ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೀನುಗಳ ರಾಜಧಾನಿ ಕೆಟ್‌ಚಿಕಾನ್

Last Updated 27 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ಸಣ್ಣ ಸದ್ದಿಗೂ ತಟಕ್ಕನೆ ಎಚ್ಚರಗೊಳ್ಳುವುದು ನನ್ನ ಸ್ವಭಾವ. ಹೆಸರು ಶಾಂತಸಾಗರವಾದರೂ ಅಂದು ಏಕೋ ಮುನಿದಿತ್ತು. ಹಡಗಿನ ಓಲಾಟಕ್ಕೆ ಎದ್ದು ಕುಳಿತೆ. ಸಮಯ ರಾತ್ರಿ ಹನ್ನೆರಡರ ಸಮೀಪ. ನಿದ್ರೆ ಬಾರದ್ದಕ್ಕೆ ಟಿ.ವಿ ಹಚ್ಚಿದೆ. ಹಡಗಿನ ಚಲನೆಯ ದಿಕ್ಕುದೆಸೆ, ಕಡಲಿನ ಉಬ್ಬರವಿಳಿತಗಳು, ಹವೆ ಮುಂತಾದ ಮಾಹಿತಿಗಳು ಸಿಕ್ಕವು. ಅಂದು ಸೆಪ್ಟೆಂಬರ್ ೨. ಗಡಿಯಾರವನ್ನು ಒಂದು ಗಂಟೆ ಹಿಂದಕ್ಕೆ ತಿರುಗಿಸಿಕೊಳ್ಳಬೇಕು. ಹನ್ನೆರಡು ಗಂಟೆ ಇದ್ದುದು ಹನ್ನೊಂದಾಯಿತು. ಇದು ಸಮಯದ ಹೊಂದಾಣಿಕೆ ಮಾತ್ರ. ಗಡಿಯಾರವನ್ನು ಹಿಂದೆ ಮುಂದೆ ತಿರುಗಿಸಿಕೊಳ್ಳುವುದರಿಂದ ನಾವು ಚಿಕ್ಕವರೋ ದೊಡ್ಡವರೋ ಆಗುವಂತಿದ್ದರೆ ಎಷ್ಟು ಚೆನ್ನಾಗಿತ್ತು!

ಚಿಕ್ಕ ಮಕ್ಕಳು ಮುಂದೆ ತಿರುಗಿಸಿ ದೊಡ್ಡವರಾಗ ಬಯಸುತ್ತಿದ್ದರು. ದೊಡ್ಡವರೆಲ್ಲ ಹಿಂದೆ ತಿರುಗಿಸಿ ಚಿಕ್ಕವರಾಗಬಯಸುತ್ತಿದ್ದರು. ನಿದ್ರೆ ಬಾರದ್ದರಿಂದ ನಡುರಾತ್ರಿಯಲ್ಲಿ ಹಡಗನ್ನೊಂದು ಸುತ್ತು ಹಾಕಿ ಬರೋಣ ಎನ್ನಿಸಿತು. ಹದಿಮೂರು ಡಿಗ್ರಿ ಸೆಂಟಿಗ್ರೇಡ್ ತಾಳಿಕೊಳ್ಳಲಾಗದ ಶೀತವೇನೂ ಅಲ್ಲ. ಆದರೆ ವಿಪರೀತ ಥಂಡಿ ಗಾಳಿ. ಹಡಗಿನ ಸುತ್ತ ಒಂದು ವಾಕಿಂಗ್ ಪಥವಿದೆ. ಪಾರ್ಕುಗಳಲ್ಲಿ ನಡೆದಾಡುವಂತೆ ಪ್ರಯಾಣಿಕರು ಅಲ್ಲಿ ಕಡಲನ್ನು ನೋಡುತ್ತಾ ವಾಕ್ ಮಾಡಬಹುದು. ಕ್ಯಾಬಿನ್ ಬಾಗಿಲೆಳೆದುಕೊಂಡು ಸ್ವೆಟರ್ರು, ಮಂಕಿಕ್ಯಾಪು ಧರಿಸಿ ಹೊರಟೆ. ನಡುರಾತ್ರಿಯ ಕಡಲ ಮೇಲಣ ವಾಕಿಂಗ್ ಹೇಗಿರುತ್ತೆ ಎಂಬ ಮರ್ಕಟ ಮನಸ್ಸಿನ ಕುತೂಹಲ. ಕಾಳಸರ್ಪದಂತೆ ಕಡಲು ಕಪ್ಪಗಿತ್ತು. ಬಾಯಿಂದ ಬಿಳಿನೊರೆ ಬುರುಬುರು ಉಕ್ಕಿದಂತೆ ಅಲ್ಲಲ್ಲಿ ಗೆರೆಗಳು ಮೂಡಿ ಮಾಯವಾಗುತ್ತಿದ್ದವು. ಸಾವಕಾಶವಾಗಿ ಒಂದು ಸುತ್ತು ಬಂದೆ.

ಇನ್ನೇನು ಹಡಗು ಕೆನಡಾದ ಗಡಿ ದಾಟಿ, ಅಮೆರಿಕಾ ಜಲ ಪ್ರದೇಶವನ್ನು ಪ್ರವೇಶಿಸಲಿದೆ; ಇಲ್ಲಿ ಹಡಗುಗಳ ಟ್ರಾಫಿಕ್ ಬಹಳ ; ನಿರಂತರವಾಗಿ ಪ್ರಿನ್ಸ್ ರುಪರ್ಟ್ ಟ್ರಾಫಿಕ್ ಸಿಸ್ಟಂಗೆ ಮಾಹಿತಿಯನ್ನು ರವಾನಿಸುತ್ತಿರಬೇಕು ; ಕ್ವೀನ್ ಚಾರ್‌ಲೆಟ್ ಸೌಂಡ್ ಮತ್ತು ಹೆಕಾಟ್ ಕೊಲ್ಲಿಯನ್ನು ದಾಟಿ ಕೇಪ್ ಕಾಶನ್ ಜಲಾವರಣಕ್ಕೆ ಬೆಳಗಿನ ಜಾವ ಎರಡು ಗಂಟೆ ನಲವತ್ಮೂರು ನಿಮಿಷಕ್ಕೆ ಪ್ರವೇಶಿಸುತ್ತದೆ ; ಎಂಬಿತ್ಯಾದಿ ಮಾಹಿತಿಗಳನ್ನು ಟಿ.ವಿಯಲ್ಲಿ ನೋಡಿದ್ದೆ. ಪ್ರಯಾಣಿಕರೆಲ್ಲ ಸಂಪನ್ನ ನಿದ್ರೆ ತೆಗೆಯುತ್ತಿರುವಾಗ ನನಗೆ ಇದೆಂಥ ರೋಗ?

ಈ ಮಾಹಿತಿಗಳಿಂದ ನನ್ನಂಥ ಸಾಮಾನ್ಯ ಪ್ರಯಾಣಿಕರಿಗೆ ಮೂರು ಕಾಸಿನ ಲಾಭವಿಲ್ಲ. ಆದರೂ ವಿಮಾನದಲ್ಲಾಗಲೀ, ಹಡಗಿನಲ್ಲಾಗಲೀ ನನಗೆ ಈ ಕುತೂಹಲ ವಿಪರೀತ. ಇದನ್ನು ವ್ಯರ್ಥ ಮತ್ತು ನಿರುಪಯುಕ್ತ ಎನ್ನುವವರಿದ್ದಾರೆ. ಇರಬಹುದು. ಆದರೆ ನನಗೆ ಈ ಕ್ಷಣ ಭೂಮಿಯ ಯಾವ ಭಾಗದಲ್ಲಿದ್ದೇನೆ ಎಂದು ತಿಳಿಯುವ, ಅಕ್ಷಾಂಶ -ರೇಖಾಂಶಗಳ ಜಾರುಗುಪ್ಪೆಯ ಮೇಲೆ ಜಾರುವ ತವಕ. ಹಡಗಿನ ಸುರಕ್ಷತಾ ಸಿಬ್ಬಂದಿ ನನ್ನ ವಾಕಿಂಗ್‌ ಅನ್ನು ಅನುಮಾನದಿಂದಲೇ ನೋಡಿದಂತಿತ್ತು.

ನಿದ್ರೆ ಬರುತ್ತಿಲ್ಲ- ವಾಕ್ ಮಾಡಬಾರದೆ-? ಪೆಸಿಫಿಕ್ ಸಾಗರವು ನಡುರಾತ್ರಿಯಲ್ಲಿ ಹೇಗಿರುತ್ತದೆ ಎಂಬ ಅನುಭವ ಪಡೆಯುವ ಹಕ್ಕು ನನ್ನದು, -ಅದನ್ನು ತಡೆಯಲು ನೀವ್ಯಾರು?- ಮುಂತಾದ ವಾದಗಳನ್ನು ಅಣಿಗೊಳಿಸಿಕೊಂಡಿದ್ದೆನಾದರೂ ಅವರು ಯಾವ ಪ್ರಶ್ನೆಯನ್ನೂ ಕೇಳಲಿಲ್ಲ. ನನ್ನ ಅನುಭವ ಅನನ್ಯವಾಗಿತ್ತು. ಭೂಮಿಯ ಮುಕ್ಕಾಲು ಭಾಗವನ್ನು ಆವರಿಸಿಕೊಂಡಿರುವ ನೀರು, ಆ ನೀರಿನ ದೊಡ್ಡ ಆಕರವಾದ ಪೆಸಿಫಿಕ್ ಕಡಲು, ಆ ಕಡಲಿನ ಮೇಲೆ ಇರುವೆಗಿಂತ ಚಿಕ್ಕದು ಎನ್ನಬಹುದಾದ ಹಡಗು, ಆ ಹಡಗಿನ ಮೇಲೆ ನಟ್ಟಿರುಳಲ್ಲಿ ಒಂದು ಸುತ್ತು ನಡೆದಾಡುತ್ತಿರುವ ನಾನು...

ಇವೆಲ್ಲವೂ ಒಂದಕ್ಕೊಂದು ಹೊಂದಿರುವ ಅಂತಃಸಂಬಂಧವೇನು ? ಸಂಬಂಧವಿದೆಯೆ ? ಕಲ್ಪಿಸಿಕೊಂಡರೆ ಯಾರೊಂದಿಗಾದರೂ, ಯಾವುದರೊಂದಿಗಾದರೂ ಸಂಬಂಧವನ್ನು ಹುಟ್ಟುಹಾಕಿಕೊಳ್ಳಬಹುದು. ವಿಸ್ತರಿಸಿಕೊಳ್ಳಲೂಬಹುದು. ನನಗೂ ನಾನು ಓದುತ್ತಿದ್ದ ಕಾದಂಬರಿಯ ಪಾತ್ರಗಳಿಗೂ ; ನನಗೂ ನನ್ನ ಸಹಪ್ರಯಾಣಿಕರಿಗೂ ; ನನಗೂ ಆ ಸಮುದ್ರದೊಳಗಣ ಜಲಚರಗಳಿಗೂ ! ಸಂಬಂಧವೂ ದೇವರ ಹಾಗೆ. ಇದೆ ಎಂದರೆ ಇದೆ ; ಇಲ್ಲ ಎಂದರೆ ಇಲ್ಲ ; ಇರಲಿಕ್ಕಿಲ್ಲ ಎಂದರೆ ಇರಲಿಕ್ಕಿಲ್ಲ.

ಬೆಳಗಿನ ಜಾವ ಆರೂವರೆಗೆ ಜಡಿಮಳೆಯಲ್ಲಿ ಮೊದಲ ಊರು ಕೆಟ್‌ಚಿಕಾನ್ ಕಾಣಿಸಿತು. ಮುವ್ವತ್ತೆಂಟು ಗಂಟೆಗಳಲ್ಲಿ ಐದುನೂರಾ ಮುವ್ವತ್ತೆರಡು ನಾಟಿಕಲ್ ಮೈಲುಗಳನ್ನು ಕ್ರಮಿಸಿ ನಮ್ಮ ಡೈಮಂಡ್ ಪ್ರಿನ್ಸೆಸ್ ಚೆಲುವೆ ಹೊಸ ತೀರವನ್ನು ಮುಟ್ಟಿದ್ದಳು. ಇಳಿಯುವವರೆಲ್ಲಾ ಗ್ಯಾಂಗ್‌ವೇ ಕಡೆಗೆ ಬನ್ನಿ. ಸೂಕ್ತ ಗುರುತಿನ ದಾಖಲೆ ಇಟ್ಟುಕೊಳ್ಳಿ. ವಾಪಸ್ ಬರುವಾಗ ಅಗತ್ಯ. ಅಪರಿಚಿತರು ಹಡಗನ್ನೇರಬಾರದು. ಕೆಟ್‌ಚಿಕಾನ್‌ನಲ್ಲಿ ನೀವು ಕೊಂಡುಕೊಳ್ಳುವ ಪ್ರತಿಯೊಂದನ್ನೂ ಪರಿಶೀಲಿಸಿ ಒಳಗೆ ಬಿಡಲಾಗುವುದು. ಎಂದಿನಂತೆ ಆಲ್ಕೋಹಾಲ್ ತರಲೇಕೂಡದು. ಸಕಾಲಕ್ಕೆ ಬನ್ನಿ. ತಡವಾದರೆ ಹಡಗು ಯಾರಿಗೂ ಕಾಯುವುದಿಲ್ಲ...

ಮುಂತಾದ ಸೂಚನೆಗಳನ್ನು ಪ್ರಯಾಣಿಕರಿಗೆ ರವಾನಿಸಲಾಯಿತು. ಗಾಜಿನಿಂದ ಇಣುಕಿ ನೋಡಿದೆ. ಸಾವಿರ ಅಡಿ ಉದ್ದದ, ನೂರಿಪ್ಪತ್ಮೂರು ಅಡಿ ಅಗಲದ, ಒಂದು ಲಕ್ಷದ ಹದಿನೈದು ಸಾವಿರದ ಎಂಟು ನೂರಾ ಎಪ್ಪತ್ತೈದು ಟನ್ ತೂಕದ, ನಾಲ್ಕು ಸಾವಿರದ ನೂರರವತ್ತು ಮಂದಿಯನ್ನು ಹೊತ್ತಿದ್ದ, ಇದುವರೆಗೆ ಗತ್ತಿನಿಂದ ಬೀಗುತ್ತ ತೇಲುತ್ತಿದ್ದ ದೈತ್ಯ ಹಡಗನ್ನು, ಮನೆಯಂಗಳದ ಗೂಟಕ್ಕೆ ನಾಯಿ ಮರಿಯನ್ನು ಕಟ್ಟಿಹಾಕುವಂತೆ ಬಂದರುಕಟ್ಟೆಗೆ ಎಳೆದುಕಟ್ಟುತ್ತಿದ್ದರು. ಪಾಪದ ಹಡಗು !

ಅಲಾಸ್ಕದ ಫಸ್ಟ್ ಸಿಟಿ ಎಂದು ಕರೆಯಲಾಗುವ ಕೆಟ್‌ಚಿಕಾನ್‌ನಲ್ಲಿ ವಾರಗಟ್ಟಲೆ ಅನುಭವಿಸಬಹುದಾದ ಸಂಗತಿಗಳಿವೆ. ಬಿಳಿಯ ಜನರ ಒಂದು ಸದ್ಗುಣವೆಂದರೆ ಹತ್ತು ಜನ ಕೂಡಿದರೆ ಸಾಕು, ಕೂಡಲೇ ಒಂದು ಮ್ಯೂಸಿಯಂ ಆರಂಭಿಸಿ, ಅಲ್ಲಿ ಪಾರಂಪರಿಕ ವಸ್ತುವೈವಿಧ್ಯಗಳನ್ನು ವ್ಯವಸ್ಥಿತವಾಗಿ ಕೂಡಿಡುತ್ತಾರೆ. ಅಧಿಕೃತ ಸಂಗ್ರಾಹ್ಯ, ಅದಕ್ಕೊಂದು ಫೆಸ್ಟಿವಿಟಿ ಅವರ ಮೂಲಗುಣ. ಅದರಲ್ಲಿ ಚಿಕ್ಕದೊಂದು ಉತ್ಪ್ರೇಕ್ಷೆ ಇರಬಹುದು. ಆಸ್ಪತ್ರೆ ಸ್ಕೂಲುಗಳಷ್ಟೇ ಈ ಮ್ಯೂಸಿಯಂಗಳೂ ಮುಖ್ಯ ಎಂದು ನಂಬುತ್ತಾರೆ. ಅವು ಕೇವಲ ಪ್ರತಿಷ್ಠೆಗಾಗಿ ಅಲ್ಲ ; ಚರಿತ್ರೆಯ ನೆನಪಿಗಾಗಿ.

ನೆನಪು ಹಿರಿದಾದದ್ದಾಗಿರಬಹುದು ; ವಿಲಕ್ಷಣವಾಗಿರಬಹುದು. ಅವನ್ನೆಲ್ಲ ಬಿಡದೆಲೆ ಕಾದಿರಿಸುವುದು ಅವರ ಗುಣ. ಕೆಟ್‌ಚಿಕಾನ್‌ನಲ್ಲಿ ಎರಡು ವರ್ಗದ ಸಂಗ್ರಹಾಲಯಗಳಿವೆ. ಮೊದಲನೆಯವು ಅಲಾಸ್ಕನ್ನರ ದೇಶೀಯ ಕಲೆಗೆ ಸಂಬಂಧಿಸಿವೆ. ಅವರ ಸಂಸ್ಕೃತಿ ವರ್ಣಮಯ. ಕೈ ಕೆತ್ತನೆಯ ಟೊಟೆಮ್ ಕಂಬಗಳು ನಮ್ಮೂರ ಸೋಮನ ಮುಖವಾಡ ಹೋಲುತ್ತವೆ. ಇದಕ್ಕೆ ಪೂರಕವಾದ ನೇಯ್ಗೆ, ಕರಕುಶಲ ವಸ್ತುಗಳು ಅನೇಕ. ಜೇಡ್, ಪರ್ಲ್, ಜೆಮ್ ಮುಂತಾದ ಶಿಲೆಗಳಿಂದ ಮಾಡಲ್ಪಟ್ಟ ವಿವಿಧ ವಿನ್ಯಾಸದ ಒಡವೆಗಳು ಆಕರ್ಷಕವಾಗಿವೆ. ಅವನ್ನು ಧರಿಸಿದರೆ ಕಿವಿ, ಮೂಗು ಹರಿದುಕೊಳ್ಳುವುದಿಲ್ಲವೇ ಎಂದು ಆತಂಕ ಹುಟ್ಟಿಸುವಷ್ಟು ಕೆಲವು ಅಗಲವಾಗಿವೆ, ದೊಡ್ಡದಾಗಿವೆ. ಅಲಾಸ್ಕದ ವಾಯವ್ಯ ಕರಾವಳಿಯ ಮೂಲ ನಿವಾಸಿಗಳಾದ ಟ್ಲಿಂಗಿಟ್, ಹಾಯ್‌ಡ, ಟ್ಸಿಮ್‌ಶಿಯಾನ್ ಬುಡಕಟ್ಟುಗಳು ಹೊಂದಿದ್ದ ಸಂಸ್ಕೃತಿಯ ವಿವಿಧ ಪರಿಕರಗಳನ್ನು ಪುನರ್ ಸೃಷ್ಟಿಸುವ ಕಲಾಕಾರರು, ಶಿಕ್ಷಕರು ಕೆಟ್‌ಚಿಕಾನ್‌ನಲ್ಲಿದ್ದಾರೆ.

ದಕ್ಷಿಣಕ್ಕಿರುವ ಸಾಕ್ಸ್‌ಮನ್ ಟೊಟೆಮ್ ಪಾರ್ಕ್‌ನಲ್ಲಿ ಅಲಾಸ್ಕನ್ನರ ಹಳೆಯ ಮನೆಗಳಿವೆ. ಒಂದು ಪುಟ್ಟ ಊರು, ದೊಡ್ಡ ಜನಪದೀಯ ಸಂಗ್ರಹಾಲಯದಂತಿದೆ. ನನಗೆ ತುಂಬಾ ಮೆಚ್ಚುಗೆಯಾದ ಅಂಶವೆಂದರೆ ಪ್ರಾಚೀನ ಕಲಾಶೈಲಿಯನ್ನು ವರ್ತಮಾನದ ಕಲಾವಿದರು ಅಳವಡಿಸಿಕೊಂಡು ಹೊಸತನ್ನೂ ಹಳತನ್ನೂ ಸಮನ್ವಯಗೊಳಿಸುತ್ತಿದ್ದುದು. ಪರಿಸರ ಪ್ರಜ್ಞೆಗೆ ಪೂರಕವಾದ ಅನೇಕ ಹೊಸ ಕಲಾಕೃತಿಗಳು ಇಲ್ಲಿ ಹಳೆಯ ವಿನ್ಯಾಸದಲ್ಲಿ ಮೈತಳೆಯುತ್ತಿದ್ದವು. ಕೆಲವು ವರ್ಷಗಳ ಹಿಂದೆ ನಾನು ನ್ಯೂಜಿಲ್ಯಾಂಡ್‌ಗೆ ಹೋಗಿದ್ದೆನು.

ಅಲ್ಲಿನ ಮೂಲನಿವಾಸಿಗಳಾದ ಮೌರಿಗಳಿಗೂ, ಅಲಾಸ್ಕದ ವಿವಿಧ ಮೂಲನಿವಾಸಿ ಬುಡಕಟ್ಟು ಜನಾಂಗಗಳಿಗೂ ತುಂಬಾ ಹೋಲಿಕೆ ಇದೆ. ವಿಶೇಷವಾಗಿ ಉಡುಪು, ಕೆತ್ತನೆ, ಕರಕುಶಲ ವಸ್ತುಗಳು, ನೇಯ್ಗೆ ಇತ್ಯಾದಿಗಳಲ್ಲಿ ಸಮಾನ ಅಂಶಗಳಿವೆ. ಇಬ್ಬರೂ ನೀಳಕಾಯರು. ಸಾಹಸಿಗರು. ಅವರೋ ದಕ್ಷಿಣ ಧ್ರುವದ ಅಂಚಿನಲ್ಲಿರುವವರು ; ಇವರೋ ಉತ್ತರ ಧ್ರುವದಂಚಿನಲ್ಲಿರುವವರು. ಏಕರೂಪತೆಗಳಾಗಿ ಹೇಗೆ ಸಾಧ್ಯವಾಯಿತು? ಎರಡೂ ಧ್ರುವಗಳಿಗೆ ವಸಾಹತುಷಾಹಿ ಬಿಳಿಯರು ಬೇರೆ ಬೇರೆ ರೂಪದಲ್ಲಿ ದಾಳಿ ಇಟ್ಟರು. ಆದರೆ ಮೂಲನಿವಾಸಿಗಳ ಜೀವನ ವಿಧಾನ, ಕಸುಬು, ಆಚಾರ, ಆಹಾರ ಪದ್ಧತಿ ಎಲ್ಲವನ್ನೂ ಬಿಳಿಯರು ಕಾಪಾಡಿದ್ದಾರೆ. ಸ್ವಾತಂತ್ರ್ಯವನ್ನು ಕಸಿದು ಅವರ ಸಂಸ್ಕೃತಿಯನ್ನು ಮ್ಯೂಸಿಯಂಗಳಲ್ಲಿ ಕಾಯ್ದಿರಿಸಿರುವುದು ವಿಡಂಬನಾತ್ಮಕವಾಗಿದೆ. ಸಹಸ್ರಾರು ಸ್ಥಿತ್ಯಂತರಗಳನ್ನು ಕಾಣುತ್ತಾ ಬಂದ ಮಾನವ ಸಮಾಜದ ಇಂಥ ವಿವರಗಳು ಅಧ್ಯಯನ ಯೋಗ್ಯವಾದವು.

ಎರಡನೆಯ ಸಂಗ್ರಹ ಕುಖ್ಯಾತ ವೇಶ್ಯಾವಾಟಿಕೆಗೆ ಸಂಬಂಧಿಸಿದ್ದು. ಕೆಟ್‌ಚಿಕಾನ್‌ನಲ್ಲಿ ಕ್ರೀಕ್ ಸ್ಟ್ರೀಟ್ ಎಂಬ ಜಾಗವಿದೆ. ಜುಳು ಜುಳು ಹರಿವ ಹೊಳೆ. ಹಲಗೆಗಳಲ್ಲಿ ನಿರ್ಮಿಸಿರುವ ಸಣ್ಣ ಸೇತುವೆಗಳು. ಹೊಳೆಗುಂಟ ಹಳೆಯ ಮನೆಗಳಿವೆ. ಒಂದು ಕಾಲಕ್ಕೆ ‘ರೆಡ್ ಲೈಟ್ ಸ್ಟ್ರೀಟ್’ ಎಂದು ಈ ಜಾಗ ಕುಖ್ಯಾತಿ ಪಡೆದಿತ್ತಂತೆ. ಬಿಯಾಟ್ರಿಸ್ ಗ್ರೀನ್ ಎಂಬ ನಟೋರಿಯಸ್ ಮಹಿಳೆ ಇಲ್ಲಿ ಅನಿರ್ಬಂಧಿತ ವೇಶ್ಯಾವಾಟಿಕೆ ನಡೆಸುತ್ತಿದ್ದಳು. ಕೊನೆಗೊಮ್ಮೆ ಎಚ್ಚೆತ್ತ ಅಧಿಕಾರಿಗಳು ಇದನ್ನು ನಿಲ್ಲಿಸಲು ಪ್ರಯತ್ನಿಸಿದರು.

ಈ ದಂಧೆಯಲ್ಲಿ ತೊಡಗಿದ್ದ ಹೆಂಗಸರು ನಿವೃತ್ತರಾದರು, ಊರು ಬಿಟ್ಟರು. ಆದರೆ ಬಿಯಾಟ್ರಿಸ್ ಮಾತ್ರ ಭೂಗತಳಾಗಿದ್ದುಕೊಂಡು ಗಣ್ಯ ಮಹಾಶಯರ ಕೃಪಾಶೀರ್ವಾದದಿಂದ ದಂಧೆ ಮುಂದುವರಿಸಿದಳು. ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿದಳು. ಎಗ್ಗಿಲ್ಲದೆ ಐದು ದಶಕಗಳ ಕಾಲ ನಡೆದ ಈ ದಂಧೆಗೆ ಆಕೆ ಬಳಸಿದ ಮನೆ ಮತ್ತಿತರ ವಸ್ತುಗಳನ್ನು ನಿಸ್ಸಂಕೋಚವಾಗಿ ಸಂಗ್ರಹಿಸಿಡಲಾಗಿದೆ. ವೇಶ್ಯಾವೃತ್ತಿ ಎಂಬುದು ಎಲ್ಲ ದೇಶ, ಎಲ್ಲ ಕಾಲಗಳಲ್ಲಿ ಬೇರೆ ಬೇರೆ ರೂಪದಲ್ಲಿ ಅಸ್ತಿತ್ವ ಹೊಂದಿದೆ. ಕಾಲಾತೀತವೆನಿಸಿದೆ. ಇಂದಿಗೂ ಅದು ನಮ್ಮ ವ್ಯವಸ್ಥೆಯಲ್ಲಿ ಚರ್ಚಿತ ವಿಷಯವೇ ಆಗಿದೆ. ಇದನ್ನೆಲ್ಲಾ ಬದಿಗಿಟ್ಟು ಹೊಳೆಯತ್ತ ಕಣ್ಣು ಹಾಯಿಸಿದರೆ ರಟ್ಟೆಗಾತ್ರ ಮೀನುಗಳು ಹಿಂಡುಹಿಂಡಾಗಿ ಪ್ರವಾಹದ ವಿರುದ್ಧ ಈಜುವುದು ಕಾಣಿಸುತ್ತದೆ. ಕೆಟ್‌ಚಿಕಾನ್ ಈಗ ಮೀನುಗಳಿಗೆ ಲೋಕವಿಖ್ಯಾತ. ಅದನ್ನು ವಿಶ್ವದ ಮೀನುಗಳ ರಾಜಧಾನಿ ಎನ್ನುತ್ತಾರೆ.

ಹಡಗು ಇಳಿದಾಗಿನಿಂದ ಜಿಟಿಜಿಟಿ ಮಳೆ. ಕೊಡೆ ಹಿಡಿದು ಕ್ರೀಕ್ ಸ್ಟ್ರೀಟ್‌ನಿಂದ ಪೇಟೆ ಬೀದಿಗೆ ಬರುತ್ತಿದ್ದಾಗ ‘ನಮಸ್ಕಾರ’ ಎಂಬ ಕನ್ನಡದ ದನಿ ಕೇಳಿಸಿತು. ಅಚ್ಚರಿಯಿಂದ ತಲೆ ಎತ್ತಿ ನೋಡಿದರೆ ಜಗದೀಶ್ ಎಂಬ ಬೆಂಗಳೂರಿನ ಒಡವೆ ವ್ಯಾಪಾರಿ. ಕೆಟ್‌ಚಿಕಾನ್‌ನಲ್ಲಿ ಮತ್ತು ವೆಸ್ಟ್‌ಇಂಡೀಸ್‌ನಲ್ಲಿ ಒಡವೆ ವ್ಯಾಪಾರ ಮಾಡುತ್ತಿರುವುದಾಗಿ ಪರಿಚಯ ಮಾಡಿಕೊಂಡರು. ಅಲಾಸ್ಕದಲ್ಲಿ ಕನ್ನಡದ ಮಾತು ಕೇಳಿ ಸಂತೋಷವಾಯಿತು. ನನ್ನದೊಂದು ಸಿನಿಮಾ ನೋಡಿದ್ದರಂತೆ.

ನೊಬೆಲ್ ಜುವೆಲರ್‍್ಸ ಎಂಬ ತಮ್ಮ ಅಂಗಡಿಯನ್ನು ತೋರಿಸಿದರು. ವರ್ಷದಲ್ಲಿ ನಾಲ್ಕು ತಿಂಗಳು ಮಾತ್ರ ತೆರೆದಿರುತ್ತದೆ. ಇನ್ನೆಂಟು ತಿಂಗಳು ಇಡೀ ಅಲಾಸ್ಕ ಮುಚ್ಚಿರುತ್ತದೆ. ಆ ನಾಲ್ಕು ತಿಂಗಳೂ ಚಳಿ ಮತ್ತು ಜಡಿ ಮಳೆ ಎಂದರು. ಈ ಚಳಿಯಲ್ಲಿ ಒಡವೆ ಕೊಳ್ಳುವವರೂ ಇದ್ದಾರೆಯೆ ಎಂದು ಕೇಳುವುದು ಅರಸಿಕತನ ಮತ್ತು ಅಧಿಕಪ್ರಸಂಗತನವಾದೀತೆಂದು ಅಳುಕಿ ಇಲ್ಲಿ ನೋಡಬೇಕಾದ್ದು ಇನ್ನೇನಿದೆ ? ಎಂದೆ. ಅಮೆರಿಕಾದ ಅತಿ ದೊಡ್ಡ ಕಾಡು, ಟೊಂಗಾಸ್ ನ್ಯಾಶನಲ್ ಫಾರೆಸ್ಟ್ ಇರುವುದು ಇಲ್ಲೇ ಅಂದರು. ಆ ಕಾಡುಗಳ ಬಗ್ಗೆ ಸಾಕಷ್ಟು ಓದಿದ್ದೆ. ಕಾಡಿನತ್ತ ಹೊರಟೆ.
  (ಮುಂದುವರಿಯುವುದು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT