೆಯ ಜನರೂ ನೇಮಕಗೊಳ್ಳುತ್ತಿದ್ದಾರೆ. ಭ್ರಷ್ಟಾಚಾರದ ಕಳಂಕ ಹೊತ್ತವರು, ವೃತ್ತಿ ಬದುಕಿನುದ್ದಕ್ಕೂ ಸಾಮಾನ್ಯ ಜನರಿಗೆ ಮಾಹಿತಿಯನ್ನು ನಿರಾಕರಿಸುತ್ತಲೇ ಬಂದ ಮಾಜಿ ಉನ್ನತಾಧಿಕಾರಿಗಳು ಮತ್ತು ರಾಜಕೀಯ ಬೆಂಬಲಿಗರು ಮಾಹಿತಿ ಆಯುಕ್ತರಾಗಿ ನೇಮಕಗೊಳ್ಳುತ್ತಿರುವುದನ್ನೂ ನಾವು ನೋಡುತ್ತಿದ್ದೇವೆ.

ಬಗೆಹರಿಸಲಾಗದ 10 ಸಾವಿರಕ್ಕೂ ಹೆಚ್ಚು ಪ್ರಕರಣಗಳಿಂದಲೂ ಈ ಚಳವಳಿ ತೊಂದರೆ ಅನುಭವಿಸುತ್ತಿದೆ. ಬಿಹಾರದಂತಹ ರಾಜ್ಯಗಳಲ್ಲೇ ಸಾಕಷ್ಟು ಪರಿವರ್ತನೆಯನ್ನು ನಾವು ಕಾಣುತ್ತಿದ್ದೇವಾದರೂ ಈ ಕಾಯ್ದೆ ಬಳಕೆಯ ವಿಸ್ತರಣೆಗೆ ತಂತ್ರಜ್ಞಾನವನ್ನು ಪೂರಕವಾಗಿ ಬಳಸಿಕೊಳ್ಳುವಲ್ಲಿ ಕರ್ನಾಟಕ ಇನ್ನೂ ಹಿಂದೆ ಉಳಿದಿದೆ.

ಇಲ್ಲಿ ನೀಡಿರುವ ಉದಾಹರಣೆಗಳು ಬದಲಾಗುತ್ತಿರುವ ಸಮಾಜವನ್ನು ಪ್ರತಿಬಿಂಬಿಸುತ್ತವೆ. ಬರೀ ಮೌನ ಪ್ರೇಕ್ಷಕರಾಗೇ ಹೆಚ್ಚು ದಿನ ಕುಳಿತುಕೊಳ್ಳಲು ಇಚ್ಛಿಸದ ಜನ, ತಮ್ಮ ಮೇಲೆ ಪರಿಣಾಮ ಬೀರುವ ವಿಷಯಗಳಲ್ಲಿ ಸಹಭಾಗಿಗಳಾಗಲು ಬಯಸುತ್ತಾರೆ.
 
ಇಂತಹ ಬೃಹತ್ ಪಾಲ್ಗೊಳ್ಳುವಿಕೆ ಪ್ರಕ್ರಿಯೆಯಲ್ಲಿ ಮಾಹಿತಿ ಪಡೆಯುವುದು ಈ ನಿಟ್ಟಿನಲ್ಲಿ ಮೊದಲ ಹಂತ ಎಂಬುದು ನಿಧಾನಕ್ಕೆ ಅವರ ಅನುಭವಕ್ಕೆ ಬರತೊಡಗಿದೆ. ಹೀಗಾಗಿ ಮಾಹಿತಿ ಹಕ್ಕು ಕಾಯ್ದೆ ಒಂದು ಪರಿಣಾಮಕಾರಿ ಸಾಧನವಾಗಿ ಬದಲಾಗುತ್ತಿದೆ.

ಬರೀ ಮಾಹಿತಿ ಪಡೆದುಕೊಂಡರಷ್ಟೇ ಸಾಲದು, ಅದನ್ನು ಹೇಗೆ ಬಳಸಿಕೊಳ್ಳಬೇಕು ಎಂಬ ಸಾಮರ್ಥ್ಯವನ್ನೂ ಜನ ಬೆಳೆಸಿಕೊಳ್ಳಬೇಕು. ಈ ಮಾಹಿತಿಯು ಪಸರಿಸಿ ಜನರಲ್ಲಿ ಪ್ರಶ್ನೆ ಮಾಡುವ ಸಾಮರ್ಥ್ಯ ಹೆಚ್ಚಿಸುವ ಮೂಲಕ, ಅದು ಪಂಚಾಯಿತಿಯೇ ಆಗಿರಲಿ ಅಥವಾ ರಾಜ್ಯ ಮಟ್ಟವೇ ಆಗಿರಲಿ ಆಡಳಿತ ಪ್ರಕ್ರಿಯೆಯಲ್ಲಿ ಅವರು ಪಾಲ್ಗೊಳ್ಳುವಂತೆ ಆಗಬೇಕು.

ಆಡಳಿತದ ಎಲ್ಲ ಹಂತಗಳಲ್ಲೂ ರಾಜಕೀಯ ಮತ್ತು ಅಧಿಕಾರಶಾಹಿ ವ್ಯವಸ್ಥೆ ಕೈಗೊಳ್ಳುವ ಪ್ರತಿ ನಿರ್ಧಾರದಲ್ಲೂ ಪಾರದರ್ಶಕತೆ ಇರುವಂತೆ ಮಾಡುವಲ್ಲಿ ಸಕ್ರಿಯ ಪ್ರಚಾರಾಂದೋಲನವೂ ಅತ್ಯಗತ್ಯ.

ನಾಗರಿಕರು ಸಹ ಪಾಲ್ಗೊಳ್ಳಬಹುದಾದಂತಹ `ಮುಕ್ತ ಸಭೆ~ಗಳನ್ನು ಆಯೋಜಿಸುವಂತೆ ನಾವು ಒತ್ತಡ ಹೇರಬೇಕು. `ತಿಳಿವಳಿಕೆಯುಳ್ಳ ನಾಗರಿಕರು~ ಯಾವಾಗ `ಸಹಭಾಗಿ ನಾಗರಿಕ~ರಾಗುವರೋ ಆಗ ಪ್ರಜಾಪ್ರಭುತ್ವದಲ್ಲಿ ನಿಜವಾದ ಅರ್ಥದ ಪಾಲ್ಗೊಳ್ಳುವಿಕೆ ಸಾಧ್ಯವಾಗುತ್ತದೆ. ಆಗಷ್ಟೇ ನವ ಭಾರತ ಉದಯಿಸಲು ಸಾಧ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT