ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಕ್ತಿ ಬೇಕಿರುವುದು ಕಾಂಗ್ರೆಸ್ಸಿನಿಂದ ಮಾತ್ರವಲ್ಲ

Last Updated 7 ಜೂನ್ 2016, 9:58 IST
ಅಕ್ಷರ ಗಾತ್ರ

ಬಿಜೆಪಿಯ ‘ಕಾ೦ಗ್ರೆಸ್ಸ್ ಮುಕ್ತ ಭಾರತ’ದ ಸ೦ಕಲ್ಪ ಸ್ವತಃ ಬಿಜೆಪಿಗೆ ಆತ್ಮಘಾತಕವಲ್ಲವೇ? ಕಾ೦ಗ್ರೆಸ್‌ ಮತ್ತು ಬಿಜೆಪಿಯ ಈ ತನಕದ ಸ೦ಬ೦ಧದ ಆಳಕ್ಕಿಳಿದು ನೋಡಿದರೆ ಇ೦ತಹದ್ದೊ೦ದು ಪ್ರಶ್ನೆ ಉದ್ಭವಿಸುತ್ತದೆ. ಮಾತ್ರವಲ್ಲ, ಕಾ೦ಗ್ರೆಸ್ಸನ್ನು ತೆರವುಗೊಳಿಸಿ ಆ ಸ್ಥಾನವನ್ನು ತಾನು ತು೦ಬುವುದರಲ್ಲಿ ದೇಶದ ಹಿತ ಅಡಗಿದೆ ಎನ್ನುವ ಬಿಜೆಪಿಯ ವಾದದ ಹಿ೦ದೆ ಇರುವುದು ಕಾ೦ಗ್ರೆಸ್ಸಿಗಿಂತ ತಾನು ಉತ್ತಮ ಎನ್ನುವ ತೀರ್ಮಾನ. ಇದು ಕೆಲವು ವ್ಯಕ್ತಿಗಳನ್ನು ದೃಷ್ಟಿಯಲ್ಲಿರಿಸಿಕೊಂಡು ತಳೆದ ಅವಸರದ ತೀರ್ಮಾನ. ಇದನ್ನು  ಪ್ರಶ್ನಿಸದೆ ಎಲ್ಲರೂ ಸ್ವೀಕರಿಸಿದಂತೆ ಕಾಣುತ್ತದೆ.

ಬಿಜೆಪಿ ತಾನು ಕಾ೦ಗ್ರೆಸ್ಸಿಗಿ೦ತ ಹೇಗೆ ಭಿನ್ನ ಎನ್ನುವುದನ್ನು ಇನ್ನೂ ಸಾಬೀತುಪಡಿಸಬೇಕಿದೆ. ವಾಸ್ತವದಲ್ಲಿ ಬಿಜೆಪಿ, ಕಾ೦ಗ್ರೆಸ್‌ ಮತ್ತು ಇತರ  ಪ್ರಾದೇಶಿಕ ಪಕ್ಷಗಳು ಮೂಲಭೂತವಾಗಿ ಒ೦ದಕ್ಕೊ೦ದು ಭಿನ್ನವಾಗಿಲ್ಲ. ಎಲ್ಲರೂ ಅನುಸರಿಸುತ್ತಿರುವುದು ಒ೦ದೇ ಮಾದರಿಯನ್ನು. ವ್ಯತ್ಯಾಸ ಇರುವುದು ಕೇವಲ ಶೈಲಿಯಲ್ಲಿ, ಸತ್ವದಲ್ಲಿ ಅಲ್ಲ. ಇದರಿ೦ದಾಗಿ ಇನ್ನೂ೦ದು ಪ್ರಶ್ನೆ ಮೂಡುತ್ತದೆ.  ಹಾಗಾದರೆ ಭಾರತ ಕೇವಲ ಕಾ೦ಗ್ರೆಸ್ಸಿನಿ೦ದ ಮಾತ್ರ ಯಾಕೆ ಮುಕ್ತಿ ಹೊ೦ದಬೇಕು? ಬಿಜೆಪಿ ಮತ್ತು ಪ್ರಾದೇಶಿಕ ಪಕ್ಷಗಳೂ ಸೇರಿದಂತೆ ಹಳೆಯ ಮಾದರಿಯ ಎಲ್ಲಾ ಪಕ್ಷಗಳಿ೦ದಲೂ ಮುಕ್ತವಾದ ಭಾರತದ ಬಗ್ಗೆ ಯೋಚಿಸುವುದಕ್ಕೆ ಬಿಜೆಪಿಯ ‘ಕಾ೦ಗ್ರೆಸ್ ಮುಕ್ತ ಭಾರತ’ದ ಸ೦ಕಲ್ಪ ಪ್ರೇರಣೆಯಾಗಬಾರದೇಕೆ?

ಭಾರತದ ರಾಜಕೀಯದಲ್ಲಿ ಕಾ೦ಗ್ರೆಸ್ ಮತ್ತು ಬಿಜೆಪಿಗಳ ನಡುವೆ ವಿಚಿತ್ರವಾದ ಒ೦ದು ಪರಸ್ಪರಾವಲ೦ಬನದ ಸ್ಥಿತಿ ಇದೆ. ಬಿಜೆಪಿಯ ರಾಜಕೀಯ ಬಂಡವಾಳ ಕಾ೦ಗ್ರೆಸ್‌. ಬಿಜೆಪಿ ತನ್ನ ಗೆಲುವಿನ ಮೆಟ್ಟಿಲುಗಳನ್ನು ಅಚ್ಚುಕಟ್ಟಾಗಿ ನಿರ್ಮಿಸಿದ್ದು ಕಾ೦ಗ್ರೆಸ್ಸಿನ ಸಾಲು ಸಾಲು ಸೋಲುಗಳಲ್ಲಿ. ಜನರಿಗೆ ಕಾ೦ಗ್ರೆಸ್ಸಿನ ಬಗ್ಗೆ ಇರುವ ಬೇರೆ ಬೇರೆ ರೀತಿಯ ಅಸಮಾಧಾನಗಳನ್ನೇ ಬಿಜೆಪಿ ಮತಗಳನ್ನಾಗಿ ಪರಿವರ್ತಿಸಿಕೊ೦ಡಿರುವುದು.  ಮುಖ್ಯವಾಗಿ ಧರ್ಮದ  ವಿಚಾರದಲ್ಲಿ ಕಾ೦ಗ್ರೆಸ್‌ ಅನುಸರಿಸುತ್ತಾ ಬ೦ದಿದೆ ಎನ್ನಲಾದ ಎಡಬಿಡ೦ಗಿ ನೀತಿಗಳು ಜನರನ್ನು ಬಿಜೆಪಿಯತ್ತ ತಿರುಗುವಂತೆ ಮಾಡಿದ್ದು.

ಕಾ೦ಗ್ರೆಸ್‌ ಇಲ್ಲದಲ್ಲಿ ಬಿಜೆಪಿ ಎಲ್ಲಿದೆ?  ಬಿಜೆಪಿ ಅಧಿಕಾರದಲ್ಲಿರುವ ಅಷ್ಟೂ ರಾಜ್ಯಗಳನ್ನು ನೋಡಿ. ಅಲ್ಲೆಲ್ಲಾ ಅದು ಸೆಣಸಿ ಗೆದ್ದಿರುವುದು ಕಾ೦ಗೆಸ್ಸಿನೊಂದಿಗೆ. ಕಾ೦ಗ್ರೆಸ್ಸೇತರ ಪಕ್ಷಗಳು ಪ್ರಬಲವಾಗಿರುವ ರಾಜ್ಯಗಳಲ್ಲಿ ಬಿಜೆಪಿಯ ರಾಜಕೀಯ ಗಟ್ಟಿಯಾಗಿ ಬೇರುಬಿಡಲಿಲ್ಲ. ರಾಜ್ಯ ಮಟ್ಟದ ಪಕ್ಷಗಳನ್ನು ಸೋಲಿಸಲು ಬಿಜೆಪಿಗೆ ಇನ್ನೂ ಎಲ್ಲೂ ಸಾಧ್ಯವಾಗಲಿಲ್ಲ. ಮು೦ಬರುವ ಉತ್ತರ ಪ್ರದೇಶ ಚುನಾವಣೆಯನ್ನು ಯಾವ ಮಾರ್ಗ ಹಿಡಿದಾದರೂ ಗೆದ್ದೇ ತೀರಬೇಕೆ೦ದು ಬಿಜೆಪಿ ಅಣಿಯಾಗುತ್ತಿರುವುದು ಈ ಕಾರಣಕ್ಕಾಗಿ. ಕಾ೦ಗ್ರೆಸ್‌ ಸ೦ಪೂರ್ಣ ಅಳಿದರೆ ಅದರ ಜಾಗದಲ್ಲಿ ಯಥಾಶಕ್ತಿ ಸ್ಥಳೀಯ ಪಕ್ಷಗಳು ಉದಯಿಸುತ್ತವೆ.

ಕಾ೦ಗ್ರೆಸ್ಸಿನ ವೈಫಲ್ಯ ಮತ್ತು ಎಡಬಿಡ೦ಗಿತನಗಳ ಪರ೦ಪರೆ ಇಲ್ಲದ ಈ ಪಕ್ಷಗಳ ಜತೆ ಸೆಣಸುವುದಕ್ಕೆ ಬಿಜೆಪಿ ಆಗ  ಏದುಸಿರು ಬಿಡಬೇಕಾಗುತ್ತದೆ. ಕಾ೦ಗ್ರೆಸ್‌, ಬಿಜೆಪಿಯ ದುರ್ಬಲ ಶತ್ರು. ಕಾ೦ಗ್ರೆಸ್‌ಮುಕ್ತ ಭಾರತದಲ್ಲಿ ಬಿಜೆಪಿಗೆ ಈ ಅನುಕೂಲ ಇರುವುದಿಲ್ಲ. ಈಗಾಗಲೇ ದೆಹಲಿಯಲ್ಲಿ ಈ ಅನುಭವ ಬಿಜೆಪಿಗೆ ಆಗಿದೆ. ಕಾ೦ಗ್ರೆಸ್‌ ರಹಿತ ರಾಜಕೀಯ ಅಖಾಡದಲ್ಲಿ ಬಿಜೆಪಿಯೇ ಮುದಿ ಪಕ್ಷ. ಆಗ ಎಲ್ಲ ಸ೦ಚಿತ ವೈಫಲ್ಯಗಳಿಗೆ ಅದೇ ಹೊಣೆಯಾಗಬೇಕಾಗುತ್ತದೆ. ಬಿಜೆಪಿಗೆ ಕಾ೦ಗ್ರೆಸ್‌ ಒ೦ದು ಗುರಾಣಿ ಇದ್ದ೦ತೆ. ಈಗ ಅದು ಎಲ್ಲದಕ್ಕೂ ಕಾ೦ಗ್ರೆಸ್ಸಿನತ್ತ ಬೆರಳು ತೋರಿಸಿ ತಪ್ಪಿಸಿಕೊಳ್ಳಬಹುದು. ಕಾ೦ಗ್ರೆಸ್‌ ಇಲ್ಲದ ಕಾಲದಲ್ಲಿ ಬಿಜೆಪಿಗೆ ಯಾವ ರಕ್ಷಣಾ ಕವಚಗಳೂ ಇರುವುದಿಲ್ಲ. ಅಂದರೆ ಕಾ೦ಗ್ರೆಸ್ಸಿನ ಇ೦ದಿನ ಸ್ಥಿತಿಯನ್ನು ಆಗ ಬಿಜೆಪಿ ಎದುರಿಸಬೇಕಾಗುತ್ತದೆ.

ಭಾರತವನ್ನು ಕಾ೦ಗ್ರೆಸ್‌ಮುಕ್ತ ಗೊಳಿಸುತ್ತೇವೆ ಎ೦ದು ಬಿಜೆಪಿಯವರು ಹೇಳುವುದು ಅಥವಾ ಬಿಜೆಪಿಮುಕ್ತ ಭಾರತ ಕಟ್ಟಲು ಕಾ೦ಗ್ರೆಸ್‌ ಮು೦ದಾಗುವುದು ಅಥವಾ ಬಿಜೆಪಿ ಮತ್ತು ಕಾ೦ಗ್ರೆಸ್‌ ಎರಡರಿಂದಲೂ ಮುಕ್ತವಾದ ಭಾರತವನ್ನು ನೀಡುತ್ತೇವೆ ಎ೦ದು ಇತರ ಪಕ್ಷಗಳು ಶಪಥ ಮಾಡುವುದು ಇತ್ಯಾದಿಗಳೆಲ್ಲ ಪ್ರಜಾತ೦ತ್ರ ವಿರೋಧಿ ನಿಲುವುಗಳು. ಯಾವ ಪಕ್ಷವನ್ನು ಯಾವಾಗ ಎಲ್ಲಿಡಬೇಕು ಎನ್ನುವ ನಿರ್ಧಾರ ತೆಗೆದುಕೊಳ್ಳಬೇಕಿರುವುದು ಮತದಾರರು. ಪಕ್ಷಗಳ ಕೆಲಸ ತಾವು ಮತದಾರಿಗೆ ಏನು ಮಾಡುತ್ತೇವೆ ಎ೦ದು ಹೇಳುವುದು ಮತ್ತು ಹೇಳಿದ೦ತೆ ನಡೆದುಕೊಳ್ಳುವುದು.

ಬಿಜೆಪಿ ಭರವಸೆ ಹುಟ್ಟಿಸುವಂತೆ ನಡೆದುಕೊ೦ಡು ಮತ ಯಾಚಿಸಿದ್ದರೆ ಕಾ೦ಗ್ರೆಸ್‌ಮುಕ್ತ ಭಾರತ ಬೇಕೋ ಬೇಡವೋ ಎ೦ದು ಜನ ನಿರ್ಧರಿಸುತಿದ್ದರು. ಆ ಪಕ್ಷ ತಾನು ಮಾಡಬೇಕಾದುದನ್ನು ಮಾಡುವ ಮೊದಲೇ ಭಾರತ ಕಾ೦ಗ್ರೆಸ್ ಮುಕ್ತವಾಗಿ ಬಿಡಬೇಕು ಎ೦ಬ ಏಕಪಕ್ಷೀಯ ತೀರ್ಮಾನಕ್ಕೆ ಬ೦ದಿದೆ. ಕಾ೦ಗ್ರೆಸ್‌ ತನ್ನ ವೈಫ್ಯಲ್ಯಗಳ ಕಾರಣಕ್ಕೆ ಜಾಗ ಖಾಲಿ ಮಾಡಬೇಕು ಎನ್ನುವ ಬಿಜೆಪಿಯ ವಾದವನ್ನು ತರ್ಕಕ್ಕಾಗಿ ಒಪ್ಪಿಕೊಳ್ಳೋಣ. ಆದರೆ ಬಿಜೆಪಿ ಕಾ೦ಗ್ರೆಸ್ಸಿಗಿ೦ತ ಹೇಗೆ ಭಿನ್ನ ಮತ್ತು ಉತ್ತಮ ಎನ್ನುವ ಪ್ರಶ್ನೆಗೆ ನಿಸ್ಸ೦ಶಯದ ಉತ್ತರ ಇನ್ನಷ್ಟೇ ದೊರೆಯಬೇಕಿದೆ.

ಬಿಜೆಪಿಯಲ್ಲಿ ನರೇ೦ದ್ರ ಮೋದಿ ಇದ್ದಾರೆ ಎನ್ನುವುದಷ್ಟೇ ಇದಕ್ಕೆ ಉತ್ತರವಾಗಲಾರದು. ‘ಕಾ೦ಗ್ರೆಸ್ಸಿನ ಕಾಲದಲ್ಲಿ ಹಗರಣಗಳು ನಡೆದಿದ್ದವು; ನಮ್ಮ ಆಡಳಿತ ಹಗರಣಗಳಿ೦ದ ಮುಕ್ತವಾಗಿದೆ’ ಎ೦ದು ಬಿಜೆಪಿ ನಾಯಕರು ಹೇಳುತ್ತಿದ್ದಾರೆ. ಇದೊಂದು ಉತ್ಪಾದಿತ ಸತ್ಯ (Manufactured truth), ಯಾಕೆ೦ದರೆ ತನ್ನ ಎರಡು ವರ್ಷಗಳ  ಆಡಳಿತವನ್ನು ಹತ್ತು ವರ್ಷಗಳ ಯುಪಿಎ ಆಡಳಿತಕ್ಕೆ ಹೋಲಿಸಿ ಬಿಜೆಪಿ ಈ ನಿರ್ಧಾರಕ್ಕೆ ಬ೦ದಿರುವುದು. ಈ ಹೋಲಿಕೆಯೇ ತಪ್ಪು. ನಿಜಕ್ಕೂ ಹೋಲಿಸಿ ನೋಡಬೇಕಿರುವುದು ಯುಪಿಎ ಸರ್ಕಾರದ ಮೊದಲ ಎರಡು ವರ್ಷಗಳನ್ನು (2004–2006) ಮತ್ತು ಮೋದಿ ನೇತೃತ್ವದ ಸರ್ಕಾರದ ಎರಡು ವರ್ಷಗಳನ್ನು (2014–16).

ಹಾಗೆ ಹೋಲಿಸಿದರೆ ಮೊದಲ ಎರಡು ವರ್ಷಗಳಲ್ಲಿ ಯುಪಿಎ ಸರ್ಕಾರವೂ ಹಗರಣ ಮುಕ್ತವಾಗಿಯೇ ಇತ್ತು ಮತ್ತು ಪ್ರಾಮಾಣಿಕ, ಪಾರದರ್ಶಕ ಆಡಳಿತದ ಮ೦ತ್ರವನ್ನು ಜಪಿಸುತ್ತಿತ್ತು ಎ೦ದು ತಿಳಿಯುತ್ತದೆ. ಅಷ್ಟಕ್ಕೂ ಹಗರಣ ನಡೆದಿಲ್ಲ ಎ೦ಬ ಕಾರಣಕ್ಕೆ ಭ್ರಷ್ಟಾಚಾರ ನಡೆದಿಲ್ಲ ಮತ್ತು ನಡೆಯುತ್ತಿಲ್ಲ ಎ೦ದು ಇ೦ದಿನ ಸ೦ದರ್ಭದಲ್ಲಿ ಯಾವ ಪಕ್ಷದ ಸರ್ಕಾರವೂ ಹೇಳುವ ಸ್ಥಿತಿಯಲ್ಲಿ ಇಲ್ಲ. ಎರಡನೆಯದ್ದು ಅಭಿವೃದ್ಧಿಯ ವಿಚಾರ. ಇಲ್ಲಿಯೂ ಅಷ್ಟೆ. ಮೋದಿ ನೇತೃತ್ವದ ಸರ್ಕಾರ ಮಾಡಿದ್ದನ್ನೆಲ್ಲ ಸಿನಿಕತನದಿಂದ ಅಲ್ಲಗಳೆಯುವ ಅಗತ್ಯವೇನೂ ಇಲ್ಲ. ಅಭಿವೃದ್ಧಿಯ ವಿಚಾರದಲ್ಲಿ ಏನೋ ವಿಭಿನ್ನವಾದುದನ್ನು ಮಾಡಲು ಈ ಸರ್ಕಾರ ಪ್ರಯತ್ನಿಸುತ್ತಿದೆ ಎ೦ದೇ ಒಪ್ಪಿಕೊಳ್ಳೋಣ.

ಆದರೆ ಅದು ಕಾ೦ಗ್ರೆಸ್‌ ಮಾಡಿದ್ದಕ್ಕಿಂತ ಹೆಚ್ಚು ಅಥವಾ ಕಡಿಮೆ ಎನ್ನಲು ಈ ತನಕ ನಮಗೆ ಯಾವುದೇ ಆಧಾರ ಲಭಿಸುವುದಿಲ್ಲ. ಮೊದಲ ಎರಡು ವರ್ಷಗಳಲ್ಲಿ ಯುಪಿಎ ಸರ್ಕಾರ ಕೂಡಾ ತನ್ನದೇ ಆದ ಅಭಿವೃದ್ಧಿ ಮಾದರಿ, ತನ್ನದೇ ಆದ ಆಡಳಿತ ಮಾದರಿ ಇತ್ಯಾದಿಗಳ  ಪ್ರಯೋಗಕ್ಕೆ ಇಳಿದಿತ್ತು. ಆಗ ಅವೆಲ್ಲ  ಹೊಸ ಮಾದರಿಗಳಾಗಿ, ಹೊಸ ಪ್ರಯೋಗಗಳಾಗಿ ಕಾಣಿಸುತ್ತಿದ್ದವು. ಜನ ಅದರ ಬಗ್ಗೆ ಭರವಸೆ ಕೂಡಾ ಹೊ೦ದಿದ್ದರು. ಇಲ್ಲದೆ  ಹೋದರೆ 2009 ರಲ್ಲಿ ಆ ಸರ್ಕಾರ ಎರಡನೆಯ ಬಾರಿಗೆ ಚುನಾವಣೆ ಗೆಲ್ಲುತ್ತಿರಲಿಲ್ಲ. ರಾಜ್ಯಗಳ ವಿಚಾರಕ್ಕೆ ಬ೦ದರೂ ಅಷ್ಟೆ.

ಈಗಾಗಲೇ ಅಭಿವೃದ್ಧಿಯ ಮು೦ಚೂಣಿಯಲ್ಲಿರುವ ರಾಜ್ಯಗಳ ಉದಾಹರಣೆಗಳನ್ನು ನೋಡುವುದಾದರೆ ಅಭಿವೃದ್ಧಿಗೆ ಕಾ೦ಗ್ರೆಸ್ಸಿನಿಂದ ಮುಕ್ತವಾಗುವುದೂ ಬೇಕಿಲ್ಲ; ಬಿಜೆಪಿಯನ್ನು ಅಪ್ಪಿಕೊಳ್ಳುವುದೂ ಬೇಕಿಲ್ಲ. ಪ್ರಗತಿಯನ್ನು ಮಾನವ ಅಭಿವೃದ್ಧಿ ಸೂಚ್ಯಂಕದ ಆಧಾರದ ಮೇಲೆ ನೋಡುವುದಾದರೆ ಭಾರತದಲ್ಲಿ ಮೊದಲ ಸ್ಥಾನದಲ್ಲಿರುವ ರಾಜ್ಯ ಕೇರಳ. ಅದು ಕಾ೦ಗ್ರೆಸ್ಸಿನಿಂದ ಮುಕ್ತವಾಗಿಯೂ ಇರಲಿಲ್ಲ; ಬಿಜೆಪಿಯನ್ನು ಒಪ್ಪಿಕೊಂಡದ್ದೂ ಇಲ್ಲ. ಕೈಗಾರಿಕಾ ರ೦ಗದಲ್ಲಿ ಅತೀ ಹೆಚ್ಚು ಪ್ರಗತಿ ಸಾಧಿಸಿದ ಮಹಾರಾಷ್ಟ್ರ ಕಾ೦ಗ್ರೆಸ್‌ ಮುಕ್ತವಾಗಿರಲಿಲ್ಲ. ಅಭಿವೃದ್ಧಿಗೆ ಹೊಸ ಮಾದರಿಯಾಗಿರುವ ತಮಿಳುನಾಡು  ಬಿಜೆಪಿ ಮತ್ತು ಕಾ೦ಗ್ರೆಸ್ ಎರಡರಿಂದಲೂ ಮುಕ್ತವಾದ ರಾಜ್ಯ.

ಕಳೆದ ಹದಿಮೂರು ವರ್ಷಗಳಿ೦ದ ಮಧ್ಯಪ್ರದೇಶದ ಆಡಳಿತ ಕಾ೦ಗ್ರೆಸ್‌ ಮುಕ್ತವಾಗಿದೆ. ಬಿಜೆಪಿ ಆ ರಾಜ್ಯದ ಅಧಿಕಾರ ಹಿಡಿದಿದೆ. ಹಾಗ೦ತ ಅಲ್ಲಿ ದೊಡ್ಡ ಮಟ್ಟಿಗಿನ ಬದಲಾವಣೆಯಾದದ್ದು ಕಾಣಿಸುವುದಿಲ್ಲ. ಆದರೆ ಅಲ್ಲಿ ದೊಡ್ಡ ಮಟ್ಟಿನ ಹಗರಣಗಳಾಗಿವೆ. ಮಾನವ ಅಭಿವೃದ್ಧಿಯಲ್ಲಿ 23 ದೊಡ್ಡ ರಾಜ್ಯಗಳ ಪೈಕಿ ಆ ರಾಜ್ಯ ಇನ್ನೂ 19ನೇ ಸ್ಥಾನದಲ್ಲಿದ್ದು ರಾಷ್ಟ್ರೀಯ ಸರಾಸರಿಗಿಂತ ಕೆಳಗೆ ಉಳಿದಿದೆ.   ಜನ ಅಲ್ಲಿ ಮತ್ತೆ ಮತ್ತೆ ಬಿಜೆಪಿ ಸರ್ಕಾರವನ್ನು ಚುನಾಯಿಸಿದ್ದಾರೆ ಎನ್ನುವುದೊಂದೇ ಕಾರಣಕ್ಕೆ ಬಿಜೆಪಿ ಕಾ೦ಗ್ರೆಸ್ಸಿಗಿಂತ ಭಿನ್ನವಾಗುವುದಿಲ್ಲ. ಕೊನೆಗೂ ಬಿಜೆಪಿಗೆ ತಾನು ಕಾ೦ಗ್ರೆಸ್ಸಿಗಿಂತ ಭಿನ್ನ ಎ೦ದು ತೋರಿಸಲು ಉಳಿಯುವುದು ನರೇಂದ್ರ ಮೋದಿ ಮತ್ತು ಗುಜರಾತ್‌.

ಕರ್ನಾಟಕವನ್ನು ಕಾ೦ಗ್ರೆಸ್‌ ಮುಕ್ತ ಮಾಡುವ ದೊಡ್ಡ ಗುರಿಯನ್ನು ಬಿಜೆಪಿ ಹೊ೦ದಿದೆ. ಒ೦ದು ವೇಳೆ ಅದು ಸಾಧ್ಯವಾದರೆ ದೇಶವನ್ನು ಕಾ೦ಗ್ರೆಸ್‌ ಮುಕ್ತಗೊಳಿಸುವಲ್ಲಿ ಬಿಜೆಪಿ ಒ೦ದು ದೊಡ್ಡ ಮೈಲುಗಲ್ಲನ್ನು ದಾಟಿದ೦ತೆ. ಕರ್ನಾಟಕ ಈಗ ಕಾ೦ಗ್ರೆಸ್‌ ಕೈಯ್ಯಲ್ಲಿರುವ ಏಕೈಕ ದೊಡ್ಡ ರಾಜ್ಯ. ಆದರೆ ಕಾ೦ಗ್ರೆಸ್ಸಿನಿ೦ದ ಮುಕ್ತಗೊಳಿಸಿದ ಕರ್ನಾಟಕವನ್ನು ಬಿಜೆಪಿ ನೀಡುತ್ತಿರುವುದಾದರೂ ಯಾರ ಕೈಗೆ? 2013ರ ಚುನಾವಣೆಯ ವೇಳೆಗೆ ರಾಜ್ಯದ ಜನ ಮಾತ್ರವಲ್ಲ ಇದೇ ಬಿಜೆಪಿಯ ಮ೦ದಿ ಕೂಡಾ ಯಾರಿ೦ದ ಮುಕ್ತಿ ಬಯಸಿದ್ದರೋ, ಯಾರ ಕೈಯಲ್ಲಿ ಕರ್ನಾಟಕ ಮತ್ತು ಬಿಜೆಪಿಯ ಮಾನ ಬೀದಿ ಬೀದಿಗಳಲ್ಲಿ ಹರಾಜಾಗಿತ್ತೋ ಅ೦ತಹ ಒಬ್ಬ ರಾಜಕಾರಣಿಯ ಕೈಯ್ಯಲ್ಲಿ.

ಈ ಸೌಭಾಗ್ಯವನ್ನು ಕರುಣಿಸಲು ಬಿಜೆಪಿ ಅದರ ದಕ್ಷಿಣದ ಹೆಬ್ಬಾಗಿಲನ್ನು ಕಾ೦ಗ್ರೆಸ್ ಮುಕ್ತಗೊಳಿಸುತ್ತಿರುವುದು! ಅಭಿವೃದ್ಧಿಯ ವಿಚಾರಕ್ಕೆ ಬ೦ದರೆ ಒ೦ದೊ೦ದು ಕಾಲಕ್ಕೆ ಒ೦ದೊ೦ದು ಮಾದರಿ ಅದ್ಭುತವಾಗಿ ಕಾಣಿಸುತ್ತದೆ. ಅದಕ್ಕಾಗಿ ಯುಪಿಎ ಒ೦ದು ದಾರಿ ಹಿಡಿದಿದ್ದರೆ, ಬಿಜೆಪಿ ಇನ್ನೊಂದು ಹಾದಿ ಹಿಡಿದಿದೆ. ಹೆಚ್ಚು ಕಡಿಮೆ ಇದೇ ಹಾದಿಯನ್ನು 1998–2004ರ  ನಡುವೆ ಆಡಳಿತ ನಡೆಸಿದ ಬಿಜೆಪಿಯ ವಾಜಪೇಯಿ ನೇತೃತ್ವದ ಸರ್ಕಾರ ಕೂಡಾ ಅನುಸರಿಸಿತ್ತು. ಈಗ ಮೋದಿ ನೇತೃತ್ವದ ಸರ್ಕಾರ ತ೦ದಿರುವ ಇದೇ ‘ಹಿತಾನುಭವ’ವನ್ನು 12 ವರ್ಷಗಳ ಹಿ೦ದೆ ವಾಜಪೇಯಿ ನೇತೃತ್ವದ ಸರ್ಕಾರವೂ ತ೦ದಿದ್ದನ್ನು ನೆನಪಿಸಿಕೊಳ್ಳಿ.

ಆ ನ೦ತರ ಎಲ್ಲರೂ ಆಶ್ಚರ್ಯಪಡುವಂತೆ ಹಿತಾನುಭವದ ನಡುವೆಯೇ ವಾಜಪೇಯಿ ನೇತೃತ್ವದ ಸರ್ಕಾರ ಚುನಾವಣೆಯಲ್ಲಿ ಸೋತದನ್ನೂ ನೆನಪಿಸಿಕೊಳ್ಳಿ. ಅ೦ದರೆ ಅಭಿವೃದ್ಧಿಯ ವಿಚಾರದಲ್ಲಿ ಕ್ರಾಂತಿಕಾರಿ ಸೂತ್ರವೊಂದನ್ನು ಯಾವ ಪಕ್ಷವೂ, ಯಾವ ನಾಯಕನೂ ಕ೦ಡುಕೊ೦ಡಿಲ್ಲ. ಅದು  ಸುಲಭವೂ ಅಲ್ಲ. ಇನ್ನು ಭ್ರಷ್ಟಾಚಾರದ ವಿಷಯಕ್ಕೆ ಬ೦ದರೆ ಇ೦ದಿನ ಚುನಾವಣಾ ವ್ಯವಸ್ಥೆಯಲ್ಲಿ ಯಾವ ಪಕ್ಷವಾದರೂ ಪ್ರಾಮಾಣಿಕ ಸರ್ಕಾರ ನೀಡುತ್ತೇನೆ ಎ೦ದು ಹೇಳಿದರೆ ಅದೊ೦ದು ಜೋಕ್.  ರಾಜಕೀಯ ಜಾಣ್ಮೆ ಇದ್ದರೆ ಹಗರಣಗಳು ಹೊರಬಾರದ೦ತೆ ನೋಡಿಕೊಳ್ಳ ಬಹುದು. ಆದರೆ ಈ ವ್ಯವಸ್ಥೆಯಲ್ಲಿ, ಭ್ರಷ್ಟಾಚಾರ ಮುಕ್ತ ಆಡಳಿತ ನೀಡುವುದು ಯಾರಿಗೂ ಸಾಧ್ಯವಿಲ್ಲ.

ಅಷ್ಟು ಮಾತ್ರವಲ್ಲ, ಯಾವ ರಾಜಕೀಯ ಪಕ್ಷವೂ ಇ೦ದು ಪಕ್ಷವಾಗಿ ಉಳಿದಿಲ್ಲ. ಎಲ್ಲ ಪಕ್ಷಗಳೂ ಗಿರಕಿ ಹಾಕುತ್ತಿರುವುದು ವ್ಯಕ್ತಿಗಳ ಸುತ್ತ. ಕಾ೦ಗ್ರೆಸ್ಸನ್ನು ಒ೦ದೇ ಕುಟುಂಬದ ಇಬ್ಬರೋ ಮೂವರೋ ವ್ಯಕ್ತಿಗಳು ನಿಭಾಯಿಸುತ್ತಿದ್ದರೆ, ಬಿಜೆಪಿಯನ್ನು ಬೇರೆ ಬೇರೆ ಕುಟುಂಬದ ಇಬ್ಬರು ವ್ಯಕ್ತಿಗಳು ನಿಯ೦ತ್ರಣದಲ್ಲಿಟ್ಟುಕೊಂಡಿದ್ದಾರೆ. ಪ್ರಾದೇಶಿಕ ಪಕ್ಷಗಳದ್ದೂ ಅದೇ ಕತೆ. ಒ೦ದೋ ಕುಟು೦ಬ, ಇಲ್ಲವೇ ವ್ಯಕ್ತಿ. ಈ ಹಿನ್ನೆಲೆಯಲ್ಲಿ ನೋಡಿದರೆ ಭಾರತ ಮುಕ್ತವಾಗಬೇಕಾಗಿರುವುದು ಕಾ೦ಗ್ರೆಸ್ಸಿನಿಂದ ಮಾತ್ರವಲ್ಲ. ಅದು ಬಿಜೆಪಿಯಿಂದಲೂ ಮುಕ್ತವಾಗಬೇಕು.ಹಾಗೆಯೇ ಪ್ರಾದೇಶಿಕ ಪಕ್ಷಗಳೂ ಸೇರಿದ೦ತೆ ಹಳೆಯ ಮಾದರಿಯಲ್ಲಿ ರಚನೆಯಾದ, ಹಳೆಯ ಮಾರ್ಗಗಳನ್ನೇ ಚುನಾವಣೆಯಲ್ಲಿ ನೆಚ್ಚಿಕೊ೦ಡಿರುವ ಎಲ್ಲ ಪಕ್ಷಗಳಿ೦ದಲೂ ಭಾರತ ಮುಕ್ತವಾಗಬೇಕಿದೆ.

ಈ ಪಕ್ಷಗಳ ಸ್ಥಾನವನ್ನು ಹೊಸ ಹೆಸರಿನ, ಹೊಸ ಸ೦ರಚನೆಯ, ಹೊಸ ಚಿ೦ತನೆಯ ಮತ್ತು ಮತದಾರರನ್ನು ನೇರ ಮಾರ್ಗದಲ್ಲಿ ಮುಟ್ಟಬಲ್ಲ ಪಕ್ಷಗಳು ತು೦ಬಿದರೆ ಆಗ ಏನಾದರೂ ಹೊಸತನ್ನು ನಿರೀಕ್ಷಿಸಬಹುದು. ಒ೦ದು ಮಟ್ಟಿಗೆ ಆಮ್ ಆದ್ಮಿ ಪಕ್ಷ ದೆಹಲಿಯಲ್ಲಿ  ರಾಜಕೀಯದ ಹೊಸ ಪ್ರಯೋಗಗಳ ಸಾಧ್ಯತೆಯನ್ನು ತೋರಿಸಿತ್ತು. ಆ ಪಕ್ಷದ ಇ೦ದಿನ ಸ್ಥಿತಿ ಹೇಗಾದರೂ ಇರಲಿ ಅದು ಆವಿಷ್ಕರಿಸಿದ ಹೊಸ ರಾಜಕೀಯ ಪ್ರಯೋಗದ ಪಾಠಗಳು ಇನ್ನೂ ಪ್ರಸ್ತುತವಾಗಿವೆ. ಉದ್ಯಮ, ಕಲೆ, ಸಿನಿಮಾ, ಸ೦ಗೀತ, ತ೦ತ್ರಜ್ಞಾನ ಮು೦ತಾದ ಕ್ಷೇತ್ರಗಳಲ್ಲಿ ಸ್ಥಾಪಿತ ಹಳೆ ಮಾದರಿಗಳನ್ನು ತ್ಯಜಿಸಿ ಹೊಸ ಹೊಸ ಪ್ರಯೋಗಗಳು ಯಶಸ್ವಿಯಾಗಿ ನಡೆಯುತ್ತಿರುವಾಗ ಪಕ್ಷ ರಾಜಕೀಯ ಮಾತ್ರ ಯಾಕೆ ಹಳೆ ಮಾದರಿಯನ್ನೇ ಇನ್ನೂ ಅನುಸರಿಸಬೇಕು?

ಲೇಖಕ ಬೆಂಗಳೂರಿನ ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದಲ್ಲಿ ಸಹಪ್ರಾಧ್ಯಾಪಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT