ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಚ್ಡಿಂಡಿ ಗ್ರಾಮಸ್ಥರ ಸ್ಮಶಾನದ ಗೋಳು

Last Updated 9 ಫೆಬ್ರುವರಿ 2014, 19:30 IST
ಅಕ್ಷರ ಗಾತ್ರ

ಗ್ರಾಮೀಣ ಪ್ರದೇಶದ ಜನರನ್ನು ತೀವ್ರವಾಗಿ ಕಾಡುತ್ತಿರುವ ಸಮಸ್ಯೆಗಳಲ್ಲಿ ಸ್ಮಶಾನ ಜಾಗದ ಕೊರತೆಯೂ ಒಂದು. ಸ್ವಂತ ಭೂಮಿ ಇಲ್ಲದ ಗ್ರಾಮೀಣ ಪ್ರದೇಶದ ಸಮಸ್ತ ಜನರನ್ನು ಈ ಕೊರತೆ ಪೆಡಂಭೂತದಂತೆ ಕಾಡುತ್ತಿದೆ. ಸತ್ತವರು ಸ್ವರ್ಗಕ್ಕೆ ಹೋಗುತ್ತಾರೋ ಅಥವಾ ನರಕಕ್ಕೆ ಹೋಗುತ್ತಾರೋ ಎಂಬುದು ಯಾರಿಗೂ ಗೊತ್ತಿಲ್ಲ. ಆದರೆ ಭೂರಹಿತರ ಮನೆಗಳಲ್ಲಿ ಸತ್ತವರ ಅಂತ್ಯ ಸಂಸ್ಕಾರ ಮುಗಿಸುವಷ್ಟರಲ್ಲಿ ಆ ಕುಟುಂಬದ ಸದಸ್ಯರಿಗೆ ನರಕದ ದರ್ಶನ­ವಂತೂ ಆಗಿಯೇ ತೀರುತ್ತದೆ. ಎಷ್ಟೋ ಕಡೆ ಜಾಗ ಇಲ್ಲದವರು ತಮ್ಮವರ ಶವ ಸಂಸ್ಕಾರ­ಕ್ಕಾಗಿ ಹೊಡೆದಾಟಕ್ಕೂ ಇಳಿಯಬೇಕಾದ ಪರಿಸ್ಥಿತಿ ಇದೆ.

ಹೂತ ಶವಗಳನ್ನು ಮತ್ತೆ ತೆಗೆದು ಬೇರೆ ಜಾಗದಲ್ಲಿ ಸಂಸ್ಕಾರ ಮಾಡಿದ ಉದಾಹರಣೆಗಳು ಹಲವು ಹಳ್ಳಿಗಳಲ್ಲಿ ಸಿಗುತ್ತವೆ. ಇದು ನಾಗರಿಕ ಸಮಾಜಕ್ಕೆ ಶೋಭೆ ತರುವಂತಹ ವಿಚಾರವಲ್ಲ.

ಹಳ್ಳಿಗಳಲ್ಲಿನ ಇಂಥದೊಂದು ಜ್ವಲಂತ ಸಮಸ್ಯೆಯ ಬಗ್ಗೆ ಸರ್ಕಾರದ ಗಮನ­ಸೆಳೆ­ಯುವ ಕೆಲಸ ಇತ್ತೀಚೆಗೆ ಬೆಳಗಾವಿ ತಾಲ್ಲೂಕಿನ ಮುಚ್ಚಂಡಿ ಗ್ರಾಮಸ್ಥರಿಂದ ಆಯಿತು. ಮುಚ್ಚಂಡಿ ಸುಮಾರು 600 ಮನೆಗಳಿರುವ ತುಸು ದೊಡ್ಡ ಹಳ್ಳಿ. ಸುಮಾರು 2,500–3,000 ಜನಸಂಖ್ಯೆ ಇರುವ ಈ ಊರಿಗೆ ಮಸಣ ಇಲ್ಲದಿರುವುದೇ ದೊಡ್ಡ ಸಮಸ್ಯೆ. ಹಾಗಾಗಿ ಹಳ್ಳಿಯ ಸರ್ವ ಜನಾಂಗದವರಿಗೂ ಸ್ಮಶಾನಕ್ಕೆ ಭೂಮಿ ಒದಗಿಸಬೇಕು ಎಂದು ಒತ್ತಾಯಿಸಲು ಅವರೆಲ್ಲ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು. ಕುಡಿಯುವ ನೀರು, ರಸ್ತೆ ದುರಸ್ತಿಯಂತಹ ಸೌಕರ್ಯಕ್ಕೆ ಪ್ರತಿಭಟನೆ ಸಹಜ. ಆದರೆ ಉತ್ತರ ಕರ್ನಾಟಕ­ದಲ್ಲಿ ಸ್ಮಶಾನದ ಭೂಮಿಗಾಗಿಯೂ ಜನರು ಒತ್ತಾಯಿಸಬೇಕಾದ ಪರಿಸ್ಥಿತಿ ಇದೆ. 

ಸ್ಮಶಾನಕ್ಕೆ ಜಾಗವಿಲ್ಲದ ಕಾರಣ ಜನರು ಕೆರೆ–ನದಿ ದಂಡೆ, ರಸ್ತೆಯ ಬದಿಯಲ್ಲಿ ಶವ­ಸಂಸ್ಕಾರ ಮಾಡಬೇಕಾದ ಅನಿವಾರ್ಯತೆ ಇದೆ. ಮಳೆಗಾಲದಲ್ಲಿ ಹಳ್ಳಗಳು ಉಕ್ಕಿ ಹರಿ­ದಾಗ ಶವಗಳು ತೇಲಿಕೊಂಡು ಹೋದ ಪ್ರಕ­ರಣ­ಗಳು ಗದಗ ಹಾಗೂ ಕೊಪ್ಪಳ ಜಿಲ್ಲೆಗಳ ಕೆಲವು ಗ್ರಾಮಗಳಲ್ಲಿ ನಡೆದಿವೆ. 
ಶವಗಳನ್ನು ಮನೆಯಲ್ಲಿಯೇ ಬಹಳ ಹೊತ್ತು ಇಟ್ಟುಕೊಳ್ಳಲು ಆಗದು. ಬಂಧು–ಬಳಗದವರು ಕೊನೆಯ ದರ್ಶನ ಪಡೆದ ನಂತರ ಆದಷ್ಟು ಬೇಗ ಮಣ್ಣು ಮಾಡಬೇಕು. ಆದರೆ ಇದಕ್ಕೆ ಬೇಕಾದ ಜಾಗ ಇರಬೇಕಲ್ಲ? ಇದು ಮುಚ್ಚಂಡಿ ಒಂದು ಗ್ರಾಮದ ಗೋಳಲ್ಲ. ಎಲ್ಲ ಹಳ್ಳಿಗಳಲ್ಲೂ ಈ ಸಮಸ್ಯೆ ಇದೆ.

ಸರ್ಕಾರ­ವೇನೋ ಇತ್ತೀಚೆಗೆ ನಡೆದ ವಿಧಾನಮಂಡಲದ ಅಧಿವೇಶನದ ಸಂದರ್ಭದಲ್ಲಿ ಬಿಜೆಪಿ ಶಾಸಕ ಗೋವಿಂದ ಕಾರಜೋಳ ಅವರ ಪ್ರಶ್ನೆಗೆ ತಕ್ಷಣ ಸ್ಪಂದಿಸಿ, ಎಲ್ಲ ಊರುಗಳಲ್ಲೂ ದಲಿತರಿಗೆ ಸ್ಮಶಾನ ಭೂಮಿ ಒದಗಿಸುವ ಭರವಸೆ ನೀಡಿದೆ. ವಿಷಯದ ಗಾಂಭೀರ್ಯ ಅರಿತ ವಿಧಾನ­ಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಅವರೂ ಮೂರು ತಿಂಗಳಲ್ಲಿ ಈ ಸೌಲಭ್ಯ ಒದಗಿಸುವಂತೆ ಕಿವಿಮಾತು ಹೇಳಿದ್ದಾರೆ. ಇದೊಂದು ಒಳ್ಳೆಯ ಬೆಳವಣಿಗೆ. ಕಣ್ಮುಚ್ಚಿ ಕುಳಿತಿದ್ದ ಸರ್ಕಾರದ ಕಣ್ಣು ತೆರೆಸಿದಂತಾಗಿದೆ.

ದಲಿತರಿಗೆ ಭೂಮಿ ಒದಗಿಸುವ ಭರವಸೆ­ಯನ್ನು ಸರ್ಕಾರ ನೀಡಿದೆ. ಆದರೆ ಅಂತ್ಯ­ಸಂಸ್ಕಾರ ಮಾಡಲು ಜಾಗವಿಲ್ಲದೆ ಒದ್ದಾಡು­ತ್ತಿರುವ ಗ್ರಾಮೀಣ ಪ್ರದೇಶದ ಇತರೆ ಜಾತಿಗಳ ಬಡವರು, ನಿರ್ಗತಿಕರನ್ನು ಅದು ಮರೆತಂತಿದೆ. ಸರ್ಕಾರ ಈ ಜನರತ್ತಲೂ ಗಮನಹರಿಸಬೇಕು. ಇಂತಹ ಸಣ್ಣ ವಿಚಾರಗಳೂ ಆಡಳಿತ ನಡೆಸು­ವವರಿಗೆ ಗೊತ್ತಾಗುವುದಿಲ್ಲವೇ? ಅಥವಾ ಗೊತ್ತಿದ್ದರೂ ಜಾಣ ಕುರುಡು–ಜಾಣ ಕಿವುಡೇ? ಹಳ್ಳಿಗಳಲ್ಲಿನ ಇಂಥ ಕನಿಷ್ಠ ಸೌಕರ್ಯವನ್ನೂ ಒದಗಿಸಲು ಆಗಿಲ್ಲ ಎಂದರೆ ಇದಕ್ಕೆ ಗ್ರಾಮ ಪಂಚಾಯ್ತಿ, ತಾಲ್ಲೂಕು ಪಂಚಾಯ್ತಿ, ತಾಲ್ಲೂಕು ಆಡಳಿತ, ಜಿಲ್ಲಾಡಳಿತ ಎಲ್ಲ ಏಕೆ ಬೇಕು? ಈ ಹಂತಗಳಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿ–ನೌಕರ ವರ್ಗದವರಿಗೆ ಹಳ್ಳಿಗಳ ಪರಿಸ್ಥಿತಿಯ ಅರಿವಿಲ್ಲವೇ? ಅಥವಾ ಯಾರದೋ ಮನೆಯಲ್ಲಿ ಸತ್ತವರಿಗೆ ಹೂಳಲು ಜಾಗವಿಲ್ಲದಿದ್ದರೆ ಅದು ತಮ್ಮ ಸಮಸ್ಯೆ ಹೇಗಾಗುತ್ತದೆ ಎಂಬ ಧೋರಣೆಯೇ? ಇಂತಹ ವರ್ತನೆ ಸಲ್ಲದು.

ಗೋವಿಂದ ಕಾರಜೋಳ ಅವರು ಹಿರಿಯ ನಾಯಕರು. ಅವರಿಗೆ ದಲಿತರು, ಬಡವರ ಬಗ್ಗೆ ಅಪಾರ ಕಾಳಜಿ ಇದೆ. ಆದ್ದರಿಂದಲೇ ಸ್ಮಶಾನದ ಜಾಗವಿಲ್ಲದೆ ದಲಿತರು ಪರಿತಪಿಸುತ್ತಿರುವ ವಿಚಾರವನ್ನು ವಿಧಾನಸಭೆಯಲ್ಲಿ ಪ್ರಸ್ತಾಪಿಸಿ, ಸರ್ಕಾರದಿಂದ ಸ್ಪಷ್ಟ ಉತ್ತರ ಸಿಗುವಂತೆ ಮಾಡಿದ್ದಾರೆ. ಒಳ್ಳೆಯದು, ಆದರೆ ಹಿಂದೆ ಐದು ವರ್ಷ ಸಚಿವರಾಗಿದ್ದಾಗ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಅವರೇ ಮುಂದಾಗ­ಬಹುದಿತ್ತಲ್ಲ? ಜನರು ಸ್ಮಶಾನಕ್ಕೆ ಜಾಗವಿಲ್ಲದೆ ಪರದಾಡುತ್ತಿದ್ದುದು ಅವರಿಗೆ ಆಗ ಗೊತ್ತಿರ­ಲಿಲ್ಲವೇ? ಈ ಸೌಲಭ್ಯ ಕಲ್ಪಿಸುವ ನಿರ್ಣಯ ಕೈಗೊಳ್ಳಲು ಆಗ ಅವರಿಗೇನಾದರೂ ಅಡ್ಡಿ­ಗಳಿದ್ದವೇ?

ಸಂಪುಟಸಭೆಯಲ್ಲಿ ಈ ವಿಷಯಕ್ಕೆ ಆದ್ಯತೆ ಕೊಟ್ಟು ಜಾರಿ ಮಾಡಿಸುವ ಛಾತಿ­ಯನ್ನು ಆಗ ಅವರು ಏಕೆ ಪ್ರದರ್ಶಿಸಲಿಲ್ಲ? ಅಥವಾ ವಿಧಾನಸಭೆಯಲ್ಲಿ ವಿರೋಧ ಪಕ್ಷದ ಸಾಲಿಗೆ ಬಂದು ಕುಳಿತ ನಂತರ ಆ ಸಂಗತಿ ಕಣ್ಣಿಗೆ ಬಿತ್ತೇ? ಜನಪರ ಧ್ವನಿ ಎತ್ತುವ ನಾಯಕರ ಮನೋಭಾವವೇ ಈ ರೀತಿ ಇದ್ದರೆ ಇನ್ನು ಜನ ಯಾರನ್ನು ಕೇಳಬೇಕು? ಎಲ್ಲ ರಾಜಕೀಯ ಪಕ್ಷಗಳ ಚುನಾಯಿತ ಪ್ರತಿನಿಧಿಗಳು ಮತ್ತು ಅಧಿಕಾರಿಶಾಹಿ ವರ್ಗ ಈ ವಿಚಾರದಲ್ಲಿ ಆತ್ಮಾವಲೋಕನ ಮಾಡಿಕೊಳ್ಳಬೇಕು.

ಶವಗಳನ್ನು ದಹಿಸುವ ಪದ್ಧತಿ ಅನುಸರಿ­ಸುವವರಿಗೆ ಸಣ್ಣ ಪ್ರಮಾಣದ ಜಾಗವಾದರೂ ಸಾಕು. ಹಳ್ಳಿಗಳಲ್ಲಿ ಅರ್ಧ ಎಕರೆಯಷ್ಟು ಭೂಮಿ ಸಿಕ್ಕರೂ ಅದು ಆ ವರ್ಗದವರಿಗೆ ಸಾಕ­ಷ್ಟಾಗುತ್ತದೆ. ಆದರೆ ಹೂಳುವ ಸಂಪ್ರದಾಯ ಅನುಸರಿಸುವ ವರ್ಗದವರಿಗೆ ಕನಿಷ್ಠ ಒಂದೆರಡು ಎಕರೆಯಷ್ಟು ಜಾಗವಾದರೂ ಬೇಕಾಗುತ್ತದೆ. ಊರಿನಲ್ಲಿರುವ ಸರ್ಕಾರಿ ಭೂಮಿಯನ್ನು ಗುರುತಿಸುವ ಜವಾಬ್ದಾರಿ ಆಯಾ ತಾಲ್ಲೂಕಿನ ತಹಶೀಲ್ದಾರರದು. ಅವರು ಜಾಗ ಗುರುತಿಸಿ, ಅದನ್ನು ಸ್ಮಶಾನಕ್ಕಾಗಿ ನಿಗದಿಪಡಿಸಿ, ನಿರ್ವ­ಹಣೆಯ ಜವಾಬ್ದಾರಿಯನ್ನು ಗ್ರಾಮ ಪಂಚಾಯ್ತಿಗಳಿಗೆ ವಹಿಸಬೇಕು. ಹಳ್ಳಿಗಳಲ್ಲಿ ಸರ್ಕಾರಿ ಭೂಮಿ ಇಲ್ಲ ಎಂದರೆ ಖಾಸಗಿ ಭೂಮಿ ಖರೀದಿ ಮಾಡಿ ಒದಗಿಸಲೇಬೇಕು. ಜಿಲ್ಲಾಧಿಕಾರಿ, ಉಪ ವಿಭಾಗಾಧಿಕಾರಿ, ತಹಶೀಲ್ದಾರರು ತಮ್ಮ ಕಾರ್ಯ ವ್ಯಾಪ್ತಿಯ ಪ್ರದೇಶಗಳಲ್ಲಿ ಪ್ರವಾಸ ಕೈಗೊಂಡಾಗ ಆ ಊರಿನಲ್ಲಿ ಸ್ಮಶಾನಕ್ಕೆ ಜಾಗ ಇದೆಯೇ ಇಲ್ಲವೇ ಎಂಬುದನ್ನು ಕಡ್ಡಾಯವಾಗಿ ಆದ್ಯತೆ ಮೇರೆಗೆ ಪರಿಶೀಲಿಸಬೇಕು. ಜಾಗ ಇಲ್ಲದಿದ್ದರೆ ಒದಗಿಸಲು ಮುಂದಾಗಬೇಕು.

ಆದರೆ ಅಧಿಕಾರಿಗಳಿಂದಲೂ ಇಂತಹ ಕೆಲಸ­ವಾಗುತ್ತಿಲ್ಲ. ಅದನ್ನು ಕಂದಾಯ ಸಚಿವರೂ ಗಮನಿಸುತ್ತಿಲ್ಲ ಎಂಬುದಕ್ಕೆ ಉದಾಹರಣೆ­ಯಾಗಿ ಮುಚ್ಚಂಡಿ ಗ್ರಾಮ ನಮ್ಮ ಕಣ್ಣ ಮುಂದೆ ಇದೆ. ಆ ಊರಿನವರು ಎರಡು ತಿಂಗಳ ಹಿಂದೆ ಪ್ರತಿಭಟನೆ ನಡೆಸಿ, ಸರ್ಕಾರದ ಗಮನ-­ಸೆಳೆದಿದ್ದರೂ  ಸಮಸ್ಯೆ ಮಾತ್ರ ಬಗೆಹರಿದಿಲ್ಲ.
ಇದ್ದಾಗ ಸ್ವಂತ ಮನೆ ಹೊಂದಲು ಸಾಧ್ಯವಾಗದ ವ್ಯಕ್ತಿಗೂ ಸತ್ತಾಗ 6x3 ಅಡಿ ಜಾಗ ಬೇಕೇ ಬೇಕು (ಹೂಳುವ ಸಂಪ್ರದಾಯವರಿಗೆ). ಈ ಸತ್ಯವನ್ನಾದರೂ ಸರ್ಕಾರ ಮನಗಂಡಿದ್ದರೆ ಗ್ರಾಮಗಳಲ್ಲಿ ಈ ಸಮಸ್ಯೆಯನ್ನು ನಿವಾರಿಸುತ್ತಿತ್ತು.  ನಮ್ಮನ್ನು ಆಳುವವರ ಜನಪರ ಕಾಳಜಿ ಎಷ್ಟರ ಮಟ್ಟಿಗೆ ಇರುತ್ತದೆ ಎಂಬುದನ್ನು ಸ್ಮಶಾನಗಳ ಕೊರತೆ ಎತ್ತಿ ತೋರಿಸಿದೆ. ಸತ್ತವರಿಗೆ ಗೌರವದಿಂದ ಸಂಸ್ಕಾರ ಮಾಡಲಾಗದೆ ಪರಿತಪಿಸುವ ಕುಟುಂಬದವರ ನೋವನ್ನು ಸರ್ಕಾರ ಅರ್ಥ ಮಾಡಿಕೊಳ್ಳಬೇಕು.

ರಾಜ್ಯದಲ್ಲಿ ಯಾವ್ಯಾವ ಹಳ್ಳಿಗಳಲ್ಲಿ ಸ್ಮಶಾನಗಳಿಲ್ಲ ಎಂಬುದನ್ನು ಗುರುತಿಸಿ ಜಾಗ ಒದಗಿಸುವ ಕೆಲಸವನ್ನು ಸರ್ಕಾರ ಈಗಲಾದರೂ ತ್ವರಿತವಾಗಿ ಮಾಡಬೇಕು. ಇದು ಶ್ರೀಸಾಮಾನ್ಯನ ಕೆಲಸ ಎಂದು ಮತ್ತೆ ವಿಳಂಬ ಧೋರಣೆ ಅನುಸರಿಸದಂತೆ ಅಧಿಕಾರಿಗಳಿಗೆ ಕಟ್ಟೆಚ್ಚರಿಕೆ ನೀಡಬೇಕು. ಕಂದಾಯ ಸಚಿವರು ಮತ್ತು ಸಾಧ್ಯವಾದರೆ ಮುಖ್ಯಮಂತ್ರಿಯವರೇ ವಾರ ವಾರವೂ ಈ ಕುರಿತ ಮಾಹಿತಿ ತರಿಸಿಕೊಂಡು ಸಮಸ್ಯೆಯನ್ನು ಶೀಘ್ರವಾಗಿ ಬಗೆಹರಿಸಲು ಆದ್ಯತೆ ನೀಡಬೇಕು. ಈ ಕೆಲಸಕ್ಕೆ ಎಲ್ಲಕ್ಕಿಂತ ಮುಖ್ಯವಾಗಿ ಬೇಕಿರುವುದು ಮಾನವೀಯತೆಯೊಂದೇ; ಸರ್ಕಾರದಲ್ಲಿ ಅದಕ್ಕೆ ಯಾವಾಗಲೂ ಬಡತನ ಬರಬಾರದು.

ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT