ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಕ್ತ ವಿ.ವಿ ಸಮಸ್ಯೆ ಬಗೆಹರಿಯುವ ಬಗೆ...

Last Updated 5 ಅಕ್ಟೋಬರ್ 2017, 19:30 IST
ಅಕ್ಷರ ಗಾತ್ರ

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ (ಕರಾಮುವಿ) ಮಾನ್ಯತೆಯ ನವೀಕರಣವು ಇದುವರೆಗೂ ಆಗಿಲ್ಲದ ಹಿನ್ನೆಲೆಯಲ್ಲಿ ಅದರ ಭವಿಷ್ಯದ ಬಗ್ಗೆ ಪ್ರಶ್ನೆಗಳನ್ನು ಎತ್ತಲಾಗುತ್ತಿದೆ. ಸ್ವತಃ ಉನ್ನತ ಶಿಕ್ಷಣ ಸಚಿವರೇ ಕರಾಮುವಿಯನ್ನು ಮುಚ್ಚುವ ಬಗ್ಗೆ ಹಲವು ಬಾರಿ ಸಾರ್ವಜನಿಕವಾಗಿ ಮಾತಾಡಿದ್ದಾರೆ. ಪ್ರತಿವರ್ಷವೂ ಕರ್ನಾಟಕದೊಳಗಿನ ಸುಮಾರು ಒಂದು ಲಕ್ಷ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣದ ಅವಕಾಶಗಳನ್ನು ಕಲ್ಪಿಸುವ ಈ ವಿಶ್ವವಿದ್ಯಾಲಯದ ಭವಿಷ್ಯದ ಕುರಿತಾದ ಚರ್ಚೆಯಲ್ಲಿ ಎಲ್ಲ ಪಾಲುದಾರರೂ ಭಾಗವಹಿಸಬೇಕು.

ಜೊತೆಗೆ ಈ ಚರ್ಚೆಯನ್ನು ನಡೆಸುವಾಗ, ಕರಾಮುವಿಯ ಮಾನ್ಯತೆ ನವೀಕರಣಕ್ಕಿರುವ ತೊಡಕುಗಳು ಮತ್ತು ಸಂಕೀರ್ಣತೆಗಳ ಅರಿವಿರುವುದು ಉಚಿತ ಎನ್ನುವ ಉದ್ದೇಶದಿಂದ ಕೆಲವು ಟಿಪ್ಪಣಿಗಳನ್ನು ಇಂದಿನ ಅಂಕಣದಲ್ಲಿ ದಾಖಲಿಸುತ್ತೇನೆ. ನಾನು ಕರಾಮುವಿಯಲ್ಲಿ ಕೆಲಸ ಮಾಡುತ್ತೇನಾದರೂ, ನಾನು ಅದರ ಅಧಿಕೃತ ವಕ್ತಾರನಲ್ಲ. ನನ್ನ ಅಭಿಪ್ರಾಯಗಳು ವೈಯಕ್ತಿಕ ನೆಲೆಯವು.

ಮೊದಲಿಗೆ ಕರಾಮುವಿಯ ಬಿಕ್ಕಟ್ಟಿನತ್ತ ಒಂದು ಸಂಕ್ಷಿಪ್ತ ಐತಿಹಾಸಿಕ ನೋಟ. 2015ರ ಜೂನ್ 16ರಂದು ವಿಶ್ವವಿದ್ಯಾಲಯ ಧನಸಹಾಯ ಆಯೋಗವು (ಯುಜಿಸಿ) ಸಾರ್ವಜನಿಕ ಸೂಚನೆಯೊಂದನ್ನು ಹೊರಡಿಸಿ, ಕರಾಮುವಿಯ ಯಾವ ಶೈಕ್ಷಣಿಕ ಕಾರ್ಯಕ್ರಮಕ್ಕೂ ಯುಜಿಸಿಯ ಮಾನ್ಯತೆಯಿಲ್ಲ ಎನ್ನುವ ಅಂಶವನ್ನು ಪ್ರಚುರಪಡಿಸಿತು. ಈ ಸೂಚನೆಯಲ್ಲಿಯೇ ಯುಜಿಸಿಯು ಕರಾಮುವಿಯ ನಾಲ್ಕು ಮುಖ್ಯ ಉಲ್ಲಂಘನೆಗಳನ್ನು ದಾಖಲಿಸಿತು. ಅವುಗಳೆಂದರೆ 1) ಕರ್ನಾಟಕದ ಭೌಗೋಳಿಕ ವ್ಯಾಪ್ತಿಯಾಚೆಗೆ ಪಾಲುದಾರ ಸಂಸ್ಥೆಗಳ ಮೂಲಕ ಕಾರ್ಯ ನಿರ್ವಹಿಸುತ್ತಿರುವುದು. 2) ಎಂ.ಫಿಲ್. ಮತ್ತು ಪಿಎಚ್.ಡಿ. ಕಾರ್ಯಕ್ರಮಗಳನ್ನು ದೂರಶಿಕ್ಷಣ ಮಾಧ್ಯಮದಲ್ಲಿ ನಡೆಸುತ್ತಿರುವುದು. 3) ತಾಂತ್ರಿಕ, ವೃತ್ತಿಪರ, ಪ್ಯಾರಾಮೆಡಿಕಲ್ ಮತ್ತು ಬ್ರಿಡ್ಜ್ ಕಾರ್ಯಕ್ರಮಗಳನ್ನು ನಡೆಸುತ್ತಿರುವುದು. 4) ಆನ್‌ಲೈನ್ ಕಾರ್ಯಕ್ರಮಗಳನ್ನು ನಡೆಸುತ್ತಿರುವುದು.

ಈ ಎಲ್ಲ ಕಾರ್ಯಕ್ರಮಗಳನ್ನು ನಿಲ್ಲಿಸುವಂತೆ 2013ರಿಂದ 2015ರ ವರೆಗೆ ಹಲವು ಬಾರಿ ಯುಜಿಸಿಯು ಕರಾಮುವಿಗೆ ನೇರವಾಗಿ ಮತ್ತು ಕರ್ನಾಟಕ ಸರ್ಕಾರದ ಮೂಲಕ ನಿರ್ದೇಶನ ನೀಡಿತ್ತು. ಆ ಯಾವ ನಿರ್ದೇಶನವನ್ನೂ ಕರಾಮುವಿಯು ಯುಜಿಸಿಗೆ ತೃಪ್ತಿಯಾಗುವ ರೀತಿಯಲ್ಲಿ ಪಾಲಿಸದೆ ಇದ್ದುದರಿಂದ, ಯುಜಿಸಿಯು ಸಾರ್ವಜನಿಕ ಸೂಚನೆಯನ್ನು ಹೊರಡಿಸಿತು.

ಈ ಸಾರ್ವಜನಿಕ ಸೂಚನೆಯು ಪ್ರಕಟವಾದ ನಂತರವೇ ಕರಾಮುವಿಯು ಯುಜಿಸಿಯ ನಿಯಂತ್ರಕ ಪರಮಾಧಿಕಾರವನ್ನು ಸಂಪೂರ್ಣವಾಗಿ ಒಪ್ಪಲು ಸಿದ್ಧವಾಯಿತು. ಅಲ್ಲದೆ ಯುಜಿಸಿಯ ಎಲ್ಲ ಕರಾರು-ನಿಯಮಗಳನ್ನು ಪಾಲಿಸಲು ಒಪ್ಪಿದ ಕರಾಮುವಿಯು 2015ರ ಜುಲೈನಿಂದ ಅಕ್ಟೋಬರ್‌ವರೆಗೆ ಯುಜಿಸಿಯು ಕೇಳಿದ ರೀತಿಯಲ್ಲಿ ನಾಲ್ಕು ಪ್ರಮಾಣಪತ್ರಗಳನ್ನು ಸಹ ಒದಗಿಸಿತು. ಈ ನಂತರವೇ ಕರಾಮುವಿಯ ಮಾನ್ಯತೆಯ ಪ್ರಶ್ನೆಯನ್ನು ಪರಿಶೀಲಿಸಲು ಯುಜಿಸಿಯು ಪ್ರೊ. ದೀಕ್ಷಿತ್ ಅವರ ನೇತೃತ್ವದಲ್ಲಿ ಪರಿಣತರ ಸಮಿತಿಯನ್ನು ಸಹ ಮೈಸೂರಿಗೆ 2015ರ ಡಿಸೆಂಬರ್‌ನಲ್ಲಿ ಕಳುಹಿಸಿತು. ಕರ್ನಾಟಕದೊಳಗೆ ದೂರಶಿಕ್ಷಣ ಪದ್ಧತಿಯೊಳಗೆ ನಡೆಸಬಹುದಾಗಿರುವ ಶೈಕ್ಷಣಿಕ ಕಾರ್ಯಕ್ರಮಗಳನ್ನು ನಿರ್ವಹಿಸುವ ಸಾಮರ್ಥ್ಯವನ್ನು ಕರಾಮುವಿಯು ಹೊಂದಿದೆಯೇ ಎನ್ನುವುದನ್ನು ಈ ಪರಿಣತರ ಸಮಿತಿಯು ತೀರ್ಮಾನಿಸಬೇಕಿತ್ತು.

ತನ್ನ ಕಾರ್ಯವ್ಯಾಪ್ತಿಯ ಜೊತೆಗೆ ದೀಕ್ಷಿತ್ ಸಮಿತಿಯು ಕರಾಮುವಿಯ ಹಿಂದಿನ ಕಾರ್ಯ ವ್ಯವಹಾರಗಳ ಬಗ್ಗೆ ಸಹ ಪರಿಶೀಲನೆ ನಡೆ
ಸಿತು. ಬಹುಮುಖ್ಯವಾಗಿ, ದೀಕ್ಷಿತ್ ಸಮಿತಿಯು ಪಾಲುದಾರ ಸಂಸ್ಥೆಗಳ ಜೊತೆಗಿದ್ದ ಸಂಬಂಧವನ್ನು ಕಾನೂನಾತ್ಮಕ ರೀತಿಯಲ್ಲಿ ತಕ್ಷಣವೇ ತೊಡೆಯುವಂತೆ ಹಾಗೂ ಇದರ ಬಗ್ಗೆ ವ್ಯಾಪಕವಾಗಿ ಪತ್ರಿಕೆಗಳಲ್ಲಿ ಜಾಹೀರಾತು ನೀಡುವಂತೆ ಕರಾಮುವಿಗೆ ಸೂಚಿಸಿತು. ಅದರಂತೆಯೇ ಕರಾಮುವಿಯು ಎರಡು ಬಾರಿ ಕಾನೂನಿನ ಸೂಚನೆಯನ್ನೂ, ನಾಲ್ಕು ಬಾರಿ ಪತ್ರಿಕಾ ಜಾಹೀರಾತನ್ನೂ ನೀಡಿತು.

ಅಲ್ಲದೆ ಪಾಲುದಾರ ಸಂಸ್ಥೆಗಳ ಮೂಲಕ ಈಗಾಗಲೇ ದೇಶದಾದ್ಯಂತ ಪ್ರವೇಶಾತಿ ಪಡೆದಿರುವ ವಿದ್ಯಾರ್ಥಿಗಳಿಗೆ ಮಾನ್ಯತೆ ಪಡೆದಿರುವ ಹಾಗೂ ಕರ್ನಾಟಕದೊಳಗಿರುವ ಅಧಿಕೃತ ಶೈಕ್ಷಣಿಕ ಸಂಸ್ಥೆಗಳ ಮೂಲಕ ಅವರ ಪದವಿಗಳನ್ನು ಪಡೆದುಕೊಳ್ಳಲು ಅನುವು ಮಾಡಿಕೊಡ
ಬೇಕೆಂದು ದೀಕ್ಷಿತ್ ಸಮಿತಿಯು ಕರಾಮುವಿಗೆ ತಿಳಿಸಿತು. ಅಂದರೆ ತಾಂತ್ರಿಕ ಕಾರ್ಯಕ್ರಮಗಳ ವಿದ್ಯಾರ್ಥಿಗಳನ್ನು ಎಐಸಿಟಿಇ ಮಾನ್ಯತೆ ಪಡೆದಿರುವ ಎಂಜಿನಿಯರಿಂಗ್ ಕಾಲೇಜಿನ ಮೂಲಕ ಅವರ ಪದವಿಗಳನ್ನು ಮುಗಿಸುವ ವ್ಯವಸ್ಥೆಯನ್ನು ಕರಾಮುವಿಯು ಮಾಡಬೇಕಿತ್ತು. ಪಾಲುದಾರ ಸಂಸ್ಥೆಗಳ ಜೊತೆಗೆ ನೂರಾರು ಶೈಕ್ಷಣಿಕ ಕಾರ್ಯಕ್ರಮಗಳನ್ನು ನಡೆಸುತ್ತಿದ್ದ ಕಾರಣ, ದೀಕ್ಷಿತ್ ಸಮಿತಿಯ ನಿರ್ದೇಶನಗಳನ್ನು ಪಾಲಿಸುವುದು ಸುಲಭವಾಗಿರಲಿಲ್ಲ. ಈ ನಡುವೆ ಪಾಲುದಾರ ಸಂಸ್ಥೆಗಳು ಮತ್ತು ಅಲ್ಲಿ ಪ್ರವೇಶಾತಿ ಪಡೆದಿದ್ದ ವಿದ್ಯಾರ್ಥಿಗಳು ದೇಶದಾದ್ಯಂತ ವಿವಿಧ ನ್ಯಾಯಾಲಯಗಳಲ್ಲಿ ಕರಾಮುವಿಯ ವಿರುದ್ಧ ಮೊಕದ್ದಮೆಯನ್ನೂ ಹೂಡಿದರು. ಇವೆಲ್ಲವೂ ವಿಳಂಬಕ್ಕೆ, ಮಾನ್ಯತೆ ಪ್ರಕ್ರಿಯೆ ಕಗ್ಗಂಟಾಗಲು ಕಾರಣವಾದವು.

ಇಲ್ಲಿ ಗಮನಿಸಬೇಕಾಗಿರುವ ಅಂಶಗಳು ಕೆಲವಿವೆ. ಮೊದಲಿಗೆ, ಕರಾಮುವಿಯು ಕರ್ನಾಟಕದೊಳಗೆ ದೂರಶಿಕ್ಷಣ ಮಾಧ್ಯಮದಲ್ಲಿ  ನಡೆಸಬಹುದಾಗಿರುವ ಸ್ನಾತಕ ಮತ್ತು ಸ್ನಾತಕೋತ್ತರ ಕಾರ್ಯಕ್ರಮಗಳನ್ನು ನಡೆಸುವ ಸಾಮರ್ಥ್ಯ ಮತ್ತು ಮೂಲಭೂತ ಸೌಕರ್ಯಗಳನ್ನು ಹೊಂದಿಲ್ಲ ಎಂದು ಯುಜಿಸಿಯಾಗಲೀ ಅಥವಾ ದೀಕ್ಷಿತ್ ಸಮಿತಿಯಾಗಲೀ ಹೇಳಿಲ್ಲ. ಅದರೆ ಎಲ್ಲ ತೊಡಕುಗಳು ಬಗೆಹರಿಯುವ ತನಕ ಮಾನ್ಯತೆಗೆ ಸಂಬಂಧಿಸಿದ ಅರ್ಜಿಯನ್ನು ಕರಾಮುವಿಯಿಂದ ಸ್ವೀಕರಿಸಲು ಯುಜಿಸಿಯು ಸಿದ್ಧವಿರಲಿಲ್ಲ. ಈ ಮಾತು 2015–16, 2016–17 ಮತ್ತು 2017–18ರ ಶೈಕ್ಷಣಿಕ ವರ್ಷಗಳಿಗೆ ಅನ್ವಯವಾಗುತ್ತದೆ. ಎರಡನೆಯದಾಗಿ ಮತ್ತು ಇನ್ನೂ ಮುಖ್ಯವಾಗಿ, 2012–13ರ ಮಾನ್ಯತೆ ಮುಗಿದ ನಂತರದ ಶೈಕ್ಷಣಿಕ ವರ್ಷಗಳಲ್ಲಿ ಕರಾಮುವಿಯೇ ನಡೆಸಿರುವ ಶೈಕ್ಷಣಿಕ ಕಾರ್ಯಕ್ರಮಗಳಿಗಾಗಲೀ ಅಥವಾ ದೂರಶಿಕ್ಷಣ ವ್ಯವಸ್ಥೆಯಲ್ಲಿ ನಡೆಸಬಾರದಿದ್ದ ತಾಂತ್ರಿಕ ಅಥವಾ ಪ್ಯಾರಾಮೆಡಿಕಲ್‌ನಂತಹ ಕಾರ್ಯಕ್ರಮಗಳಿಗಾಗಲೀ ಯುಜಿಸಿಯು ಇಂದು ಮಾನ್ಯತೆ ನೀಡುವುದಿಲ್ಲ. ಈ ವಿಚಾರದಲ್ಲಿ ಸುಪ್ರೀಂ ಕೋರ್ಟ್ ನಿರ್ದೇಶನವನ್ನು ಉಲ್ಲೇಖಿಸಿ ಯುಜಿಸಿಯು ತನ್ನ ನಿಲುವನ್ನು ಸ್ಪಷ್ಟಪಡಿಸಿದೆ.

ಈ ಮೇಲಿನ ಎರಡು ಅಂಶಗಳ ಪರಿಣಾಮಗಳನ್ನು ಗಮನಿಸಿ. 2016–17ರಿಂದ ಯುಜಿಸಿಯು ದೂರಶಿಕ್ಷಣ ಸಂಸ್ಥೆಗಳಿಗೆ ಮಾನ್ಯತೆ ನೀಡಲು ಪ್ರಾರಂಭಿಸಿದ ಹೊಸ ಪ್ರಕ್ರಿಯೆಯಲ್ಲಿ ಕರಾಮುವಿಗೆ ಭಾಗವಹಿಸಲು ಅವಕಾಶ ದೊರಕಲಿಲ್ಲ. ಅಲ್ಲದೆ 2017ರ ಜುಲೈನಲ್ಲಿ ದೂರಶಿಕ್ಷಣ ಸಂಸ್ಥೆಗಳಿಗೆ ಯುಜಿಸಿಯು ಹೊಸ ಸಮಗ್ರ ನಿಯಮಗಳನ್ನು ಪ್ರಕಟಿಸಿತು. 2017ರಿಂದಲೇ ಈ ಹೊಸ ನಿಯಮಗಳ ಆಧಾರದ ಮೇಲೆ ಮಾನ್ಯತೆ ನೀಡುವುದಾಗಿ ಯುಜಿಸಿಯು ತೀರ್ಮಾನಿಸಿದರೂ, ಕೆಲವೇ ವಾರಗಳಲ್ಲಿ 2018–19ರಿಂದ ಐದು ವರ್ಷಗಳಿಗೆ ಮಾನ್ಯತೆ ನೀಡಲು ಹೊಸ ಅರ್ಜಿ ಹಾಕುವ ಪ್ರಕ್ರಿಯೆಯನ್ನು ಪ್ರಾರಂಭಿಸಿತು. ಕರಾಮುವಿಗೆ ಈ ಪ್ರಕ್ರಿಯೆಯಲ್ಲಿ ಭಾಗವಹಿಸುವ ಅವಕಾಶ ದೊರಕಿದೆ. ಆದರೆ 2017–18ರ ವರ್ಷಕ್ಕೆ ಮಾನ್ಯತೆ ಕೇಳಲು ಯಾವುದೇ ಅಧಿಕೃತ ಮಾರ್ಗಗಳನ್ನು ಯುಜಿಸಿ ಒದಗಿಸಿಲ್ಲ. ಹಾಗಾಗಿ ಈಗ ಪ್ರಾರಂಭವಾಗಿರುವ ಪ್ರಕ್ರಿಯೆಯಲ್ಲಿ ಯುಜಿಸಿಗೆ ಕರಾಮುವಿಯ ಮೂಲಭೂತ ಸೌಕರ್ಯ ಮತ್ತು ಸಂಪನ್ಮೂಲ ತೃಪ್ತಿಕರ ಎನಿಸಿದರೆ, ಆಗ 2018–19ರ ಸಾಲಿಗೆ ಅನುಮತಿ ದೊರಕುತ್ತದೆ.

ಆದರೆ ಎರಡು ಕ್ಲಿಷ್ಟ ಸಮಸ್ಯೆಗಳಿಗೆ ಇನ್ನೂ ಪರಿಹಾರ ದೊರಕಬೇಕಿದೆ. 2015ರ ಡಿಸೆಂಬರ್‌ನಲ್ಲಿ ದೀಕ್ಷಿತ್ ಸಮಿತಿಯು ಮೈಸೂರಿಗೆ ಭೇಟಿ ನೀಡಿದಾಗಿನಿಂದ ಇಂದಿನ ತನಕ, ಸುಮಾರು 22 ತಿಂಗಳಲ್ಲಿ ಕರಾಮುವಿಯು ಏನು ಮಾಡಿದರೆ ತನಗೆ ತೃಪ್ತಿಯಾದೀತು. ಕರಾಮುವಿಯ ಹಳೆಯ ಉಲ್ಲಂಘನೆಗಳನ್ನು ಸರಿಪಡಿಸಿದಂತಾಯಿತು ಎನ್ನುವುದರ ಬಗ್ಗೆ ಯುಜಿಸಿಯು ನಿರ್ಣಾಯಕವಾಗಿ ತೀರ್ಮಾನಿಸಿಲ್ಲ. ಅಲ್ಲದೆ ನನಗೆ ತಿಳಿದಿರುವಂತೆ ದೀಕ್ಷಿತ್ ಸಮಿತಿಯು ಇದುವರೆಗೆ ತನ್ನ ಅಂತಿಮ ವರದಿಯನ್ನು ಸಲ್ಲಿಸಿಲ್ಲ. ಈ ನಡುವೆ ಯುಜಿಸಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಹುದ್ದೆಗಳು ಸಹ ಏಳು ತಿಂಗಳಿಂದ ಖಾಲಿಯಿವೆ. ಹಾಗಾಗಿ ತೊಡಕುಗಳು ಬಗೆಹರಿದಿಲ್ಲ.

ಎರಡನೆಯದಾಗಿ, 2012–13ರ ನಂತರ ಪದವಿ ಪಡೆದಿರುವ ಕರಾಮುವಿಯ ನೇರ ವಿದ್ಯಾರ್ಥಿಗಳು ಮತ್ತು ಪಾಲುದಾರ ಸಂಸ್ಥೆಗಳ ವಿದ್ಯಾರ್ಥಿಗಳ ಪದವಿಗಳ ಸ್ಥಾನಮಾನವೇನು ಎನ್ನುವುದರ ಬಗ್ಗೆ ಸ್ಪಷ್ಟತೆ ದೊರಕಬೇಕಿದೆ. ಯುಜಿಸಿಯಂತೂ ಈ ಎರಡೂ ಗುಂಪಿನ ವಿದ್ಯಾರ್ಥಿಗಳಿಗೆ ಯಾವುದೇ ಪರಿಹಾರವನ್ನು, ರಿಯಾಯಿತಿಯನ್ನು ತೋರುವುದಿಲ್ಲ. ಕರಾಮುವಿಯೇ ನಡೆಸುತ್ತಿದ್ದ ಶೈಕ್ಷಣಿಕ ಕಾರ್ಯಕ್ರಮಗಳಿಗೂ 2012–13ರಿಂದ 2015–16ರ ವರೆಗಿನ ವರ್ಷಗಳಿಗೆ ಅನ್ವಯವಾಗುವಂತೆ ಯುಜಿಸಿಯ ಮಾನ್ಯತೆ ಸಿಗುವುದಿಲ್ಲ. ಈ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರವೇ ಆದೇಶ ಹೊರಡಿಸಿ, ತನ್ನ ವ್ಯಾಪ್ತಿಯ ಎಲ್ಲ ಸಂಸ್ಥೆಗಳಲ್ಲಿ ಉದ್ಯೋಗ ಮತ್ತು ಶೈಕ್ಷಣಿಕ ಅವಕಾಶಗಳಲ್ಲಿ ಮನ್ನಣೆ ಸಿಗುವಂತೆ ನೋಡಿಕೊಳ್ಳಬೇಕಾಗಬಹುದು. ಇದರ ಸಾಧ್ಯಾಸಾಧ್ಯತೆಗಳ ಬಗ್ಗೆ ಕಾನೂನು ತಜ್ಞರು ಅಭಿಪ್ರಾಯ ನೀಡಬೇಕು. ಪಾಲುದಾರ ಸಂಸ್ಥೆಗಳ ಮೂಲಕ ನಡೆಯುತ್ತಿದ್ದ ಶೈಕ್ಷಣಿಕ ಕಾರ್ಯಕ್ರಮಗಳಿಗೆ 2009ರ ನಂತರ ಯಾವ ನಿಯಂತ್ರಕ ಸಂಸ್ಥೆಯಿಂದಲೂ ಮನ್ನಣೆಯಿರಲಿಲ್ಲ, ಇಂದೂ ಇಲ್ಲ. ಹಾಗಾಗಿ ಆ ವಿದ್ಯಾರ್ಥಿ
ಗಳಿಗೆ ಹೆಚ್ಚೆಂದರೆ ತಮ್ಮ ಪದವಿಯನ್ನು ಮುಗಿಸಿಕೊಳ್ಳುವ ಅವಕಾಶ ಸಿಗಬಹುದೆ ಹೊರತು ಬೇರೆ ಯಾವ ಮಾನ್ಯತೆಯೂ ದೊರಕುವುದಿಲ್ಲ.

ಕರಾಮುವಿಯ ಮಾನ್ಯತೆಯ ಪ್ರಶ್ನೆ ಕಗ್ಗಂಟಾಗಿದೆ, ನಿಜ. ಇದಕ್ಕೆ ಕರಾಮುವಿಯ ವಿವಾದಗಳ ಸಂಕೀರ್ಣತೆ ಒಂದು ಕಾರಣವಾದರೆ, ಮತ್ತೊಂದೆಡೆ ಯುಜಿಸಿ ಸಹ ದೂರಶಿಕ್ಷಣಕ್ಕೆ ಸಂಬಂಧಿಸಿದಂತೆ ಪರಿವರ್ತನೆಯ ಘಟ್ಟದಲ್ಲಿರುವುದು ಮತ್ತೊಂದು ಕಾರಣ. ಪರಿಹಾರ ಹುಡುಕುವಾಗ ವಿಶ್ವವಿದ್ಯಾಲಯದ ಮತ್ತು ರಾಜ್ಯ ಸರ್ಕಾರದ ಪ್ರತಿನಿಧಿಗಳು ಎರಡು ಬಗೆಯ ಎಚ್ಚರ ಹೊಂದಿರಬೇಕು. ಮೊದಲಿಗೆ, ಯುಜಿಸಿಗೆ ಸಲ್ಲಿಸುವ ಬೇಡಿಕೆಗಳು ಅದು ಒಪ್ಪುವಂತಹದಾಗಿರಬೇಕು. ಉದಾಹರಣೆಗೆ, ನಾನು ಮೇಲೆ ಗುರುತಿಸಿದಂತೆ 2012–13ರ ನಂತರದ ಶೈಕ್ಷಣಿಕ ಕಾರ್ಯಕ್ರಮಗಳಿಗೆ ಮಾನ್ಯತೆ ಕೇಳಿದರೆ ಯುಜಿಸಿ ಒಪ್ಪುವುದಿಲ್ಲ. ಎರಡನೆಯದಾಗಿ, ಕರಾಮುವಿಯ ಸಮಸ್ಯೆಗಳನ್ನು ಆಡಳಿತಾತ್ಮಕ ನೆಲೆಯಲ್ಲಿ ಮಾತ್ರ ಪರಿಹರಿಸಲು ಸಾಧ್ಯವಿಲ್ಲ. ಅದಕ್ಕೆ ಪಕ್ಷಾತೀತ ನೆಲೆಯಲ್ಲಿ ರಾಜಕೀಯ ಪ್ರಭಾವದ ಅವಶ್ಯಕತೆಯೂ ಇದೆ. ಉದಾಹರಣೆಗೆ, 2017–18ರ ಸಾಲಿನಿಂದಲೇ ಶೈಕ್ಷಣಿಕ ಕಾರ್ಯಕ್ರಮಗಳನ್ನು ನಡೆಸಲು ಅನುಮತಿ ದೊರಕಬೇಕಾದರೆ, ಕರ್ನಾಟಕದ ಎಲ್ಲ ಪಾರ್ಲಿಮೆಂಟ್ ಸದಸ್ಯರೂ ಪಕ್ಷಾತೀತವಾಗಿ ಸಚಿವ ಜಾವಡೇಕರ್‌ರ ಕಚೇರಿಗೆ ಹೋಗಿ ಕೂರಬೇಕು. 2015ರಲ್ಲಿ ತಮಿಳುನಾಡಿನ ಮುಕ್ತ ವಿಶ್ವವಿದ್ಯಾಲಯದ ಸಮಸ್ಯೆಗಳು ಬಗೆಹರಿದದ್ದು ಹಾಗೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT