ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಗ್ಧತೆ ಕಳಚಿದಾಗ ಕಂಡ ಕ್ರೌರ್ಯದ ನಾಮಾಂಕಿತವೇನು?

Last Updated 25 ಮೇ 2016, 19:32 IST
ಅಕ್ಷರ ಗಾತ್ರ

ಋಷಿ ಮೂಲ, ನದಿ ಮೂಲ, ಸ್ತ್ರೀ ಮೂಲ ಹುಡುಕಬಾರದು ಅಂತ ಯಾರಾದರೂ ನಿಜವಾಗಿಯೂ ಹೇಳಿದ್ದರಾ ಅಥವಾ ಮಾಹಿತಿ ಕಲೆಹಾಕಲು ಅಸಮರ್ಥನಾದ ಸೋಮಾರಿಯೊಬ್ಬ ಹೀಗೆ ನಿಗೂಢ ಸಂದೇಶವೊಂದನ್ನು ಹರಿಬಿಟ್ಟನಾ ಅಂತ ಅನುಮಾನ ಕೆಲವರಿಗೆ ಬಂದಿದ್ದರೂ ಬಂದಿರಬಹುದು.

ಯಾಕೆಂದರೆ ಸೃಷ್ಟಿ ಮೂಲಕ್ಕೆ ಬಂದರೆ ಸ್ತ್ರೀ ಮೂಲ, ಪುರುಷ ಮೂಲ ಅಂತ ಬೇರೆ ಬೇರೆ ಇರಲು ಸಾಧ್ಯವಾ? ಸಂಸಾರದ ಸಕಲ ಜೀವಜಂತುಗಳ ಹುಟ್ಟೂ ಒಂದೇ ಅಲ್ಲವೇನು? ಅದರಲ್ಲಿ ನಿಗೂಢ ಏನು ಬಂತು ಮಣ್ಣು? ಹೀಗಂತ ಯೋಚಿಸುತ್ತಾ ವಿಜಿ ಒಂದು ದಿನ ಬೆಳಗು ಮೈಮುರಿಯುವ ಹೊತ್ತನ್ನು ಸುಖಾಸುಮ್ಮನೆ ವೇಸ್ಟು ಮಾಡುತ್ತಿದ್ದಳು. ಸರಳಾ ತಮ್ಮ ಜೀವನದ ಕಥೆ ಹೇಳುತ್ತೇನೆ ಅಂತ ಹೇಳಿದ ದಿನದ ಬೆಳಗಿನ ಜಾವ ವಿಜಿಗೆ ನಿದ್ದೆ ಬಂದಿರಲಿಲ್ಲ.

ಯಾವ ಕಾರಣಕ್ಕೆ ಅಂತ ಯೋಚಿಸಿ ಪ್ರಯೋಜನವಿಲ್ಲ. ಯಾಕೆಂದರೆ ಹರೆಯದ ಹುಡುಗಿಯರಿಗೆ, ಹುಡುಗರಿಗೆ ನಿದ್ದೆ ಬರದಿರಲು ಸಾಕಷ್ಟು ಕಾರಣಗಳಿರುತ್ತವೆ, ಅಲ್ಲವೇ?
ಆದರೆ ಸರಳಾ ಏನು ಹೇಳಬಹುದು ಎನ್ನುವ ಕುತೂಹಲ ಸಾಕಷ್ಟಿತ್ತು ವಿಜಿಗೆ.

ಸೂಸನ್ ಅಷ್ಟು ಮೂಗು ತೂರಿಸುವ ಪ್ರವೃತ್ತಿ ಇಲ್ಲದಿದ್ದರೂ ವಿಜಿಗೆ ಯಾಕೋ ಸರಳಾ ಬಗ್ಗೆ ಬಹಳ ಮಮತೆ ಇತ್ತು. ಮಧ್ಯವಯಸ್ಸು ದಾಟಿದ್ದರೂ ಇನ್ನೂ ಒಂಥರಾ ‘ಅಯ್ಯ! ಇನ್ನೇನಿದೆ ಜೀವನದಲ್ಲಿ’ ಎನ್ನುವ ಮನೋಭಾವ ಬೆಳೆಸಿಕೊಳ್ಳದೆ, ವಯಸ್ಸಿನ ಹುಡುಗಿಯರನ್ನು ವಿನಾಕಾರಣ ಡಿಸ್‍ಕರೇಜ್ ಮಾಡದೆ ತಮಗೆ ಸಹಜವಾಗಿ ಬಂದಿರತಕ್ಕ ಹಸನ್ಮುಖೀ ವ್ಯಕ್ತಿತ್ವದಿಂದ ಹೆಚ್ಚು ಸ್ನೇಹಿತರನ್ನು, ಕಡಿಮೆ ಶತ್ರುಗಳನ್ನೂ ಹೊಂದಿದ್ದರು.

ಅದ್ಯಾಕೋಪ್ಪ, ಮಧ್ಯ ವಯಸ್ಕರಿಗೆ ಹದಿ ವಯಸ್ಸಿನವರ ಬಗ್ಗೆ ಒಂಥರಾ ಅನುಮಾನ, ಮಾತ್ಸರ್ಯ, ಕೆಲವೊಮ್ಮೆ ಅತೀ ಕುತೂಹಲವಿದ್ದರೆ, ವಯಸ್ಸಾದವರಿಗೆ ಹದಿವಯಸ್ಸಿನವರು ದೊಡ್ಡ ದೊಡ್ಡ ತಪ್ಪುಗಳನ್ನೇ ಮಾಡ್ತಿದಾರೆ ಎನ್ನುವ ಗ್ಯಾರಂಟಿ ಇರುತ್ತದೆ. ಇದಕ್ಕೆ ಅಪವಾದವೂ ಇಲ್ಲದಿಲ್ಲ. ಆದರೆ ಚಿಕ್ಕವಯಸ್ಸಿಗೆ ತಮ್ಮದೇ ತಪ್ಪುಗಳನ್ನು ಮಾಡುವ ಸ್ವಾತಂತ್ರ್ಯವೂ ಕೆಲವೊಮ್ಮೆ ಬೆಳೆಯುತ್ತಿರುವ ಮಕ್ಕಳಿಗೆ ಇರುವುದು ಕಾಣೆ.

‘ನಾವೇನೋ ಪಡಬಾರದ ಕಷ್ಟಪಟ್ವಿ. ಅದೆಲ್ಲಾ ನಮ್ಮ ಮಕ್ಕಳಿಗೆ ಬರಬಾರದು ಅಂತ ಅವ್ರು ಏನು ಕೇಳಿದರೂ ಇಲ್ಲ ಅನ್ನದೇ ಕೊಡಿಸಿದ್ವಿ. ಆದರೂ ನನ್ನ ಮಗ/ಳು ಒಂದು ಮಾತೂ ಕೇಳಲ್ಲ... ತುಂಬಾ ನೋವು ಕೊಡ್ತಾರಪ್ಪಾ ಈಗಿನ ಮಕ್ಕಳು. ನಾವು ಹೀಗಿರಲಿಲ್ಲ’–ಬಹುತೇಕ ತಂದೆತಾಯಿಗಳು ಹೇಳುವ ಈ ಮಾತುಗಳು ಬರೀ ಮಾತುಗಳಲ್ಲ; ಒಂದು ಪೀಳಿಗೆಯ ಸಂಪೂರ್ಣ ಭಾವಾಭಿವ್ಯಕ್ತಿ.

ನಗರೀಕರಣಕ್ಕೆ ಒಳಗಾಗಿ, ಉದ್ಯೋಗ ತರುವ ಸಂಬಳ, ಹರ್ಷ, ಸುರಕ್ಷೆ ಅನುಭವಿಸುತ್ತಾ ನೆಂಟರಿಷ್ಟರಿಂದ ದೂರವಾಗಿ ಬರೀ ಮದುವೆ ಮುಂಜಿಗಳಲ್ಲಿ ಭಾವುಕ ಭೇಟಿಗಳನ್ನು ಮಾಡುತ್ತಾ, ಇನ್ನೊಬ್ಬರ ಮಕ್ಕಳನ್ನು ಅವರಪ್ಪ-ಅಮ್ಮ ದಡ್ಡರಾಗಿದ್ದರೂ ಹೇಗೆ ಒಳ್ಳೊಳ್ಳೆ ಕೋರ್ಸುಗಳಿಗೆ ಸೇರಿದ್ದಾರೆ ಎಂದು ಸಂಕಟ ಪಡುತ್ತಾ ತಮ್ಮ ಮಕ್ಕಳಿಗೆ ತಾವೇನು ಕಡಿಮೆ ಮಾಡಿದೆವು ಎನ್ನುವುದನ್ನು ಆತ್ಮಾವಲೋಕನ ಮಾಡಿಕೊಳ್ಳುತ್ತಲೇ ಆತ್ಮವಂಚನೆಯನ್ನೂ ಮಾಡಿಕೊಳ್ಳುತ್ತಾ ಬದುಕುವುದೇ ನಮ್ಮೆಲ್ಲರ ಗೋಳು.

ಭಾರತೀಯ ತಂದೆ ತಾಯಿಗಳಿಗೆ ಮಕ್ಕಳು ಹುಟ್ಟುವುದು ಒಂಥರಾ ದೇಶವನ್ನು ಯುದ್ಧ ಸನ್ನದ್ಧವಾಗಿಸುವ ಪರಿಸ್ಥಿತಿಯ ಪ್ರತಿಬಿಂಬ. ಮಕ್ಕಳು ಹುಟ್ಟುತ್ತಲೇ ಯಾವ ಸ್ಕೂಲು, ಎಷ್ಟು ಫೀಸು, ತಮ್ಮ ಕೈಲಾಗುವಷ್ಟಕ್ಕಿಂತ ಒಂದು ಕೈ ಹೆಚ್ಚಿನ ಫೀಸು ಇರುವ ಸ್ಕೂಲಿಗೆ ಸೇರಿಸಿ ಒದ್ದಾಡುತ್ತಾ ‘ನಮಗೆ ಸೌಲಭ್ಯ ಇರಲಿಲ್ಲ, ಇವರಿಗೆ ಶಕ್ತಿ ಮೀರಿ ಸೌಲಭ್ಯ ಕೊಟ್ಟರೂ ಬೆಲೆ ಇಲ್ಲ’ ಅಂತೆಲ್ಲಾ ಗೊಣಗಾಡುತ್ತಾ ಬದುಕುವುದೂ ಒಂದು ರೀತಿಯ ಕನಸುಗಳ ಸಾಕ್ಷಾತ್ಕಾರವೇ ಅವರಿಗೆ! ಇದೂ ಒಂದು ರೀತಿಯ ಸೀಮೋಲ್ಲಂಘನವೇ ಅಲ್ಲವೇನು?

ಸರಳಾರ ವ್ಯಕ್ತಿತ್ವವೇ ಸಾಕಷ್ಟು ವಿಭಿನ್ನವಾಗಿತ್ತು. ಅವರ ‘ಸ್ತ್ರೀತ್ವ’ ಅಥವಾ ಫೆಮಿನಿಸಂ ಅಭಿವ್ಯಕ್ತಿಗೊಳ್ಳುತ್ತಿದ್ದ ರೀತಿ ಒಂಥರಾ ಗುಪ್ತಗಾಮಿನಿಯಂತೆ. ಸಂತೆಯಲ್ಲಿ ಸೀರೆ ಅಳತೆ ಹಾಕಿದ ಹಾಗಲ್ಲ, ಬದಲಾಗಿ ಇನ್ನೇನು ತೊಟ್ಟು ಕಳೆದುಕೊಂಡು ಹಗೂರಾಗಿ ನೆಲಕ್ಕೆ ಬೀಳುವಂತಿರುವ ಸಪೂರ, ಆಡಂಬರ ಇಲ್ಲದ, ಗಾಳಿಯಷ್ಟೇ ಸರಾಗವಾಗಿ ತನ್ನ ಸುವಾಸನೆಯನ್ನು ಹರಡುವ ನಿತ್ಯ ಮಲ್ಲಿಗೆಯ ಥರಾ. ಸರಳಾದ್ದು ಸಹಜ, ಸ್ನಿಗ್ಧ ವ್ಯಕ್ತಿತ್ವ.

ಆವತ್ತು ಸಂಜೆ ಎಲ್ಲರೂ ಭೇಟಿಯಾದಾಗಲೂ ಸರಳಾ ಎಲ್ಲರ ಬಿಯರ್ ದುಡ್ಡನ್ನು ಅವರೇ ಕೊಟ್ಟರು. ಯಾಕೆ ಅಂತ ಸೂಸನ್ ಹಟ ಹಿಡಿದು ಕೇಳಿದ್ದಕ್ಕೆ ಗದರಿ ಕಳಿಸಿದರಂತೆ. ‘ಸುಮ್ಮನೆ ಹೋಗೇ. ದೇವರ ಹೆಸರಲ್ಲಿ ಏನೇನೋ ಮಾಡ್ತೀಯ; ಒಂದು ದಿನ ನನ್ ಹೆಸರಲ್ಲಿ ಬಿಯರ್ ಕುಡಿ’ ಅಂತ ಬಯ್ದರಂತೆ. ಅಂದಿನ ಸಂಜೆಯ ಸೂರ್ಯ ಕಿತ್ತಳೆ ಬಣ್ಣ ಇದ್ದ; ಕೆಂಪಗಾಗಿ ಮೂಡಣಕ್ಕೆ ಬೆಂಕಿ ಹಚ್ಚುವಂತಿದ್ದ ಅಂತೆಲ್ಲ ಉಪಮೆಗಳನ್ನು ಉರುಳಿಸುತ್ತಾ ಹೋದರೆ ಮುಂದೆ ನಡೆದದ್ದಕ್ಕೆ ಪದಗಳೇ ಇಲ್ಲದಂತಾಗುತ್ತೆ.

‘ನನ್ನ ಜೀವನ ನಿಮಗೆ ಯಾಕೆ ಮುಖ್ಯ ಅಂತ ನನಗೆ ಈಗಲೂ ಗೊತ್ತಾಗ್ತಿಲ್ಲ. ಆದರೆ ನನ್ನ ಅಭಿಪ್ರಾಯ ಇಷ್ಟು. ನಾನು ಹೇಳೋದರ ಸತ್ಯಾಸತ್ಯತೆ ಅಥವಾ ನಂಬೋದು-ಬಿಡೋದು ನಿಮಗೆ ಬಿಟ್ಟದ್ದು. ಹಿಂಗ್ಯಾಕೆ ಮಾಡಿದ್ರಿ, ಹಂಗ್ಯಾಕ್ ಮಾಡಲಿಲ್ಲ; ಹಿಂಗೂ ಮಾಡಬೋದಿತ್ತಲ್ವಾ? ಮತ್ತೆ ಅವ್ರು ನಿಮಗೆ ಹೆಲ್ಪ್ ಮಾಡಲಿಲ್ವಾ? ಇನ್ಯಾರೋ ಹೇಳಿದ್ದನ್ನ ಹೆಂಗೆ ನಂಬಿದಿರಿ? ನಿಮಗೆ ಅಷ್ಟೂ ಅರ್ಥ ಆಗಲಿಲ್ವಾ? ಇಂಥಾ ಪ್ರಶ್ನೆಗಳನ್ನು ಕಟ್ಟಿಟ್ಟು ಸುಮ್ನೆ ಕೂತು ಕೇಳಬೇಕು.

ನನಗೆ ಹೇಳೋ ಆಸಕ್ತಿ ಇಲ್ಲದಿದ್ದರೂ ನೀವು ಬಲವಂತವಾಗಿ ಕೇಳ್ತಿದೀರಿ ಅನ್ನೋದನ್ನ ನೆನಪಿನಲ್ಲಿ ಇಟ್ಕೋಬೇಕು’ ಅಂತ ಸರಳಾ ಸಿನಿಮಾದ ಮೊದಲಿಗೆ ‘ಡಿಸ್‍ಕ್ಲೇಮರ್’ ಬರುತ್ತಲ್ಲಾ, ಹಾಗೆ ಬೋರ್ಡ್ ಹಾಕಿಬಿಟ್ಟರು.

‘ಹಂಗೆ ಹೆಂಗ್ರೀ ಇರೋಕಾಗುತ್ತೆ? ಏನಾದರೂ ಪ್ರಶ್ನೆ ಇದ್ರೆ ಕೇಳ್ದೆ ಸುಮ್ನೆ ಇರೋದು ಅಂದ್ರೆ ಹೆಂಗೆ?’ ಸೂಸನ್ ಬಿಡಲಿಲ್ಲ; ಮೊದಲ ಹೆಜ್ಜೆಯನ್ನೇ ಪ್ರಶ್ನೆಯ ಮೂಲಕ ಇಟ್ಟಿದ್ದಳು.

‘ಸಿನಿಮಾ ನೋಡುವಾಗ ಪ್ರಶ್ನೆ ಕೇಳ್ತೀಯಾ? ಪುಸ್ತಕ ಓದುವಾಗ ಪ್ರಶ್ನೆ ಕೇಳ್ತೀಯಾ? ನಾನು ನನ್ನ ಜೀವನದಲ್ಲಿ ತೆಗೆದುಕೊಂಡ ನಿರ್ಧಾರಗಳು ನನ್ನ ಸ್ವಂತದ್ದು. ಯಾರ ಮುಂದೂ ಅದನ್ನು ಜಸ್ಟಿಫೈ ಮಾಡಬೇಕು ಅಂತ ತಗೊಂಡದ್ದಲ್ಲ ಅದು. ಆ ಹಂತದಲ್ಲಿ ಅದೇ ಸರಿ ಅನ್ನಿಸಿತು, ಹಾಗೆ ಮಾಡಿದೆ’ ಅಂದರು ಸರಳಾ. ಕಡ್ಡಿ ತುಂಡು ಮಾಡಿದ ಹಾಗಿತ್ತು ಅವರ ಮಾತು.

ಮುಂದೆ ನಡೆದದ್ದು ಬೇಸಿಗೆಯ ಮಳೆ ಬಂದ ಹಾಗೆ. ಬಿಸಿಲಿನ ತಾಪಕ್ಕೆ ನರಳುತ್ತಿರುವವರ ಮೈ ಮನಸ್ಸಿಗೆ ತಂಪೆರೆಯಲು ಬಂದ ಮಳೆ ಮಾರನೇ ದಿನ ಬೇಸಿಗೆಯನ್ನು ಇನ್ನೂ ಹೆಚ್ಚು ಮಾಡಿ ಹೋದಂತೆ ಇತ್ತು. ಆದರೆ, ಸೋಗು ಇಲ್ಲದ ಮಾತುಗಳನ್ನು ಕೇಳುವುದು ಒಂದು ಅನುಭವ, ಪ್ರಾಮಾಣಿಕವಾಗಿ, ಅಭಿನಯದ ಹಂಗಿಲ್ಲದೆ ಯಾರಾದರೂ ನಮ್ಮ ಜೊತೆ ಮಾತಾಡಿದರೆ, ಅವರ ಮಾತುಗಳು ದಡಕ್ಕೆ ಬಂದು ಮೆಲ್ಲಗೆ ಅಪ್ಪಳಿಸಿ ಮತ್ತೆ ಸುಖವಾಗಿ ಸಮುದ್ರದ ಎದೆಯೊಳಗೇ ಸೇರುವ ಅಲೆಗಳ ಥರ ಮನಸ್ಸಿಗೆ ದಕ್ಕಬೇಕು.

‘ನನ್ನ ತಂದೆ ನಾನು ಹುಟ್ಟುವ ಸಮಯಕ್ಕೆ ನನ್ನ ತಾಯಿಯನ್ನು ಬಿಟ್ಟು ಇನ್ನೊಬ್ಬರ ಜೊತೆ ಇದ್ದರಂತೆ. ನನಗೆ ಇಬ್ಬರು ಅಣ್ಣಂದಿರು. ಇಬ್ಬರೂ ಸಾಮಾನ್ಯ ಅನ್ನುವಂತಹ ಕೆಲಸಗಳಲ್ಲಿ ಇದ್ದಾರೆ. ಮನೆಯಲ್ಲಿ ನಾನು ಒಬ್ಬಳೇ ಹುಡುಗಿ. ನನಗೆ, ಅಣ್ಣಂದಿರಿಗೆ ನಡುವೆ ಮೂರು ವರ್ಷಗಳ ವ್ಯತ್ಯಾಸ ಅಷ್ಟೇ. ನಾನು ಚಿಕ್ಕವಳಿದ್ದಾಗಲೂ ಅಮ್ಮ ನನಗೆ ನನ್ನ ಅಪ್ಪನ ಬಗ್ಗೆ ಹೇಳುವಾಗ ಯಾವಾಗಲೂ ಹುಷಾರಾಗಿರು ಅಂತಲೇ ಹೇಳುತ್ತಿದ್ದಳು.

ನನ್ನ ತಂದೆ ನಮ್ಮ ಮನೆಗೆ ಆಗಾಗ ಬರುತ್ತಿದ್ದರು. ಅವರಿಗೆ ನನ್ನ ಮೇಲೆ ಏನೋ ವಿಶೇಷ ಮಮತೆ. ಆದರೆ ಅಮ್ಮ ಹಾಗೆ ಯಾಕೆ ಹೇಳುತ್ತಿದ್ದಳು ಅಂತ ಆಮೇಲೆ ಅರ್ಥವಾಯಿತು’ ಸರಳಾ ತಂದೆ ಒಂದು ಬಾರ್ ನಡೆಸುತ್ತಿದ್ದರಂತೆ. ಸರಳಾ ತಾಯಿ ಮುಂಬೈನವರು. ಇಬ್ಬರೂ ಯಾವುದೋ ಹೋಟೆಲ್ ರೂಮಿನಲ್ಲಿ ಸಿಕ್ಕವರಂತೆ.

‘ನನ್ನ ತಾಯಿಗೆ ತಾನು ಎಲ್ಲಿಯವಳು ಅಂತ ಕೂಡ ನೆನಪಿರಲಿಲ್ಲ. ತುಂಬಾ ಚಿಕ್ಕ ಹುಡುಗಿಯಾಗಿದ್ದಾಗಲೇ ಕಿಡ್ನಾಪ್ ಆಗಿದ್ದವರು. ಸೂಳೆ ಅಂತ ಅನ್ನಿಸಿಕೊಳ್ಳೋದು ಅಸಹ್ಯ ಅನ್ನುವುದೂ ಅವರಿಗೆ ಗೊತ್ತಿಲ್ಲದಷ್ಟು ಆ ಪ್ರೊಫೆಷನ್ ಅವರಲ್ಲಿ ಹಾಸುಹೊಕ್ಕಾಗಿ ಬೆಳೆದುಬಿಟ್ಟಿತ್ತು. ನನ್ನ ತಂದೆ ಹೀಗೇ ಯಾವಾಗಲೋ ಗಿರಾಕಿಯ ಥರ ಸಿಕ್ಕರು.

ನನ್ನಮ್ಮ ತುಂಬಾ ಚೆಂದ ಇದ್ದಳು. ಇವಳನ್ನು ಅವನು ಮದುವೆ ಆದದ್ದು ಪ್ರೀತಿಯಿಂದಲ್ಲ, ಬದಲಾಗಿ ಬಿಸಿನೆಸ್ ಇನ್ವೆಸ್ಟ್‍ಮೆಂಟ್ ಥರ. ಬಹಳ ಸುಂದರಿ, ಅದರ ಮೇಲೆ ಇವಳಿಗೆ ಸೂಳೆಗಾರಿಕೆ ತಪ್ಪು ಅನ್ನುವ ಯಾವ ಅಭಿಪ್ರಾಯ ಭೇದ ಇರಲಿಲ್ಲ.

ಆರಾಮಾಗಿ ಕೆಲಸ ಮಾಡಿಕೊಂಡು ಹೋಗ್ತಾಳೆ. ಇವಳಿಂದ ಚೆನ್ನಾಗಿ ದುಡ್ಡು ಮಾಡಿಕೊಂಡು ಆರಾಮಾಗಿ ಇರಬಹುದು ಅಂತ’ ‘ಸರಳಾ ಆಂಟೀ... ಹಿಂಗೂ ಇರುತ್ತಾ?’ ಸೂಸನ್ ಸರಳಾ ಕೈ ಒತ್ತುತ್ತಾ ಕೇಳಿದಳು. ಸರಳಾ ಕೈ ಕೊಡವಿಕೊಂಡು ಆಕಾಶ ನೋಡುತ್ತಾ, ಒಂದಿಡೀ ಮಗ್ ಬಿಯರ್ ಕುಡಿದು ಮುಗಿಸಿ ಮತ್ತೆ ಇನ್ನೊಂದು ಮಗ್ ಸುರುವಿಕೊಂಡರು. ತಕ್ಷಣ ಚಿತ್ರಾ ಸೂಸನ್‌ಗೆ ತಿವಿದು ಬಾಯಿ ಮುಚ್ಚಿಕೋ ಎನ್ನುವಂತೆ ಸಂಜ್ಞೆ ಮಾಡಿದಳು.

ಸರಳಾ ಕಣ್ಣು ತುಂಬಿ ಬರುತ್ತಿದ್ದವು. ಕಣ್ಣು ಮೂಗು ಏಕಕಾಲಕ್ಕೆ ಒರೆಸಿಕೊಳ್ಳುತ್ತಲೇ ಮಾತು ಮುಂದುವರೆಸಿದರು. ‘ಮಾತಾಡಿ ಆಂಟೀ, ಮಾತಾಡಿ’ ಅಂತ ಸಾವಿರ ಸಾರಿ ಬಡ್ಕೊಂಡಾಗಲೂ ಮಾತಾಡದವರು ಈಗ ಮಾತಾಡಬೇಡಿ ಅಂದ್ರೂ ಮಾತು ನಿಲ್ಲಿಸೋ ಹಾಗೆ ಇರಲಿಲ್ಲ. ಅಂದು ಸರಳಾ ಬರೀ ಸಮುದ್ರ ಅಲ್ಲ, ಸಾಕ್ಷಾತ್ ಸುನಾಮಿಯೇ ಆಗಿಬಿಟ್ಟಿದ್ದರು.

‘ನನ್ನ ಅಪ್ಪ ನೀಚ ಅನ್ನಿಸೋಕೆ ಯಾವ ಕಾರಣವೂ ಇರಲಿಲ್ಲ ನನಗೆ. ಯಾಕಂದ್ರೆ ನಾನು ಹುಟ್ಟಿದಾಗ ಆತ ಬಹಳ ಖುಷಿ ಪಟ್ಟಿದ್ದನಂತೆ. ಹಾಗಂತ ಅಮ್ಮನೇ ಹೇಳ್ತಿದ್ದಳು. ಇದು ಯಾರ ಮಗುವಾದರೂ ಆಗಿರಲಿ, ನನಗೊಬ್ಬಳು ಮಗಳು ಹುಟ್ಟಿದಳು ಅಂತ ಮುಂಬೈಯ ನಮ್ಮ ಓಣಿ ತುಂಬಾ ಕುಣಿದಾಡಿದ್ದನಂತೆ. ಅಮ್ಮ ಅದನ್ನ ಹೇಳುವಾಗ ಇನ್ನಷ್ಟು ಸುಂದರಿಯಾಗಿ ಕಂಗೊಳಿಸುತ್ತಿದ್ದಳು’.

ತಾಯ್ತನ ಸರಳಾ ಅವರ ಅಮ್ಮನ ಸೌಂದರ್ಯವನ್ನು ದ್ವಿಗುಣ ಮಾಡಿತು. ಮೂವತ್ತು ದಾಟಿದ ಹೆಂಗಸರಿಗೆ ಒಂದು ಬಗೆಯ ಪ್ರೌಢ ಕಳೆ ಬರುತ್ತದೆ. ಅದು ಕನಿಷ್ಠ ಎರಡು ರೀತಿಯಲ್ಲಿ ವರ್ಕ್ ಆಗುತ್ತೆ. ಮೊದಲನೆಯದು ಯಾರ ಗಮನ ಸೆಳೆಯಲೂ ಚೆಲ್ಲು ಚೆಲ್ಲಾಗಿ ಆಡಬೇಕಿಲ್ಲ ಎನ್ನುವುದು ಅರ್ಥವಾಗಿರುವ ವಯಸ್ಸು ಅದು. ಹಾಗಾಗಿ ಆ ವಯಸ್ಸು ದಾಟಿದ್ದೇವೆ ಅಂತ ತಮ್ಮ ಆತ್ಮಸಾಕ್ಷಿಯನ್ನು ಒಪ್ಪಿಸಿಕೊಂಡಿರುವವರು ವಯಸ್ಸಿನ ಬಗ್ಗೆ ವಿನಾಕಾರಣ ಚಿಂತೆ ಮಾಡುವುದಿಲ್ಲ.

ಎರಡನೆಯದು, ಜೀವನಕ್ಕೆ ಬೇಕಾದ ಸಾಕಷ್ಟು ಕೌಶಲಗಳನ್ನು ರೂಢಿಸಿಕೊಂಡಿರುವುದರಿಂದ ತಮಗೆ ಬೇಕಾದ್ದು, ಬೇಡವಾದ್ದರ ಬಗ್ಗೆ ಪ್ರೌಢ ಹೆಂಗಸರಿಗೆ ಸ್ಪಷ್ಟ ಕಲ್ಪನೆ ಇರುತ್ತದೆ.

ಹಾಗೆ ಹೇಳಬೇಕೆಂದರೆ ಸರಳಾ ನಲವತ್ತು ದಾಟಿದ್ದಾರೆ ಎನ್ನುವುದು ಅವರ ಸೌಂದರ್ಯವನ್ನು ಹೆಚ್ಚು ಮಾಡಿತ್ತೇ ಹೊರತು ಕಡಿಮೆ ಮಾಡಿರಲಿಲ್ಲ. ಅವರ ಅಮ್ಮ ಇನ್ನೂ ಸುಂದರಿಯಾಗಿದ್ದಿರಬಹುದು ಅಂತ ವಿಜಿ ಯೋಚಿಸಿದಳು. ಸರಳಾ ಮಾತ್ರ ಮಾತಿಗೆ ಕೂತು ಹಸಿರು ಬಾವುಟ ಕಂಡ ಟ್ರೇನಿನ ಥರ ಕೂಊಊಊಊಒ ಚುಕು ಭುಕು ಚುಕು ಭುಕು ಅಂತ ಹೋಗುತ್ತಲೇ ಇದ್ದರು.

ತನ್ನ ತಾಯಿ ಯಾವ ಕೆಲಸಕ್ಕೆ ಹೋಗುತ್ತಾಳೆ ಎನ್ನುವುದು ಸರಳಾಗೆ ಎಂದೂ ಕೊರತೆಯಾಗಲೇ ಇಲ್ಲ. ಯಾಕೆಂದರೆ ಅಪ್ಪ ಸಾಮಾನ್ಯವಾಗಿ ಮನೆಯಲ್ಲಿ ಇರುತ್ತಿದ್ದ. ಬಹುತೇಕ ಕುಡಿದೇ ಇರುತ್ತಿದ್ದನಾದರೂ ಮನೆಯಲ್ಲಿ ಅಪ್ಪ ಅಂತ ಒಬ್ಬ ಇದ್ದ. ಇವಳು ಅವನ ಮುದ್ದಿನ ಪಾಪು!

ಸಿಡಿಲು ಎರಗಿದ್ದು ಅಪ್ಪನ ತಾಯಿ ಕಾಸರಗೋಡಿನಲ್ಲಿ ತೀರಿಕೊಂಡಾಗ. ಅಮ್ಮನ ಕರ್ಮಗಳನ್ನು ಪೂರೈಸಲು ಬಂದ ಸರಳಾ ಅವರ ಅಪ್ಪ ಮತ್ತೆ ವಾಪಸಾಗಲು ನೆಂಟರು ಬಿಡಲಿಲ್ಲ. ಇಲ್ಲೇ ಇರು ಅಂತ ಒತ್ತಾಯ ಮಾಡಿದರು. ಅವನಿಗೂ ಊರಿನ ಬಗ್ಗೆ ಸುಪ್ತವಾದ ಸೆಳವು ಇತ್ತೋ ಏನೋ, ಇಲ್ಲೇ ಬಂದು ಇರುವುದು – ಉಳಿಸಿರುವ ದುಡ್ಡಿನಲ್ಲಿ ಚಿಕ್ಕ ಪುಟ್ಟ ವ್ಯಾಪಾರ ಮಾಡುವುದು ಅಂತ ಯೋಚಿಸಿ ಸಂಸಾರ ಸಮೇತ ಬಂದೇ ಬಿಟ್ಟ. ಬಂದು ಸ್ವಲ್ಪ ದಿನದಲ್ಲೇ ದುಡ್ಡು ಕರಗಿತು. ಇನ್ನೊಬ್ಬಳು ಜಾತಿವಸ್ತೆ ಚೆಂದ ಕಂಡಳು.

ನೆಂಟರ ಒತ್ತಾಯಕ್ಕೆ ಅಪ್ಪ ಅವಳನ್ನು ಮದುವೆ ಆದ. ಸರಳಾ ಅಮ್ಮನನ್ನೂ, ಮಕ್ಕಳನ್ನೂ ಬಿಟ್ಟು ಹೋದ. ತಾಯಿಗೆ ಹಳೆಯ ಪ್ರೊಫೆಷನ್ನೇ ಗತಿಯಾಯ್ತು. ಮಕ್ಕಳನ್ನು ಕರೆದುಕೊಂಡು ಮುಂಬೈಗೆ ಮರಳಿ ಮತ್ತೆ ತಮ್ಮ ಹಳೆಯ ಗಿರಾಕಿಗಳನ್ನು ಹುಡುಕಿದರು. ಬದುಕಿಗೆ ದುಡ್ಡಿನ ದಾರಿಯಾಯಿತು. ಆದರೆ ತಾಯಿ ಕೆಲಸಕ್ಕೆ ಹೋದಾಗ ಸರಳಾ ಅಣ್ಣಂದಿರ ಕೈಯಲ್ಲಿ ಒಂಟಿ.

ವಯಸ್ಸಿನ ವ್ಯತ್ಯಾಸ ಹೆಚ್ಚು ಇಲ್ಲದ್ದರಿಂದ ಅಣ್ಣಂದಿರ ಬೆಳವಣಿಗೆಯೂ ಇವಳ ಬೆಳವಣಿಗೆಯೂ ಏಕಕಾಲಕ್ಕೆ ಆಗತೊಡಗಿತು. ಲೈಂಗಿಕ ಸಾಹಸಗಳಿಗೆ ಬೇರೆ ತಾಣಗಳಿಲ್ಲದ ಕಾರಣ ಸರಳಾ ಅಣ್ಣಂದಿರು ತಂಗಿಯನ್ನೇ ಬಳಸಿಕೊಳ್ಳತೊಡಗಿದರು.

‘ನಿಮಗೆ ಹೆದರಿಕೆ ಆಗಲಿಲ್ವಾ ಆಂಟೀ?’ ‘ಇಲ್ಲ. ನನಗೆ ಇದು ಹೆದರುವಂಥ ಸಂಗತಿ ಅಂತ ಗೊತ್ತೇ ಇರಲಿಲ್ಲ. ಅಣ್ಣಂದಿರು ಆಟ ಅಂತ ಆಡಿಸುತ್ತಿದ್ದಾರೆ ಅಂದುಕೊಳ್ತಿದ್ದೆ. ಪಕ್ಕದ ಮನೆಯ ಮಾಮಿಯೊಬ್ಬಳು ಒಮ್ಮೆ ಅಕಸ್ಮಾತ್ ಮನೆಯೊಳಗೆ ಬಂದವಳು ಅವರು ನನ್ನ ಬಟ್ಟೆ ತೆಗೆಯುತ್ತಿದ್ದುದನ್ನು ನೋಡಿ ಅವರಿಗೆ ಬೈದು ಅಮ್ಮ ಬರುವ ತನಕ ತನ್ನ ಮನೆಯಲ್ಲೇ ಇರಿಸಿಕೊಂಡಳು.

ಆಮೇಲಿಂದ ಅಮ್ಮ ಕೆಲಸಕ್ಕೆ ಹೋದಾಗಲೆಲ್ಲಾ ನಾನು ಮಾಮಿಯ ಮನೆಯಲ್ಲೇ ಇರುತ್ತಿದ್ದೆ’ ‘ಮಾಮಿ ಏನು ಕೆಲಸ ಮಾಡ್ತಿದ್ದರು?’ ‘ಅವಳೂ ಇದೇ ಕೆಲಸ ಮಾಡ್ತಿದ್ದಳು. ಬೇರೆ ಕೆಲಸ ಮಾಡೋವರ, ಅಂದ್ರೆ ‘ಮರ್ಯಾದಸ್ತರ’ ಚಾಳ್‌ನಲ್ಲಿ (ವಠಾರ) ನಮಗೆ ಮನೆ ಸಿಗೋದೇ ಇಲ್ಲ! ಅಮ್ಮನ ಶಿಫ್ಟು, ಇವಳ ಶಿಫ್ಟು ಬೇರೆ ಟೈಮು ಅಷ್ಟೆ. ನನ್ನನ್ನು ಜೋಪಾನ ಮಾಡುವ ಜವಾಬ್ದಾರಿಯನ್ನು ಇಬ್ಬರು ಹೆಣ್ಣು ಮಕ್ಕಳೂ ವಹಿಸಿಕೊಂಡರು.

ತಮಾಷೆ ಎಂದರೆ ಅಮ್ಮನಿಗೆ ಅಪ್ಪ ತನ್ನನ್ನು ಬಿಟ್ಟು ಹೋದದ್ದು ವಿಚಿತ್ರ ಅನ್ನಿಸಲೇ ಇಲ್ಲ. ಅದು ಬಹಳ ಸಹಜ ಸಂಗತಿಯೇನೋ ಎಂಬಂತೆ ನಡೆದುಕೊಂಡಳು’ ‘ಹೌದಾ? ಅದ್ಹೆಂಗೆ?’ ‘ಅಮ್ಮ ತನ್ನ ಪ್ರೊಫೆಷನ್ನಿನಲ್ಲಿ ಗಂಡನ ಜೊತೆ ಇದ್ದ ಹೆಂಗಸರ ಸಂಖ್ಯೆ ಕಡಿಮೆ ಇದ್ದುದನ್ನು ನೋಡಿದ್ದಳು. ಅಲ್ಲದೆ, ಜೊತೆಗೆ ಇದ್ದವರು ಒಂಥರಾ ಪ್ಯಾರಾಸೈಟುಗಳು.

ಹೆಂಡತಿಯ ದುಡಿಮೆಯ ಮೇಲೆ ಬದುಕುವವರು. ಅಡುಗೆ ಕೂಡ ಮಾಡ್ತಿರಲಿಲ್ಲ. ಅವಳು ದುಡಿದು ಬಂದ ದುಡ್ಡಲ್ಲಿ ಕುಡಿದು ಬಂದು ಬಿದ್ದುಕೊಳ್ಳೋದು, ಅವಳನ್ನ ಹೊಡೆಯೋದು, ಕಳ್ಳತನ ಮಾಡೋದು, ಪೊಲೀಸ್ ಕೈಗೆ ಸಿಕ್ಕಿಕೊಳ್ಳೋದು – ಹೀಗೆ ಇವರೆಲ್ಲ ತಲೆನೋವಿನ ಆಸಾಮಿಗಳು. ಇವ್ರು ಪೊಲೀಸ್ ಕೈಗೆ ಸಿಕ್ಕೊಂಡ್ರೆ ಮತ್ತೆ ಬಿಡಿಸಿಕೊಳ್ಳಲು ಹೆಂಗಸರೇ ಹೋಗಬೇಕು.

ಪೋಲಿಸರಿಗೆ ಬಿಟ್ಟಿ ಸರ್ವೀಸ್ ಬೇರೆ ಕೊಡಬೇಕು... ಹರಾಮಿ ಅಂತ ಮಾತು ಮಾತಿಗೂ ಬೈಸಿಕೊಳ್ಳಬೇಕು... ಒಂದೇ ಎರಡೇ...’ಹುಣ್ಣಿಮೆಯ ಚಂದ್ರ ಸಮುದ್ರವನ್ನು ಕೆರಳಿಸಿ ಕೆರಳಿಸಿ ತಿರುಗಿ ನೆಲಕ್ಕೆ ಕೆಡವಿದಂತೆ ಸರಳಾ ಭೂತಕ್ಕೂ, ಭೂತದ ಭವಿಷ್ಯಕ್ಕೂ, ವಾಸ್ತವಕ್ಕೂ, ಸಮಾಜಕ್ಕೂ ಸೇತುವೆಗಳನ್ನು ಕಟ್ಟುತ್ತಾ ಸುಸ್ತಾದಂತಿದ್ದರು. ಸೂಸನ್ ಭೀತಳಾಗಿದ್ದಳು. ಬಿಯರು ಮುಗಿಯಲು ಬಂದಿತ್ತು. ಆದರೆ ಕಥೆ ಇನ್ನೂ ಶುರುವಾದಂತೆ ಇರಲಿಲ್ಲ. ಪೀಠಿಕೆಯೇ ಇಷ್ಟು ಭೀಕರವಾದಾಗ ಇನ್ನು ಮುಂದಿನದ್ದು ಓದುವ ಬಗೆ ಹೇಗೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT