ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಹಿತಿ ತಂತ್ರಜ್ಞಾನದಲ್ಲಿ ಅಪ್ರಸ್ತುತವಾಗಿರುವ ಪರಿಷತ್ತು

Last Updated 5 ಜನವರಿ 2014, 19:30 IST
ಅಕ್ಷರ ಗಾತ್ರ

ಮಡಿಕೇರಿಯಲ್ಲಿ ಮಂಗಳವಾರದಿಂದ (ಜ.7) 80ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಆರಂಭವಾಗಲಿದೆ. ಇತ್ತೀಚಿನ ವರ್ಷಗಳ ಎಲ್ಲಾ ಸಮ್ಮೇಳನಗಳಂತೆ ಇಲ್ಲಿಯೂ ಒಂದು ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಗೋಷ್ಠಿಯಿದೆ. ಈ ಗೋಷ್ಠಿ ಎಂದಿನಂತೆ ಸಮಾನಂತರ ವೇದಿಕೆಯಲ್ಲಿ ನಡೆಯುತ್ತಿದೆ. ಈ ಗೋಷ್ಠಿ ಪ್ರತಿನಿಧಿಗಳೆಲ್ಲಾ ಊಟದ ಗಡಿಬಿಡಿಯಲ್ಲಿರುವ ಹೊತ್ತಾಗಿರುವ ಮಧ್ಯಾಹ್ನ 12.30ಕ್ಕೆ ಆರಂಭವಾಗಿ 2 ಗಂಟೆಗೆ ಕೊನೆಗೊಳ್ಳಲಿದೆ.  ಯಾರಿಗೆಲ್ಲಾ ವಿಜ್ಞಾನ ಮತ್ತು ತಂತ್ರಜ್ಞಾನವೆಂಬುದು ಊಟಕ್ಕಿಂತ ಮುಖ್ಯ ಎನಿಸುತ್ತದೆಯೋ ಅವರೆಲ್ಲಾ ಈ ಗೋಷ್ಠಿಯಲ್ಲಿ ಭಾಗವಹಿಸಬಹುದು. ಅಂದ ಹಾಗೆ ಇದೇ ಹೊತ್ತಿಗೆ ಮುಖ್ಯವೇದಿಕೆಯಲ್ಲಿ ‘ನೂರರ ಗಡಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು’ ಎಂಬ ವಿಷಯದ ಕುರಿತಂತೆ ಒಂದು ಗೋಷ್ಠಿಯಿದೆ. ಮುಖ್ಯವೇದಿಕೆ ಮತ್ತು ಸಮಾನಂತರ ವೇದಿಕೆಯಲ್ಲಿ ಒಂದೇ ಹೊತ್ತಿನಲ್ಲಿ ನಡೆಯುತ್ತಿರುವ ಈ ಎರಡು ಗೋಷ್ಠಿಗಳು ವಿಜ್ಞಾನ ಮತ್ತು ತಂತ್ರಜ್ಞಾನದ ಜೊತೆಗಿನ ಕನ್ನಡ ಸಾಹಿತ್ಯ ಪರಿಷತ್ತಿನ ಸಂಬಂಧಕ್ಕೆ ಒಂದು ಸಂಕೇತ. ಎರಡೂ ಸಮಾನಂತರ ರೇಖೆಯಲ್ಲಿವೆ!

ಈ ಸಮಾನಂತರ ರೇಖೆಗಳನ್ನು ಒಂದು ಗೂಡಿಸುವ ಕೆಲಸಕ್ಕೆ ಸಾಹಿತ್ಯ ಪರಿಷತ್ತೇಕೆ ಯಾವತ್ತೂ ಮುಂದಾಗುವುದಿಲ್ಲ ಎಂಬುದು ಒಂದು ಯಕ್ಷ ಪ್ರಶ್ನೆ. ಸಮ್ಮೇಳನದಲ್ಲಿ ವಿಜ್ಞಾನ-ತಂತ್ರಜ್ಞಾನದ ಗೋಷ್ಠಿಯೊಂದಿದ್ದು ಬಿಟ್ಟರೆ, ವಿಜ್ಞಾನಕ್ಕೆ ಸಂಬಂಧಿಸಿದ ಬರಹಗಳ ಕೆಲಸ ಪುಸ್ತಕಗಳನ್ನು ಮುದ್ರಿಸಿಬಿಟ್ಟರೆ ಎಲ್ಲವೂ ಆದಂತಾಯಿತು ಎಂಬ ನಿಲುವು ಪರಿಷತ್ತಿನದೆಂಬಂತೆ ಕಾಣಿಸುತ್ತದೆ.

ಸಾಹಿತ್ಯ ಪರಿಷತ್ತು ಕನ್ನಡಿಗರ ಪ್ರಾತಿನಿಧಿಕ ಸಂಘಟನೆ, ಅದರ ಅಧ್ಯಕ್ಷರಿಗೆ ವಿಧಾನ ಪರಿಷತ್ ಸದಸ್ಯತ್ವ ಪದನಿಮಿತ್ತ ನೆಲೆಯಲ್ಲಿ ದೊರೆಯಬೇಕು. ಕನ್ನಡಕ್ಕೆ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಗೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರ ರಚಿಸುವ ಎಲ್ಲಾ ಸಮಿತಿಗಳು, ಪ್ರಾಧಿಕಾರಗಳು ಇತ್ಯಾದಿಗಳಲ್ಲಿ ಪರಿಷತ್ತಿನಿಂದ ಪದನಿಮಿತ್ತ ಸದಸ್ಯರೊಬ್ಬರಾದರೂ ಇರಬೇಕು ಎಂಬಂಥ ಅನೇಕ ಹೇಳಿಕೆಗಳು ಪರಿಷತ್ತಿನ ಅಧ್ಯಕ್ಷರಾಗಿದ್ದ ಹಲವರ ಬಾಯಿಂದ ಬಂದಿವೆ. ಆದರೆ ಭಾಷಾ ತಂತ್ರಜ್ಞಾನಕ್ಕೆ ಸಂಬಂಧಿಸಿದ ವಿಚಾರದಲ್ಲಿ ನಿರ್ಧಾರ ಕೈಗೊಳ್ಳುವ ಸಂಸ್ಥೆಗಳಲ್ಲಿ ತಾನೊಂದು ಸದಸ್ಯತ್ವ ಪಡೆಯುವ ನಿಟ್ಟಿನಲ್ಲಿ ಪರಿಷತ್ತು ಈತನಕ ಯೋಚಿಸಿದಂತೆ ಕಾಣಿಸುವುದಿಲ್ಲ. ಅಥವಾ ಇಂಥ ವಿಚಾರಗಳಿಗೆ ಸಂಬಂಧಿಸಿದಂತೆಯೂ ಪರಿಷತ್ತಿಗೊಂದು ಪಾತ್ರವಿದೆ ಎಂಬುದನ್ನು ಅದು ಸರ್ಕಾರಕ್ಕೆ ಹೇಳಿದ್ದನ್ನು ಈ ಲೇಖಕ ಯಾವತ್ತೂ ಕೇಳಿಲ್ಲ, ಓದಿಲ್ಲ.

ಮಾಹಿತಿ ಮತ್ತು ಸಂವಹನ ತಂತ್ರಜ್ಞಾನವೆಂಬುದು ಕೇವಲ ಜಡ ಯಂತ್ರೋಪಕರಣಗಳಿಗಷ್ಟೇ ಸೀಮಿತವಾದ ತಂತ್ರಜ್ಞಾನವಲ್ಲ. ಇಲ್ಲಿ ಭಾಷೆ, ಲಿಪಿಗಳಿಗೂ ಒಂದು ಸ್ಥಾನವಿದೆ. ಈ ತನಕ ಬಳಕೆಯ ಹಾದಿಯಲ್ಲೇ ಶಿಷ್ಟತೆಯೊಂದನ್ನು ರೂಢಿಸಿಕೊಂಡ ಕನ್ನಡ ಭಾಷೆ ಮತ್ತು ಲಿಪಿಗಳು ಈಗ ಕಂಪ್ಯೂಟರ್ ಮತ್ತಿತರ ಸಂವಹನ ಸಾಧನಗಳಿಗಾಗಿ ಶಿಷ್ಟತೆಯನ್ನು ರೂಪಿಸಿಕೊಳ್ಳುತ್ತಿವೆ. ಈ ಕ್ರಿಯೆಯಲ್ಲಿ ತಂತ್ರಜ್ಞಾನಕ್ಕಿಂತ ದೊಡ್ಡ ಪಾತ್ರವಿರುವುದು ಭಾಷೆ ಮತ್ತು ಲಿಪಿಗಳ ಸೂಕ್ಷ್ಮವನ್ನು ಬಲ್ಲವರಿಗೆ. ಎಲ್ಲದಕ್ಕಿಂತ ಮುಖ್ಯವಾಗಿ ಈ ಶಿಷ್ಟತೆಗಳನ್ನು ರೂಪಿಸುವ ಪ್ರಕ್ರಿಯೆಯಲ್ಲಿ ಭಾಷೆಯೊಂದರ ಸೂಕ್ಷ್ಮಗಳ ಕುರಿತು ಅರಿವಿರುವವರು ಇಲ್ಲವಾದರೆ ಏನಾಗುತ್ತದೆ ಎಂಬುದಕ್ಕೆ ಕನ್ನಡವೇ ಅತ್ಯುತ್ತಮ ಉದಾಹರಣೆ. ಯೂನಿಕೋಡ್ ಶಿಷ್ಟತೆ ಮೊದಲ ಆವೃತ್ತಿಗಳಲ್ಲಿ ಅರ್ಕಾವೊತ್ತಿನ ಸಮಸ್ಯೆ ಉದ್ಭವವಾಗುವುದಕ್ಕೆ ಮುಖ್ಯ ಕಾರಣವೇ ಇದು. ‘ಮೂರ್ತಿ’ ಎಂಬುದನ್ನು ‘ಮೂರ್‍ತಿ’ ಎಂದು ಬರೆದರೂ ತಾಂತ್ರಿಕವಾಗಿ ಸರಿಯೇ ಆದರೆ ಕನ್ನಡದ ಸಾಂಸ್ಕೃತಿಕ ಅನುಭವದಲ್ಲಿ ಇದು ತಪ್ಪು. ಅದೇ ರೀತಿ ‘ರ್ಯಾಂಕ್’ ಎಂಬುದು ತಾಂತ್ರಿಕವಾಗಿ ‘ರ್‍ಯಾಂಕ್’ ಹೌದು. ಆದರೆ ಕನ್ನಡದಲ್ಲಿ ಬರೆಯುವಾಗ ಪದದ ಆರಂಭದಲ್ಲಿ ಇರುವ ‘ಯ’ಕಾರಕ್ಕೆ ಅರ್ಕಾವೊತ್ತು ನೀಡುವುದು ಸರಿಯಲ್ಲ. ಇಂಥ ಸಮಸ್ಯೆಗಳನ್ನು ನಿವಾರಿಸುವುದಕ್ಕೆ ಬೇಕಿರುವುದು ತಂತ್ರಜ್ಞಾನವಷ್ಟೇ ಅಲ್ಲ. ಇಲ್ಲಿ ಬೇಕಿರುವುದು ಭಾಷೆಯ ಕುರಿತ ಅರಿವು. ಈ ಕೊರತೆಯನ್ನು ತುಂಬಿಸಿಕೊಡುವುದಕ್ಕೆ ಪರಿಷತ್ತಿನಂಥ ಸಂಸ್ಥೆಗೆ ಸಾಧ್ಯವಿತ್ತು. ಯೂನಿಕೋಡ್ ಕನ್ಸಾರ್ಟಿಯಂನಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿಗೆ ಸದಸ್ಯತ್ವ ಪಡೆದು ಇಂಥ ಸಮಸ್ಯೆಗಳಿಲ್ಲದಂತೆ ನೋಡಿಕೊಳ್ಳಬಹುದಿತ್ತು. ಈ ಸದಸ್ಯತ್ವಕ್ಕೆ ಯಾವ ರಾಜಕಾರಣಿಯನ್ನೂ ಓಲೈಸುವ ಅಗತ್ಯವೇನೂ ಇರಲಿಲ್ಲ. ಇದಕ್ಕೆ ಬೇಕಿದ್ದದ್ದು ಶುಲ್ಕ ಪಾವತಿಸುವ ಸಾಮರ್ಥ್ಯ ಮಾತ್ರ. ಯಂತ್ರಾನುವಾದದಂಥ ಪರಿಕಲ್ಪನೆಗಳು ಭಾರತೀಯ ಭಾಷೆಗಳಲ್ಲೂ ಸಾಕಾರಗೊಳ್ಳುತ್ತಿರುವ ಹೊತ್ತಿನಲ್ಲಿ ಇವನ್ನು ಕನ್ನಡಕ್ಕೆ ಅಳವಡಿಸಲು ಬೇಕಾದ ಕನ್ನಡದ ಪದ ಸಂಚಯವನ್ನು ಒದಗಿಸುವ ಕೆಲಸವನ್ನು ಸಾಹಿತ್ಯ ಪರಿಷತ್ತು ಕೈಗೆತ್ತಿಕೊಳ್ಳಬಹುದಿತ್ತು. ಆದರೆ ಇಂಥ ಯಾವುದನ್ನೂ ಸಾಹಿತ್ಯ ಪರಿಷತ್ತು ಮಾಡಿಲ್ಲ.

ಕನ್ನಡವನ್ನು ತಂತ್ರಜ್ಞಾನದ ಸಂದರ್ಭದಲ್ಲಿ ಪ್ರಸ್ತುತಗೊಳಿಸುವ ಕೆಲಸದಲ್ಲಿ ಮಹತ್ತರವಾದ ಕೆಲಸಗಳೇನಾದರೂ ಈ ತನಕ ನಡೆದಿದ್ದರೆ ಅದರ ಹಿಂದೆ ಇರುವುದು ಉತ್ಸಾಹಿ ವ್ಯಕ್ತಿಗಳು ಮಾತ್ರ. ಕನ್ನಡಕ್ಕೊಂದು ಕಂಪ್ಯೂಟರ್ ಕೀಲಿಮಣೆಯನ್ನು ರೂಪಿಸಿದ್ದು ಕೆ.ಪಿ.ರಾವ್. ತಮ್ಮ ವೃತ್ತಿಯ ಭಾಗವಾಗಿ ಅವರಿದನ್ನು ಸೃಷ್ಟಿಸಿದರು. ಹಾಗೆಂದು ಅದಕ್ಕೆ ಪೇಟೆಂಟ್ ಪಡೆದು ತಮ್ಮದಾಗಿಸಿಕೊಳ್ಳಲಿಲ್ಲ. ಕನ್ನಡಕ್ಕಷ್ಟೇ ಏಕೆ ಯಾವ ಭಾಷೆಯಾದರೂ ತನ್ನ ಕೀಲಿಮಣೆ ತರ್ಕವನ್ನು ಬಳಸಿಕೊಳ್ಳಲಿ ಎಂದು ಮುಕ್ತವಾಗಿಟ್ಟರು. ಅವರ ಪ್ರಯತ್ನವನ್ನು ಸರ್ಕಾರ ಗುರುತಿಸುವ ಹೊತ್ತಿಗೆ ದಶಕಗಳೇ ಉರುಳಿ ಹೋಗಿದ್ದವು.

ಕನ್ನಡದ ಮೊದಲ ಅಂತರ್ಜಾಲ ಪತ್ರಿಕೆಯನ್ನು ಆರಂಭಿಸಿದ್ದು ರಸಾಯನ ಶಾಸ್ತ್ರದಲ್ಲಿ ಪಿ.ಎಚ್‌ಡಿ ಪಡೆದ ಯು.ಬಿ.ಪವನಜ. ಕನ್ನಡ ಮತ್ತು ಕಂಪ್ಯೂಟರ್‌ಗೆ ಇರುವ ಅವರ ನಂಟು ಎಂತಹುದೆಂದರೆ ಅವರು ತಮ್ಮ ಶೈಕ್ಷಣಿಕ ಬದುಕಿನುದ್ದಕ್ಕೂ ಅಭ್ಯಸಿಸಿದ್ದ ವಿಷಯವನ್ನೂ ಬದಿಗಿಟ್ಟು ಮಾಹಿತಿ ಮತ್ತು ಸಂಹವನ ತಂತ್ರಜ್ಞಾನ ಹಾದಿಯಲ್ಲೇ ತಮ್ಮ ಭವಿಷ್ಯವನ್ನೂ ಕಂಡುಕೊಂಡರು.  ಕಥೆಗಾರ ವಸುಧೇಂದ್ರ ಮತ್ತು ವಿಮರ್ಶಕ ಓ.ಎಲ್.ನಾಗಭೂಷಣ ಸ್ವಾಮಿ, ತಂತ್ರಜ್ಞರಾದ ಓಂ.ಶಿವಪ್ರಕಾಶ್, ಪವಿತ್ರಾ ಮತ್ತು ದೇವರಾಜ್ ಅವರ ತಂಡ 259 ವಚನಕಾರರ 21,000ದಷ್ಟು ವಚನಗಳನ್ನು ಸಂಶೋಧನಾ ಬಳಕೆಗೆ ಅನುಕೂಲವಾಗುವಂತೆ ಒಂದು ವೆಬ್ ಅಪ್ಲಿಕೇಶನ್ ರೂಪಿಸುತ್ತಿದ್ದಾರೆ. ಇವರೆಲ್ಲರೂ ಇದನ್ನು ಮಾಡುತ್ತಿರುವುದು ತಮ್ಮದೇ ಉತ್ಸಾಹದಿಂದಲೇ ಹೊರತು ಸಾಂಸ್ಥಿಕ ಬಲದೊಂದಿಗಲ್ಲ. ಮೈಸೂರಿನ ಯೋಗಾನಂದ್ ಅವರು ಗೋಪಾಲಕೃಷ್ಣ ಅಡಿಗರ ‘ಸಾಕ್ಷಿ’ಯ ಎಲ್ಲಾ ಸಂಚಿಕೆಗಳು, ಬೆಳ್ಳಾವೆ ವೆಂಕಟನಾರಣಪ್ಪನವರ ಸಂಪಾದಕತ್ವದಲ್ಲಿ ಪ್ರಕಟವಾದ ಕನ್ನಡದ ಮೊದಲ ವಿಜ್ಞಾನ ಪತ್ರಿಕೆಯಾದ ‘ವಿಜ್ಞಾನ’ದ ಎಲ್ಲಾ ಸಂಚಿಕೆಗಳನ್ನೂ ಡಿಜಿಟೈಝ್ ಮಾಡಿ ಅಂತರ್ಜಾಲದಲ್ಲಿ ಲಭ್ಯವಾಗುವಂತೆ ನೋಡಿಕೊಂಡಿದ್ದಾರೆ. ಈ ಯೋಜನೆಗಳು ಕಾರ್ಯಗತಗೊಂಡದ್ದೂ ಸಾಂಸ್ಥಿಕ ಬೆಂಬಲದಿಂದಲ್ಲ. ಇಂಥ ಇನ್ನೂ ಅನೇಕ ಉದಾಹರಣೆಗಳನ್ನಿಲ್ಲಿ ಪಟ್ಟಿ ಮಾಡಬಹುದು. ಅಂತಿಮವಾಗಿ ನಮಗೆ ಸಿಗುವುದು ಮಾಹಿತಿ ತಂತ್ರಜ್ಞಾನದ ಸಂದರ್ಭದಲ್ಲಿ ಕನ್ನಡ ಅಪ್ರಸ್ತುತವಾಗದಂತೆ ನೋಡಿಕೊಳ್ಳುತ್ತಿರುವವರೆಲ್ಲಾ ಲಾಭಾಪೇಕ್ಷೆಯಿಲ್ಲದೆ ದುಡಿಯುತ್ತಿರುವ ವ್ಯಕ್ತಿಗಳೆಂಬ ಚಿತ್ರಣ.

ಇಂಥ ಒಂದೇ ಒಂದು ಕೆಲಸವನ್ನು ಕನ್ನಡ ಸಾಹಿತ್ಯ ಪರಿಷತ್ತು ಏಕೆ ಕೈಗೆತ್ತಿಕೊಳ್ಳುತ್ತಿಲ್ಲ ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ. ಕನ್ನಡ ಸಾಹಿತ್ಯ ಪರಿಷತ್ತು ಎಂಟು ಸಂಪುಟಗಳಷ್ಟು ದೊಡ್ಡದಿರುವ ಕನ್ನಡ ನಿಘಂಟನ್ನು ಮತ್ತೆ ಮುದ್ರಿಸಿದೆ. ಇದರ ಜೊತೆಯಲ್ಲೇ ಅದನ್ನು ಡಿಜಿಟೈಝ್ ಮಾಡಿದ್ದರೆ ಏನೆಲ್ಲಾ ಆಗಬಹುದಿತ್ತು. ಈಗ ಕನ್ನಡಕ್ಕೆ ಇದ್ದರೂ ಇಲ್ಲದಂತಿರುವ ‘ಪದಪರೀಕ್ಷಕ’ ಪದಸಂಪನ್ನವಾಗುತ್ತಿತ್ತು. ಜೊತೆಗೆ ನಿರಂತರವಾಗಿ ನಿಘಂಟನ್ನು ಪರಿಷ್ಕರಿಸುವ ಕೆಲಸವೂ ಸುಲಭವಾಗುತ್ತಿತ್ತು. ಪರಿಷತ್ತು ಪ್ರಕಟಿಸಿರುವುದು ಕೇವಲ ನಿಘಂಟನ್ನಷ್ಟೇ ಅಲ್ಲ. ಅದಕ್ಕಿಂತಲೂ ಅಮೂಲ್ಯವಾದ ಕನ್ನಡ ಮತ್ತು ಕನ್ನಡ ಸಂಸ್ಕೃತಿಗೆ ಸಂಬಂಧಿಸಿದ ಪುಸ್ತಕಗಳನ್ನು ಪ್ರಕಟಿಸಿದೆ. ಪರಿಷತ್ಪತ್ರಿಕೆಯಲ್ಲಿ ಅನೇಕ ವಿದ್ವತ್ಪೂರ್ಣ ಪ್ರಬಂಧಗಳು ಪ್ರಕಟವಾಗಿವೆ. ಸಾಹಿತ್ಯ ಸಮ್ಮೇಳನದ ಸಂದರ್ಭದಲ್ಲಿ ತರುವ ಸ್ಮರಣ ಸಂಚಿಕೆಗಳಲ್ಲಿಯೂ ಇಂಥ ಅನೇಕ ಪ್ರಬಂಧಗಳಿವೆ. ಇವೆಲ್ಲಾ ವಿಷಯಾನುಕ್ರಮದಲ್ಲಿ ಅಂತರ್ಜಾಲದಲ್ಲಿ ಸಿಕ್ಕರೆ ಎಷ್ಟು ಚೆನ್ನ. ಒಂದು ಸಾಹಿತ್ಯ ಸಮ್ಮೇಳನದಲ್ಲಿ ಸರಳವಾದ ಊಟ ಕೊಡುವ ತೀರ್ಮಾನಕ್ಕೆ ಬಂದರೆ ಇದಕ್ಕೆ ಬೇಕಾದ ಸಂಪನ್ಮೂಲ ಸಿಗುತ್ತದೆ.

ಸದ್ಯ ಮಾಹಿತಿ ತಂತ್ರಜ್ಞಾನದ ಸಂದರ್ಭದಲ್ಲಿ ಅನ್ಯವಾಗಿರುವುದು ಕನ್ನಡ ಸಾಹಿತ್ಯ ಪರಿಷತ್ತೇ ಹೊರತು ಕನ್ನಡವಲ್ಲ. ಹೀಗೆ ಅಪ್ರಸ್ತುತವಾಗದೇ ಉಳಿಯುವುದಕ್ಕೆ ಪರಿಷತ್ತು ಮಾಡಬೇಕಾಗಿರುವ ಕೆಲಸ ಒಂದೇ. ‘ಕನ್ನಡದ ಸರ್ವಾಂಗೀಣ ಅಭಿವೃದ್ಧಿಗೆ ಮಾಹಿತಿ ತಂತ್ರಜ್ಞಾನದ ಬಳಕೆ’ ಎಂಬ ಗೋಷ್ಠಿಯನ್ನು ಏರ್ಪಡಿಸುವುದಕ್ಕಿಂತ ಮಾಹಿತಿ ತಂತ್ರಜ್ಞಾನದಲ್ಲಿ ಕನ್ನಡದ ಸರ್ವಾಂಗೀಣ ಅಭಿವೃದ್ಧಿಗೆ ಕನ್ನಡ ಸಾಹಿತ್ಯ ಪರಿಷತ್ತು ಮಾಡಬೇಕಾದ ಕೆಲಸಗಳ ಪಟ್ಟಿಯೊಂದನ್ನು ಮಾಡಿಕೊಂಡು ತಕ್ಷಣವೇ ಕಾರ್ಯಪ್ರವೃತ್ತವಾಗಬೇಕು. ಇಲ್ಲವಾದರೆ ನೂರರ ಗಡಿಯಲ್ಲಿರುವ ಕನ್ನಡ ಸಾಹಿತ್ಯ ಪರಿಷತ್ತು ನೂರು ತಲುಪುವ ಮೊದಲೇ ಯುವ ತಲೆಮಾರಿಗೆ ಅಪ್ರಸ್ತುತವಾಗಿಬಿಡುತ್ತದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT